ಮೊನ್ನೆ ಸೆಪ್ಟೇಂಬರ್ 26ಕ್ಕ ನಾ ದಿಲ್ಲಿಗೆ ಮನಮೋಹನ ಸಿಂಗವರಿಗೆ ಎಂಬತ್ತ ವರ್ಷ ತುಂಬಿದ್ವು ಅಂತ ಅವರದ ಇಂಟರ್ವಿವ್ ತೊಗೊಳಿಕ್ಕೆ ಹೋಗಿದ್ದೆ.
ನಾ ಹೋದಾಗ ಅವರು world contraception day programಗೆ ಭಾಷಣಕ್ಕ ಹೋಗಿದ್ದರು. ಅರೇ ಇದೇನ ಭಾರಿ ಕೊಇನ್ಸಿಡೇನ್ಸಲಾ, ಮನಮೋಹನಜಿ ಹುಟ್ಟಿದ್ದ ‘ಕಂಟ್ರಾಸೆಪ್ಶನ್ ಡೇ ದಿವಸ!’, ಹೆಂತಾ ವಿಚಿತ್ರ ಅನಸ್ತು. ಆದರ ಇವರು ಈ ವಯಸ್ಸಿನಾಗೂ ಕಂಟ್ರಾಸೆಪ್ಶನ್ ಡೇ ಬಗ್ಗೆ ಮಾತಡಲಿಕ್ಕೆ ಹೋಗ್ಯಾರ ಅಂದ್ರ ಗ್ರೇಟ್ ಬಿಡ ಅನಸ್ತು. ಇರಲಿ ಬಂದ ಮ್ಯಾಲೆ ನಾನೂ ಒಂದೆರಡ ಆಫ್ ದ ರಿಕಾರ್ಡ ಸಜೇಶನ್ ಕೇಳಿದಾರತು ಅಂತ ಅನ್ಕೊಳೊದರಾಗ ಬಂದ ಬಿಟ್ಟರು.
ನಾ ನನ್ನ ಪರಿಚಯ ಮಾಡ್ಕೊಂಡ ಸೀದಾ ವಿಷಯಕ್ಕ ಬಂದೆ
“ನಿಮಗ ಇವತ್ತಿಗೆ 80ವರ್ಷ ಆತು. ಹುಟ್ಟು ಹಬ್ಬದ ಶುಭಾಷಯಗಳು. ಹಂಗ ನಿಮಗ ಡೆಪ್ರಿಸೀಯೇಶನ್ ಲೆಕ್ಕಾ ಹಾಕಿದರ ನಿಂಬದ ನೆಟ್ ಅಸೆಟ್ ಏನು ಉಳದಿಲ್ಲಾ, ಇನ್ನೂ ನೀವು ಎಷ್ಟ ವರ್ಷ ಹಿಂಗ ಕೈಗೊಂಬಿಯಾಗಿ ರಾಜಕೀಯದಾಗ ಇರಬೇಕ ಅಂತ ವಿಚಾರ ಮಾಡಿರಿ” ಅಂದೆ.
“ಹಂಗಲ್ಲಾ, ನೀವ ಹೇಳೋ ಡೆಪ್ರಿಸೀಯೇಶನ್ ಲೆಕ್ಕ ಕರೆಕ್ಟ್, ಆದ್ರ ನಂಗ ಐದ ವರ್ಷಕ್ಕೊಮ್ಮೆ ನಮ್ಮ ಮ್ಯಾಡಮ್ ರಿವ್ಯಾಲ್ಯೂವೇಶನ್ ಮಾಡಿ ‘ನೀವು ರಾಹುಲಗ ಸ್ವಲ್ಪ ತಿಳವಳಿಕೆ ಬರೋತನಕ ನಮಗ ಫಿಕ್ಸಡ್ ಅಸೆಟ್ ಇದ್ದಂಗ’ ಅಂತ ನಂಗ ಅಪ್ರಿಸೀಯೇಟ್ ಮಾಡಲಿಕತ್ತಾರ” ಅಂದ್ರು. ನಾ ಮುಂದ ಮಾತಾಡ್ತ ಮಾತಾಡ್ತ
“ಅಲ್ಲಾ, ನಿಮ್ಮ ಫಾರೇನ್ ಡೈರೆಕ್ಟ ಇನ್ವೆಸ್ಟಮೆಂಟ್ ಪಾಲಿಸಿಯಿಂದ ನಮ್ಮ ದೇಶದ್ದ ಆರ್ಥಿಕ ಪರಿಸ್ಥಿತಿ ಹದಿಗೆಡಲಿಕತ್ತದ ಹೌದಲ್ಲೋ?” ಅಂದೆ
“ಅದೇನೋ ಖರೆ, ಆದ್ರ ನಮ್ಮ ದೇಶದಾಗ ಮೊದ್ಲ F.D.I. ಎಂಟರ ಆಗಿದ್ದ ಪಾಲಿಟಿಕ್ಸ್ ಒಳಗ, ಯಾವಾಗ ನಮ್ಮ ಮ್ಯಾಡಮ ಪಾಲಿಟಿಕ್ಸ್ ಒಳಗ ಬಂದರಲಾ ಅದು ನಮ್ಮ ದೇಶದಾಗಿನ ಫಸ್ಟ ಫಾರೇನ್ ಡೈರೆಕ್ಟ ಇನ್ವೆಸ್ಟಮಂಟ್. ಹಂಗ ನಮ್ಮ ದೇಶ ಹಳ್ಳಾಹಿಡಿಲಿಕ್ಕೆ ಆ F.D.I ನ ಕಾರಣ, ನನ್ನ F.D.I ಅಲ್ಲಾ” ಅಂತ ಅಂದ ಬಿಟ್ರು.
