ಒಂದ ೧೫ ವರ್ಷದ ಹಿಂದಿನ ಮಾತು, ನಮ್ಮ ದೊಸ್ತ ಅನಂತ ಸುಬ್ಬರಾವ ( ಅನಂತು) ಅವರ ಅಪ್ಪಾ ಅಂದರ ಸುಬ್ಬರಾವ ಭಟ್ಟರು ತಮ್ಮ ಅನಂತೂಗ ಬಿ.ಎಸ್.ಸಿ ಮಾಡಿದ ಮ್ಯಾಲೆ ಮೆಡಿಕಲ್ ರೆಪ್ ಕೆಲಸ ಸಿಕ್ಕಾಗ ತಮ್ಮ ಹೋಟೆಲಗೆ ಬಂದ ಅವರ ಗೆಳೆಯಾ ಜೋಶಿಯವರ ಮುಂದ
“ಇರೋಂವಾ ಒಬ್ಬ ಮಗಾ, ಅವನೂ ಮೆಡಿಕಲ್ ರೆಪ್ ಆಗ್ಯಾನ” ಅಂತ ಹೆಳ್ತಿದ್ರು.
ಅವರ ಮಾತಿನಾಗ ಮಗಾ ‘ಮೆಡಿಕಲ್ ರೆಪ್’ ಆಗಿದ್ದಕ್ಕ ಭಾಳ ಬ್ಯಾಸರ ಇತ್ತು. ಪಾಪ ! ಮಗಾ ಏನೇನೋ ಆಗ್ತಾನ ಅಂತ ಕನಸ ಕಂಡಿದ್ರೇನೋ, ಇಂವಾ ಮೆಡಿಕಲ್ ರೆಪ್ ಆಗಿ ಅವರ ಎಸರನ ಚಹಾಕ್ಕ ಫ್ರಿಜನಾಗಿನ ಹಾಲ ಹಾಕಿದ್ದಾ.
“ಭಟ್ಟರ, ಭಾಳ ಬ್ಯಾಜಾರ ಆಗಬ್ಯಾಡ್ರಿ, ಒಂದ ನೌಕರಿ ಅಂತ ಹತ್ಯಾನಲಾ ಅಷ್ಟ ಸಾಕ, ಸಮಾಧಾನ ಮಾಡ್ಕೋಳ್ರಿ” ಅಂತ ಜೋಶಿಯವರು ಸಮಾಧಾನ ಮಾಡಿದ್ರು.
” ನಮ್ಮ ಮಗಾ ನೋಡ್ರಿ,ಇಂಜೀನಿಯರ ಓದ್ಲಿಕತ್ತಾನ . ಇನ್ನೂ ಕಲಿಯೋದ ಮುಗಿಲಿಕ್ಕೆ ಎರಡ ವರ್ಷ ಅದ. ದುಡದದ್ದ ಎಲ್ಲಾ ಅವಂಗ ಇಡಲಿಕತ್ತೇವಿ. ಇನ್ನ ಅಂವಾ ದುಡದ ಹಾಕೋ ತನಕ ಇರತೇವೋ ಇಲ್ಲೋ ಆ ದೇವರಿಗೆ ಗೊತ್ತು”ಅಂತ ಜೋಶಿಯವರು ತಮ್ಮ ಗೋಳು ತೊಡ್ಕೋಂಡಿದ್ದರು. ಮಗಗ ಕಲಸಲಿಕ್ಕೆ ತಾವು ವಿ.ಆರ್.ಎಸ್. ತಗೊಂಡು ಅದ ದುಡ್ಡಲೇ ಇಲ್ಲೆ ಹುಬ್ಬಳ್ಳಿ ಬಿ.ವಿ.ಬಿ. ಕಾಲೇಜನಾಗ ಕಂಪ್ಯೂಟರ ಇಂಜೀನಿಯರ ಸೀಟ ಖರಿದಿ ಮಾಡಿದ್ದರು. ಅವರ ಸಂಕಟ ಅವರಿಗೆ,ಭಟ್ಟರ ಸಂಕಟ ಭಟ್ಟರಿಗೆ.
ಭಟ್ಟರದು ಹಳೇಹುಬ್ಬಳ್ಳಿ ಅಕ್ಕಿಪೇಟ್ಯಾಗ ಎನಿಲ್ಲಾ ಅಂದ್ರು ಒಂದ ಐವತ್ತ ವರ್ಷದ ಹಳೇ ಚಹಾದ ಅಂಗಡಿ. ಅದರಾಗ ಒಂದ ಮುಂಜಾನಿಯಿಂದ ಹಿಡದ ರಾತ್ರಿ ಮಟಾ ಗಂಡಾ-ಹೆಂಡತಿ ದುಡದ ಇರೋ ಒಬ್ಬ ಗಂಡಸ ಮಗನ್ನ ಬಿ.ಎಸ್.ಸಿ ಓದಿಸಿದ್ರು. ಈ ಮಗಗ ಬಿ.ಎಸ್.ಸಿ ನ ಐ.ಎ.ಎಸ್ ಮಾಡದಂಗ ಆಗಿತ್ತು.ಮೂರು ವರ್ಷದ ಬಿ.ಎಸ್.ಸಿ ನಾಲ್ಕುವರಿ ವರ್ಷದಾಗ ‘ಎಪ್ರಿಲ-ಅಕ್ಟೋಬರ್-ಎಪ್ರಿಲ್’ ಅಂತ ತಿಪ್ಪರಲಾಗಾ ಹಾಕಿ ಮುಗಿಸಿದ್ದಾ. ಇಷ್ಟ ಕಷ್ಟ ಪಟ್ಟ ಮ್ಯಾಲೆ ಸಿಕ್ಕಿದ್ದ ದೊಡ್ಡ ನೌಕರಿ ಅಂತ ಮೆಡಿಕಲ್ ರೆಪ್ ಆಗಿದ್ದ. ಭಟ್ಟರಿಗೆ ಅವರ ಮಗಾ ತಮ್ಮ ಹೋಟೆಲ್ ನಾಗ ಮಾಣಿ ಆಗಿ ನಾಲ್ಕ ಟೇಬಲ ಒರಿಸಿದ್ದರೂ ಪರವಾಗಿದ್ದಿದ್ದಿಲ್ಲಾ ಆದರ ಗುಳಗಿ ಮಾರೋ ನೌಕರಿ ಬ್ಯಾಡಾಗಿತ್ತು. ಅವರ ತಲ್ಯಾಗ ಗುಳಗಿ ಮಾರೋದು ಅಂದರ ಓಣ್ಯಾಗ ಶೇಂಗಾ-ಕಡ್ಲಿ ಮಾರದಂಗ ಅಂತ ಇತ್ತು. ಅದರಾಗ ಅವರ ಗೆಳ್ಯಾ ಜೋಶಿಯವರ ಮಗಾ ಬ್ಯಾರೆ ಇಂಜೀನಿಯರ ಒದ್ಲಿಕತ್ತಿದ್ದಾ, ಅಂವಾ ಇವತ್ತಿಲ್ಲಾ ನಾಳೆ ಇಂಜಿನಿಯರ ಆಗೋಂವಾ. ಇವರ ಮಗಾ ನೋಡಿದ್ರ ಗುಳಿಗೆ ಮಾರೋ ಕೆಲಸಕ್ಕ ಸೇರಿದ್ದಾ. ಆದರ ಅನಂತೂಗ ಹೋಟೆಲ್ ನಾಗ ಇರೋ ನಾಲ್ಕ ಟೇಬಲ್ ಸುತ್ತ ಅಡ್ಡಾಡಿ-ಅಡ್ಡಾಡಿ ಸಾಕಾಗಿ ಬಿಟ್ಟಿತ್ತು. ಮೆಡಿಕಲ್ ರೆಪ್ ಆದರ ಒಂದ ನಾಲ್ಕ ಊರಾಗ, ಬೂಟೂ, ಸಾಕ್ಸು, ಟೈ ಹಾಕ್ಕೊಂಡ ಟಿಪ್-ಟಾಪ ಆಗಿ ಬೈಕ ತಗೊಂಡ ಪರ್ಫ್ಯೂಮ ಹೊಡ್ಕೊಂಡ ತಿರಗಬಹುದು ಅಂತ ಮೆಡಿಕಲ್ ರೆಪ್ ಕೆಲಸಕ್ಕ ಹೂಂ ಅಂದಿದ್ದಾ.
ಆ ಟೈಮ ಹಂಗ ಇತ್ತು. ಆವಾಗ ಇನ್ನೂ ಸಾಫ್ಟವೇರ್ ಇಂಜಿನಿಯರದ ಹಾವಳಿ ಶುರು ಆಗಿದ್ದಿಲ್ಲಾ. ಸಿವಿಲ್ ಇಂಜಿನಿಯರ ಆಗೋದ ಭಾಳ ದೊಡ್ಡದು ಅಂತ ತಿಳ್ಕೋಂಡಿದ್ವಿ. ಇನ್ನ ನಾರ್ಮಲ ಸೈನ್ಸ ಕಲತವರಿಗೆ ಭಾಳ ಸರಳ ಕೆಲಸ ಸಿಗೋದು ಅಂದ್ರ ಈ ‘ಮೆಡಿಕಲ್ ರೆಪ್’ಒಂದ. ಸ್ವಲ್ಪ ಕಮ – ಕಮ ಅಂತ ಇಂಗ್ಲಿಷ್ ಮಾತಡಲಿಕ್ಕ ಬಂದರ ಸಾಕು, ನಿಮಗ ಮೆಡಿಕಲ್ ರೆಪ್ ನೌಕರಿ ಸಿಕ್ಕ ಬಿಡ್ತಿತ್ತ. ಹಿಂಗಾಗಿ ನಮ್ಮ ಸರ್ಕಲನಾಗ ಭಾಳ ಮಂದಿ ಮೆಡಿಕಲ್ ರೆಪ್ ಆದರು. ಇನ್ನೂ ಮೆಡಿಕಲ್ ರೆಪ್ ಆಗಿ ಉಳದವರು ಇದ್ದಾರ. ನಾ ಅವನಕಿಂತ ಛಲೋ ಇಂಗ್ಲಿಷ್ನಾಗ ಕಮ – ಕಮ ಅಂತಿದ್ದೆ ಆದರ ನನ್ನ ದೈಹಿಕ ಸ್ಥಿತಿ ನೋಡಿ ‘ಸನ್’ ಫಾರ್ಮಾ ಕಂಪನಿಯವರು “ಅಲ್ಲೋ ತಮ್ಮಾ ಏನಿಲ್ಲದ ನಿನ್ನ ಬೆನ್ನ ಮುಂದ ಬಗ್ಗೆದ , ಇನ್ನೇನರ ಈ ಮೆಡಿಕಲ್ ರೆಪ್ ಬ್ಯಾಗ್ ಹಿಡಕೊಂಡ ತಿರಗಲಿಕ್ಕ ಹತ್ತಿದರ ನೆಲಕ್ಕ ಹತ್ತಿ ಬಿಡ್ತದ, ಪುಟ್ ಆನ್ ಸಮ್ ವೇಟ ದೆನ್ ಕಮ್ “ಅಂದ್ರು. ಆವಾಗ ನಂದ ತೂಕಾ ೩೮ ಕೆ.ಜೆ. ಅದ ಲಾಷ್ಟ ಮುಂದ ಮೆಡಿಕಲ್ ರೆಪ್ ಕೆಲಸದ ಬಗ್ಗೆ ತಲಿಕೆಡಿಸಿಕೊಳ್ಳಲಿಲ್ಲ, ಸುಮ್ಮನ ಮೂಗ ಮುಚಗೊಂಡ ಒಂದ ಫಿನೈಲ್ ಫ್ಯಾಕ್ಟರಿ ಒಳಗ ಕೆಮಿಸ್ಟ ಅಂತ ಕೆಲಸಕ್ಕ ಹೊಂಟೆ. ಹಂಗ ನೋಡಿದ್ರ , ಈ ಅನಂತು ಬಿ.ಎಸ್.ಸಿ ಒಳಗ ಸ್ಟ್ಯಾಟ್ಸ ಮತ್ತ ಮಾಥ್ಸ್ ತಗೊಂಡಾಂವ. ಇವಂಗ ರಸಾಯನ ಶಾಸ್ತ್ರ ಮತ್ತ ಜೀವಶಾಸ್ತ್ರದ ಗಂಧಗಾಳಿನೂ ಇದ್ದಿದ್ದಿಲ್ಲಾ. ಅವಂದು ಛಲೋ ಇದ್ದದ್ದು ಫಿಜಿಕ್ಸು ಮತ್ತ ಫಿಜಿಕ್ಕು. ಅವನ ಹಂತಾವ ರೆಪ್ ಹೆಂಗ ಆದಾ ಅಂತ ನಾ ಭಾಳ ವಿಚಾರ ಮಾಡಿದೆ. ಬಹುಶ: ಯಾರಿಗೆ ಮೆಡಿಕಲ್ ರೆಪ್ ಬ್ಯಾಗ್ ಎತ್ತಲಿಕ್ಕೆ ಆಗತದ ಮತ್ತ ನೋಡಲಿಕ್ಕೆ ದುಂಡ- ದುಂಡಗ ಇರತಾರ ಅವರನಿಷ್ಟ ತೊಗೊತಾರ ಅಂತ ನಾ ಸುಮ್ಮನಾದೆ. ಅಂವಾ ಕಲತದ್ದಕ್ಕೂ , ನೌಕರಿ ಸಿಕ್ಕಿದ್ದಕ್ಕೂ ಎನೂ ಸಂಬಂಧನ ಇದ್ದಿದ್ದಿಲ್ಲಾ.
ಅವತ್ತ ಮೆಡಿಕಲ್ ರೆಪ್ ಆದ ಅನಂತು ಮುಂದ ತಿರುಗಿ ನೊಡಲೇ ಇಲ್ಲಾ , ಕಂಪನಿಮ್ಯಾಲೆ ಕಂಪನಿ ಚೆಂಜ್ ಮಾಡ್ಕೋತ ಹೊಂಟಾ, ಹೊಕ್ಕಳ ಎಲ್ಲಿರತದ ಅಂತ ಗೊತ್ತಿಲ್ಲದಾಂವ, ಹೊಟ್ಯಾಗಿಂದ ಏಲ್ಲಾ ಪಾರ್ಟ್ಸ ತಿಳ್ಕೊಂಡಾ, ಥಾಲಿಕ್ ಆಸಿಡ್’ ಗೆ (Phthalic acid) ‘ಪಿಥಾಲಿಕ್ ಅಸಿಡ’ ಅಂತ ಓದಿದೋಂವಾ ಇವತ್ತ ‘ಅಂಟಾ – ಆಸಿಡ್’ ಬಗ್ಗೆ ಗಂಟೆ ಗಟ್ಟಲೆ ಡಾಕ್ಟರ್ ಮುಂದ ಭಾಷಣಾ ಮಾಡ್ಲಿಕತ್ತಾ. ಅವಂದ ತಿಳ್ಕೊಳ್ಳೊ ಶಕ್ತಿ ನಾ ತಿಳ್ಕೊಂಡದ್ದಕ್ಕಿಂತಾ ಭಾಳ ಛಲೋ ಇತ್ತು. ಇಂವಾ ಹಂಗ ಕಂಪನಿ ಚೆಂಜ್ ಮಾಡೋದ ನೋಡಿ ಜನಾ ಅಂವಂಗ ಕನ್ಯಾ ಕೊಡಲಿಕ್ಕ ಹೆದರತಿದ್ದರು. ಕಡಿಗೆ ದೂರದ ಗೋಣಿಕೊಪ್ಪದ (ಮಡಿಕೇರಿ ಹತ್ತರ)ಒಳಗ ನೂರ ಎಕರೆ ಕಾಫಿ ತೋಟಾ ಇರೋ ಹುಡಗಿನ ಅಕ್ಕಿ ಪೇಟ ಅನಂತಾ ಗಂಟ ಹಾಕ್ಕೊಂಡಾ, ‘ನಾ ಡಾಕ್ಟರ್ ಇದ್ದಂಗ, ಡಾಕ್ಟರಗೆ ಯಾ ಗುಳಿಗಿ ಬರಿಬೇಕು ಯಾವದು ಬಿಡಬೇಕು ಅಂತ ಹೇಳೋಂವನಾ ನಾ’ ಅಂತ ಬೀಗರ ಮನ್ಯಾಗ ಹೇಳಿದಾ. ಅವರ ಮನ್ಯಾಗ ಇವತ್ತಿಗೂ ನಿಮ್ಮ ಅಳಿಯ ಎನ ಮಾಡ್ತಾನ್ರಿ ಅಂತ ಕೇಳಿದ್ರ ‘ಡಾಕ್ಟರಗೆ ಗುಳಗಿ ಬರದ ಕೋಡತಾನ್ರಿ’ ಅಂತಾರ. ನೊಡ್ತ – ನೊಡ್ತ ಅನಂತು ಏರಿಯಾ ಸೇಲ್ಸ್ ಮ್ಯಾನೆಜರ್ ಆದ, ಬೈಕ್ ಹೋಗಿ ಕಾರ ಬಂತು. ಹುಬ್ಬಳ್ಳಿ ಬಿಟ್ಟ ಬೆಂಗಳೂರಿಗೆ ಹೋದಾ. ಕಂಪನಿ ಟಾರ್ಗೆಟ ಜೊತಿ ಹೆಂಡತಿ ಟಾರ್ಗೆಟ್ಟೂ ರೀಚ ಆದಾ. ಹಿಂತಾ ಹೆಕ್ಟಿಕ್ ಕರಿಯರ ಒಳಗೂ ಒಂದರ ಮ್ಯಾಲೆ ಒಂದ ಅಂತ ಎರಡ ಗಂಡಸ ಮಕ್ಕಳನ್ನ ಹಡದಾ.ಮನ್ಯಾಗ ಹೆಂಡ್ರು-ಮಕ್ಕಳ ಸಂಬಂಧ ಎಷ್ಟ ದುಡುದರು ಅಷ್ಟ ಅಂತ ಕಂಪನಿ ಸಂಬಂಧ ದುಡದ ಹೆಸರ ಗಳಿಸಿದಾ, ಮನಿ ಮಂದಿಗಿಂತಾ ಊರಾಗಿನ ಡಾಕ್ಟರಗೊಳನ್ನ ಭಾಳ ಹಚಗೂಂಡಾ, ದೊಡ್ಡ ದೊಡ್ಡ ಕಂಪನ್ಯಾಗ ಕರದ ಕೆಲಸ ಕೊಡ್ಲಿಕತ್ತರು. ಇವತ್ತ ಒಂದ ದೊಡ್ಡ ಕಂಪನ್ಯಾಗ ರಿಜನಲ್ ಮ್ಯಾನೇಜರ ಆಗ್ಯಾನ. ಈಡಿ ಕರ್ನಾಟಕ ತಿರಗತಾನ. ೧೫ ದಿವಸಕ್ಕೊಮ್ಮೆ ಹೆಂಡ್ತಿ ಮಕ್ಕಳ ಮಾರಿ ನೋಡ್ತಾನ, ಈಗ ತಿಂಗಳಿಗೊಮ್ಮೆ ಹುಬ್ಬಳ್ಳಿಗೂ ಬರತಾನ. ಅವನ ಅವ್ವಾ- ಅಪ್ಪನು ಬೆಂಗಳೂರಿಗೆ ಶಿಫ್ಟ ಆಗ್ಯಾರ, ಆದರೂ “ಇರೋಂವಾ ಒಬ್ಬ ಮಗಾ, ಅವನು ಮೆಡಿಕಲ್ ರೆಪ್ ಆಗ್ಯಾನ” ಅನ್ನೋ ಕೊರಗು ನಮ್ಮ ಸುಬ್ಬರಾವ್ ಭಟ್ಟರಿಗೆ ಇನ್ನೂ ಹೋಗಿಲ್ಲಾ. ಇನ್ನೇನ ತಮ್ಮ ಮಗಾ ವಾಪಸ ಹುಬ್ಬಳ್ಳಿಗೆ ಬಂದ ತಮ್ಮ ಹೊಟೇಲನಾಗ ಮಾಣಿ ಆಗಂಗಿಲ್ಲಾ ಅಂತ ಗ್ಯಾರಂಟೀ ಆದ ಮ್ಯಾಲೆ ತಮ್ಮ ಹೊಟೇಲನಾಗ ಇದ್ದ ನಾಲ್ಕ ಹಳೆ ಕುರ್ಚಿ- ಟೇಬಲ್ ಹಿರೇ ಅಳಿಯಾಗ ಬರದಕೊಟ್ಟ ರಾಮ-ರಾಮ ಅಂತ ಮಕ್ಕಳ ಮನಿ ಅಡ್ಡಾಡಕೋತ ಇದ್ದಾರ.
ಈಗ ಅನಂತು ಎಲ್ಲೇ ಹೋದರು ವಿಮಾನದಾಗ ಹೋಗುದು. ಹಗಲ ಹೊತ್ತಿನಾಗ ಕಿಂಗ ಫಿಶರ್ ನೋಡಲಾರದಾಂವ , ಈಗ ಹಾರಾಡೋದು ಕಿಂಗ ಫಿಶರನಾಗ. ಮನ್ನೆ ಸತ್ತೂರ ಡಾಕ್ಟರ್ ಮಗನ ಲಗ್ನಕ್ಕ ಹುಬ್ಬಳ್ಳಿಗೆ ಬಂದಾಗ ಫ್ಲೈಟನಾಗ ಬಂದಾ. ಊರಾಗ ಮನಿ ಇದ್ರು ಉಳಕೊಳ್ಳೋದು ಅನಂತ ರೆಸಿಡೆನ್ಸಿ ಲಾಡ್ಜ ಒಳಗ , ಯಾಕೋ ಅಂತ ಕೇಳಿದ್ರ, ” ಬಿಲ್ ಕಂಪನಿ ಕೊಡತದ” ಅಂತಾನ. ಟೈಮ ಸಿಕ್ಕರ ಹಳೇ ಮನಿಗೆ ಹೋಗಿ ಅಕ್ಕಾ-ಭಾವನ್ನ ಮಾತಾಡಿಸ್ಕೋಂಡ ಬರತಾನ. ರಾತ್ರಿ ಒಂದಿಬ್ಬರು ಹಳೇ ಗೆಳ್ಯಾರನ ಕೂಡಿಸಿಕೊಂಡ ಊಟಾ ಮಾಡಸ್ತಾನ. ಆ ಬಿಲ್ಲೂ ಕಂಪನಿಗೆ ಕ್ಲೇಮ ಮಾಡ್ತಾನ ಆ ಮಾತ ಬ್ಯಾರೆ. ಈಗಾಗಲೆ ಕಂಪನಿ ಖರ್ಚನಾಗ ಡಾಕ್ಟರಗೋಳ ಜೋತಿ ಒಂದ ನಾಲ್ಕೈದ ದೇಶಾ ಅಡ್ಡಾಡಿ ಬಂದಾನ. ಭೆಟ್ಟಿ ಆದಾಗ ಒಮ್ಮೆ ತನ್ನ ಕಿಂಗ ಫಿಶರ್ ಅನುಭವಾ ಹೇಳ್ತಾನ. ಇಂವಾ ನಮ್ಮ ದೇಶದ ಯಾವ ಪ್ಲೈಟನಾಗ ಹೆಂತಿಂತಾ ಹುಡಗ್ಯಾರ ಇರತಾರ ಅನ್ನೋದನ್ನ ಭಾಳ ಛಂದ ಹೇಳ್ತಾನ. ಕರ್ನಾಟಕದಾಗ ಎಲ್ಲೇಲ್ಲೆ ಪ್ಲೇನ್ ಅದ ಅಲ್ಲೇಲ್ಲಾ ಅಂವಾ ಈಗ ಪ್ಲೇನ್ ನಾಗ ಆಡ್ಡಾಡೋದು. ಮನ್ನೆ ಹುಬ್ಬಳ್ಳ್ಯಾಗ ವಿಮಾನ ಇಳದಕೊಳೇನ ಸೀದಾ ಎರಪೋರ್ಟನಾಗಿನ ಸಂಡಾಸಕ್ಕ ಹೋಗಿ ಬಂದಾ
” ಏನಪಾ , ನೀ ಸಂಡಾಸಕ್ಕೂ ಈಗ ವಿಮಾನನಾಗ ಹೋಗೊದು ಎನ ?” ಅಂದೆ
” ಏ, ಬೆಂಗಳೂರಾಗ ಮನಿ ಬಿಟ್ಟದ್ದ ನಸೀಕಲೆ ಐದ ಗಂಟೆಕ್ಕ, ಭಾಳ ಗಡಿ ಬಿಡಿ ಆತು. ಮುಂದ ಹೋದರಾತು ಅಂತ ಹಂಗ ಹತ್ತಿದ್ದೆ” ಅಂದಾ
” ಯಾಕ ವಿಮಾನದಾಗ ಇದ್ದಿದ್ದಿಲ್ಲೇನ್ ಸಂಡಾಸ ? ಹುಬ್ಬಳ್ಳಿ ಯಾಕ ಹೊಲಸ ಮಾಡ್ತಿ ?” ಅಂದೆ
” ಇತ್ತು. ಆದರ ಹುಬ್ಬಳ್ಳಿಗೆ ಬರೋದು ಎ.ಟಿ.ಆರ್ ಪ್ಲೇನ್, ಭಾಳ ಟರ್ಬುಲೆನ್ಸ ಇರತದ. ಹಂತಾದರಾಗ ನನಗ ಬರಂಗಿಲ್ಲಾ. ಎರ್ ಬಸ್ ಇತ್ತಂದರ ಆರಾಮಸೀರ ಹೋಗಬಹುದಿತ್ತು ” ಅಂದಾ.
“ಭಾಳ ಛಲೋ ಆತ. ಮೊದಲ ಪ್ಲೇನನಾಗ ಟರ್ಬುಲೆನ್ಸ ಅಂತಿ, ಇನ್ನ ನಿಂದೊಂದು ಟರ್ಬುಲೆನ್ಸ ಆಗಿದ್ದರ ಪ್ಲೇನ್ ಬಿಳ್ತಿತ್ತು” ಅಂದೆ
ನಾವು ಕೆ.ಎಸ್.ಅರ್.ಟಿ.ಸಿ ಮಂದಿ ,ನಮಗೇನ ಗೊತ್ತಾಗಬೇಕ ಎ.ಟಿ.ಆರ್ ವಿಮಾನ ಬಗ್ಗೆ ಹುಟ್ಟಾ ಸತ್ತಿಲ್ಲಾ- ಸುಡಗಾಡ ಕಂಡಿಲ್ಲಾ ಅಂದಂಗ , ನಮ್ಮ ಮನಿ ಹಿಂದ ರನ್ ವೆ ಅದ ಅನ್ನೋದ ಒಂದ ಬಿಟ್ಟರ ಬ್ಯಾರೆ ಏನ ಗೊತ್ತದ ಅದರ ಬಗ್ಗೆ ? ಅಂವಾ ಹೇಳಿದ್ದಕ್ಕೆಲ್ಲಾ ಹೂಂ ಅಂದ, ಅವನ ಜೋತಿ ಉಂಡ ತಿಂದ, ಅವರ ಕಂಪನಿಗೆ ಬಿಲ್ ಹಚ್ಚಿ ಹೋಗೊರು ನಾವು.
’ ಲೇ ದಮ್ಮ್ ಇದ್ದರ ನಿನ್ನ ಸ್ವಂತ ರೊಕ್ಕದಲೇ ವಿಮಾನದಾಗ ಅಡ್ಡಾಡಿ ನೋಡ’ ಅನ್ನೋವಿದ್ದೆ , ಹೋಗಲಿ ಬಿಡು ಮತ್ತ ಒಂದ ಊಟಾ ತಪ್ಪತದ ಅಂತ ಸುಮ್ಮನಿದ್ದೆ.
ಇದೇಲ್ಲಾ ಏನರ ಇರಲಿ , ಇವತ್ತು ನಮ್ಮ ಅನಂತೂ ಒಬ್ಬ ಮೆಡಿಕಲ್ ರೆಪ್ ಆಗಿ ಕೆಲಸಕ್ಕ ಸೇರಿ ಎಷ್ಟ ಮುಂದ ಬಂದನಲಾ ಅಂತ ಮನಸ್ಸಿಗೆ ಖುಷಿ ಅನಸ್ತದ. ಜೀವನದಾಗ ಭಾಳ ಛಲೋ ನೌಕರಿ ಅಂದ್ರ ಸಾಫ್ಟವೇರ್ ನೌಕರಿ ಒಂದ ಅಲ್ಲಾ, ಅಂತ ಹೇಳಲಿಕ್ಕ ಅನಂತು ಇವತ್ತ ಜೀವಂತ ಉದಾಹರಣೆ ಆಗ್ಯಾನ . ಇಂವಾ ಒಂದ ಸ್ವಲ್ಪ ಜಾಸ್ತಿನ ಕರಿಯರ ಒರಿಯೆಂಟೆಡ್ ಇರೋದರಿಂದ ಕುಟುಂಬಾ ಆವಾಗ-ಇವಾಗ ಕಿರಿ-ಕಿರಿ ಮಾಡ್ತಿರತದ. “ಒಂದ ಮೂರ-ನಾಲ್ಕು ಮಲ್ಟಿನ್ಯಾಶನಲ್ ಕಂಪನಿ ಸಂಭಾಳಸಬಹುದು ಆದರ ಒಂದ ಇಂಡಿಜನಸ್ ಹೆಂಡತಿ ಸಂಭಾಳಸೋದು ಭಾಳ ತ್ರಾಸು ” ಅಂತಿರ್ತಾನ . ಏನ ಮಾಡೋದು ‘ಒಂದ ಕಂಪನಿ ಬಿಟ್ಟರ ಇನ್ನೋಂದು ಛಲೋ ಕಂಪನಿ ಸಿಕ್ಕರ ಸಿಗತದ ,ಅದೂ ಕರದ ನೌಕರಿ ಕೋಡ್ತಾರ. ಹೆಂಡ್ತಿ ಬಿಟ್ಟರ! ಛಲೋದ ಸಿಕ್ಕತದಾ ? ಅದೂ ಕರದ ಕೋಡ್ತಾರ ?’ ಅಂತ ಸುಮ್ಮನಿದ್ದಾನ.
“ನಾ ಕಂಪನಿಗಿಷ್ಟ ರಿಜನಲ್ ಮ್ಯಾನೇಜರಪಾ ಮನಿಗೆ ಹೋದ ಮ್ಯಾಲೆ ನಾ ಮತ್ತ ‘ರೆಪ್’ಇದ್ದಂಗ. ನನ್ನ ಎರಡ ಮಕ್ಕಳ ಕಾಟ ನಮ್ಮ ನ್ಯಾಶನಲ್ ಮ್ಯಾನೆಜರಕಿಂತಾ ಜಾಸ್ತಿ ಅದ , ನನ್ನ ಹೆಂಡತಿ ಆ ಯಾರಡ ಮಕ್ಕಳ ಪ್ರೊಡಕ್ಟ-ಮ್ಯಾನೆಜರು , ಹಿಂಗಾಗಿ ‘ಪ್ರೊಡಕ್ಟ ಕಂಪ್ಲೆಂಟ್’ಮಾಡೋಹಂಗ ಇಲ್ಲಾ” ಅಂದಾ.
” ನಿಮ್ಮ ಅವ್ವಾ-ಅಪ್ಪಾಲೇ ಮತ್ತ “ಅಂದೆ,
” ಅಯ್ಯೋ ಪಾಪ ಅವರು ‘ಎಚ್.ಆರ್.ಡಿಪಾರ್ಟಮೆಂಟ’ ಇದ್ದಂಗ. ಬರೇ ಅಟೆಂಡೆನ್ಸ ಹಾಕಿ ಟಿ.ಎ/ಡಿ.ಎ ತಂಗೋಡ ಸುಮ್ಮನಿರ್ತಾರ “ಅಂದಾ.
ಅನ್ನಂಗ ಮೊನ್ನೆ ಒಂದ ವಾರದ ಹಿಂದ ಆ ಸುಬ್ಬರಾವ್ ಭಟ್ಟರ ಹಳೇ ಗೆಳೆಯಾ ಜೋಶಿಯವರಿಗೆ ಮೂರಸಂಜೀ ಹೊತ್ತನಾಗ ಒಮ್ಮಿಂದೊಮ್ಮೆಲೆ ಹೃದಯಾಘಾತ ಆತು. ಸಾಫ್ಟವೇರ್ ಮಗಾ ಟೊಕಿಯೋ ಒಳಗಾ ಇದ್ದಾ, ಪಾಪ ಇಲ್ಲೇ ಮುದಕಾ – ಮುದಕಿ ಇಬ್ಬರ ಇರತಿದ್ದರು. ಬಾಜು ಮನಿಯವರು ಎಲ್ಲೇ ನೂರಾ ಎಂಟ ಮಂದಿ ಸಂಬಂಧಿಕರನ್ನ ಹುಡುಕಿ ಫೋನ್ ಮಾಡೋದು ಅಂತ ಹೇಳಿ ೧೦೮ ಕ್ಕ ಫೋನ್ ಮಾಡಿ ದವಾಖಾನಿಗೆ ಸೇರಿಸಿದ್ರು. ಡಾಕ್ಟರು ಇವರಿಗೆ ಸಿವಿಯರ ಅಟ್ಟ್ಯಾಕ ಆಗೇದ, ಆದಷ್ಟ ಲಗೂನ ಬೈ ಪಾಸ್ ಮಾಡಬೇಕು ಅಂತ ಹೇಳಿದ್ರು. ಮಗಗ ವಿಷಯಾನರ ತಿಳಿಸೋಣಾ ಅಂತ ಫೋನ್ ಮಾಡಿದ್ರ ಅಂವಾ ಫೋನ್ ಎತ್ತಲಿಲ್ಲಾ, ಅಂವಾ ಅವತ್ತ ಕ್ಲೈಂಟ್ ಜೊತಿ ಮೀಟಿಂಗ್ ಒಳಗ ಬ್ಯೂಸಿ ಇದ್ದನಂತ. ಎರಡ ದಿವಸ ಬಿಟ್ಟ ನಮ್ಮ ಅನಂತೂನ ಎಸ್.ಡಿ.ಏಮ್ ಒಳಗ ಬರೇ ಫೋನ್ ಮ್ಯಾಲೇ ಡಾಕ್ಟರ ಜೊತಿ ಮಾತಾಡಿ ಆಪರೇಶನ್ ವ್ಯವಸ್ಥಾ ಮಾಡಿದಾ. ಪಾಪಾ ಜೋಶಿಯವರ ಮಗಾ ಮನ್ನೇರ ಸಮ್ಮರ್ ವೆಕೇಶನಗೆ ಹೆಂಡತಿ ಮಗನ್ನ ಕರಕೊಂಡ ಬಂದ ಮೂರ ದಿವಸ ಇದ್ದ ಹೋಗಿದ್ದಾ , ಮತ್ತ ಈಗ ರಜಾ ಸಿಗತದೋ ಇಲ್ಲೋ, ಅವರ ಕಂಪನ್ಯಾಗ ವರ್ಷಕ್ಕ ಎರಡ ಸಲಾ ರಜಾ ಕೊಡ್ತಾರಂತ ಹಿಂಗ ನಡಬರಕ ಅವರಪ್ಪ ಜಡ್ಡ ಬಿದ್ದರ ಅವನರ ಏನಮಾಡಬೇಕು. ಅಲ್ಲೇ ಓಣ್ಯಾಗಿನ ನಾಲ್ಕೈದ ಮಂದಿ ಸೇರಿ ಸಹಾಯ ಮಾಡಿದ್ರು .