ಮೊನ್ನೆ ಮಂಗಳವಾರ ಮುಂಜ ಮುಂಜಾನೆ ಎದ್ದೋಕಿನ ನನ್ನ ಹೆಂಡ್ತಿ
’ರ್ರಿ ..ಮಂಗಳ ಗ್ರಹಕ್ಕ ಹೋಗೊದ ಎಲ್ಲಿಗೆ ಬಂತ?’ ಅಂತ ಕೇಳಿದ್ಲು.
’ಲೇ..ಇವತ್ತ ಮಂಗಳವಾರ… ಗಣಪತಿ ಗುಡಿಗೆ ಹೋಗ್ತೇವಿ…ಮಂಗಳ ಗ್ರಹಕ್ಕ ಅಲ್ಲಾ…’ ಅಂತ ನಾ ಅಂದರ
’ಅಲ್ಲರಿ ಮಿಶನ್ ’ಮಾರ್ಸ ಒನ್’ (mars one) ಅಂತ 2023ಕ್ಕ ಮಂಗಳ ಗ್ರಹಕ್ಕ ಕರಕೊಂಡ ಹೋಗೊರ ಇದ್ದರಲಾ, ನಾನೂ ಅಪ್ಲೈ ಮಾಡಿದ್ದೆ, ಅಪ್ಲಿಕೇಶನ್ ರಿಜೆಕ್ಟ್ ಆಗಿತ್ತ, ಅದರದ ಎಲ್ಲಿಗೆ ಬಂತ ಕಥಿ’ ಅಂತ ಕೇಳಿದ್ಲು.
ಏನ ಮೆಮರಿ ಅಂತೇನಿ ಇಕಿದ, ಆ ಮಾತಿಗೆ ಹತ್ತ ವರ್ಷ ಆತ.
2012ರಾಗ ಪೇಪರನಾಗ ’ಒನ್ ವೇ ಟ್ರಿಪ್ ಟು ಮಾರ್ಸ 2023′ ಅಂತ ಓದಿ ತಾನೂ ಹೋಗ್ತೇನಿ ಅಂತ ಹಟಾ ಹಿಡಿದಿದ್ಲು. ನಾ ಅಕಿಗೆ
’ಇರೋಕಿ ಒಬ್ಬೊಕಿ ಹೆಂಡ್ತಿ ಇದ್ದಿ…ಮೊದ್ಲ ಭೂಮಿ ಮ್ಯಾಲೆ ದಿನದಿಂದ ದಿನಕ್ಕ ಕನ್ಯಾ ಕಳ್ಕೋಳಿಕತ್ತಾವ. ಹಂತಾದರಾಗ ನೀನೂ ಮಂಗಳಗ್ರಹಕ್ಕ ಹೋದರ ನನ್ನ ಗತಿ ಏನ?’ ಅಂತ ಎಷ್ಟ ಬಡ್ಕೊಂಡರು ಕೇಳಲಿಲ್ಲಾ.
ಹಂಗ ಮಂಗಳಗ್ರಹಕ್ಕ CBTಗೆ ಹೋಗಿ ಬಸ್ ಹತ್ತಿ ಟಿಕೇಟ್ ತೊಗೊಂಡ ಹೊಗೊ ಹಂಗ ಇದ್ದರ ಅಕಿ ನಂಗ ಹೇಳಲಾರದ ಹೋಗಿರ್ತಿದ್ಲು ಅದರ ಅದ ಆನ ಲೈನ್ ಇದ್ದಿದ್ದಕ್ಕ ನನಗ ಗಂಟ ಬಿದ್ದಿದ್ಲ ಅನ್ನರಿ.
