ಈಗ ಒಂದ ಆರ-ಏಳ ತಿಂಗಳ ಹಿಂದಿನ ಮಾತ ಇರಬೇಕ ಒಂದ ಲಗ್ನಕ್ಕ ಹೋಗಿದ್ದೆ. ಹಂಗ ನಾ ಹೋಗಿದ್ದ ಹೆಣ್ಣಿನವರ ತರಪಿ ಖರೆ ಆದರ ಅಲ್ಲೆ ಹೋದ ಮ್ಯಾಲೆ ಗೊತ್ತಾತ ಆ ಹುಡುಗನು ನನ್ನ ಪರಿಚಯದವನ ಅಂತ. ಅವನ ಸೋದರ ಮಾವ ನನ್ನ ಜೊತಿ ಲ್ಯಾಮಿಂಗ್ಟನ್ ಸ್ಕೂಲನಾಗ ಕಲಿತಿದ್ದಾ. ಖತರನಾಕ ಉಡಾಳ ಇದ್ದಾ. ಹಂಗ ನಾವ ಕಲಿತಿದ್ದದ್ದ ಲ್ಯಾಮಿಂಗ್ಟನ್ ಬಾಯ್ಸ್ ಸ್ಕೂಲನಾಗ ಆದರೂ ಇಂವಾ ದೇಶಪಾಂಡೆ ನಗರ ನ್ಯೂ ಇಂಗ್ಲೀಷ್ ಗರ್ಲ್ಸ ಸ್ಕೂಲ ತನಕಾ ಬಸ್ ಪಾಸ್ ತಗಿಸಿದ್ದಾ ಅಂದರ ವಿಚಾರ ಮಾಡ್ರಿ ಎಷ್ಟ ಉಡಾಳ ಇದ್ದಾ ಅಂತ. ಅದು ಹಾಫ್ ಪ್ಯಾಂಟ್ ಹಾಕ್ಕೊಂಡ ಹೈಸ್ಕೂಲನಾಗ ಕಲಿಬೇಕಾರ.
ಇನ್ನ ಆ ಲಗ್ನಾ ಮಾಡ್ಕೊಳೊ ಹುಡುಗಗ ಇಂವಾ ಸೋದರ ಮಾವ ಅಂದರ ಎಲ್ಲೇ ಆ ಹುಡುಗ ಸೋದರ ಮಾವನ ಹೋತಾನ ಅಂತ ನಂಗ ಹೆದರಿಕೆ ಹತ್ತ
ನಾ ಸಿರಿಯಸ್ ಆಗಿ ನಮ್ಮ ದೋಸ್ತಗ ಸೈಡಿಗೆ ಕರದ
’ಲೇ..ಹುಡುಗ ನಿನ್ನ ಅಳಿಯಾ ಅಂತಿ ಅಲ್ಲಲೇ ಮಗನ…ಮತ್ತ ಅವನು ನಿನ್ನ ಹಂಗ ಏನ?’ ಅಂತ ಕೇಳಿದರ
’ದೋಸ್ತ ನಾ ಬೇಕ….ಅಂವಾ ನಮ್ಮಪ್ಪ ಇದ್ದಂಗಲೇ….ಅದಕ್ಕ ಲಗ್ನ ಮಾಡ್ಕೊಂಡ ಸುದಾರಿಸಿದರ ಸುದಾರಸಲಿ ಅಂತ ಲಗ್ನಾ ಮಾಡ್ಲಿಕತ್ತೇವಿ’ ಅಂತ ಅಂದಾ.
ನಂಗ ಎದಿ ಧಸಕ್ಕಂತ.
