ಮೊನ್ನೆ ಮುಂಜ-ಮುಂಜಾನೆ ಪೇಪರ ಓದ್ಲಿಕತ್ತ ನನ್ನ ಹೆಂಡ್ತಿ ಒಮ್ಮಿಕ್ಕಲೆ
’ರ್ರೀ…ಲಿವಿಂಗ ಟುಗೆದರ್ ಅಂದರ ಏನ್ರಿ?’ ಅಂತ ಕೇಳಿದ್ಲು. ಎಲ್ಲಾ ಬಿಟ್ಟ ಇಕಿ ಈ ಸಬ್ಜೆಕ್ಟ ಯಾಕ ತಗದ್ಲಪಾ ಅಂದರ ಪೇಪರನಾಗ ನಮ್ಮ ಬಾಲಿವುಡ್ ಒಳಗ ಯಾರ ಯಾರ ಮೊದ್ಲ ಲಿವಿಂಗ ಟುಗೆದರ್ ಇದ್ದರು ಆಮ್ಯಾಲೆ ಯಾರ ಯಾರ ಬ್ಯಾರೆ ಆದರು, ಇಲ್ಲಾ ಮದುವಿ ಆದರು ಅಂತ ಒಂದ ಆರ್ಟಿಕಲ್ ಬಂದಿತ್ತ. ಅದನ್ನ ಓದಿ ಇಕಿ ಲಿವಿಂಗ್ ಟುಗೇದರ್ ಅನ್ನೋದು ಒಂದ ಯಾವದೋ special feature of married life ಅಂತ ತಿಳ್ಕೊಂಡ ಕೇಳಿದ್ಲು.
ನಂಗ ಹಂಗ ಗೊತ್ತ ಇಕಿ ತಲ್ಯಾಗ ಏನರ ಒಂದ ವಿಷಯ ಹೊಕ್ಕತ ಅಂದರ ಅದನ್ನ ನಾ ಕ್ಲೀಯರ ಮಾಡೊತನಕಾ ಅಕಿ ಜೊತಿ ನಂದ ಲಿವಿಂಗ್ ಟುಗೆದರ್ ಏನ ಲಿವಿಂಗ್ ಸಹಿತ ವಜ್ಜ ಆಗ್ತದ ಅಂತ ಹಿಂಗಾಗಿ ಅಕಿ ಕಡೆ ಭಾಳ ಹೇಳಿಸಿಗೊಳ್ಳಲಾರದ
’ಲಿವಿಂಗ ಟುಗೆದರ್ ಅಂದರ ಹುಡುಗಾ ಹುಡುಗಿ ಇಬ್ಬರೂ ಕೂಡೆ ಒಂದ ಮನ್ಯಾಗ ಇರೋದ, ಮುಂದ ಸೆಟ್ ಆದರ ಮದ್ವಿ ಆಗೋದ, ಇಲ್ಲಾ ಹಂಗ ಇರಬೇಕ ಅನಿಸಿದರ ಹಂಗ ಇರೋದ. ಇಲ್ಲಾ ಬ್ಯಾರೆ ಛಲೋ ಪಾರ್ಟನರ್ ಸಿಕ್ಕರ ಇದ್ದವರನ ಬಿಟ್ಟ ಹೋಗೊದು’ ಅಂತ ಅಕಿಗೆ ತಿಳಿಯೋ ಭಾಷಾದಾಗ ಹೇಳಿದೆ.
’ಏ..ಅದೇನ ಅಸಂಯ್ಯ ರ್ರಿ..ಪಾ….’ ಅಂದ್ಲು.
’ಅದರಾಗ ಏನ ಬಂತ ಅಸಂಯ್ಯ…ಈಗ ಅದ ಅಗದಿ ಕಾಮನ.. ಮದ್ವಿ ಆಗಿ ನಮ್ಮಂಗ ಜಗಳಾಡ್ಕೋತ ಸಂಸಾರ ಮಾಡೋದಕಿಂತ ಒಂದ ಹತ್ತ ವರ್ಷ ಕೂಡಿ ಇದ್ದ ಜಗಳಾಡಿ, ಜಗಳ ಬಗಿ ಹರದರ ಮದ್ವಿ ಮಾಡ್ಕೋಳೊದ, ಇಲ್ಲಾ ಒಬ್ಬರಿಗೊಬ್ಬರ ಚಾಳಿ ಬಿಟ್ಟ ಬ್ಯಾರೆವರ ಜೊತಿ ಚಾಳಿ ಹಿಡಿಯೋದವಾ’ ಅಂದೆ.