ಅಲ್ಲಾ ನಾ ಆವಾಗ-ಇವಾಗ ಅಕಿಗೆ
’ನೀ ಭೂಮಿಗೆ ಭಾರ ಆಗಿ ನೋಡ’ ಅಂದಿದ್ದನ್ನ ಸಿರಿಯಸ್ ತೊಗೊಂಡಾಳ ಅಂತ ನಾ ಅಕಿಗೆ
’ಆತ ತೊಗೊ ಹಂಗರ ನೀ ಒಬ್ಬೊಕಿನ ಹೋಗಿ ಏನ ಮಾಡ್ತಿ, ನಾನು ಬರತೇನಿ, ದಂಪತ್ತ ಹೋಗೋಣ’ ಅಂತ ಅಂದರ
’ಅಯ್ಯ.. ವಿಮಾನ ಹತ್ತಿದರ ಒಮಿಟ್ಟಿಂಗ ಸೆನ್ಸೇಶನ್ ಅಂತ ಬೈಕಿ ಹೆಂಗಸರ ಗತೆ ವೈಕ-ವೈಕ್ ಮಾಡ್ರೀರಿ ಇನ್ನ ರಾಕೇಟನಾಗ ಮಂಗಳ ಗ್ರಹಕ್ಕ ಹೊಂಟರ ನಿಮ್ಮ ಡಿಲೇವರಿನ ಆಗ್ತದ. ನೀವೇನ ಬರೋದಬ್ಯಾಡಾ, ನಾ ಹೊಂಟಿದ್ದ ನಿಮ್ಮ ಸಂಸಾರದ ಕಾಟ ತಪ್ಪಿಸ್ಗೊಳ್ಳಿಕ್ಕೆ’ ಅಂತ ಅಂದ್ಲು.
ಹಂಗ ನಾ ಅಕಿ ಅಂದಿದ್ದೇನ ಸಿರಿಯಸ್ ತೊಗೊಳಿಲ್ಲಾ ಅನ್ನರಿ, ಅಮ್ಯಾಲೆ ಕುಂಡ್ಲಿ ನೋಡಿ ಎಷ್ಟನೇ ಗ್ರಹದಾಗ ಶನಿ, ಎಷ್ಟನೇ ಗ್ರಹದಾಗ ಮಂಗಳ, ಎಷ್ಟನೇ ಗ್ರಹದಾಗ ಗುರು- ಶುಕ್ರ ಅವ ಅಂತೇಲ್ಲಾ ನೋಡಿ ಕಟಗೊಂಡ ಹೆಂಡ್ತಿ ಅಷ್ಟ ಸರಳ ಒಂದ ಗ್ರಹ ಬಿಟ್ಟ ಮತ್ತೊಂದ ಗ್ರಹಕ್ಕ ಹೊಗೊ ಹಂಗ ಇದ್ದಿದ್ದರ ನಮ್ಮ ಹಣೇಬರಹ ಇಷ್ಟ್ಯಾಕ ಆಗಿರ್ತಿತ್ತ.
ಆದರೂ ಏನ ಇದ ’ಒನ್ ವೇ ಟ್ರಿಪ್ ಟು ಮಾರ್ಸ್’ ಅಂತ ನಾ ಡಿಟೇಲ್ಸ್ ನೋಡಿದರ ಗೊತ್ತಾತ ಒಬ್ಬರಿಗೆ ಐವತ್ತ ಲಕ್ಷ ಬೇಕಂತ. ಅದು ಒನ್ ವೇ ಟ್ರಿಪ್, ಹೋದರ ಅತ್ತಲಾಗ ಮತ್ತ.
ಅಲ್ಲಾ, ಐವತ್ತ ಲಕ್ಷ ಗಟ್ಟಲೇ ರೊಕ್ಕ ನನ್ನ ಕಡೆ ಇದ್ದರ ನನ್ನ ಹೆಂಡ್ತಿನರ ಯಾಕ ನನ್ನ ಬಿಟ್ಟ ಮಂಗಳ ಗ್ರಹಕ್ಕ ಹೋಗ್ತಿದ್ಲ? ಇಲ್ಲೇ ಭೂಮಿ ಮ್ಯಾಲೆ ನನ್ನ ಸುತ್ತಲು ಶನಿ ಗ್ರಹದಗತೆ ಸುತಗೋತ ಇರ್ತಿದ್ಲು. ಇನ್ನ ಇಷ್ಟ ರೊಕ್ಕಾ ಒಂದ ಟಿಕೇಟಗೆ ಅಂತ ಹೇಳಿದರ ಅಕಿ ಏನ
’ನಿಮ್ಮ ಕಿಡ್ನಿ ವತ್ತಿ ಇಟ್ಟಾದರು ಕಳಸರಿ’ ಅಂತ ಅನ್ನೋಕಿನ. ಆದರೂ ನಾ ಅಕಿ ಕಾಟಕ್ಕ ಆನಲೈನ್ ಅಪ್ಲೈ ಮಾಡೊ ಹಂಗ ಮಾಡಿದೆ ಮುಂದ ಅಕಸ್ಮಾತ ಸೆಲೆಕ್ಟ ಆದರ insufficient fund ಅಂದರಾತು ಅಂತ ಅನ್ಕೊಂಡಿದ್ದೆ ಆದರ ನನ್ನ ಪುಣ್ಯಾಕ್ಕ ಅಕಿ ಅಪ್ಲಿಕೇಶನ್ ರಿಜೆಕ್ಟ ಆತ, ನಮ್ಮಕಿ ಯಾಕ ರಿಜೆಕ್ಟ್ ಆತು ಅಂತ ಕೇಳಿದ್ಲು
’ಏ ನೀ ಫಾರ್ಮ್ ಒಳಗ ಪ್ಯೂರ್ ವೆಜಿಟೇರಿಯನ್ ಅಂತ ಬರದಿ ಅದಕ್ಕ ನಿನ್ನ ಫಾರ್ಮ್ ರಿಜೆಕ್ಟ್ ಆಗೇದ’ ಅಂದೆ
’ನಿಮಗ್ಯಾರ ಪ್ಯೂರ್ ವೆಜ್ ಅಂತ ಬರಿ ಅಂದಿದ್ದರು ಫಾರ್ಮ್ ಒಳಗ’ ಅಂತ ನನ್ನ ಮ್ಯಾಲೆ ಬಂದ್ಲು.
ಅಲ್ಲಾ ಹಂಗ ಗಂಡನ ಜೀವಾ ತಿನ್ನೋ ಹೆಂಡತಿಗೆ ಪ್ಯೂರ್ ವೆಜ್ ಅಂತ ಬರದಿದ್ದ ನಂದ ತಪ್ಪ ಬಿಡ್ರಿ. ಆದರೂ ಅಕಿಗೆ ವೇಜ್ ಕ್ಯಾಟಗರಿ ಒಳಗ ಹೋತ ಅಂತ ಕನ್ವಿನ್ಸ್ ಮಾಡಿ ಸಮಾಧಾನಕ್ಕ
’2025ಕ್ಕ ಶನಿ ಗ್ರಹಕ್ಕ ಕರಕೊಂಡ ಹೋಗೊರ ಇದ್ದಾರ ಆವಾಗ ಹೋಗಿಯಂತ, ಶನಿ ಗ್ರಹಕ್ಕ ಹೋಗಲಿಕ್ಕೆ ನಿಂಗ ಕನ್ಸಿಶನ್ ಕೊಟ್ಟರು ಕೊಡಬಹುದು’ ಅಂತ ಆ ಟಾಪಿಕ್ ಅಲ್ಲಿಗೆ ಮುಗಿಸಿದ್ದೆ.
ಇದ ಏನಿಲ್ಲಾ ಅಂದರು ಹತ್ತ ವರ್ಷದ ಹಿಂದಿನ ಮಾತ. ಈಗ ಮತ್ತ ಎಲ್ಲಾ ಬಿಟ್ಟ ಇಕಿ ಒಮ್ಮಿಂದೊಮ್ಮಿಲೇ ಆ ಮಂಗಳ ಗ್ರಹದ ವಿಚಾರ ಯಾಕ ತಗದ್ಲು ಅಂತ ಕೇಳಿದರ
’ಖರೇ ಹೇಳ್ತಿನ್ರಿ…ನನಗ ಈ ಭೂಮಿನ ಸಾಕ ಸಾಕಾಗಿ ಬಿಟ್ಟದ, ಅದರಾಗ ಆ ಸುಡಗಾಡ ಕೊರೊನಾ ಬಂದಾಗಿಂದ ಅಂತೂ ರಗಡ ಆಗೇದ, ಹೊರಗ ಕಾಲಿಟ್ಟರ ಮಾಸ್ಕ ಹಾಕ್ಕೊಂಡ-ಹಾಕ್ಕೊಂಡ ಮೂಗ ಅನ್ನೋದ ಸವದ-ಸವದ ಶೂರ್ಪನಖಿ ಮೂಗ ಆದಂಗ ಆಗೇದ. ಅದಕ್ಕ ಸುಮ್ಮನ ಇನ್ನೂ ಏನರ ಚಾನ್ಸ ಸಿಕ್ಕರ ಮಂಗಳ ಗ್ರಹಕ್ಕ ಹೋಗಿ ರಾಮ ರಾಮ ಅಂತ ಇರಬೇಕು ಅಂತ ಮಾಡೇನಿ’ ಅಂದ್ಲು.
ಅಕಿ ಮಾತಾಡಿದ್ದ ಹೆಂಗ ಇತ್ತಂದರ ನಾವ ದೋಸ್ತರ
’ಲೇ..ಸಂಸಾರದ ಕಾಟ ಸಾಕಾಗೇದ ಒಂದ ವಾರ ಬ್ಯಾಂಕಾಕ್ ಇಲ್ಲಾ ಗೋವಾಕ್ಕ ಹೋಗಿ ಬರೋಣ ನಡಿ’ ಅಂತೇವಲಾ ಅಷ್ಟ ಸರಳ ಅಂದ್ಲು.
ಹಂಗ ಖರೇ ಹೇಳ್ಬೇಕಂದರ ನನಗೂ ಈ ಮಂಗಳ ಗ್ರಹಕ್ಕ ಕಳಸೋ ಮಾರ್ಸ ಒನ್ ಪ್ರೋಜೆಕ್ಟ ಮರತ ಹೋಗಿತ್ತ, ಅದರದ ಏನ ಸುದ್ದಿನ ಇದ್ದಿದ್ದಿಲ್ಲಾ. ಹಂಗರ ಎಲ್ಲಿಗೆ ಬಂತ ತಡಿ ಅಂತ ಮೊನ್ನೆ ಡಿಟೇಲ್ಸ್ ತಗದರ ಗೊತ್ತಾತ ಆ ಮಂಗಳ ಗ್ರಹಕ್ಕ ಕಳಸೋ ಡಚ್ ಕಂಪನಿ ಏನ ಇತ್ತಲಾ ಅದ ಮುಚಗೊಂಡ ಹೋಗೇದ.
ಅಲ್ಲಾ, ಸುಳ್ಳ-ಸುಳ್ಳ ಮಂಗಳಗ್ರಹಕ್ಕ ಕರಕೊಂಡ ಹೋಗ್ತೇನಿ, ಅಲ್ಲೇ LIG, MIG ಮನಿ ಕಟ್ಟಿಸಿ ಕೊಡ್ತೇವಿ ಅಂತ ನನ್ನ ಹೆಂಡ್ತಿ ಹಂತಾ ಮಂಗಳಗೌರಿಗಳಿಗೆ ಆಶಾ ತೋರಿಸಿ ಮಿಲಿಯನ್ ಗಟ್ಟಲೇ ರೊಕ್ಕಾ ಹಾಕ್ಕೊಂಡ ’ಮಾರ್ಸ ಒನ್’ ಕಂಪನಿ ರಾತ್ರೋ ರಾತ್ರಿ ಮುಚಗೊಂಡ ಹೋಗಿದ್ದರು. ಹಂಗ ಜಗತ್ತಿನೊಳಗ ರಗಡ ಸ್ಕ್ಯಾಮ ಆಗ್ತಾವ ಅದರಾಗ ಇದು ಒಂದ ಅನ್ನರಿ.
ಈ ಮಾರ್ಸ ಒನ್ ಪ್ರೋಜೆಕ್ಟ ಅನೌನ್ಸ ಮಾಡಿದಾಗ ವಿಜ್ಞಾನಿಗಳು, ಇಂಜೀನಿಯರಗಳು, ಅಸ್ಟ್ರಾನಾಟ್ಸ ಇದ suicide mission ಅಂತ ಎಷ್ಟ ಹೇಳಿದರು ಜನಾ ಕೇಳಲಿಲ್ಲಾ, ಅಪ್ಲೈ ಮಾಡಿದರು. ಅದರಾಗ ಮಾರ್ಸ ಒನ್ ದವರು ಐವತ್ತ ಗಂಡ ಐವತ್ತ ಹೆಣ್ಣ ಇಷ್ಟ ಸೆಲೆಕ್ಟ ಮಾಡಿದರು. ಅದರಾಗ ನಮ್ಮ ಇಂಡಿಯಾದೊರ ಐದ ಮಂದಿ. ಹಂಗ ನನ್ನ ಹೆಂಡ್ತಿ ರಿಜೆಕ್ಟ ಆಗಿದ್ದಿಲ್ಲಾ ಅಂದರ ಆರ ಆಗ್ತಿದ್ದರ ಅನ್ನರಿ.
ಆ ಮಾರ್ಸ ಒನ್ ಪ್ರೋಜೆಕ್ಟ ಮಾಲಕ ಬಾಸ್ ಲ್ಯಾನ್ಸಡೊರ್ಪಗ ನೀ ಫಂಡ್ ಹೆಂಗ ರೇಜ್ ಮಾಡ್ತಿಪಾ ಅಂತ ಕೇಳಿದರ
’ಮಾರ್ಸ ಒನ್ ರಿಯಾಲಿಟಿ ಶೊ ಇದ್ದಂಗ, ನಾವು ಸೆಲೆಕ್ಷನದಿಂದ ಹಿಡದ, ಟ್ರೇನಿಂಗ್, ಅವರ ಲ್ಯಾಂಡಿಂಗ್, ಅವರ ಡೇಲಿ ಲೈಫ್ ಇನ್ ಮಾರ್ಸ ಎಲ್ಲಾ ಬ್ರಾಡ್ ಕಾಸ್ಟ ಮಾಡ್ತೇವಿ, ಅದರಿಂದ ರೊಕ್ಕೊ ಗಳಸ್ತೇವಿ’ ಅಂದಾ. ಅಂವಾ ಹೇಳಿದ್ದರ ಅರ್ಥ ಏನಂದರ ಮಾರ್ಸ ಒನ್ ಏನ ಅದ ಅಲಾ ಅದ ನಮ್ಮ ಸುದೀಪ- ಸಲ್ಮಾನಖಾನನ ಬಿಗ್ ಬಾಸ್ ಇದ್ದಂಗ. ಇಂವಾ ಎಲ್ಲಾರನೂ ಮಾರ್ಸ ಅಂದರ ಮಂಗಳಗ್ರಹದ ಒಳಗ ಹಾಕಿ ಇಲ್ಲೆ ಭೂಮಿ ಮ್ಯಾಲೆ ಅದನ್ನ ರಿಯಾಲಿಟಿ ಶೊ ಮಾಡಿ ನಮಗೇಲ್ಲಾ ತೊರಿಸಿ ರೊಕ್ಕಾ ಮಾಡೊಂವಾ. ಇಲ್ಲೇ ಇಂಡಿಯಾದ ಲೋನಾವಾಲದಾಗ ’ಬಿಗ್ ಬಾಸ್’ ಮಾಡಿದರ ನಾವು ಮನಿ ಕೆಲಸಾ ಬೊಗಸಿ ಬಿಟ್ಟ ಬಾಯಿ ತಕ್ಕೊಂಡ ನೋಡ್ತೇವಿ ಇನ್ನ ಮಂಗಳ ಗ್ರಹದಾಗ ಮಾಡಿದರ ಬಿಡ್ತೇವಾ?
ಬಹುಶಃ ಬಿಗ್ ಬಾಸ್ ನಾಗ ಬರೇ ಸೆಲೆಬ್ರಿಟಿಗೆ ಇಷ್ಟ ಕರಿತಾರ ಸೆಲೆಬ್ರಿಟಿ ಹೆಂಡ್ತಿಗೆ ಚಾನ್ಸ ಇಲ್ಲಾ ಅಂತ ನಮ್ಮಕಿ ಮಾರ್ಸ ಒನ್ ಕ್ಕ ಗಂಟ ಬಿದ್ದಿದ್ಲೋ ಏನೋ?
ಇರಲಿ ಕಡಿಕೆ ನನ್ನ ಹೆಂಡ್ತಿಗೆ ಮಾರ್ಸ ಮಿಶನ್ ಹಳ್ಳಾ ಹಿಡದಿದ್ದ ಬಗ್ಗೆ ಹೇಳಿದರ ಅಕಿ ಖುಶ್ ಆಗಿ
’ಹಂಗ ಆಗಬೇಕ ಚೊಚ್ಚಲ ಗಂಡಸ ಮಗನ ಹಡದೋಕಿ ಅಪ್ಲಿಕೇಶನ್ ರಿಜೆಕ್ಟ ಮಾಡಿದರ ಹಂಗ ಆಗೋದ’ ಅಂತ ಏನ ಅಗದಿ ಇಕಿ ಮಂಗಳ ಗ್ರಹಕ್ಕ ಹೋಗಿ ಹಗಲಕಾಯಿ ಬೆಳೆಸಿಕೊಂಡ ಚೊಚ್ಚಲ ಗಂಡಸ ಮಗನ ನಿಯಮಾ ಮುರಿಯೊರಗತೆ ಅಂದ್ಲು. ಏನ್ಮಾಡ್ತೀರಿ?
ಆದರು ಸದ್ಯೆಕ್ಕಂತೂ ಮಂಗಳ ಗ್ರಹಕ್ಕ ಹೋಗೊ ಪ್ಲ್ಯಾನ ಏನ ಅದ ಅಲಾ ಅದ ಮಂಗಳ ಮೂರ್ತೇ ಮೋರಯಾ ಮೋರಯಾ.