ಲಾಕಡೌನಿನ….ಕೌಂಟಡೌನುಗಳು…………’

ಮಾರ್ಚ ೨೪,೨೦೨೦
ರಾತ್ರಿ ೮ ಘಂಟೆ…………
ಮೋದಿಯವರ ರಾಷ್ಟ್ರವನ್ನು ಉದ್ದೇಶಿಸಿ ’ಇವತ್ತು ರಾತ್ರಿ ಹನ್ನೆರಡು ಘಂಟೆಯಿಂದ ಸಂಪೂರ್ಣ ದೇಶ ೨೧ ದಿವಸ ಲಾಕಡೌನ್’ ಅಂತ ಅನೌನ್ಸ ಮಾಡೋದ ತಡಾ ನನಗ ತಲಿನ ಓಡಲಾರದಂಗ ಆತ. ಏನ ಬಂತಪಾ ಈ ಸುಡಗಾಡ ಕೊರೊನಾದ್ದ ಕಾಟ, ಇವತ್ತ ದೇಶಕ್ಕ ದೇಶಾನ ಬಂದ ಮಾಡೊ ಪ್ರಸಂಗ ಬಂತಲಾ? ಆದರೂ ಏನ ಆಗಲಿ ಭಾರತ ಕೊರೊನಾ ಮುಕ್ತ ಆದರ ಸಾಕು ಅಂತ ಅನಸ್ತ.
ಹಂಗ ಮುಂಜಾನೆಯಿಂದ ಯಾವಾಗ ಟಿ.ವಿ. ಒಳಗ ’ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ’ ಅಂತ ಬರಲಿಕತ್ತಿತ್ತಲಾ ಆವಾಗ
ನಾ ನನ್ನ ಹೆಂಡ್ತಿಗೆ ’ಏ..ಎರಡ ಸಾವಿರದ್ದ, ಐದನೂರದ್ದ ನೋಟ ಎಷ್ಟ ಮುಚ್ಚಿ ಇಟ್ಟಿ….. ಹೊರಗ ತಗಿ’ ಅಂತ ಹೆದರಿಸಿದಾಗ ಅಕಿ ಗಾಬರಿ ಆಗಿ
’ಯಾಕ ಮತ್ತ ನೋಟ್ ಬ್ಯಾನ ಮಾಡ್ತಾರ’ ಅಂತ ಕೇಳಿದ್ಲು
’ಇಲ್ಲಾ, ಅದರಾಗ ಕೊರೊನಾ ವೈರಸ್ ಇರ್ತದ ಅಂತ ಇಲ್ಲೆ ಕೊಟ್ಟ ಬಿಡ’ ಅಂತ ನಾ ಅಂದರ
’ರ್ರಿ…ನ್ಯೂಸ ಪೇಪರಗೆ, ನೋಟಿಗೆ ದೋಷ ಇರಂಗಿಲ್ಲಾ, ನೀವು ಬಾಯಿ ಮುಚಗೊಂಡ ಸುಮ್ಮನ ಕೂಡ್ರಿ’ ಅಂತ ಬೈದ್ಲು.
ಒಂದ ಕಡೆ ಇಪ್ಪೊಂದ ದಿವಸ ಸೂಟಿ, ಮನ್ಯಾಗ ಚೈನಿ ಹೊಡಿಬಹುದು ಅಂತ ಅನಸ್ತ. ಇನ್ನೊಂದ ಕಡೆ ಇಪ್ಪತ್ತೊಂದ ದಿವಸ ಹೆಂಗ ಹೆಂಡ್ತಿ ಜೊತಿ ಮನ್ಯಾಗ ಅಂತ ಹೆದರಕಿ ಆತ. ಹಂಗ ನಾ ಕಂಟಿನ್ಯೂ ಆಗಿ ಅಕಿ ಜೊತಿ ಹಗಲು-ರಾತ್ರಿ ಇದ್ದದ್ದ ಹದಿನೈದ ದಿವಸ ಹನಿಮೂನಗೆ ಹೋದಾಗ ಇಷ್ಟ.. ಅದು ಹತ್ತೊಂಬತ್ತ ವರ್ಷದ ಹಿಂದ. ಆದರ ಆವಾಗಿನ ಹೆಂಡ್ತಿಗೂ ಈಗೀನ ಹೆಂಡ್ತಿಗೂ ಫರಕ ಅದನೋ ಇಲ್ಲೊ?
