ಈಗ ಒಂದ ವಾರದ ಹಿಂದ ಇನ್ನೇನ ಶ್ರಾವಣ ಬರತದ ಗೌರಿ ಕೂಡ್ಸೋದ ಅದ ಅಂತ ಇಡಿ ಮನಿ ಅತ್ತಿ ಸೊಸಿ ಕೂಡಿ ಸ್ವಚ್ಛ ಮಾಡಲಿಕತ್ತಿದ್ದರು. ಹಂಗ ಗೌರಿ ದೇವರ ಮನ್ಯಾಗ ಕೂಡ್ಸೋದ ಇಡಿ ಮನಿಯಾಕ ಅಂದರ ನಮ್ಮವ್ವಾ ಕೇಳಂಗಿಲ್ಲಾ
’ಅದ ನಮ್ಮ ಪದ್ದತಿ, ಗೌರಿ-ಗಣಪತಿ ಹಬ್ಬ ಬಂತಂದರ ಇಡೀ ಮನಿ ಸ್ವಚ್ಛ ಮಾಡಬೇಕ’ ಅಂತ ಇಬ್ಬರು ಬೆಡರೂಮ್ ನಿಂದ ಹಿಡದ ಬಾಥ್ ರೂಮ್ ತನಕಾ ಎಲ್ಲಾ ಸ್ವಚ್ಛ ಮಾಡೋರ.
ಹಿಂಗ ಸ್ವಚ್ಛ ಮಾಡತ ಮಾಡತ ನಡಮನಿ ಜಂತಿ ಮ್ಯಾಲೆ ನನ್ನ ಆರುವರಿ ಕೆ.ಜಿ ಜೀರ್ಣ ಆಗಿದ್ದ ಮದ್ವಿ ಅಲ್ಬಮ್ ಸಿಗ್ತ.
ಅಲ್ಲಾ ನನ್ನ ಮದ್ವಿ ಆಗಿ ಇಪ್ಪತ್ತೆರಡ ವರ್ಷ ಆಗಲಿಕ್ಕೆ ಬಂತ ನಾನ ಜೀರ್ಣ ಆಗೇನಿ ಇನ್ನ ಮದ್ವಿ ಅಲ್ಬಮ್ ಆಗಲಾರದ ಏನ. ಆದರು ನಮ್ಮವ್ವಗ ಅದನ್ನ ವರ್ಷಕ್ಕೊಮ್ಮೆ ತಗದ ಧೂಳಾ ಜಾಡಿಸಿ ನೋಡಿ ಹೆಂಗ ಇದ್ದ ಮಗಾ ಮದ್ವಿ ಆದಮ್ಯಾಲೆ ಹೆಂಗ ಆದ ಅಂತ ಮರಗಿ ಮತ್ತ ಅಲ್ಬಮ್ ವಾಪಸ ಇಡೋದ ಒಂದ ಕೆಲಸ ಆಗಿತ್ತ, ಅದ ಟೈಮಕ್ಕ ನಾ ಕರೆಕ್ಟ ನಡಮನಿಗೆ ಹೋಗೊದಕ್ಕ ಅಕಿ ನನಗ
’ಈ ಸುಡಗಾಡ ಮದ್ವಿ ಅಲ್ಬಮ್ ಮಾರೇರ ಮಾರ’ ಅಂದ್ಲು.
ಅದನ್ನ ಅಡಗಿ ಮನ್ಯಾಗ ಧೂಳ ಹೊಡಿಲಿಕತ್ತಿದ್ದ ನನ್ನ ಹೆಂಡ್ತಿ ಕೇಳಿಸ್ಗೊಂಡ
’ಹೌದರಿ…ಸುಮ್ಮನ ಯಾರಿಗರ ಕೊಟ್ಟರ ಕೊಡ್ರಿ, ಛಲೋ ರೊಕ್ಕರ ಬರ್ತಾವ’ ಅಂದ್ಲು.
ನಾ ಅಲ್ಬಮ್ ಮಾರಿದರ ಛಲೋ ರೊಕ್ಕ ಹೆಂಗ ಬರ್ತಾವ ಅಂತ ಗಾಬರಿ ಆದೆ?
ನಮ್ಮವ್ವ ಮದ್ವಿ ಅಲ್ಬಮ್ ಮಾರ ಅಂದಿದ್ದರ ಅರ್ಥ ಯಾವದರ ರದ್ದಿಯವಂಗ ತೂಕದ ಮ್ಯಾಲೆ ಕೊಡ ಕೆ.ಜಿ ಗೆ ನಾಲ್ಕೈದ ರೂಪಾಯಿ ಬಂದರ ಬರ್ತದ ಅಂತ. ನನ್ನ ಹೆಂಡ್ತಿ ನೋಡಿದರ ಛಲೋ ರೊಕ್ಕಾ ಬರ್ತಾವ ಅನಲಿಕತ್ತಾಳಲಾ ಅಂತ ಅಕಿನ್ನ ಕೇಳಿದರ ಅಕಿ ಏನ ಅಂದ್ಲ ಹೇಳ್ರಿ…ಕೇಳಿದರ ನೀವು ಹೌದ ಪ್ರೇರಣಾ ಅಂತೀರಿ.
ಅಕಿ ಏನ ಅಂದ್ಲ ಅಂದರ
’ಅಲ್ಲರಿ, ಕತ್ರಿನಾ ಕೈಫ್, ಆಲಿಯಾ ಭಟ್ ತಮ್ಮ ಮದ್ವಿ ಫೋಟೊದ್ದ ವೀಡಿಯೋದ್ದ ರೈಟ್ಸ ಕೋಟಿಗಟ್ಟಲೇ ರೊಕ್ಕಕ್ಕ ಕೊಟ್ಟಿದ್ದರಲಾ, ಹಂಗ ನಂಬದು ಕೊಡೊದರಿಪಾ. ಅಷ್ಟ ಬರಲಿಲ್ಲಾ ಅಂದರು ರದ್ದಿಗಿಂತಾ ಜಾಸ್ತಿ ಬರ್ತದ ಇಲ್ಲ ಅಷ್ಟ ಸಾಕ’ ಅಂದ್ಲು.
ಎಲ್ಲಿ ಕತ್ರಿನಾ ಕೈಫ, ಆಲಿಯಾ ಭಟ್…ಎಲ್ಲೀ ಪ್ರೇರಣಾ ಆಡೂರ, ಏನತಾನ? ಒಟ್ಟ ಏನೇನರ ಮಾತಾಡ್ತಾಳ ಆತ. ಅಲ್ಲಾ, ತಾ ಬೇಕಾರ ತನ್ನಷ್ಟಕ್ಕ ತಾ ಕತ್ರಿನಾ, ಆಲಿಯಾ ಅಂತ ತಿಳ್ಕೊವಳ್ಳಾಕ ನಾ ವಿಕಿ ಕೌಶಲ್, ರಣಬೀರ ಕಪೂರ ಏನ?
ನಿಮಗೊತ್ತಿರಲಿ ಅಂತ ಹೇಳಲಿಕತ್ತೇನಿ ಕತ್ರಿನಾ ಕೈಫ್ ಮ್ಯಾರೇಜದ್ದ ವೀಡಿಯೋ ರೈಟ್ಸ OTT platform ಒಳಗ 80 ಕೋಟಿಗೆ ಹೋದರ ಭಟ್ಟರ ಮಗಳ ಅಂದರ ಆಲಿಯಾ ಭಟ್ ಮ್ಯಾರೇಜ್ ರೈಟ್ಸ್ 100 ಕೋಟಿಗೆ ಹೋಗೇದ.
ನಾ ತಲಿ ಕೆಟ್ಟ ’ಲೇ…ಹುಚ್ಚಿ ಅವರ ಸೆಲೆಬ್ರಿಟಿ, ಮ್ಯಾಲೆ ಹೊಸ ಲಗ್ನಾ, ನಂಬದ 22 ವರ್ಷದ ಹಿಂದಿನ ಮದ್ವಿ ಅಲ್ಬಮ್, ಹನಿಮೂನ್ ಅಲ್ಬಮ್ ಏನ ಅಲ್ಲಾ, ರದ್ದಿಯವರರ ನಮ್ಮ ಮದ್ವಿ ಅಲ್ಬಮ್ ತೊಗೊತಾರೊ ಇಲ್ಲೋ ಗೊತ್ತಿಲ್ಲಾ, ನೀ ಹಂತಾದರಾಗ ನಮ್ಮ ಹಳೇ ಮದ್ವಿ ಅಲ್ಬಮ್ ಫೋಟೊದ್ದ ರೈಟ್ಸ ಮಾರಲಿಕ್ಕೆ ಹೊಂಟಿ ಅಲಾ’ ಅಂತ ಬೈದೆ.