’ಮತ್ತ ಮಕ್ಕಳ…?’ ಅಂತ ಕೇಳಿದ್ಲು.
“ಏ, ಬೇಕಾರ ಹಡಿಬಹುದು ಇಲ್ಲಾಂದರ ಇಲ್ಲಾ, ಅಲ್ಲೇನ ಇನ್ನೂ ಆಗಲಿಲ್ಲಾ ನಮ್ಮ ಸೊಸಿದ ಅನ್ನಲಿಕ್ಕೆ ಅತ್ತಿ ಇರಂಗಿಲ್ಲಾ ಏನಿಲ್ಲಾ’ ಅಂದೆ.
’ಆದರೂ ಏನ ಕಾಲ ಬಂತರಿಪಾ….ನಾವೇಲ್ಲಾ ಕುಂಡ್ಲಿ ನೋಡಿ, ಗೋತ್ರ ಬಿಡ್ತೋ ಇಲ್ಲೊ, ಎಷ್ಟ ಗುಣಾ ಕೂಡ್ತು ಅಂತ ಹತ್ತ ಸರತೆ ವಿಚಾರ ಮಾಡಿ ಮಾಡ್ಕೊಂಡ್ವಿ’ ಅಂತ ಅಂದ್ಲು.
’ಲೇ..ಬರೇ ಕುಂಡ್ಲಿ ಕೂಡಿ ಬಂದರ ನಡಿಯಂಗಿಲ್ಲಾ, ಹುಡುಗಾ ಹುಡುಗಿ ಗುಣಾ ಕೂಡಿ ಬರಬೇಕು, ಅವರ wavelength match ಆಗಬೇಕು. ಅದಕ್ಕ ಇಬ್ಬರೂ ಕೂಡೆ ಇರ್ತಾರ, ಒಂದಿಷ್ಟ ವರ್ಷ ನೋಡ್ತಾರ, ಅಗದಿ ಒಬ್ಬರಿಗೊಬ್ಬರನ ಬಿಟ್ಟ ಇರಲಿಕ್ಕೆ ಆಗಂಗಿಲ್ಲಾ ಅಂತ ಅನಸಿದರ ಮದ್ವಿ ಮಾಡ್ಕೋತಾರ. ಇಲ್ಲಾ ಹಂಗ ಇರೋದ ಛಲೋ ಅನಿಸಿದರ living together ಅಂತ ಇರ್ತಾರ. ಇಲಾ ಇಕಿ ಜೊತಿ ಬಗೆಹರಿಯಂಗಿಲ್ಲ ಅಂತ ಅನಿಸಿ ಬಿಟ್ಟರ ಬ್ಯಾರೇದ ಹುಡ್ಕತಾರ….ಸುಳ್ಳ ಮದ್ವಿ ಮಾಡ್ಕೊಂಡ ಡೈವರ್ಸ ಕೊಡೊದಕಿಂತಾ..ಲಿವಿಂಗ ಟುಗೆದರ್ ಇದ್ದ ಸಪರೇಟ್ ಆಗೋದ ಛಲೋ ಹೌದಲ್ಲ? ಸಿಂಪಲ್ ಆಗಿ ಹೇಳ್ಬೇಕಂದರ living together is ‘living together but without legally getting married’ ಅಂತ ನಾ ಅಕಿಗೆ ತಿಳಿಸಿ ಹೇಳಿ ಟಾಪಿಕ್ ಕ್ಲೋಸ ಮಾಡಿದೆ.