ಎಲ್ಲೂ ಹೊರಗ ಹೋಗಂಗಿಲ್ಲಾ, ಆಫಿಸಿಲ್ಲಾ…ಹೋಟೆಲ್ ಇಲ್ಲಾ, ಮಾಲ್ ಇಲ್ಲಾ, ಎಮ್.ಆರ್.ಪಿನೂ ಇಲ್ಲಾ. ಮೊದ್ಲ ಗೊತ್ತಿದ್ದರ…ಛೇ….ಒಂದ ಸ್ವಲ್ಪ ಕ್ಲ್ಯೂ ಸಿಗಲಿಲ್ಲಾ ಅಂತ ಭಾಳ ಮರಗಿದೆ.
ಏನೊ ಹೊಸಾ ಅನುಭವಾ ಅಂತ ದೇವರಮ್ಯಾಲೆ ಭಾರ ಹಾಕಿ ೨೫ನೇ ತಾರಿಖಿನಿಂದ ಲಾಕಡೌನ ಕೌಂಟಡೌನ ಶುರು ಮಾಡಿದೆ.
ಮೊದ್ಲ ಎರಡ ದಿವಸ ಅಷ್ಟೇನ ಡಿಫರೆನ್ಸ್ ಅನಸಲಿಲ್ಲಾ. ಮುಂದ ಎರಡ ದಿವಸಕ್ಕ ಹೆಂಡ್ತಿ ಕಿರಿ-ಕಿರಿ ಶುರು ಆತಲಾ.
“ರ್ರಿ..ಖಾಲಿ ಕೂತ ಏನ್ಮಾಡ್ತೀರಿ….ನಂಗೊಂದ ಸ್ವಲ್ಪ ಹೆಲ್ಪ ಮಾಡ್ರಿ” ಅಂತ ಶುರು ಮಾಡಿದೋಕಿ ಲಾಕಡೌನ್ ಆಗಿ ನಾಲ್ಕನೇ ದಿವಸ ಕೆಲಸದೋಕಿಗೆ
’ನೀನು ಲಾಕಡೌನ ಮಾಡ್ವಾ, ಯಾಕ ರಿಸ್ಕ ತೊಗೊತಿ, ಹೆಂಗಿದ್ದರೂ ನಮ್ಮ ಮನೆಯವರ ಮನ್ಯಾಗ ಇದ್ದಾರ…..ನೀ ಏನ ಕಾಳಜಿ ಮಾಡಬ್ಯಾಡಾ, ಪಗಾರ ಕಟ್ ಮಾಡಂಗಿಲ್ಲಾ’ ಅಂತ ಅಕಿನ್ನ ವಾಪಸ ಕಳಸಿದ್ಲು.
ಮುಂದ ಹೆಂಗ ಅಂದರ
’ನೀವ ಇದ್ದೀರಲಾ…..ನೀವೇನ ಹಾರ್ಡವೇರ ಮನಷ್ಯಾ, ಸಾಫ್ಟವೇರದವರಗತೆ ’ವರ್ಕ್ ಫ್ರಾಮ್ ಹೋಮ್’ ಇಲ್ಲಾ ಏನಿಲ್ಲಾ…ಸುಮ್ಮನ ’ವರ್ಕ್ ಫಾರ್ ಹೋಮ್’ ಅಂತ ನಾ ಹೇಳಿದ್ದ ಕೆಲಸಾ ಮಾಡ್ರಿ’ ಅಂತ ಹೇಳಿದ್ಲು.
ಅಕಿ ಕಸಾ ಹುಡುಗಿದರ, ನಾ ಥಳಿ ಹೊಡಿಯೋದ….. ಅಕಿ ಭಾಂಡಿ ತಿಕ್ಕಿದರ ನಾ ತೊಳದ ಡಬ್ ಹಾಕೋದು……ಅಕಿ ಹಾಲ ಕಾಸಲಿಕ್ಕೆ ಇಟ್ಟರ ನಾ ಉಕ್ಕಿ ಬಂದ ಮ್ಯಾಲೆ ಆರಸೋದರಿಂದ ಹಿಡದ ರಾತ್ರಿ ಹಾಲ ಹೆಪ್ಪ ಹಾಕೊದ ಸಹಿತ ನಂದ ಜವಾಬ್ದಾರಿ ಆತ. ಒಂದ ಮಾತನಾಗ ಹೇಳ್ಬೇಕಂದರ ಹೆಂಡ್ತಿ ತಲ್ಯಾಗಿನ ಹೇನ ಒರಿಯೋದ ಒಂದ ಬಾಕಿ ಇತ್ತ. ಇಷ್ಟೇಲ್ಲಾ ಕೆಲಸಾ ಮಾಡಿದರು ರಾತ್ರಿ ಮತ್ತ ಸೋಸಿಯಲ್ ಡಿಸ್ಟನ್ಸ ಮೆಂಟೇನ್ ಮಾಡ್ತಿದ್ಲು.
