ನಿನ್ನೆ ಮಧ್ಯಾಹ್ನ ಆಫೀಸನಿಂದ ಊಟಕ್ಕ ಬಂದಾಗ ಪ್ರೇರಣಾ ಕಾಣಲಿಲ್ಲಾ. ನಮ್ಮವ್ವನ ನಾ ಬಂದದ್ದ ನೋಡಿ ತಾಟ ಹಾಕಿದ್ಲು. ನಾ ಹೊಟ್ಟಿ ಹಸ್ತಾಗ ಮನ್ಯಾಗ ಯಾರಿಲ್ಲಾ, ಯಾಕಿಲ್ಲಾ ಎಲ್ಲಾ ತಲಿ ಕೆಡಸಿಗೊಳ್ಳಿಕ್ಕೆ ಹೋಗಂಗಿಲ್ಲಾ. ಊಟ ಆದಮ್ಯಾಲೆ
’ಎಲ್ಲೇ ಹೋಗ್ಯಾಳ ನಿನ್ನ ಸೊಸಿ, ಕಾಣವಳ್ಳಲಾ’ ಅಂತ ಕೇಳಿದರ ನಮ್ಮವ್ವ ಸಿಟ್ಟಲೇ
’ಜವಳಿಸಾಲಿಗೆ ಜವಳಿ ತರಲಿಕ್ಕೆ ಹೋಗ್ಯಾಳ’ ಅಂತ ಅಂದ್ಲು..
’ಅಯ್ಯ ಮೊನ್ನೇರ ಅವರತ್ತಿ ಮಗಳ ಮೈದನನ ಮದ್ವಿಗೆ ಜವಳಿ ತರಲಿಕ್ಕೆ ಹೋಗಿದ್ಲು ಈಗ ಮತ್ತ ಹೋಗ್ಯಾಳ?’ ಅಂತ ಕೇಳಿದರ
’ಹೂಂನಪಾ…ಆವಾಗ ಗಂಡಿನವರ ಕಡೆ ಕರದರ ಅಂತ ಹೋಗಿದ್ಲು, ಈಗ ಹೆಣ್ಣಿನವರ ಕರದರ ಅಂತ ಹೋಗ್ಯಾಳ’ ಅಂದ್ಲು
’ಏ..ಹೆಣ್ಣಿನವರ ನಮಗೇನ ಸಂಬಂಧ’ ಅಂತ ಕೇಳಿದರ
’ಅದನ್ನ ನಿನ್ನ ಹೆಂಡ್ತಿಗೆ ಕೇಳ, ಅಕಿ ಏನೋ ಮದ್ವಿ ಜವಳಿ ತಗಿಯೋದರಾಗ expert ಅಂತ ಹಿಂಗಾಗಿ ಎಲ್ಲಾರೂ ಕರಿತಾರ ಇಕಿಗೂ ಮನ್ಯಾಗ ದುಡಿಲಿಕ್ಕೆ ಗಟ್ಟ್ಯೂಳ್ಳ ಅತ್ತಿ ಇದ್ದಾಳ, ಒಂದ ಕುಕ್ಕರ್ ಇಟ್ಟ ಮುಂದ ಸಾರಿಗೆ ನೀವ ಒಗ್ಗರಣಿ ಹಾಕ್ರಿ ಅತ್ಯಾ ಅಂತ ಹೋಗಿ ಬಿಡ್ತಾಳ. ಯಾರ ಹೇಳೋರ ಇಲ್ಲಾ ಕೇಳೋರ ಇಲ್ಲಾ. ಅದರಾಗ ಆ ಸುಡಗಾಡ ಬಸ್ ಫ್ರೀ ಮಾಡಿದಾಗಿಂದಂತೂ ವಾರಕ್ಕ ಮೂರ ಸರತೆ ಏನರ ನೇವಾ ಮಾಡ್ಕೊಂಡ ಮಾರ್ಕೇಟ್ ಅಡ್ಡಾಡ್ತಾಳ, ಇನ್ನ ಮದ್ವಿ ಸೀಜನ್ ಬಂದರಂತು ಅಕಿನ್ನ ಹಿಡದವರ ಇಲ್ಲಾ’ ಅಂತ ನಮ್ಮವ್ವ ಒಂದ ಉಸಿರಾಗ ಒದರಿದ್ಲು.