ಆದರು ಏನೋ ಪಾಪ ಅಕಿಗೆ ಮನಸ್ಸಿಗೆ ಸಮಾಧಾನ ಆಗ್ಲಿಲ್ಲಾ. ಒಂದೂ ಅಕಿ ಟೈಮ ಒಳಗ ಆ ಆಪ್ಶನ್ ಇರಲಿಲ್ಲಾ ಅಂತನೋ, ಇಲ್ಲಾ ಅಕಿಗೆ ಇದ ಗೊತ್ತ ಇದ್ದಿದ್ದಿಲ್ಲಾ ಅಂತನೋ, ಇಲ್ಲಾ ಹೆಂತಾ ಕಾಲ ಬಂತಲಪಾ ಅಂತನೋ …ಒಟ್ಟ she was not happy with living together arrangement.
‘ಏ..ನೀ ಯಾಕ ಭಾಳ ತಲಿಗೆಡಸ್ಕೋತಿ ತೊಗೊ ಈಗ ನಂಬದೇಲ್ಲಾ ಮುಗದದ…we are not only living together but inevitalby we are also loving together’ ಅಂತ ಹೇಳಿ ಸಮಾಧಾನ ಮಾಡಿದೆ.
ಹಂಗ ನಮ್ಮ ಬಾಲಿವುಡ್ ಒಳಗ ಜಾನ್ ಅಬ್ರಾಹಮ್- ಬಿಪಾಶಾ ಬಸು, ರಣಬೀರ ಕಪೂರ-ಕತ್ರಿನಾ ಕೈಫ, ಅಮೀರ ಖಾನ-ಕಿರಣ ರಾವ್…ಇವರೇಲ್ಲಾ ಲಿವಿಂಗ್ ಟುಗೆದರ್ ಇದ್ದವರ. ಇದರಾಗ ಒಂದಿಷ್ಟ ಮಂದಿ ಮದ್ವಿ ಮಾಡ್ಕೊಂಡ್ರು, ಒಂದಿಷ್ಟ ಮಂದಿ ಸಪರೇಟ ಆದರು. ಅದೇಲ್ಲಾ ಅವರವರ personal choice ಬಿಡ್ರಿ.
ಹಂಗ ನಮ್ಮ ಹುಬ್ಬಳ್ಳಿ-ಧಾರವಾಡದಾಗ ಇನ್ನೂ ಲಿವಿಂಗ ಟುಗೆದರ ಸ್ಟಾರ್ಟ ಆಗಿಲ್ಲಾ ಅಂತ ನಾ ಅನ್ಕೊಂಡೇನಿ. ಅದರ ಇವತ್ತಿಲ್ಲಾ ನಾಳೆ ನಮ್ಮ ಜನಾನೂ living together ಶುರು ಮಾಡಬಹುದು. ಆದರ ಒಂದ ವಿಷಯ ಗೊತ್ತಿರಲಿ ಡೈವರ್ಸ ರೇಟ ಏನ ಅದ ಅಲಾ ಅದು ನಾರ್ಮಲ ಲಗ್ನಾ ಮಾಡ್ಕೊಂಡ ಡೈವರ್ಸ ಕೊಡೊರಕಿಂತಾ ಜಾಸ್ತಿ ಈ living together ಇದ್ದ ಮುಂದ ಮದ್ವಿ ಮಾಡ್ಕೊತಾರಲಾ ಅವರದ ಅದ.
ಹಂಗ ನಮ್ಮಲ್ಲೇ living together ಇರದಿದ್ದರೂ legally married but not living together ಕೇಸಿಸ್ ಭಾಳ ನಡದಾವ.
ಇದೇಲ್ಲಿ ಹೊಸಾ ರಿಲೇಶನಶಿಪ್ ಹುಟ್ಟಿಸಿದಾಪಾ ಅಂತ ಅನಬ್ಯಾಡ್ರಿ…..Let me explain.
