ಇದ ಒಂದ ಎಂಟ ತಿಂಗಳ ಹಿಂದಿನ ಮಾತ ಇರಬೇಕ, ಜಸ್ಟ ದಣೇಯಿನ ನಮ್ಮ ಹುಬ್ಬಳ್ಳ್ಯಾಗ ಲಾಕಡೌನ ತಗದಿದ್ದರು, ನಾವು ಮನಿ ಕೆಲಸ, ಮನೆಯವರ ಕೆಲಸ ಬಿಟ್ಟ ಮಾಲಕರ ಕೆಲಸಕ್ಕ ಹೊಂಟಿದ್ವಿ. ಒಂದ ದಿವಸ ಮಟಾ ಮಟಾ ಮಧ್ಯಾಹ್ನ ನಮ್ಮ ಸುಮ್ಮಕ್ಕ ಪೂಣೆಯಿಂದ ಫೋನ್ ಮಾಡಿದ್ಲು. ಹಂಗ ಅಲ್ಲೆ ಇನ್ನೂ ಕೊರೊನಾ ಹಾವಳಿ ಇದ್ದದ್ದಕ್ಕ ಲಾಕಡೌನ್ ಇತ್ತ, ಅದರಾಗ ಲಾಕಡೌನ ಆದಾಗಿಂದ ಅಕಿ ವಾರದಾಗ ಒಂದ ನಾಲ್ಕ ಸರತೆ
’ಏನ ನಡಿಸೀರಿ…ಇವತ್ತ ಏನ ವಿಶೇಷ ಅಡಗಿ ಆಗಿತ್ತ’ ಅಂತ ಔಟಗೋಯಿಂಗ ಕಾಲ್ ಮಾಡ್ಲಿಕ್ಕೆ ಶುರು ಮಾಡಿದ್ಲು. ಅಲ್ಲಾ ಹಂಗ ಕೊರೊನಾ ಬಂದ ಮ್ಯಾಲೆ ನಾವ ಕಲತದ್ದ ಭಾಳ ಅದ. ಅದರಾಗ ಸಂಬಂಧಿಕರನ ಹುಡುಕಿ, ಹುಡುಕಿ ಮಾತಾಡ್ಸೋದು ಒಂದ ಅನ್ನರಿ. ಒಂದೂ ಅವರ ಇನ್ನೂ ಜೀವಂತ ಇದ್ದಾರೇನ ಅಂತ ಚೆಕ್ ಮಾಡ್ಲಿಕ್ಕೆ ಇನ್ನೊಂದು ಕೆಲಸ ಇಲ್ಲಾ ಬೊಗಸಿ ಇಲ್ಲಾ ಫೋನ್ ಮಾಡಿ ಸಂಬಂಧ ಇದ್ದದ್ದ ಇಲ್ಲದ್ದ ತಾಸ ಗಟ್ಟಲೇ ಮಾತೋಡೊದ ಕಾಮನ್ ಆಗಿತ್ತ.
ನಾ ಫೋನ ಎತ್ತೊದಕ್ಕ ಅಕಿ
’ಅವ್ವ ಇವತ್ತ ಮುಂಜಾನೆ ಹೋದ್ಲಪಾ…ಈಗ ನಮ್ಮ ಮನೆಯವರ ಎಲ್ಲಾ ಮುಗಿಸಿಕೊಂಡ ಬಂದರು’ ಅಂದ್ಲು.