ಹಂಗ ಖರೇ ಹೇಳ್ಬೇಕಂದರ ನನ್ನ ಹೆಂಡ್ತಿ ಒಂಥರಾ ಗಂಗಾವತಿ, ಪ್ರೀತಿ ಸಿಲ್ಕ್, S.T.ಭಂಡಾರಿ, ಜವಳಿಸಾಲ ಒಳಗ ಏನ ಅಂಗಡಿ ಅವ ಅಲಾ ಅವಕ್ಕೇಲ್ಲಾ ಇಕಿ brand ambassador ಆಗಬೇಕಿತ್ತ ಅಷ್ಟ ಗಿರಾಕಿ ಇಕಿ ಕರಕೊಂಡ ಹೋಗ್ತಾಳ. ಮುಂದ off season ಒಳಗ ತನಗ ಹೆಂತಾದ ಬೇಕ ಹಂತಾ ಸೀರಿ ತನಗ ತಿಳದಷ್ಟ ರೊಕ್ಕಾ ಕೊಟ್ಟ ತೊಗೊಂಡ ಬರ್ತಾಳ ಆ ಮಾತ ಬ್ಯಾರೆ. ಅವರು ಇಕಿ ವರ್ಷಾ ಮಿನಿಮಮ್ ಒಂದ ನಾಲ್ಕ ಮದ್ವಿ ಜವಳಿಗೆ ಬರ್ತಾಳಂತ ಭಾಳ ತಲಿಕೆಡಸಿಗೊಳ್ಳಂಗಿಲ್ಲಾ. ಒಮ್ಮೊಮ್ಮೆ ಛಲೋ ಪ್ಯಾಟರ್ನ್ ಸೀರಿ ಬಂದರ ಅವರ ಫೋನ್ ಮಾಡಿ ಇಕಿನ್ನ ಕರಿತಾರ..ಏನ್ಮಾಡ್ತೀರಿ? ಅಷ್ಟ ನಮ್ಮಕಿ ಮದ್ವಿ ಜವಳಿ ಎಕ್ಸಪರ್ಟ್ ಅನ್ನರಿ.
ಇನ್ನ ಇಕಿ ಜವಳಿ ಆರಸೋದನ್ನ ನೋಡಿ ಬಿಟ್ಟರ ಮುಗದ ಹೋತ. ಒಂದ ಮುಂಜಾನೆ ಮನ್ಯಾಗ ಉಪ್ಪಿಟ್ಟ ಕಟದ ಹೋಗಿ ಜವಳಿ ಆರಸಲಿಕ್ಕೆ ಕೂತ್ಲೂ ಅಂದರ ಮುಗಿತ. ಒಂದ ಲಗ್ನದ್ದ ದೇವರ ಸೀರಿ ಇಂದ ಹಿಡದ ಪ್ರಸ್ಥದ್ದ ( ಫಸ್ಟ್ ನೈಟ್) ಸೀರಿ ತನಕಾ ಎಲ್ಲಾ ಆರಿಸಿ ಆರಿಸಿ ಅವರಿಗೆ ಕೊಡಸಿಸಿ ವಾಪಸ ಬರ್ತಾಳ. ಇನ್ನ ಲಗ್ನಾ ಅಂದರ ಹತ್ತ ತರದ್ದ ಕಾರ್ಯಕ್ರಮ ಇದ್ದ ಇರ್ತಾವ ಹತ್ತ ತರದ್ದ ಸೀರಿ ಬೇಕಾಗ್ತಾವ. ಸೋದರಮಾವನ ಸೀರಿ, ಗಂಟಿನ್ಯಾಗಿನ ಸೀರಿ, ಬೀಗಿತ್ತಿ ಸೀರಿ, ಚೊಚ್ಚಲ ಗಂಡಸ ಮಗನ ನಿಯಮ ಬಿಡ್ಸೋ ಸೀರಿ, ರುಕ್ಕೋತದ್ದ ಸೀರಿ, ಕಿರಗಿ ಸೀರಿ, ತಾಯಿ ಹೊಟ್ಟಿ ತಣ್ಣಗ ಮಾಡಿದ್ದ ಸೀರಿ, ಸುರಗೀ ಸೀರಿ, ಮುಹೂರ್ತದ ಸೀರಿ, ದೇವರೂಟದ ಸೀರಿ (ನೌವಾರಿ), ಕಳದುಡಲಿಕ್ಕೆ ಒಂದ ಸ್ಪೇರ್ ಸೀರಿ, ಮನಿ ತುಂಬಿಸ್ಕೊಂಡಿದ್ದ ಸೀರಿ, ಬೀಗರೂಟದ ಸೀರಿ, ಹಿತ್ತಲಗೊರ್ಜಿ ಮುತ್ತೈದಿ ಸೀರಿ, ಅಜ್ಜಿ ಇದ್ದರ ಅಜ್ಜಿ ಸೀರಿ, ಸಿಂಧೂಪದ ಸೀರಿ, ವಾಗನೀಷ್ಚೆದ ಸೀರಿ ಅಯ್ಯಯ್ಯ…ಒಂದ ಎರೆಡ. ನಂಗ ಖರೇ ಹೇಳ್ತೇನಿ ಇಷ್ಟ ನಮೂನಿ ಸೀರಿ ಇರ್ತಾವಂತ ನನ್ನ ಲಗ್ನಾ ಆಗೋ ತನಕಾ ನನಗ ಗೊತ್ತ ಇರಲಿಲ್ಲಾ.
ನಾ ಒಂದ ಸರತೆ ನಮ್ಮಕಿಗೆ ಇಷ್ಟೇಲ್ಲಾ ಸೀರಿ o.k ಆದರ ಪ್ರಸ್ಥಕ್ಕೂ ಸೀರಿ ಯಾಕ, ಪ್ರಸ್ಥದಾಗ ಸೀರೀದ ಏನ ಕೆಲಸಾ ಅಂತ ಕೇಳಿ
’ನಿಮಗ ನಿಯಮ , ಪದ್ಧತಿ ಒಂದೂ ತಿಳಿಯಂಗಿಲ್ಲಾ…ಪ್ರಸ್ಥ ಅಂದರ ಬರೇ ತಲ್ಯಾಗ ಒಂದ ಇರ್ತದ…ಯಾಕ ನಮ್ಮ ಲಗ್ನ ಆದಮ್ಯಾಲೆ ನಾ ಪ್ರಸ್ಥದ್ದ ದಿವಸ ಸೀರಿ ಉಟಗೊಂಡ ಬಂದಿದ್ದ ನೆನಪ ಇಲ್ಲೇನ’ ಅಂತ ಫ್ಲ್ಯಾಶ್ ಬ್ಯಾಕಿಗೆ ಹೋದ್ಲ. ಅಲ್ಲಾ, ಪ್ರಸ್ಥದ್ದ ದಿವಸ ಹೆಂಡ್ತಿ ಉಟ್ಟಿದ್ದ ಸೀರಿ ಯಾರಿಗೆ ನೆನಪ ಇರ್ತದ ನೀವ ಹೇಳ್ರಿ..
ಇನ್ನೊಂದ ಮಜಾ ಅಂದರ ಆ ಸೀರಿ ಮಾರೋರಿಗೆ ಮತ್ತ ಸೀರಿ ಖರೀದಿ ಮಾಡ್ಕಿಕ್ಕೆ ಬಂದವರಿಗೆ ಸಹಿತ ಇಷ್ಟ ನಮೂನಿ ಸೀರಿ ಇರ್ತಾವ ಅಂತ ಗೊತ್ತ ಇರಂಗಿಲ್ಲಾ. ಇಕಿ ಹಿಂಗ ಸೀರಿ ಹೆಸರ ಹೇಳೋದ ನೋಡಿ ಏನ ನಾಲೇಜ್ ಅದ ಇಕಿದ ಅಂತ ಇಕಿನ್ನ ಕರಕೊಂಡ ಹೋಗಿದ್ದ ಸಾರ್ಥಕ ಆತ ಅಂತ ಅವರು ಖುಶ್ ಆಗ್ತಾರ. ಅಲ್ಲಾ ನಮ್ಮಕಿದ ಏನ ಗಂಟ ಹೋಗೊದ ತೊಗೊಳೊರ ಅವರ, ರೊಕ್ಕಾ ಕೊಡೊರ ಅವರ. ಹಂಗ ಜವಳಿ ಆರಸಲಿಕ್ಕೆ ಬಂದೋಕಿಗೆ ಒಂದ ಸೀರಿ ಅಂತ ಲಾಸ್ಟಿಗೆ ಅವರ ತಮ್ಮ ರೊಕ್ಕದಾಗ ಒಮ್ಮೋಮ್ಮೆ ಇಕಿಗೂ ಒಂದ ಸೀರಿ ಕೊಡಸಿರ್ತಾರ ಆ ಮಾತ ಬ್ಯಾರೆ.