ಏ ಇವರ ಆರಾಮ ಇದ್ದಾರಿಲ್ಲ, ಹಿಂಗ್ಯಾಕ ಮಾತಡಲಿಕತ್ತಾರ, ಎಂಬತ್ತ ತುಂಬತಂತ ಅರುವು-ಮುರುವು ಆತೋ ಅಂತ ಅನಸಲಿಕತ್ತ. ಅವರ ಹಂಗ ಮುಂದ ಮಾತಡ್ತ-ಮಾತಡ್ತ
“ರಾಹುಲ ಗಾಂಧಿದ ಲಗ್ನ ಆಗಿ ಮರಿ ಗಾಂಧಿ ಹುಟ್ಟಿಬಿಟ್ಟರ ನನ್ನ ಜವಾಬ್ದಾರಿ ಮುಗಿತದ, ಈ ದೇಶದ ಮುಂದಿನ ಪೀಳಗಿಗೆ ಒಂದ ಗಾಂಧಿ ಅವಶ್ಯಕತೆ ಅದ” ಅಂದ್ರು.
“ಇಲ್ಲಾ ನಾ 2014 ಆದಮ್ಯಾಲೆನೂ ಫೈನಾನ್ಸ್ ಮಿನಿಸ್ಟರಾಗಿ ಉಳಿಬೇಕು. ಪಾಪ, ರಾಹುಲಗ ಬ್ಲ್ಯಾಕ ಮನಿ ಯಾವುದು ವೈಟ ಮನಿ ಯಾವುದು ಅಂತ ಗೊತ್ತಾಗಂಗಿಲ್ಲಾ” ಅಂದ್ರು
ಅವರ ಹಂಗ ಇನ್ನೂ ಏನೇನೋ ಖುಶಿಲೇ ಹೇಳಲಿಕತ್ತರು. ನಾ ಸುಮ್ಮನ ಹೂಂ-ಹೂಂ ಅನಕೋತ ಅವರ ಹೇಳಿದ್ದನ ಗಿಚಗೋತ ಹೊಂಟೆ.
“ರೊಕ್ಕ ಏನ ಗಿಡದಾಗ ಹುಟ್ಟತಾವೇನು, ರೊಕ್ಕ ಇರೋದ ಕಲ್ಲಿದ್ದಲ ಗಣಿ ಒಳಗ, 2g ಸ್ಪೆಕ್ಟ್ರಮದಾಗ. ಈ ಮಂದಿಗೆ ಬುದ್ಧಿನ ಇಲ್ಲಾ” ಅಂತ ಅಂದರು. ನಾ ಅವರಿಗೆ
” ಅಲ್ಲಾ, ನಿಮ್ಮ ಸರ್ಕಾರದಾಗ ಇಷ್ಟೇಲ್ಲಾ ಭ್ರಷ್ಟಾಚಾರ ನಡದ್ರು ನೀವು ಏನೂ ಮಾತಡಂಗಿಲ್ಲಾ, ಸುಮ್ಮನ ಇದ್ದೀರಿ. ಜನಾ ಇದ್ದನ್ನ ‘ಮೌನಂ ಸಮ್ಮತಿ ಲಕ್ಷಣಂ’ ಅಂತ ತಿಳ್ಕೋಬೇಕಿನೂ?” ಅಂದೆ.
ಅದಕ್ಕ ಅವರ ಸುಮ್ಮನ ಇದ್ದರು. ನಾ ‘ಮೌನಂ ಸಮ್ಮತಿ ಲಕ್ಷಣಂ’ ಅಂತ ಸುಮ್ಮನಾದೆ.
ಅಷ್ಟರಾಗ ಅವರಿಗೆ ಹಾಟಲೈನ ಮ್ಯಾಲೆ ಫೋನ್ ಬಂತು. ಅವರ ಒಂದ ಹತ್ತ ಸರತೆ, ’ಜಿ ಮ್ಯಾಡಮ್’ ,’ಜಿ ಮ್ಯಾಡಮ್’, ‘sorry ಮ್ಯಾಡಮ್’ ಅಂತ ಅಂದ ಫೋನ ಇಟ್ಟಬಂದ
“ನೀವು ಎಲ್ಲಿಂದ ಬಂದೇನಿ ಅಂದ್ರಿ?” ಅಂದ್ರು. ನಾ ಮೀಡಿಯಾದಿಂದ ಅಂದೆ.
“sorry ನಾ ಇಷ್ಟೋತ್ತನಕ ಹೇಳಿದ್ದೇಲ್ಲಾ ಆಫ್ ದ ರಿಕಾರ್ಡ, ನಮ್ಮ ಹುಬ್ಬಳ್ಳಿ ಷಡಕ ನನ್ನ biography ಬರೀಲಿಕ್ಕೆ ಯಾರನರ ಕಳಸ್ತೇನಿ ಅಂದಿದ್ದಾ, ನಿಮಗ ನಾ ಅವರನ ಅಂತ ತಿಳ್ಕೊಂಡ ಇಷ್ಟ ಭಿಡೆ ಬಿಟ್ಟ ಮಾತಾಡಿದೆ. ದಯವಿಟ್ಟ ಇದನ್ನ ಯಾರಿಗೂ ಹೇಳ ಬ್ಯಾಡರಿ, ನಮ್ಮ ಮ್ಯಾಡಮ್ ಭಾಳ ಸಿಟ್ಟ ಆಗ್ಯಾರ” ಅಂತ ಎದ್ದ ಹೋಗೆ ಬಿಟ್ಟರು.
“ಸರ್…ಸರ್, ಹೋಗಲಿ world contraception day ಬಗ್ಗೆರ ಒಂದ ಎರಡ ಮಾತ ಹೇಳರಿ” ಅಂದೆ, ಅವರ ಹೋಗ್ತ್- ಹೋಗ್ತ
” I am a congress’s conception and corruption is our inception. If you think we are contraception for the growth of the country that is your misconception” ಅಂತ ಹೇಳಿ ನಂಗ ಅವರ ಬಗ್ಗೆ ಇದ್ದ perception ಪೂರ್ತಿ interception ಮಾಡಿ ಹೋಗೇ ಬಿಟ್ಟರು.
ಹೋಗ್ಗೊ ಅವನೌನ ನಂದ ಹೆಂತಾ ನಸೀಬಲೆ, ಇಷ್ಟ ಒಪನ್ನಾಗಿ ನಮ್ಮ ಸಿಂಗ ಅವರು ಮಾತಾಡಿದರು ಆದ್ರ ಎಲ್ಲಾ ಆಫ್ ದ ರಿಕಾರ್ಡ ಅಂತ ಹೇಳಿ ಬಿಟ್ಟರಲಾ ಅನಸ್ತು. ಆದ್ರ ನಾ ಹಿಂತಾ ಚಾನ್ಸ್ ಬಿಡ್ತೇನಿನ? ಅವರ ಆಫ್ ದ ರಿಕಾರ್ಡ ಅಂದಿದ್ದನ್ನ ಆಫಿಸಿಯಲ್ ರಿಕಾರ್ಡ ಅಂತ ಬರದ ಕಳಿಸಿ, ಹೆಂಗಿದ್ದರೂ ಇಲ್ಲಿ ತನಕ ಬಂದೇನಿ ಕಂಟ್ರಾಸೆಪ್ಶನ್ ಡೇ ಪ್ರೊಗ್ರಾಮಗೆರ ಹೋದರಾತು ಏನರ ಫ್ರೀ ಕಂಟ್ರಾಸೆಪ್ಟೀವಸ್ ಕೊಟ್ಟರು ಕೊಡಬಹುದು ಅಂತ ಅಲ್ಲಿಂದ ಎದ್ದೆ.
ಅಲ್ಲಾ ನಮ್ಮ ಮನಮೋಹನ ಸಿಂಗವರನ ನೋಡಿದ್ರ ಎಂಬತ್ತ ತುಂಬಿದ್ವಂತ ಅನಸಂಗೇಲ ನೋಡ್ರಿ, ಅವರ ಮಾರಿ ಮ್ಯಾಲೆ ಇಪ್ಪತ್ತ ವರ್ಷದ ಹಿಂದ ಹೆಂಗ ಕಳೆ ಇತ್ತೊ ಇವತ್ತು ಹಂಗ ಅದ. ಮನಷ್ಯಾ ಒಂದ ಚೂರು ಬದಲಾಗಿಲ್ಲಾ, ದೇಶದಾಗೂ ಬದಲಾವಣೆ ಮಾಡ್ಲಿಲ್ಲಾ. ಎಲ್ಲಾ ನಮ್ಮ ಹಣೇಬರಹ.