ಇದ ಹೋದ ವರ್ಷ ಜೂನದಾಗಿನ ಸುದ್ದಿ ಇರಬೇಕ. ನನ್ನ ಮಗಳ ಮ್ಯಾಟ್ರಿಕ್ ಪಾಸ್ ಆದ್ಲಂತ ಕಾಲೇಜ ಸೇರಸಿದ್ದೆ.
ನನ್ನ ಮಗಳ ಕಾಲೇಜಿಗೆ ಹೊಂಟಾಗಿಂದ ಅಕಿನ್ನ ಬಿಟ್ಟ ಬರೋದು, ಕರಕೊಂಡ ಬರೋದ ನಂದ ಜವಾಬ್ದಾರಿ ಆಗಿತ್ತ. ಅದರಾಗ ನಮ್ಮಕಿಂತೂ
’ನಾ ಒಂಬತ್ತ ತಿಂಗಳ ಹೊತ್ತು- ಹೆತ್ತು -ಬೆಳಸಿ – ಹತ್ತನೇತ್ತ ಮಟಾ ಸಾಲಿ ಕಲಸೋದರಾಗ ರಗಡ ಆಗೇದ ಇನ್ನ ಮುಂದ ನಿಮ್ಮ ಮಗಳ ಎಜುಕೇಶನ್ ಜವಾಬ್ದಾರಿ ನಿಂಬದ….ನಿಮಗ ಬೇಕಾರ ಕಲಸರಿ ಇಲ್ಲಾ ಲಗ್ನಾ ಮಾಡಿ ಅಟ್ಟರಿ’ ಅಂತ ಹೇಳಿ ಬಿಟ್ಟಿದ್ಲು.
ಇನ್ನ ನಮ್ಮ ಮನ್ಯಾಗ ಕನ್ಯಾ ಅದ ಅಂತ ಗೊತ್ತ ಆದರ ವರಗೊಳ ಪಾಳೆ ಹಚ್ಚತಾರ ಖರೆ, ಆದರ ಹುಡಗಿ ಇನ್ನು ಸಣ್ಣೋಕಿ ಇದ್ದಾಳ ಪಿ.ಯು.ಸಿ 2ನರ ಮುಗಸಲಿ ಅಂತ ಕಾಲೇಜಿಗೆ ಹಚ್ಚಿ, ಅಕಿನ್ನ ದಿವಸಾ ಕಾರನಾಗ ಕಾಲೇಜಿನಿಂದ ಅಕಿನ್ನ ಕರಕೊಂಡ ಬರೋದು ಬಿಡೋದು ನಾನ ಮಾಡ್ಲಿಕತ್ತೇನಿ.
ಹಂಗ ದಿವಸಾ ಕಾಲೇಜಿನಿಂದ ಕರಕೊಂಡ ಬರಬೇಕಾರ
‘what happened today in college, who said what…what did you do today’ ಅಂತ ಏನ ಅಗದಿ concerned fatherಗತೆ ಕೇಳೋದ ನನ್ನ ಚಟಾ.
ಒಂದ ಸರತೆ ಮಾತಾಡ್ತ ಮಾತಾಡ್ತ
’ಮತ್ತ ಕಾಲೇಜನಾಗ ನಿಂಗ ಏನರ, ಯಾರರ ಕಾಡಸ್ತಾರೇನ..ಯಾರರ nick name ಇಟ್ಟಾರೇನ…ಯಾರರ ಏನರ ಅಂದರ ನಂಗ ಹೇಳ ನೀ’ ಅಂತ ಅಗದಿ ನಾ ಏನ ಹುಬ್ಬಳ್ಳಿ ಡಾನ್ ಅನ್ನೋರಗತೆ ಕೇಳಿದೆ. ಅಕಿ
’ಏ…ಯಾರು ನನ್ನ ಉಸಾಬರಿ ಬರಂಗಿಲ್ಲಾ ಪಪ್ಪಾ…ಹಂಗ ನಂಗ ನಮ್ಮ ಫ್ರೇಂಡ್ಸ್ ’ನೀವೇನ್ವಾ ದೊಡ್ಡ ಮಂದಿ ಕಾರನಾಗ ಬರ್ತೀರಿ….ನಿಮ್ಮಪ್ಪ ಡ್ರೈವರನ್ ಕಳಸ್ತಾನ’ ಅಂತೇಲ್ಲಾ ಕಾಡಸ್ತಾರ ಅಂತ ಅಂದ್ಲು.
ನಾ ಅದನ್ನ ಕೇಳಿದವನ ಒಂದ ಸರತೆ flashbackಗೆ ಹೋಗಿ ನನ್ನ ಕಾಲೇಜ್ ದಿನಾ ನೆನಸಿಗೊಂಡೆ.
ನಾವ ಕಾಲೇಜ ಕಲಿಬೇಕಾರ ಯಾರರ ಬಜಾಜ ಸ್ಕೂಟರ್ ಇಲ್ಲಾ ಬೈಕ್ ತೊಗೊಂಡ ಬಂದರ ಸಾಕ
’ನೀವೇನಪಾ ದೊಡ್ಡ ಮಂದಿ ಗಾಡಿ ಒಳಗ ಬರ್ತೀರಿ’ ಅಂತ ನಾನ ಸಂಕಟಾ ಪಡ್ತಿದ್ದೆ. ಹಂಗ ಸೈಕಲ್ ತೊಗೊಂಡ ಬರೋರಿಗೂ ’ನೀವೇನಪಾ ರೊಕ್ಕ ಇದ್ದೋರ ಸೈಕಲ್ ತೊಗೊಂಡ ಬರ್ತೀರಿ’ ಅನ್ನೋ ಹಂತಾ ಪರಿಸ್ಥಿತಿ ಒಳಗ ನಾ ಕಾಲೇಜ ಕಲಿತಿದ್ದೆ . ನಾವ ಬಸ್ ಪಾಸ್ ಮಂದಿ, ಒಮ್ಮೋಮ್ಮೆ ಪಾಸಿಗೆ ರೊಕ್ಕ ಇಲ್ಲದಾಗ ಕಾಲೇಜಿಗೆ ನಡ್ಕೋತ ಹೋಗಿ ನಡ್ಕೋತ ಬರೋರ…ಇನ್ನ ಹಂತಾ ಕಾಲದಾಗ ಕಾರ ತೊಗೊಂಡ ಕಾಲೇಜಿಗೆ ಬರೋರ ಒಬ್ಬರೋ- ಇಬ್ಬರೋ ಅದು ವರ್ಷಕ್ಕ ಒಂದ್ಯಾರಡ ಸರತೆ ದೊಡ್ಡಿಸ್ತನ ಬಡಿಲಿಕ್ಕೆ ಬರ್ತಿದ್ದರ ಅನ್ನರಿ.
ನಮಗಂತೂ ಒಮ್ಮೋಮ್ಮೆ ನಡ್ಕೋತ ಹೋಗೊದರಾಗ ಒಂದನೇ ಪಿರೀಡ್ ತಪ್ಪತಿತ್ತ ಸಂಜಿಗೆ ಮನಿ ಮುಟ್ಟೋದರಾಗ ಗೋ-ಧೂಳಿ ಮುಹೂರ್ತ ಮುಗದ ಎಲ್ಲಾ ದನ-ಕರು ಮನಿ ಮುಟ್ಟಿದರು ನಾವ ಮನಿ ಮುಟ್ಟಿರ್ತಿದ್ದಿಲ್ಲಾ…
ಹಂತಾ ಪರಿಸ್ಥಿತಿ ಒಳಗ ಕಲತ, ಬಲತ ಇವತ್ತ ಮಗಳನ ಕಾರ ಒಳಗ ಕಾಲೇಜಗೆ ಕಳಸೋ ಲೇವಲ್ ಮುಟ್ಟೇನಲಾ ಅಂತ ನನಗ ಹೆಮ್ಮೆ ಅನಿಸಿದರ ತಪ್ಪೇನಿಲ್ಲಾ. ಆದರ ಇದನ್ನ ಗರ್ವ ಅಂತ ತಿಳ್ಕೊಂಡರ ಹಂಗ ತಿಳ್ಕೊಳವರದ ತಪ್ಪ.
ಇವತ್ತ ನನ್ನ ಮಗಳ ಕಾರ್ ಒಳಗ ಕಾಲೇಜಿಗೆ ಹೋಗ್ತಾಳ ಅಂದರ I should be happy and definitely feel proud about it. I and she both deserves it. ಹಂಗ ನಮ್ಮಪ್ಪ ಬಡವ ಇದ್ದಾ, ಅವಂಗ ಮಕ್ಕಳನ ಓದಸೋದ ತ್ರಾಸ ಇತ್ತು, ಆದರೂ ಹಂಗ-ಹಿಂಗ ಮಾಡಿ ಓದಿಸಿ ಮಕ್ಕಳನ ಉದ್ಧಾರ ಮಾಡಿದಾ ಅಂತ ಇವತ್ತ ನಮ್ಮಕ್ಕಳು ಕಾರನಾಗ ಅಡ್ಡಾಡಲಿಕತ್ತಾರ.