ಇನ್ನ ಪಾಪ ಆ ಅಂಗಡಿಯವಂಗ ಇಷ್ಟ ನಮೂನಿ ಸೀರಿ ಹೆಸರ ಕೇಳಿ ಗಾಬರಿ ಆದರೂ ಅವರ ತಮಗ ಹಂತಾ ಸೀರಿ ಗೊತ್ತ ಇಲ್ಲಾ ಅನ್ನಂಗಿಲ್ಲಾ. ಡೈರೆಕ್ಟ್
’ಅಕ್ಕಾ…ಸಿಂಧೂಪದ ಸೀರಿ ಯಾ ರೇಂಜನಾಗ ತಗಿಲೀ’ ಅಂತ ಕೇಳ್ತಾನ ,ಮ್ಯಾಲೆ ಕಲರ್ ಕೇಳ್ತಾನ. ಇಕಿ ರೇಂಜ್ – ಕಲರ್ ಕೇಳಿದ ಮ್ಯಾಲೆ ಆ ರೇಂಜ್ ಅಂದರ ಆ ರೇಟಿಂದ, ಕಲರಿಂದ ತಗದ ತೊರಿಸಿ…ಹಾಂ ಇದ ಸಿಂಧೂಪದ ಸೀರಿ ಅಂತ ಹೇಳಿ ಕೊಡ್ತಾನ ಇಷ್ಟ. ಅಲ್ಲಾ ಹಂಗ ಸೀರಿ ಮ್ಯಾಲೆ ಇದ ಸಿಂಧೂಪಕ್ಕ, ಇದ ಕಳಸಗಿತ್ತಿಗೆ ಅಂತೇನ ಬರದಿರಂಗಿಲ್ಲಲಾ.
ಹಿಂಗ ಒಂದ ..ಎರೆಡ ಈ ಸೀರಿ ಆರ್ಭಾಟ. ಇನ್ನ ಪ್ರತಿ ಒಂದ ಸೀರಿಗೂ ನಮ್ಮಕಿ ಹತ್ತ ಸೀರಿ ತಗಸೋಕಿ. ಆ ಖರೀದಿಗೆ ಬಂದೋರಿಗೆ ಸೀರಿ ಪಸಂದ ಆದರೂ ’ ನೀವ ಸುಮ್ಮನಿರ್ರಿ….ಇದನ್ನ ಸೈಡಿಗೆ ಇಟ್ಟ…ನೀ ಇನ್ನೊಂದ ಎರೆಡ ತೋರಸಪಾ’ ಅಂತ ನಿಂತ ಬಿಡೋಕಿ. ಆ ಸೀರಿ ತೋರಸೊವಂಗ ಬ್ಯಾಸರ ಬರೋದ ಇಷ್ಟ ಇಲ್ಲಾ ಇಕಿನ್ನ ಜವಳಿ ಖರೀದಿ ಮಾಡ್ಕಿಕ್ಕೆ ಕರಕೊಂಡ ಹೋದೊರಿಗೆ ಸಹಿತ ಬ್ಯಾಸರ ಬರೋ ಅಷ್ಟ ಸೀರಿ ಆರಸೋಕಿ. ಹಿಂಗ ಒಂದೊಂದ ಸೀರಿ ಆರಿಸ್ಗೋತ ಅವಕ್ಕೇಲ್ಲಾ ಬಾರ್ಗೇನ್ ಮಾಡ್ಕೋತ ಇಕಿ ಜವಳಿ ಮುಗಸೋದರಾಗ ಸಂಜಿ ಆಗಿರ್ತದ. ಮಧ್ಯಾಹ್ನ ಊಟ ಅಲ್ಲೆ, ಮ್ಯಾಲೆ ತಾಸ-ತಾಸಿಗೊಮ್ಮೆ ಅಂದರ ಇಕಿ ಒಂದ ಸೀರಿ ಫೈನಲ್ ಮಾಡಿದಾಗೋಮ್ಮೆ ಆ ಅಂಗಡಿಯವರ ಚಹಾ ಅಂತೂ ಕೊಟ್ಟ ಕೊಟ್ಟಿರ್ತಾರ.