ನಂಗ ಒಮ್ಮಿಕ್ಕಲೇ ಗಾಬರಿ ಆತ. ಅವರವ್ವ ಅಂದರ ನನಗ ಖಾಸ ಸೋದರತ್ತಿ, ನಾವೇಲ್ಲಾ ಸರಸಕ್ಕ ಅತ್ಯಾ ಅಂತ ಕರಿತಿದ್ವಿ. ’ನಾ ಅಯ್ಯೋ ದೇವರ ಏನಾಗಿತ್ತ್?” ಅಂತ ಕೇಳಿದರ
’ಗಾಬರಿ ಆಗಬ್ಯಾಡ ಅಕಿಗೇನ ಕೊರೊನಾ ಆಗಿದ್ದಿಲ್ಲಾ, ವಯಸ್ಸ ಆಗಿತ್ತ ಹಾರ್ಟ್ ಅಟ್ಯಾಕ ಆಗಿ ಹೋದ್ಲ’ ಅಂತ ಅಂದ್ಲು. ಅಲ್ಲಾ ಹಂಗ ನಮ್ಮ ಅತ್ತಿಗೆ 88 ದಾಟಿತ್ತ ಬಿಡ್ರಿ, ನಮ್ಮಪ್ಪನಕಿಂತ ದೊಡ್ದೊಕಿ, ಇಷ್ಟ ವರ್ಷ ಇದ್ದದ್ದ ಗ್ರೇಟ್. ಆದರು ಹಿರೇ ಮನಷ್ಯಾಳು, ವಟ- ವಟಾ ಅಂತ ಎಲ್ಲಾರ ಜೀವಾ ತಿನ್ನೋ ಜೀವಾ ಅಂತ ಒಂದ ಇತ್ತ ಅದು ಹೋತಲಾ ಅಂತ ಕೆಟ್ಟ ಅನಸ್ತ.
’ಹುಬ್ಬಳ್ಳಿ-ಧಾರವಾಡ ಮಂದಿಗೇಲ್ಲಾ ನೀನ ಹೇಳಿ ಬಿಡ, ನಾ ಎಲ್ಲೆ ಮತ್ತ ಎಲ್ಲಾರಿಗೂ ಫೋನ ಮಾಡ್ಕೋತ ಕೂಡ್ಲಿ’ ಅಂತ ಹೇಳಿ ಫೋನ ಇಟ್ಟಳು.
ನಾ ಯಾರ ಯಾರಿಗೆ ನೀರ ಅದ, ಮೈಲಗಿ ಅದ ಅವರಿಗೆ ಮುದ್ದಾಂ ಹೇಳಿ ನಮ್ಮ ಮನ್ಯಾಗಿನವರಿಗೆ ಪೆಂಡಿಂಗ್ ಇಟ್ಟೆ. ಇನ್ನ ನಮ್ಮವ್ವಗ ಹೇಳಿದರ ಇಕಿ ಅಲ್ಲೆ ಮುಟ್ಟ ಬ್ಯಾಡಾ ಇಲ್ಲೇ ಮುಟ್ಟ ಬ್ಯಾಡಾ ಅಂತ ಏನೇನರ ರೂಲ್ಸ ತಗಿತಾಳ ತಡಿ ಅಂತ ವಿಚಾರ ಮಾಡಿ ನನ್ನವು ಇಂಪಾರ್ಟೇಂಟ್ ಕೆಲಸ ಎಲ್ಲಾ ಮುಗಿಸ್ಕೊಂಡ ಆಮ್ಯಾಲೆ ಮನಿಗೆ ಹೋಗಿ ಊಟಾ ಹೊಡದ ಆಮ್ಯಲೆ ನಮ್ಮವ್ವಗ
’ಅವ್ವಾ..ಸರಸಕ್ಕ ಅತ್ಯಾ ಹೋದ್ಲಂತ ಇವತ್ತ ಮುಂಜಾನೆ’ ಅಂತ ಅಗದಿ ಕ್ಯಾಜುವಲ್ ಆಗಿ ಹೇಳಿದೆ. ನಮ್ಮವ್ವ ಯಾಕ ಏನಾಗಿತ್ತು ಅಂತ ಎಲ್ಲಾ ಕಥಿ ಕೇಳಿ ಕಡಿಕೆ
’ಶಾಣ್ಯಾ ಇದ್ದೀ ಇಷ್ಟೋ ತನಕ ಬಿಟ್ಟ ಈಗ ಹೇಳ್ತಿ ಅಲಾ, ನಿನಗೂ ನೀರ ಅದ ನೀರ ಹಾಕ್ಕೊ ನಡಿ’ ಅಂತ ಬಚ್ಚಲಕ್ಕ ಅಟ್ಟಿದ್ಲು.