ಜೀವನ ಪರ್ಯಂತ ದುಡದ ಮಗನ ಓದಿಸಿ ಸಾಫ್ಟವೇರ್ ಇಂಜೀನಿಯರ ಮಾಡಿದ್ದ ಜೋಶಿಯವರಿಗೆ ಸತ್ತರ ಮಗಾ ನೀರ ಬಿಡಲಿಕ್ಕೂ ಬರೋ ಅಷ್ಟ ಹತ್ತರನು ಇದ್ದಿದ್ದಿಲ್ಲಾ. ಮಗಾ ಬಂದಿದ್ದು ಮುಂದ ಆಪರೇಶನ್ ಆಗಿ ೧೧ನೇ ದಿವಸ. ಒಂದ ಪೌಂಡ ಬ್ರೆಡ್ ತಗೊಂಡ ಬಂದು ‘ನಂಗ ರಜಾ ಇಲ್ಲಾ ಎಷ್ಟೋತ್ತಿದ್ರೂ ನಾನು ಎರಡ ದಿವಸದಾಗ ವಾಪಸ ಹೋಗಬೇಕು’ ಅಂತ ಹೋಗಿಬಿಟ್ಟಾ , ‘ನಿನ್ನ ಹೆಂಡತಿನ ಯಾಕ ಕರಕೊಂಡ ಬಂದಿಲ್ಲಾ’ ಅಂತ ಕೇಳಿದ್ರ ‘ ಸುಮ್ಮನ ಡಬಲ್ ಗಾಡಿ ಖರ್ಚು ಮೊನ್ನೆರ ಬಂದ ಹೋಗ್ಯಾಳಲಾ’ ಅಂದಾ. ಪಾಪ ಮುದಕಿ ಬಿಡಲಾರದ ಜೀವಾ, ಸಾಯಕೋತ ಒಬ್ಬಕೀನ ಗಂಡನ ಸೇವಾ ಮಾಡ್ಲಿಕತ್ತಾಳ.
ಸುಬ್ಬರಾವ ಭಟ್ಟರು ನಿನ್ನೆ ಜೋಶಿಯವರನ ಮಾತಡಿಸ್ಲಿಕ್ಕೆ ಬೆಂಗಳೂರಿಂದ ಬಂದಿದ್ರು. ಜೋಶಿಯವರು ಭಾಳ ತ್ರಾಸ ತಗೊಂಡು ಎರಡ ಮಾತ ಹೇಳಿದ್ರು.
” ಸುಬ್ಬಣ್ಣ ನಿನಗ ಇರೋಂವಾ ಒಬ್ಬ ಮಗಾ……….ಅಂವಾ ಮೆಡಿಕಲ್ ರೆಪ್ ಇದ್ದಾನ. ಗುಳಿಗೆ ಮಾರಿದ್ರು ಅಡ್ಡಿಯಿಲ್ಲಾ ಕೆಟ್ಟ ಘಳಿಗ್ಯಾಗ ಕೆಲಸಕ್ಕ ಬಂದಾ.ನನಗ ಇರೋಂವಾ ಒಬ್ಬ ಮಗಾ……..ಅಂವಾ ಫಾರೆನ್ನಾಗ ಇದ್ದಾನ. ಸಾಯೊಕಿಂತಾ ಮೊದಲ ತಿಳಿಸಿದ್ರ, ಸತ್ತ ೧೩ನೇ ದಿವಸದ ಸಿಹಿ ಊಟಕ್ಕ ಬರತಾನ”
ಸುಬ್ಬರಾವ ಭಟ್ಟರು ಎನ ಹೇಳಬೇಕು ತಿಳಿಲಾರದ ಸುಮ್ಮನ ಗೋಣ ಅಳಗ್ಯಾಡಿಸಿ ‘ತಮಗ ಇರೋಂವಾ ಒಬ್ಬ ಮಗಾ….ಅಂವಾ ಮೆಡಿಕಲ್ ರೆಪ್ ಇದ್ದಾನ’ ಅಂತ ಸಮಾಧಾನ ಪಟ್ಟು ಕೆ.ಎಸ್.ಅರ್.ಟಿ.ಸಿ ಕೆಂಪ ಬಸ್ ಹತ್ತಿ ವಾಪಸ ಬೆಂಗಳೂರಿಗೆ ಹೋದ್ರು.
Very nicely narrated in Hubli language
Bala chand bardiri sir namma Ananth sir gatte byare ayithi