ಎಂಟ ದಿವಸಕ್ಕ ತಲಿ ಕೆಟ್ಟ ಈ ಲಾಕಡೌನ ಯಾವಾಗ ಮುಗಿತೋದ ಅಂತ ಅನಸಲಿಕತ್ತ.
ಅದರಾಗ ನಾ ಯಾವಾಗಿಂದ ಮನಿ ಕೆಲಸಕ್ಕ ಹೆಲ್ಪ ಮಾಡಲಿಕತ್ತೆ ಅಕಿ ಎಕ್ಸ್ಟ್ರಾ ಟೈಮ ಒಳಗ ಆ ಸುಡಗಾಡ ವಾಟ್ಸಪನಾಗ ಊರ ಮಂದಿದ ಸ್ಟೇಟಸ್ ನೋಡೊದ ಶುರು ಮಾಡಿದ್ಲು. ನಾ ಸುಳ್ಳ ಹೇಳಂಗಿಲ್ಲಾ, ಕೊರೋನಾದ ಮ್ಯಾಲೆ ಆಣಿ ಮಾಡಿ ಹೇಳ್ತೇನಿ ಏನಿಲ್ಲಾಂದರು ನಮ್ಮ ಪೈಕಿ ಒಂದ ಹತ್ತ-ಹದಿನೈದ ಹೆಂಡಂದರ ತಮ್ಮ ಗಂಡಂದರ ಮನಿ ಕೆಲಸಾ ಮಾಡೋದನ್ನ ಸ್ಟೇಟಸ ಒಳಗ ಹಾಕಿದ್ದರು. ನಾ ಇಕಿನೂ ಎಲ್ಲೇರ ಹಾಕಿ-ಗಿಕ್ಯಾಳ ಅಂತ
’ನೀ ಒಟ್ಟ ನಾ ನೆಲಾ ಒರಸೋದ, ಎಂಜಲ-ಗ್ವಾಮಾ ಮಾಡೊ ಫೋಟೊ ಸ್ಟೇಟಸ್ ಒಳಗ ಹಾಕಂಗಿಲ್ಲಾ, ನಾ ಬೇಕಾರ ಡೈರೆಕ್ಟ ಪೇಪರನಾಗ ಬರಿತೇನಿ’ ಅಂತ ಹೇಳಿ ಬಿಡಿಸಿಸಿದೆ.
ಮುಂದ ಮತ್ತ ಹಿಂಗ ಒಂದ್ಯಾರಡ ದಿವಸ ಹೊಗೊದಕ್ಕ ಒಂದ ದಿವಸ ಮುಂಜಾನೆ ಭಡಾ, ಭಡಾ ಗಂಟಿನಾಗಿನ ರೇಷ್ಮಿ ಸೀರಿ ಉಟಗೊಂಡ ರೇಡಿ ಆದ್ಲು, ನಾ ಅಕಿನ್ನ ನೋಡಿದವನ ’ಲಾಕಡೌನ ವಿಥಡ್ರಾ ಆತಿನ’ ಅಂತ ಕೇಳಿದರ
“ಇಲ್ಲರಿ…ಪ್ರೀಯಾ, ಸಂಗೀತಾ, ರಕ್ಷಕ್ಕಾ ಎಲ್ಲಾರೂ ಸೇರಿ ಇವತ್ತ ಸೀರಿ ಉಟಗೊಂಡ ಸೊಸಿಯಲ್ ಮೀಡಿಯಾದಾಗ ಪ್ರೋಫೈಲ್,ಸ್ಟೇಟಸ್ ಅಪಡೇಟ್ ಮಾಡಿ ಟ್ರೆಂಡ್ ಮಾಡಬೇಕು ಅಂತ ಡಿಸೈಡ ಮಾಡೇವಿ…..ನೀವ ಅದರ ಬಗ್ಗೆ ತಲಿಕೆಡಿಸ್ಗೊಬ್ಯಾಡ್ರಿ….ಸುಮ್ಮನ ಟೆರೆಸ್ ಮ್ಯಾಲೆ ಹೋಗಿ ಸಂಡಗಿ ಇಡ್ರಿ’ ಅಂದ್ಲು.
ಅಲ್ಲಾ ಇಕಿಗೆ ಕೆಲಸ ಇಲ್ಲಾ ಅಂದರ… ಅವರು ಅವರ ಬಿಡ ಅಂತ ಸಂಡಗಿ ಹಿಟ್ಟ ತೊಗೊಂಡ ಟೆರೆಸ್ ಏರಿದೆ.