ಹಂಗ ನಮ್ಮ ಸರಸಕ್ಕ ಅತ್ಯಾ ಇವತ್ತ ನಾಳೆ ಅಂತ ಅನಲಿಕತ್ತ ಒಂದ ಎರಡ ವರ್ಷ ಆಗಿತ್ತ ಹಿಂಗಾಗಿ ಅಕಿ ಹೋಗಿದ್ದು ಭಾಳ ದುಃಖ ಅನಸಲಿಲ್ಲಾ, practically ಹೇಳಬೇಕಂದರ ಛಲೋನ ಆತ ಅನ್ನರಿ. ಪಾಪ ಅಕಿನೂ ಅನುಭವಸೋಕಿ, ಮಾಡೋರ ಅನುಭವಸೋರ. ’ಹೋಗಿ ಪುಣ್ಯಾ ಕಟಗೊಂಡ್ಲು ಸರಸಕ್ಕ, ಭಾಳ ಛಲೋ ಆತ’ ಅಂದವರ ಹೆಚ್ಚ ಇದ್ದರು.
ನಮ್ಮವ್ವ ನಾ ಬಚ್ಚಲದಿಂದ ಇನ್ನೂ ಹೊರಗ ಬರೋ ಪುರಸತ್ತ ಇಲ್ಲದ ಮುಂದಿಂದ ಹೆಂಗ ಅಂತ ಅಂದ್ಲು.
’ಏ..ನೀ ಮುಂದಿಂದ ನಂಗ ಕೇಳಿದರ ನಂಗೇನ ಗೊತ್ತ…ನೀ ಏನ ಮಾತಾಡಸಲಿಕ್ಕೆ, ಧರ್ಮೋದಕ ಬಿಡಲಿಕ್ಕೆ ಪುಣೆಕ್ಕ ಹೋಗೋಕಿನ?’ ಅಂತ ನಾ ಅಂದರ
’ಹಂಗ ಅಲ್ಲೋ …ಹಿರೇ ಮನಷ್ಯಾಳಪಾ, ಎಲ್ಲಾ ಪ್ರಾಂತಾಗಿ ಮಾಡಬೇಕು’ ಅಂತ ರಾಗಾ ತಗದ್ಲು.
’ನಮ್ಮವ್ವಾ….ನೀ ನನ್ನ ಜೀವಾ ತಿನ್ನಬ್ಯಾಡ, ಕ್ರಿಯಾ ಕರ್ಮಾ ಎಲ್ಲಾ ಅಕಿ ಮಗಾ- ಅಳಿಯಾ ಮಾಡ್ಕೋತಾರ, ನಮಗ್ಯಾರಿಗೂ ಅಲ್ಲೆ ಹೋಗಲಿಕ್ಕೆ ಆಗಂಗಿಲ್ಲಾ, ಎರಡ ರವಾ ಉಂಡಿ ಕೋರಿಯರ್ ಒಳಗ ತರಿಸ್ಗೋತೇನಿ, ನೀ ಸುಮ್ಮನ ಕೂಡ’ ಅಂತ ನಾ ಜೋರ ಮಾಡಿದೆ.