ನಾ ನನ್ನ ಮಗಳಿಗೆ
‘ಪ್ರಶಸ್ತಿ ಯಾರ ಏನ ಅಂದರೂ ನೀ ಭಾಳ ತಲಿಗೆಡಸ್ಗೊಳ್ಳಿಕ್ಕೆ ಹೋಗಬ್ಯಾಡ…ನಾನು ಮೊದ್ಲ ಮಂದಿಗೆ ಹಿಂಗ ಅಂತಿದ್ದೆ…..ನಾ ಅಂತೂ ಕಾರ ಒಳಗ ಕಾಲೇಜಿಗೆ ಹೋಗಲಿಲ್ಲಾ. ಆದರ ನನ್ನ ಮಗಳಿಗೆ ಕಳಸೋ ಅಷ್ಟರ ಜೀವನದಾಗ ಸಾಧನೆ ಮಾಡೇನಲಾ, ಖುಶಿ ಪಡ…dont worry about what others think and talk about us….. ಇವತ್ತ ನಿಂಗ ’ನೀವೇನ್ವಾ ದೊಡ್ಡ ಮಂದಿ ಕಾರನಾಗ ಅಡ್ಡಾಡ್ತಿ’ ಅಂತ ಅಂದಾರಲಾ ಅವರು ಮಕ್ಕಳು ಮುಂದ ಒಂದ ದಿವಸ ಕಾರನಾಗ ಅಡ್ಡಾಡೋ ಹಂಗ ಆಗಲಿ ಅಂತ ಅವರಿಗೆ best wishes ಹೇಳಿ ಬಿಡ’ ಅಂತ ಟಾಪಿಕ್ ಕ್ಲೊಸ್ ಮಾಡಿದೆ.
ಅನ್ನಂಗ ಎಲ್ಲಾ ಬಿಟ್ಟ ಇವತ್ತ ಯಾಕ ಈ ವಿಷಯ ನೆನಪಾತ ಅಂದರ ಇವತ್ತ ಇಕಿದ ಫಸ್ಟ ಇಯರ್ ರಿಸಲ್ಟ್ ಬಂತ…. ಹಂಗ ಬರೇ ನನ್ನ ಹೋತಿದ್ದರ ಫಸ್ಟ ಬರ್ತಿದ್ಲೋ ಏನೋ ಆದರ ’ಒಂಬತ್ತ ತಿಂಗಳ ಹೊತ್ತು- ಹೆತ್ತು -ಬೆಳಸಿ – ಹತ್ತನೇತ್ತ ಮಟಾ ಸಾಲಿ ಕಲಸೋದೊಕಿ ಅವರವ್ವನಲಾ…ಹಿಂಗಾಗಿ ಅಕಿನ್ನೂ ಒಂದ ಸ್ವಲ್ಪ ಹೋತಿದ್ದಕ 2nd rank with 97.5 % ಬಂದ್ಲ ಅನ್ನರಿ…ಇರಲಿ ಹಂಗ ನಾವ ಯಾರು ಅಕಿಗೆ ಎಷ್ಟ ಪರ್ಸೆಂಟ್ ಬಂತ ಎಷ್ಟನೇ rank ಬಂದ್ಲು ಅನ್ನೋದರ ಬಗ್ಗೆ ತಲಿಗೆಡಸಿಕೊಂಡವರಲ್ಲಾ..more over she is commerce student, ಮುಂದ ಇಂಜೀನಿಯರ್ ಮಾಡ್ಬೇಕಂತಿಲ್ಲಾ, ಡಾಕ್ಟರ್ ಮಾಡ್ಬೇಕಂತಿಲ್ಲಾ…ಅದನ್ನೇಲ್ಲಾ ಅಕಿ ಗಂಡಾ ಮಾಡ್ಕೋತಾನ ..we just want her to enjoy her college life and get some decent and basic education… ಅಷ್ಟ.
ಅದ್ಭುತ ನಿರೂಪಣೆ ಧನ್ಯವಾದಗಳು ಸಾರ್