ಈಗ ನಮ್ಮಲ್ಲೇ ಕನ್ಯಾದ್ದ ಶಾರ್ಟೇಜ್ ಇದ್ದದ್ದು, ಮ್ಯಾಲೆ ಇದ್ದ ಬಿದ್ದ ಕನ್ಯಾಕ್ಕೂ ಸಾಫ್ಟವೇರ ವರಾನ ಬೇಕು ಅನ್ನೋದ ನಿಮಗೇಲ್ಲಾ ಗೊತ್ತ ಇದ್ದದ್ದ. ಇನ್ನ ಸಾಫ್ಟವೇರ ವರಾ ಅಂದ ಮ್ಯಾಲೆ ಫಾರೇನ್ನಾಗ ಇರೋದ ಸಹಜ. ಇನ್ನಾ ಹಂತಾ ವರಕ್ಕ ಒಂದ ಕನ್ಯಾ ಗೊತ್ತಾತೋ ಇಲ್ಲೊ ಒಮ್ಮೆ ಒಂದ ಹದಿನೈದ ದಿವಸ ರಜಾ ಹಾಕಿ ಫಾರೇನ್ನಿಂದ ಬಂದ ಕನ್ಯಾ physcially ನೋಡಿ (ಹಂಗ whatsapp ಒಳಗ ಇಲ್ಲಾ ಫೇಸಬುಕ್ಕಿನಾಗ virtually ನೋಡಿ ಹೂಂ ಅಂದಿರ್ತಾನ ಆ ಮಾತ ಬ್ಯಾರೆ) ಹೆಸರಿಗೆ ಮಾತುಕತಿ ಮಾಡಿ ಒಂದ ವಾರದಾಗ ಎಂಗೇಜಮೆಂಟ್ ಮಾಡ್ಕೊಂಡ, ಮುಂದ ಆರ ತಿಂಗಳ ಬಿಟ್ಟ ಮದ್ವಿ ಡೇಟ ಫಿಕ್ಸ ಮಾಡಿ ಹಾಲ್ ಬುಕ್ ಮಾಡಿ ನಾಲ್ಕ ದಿವಸ ಹುಡಗಿ ಜೊತ್ತಿ ಅಡ್ಡಾಡಿ ಮತ್ತ ವಾಪಸ ಫಾರೇನ್ನಿಗೆ ಹೋಗಿ ಬಿಡ್ತಾನ.
ಇತ್ತಲಾಗ ಹೆಣ್ಣಿನವರ ನಮ್ಮ ಅಳಿಯಾ ಫಾರೇನ್ ನಾಗ ಇದ್ದಾನ ಅಂತ, ಗಂಡಿನವರ ಅಂತೂ ನಮ್ಮ ಹುಡುಗಗ ಕನ್ಯಾ ಸಿಗ್ತು ಅಂತ ಖುಶ್ ಆಗಿ ಮದ್ವಿ ತಾಯಾರಿ ಶುರು ಮಾಡ್ತಾರ. ಇನ್ನ ಪಾಪ ಆ ಹುಡುಗಗ ಲಗ್ನಕ್ಕೂ ಹದಿನೈದ ದಿವಸ ರಜಾ ಇರ್ತದ. ಅಂವಾ ಅಷ್ಟರಾಗ ’ಸಜ್ಜಗಿ ಮೂಹುರ್ತ, ಸೋಡ ಮುಂಜವಿ, ದೇವರ ಊಟಾ, ರುಕ್ಕೋತ, ಮದ್ವಿ, ಪ್ರಸ್ಥಾ, ಎರಡೂ ಬೀಗರ ಮನ್ಯಾಗ ಸತ್ಯನಾರಾಯಣ ಪೂಜಾ, ಹಂಗ ಯಾರದರ ಮನ್ಯಾಗ ಗೊಂದ್ಲ ಇದ್ದರ ಗೊಂದ್ಲಾ ಎಲ್ಲಾ ಮುಗಿಸಿಕೊಂಡ ವಾಪಸ ಫಾರೇನ್ನಿಗೆ ಹೋಗೊದ ಇರ್ತದ. ಇನ್ನ ಹನಿಮೂನ, ಕಳ್ಳ ಕುಬಸದ ತನಕಾ ರಜಾ ಇರಂಗಿಲ್ಲಾ. ಅದೇನಿದ್ರು ಅಲ್ಲೇ ಫಾರೆನ್ನಾಗ.
ಇನ್ನ ಲಗ್ನಾಗಿ ಒಂದ ವಾರಕ್ಕ ಹುಡುಗಿನ ಕರಕೊಂಡ ಹೋಗಬೇಕಂದರ ಒಂದ ವಾರದಾಗ ವಿಸಾ ಅಂತು ಅಕಿಗೆ ಸಿಗಂಗಿಲ್ಲಾ. ಮ್ಯಾಲೆ ವಿಸಾ ಏನ ಅತ್ತಿ ಮನಿಯವರ ವರದಕ್ಷಿಣಿ ಒಳಗ ಕೊಡೊದಂತೂ ಅಲ್ಲಾ. ಹಿಂಗಾಗಿ ಮಂದಿ ಭಾಳ ತಲಿ ಓಡಿಸಿ ಎಂಗೇಜಮೆಂಟ್ ಮರದಿವಸ ಗಪ್-ಚುಪ್ ರೆಜಿಸ್ಟ್ರೇಶನ್ ಮ್ಯಾರೇಜ ಮಾಡಿಸಿ ವಿಸಾಕ್ಕ ಅಪ್ಲೈ ಮಾಡಿ ಬಿಟ್ಟಿರ್ತಾರ. ಕರೆಕ್ಟ ಮದ್ವಿ ಹೊತ್ತಿಗೆ ವಿಸಾ ಬಂದಿರ್ತದ, ಮದ್ವಿ ಆಗಿ ಒಂದ ವಾರಕ್ಕ ಗಂಡಾ-ಗುಂಡಿ ಇಬ್ಬರು ಫಾರೇನ್ನಕ್ಕ ಜಿಗಿತಾರ. ಇದರಾಗ ಏನು ತಪ್ಪ ಇಲ್ಲಾ.
ಇನ್ನ ಹಿಂಗ ಲಿಗಲಿ ಲಗ್ನಾ ಮಾಡ್ಕೊಂಡ ಮ್ಯಾರೇಜ ಸರ್ಟಿಫಿಕೇಟ ಬಂದಿದ್ದರು ಹುಡುಗಾ ಹುಡುಗಿ actual ಮದ್ವಿ ಆಗೋತನಕಾ living apart ಇರೋದಕ್ಕ ನಾ legally married but not living together ಅಂತ ಹೇಳಿದ್ದ.
ಇದಕ್ಕ Living Apart Together (LAT) ಅಂತಾರ. Couples who have an intimate relationship but live at separate addresses.
ಅಲ್ಲಾ ನಮ್ಮಂಗ ಲಗ್ನಾಗಿ 20-22 ವರ್ಷ ಆದೋರಿಗೆ ಇದ ಬೆಸ್ಟ ಆಪ್ಶನ್. ಹೆಂಡ್ತಿ ಭಾಳ ತಲಿ ತಿನ್ನಲಿಕತ್ಲು ಅಂದರ ಅಕಿನ್ನ ತವರಮನಿಗೆ ಕಳಸಿ ನಾವ ಆರಾಮಾಗಿ ’ನಾವಿಬ್ಬರು living apart together’ ಅಂತ ಹೇಳ್ಕೋತ ಅಡ್ಡಾಡಬಹುದು. ಅಲ್ಲಾ ನಮ್ಮ ಟೈಮ ಒಳಗ ನಮಗ living together ಭಾಗ್ಯ ಒದಗಿ ಬರಲಿಲ್ಲ. ಈಗ ಇರೋದ ಇದ ಒಂದ ಸೌಭಾಗ್ಯ.
ಹೋಗಲಿ ಬಿಡ್ರಿ ಈ ಲಿವಿಂಗ್ ಟುಗೇದರ್ ಉಸಾಬರಿ, ಏನೋ ಮುಂಜ ಮುಂಜಾನೆ ನನ್ನ ಹೆಂಡ್ತಿ ಕೇಳಿದ್ಲು ಅಂತ ಇಷ್ಟೇಲ್ಲಾ ಬರಿಬೇಕಾತ, ಯಾರ ಹೆಂಗ ಇದ್ದರ ನಮಗೇನ ಆಗಬೇಕಾಗೇದ. ನಂಬದೇನ ಇದ್ದರು ಕಟಗೊಂಡ ಸೌಭಾಗ್ಯವತಿ ಜೊತಿನ living together…loving together and lasting together.
Very nice , cholo bardiri bidripa
Agadhi cholo aithi