ಹಂಗ ಒಂದ ವಾರದಿಂದ ನಂಗೂ ಡೇ & ನೈಟ್ ನೈಟಿ ನೋಡಿ ನೋಡಿ ಕಣ್ಣಾಗ ಪಿಚ್ಚ್ ಬಂದಿತ್ತ ಬಿಡ್ರಿ.
ಮುಂದ ನಾಲ್ಕ ತಾಸನಾಗ ಈ ಹೆಣ್ಣಮಕ್ಕಳ ಸೀರಿ ಕೊರೊನಾಕಿಂತ ಜಾಸ್ತಿ ವೈರಲ್ ಆಗಿ ಸೋಸಿಯಲ್ ಮೀಡಿಯಾ ತುಂಬ ಸ್ಪ್ರೇಡ್ ಆತ ಅನ್ನರಿ.
ಅದನ್ನ ನೋಡಿ ನಮ್ಮ ಜೋಶ್ಯಾ ’ಅಣ್ಣಾ ನಾವು ಬರ್ಮೋಡಾ ಟ್ರೆಂಡ್ ಮಾಡೋಣಿನ’ ಅಂದಾ
’ಏ..ಹೋಗ್ಲಿ ಬಿಡ್ಲೆ…ಇದ್ದ ಎರಡ ಬರ್ಮೋಡಾ ಹದಿನೈದ ದಿವಸದಿಂದ 24×7 ಹಾಕ್ಕೊಂಡ ಹಾಕ್ಕೊಂಡ ಪಿಸದಾವ..’ ಅಂತ ಬಿಡಸಿಸಿದೆ.
ಒಂದ ಮಾತನಾಗ ಹೇಳ್ಬೇಕಂದರ ಈ ಸರ್ಕಾರದ್ದ ಲಾಕಡೌನ, ಹೆಂಡ್ತಿ ಸೀಲಡೌನ ಒಳಗ ಗಂಡಂದರೇಲ್ಲಾ knee-down ಆಗಿದ್ವಿ.
ನನ್ನ ಹೆಣೇಬರಹಕ್ಕ tv ಹಚ್ಚಿದರ corona, ಆರಿಸಿದರ prerana ಅನ್ನೊಹಂಗ ಆಗಿತ್ತ. ಮ್ಯಾಲೆ MRPನೂ ಬಂದ ಮಾಡಿದ್ದಕ್ಕ ನಮಗ ದುಃಖಾ ನುಂಗಿ ಮ್ಯಾಲೆ ಕುಡಿಲಾರದಕ್ಕೂ ಗತಿ ಇಲ್ಲದಂಗ ಆಗಿತ್ತ.
’ಅಲ್ಲಾ, ಯಾಕ ನಾ ಲಾಕಡೌನ್ ಆಗೋ ಟೈಮ ಒಳಗ ಗೋವಾದೊಳಗ ಇರಲಿಲ್ಲಾ, ಅಲ್ಲೇ ಲಾಕಡೌನ್ ಆಗಿದ್ದರ ೨೧ ದಿವಸದಾಗ ಗೊರತ ಹತ್ತಲಾರದಂಗ ಆಗಿರ್ತಿದ್ದೆ’ ಅನಸ್ತ.
ಹಂಗ ಈಗೂ ಚೇಂಜ್ ಆಗೇನಿ, ಮೊದ್ಲ size zero ಇದ್ದೆ, ಈಗ eight packs ಆಗೇನಿ…ಅಂದರ ಬರೇ ರಿಬ್ಸ್ ಇಷ್ಟ ಕಾಣಲಿಕತ್ತಾವ.
ಅಲ್ಲಾ ಸಿರಿಯಸ್ ಆಗಿ ಭಾಳ ಮಂದಿ ನಮ್ಮ ದೋಸ್ತರ ಈ ಲಾಕಡೌನ ಒಳಗ ನಾಯಿ ಬಡಿಯೋ ಕೋಲ ಆದಂಗ ಆಗ್ಯಾರ.