’ನೀ ಬರೇ ಗರ್ಲ್ಸ ಸ್ಕೂಲ ತನಕಾ ಪಾಸ್ ತಗಸಿದ್ದರ ನಿನ್ನ ಅಳಿಯಾ ಕಜಕಿಸ್ತಾನ, ಬ್ಯಾಂಕಾಕ್ ತನಕಾ ಪಾಸ ತಗಿಸ್ಯಾನ ಏನಪಾ ಮತ್ತ’ ಅಂತ ಕೇಳ್ಬೇಕಂತ ಬಾಯಿ ತುದಿ ತನಕಾ ಬಂದಿತ್ತ ಆದರ ಹೋಗ್ಲಿ ಬಿಡ ಮದ್ವಿ ಮನಿ ಅಂತ ಸುಮ್ಮನಾದೆ.
ಅದರಾಗ ನಾ ಹೆಣ್ಣಿನ ಕಡೆಯಿಂದ ಹೋದೊಂವಾ ಇಂವಾ ನನ್ನ ಮುಂದನ ’ಲಗ್ನ ಮಾಡ್ಕೊಂಡ ಸುದಾರಿಸಿದರ ಸುದಾರಸಲಿ’ ಅಂತ ಅನ್ನಲಿಕತ್ತಾನಲಾ, ಅಕಸ್ಮಾತ ಇವನ ಗತೆ ಆ ಹುಡುಗನು ಮದ್ವಿ ಆದಮ್ಯಾಲೆ ಸುದಾರಸಲಿಲ್ಲಾಂದರ ಆ ಹುಡಗಿ ಗತಿ ಏನ ಹೆದರಕಿ ಬರಲಿಕತ್ತ.
ಆಮ್ಯಾಲೆ ಹೆಣ್ಣಿನವರ ಕಡೆ ಸ್ವಲ್ಪ ಕೆದರಿ ಇನ್ಫಾರ್ಮೇಶನ್ ತಗದರ ಗೊತ್ತಾತ, ಆ ಹುಡಗಿಗೆ ಹುಡಗಂದ ಎಲ್ಲಾ ಹಕಿಕತ್ ಗೊತ್ತ, ಅಕಿ ಅವನ ಓಣಿ ಹುಡಗಿನ, ಇದ ಒಂಥರಾ ಲವ್ ಕಮ್ ಆರೇಂಜ್ಡ ಮ್ಯಾರೇಜ್ ಮತ್ತ ಅಕಿನೂ ಅವನ್ನ ಲಗ್ನಾ ಮಾಡ್ಕೊಂಡ ಸುದಾರಸ್ತೇನಿ ಅಂತ ಚಾಲೇಂಜ್ ತೊಗೊಂಡ ರೆಡಿ ಆಗಿದ್ಲು.
ಒಂದ ಸರತೆ ಅಕಿ ಧೈರ್ಯಾ ಮೆಚ್ಚಿ ನಾಲ್ಕ ಅಕ್ಕಿ ಕಾಳ ಹಾಕಿ ಹೊಟ್ಟಿ ತುಂಬ ಉಂಡ ಮನಿಗೆ ಬಂದೆ.
ಹಂಗ ನಮ್ಮ ಸರ್ಕಲದಾಗ ಭಾಳ ಮಂದಿ ಉಡಾಳ ಇದ್ದೋರದ ’ಲಗ್ನಾ ಮಾಡಿ ನೋಡ್ರಿ ಸುದಾರಸಬಹುದು’ ಅಂತ ಲಗ್ನ ಆಗಿದ್ದ ನೋಡೇನಿ ಮತ್ತ ಹಂಗ ಭಾಳ ಮಂದಿ ಸುದಾರಿಸಿನೂ ಸುದಾರಿಸ್ಯಾರ ಬಿಡ್ರಿ ಸುಳ್ಳ ಯಾಕ ಹೇಳ್ಬೇಕ. ಹಂಗ ಉಲ್ಟಾ ಒಂದಿಷ್ಟ ಹುಡುಗರು ಮೊದ್ಲ ಛಲೋ ಇದ್ದೋರ ಲಗ್ನಾ ಆದ ಮ್ಯಾಲೆ ಹಾದಿ ತಪ್ಪಿದವರು ಇದ್ದಾರ.
ಆದರು
“ಏ..ಹುಡುಗ ಹಂಗ ಛಲೋ ಆದರ ಏನ ಮಾಡೋದ ಸುಳಿ ಕೆಟ್ಟ ,ಮೈತುಂಬ ಚಟಾ ಅವ’
“ಹುಡುಗ ಜಗ್ಗೆ ಗಳಸ್ತಾನ ಖರೆ ಆದರ ಒಂದ ಚೂರು ರೊಕ್ಕಾ ಉಳಸಂಗಿಲಾ ಏನಿಲ್ಲಾ, ಎಲ್ಲಾ ಫಾಲತೂ ದೋಸ್ತರಿಗೆ ಖರ್ಚ ಮಾಡ್ತಾನ, ಒಟ್ಟ ಜವಾಬ್ದಾರಿನ ಇಲ್ಲಾ”
“ಏನ ಲಫಡಾ ಮಾರಾಯಾ ಅವನ್ವು, ತಿಂಗಳಿಗೆ ಒಂದಿಲ್ಲಾ ಒಂದ ಇದ್ದ ಇರ್ತಾವ. ಅವರವ್ವಾ-ಅಪ್ಪಗ ಯಾಕರ ಅವನ್ನ ಹಡದ್ವಿ ಅಂತ ಅನಿಸಿ ಬಿಟ್ಟದ”….
ಹಿಂತಾ ನೂರಾರ ಗಂಡ ಹುಡುಗರ ಸಮಸ್ಯೆಗೆ ಒಂದ ಪರಿಹಾರ
’ಹುಡುಗನ ಲಗ್ನಾ ಮಾಡಿ ನೋಡ್ರಿ ಸುದಾರಸಬಹುದು’.
ನಂಗ ಹಿಂಗ ಮಂದಿ ಅಂದಾಗೋಮ್ಮೆ ಲಗ್ನಾ ಅನ್ನೋದ ’ ಹಾದಿ ತಪ್ಪಿದ ಹುಡುಗ’ಗ ಹಾದಿಗೆ ತರಲಿಕ್ಕೆ ಫನಿಶಮೆಂಟ ಇಲ್ಲಾ ರಿಹ್ಯಾಬಿಲಿಟೇಶನ್ ಪ್ರೊಸೆಸ್ಸ ಇರಬೇಕ ಅಂತ ಅನಸ್ತಿತ್ತ.
ಮ್ಯಾಲೆ ನನಗ ಈ ’ಮದ್ವಿ ಮಾಡ್ರಿ ಸುದಾರಸಿದರ ಸುದಾರಸಬಹುದು’ ಅನ್ನೋದ ಬರೇ ಹುಡುಗಗ ಯಾಕ ಅಂತ ಇವತ್ತಿಗೂ ತಿಳಿವಲ್ತು. ಹಂಗ ಹುಡುಗಿಗೂ ಅನಬಹುದ ಅಲಾ? ಎಷ್ಟೋ ಮಂದಿ ಮನಿ ಒಳಗ ಹುಡಗ್ಯಾರದು ಪ್ರಾಬ್ಲೇಮ್ ಇದ್ದ ಇರ್ತಾವ. ಮನ್ಯಾಗಿನ ಕೆಲಸಾ-ಬೊಗಸಿ ಮಾಡ್ತಿರಂಗಿಲ್ಲಾ, ಅಡಗಿ-ಪಡಗಿ ಬರ್ತಿರಂಗಿಲ್ಲಾ, ಅವ್ವಾ – ಅಪ್ಪಾ ಹೇಳಿದ್ದ ಮಾತ ಕೇಳ್ತರಂಗಿಲ್ಲಾ. ಹಂತಾ ಹುಡಗ್ಯಾರಿಗೆ ಅವರ ಪೇರೆಂಟ್ಸ್ ನಾಳೇ ತಮ್ಮ ಮಗಳ ಲಗ್ನಾ ಮಾಡ್ಕೊಂಡ ಗಂಡನ ಮನಿಗೆ ಹೋದಮ್ಯಾಲೆ ಹೆಂಗ ಸಂಸಾರ ಮಾಡ್ತಾಳ ಅಂತ ಹೊಟಿಬ್ಯಾನಿ ಹತ್ತಿರತದ. ಅವರ ಮಾತ ಮಾತಿಗೆ
“ನಾಳೆ ಲಗ್ನಾ ಮಾಡ್ಕೊಂಡ ಹೋದ ಮ್ಯಾಲೆ ಅತ್ತಿ ಮನ್ಯಾಗ ಹಿಂಗ ಮಾಡಿದರ ನಡೆಯಂಗಿಲ್ಲಾ”
“ನಿನಗ ಮನಿ ತುಂಬ ಮಂದಿ ಇದ್ದದ್ದ , ಕೈತುಂಬ ಕೆಲಸ ಇದ್ದದ್ದ ಅತ್ತಿ ಮನಿ ಸಿಗಬೇಕ, ಆವಾಗ ಬುದ್ಧಿ ಬರತದ”
’ಲೇ…ಹಿಂಗ ನಂಗ ಭಕ್ಕರಿ ಬರಂಗಿಲ್ಲಾ, ಝುಣಕ ಬರಂಗಿಲ್ಲಾ ಅಂದರ ನಿನ್ನ ಕಟಗೊಂಡ ಗಂಡನ ಗತಿ ಏನ”…..
ಅಂತೇಲ್ಲಾ ಟಾಂಟ್ ಹೊಡಿತಿರ್ತಾರ. ಅವರ ಮುಂದ ಲಗ್ನಾ ಮಾಡ್ಕೊಂಡ ಮ್ಯಾಲೆ ಹೊಂದ್ಕೊಂಡ ಹೋಗ್ತಾರ ಆ ಮಾತ ಬ್ಯಾರೆ. ಆದರ ಅವರೇನ ಹುಡುಗಿ ಸುದಾರಸಲಿ ಅಂತ ಮದ್ವಿ ಮಾಡಿರಂಗಿಲ್ಲಲಾ, ಹುಡುಗಗ ಮಾಡಿದಂಗ.
ಹಂಗ ನಮ್ಮ ಮನಿ ಹೆಣ್ಣ ಮಕ್ಕಳು ಹಂಗ ಇದ್ದರ ಅನ್ನರಿ ಆದರ ಈಗ ಅವರ ಅಗದಿ ಚೊಕ್ಕ ಸಂಸಾರ ಮಾಡ್ಕೊಂಡ ಹೊಂಟಾರ. ಅಂದರ ನಮ್ಮ ಅಕ್ಕ-ತಂಗ್ಯಾರ ಏನ ಚೇಂಜ್ ಆಗಲಿಲ್ಲಾ, ಅವರನ ಕಟಗೊಂಡ ಪುಣ್ಯಾತ್ಮರ ಚೇಂಜ್ ಆದರು ಅದ ನಮ್ಮ ಪುಣ್ಯಾ.
ಇನ್ನ ಅವರದ ಇವರದ ಬಿಡ್ರಿ, ನಮ್ಮಪ್ಪಂದ ಕಥಿ ಹೇಳ್ಬೇಕಂದರ ನಮ್ಮಪ್ಪಗ ಅವರಪ್ಪಾ ಅಂದರ ನಮ್ಮಜ್ಜಾ, ವೈದಿಕತನಾ ಕಲಿಸಿ ಶಿರ್ಶಿ ಒಳಗ
’ಪಟ್ವರ್ಧನ ಡಾಕ್ಟರ ಮನಿ ಪೂಜಾಕ್ಕ ಹೋಗು, ಸ್ವಾದಿಯವರ ಮನಿ ಸತ್ಯನಾರಾಯಣ ಪೂಜಾ ಮಾಡಸ, ಬೆಳಲಿ ದೇವ್ ಅವರ ಮನಿ ಪುರೋಹಿತಗಿರಿ ಮಾಡು’ ಅಂತ ಬೆನ್ನ ಹತ್ತಿದ್ದಕ್ಕ ನಮ್ಮಪ್ಪ ಶಿರ್ಶಿ ಬಿಟ್ಟ ಹುಬ್ಬಳ್ಳಿಗೆ ಓಡಿ ಬಂದ ಬಿಟ್ಟಾ. ಪಾಪ ನಮ್ಮಜ್ಜ ಹಿರೇಮಗಾ ಹಿಂಗ ಭಟಕಿ ಬಿಟ್ಟ ಹುಬ್ಬಳ್ಳಿಗೆ ಓಡಿ ಹೋಗಿದ್ದ ನೋಡಿ ಹೊಟಿಬ್ಯಾನಿ ಹಚಗೊಂಡಿದ್ದಾ. ಆವಾಗ ಇಲ್ಲೇ ಹುಬ್ಬಳ್ಯಾಗ ನಮ್ಮಪ್ಪನ ಅಬಚಿ ಮಗಾ ಒಬ್ಬೊಂವ ಗುಂಡಣ್ಣಾ ಅಂತ ಇದ್ದಾ. ಅವನ ಮೇನ ಕೆಲಸಾನ ಮಂದಿ ಮಕ್ಕಳಿಗೆ ಮದ್ವಿ ಮಾಡಸೋದ. ಅಂವಾ ಏನಿಲ್ಲಾಂದರೂ ಜೀವನದಾಗ ಒಂದ ಎರೆಡನೂರ ಮೂರನೂರ ಮಂದಿ ಲಗ್ನಾ ಮಾಡಿಸ್ಯಾನ ಬಿಡ್ರಿ ಸುಳ್ಳ ಯಾಕ ಹೇಳ್ಬೇಕ. ಬರೇ ಒಂದ ಜೋಡಿ ಪ್ಯಾಂಟ ಶರ್ಟ, ಅವನ ಹೆಂಡ್ತಿಗೆ ಸೀರಿ ಕೊಟ್ಟರ ಸಾಕ ಪಾಪ ತಾನ ನಾಂದಿ ಇಟ್ಗೊಂಡ ಏನ ಲಗ್ನಾ ಮಾಡ್ಕೊಳೊ ಹುಡುಗ ಅನಾಥ ಅನ್ನೋರಗತೆ ಮುಂದ ನಿಂತ ಮದ್ವಿ ಮಾಡಸ್ತಿದ್ದಾ.
ಅಂವಾ ನಮ್ಮಜ್ಜಗ
’ಏ..ನಾ ಒಂದ ಕನ್ಯಾ ನೋಡಿ ಮದ್ವಿ ಮಾಡ್ತೇನಿ ಕಾಕಾ, ನೀ ಸುಮ್ಮನಿರ ನಿನ್ನ ಮಗಾ ಸುದಾರಸ್ತಾನ ತೊಗೊ’ ಅಂತ ನಮ್ಮವ್ವನ್ನಂತಾ ಮುಗ್ದ ಹುಡಗಿ ಹುಡಕಿ ತಂದ ಮದ್ವಿ ಮಾಡಿದಾ.
ಮುಂದ ಆ ನಮ್ಮವ್ವನ್ನ ಕಾಲ್ಗುಣಾನೋ ಇಲ್ಲಾ ಚೊಚ್ಚಲ ಗಂಡಸಾ ಮಗಾ ತಲಿ ಮುಂದ ಮಾಡ್ಕೊಂಡ ಹುಟ್ಟಿದ್ದಕ್ಕೊ ಏನೊ ಗೊತ್ತಿಲ್ಲಾ ಒಟ್ಟ ನಮ್ಮಪ್ಪಾ ಛಂದಾಗಿ ಸಂಸಾರ ಮಾಡ್ಕೊಂಡ ಹೋದಾ ಅನ್ನರಿ, ಅವಂಗ ನನ್ನಂತಾ ಚೊಚಲಾ ಗಂಡಸಾ ಮಗಾ ಹುಟ್ಟಿದಾ ಅಂದರ ಅಂವಾ ಸುದಾರಿಸದಂಗ ಹೌದಲ್ಲ ಮತ್ತ?
ಅಲ್ಲಾ ಈಗ ಎಲ್ಲಾ ಬಿಟ್ಟ ’ಲಗ್ನಾ ಮಾಡಿ ನೋಡ್ರಿ ಸುಧಾರಸಬಹುದು’ ಅನ್ನೋ ಟಾಪಿಕ್ ಯಾಕ ಬಂತ ಅಂದರ ನಾಡದ ಅಂದರ ನವೆಂಬರ್ 28ಕ್ಕ ನಮ್ಮವ್ವಾ-ಅಪ್ಪಾ ನಂದೂ ಲಗ್ನಾ ಮಾಡಿ ನೋಡಿ ಇಪ್ಪತ್ತೆರಡ ವರ್ಷ ಆಗ್ತದ. ಹಂಗ ನನ್ನ ಲಗ್ನ ಏನ ’ ಲಗ್ನಾ ಮಾಡಿ ನೋಡ್ರಿ ಸುದಾರಸಬಹುದು’ ಸ್ಕೀಮ್ ಒಳಗ ಆಗಿದ್ದಲ್ಲ ಮತ್ತ. ಆದರ ಒಂದ ಅಂತು ಖರೆ, ಮದ್ವಿ ಆದ ಮ್ಯಾಲೆ ಮನಷ್ಯಾ ಬದಲಾಗೋದ ಗ್ಯಾರಂಟೀ. ಒಬ್ಬೊಬ್ಬರದ ನಸೀಬ ಖುಲಾಯಿಸ್ತದ ಒಬ್ಬೊಬ್ಬರದ ಖತಮ್ ಆಗ್ತದ.
ಖರೇ ಹೇಳ್ಬೇಕಂದರ ನಾ ಲಗ್ನಾ ಆಗೋ ತನಕ ನಾಲ್ಕ ಮಂದಿಗೆ ಗೊತ್ತ ಇದ್ದಿದ್ದಿಲ್ಲಾ. ನಂಗ ನಾಲ್ಕ ಮಂದಿ ಗೊತ್ತ ಹಿಡಿಲಿಕತ್ತಿದ್ದ ಲಗ್ನ ಆದಮ್ಯಾಲೆ. ಅದ ಲಗ್ನಾ ಮಾಡ್ಕೊಂಡ ಹೆಂಡ್ತಿ ಮ್ಯಾಲೆ ನಾಲ್ಕ ಅಕ್ಷರ ಬರದ ಫೇಮಸ್ ಆಗಿದ್ದ, ಇಲ್ಲಾಂದರ ಮೊದ್ಲ ನನಗ ನಮ್ಮ ಓಣ್ಯಾಗಿನ ಮಂದಿ ದೂರ ಉಳಿತು, ಮನಿ ಕೆಲಸದೋಕಿಗೆ ಸಹಿತ ನನ್ನ ಹೆಸರ ಗೊತ್ತ ಇದ್ದಿದ್ದಿಲ್ಲಾ.
ನೋಡ್ರಿ ನೀವು ಯಾರರ ಸಿರಿಯಸ್ ಆಗಿ ಸುದಾರಸಬೇಕ ಅಂತ ಲಗ್ನಾ ಮಾಡ್ಕೊಂಡಿದ್ದರ ಕೈ ಎತ್ತರಿ. ಅಲ್ಲಾ ನಾ ಏನ ನಿಮಗ ಈಗ ಸುದಾರಿಸಿರೇನ್ ಅಂತ ಕೇಳಂಗಿಲ್ಲ ತೊಗೊರಿ. ಇನ್ನ ಯಾರರ ಲಗ್ನ ಆಗಿನೂ ಸುಧಾರಿಸಿಲ್ಲಾ ಅಂದರ ಅದಕ್ಕ ಹೆಂಡ್ತಿನ ಕಾರಣ ಅಂತ ಅನ್ನಲಿಕ್ಕಂತೂ ಬರಂಗಿಲ್ಲಾ ..ಅದನ್ನ ನೆನಪ ಇಡ್ರಿ.
Super sir, bhari ada