ಹಂಗ ನಾವ ಮಾತಾಡಸಲಿಕ್ಕೆ ಮಹಾರಾಷ್ಟ್ರಕ್ಕ ಏನೋ ಹೋಗ ಬಹುದು ಆದರ ವಾಪಸ ಬರಬೇಕಾರ ಬಾರ್ಡರನಾಗ ಭಾಳ ತ್ರಾಸ ಇತ್ತ. ಕರ್ನಾಟಕ ಬಾರ್ಡರ್ ಒಳಗ RT-PCR TEST ಕಂಪಲ್ಸರಿ ಇತ್ತ. ನಾ ನಮ್ಮವ್ವಗ
’ಇಕಾ, ನೋಡಿಲ್ಲೆ ನಿಂಗ ಮೊದ್ಲ ಮೈಲಗಿ ಇರ್ತದ, ಮ್ಯಾಲೆ ನೀ ಮಾತಾಡಸಲಿಕ್ಕೆ ಹೋಗಿ ಬರಬೇಕಾರ ಬಾರ್ಡರನಾಗ RT-PCR TEST ಚೆಕ್ ಮಾಡಿದ ಮ್ಯಾಲೆ ಪಾಸಿಟಿವ್ ಬಂದರ ಮತ್ತ ಕ್ವಾರೆಂಟೈನ್ ಮಾಡ್ತಾರ. ಹಿಂಗ ಮೈಲಗಿ ಒಳಗ ಕ್ವಾರೆಂಟೈನ ಮಾಡಿದರ ಮೈಲಗಿ ದೊಡ್ಡದೊ ಇಲ್ಲಾ ಕ್ವಾರೆಂಟೈನ್ ದೊಡ್ಡದೊ ಅಂತ ಜೆ.ವಿ.ಆಚಾರ ಡಾಕ್ಟರಗೆ ಕೇಳಬೇಕೊ ಇಲ್ಲಾ ರವಿ ಆಚಾರ್ಯರಿಗೆ ಕೇಳಬೇಕೊ ನಂಗೊತ್ತಿಲ್ಲಾ, ಹಿಂಗಾಗಿ ನೀ ಮಾತಾಡಸಲಿಕ್ಕೆ ಹೋಗೊದ ಮರತ ಬಿಡ’ ಅಂತ ನಮ್ಮವ್ವಗ ಗಪ್ ಕೂಡಿಸಿದೆ.
ಅಲ್ಲಾ, ಇಲ್ಲೆ ನಾವ ದೋಸ್ತರ ಏನರ ಇಂಪಾರ್ಟೇಂಟ್ ಕೆಲಸ ಇದ್ದಾಗ ಮಹಾರಾಷ್ಟ್ರಕ್ಕ ವಾಯಾ ಗೋವಾ ಅಡ್ಡಾಡತಿದ್ವೆ. ಅಲ್ಲಾ ನಮಗ ಗೋವಾಕ್ಕ ಹೋಗ್ಲಿಕ್ಕೆ ಏನರ ನೇವಾ ಸಿಕ್ಕರ ಸಾಕ ಬಿಡ್ರಿ. ಆದರ ಧರ್ಮೋದಕ ಬಿಡಲಿಕ್ಕೆ ಯಾರ ವಾಯಾ ಗೋವಾ ಹೋಗ್ತಾರ ನೀವ ಹೇಳ್ರಿ? ಹಂಗ ನಾ ವಾಯಾ ಗೋವಾ ಧರ್ಮೋದಕ ಬಿಡಲಿಕ್ಕೆ ಹೋಗಿದ್ದೆ ಅಂದರ ಯಾರರ ನಂಬತಾರ? ನೀವರ ನಂಬತೀರಿ?
ಆದರೂ ನಮ್ಮವ್ವನ ಕಾಟಕ್ಕ ಮುಂದಿನ ಕಾರ್ಯಕ್ರಮ ಹೆಂಗ ಅಂತ ಕೇಳಲಿಕ್ಕೆ ಸುಮಕ್ಕಗ ಫೋನ ಮಾಡಿದೆ.