ಆದರ ಒಬ್ಬ ದೋಸ್ತ ಇಷ್ಟ ೨೧ ದಿವಸದಾಗ ೧೦ ಕೆ.ಜಿ ವೇಟ್ ಏರಿಸ್ಯಾನ. ಹಂಗ ಅಂವಾ ಇಪ್ಪತ್ತೊಂದ ತಿಂಗಳ ಜಿಮ್ಮಿಗೆ ಹೋಗಿ ೪೦ ಕೆ.ಜಿ ವೇಟ ಇಳಸಿದ್ದಾ. ಅಲ್ಲಾ ಅಷ್ಟ ಇಳಸೊದರಾಗ ಪಾಪ ಆ ಜಿಮ್ ಇನಸ್ಟ್ರಕ್ಟರಂದ ಇಪ್ಪತ್ತ ಕೆ.ಜಿ ಇಳದಿತ್ತ ಆ ಮಾತ ಬ್ಯಾರೆ. ಹಂತಾವ ಇವತ್ತ ವೇಟ್ ಗೇನ್ ಮಾಡ್ಕೊಂಡಾನ, ಉಳದವರದೇಲ್ಲಾ ಇಳದದ …ಅವಂದೊಬ್ಬೊವಂದ ಯಾಕ ಏರೇದ ಹೇಳ್ರಿ?….yes..right guess ಅವಂದಿನ್ನೂ ಮದ್ವಿ ಆಗಿಲ್ಲಾ.
ಅವಂಗ ’ಮದ್ವಿ ಆಗಲೇ ಹೆಂಡ್ತಿ ಕಾಟಕ್ಕ ವೇಟ ಇಳಿತೈತಿ’ ಅಂತ ಹೇಳಿದರ ’ಯಪ್ಪಾ…ವೇಟ ಇಳಸಿದರ ಇಷ್ಟ ಮದ್ವಿ ಆಗತೈತಿ ಅಂತಾರೊ’ ಅಂತ ಅನ್ನೋಂವಾ.
ಇರಲಿ….ಮೊನ್ನೆ ಮಂಗಳವಾರ ನಾ ಎದ್ದವನ ಮಾಸ್ಕ ಹಾಕೊಂಡ ಶಟರ್ಸ್ ಹಾಕಿದ್ದ ಗಣಪತಿ ಗುಡಿಗೆ ಹೋಗಿ
’ದೇವರ ಏನರ ಮಾಡ, ಲಾಕಡೌನ ಮಾತ್ರ ಕಂಟಿನ್ಯೂ ಮಾಡಸಬ್ಯಾಡಪಾ’ ಅಂತ ಬೇಡ್ಕೊಂಡರ ಆ ದೇವರ ಒಳಗಿಂದ
’ಲೇ….. ನಿಮ್ಮಕಿಂತಾ ಜಾಸ್ತಿ ಸಫರ್ ಆದೋಂವ ನಾನೋ ಯಪ್ಪಾ..this is man made crisis…not god made…ನೀವು ಬರೆ #stayathome ಇದ್ದಿರಿ ನಾ ನಿಮ್ಮ ಸಂಬಂದ ಗುಡ್ಯಾಗ #quarantine ಆಗೇನಿ’ ಅಂತ ನಂಗ ಬೈದ ಕಳಸಿದಾ…. ಇನ್ನ ದೇವರ ಸಿಟ್ಟಿಗೆದ್ದಾನ ಅಂದ ಮ್ಯಾಲೆ ಮುಗಿತ ತೊಗೊ ನಮ್ಮ ಕಥಿ ಅನಸ್ತ….. ಮುಂದ ಒಂದ ತಾಸಿಗೆ ಮೋದಿಯವರ ರಾಷ್ಟ್ರವನ್ನು ಉದ್ದೇಶಿಸಿ ’ಲಾಕಡೌನನ್ನು ಇನ್ನು ಹತ್ತೊಂಬತ್ತ ದಿವಸ ಕಂಟಿನ್ಯೂ ಮಾಡಲಾಗಿದೆ’ ಅಂತ ಅನೌನ್ಸ ಮಾಡಿದರು….
ಮುಂದ?….ಮುಂದೇನ….ನನ್ನ ಲಾಕಡೌನಿನ ಕೌಂಟಡೌನ ಮತ್ತ ಒಂದನೇದಿಂದ ಶುರು ಆತ….ಅದ ಮನಿ….ಅದ ಹೆಂಡ್ತಿ….ಅದ ಮಕ್ಕಳು…ಅದ ಸಂಸಾರ.
ಇನ್ನ ಇದ ಮತ್ತ ಕಂಟಿನ್ಯೂ ಆಗಲಾರದಂಗ ನೋಡ್ಕೊಳೊ ಜವಾಬ್ದಾರಿ ನಂಬದು-ನಿಂಬದು. ನಾವೇಲ್ಲಾ ಲಾಕಡೌನಿನ ನಿಯಮಗಳನ್ನ ಪಾಲಿಸಿ, ಇಡಿ ಜಗತ್ತ ಕೊರೊನಾ ಮುಕ್ತ ಆಗೊ ಹಂಗ ಮಾಡೋಣ.

IndiaFightsCorona

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