ಅಂತು ಇಂತು ಮೂರ ಸಂಜಿ ಆದಮ್ಯಾಲೆ ಮತ್ತೊಮ್ಮೆ ಸಂಜಿ ಚಹಾ ಜವಳಿ ಅಂಗಡ್ಯಾಗ ಕುಡದ ಆ ಜವಳಿ ತೊಗೊಳಿಕ್ಕೆ ಬಂದೋರಿಗೆ ಬಸ್ಸ್ ಹತ್ತಿಸಿಸಿ ತಾ ಬಸ್ಸ್ ಹತ್ತಿ ವಾಪಸ ಬರ್ತಾಳ. ಇಕಿಗೆ ಏನ ಜವಳಿ ಕೊಡಸಿದ್ದಕ್ಕ ಯಾ ಅಂಗಡಿಯವರು ಕಮಿಶನ್ ಕೊಡಂಗಿಲ್ಲಾ ಮ್ಯಾಲೆ ಜವಳಿ ತೊಗೊಂಡವರೇನ ಇಕಿ ಕಡೆ ಜಂಪರ್ ಹೊಲಿಲಿಕ್ಕೂ ಕೊಡಂಗಿಲ್ಲಾ, ಆದರೂ ಇಕಿ ಹಿಂಗ ಜವಳಿ ಕೊಡಸೋ ಹಿರೇತನ ಮಾಡೋದ ಬಿಡಂಗಿಲ್ಲಾ.
ಹಂಗ ಒಂದ ಕಾಲದಾಗ ನಾನೂ ನಮ್ಮ ದೋಸ್ತರದ ಮದ್ವಿ ಅರಬಿ ಖರೀದಿ ಮಾಡ್ಲಿಕ್ಕೆ ಹೋಗ್ತಿದ್ದೆ. ಅದು ನನ್ನ ನೇತೃತ್ವದಾಗ, ಹುಬ್ಬಳ್ಳ್ಯಾಗ ಅಲ್ಲಾ, ಸೀದಾ ಬೆಂಗಳೂರಾಗ. ಆವಾಗ ಹುಬ್ಬಳ್ಳ್ಯಾಗ ಇನ್ನೂ ಮಾಲ್-ಗೀಲ್ ಬಂದಿದ್ದಿಲ್ಲಾ, ಬ್ರ್ಯಾಂಡೆಡ್ ಅಂಗಡಿ ಇದ್ದಿದ್ದಿಲ್ಲಾ. ಇನ್ನ ನನ್ನ ಕರಕೊಂಡ ಹೋದರಂತೂ ಮುಗದ ಹೋತ ಗಾಡಿ ಖರ್ಚಿನಿಂದ ಹಿಡದ ಬೆಂಗಳೂರ ಪಬ್ ತನಕ ಎಲ್ಲಾ ದೋಸ್ತರದ. ಮ್ಯಾಲೆ ಇನ್ನೊಂದ ಮಜಾ ಅಂದರ ಆವಾಗ ನನ್ನ ಕಡೆ ಇಷ್ಟ ಕ್ರೆಡಿಟ್ ಕಾರ್ಡ್ ಇತ್ತ, ನಾ ಅದನ್ನ ದೋಸ್ತರ ಸಂಬಂಧ ಯೂಜ್ ಮಾಡಿ ರೊಕ್ಕಾ ಮುಂದಿನ ತಿಂಗಳ ಕೊಡ್ಲೆ ಅಂತ ಸಿಕ್ಕಾ ಪಟ್ಟೆ ಖರ್ಚ ಮಾಡಸ್ತಿದ್ದೆ ಅನ್ನರಿ. ಅಲ್ಲಾ ಆಗಿನ ಕಾಲನ ಹಂಗ ಇತ್ತ. ದೋಸ್ತರ ಸಂಬಂಧ ಏನ ಮಾಡ್ತಿದ್ದಿಲ್ಲಾ ಅಂತೀರಿ. ಬಾರದಾನ ಗಲ್ಲಿ ಒಳಗಿನ ಪಟ್ಟಿ-ಪಟ್ಟಿ ಅಂಡರವೇರ್ ಹಾಕೊಳೊವಂಗ ಸಹಿತ ನಾ ಜಾಕಿ ಅಂಡರವೇರ್ ಕೊಡಸ್ತಿದ್ದೆ, ಹೆಗಲ ಮ್ಯಾಲೆ ಟಾವೇಲ್ ಹಾಕ್ಕೊಂಡ ಓಡ್ಯಾಡೊವಂಗ ಝೋಡೈಕ್ ಹ್ಯಾಂಕಿ ಕೊಡಸ್ತಿದ್ದೆ, ಲೀ ಸಾಕ್ಸ್, ವುಡ್ ಲ್ಯಾಂಡ್ ಶೂಸ್…ಒಂದ ಎರೆಡ. ಆದರ ನಾ ಏನ ಮಾಡಿದರು ದೋಸ್ತರ ಸಂಬಂಧ ಮಾಡ್ತಿದ್ದೆ, ನಮ್ಮಕಿ ಗತೆ ಸಂಬಂಧ ಇಲ್ಲದವರ ಸಂಬಂಧ ಅಲ್ಲಾ. ಆವಾಗ ನಾವ ಇನ್ನೂ ಬ್ಯಾಚೆಲರ್ ಬ್ಯಾರೆ ಇದ್ದವಿ, ಅದರಾಗ ಬೆಂಗಳೂರಾಗಿನ ಮಾಲ್ ಒಳಗ ಅಡ್ಡಾಡೋದ, ಅಲ್ಲಿ ಶಾರ್ಟ್ಸ್, ಟೀ-ಶರ್ಟ್ ಹಾಕ್ಕೊಂಡ ಅಡ್ಡಾಡೋ ಹುಡಗ್ಯಾರನ ನೋಡೋದ ಅಂದರ ನಮ್ಮಂತಾ ಪರಕಾರ ಪೋಲಕಾ ಹಾಕ್ಕೊಂಡ ಹುಡಗ್ಯಾರ ಜೊತಿ ಕಲ್ತವರಿಗೆ ಕಣ್ಣಿಗೆ ಹಬ್ಬನ ಹಬ್ಬ.
ಹೋಗ್ಲಿ ಬಿಡ್ರಿ ಹಳೇವ ಎಲ್ಲಾ ನೆನಸಿಗೊಂಡ ಬಿಟ್ಟರ ರಾತ್ರಿ ನಿದ್ದಿ ಹತ್ತಂಗಿಲ್ಲಾ. ನೋಡ್ರಿ ಹಂಗ ಮದ್ವಿ ಸೀಜನ್ ಬಂತ, ಹಂಗ ಹುಬ್ಬಳ್ಳಿ ಕಡೆ ಜವಳಿಗೆ ಬಂದರ ನನ್ನ ಹೆಂಡ್ತಿನ್ನ ಕರಿರಿ ಮತ್ತ…ಅಕಿ ಏನ ಪಾಪ ಕಮೀಶನ್ ತೊಗೊಳೊಂಗಿಲ್ಲಾ ಏನಿಲ್ಲಾ. ಹಂಗ ರೊಕ್ಕ ಕಡ್ಮಿ ಬಿದ್ದರ ಅಕಿದೂ ಕ್ರೇಡಿಟ್ ಕಾರ್ಡ್ ಅದ ನೀವ ಏನ ಚಿಂತಿ ಮಾಡಬ್ಯಾಡ್ರಿ.