ಅಲ್ಲಾ ಮದ್ವಿ ಮಾಡ್ಕೊಂಡ ನಾನ ನನ್ನ ರೈಟ್ಸ ಕಳ್ಕೊಂಡೇನಿ ಮ್ಯಾಲೆ ಇವತ್ತಿನ ಕಾಲದಾಗ ಮದ್ವಿಗೆ ಕಿಮ್ಮತ್ ಇಲ್ಲಾ, ಮದ್ವಿ ಮಾಡ್ಕೊಂಡವರಿಗೆ ಕಿಮ್ಮತ್ ಇಲ್ಲಾ ಹಂತಾದರಾಗ ಮದ್ವಿ ಅಲ್ಬಮಗೆ ಎಲ್ಲೆ ಕಿಮ್ಮತ್?
ಅದರಾಗ ಕಟಗಿ ಪ್ಲ್ಯಾಟಫಾರ್ಮ್ ಮ್ಯಾಲೆ ಜಮಖಂಡಿ ಜಮಖಾನಿ ಹಾಸಿ ಜಂಗ್ಲಿಪೇಟ ಹುಡುಗಿ ಲಗ್ನಾ ಮಾಡ್ಕೊಂಡ ನನ್ನಂತಾವನ ಮದ್ವಿ ಫೋಟೊ ರೈಟ್ಸ ಯಾ OTT platform ದವರ ಕೇಳ್ತಾರ್ರಿ? ಅದು ಹಳೇ ಮದ್ವಿದ.
ಇನ್ನ ಆ ಅಲ್ಬಮ್ ನೀರೋಲಿಗೆ ಹಾಕಬೇಕಂದರ ಮನ್ಯಾಗ ನೀರ ಕಾಸೋರ ಇಲ್ಲಾ, ಅಗ್ಗಿಷ್ಟಗಿ ಹಾಕಬೇಕಂದರ ಹೆಂಡ್ತಿ ಮುಂದ ಹಡಿಯೋಕಿ ಅಲ್ಲಾ. ಏನ ಮಾಡೋದ ರದ್ದಿಯವರ ತೊಗೊಂಡರ ಛಲೋ ಇಲ್ಲಾಂದರ ಕೆಲಸದೋಕಿಗೆ ಕೊಟ್ಟ ಕಳಸೋದ. ಅಕಿನರ ನಮ್ಮ ಮದ್ವಿ ಅಲ್ಬಮ್ ಸುಟ್ಟ ಒಂದ ಹಿಂಡಾಲಿಯಮ್ ಡಬರಿ ನೀರ ಕಾಸಗೊವಳ್ಳಾಕ.
ಹಂಗ ನನ್ನವು ಮದ್ವಿದ ಒಂದ, ಆಮ್ಯಾಲೆ ಅದರಕಿಂತಾ ವಜ್ಜಾದ್ದ ಹನಿಮೂನದ್ದ ಒಂದ ಅಲ್ಬಮ್ ಇತ್ತ. ಇತ್ತ ಏನ ಇನ್ನೂ ಅದ, ಅದನ್ನ ಬೆಡರೂಮನಾಗಿಂದ ವರ್ಷಕ್ಕೊಮ್ಮೆ ತಗದ ಧೂಳಾ ಝಾಡಿಸಿ ರೆಫೆರೆನ್ಸಗೆ ನೋಡಿ ’those were the days’ ಅಂತ ವಾಪಸ ಇಡ್ತೇನಿ. ಹಂಗ ಮುಂದ ಕುಬಸದ್ದ, ಶ್ರೀಮಂತದ್ದ ಅಲ್ಬಮ್ ಮಾಡಸಿದ್ದರ ಅದ ಇವ ಎರಡರಕಿಂತ ವಜ್ಜಾ ಇರ್ತಿತ್ತ, ಯಾಕಂದರ ಕ್ಯಾರಿಂಗ್ ಅಲ್ಬಮ್ ಅಲಾ. ಆದರ ಪುಣ್ಯಾಕ್ಕ ಅದರದೇನ ಅಲ್ಬಮ್ ಮಾಡಸಲಿಲ್ಲಾ.
ಆದರ ಈಗ ಕಾಲ ಬದಲಾಗೇದ, ಫೋಟೊಗ್ರಾಫಿ, ವೀಡಿಯೋಗ್ರಾಫಿ ಎಲ್ಲಾ ಭಾಳ ಚೇಂಜ್ ಆಗ್ಯಾವ ಹಂಗ ತುಟ್ಟಿನೂ ಆಗ್ಯಾವ, ಈಗಂತೂ ವರದಕ್ಷೀಣಿ ಒಳಗ ಫೋಟೊ ಗ್ರಾಫಿ/ಅಲ್ಬಮ್ ಖರ್ಚ್ ಅಂತ ಬ್ಯಾರೆ ಇಸ್ಗೊಬೇಕ ಆ ಪರಿ ತುಟ್ಟಿ ಆಗ್ಯಾವ. ಅದೆನೋ ಸುಡಗಾಡ ದ್ರೋಣ್ ಅಂತ, ಮಿಕ್ಸಿಂಗ್ ಅಂತ, ಪ್ರೀ ಮ್ಯಾರೇಜ್ ಫೋಟೊ ಶೂಟ್ ಬ್ಯಾರೆ, ಹಲ್ದಿ, ಮೆಹಂದಿ, ಸಂಗೀತ ಅಂತ ಒಂದ ಎರಡ ಈಗಿನ ಮದ್ವಿ ಸಡಗರ ಅಂತೇನಿ. ಈಗೀನ ಜನರೇಶನ್ ಫೋಟೊ ವೀಡಿಯೋಕ್ಕ ಖರ್ಚ ಮಾಡೊದರ ಅರ್ಧಾ ಖರ್ಚಿನಾಗ ನಮ್ಮ ಅವ್ವಾ ಅಪ್ಪಂದ ಪೂರ್ತಿ ಮದ್ವಿ, ಹನಿಮೂನ್ ಆಗಿತ್ತ ಆ ಮಾತ ಬ್ಯಾರೆ.
ಈಗ ಒಂದ ವರ್ಷದ ಹಿಂದ ನಮ್ಮ ಮೌಶಿ ಮಗಂದ ಮದ್ವಿ ಒಳಗೂ ಇವೇಲ್ಲಾ ಸಡಗರ ಆಗಿದ್ವು. ಅದರಾಗ ನಮ್ಮ ಮೌಶಿಗೆ ಫೋಟೊದ್ದ ಭಾರಿ ಹುಚ್ಚ ಇತ್ತ, ಹಿಂಗಾಗಿ ಫೋಟೊದೊಂವಾ ಒಂದ ಹದಿನೈದ ದಿವಸ ಅವರ ಮನ್ಯಾಗ ವಸ್ತಿ ಇದ್ದಾ. ಮುಂದ ಅಗದಿ ಗ್ರ್ಯಾಂಡ್ ಆಗಿ ಮದ್ವಿ ಆತ. ಹುಡುಗಾ ಹುಡುಗಿ ಹನಿಮೂನಗೆ ಹೋಗಿ ಬರೋದರಾಗ ಫೋಟೊ/ವೀಡಿಯೋ ಎಲ್ಲಾ ಬಂದಿದ್ವು, ಮನಿ ಮಂದಿ ಎಲ್ಲಾ ಒಂದ ಸಲಾ ಬಿಟ್ಟ ಹತ್ತ ಸಲಾ ಬ್ಯಾಸರ ಆಗೋ ಅಷ್ಟ ನೋಡಿದರು. ಮುಂದ……ಮುಂದೇನ?
ಅಲ್ಲರಿ ಲಕ್ಷಗಟ್ಟಲೇ ರೊಕ್ಕಾ ಖರ್ಚ ಮಾಡಿ ಫೋಟೊ/ವೀಡಿಯೋ ಎಲ್ಲಾ ಮಾಡಿಸಿ ನಾಲ್ಕ ಮಂದಿ ನೋಡಲಿಲ್ಲಾ ಅಂದರ ಹೆಂಗ? ತೊಗೊ ನಮ್ಮ ಮೌಶಿ ವಾರಾ ಒಬ್ಬೊಬ್ಬರಿಗೆ ಮನಿಗೆ ಕರೆಯೋಕಿ. ನಮ್ಮ ಮಗನ ಮದ್ವಿ ಫೋಟೊ ನೋಡ್ಲಿಕ್ಕೆ ಬರ್ರೆ ನಮ್ಮವ್ವಾ ಅಂತ. ಇನ್ನ ಅದರಾಗ ಆ ಪೆನ್ ಡ್ರೈವ್ ಹಾಕಿ ಕಂಪ್ಯೂಟರ್ ಇಲ್ಲಾ ಟಿ.ವಿ. ಒಳಗ ನೋಡಬೇಕ ಅಂದರ ಒಂದ ಮೂರ ತಾಸಿನ ಕೆಲಸನ ಅನ್ನರಿ. ಇನ್ನ ಹಂಗ ಎರಡ ಮೂರ ತಾಸ ಅವರ ಮನ್ಯಾಗ ಇರ್ತೇವಿ ಅಂದರ ಊಟ ಇಲ್ಲಾಂದರ at least ನಾಷ್ಟನರ ಅವರ ಕೊಡಬೇಕ. ಅಲ್ಲಾ ಮದ್ವಿಗೆ ಬಂದಾಗ ಉಂಡ ಹೋದರ ಉಡಗೋರಿನರ ಕೊಟ್ಟಿರ್ತಾರ ಆದರ ಮದ್ವಿ ವೀಡಿಯೋ, ಫೋಟೊ ನೋಡಲಿಕ್ಕೆ ಬಂದೋರ ಯಾರ ಗಿಫ್ಟ ಕೊಡ್ತಾರ. ಆದರು ಅಕಿಗೆ ಲಕ್ಷ ಗಟ್ಟಲೇ ಖರ್ಚ ಮಾಡಿ ಅಂದರ ಬೀಗರ ಕಡೆ ಅರ್ಧಾ ವಸೂಲ ಮಾಡಿದ್ಲ ಆ ಮಾತ ಬ್ಯಾರೆ ಅನ್ನರಿ, ಫೋಟೊ ವೀಡಿಯೋ ಮಂದಿ ನೋಡ್ಲಿಲ್ಲಾ ಅಂದರ ಹೆಂಗ ಅಂತ ಮಂದಿಗೆ ಕರದ ಕರಿಯೋಕಿ. ಇಲ್ಲೆ ನಮಗರ ನಮ್ಮ ಮದ್ವಿ ಫೋಟೊನ ಒಂದ ಸರತೆ ಬಿಟ್ಟ ಎರಡ ಸರತೆ ನೋಡಿದರ
’ಏನ ನೋಡಿದ್ದ ನೋಡೊದ ನಡಿ, ತಿರಗಿ- ಮುರಗಿ ಅದ ಹೆಂಡ್ತಿ, ಅದ ಅತ್ತಿ ಮಾವಾ’ ಅಂತ ಅಲ್ಬಮ್ ಎತ್ತಿ ಇಡ್ತೇವಿ ಇನ್ನ ಮತ್ತೊಬ್ಬರದ ನೋಡ್ಲಿಕ್ಕೆ ಅವರ ಮನಿಗೆ ಹೋಗೊದ ಅಂದರ ಮೈಮ್ಯಾಲೆ ಬರ್ತಿತ್ತ. ಅದು ಇಡಿ ಅಲ್ಬಮ್ ಒಳಗ ನಮ್ಮವು ಭಾಳ ಅಂದರ ಮೂರರಿಂದ ನಾಲ್ಕ ಫೋಟೊ ಇರ್ತಾವ. ಆದರ ಪಾಪ ನಮ್ಮ ಮೌಶಿ ಕರದಾಳ ಇಲ್ಲಾ ಅಂತ ಅನ್ನಲಿಕ್ಕೆ ಬರಂಗಿಲ್ಲಾ ಅಂತ ಹೋಗಿ ನೋಡಿ ಬಂದ್ವಿ ಆ ಮಾತ ಬ್ಯಾರೆ.
ಇರಲಿ, ಹಂಗ ನಾಳೆ ಸಂಡೇ ಫ್ರೀ ಇದ್ದರ ಬರ್ರಿ ನಮ್ಮ ಮನಿ ಕಡೆ. ಒಂದ ಕಪ್ ಕಶಾಯ ಕುಡದ ನನ್ನ ಮದ್ವಿದ, ಹನಿಮೂನದ್ದ ಅಲ್ಬಮ್ ನೋಡಿ ಹೋಗಿರಂತ. ನನ್ನ ಹೆಂಡ್ತಿ ಅಲ್ಬಮ್ ರೈಟ್ಸ್ ಯಾವದರ ರದ್ದಿ ತೊಗೊಳೊವಂಗ ಆಕ್ಶನ್ ಮಾಡೊಕಿಂತ ಮೊದ್ಲ ಬರ್ರಿ ಮತ್ತ.