’ ನಾವ ಎಲ್ಲಾ ಇಲ್ಲೇ ಮನಿ ಪೂರ್ತೇಕ ಮಾಡ್ಕೋತೇವಿ, ನೀವೇನ ತ್ರಾಸ ತೊಗೊಂಡ ಬರಲಿಕ್ಕೆ ಹೋಗಬ್ಯಾಡ್ರಿ, ರವಾ ಉಂಡಿ ಕೋರಿಯರ್ ಕಳಸ್ತೇವಿ’ ಅಂತ ಅಗದಿ ಪ್ರ್ಯಾಕ್ಟಿಕಲ್ ಆಗಿ ಹೇಳಿದ್ಲು. ಹೇಳಿ ಕೇಳಿ ಮರಾಠಿ ಮಾನುಸ್, ಭಾರಿ ಪ್ರ್ಯಾಕ್ಟಿಕಲ್ ಇರ್ತಾರ. ನಂಗೂ ಅದ ಬೇಕಾಗಿತ್ತ. ಆದರ ನಮ್ಮವ್ವ ಸುಮ್ಮನ ಕೂಡ್ಲಿಲ್ಲಾ
’ಅಲ್ಲೋ ನಾವ ತವರಮನಿಯವರ ಆಗಿ ಧರ್ಮೋದಕಕ್ಕ ಹೋಗಲಿಲ್ಲಾ ಅಂದರ ಹೆಂಗ, ಅದರಾಗ ನೀ ಸೋದರಮಾವನ ಮಗಾಪಾ, ಹೋಗಬೇಕ’ ಅಂತ ಗಂಟ ಬಿದ್ಲು. ನಂಗ ಹುಚ್ಚ ಹಿಡಿಯೋದ ಒಂದ ಬಾಕಿ ಇತ್ತ. ಅಷ್ಟರಾಗ ನನ್ನ ಹೆಂಡ್ತಿ ಸುಮ್ಮನ ಕೂಡಬೇಕೊ ಬ್ಯಾಡೋ
’ವಾಟ್ಸಪ್ಪ್ ಒಳಗ ವಿಡೀಯೊ ಕಾಲ್ ಹಚ್ಚಿ ಕೊಡ್ತೇನಿ, ಇಲ್ಲಿಂದ ಧರ್ಮೋದಕ ಬಿಡ್ರಿ’ ಅಂತ ಅಂದ
’ನೀ ಗಪ್ ಕೂಡ, ಏನೇನರ ಮಾತಾಡಬ್ಯಾಡ. ನಾ ಲಗ್ನ ಆಗಿ ಹೋಸ್ದಾಗಿ ಬಂದಾಗ ನಮ್ಮನ್ನ ಮನಿ ತುಂಬಿಸಿಕೊಂಡೇಕಿನ ಸರಸಕ್ಕ, ಆಡೂರ ಮನೆತನದ ಸೊಸೆಯಂದರೇಲ್ಲಾ ನಮ್ಮ ಅತ್ತಿಕಿಂತಾ ಜಾಸ್ತಿ ಸರಸಕ್ಕಗ ಹೆದರತಿದ್ವಿ, ಅಷ್ಟ ಸ್ಟ್ರಿಕ್ಟ ಇದ್ಲು…’ ಅಂತ ಸರಸಕ್ಕನ ಮ್ಯಾಲಿನ ಸಿಟ್ಟ ತನ್ನ ಸೊಸಿ ಮ್ಯಾಲೆ ಹಾಕಿ ಬೈದ್ಲು.
ನಮ್ಮವ್ವ ಐವತ್ತ ವರ್ಷದ ಹಿಂದಿನ ಫ್ಲ್ಯಾಶ್ ಬ್ಯಾಕಿಗೆ ಹೋಗಿದ್ದ ನೋಡಿ ಇನ್ನ ಇಕಿ ಹಳೇ ಸುದ್ದಿ ಎಲ್ಲಾ ತಕ್ಕೊಂಡ ಕೂಡ್ತಾಳ ಅಂತ ನಾ
’ಯವ್ವಾ ತಾಯಿ, ಸಾಕ ಮುಗಸ..ನೀ ಮಾತಾಡಸಲಿಕ್ಕೆ ಹೋಗ್ತಿದ್ದರ ಹೋಗ, ಪೂಣಾದಾಗಿನ ಪರಿಸ್ಥಿತಿ ಹೆಂಗ ಅದ ಅಂತ ನಿಂಗ ಹೇಳೇನಿ, ಇನ್ನ ಅದಕ್ಕೂ ಮೀರಿ ಹೋಗಿ ನಿನಗೇನರ ಮತ್ತೇನರ ಹೆಚ್ಚು ಕಡಮಿ ಆಗಿ ಮಂದಿ ನನಗ ಮಾತಾಡಸಲಿಕ್ಕೆ ಬರೋಹಂಗ ಆದರ ನಂಗೋತ್ತಿಲ್ಲ ಮತ್ತ’ ಅಂದ ಮ್ಯಾಲೆ ಸ್ವಲ್ಪ ಶಾಂತ ಆದ್ಲ.
ಮುಂದ ರಾತ್ರಿ ಸುಮ್ಮಕ್ಕಗ ಮತ್ತ ಫೋನ ಮಾಡಿ ನಮ್ಮವ್ವನ ಕೈಯಾಗ ಕೊಟ್ಟೆ, ನಮ್ಮವ್ವ
’ಎಲ್ಲಾ ಮುಗಿತಿನ್ವಾ, ಪಾಪ..ನಿಮ್ಮವ್ವ ಭಾಳ ಅನುಭವಿಸಿದ್ಲು…ಆದರೂ ಇನ್ನೊಂದ ಸ್ವಲ್ಪ ದಿವಸ ಇರಬೇಕಿತ್ತು…’ ಅಂತ ಅದು-ಇದು ಮಾತಾಡಿ ಲಾಸ್ಟಿಗೆ
’ನಮಗೇನ ಮಾತಾಡಸಲಿಕ್ಕೆ, ಧರ್ಮೋದಕಕ್ಕ ಬರಲಿಕ್ಕೆ ಆಗಂಗಿಲ್ವಾ, ನೀನ ಇತ್ತಲಾಗ ಬಂದಾಗ ನಮ್ಮ ಮನಿಗೆ ಬಂದ ಮಾತಾಡಿಸ್ಗೊಂಡ ಹೋಗು’ ಅಂತ ಅಂದ ಬಿಟ್ಲು.
ನಾ ಒಮ್ಮಿಕ್ಕಲೇ ಗಾಬರಿ ಆದೆ. ಹೆಂತಾ ಪರಿವರ್ತನೆ ಬಂತ ನಮ್ಮವ್ವನ ಒಳಗ ಅನಸ್ತ. ನಾ ಬರೇ ನೀ ಪೂಣಾಕ್ಕ ಮಾತಾಡಸಲಿಕ್ಕೆ ಹೋದರ ಜನಾ ನಂಗ ಮಾತಾಡಸಲಿಕ್ಕೆ ಬರ್ತಾರ ಅಂದಿದ್ದಕ್ಕ ಇಕಿ ಪಾಪ ಆ ಸತ್ತವರ ಮನ್ಯಾಗಿನವರಿಗೆ ನೀವ ನಮ್ಮ ಮನಿಕಡೆ ಬಂದಾಗ ಮಾತಾಡಿಸ್ಗೊಂಡ ಹೋಗ್ರಿ ಅಂದ್ಲಲಾ ಅಂತ ಆಶ್ಚರ್ಯ ಆತ. ಆದರ ಭಾರಿ ಪ್ರ್ಯಾಕ್ಟಿಕಲ್ ಅನಸ್ತ ಬಿಡ್ರಿ.
ಹಂಗ ಕೊರೊನಾ ಜೀವನದಾಗ ಎಲ್ಲಾರಿಗೂ ಭಾಳ ಪಾಠಾ ಕಲಿಸೇದ ತೋಗೊರಿ. ಈಗ ಪ್ರ್ಯಾಕ್ಟಿಕಲ್ ಆಗಿ ನಾವ ಜೀವಂತ ಇರೋದ ಇಂಪಾರ್ಟೆಂಟ್ ಹೊರತು ಮೈಲಗಿ-ಮಡಿ- ರಿದ್ದಿ ಅಂತ ಕೂತಗೊಂಡರ ಆಗಂಗಿಲ್ಲಾ. ಕಾಲಾಯ ತಸ್ಮೈ ನಮ: