ಈಗ ಒಂದ ಎರೆಡ ವಾರದ ಹಿಂದ ನಮ್ಮ ಸುಶೀಲೇಂದ್ರ ಕುಂದರಗಿ ಅವರ ಫೋನ್ ಮಾಡಿ
’ಹಿಂಗ ನಾವು ಮತ್ತ ಹೂಬಳ್ಳಿ ಲೇಖಕಿಯರ ಬಳಗದವರ ಸೇರಿ ಒಂದ ಲಲಿತ ಪ್ರಭಂದದ ಮ್ಯಾಲೆ ಒಂದ ವರ್ಕ್ ಶಾಪ್ ಮಾಡಬೇಕಂತ ಮಾಡೇವಿ…ಮತ್ತ ಆ ಕಾರ್ಯಕ್ರಮಕ್ಕ ನೀವ ಗೆಸ್ಟ ಅಂತ ಬರಬೇಕು’ ಅಂತ ಅಂದರು.
ಒಂದೂ ನನಗ ಹಿಂಗ ಒಟ್ಟ ಗೆಸ್ಟ-ಗಿಸ್ಟ್ ಅಂತ ಹೋಗಿ ಅಭ್ಯಾಸ ಇಲ್ಲಾ, ಮ್ಯಾಲೆ ನಂಗ ಅದ ಲೈಕು ಇಲ್ಲಾ…ಆಮ್ಯಾಲೆ ಹಿಂತಾ ಸಾಹಿತ್ಯ ಕಾರ್ಯಕ್ರಮಕ್ಕ ಅಂತೂ ಎಂದೂ ನಾ ಗೆಸ್ಟ್ ಆಗೋ ಮೆಟಿರಿಯಲ್ ಅಲ್ಲಾ….ನಾ ಭಾಳ ಸಾಹಿತ್ಯ ಓದ್ಕೊಂಡೊಂವಾ ಅಲ್ಲಾ, ನಾ ಬರದದ್ದನ್ನ ಸಾಹಿತ್ಯ ಅಂತನೂ ಅನ್ಕೊಂಡೊಂವಾ ಅಲ್ಲಾ…ನಾ ಹಿಂಗಾಗಿ ಅವರಿಗೆ ಸೂಕ್ಷ್ಮ
’ಇಲ್ಲಾ ನನಗ ಆಫೀಸ ಬಿಟ್ಟ ಬರಲಿಕ್ಕೆ ಆಗಂಗಿಲ್ಲಾ..ಹಂಗೇನರ ಸೌಡ ಸಿಕ್ಕರ ಕಾರ್ಯಕ್ರಮಕ್ಕ ಬಂದ ಹೋಗ್ತೇನಿ…ಗೆಸ್ಟ – ಗಿಸ್ಟ ಅಂತ ಏನ ಬ್ಯಾಡ’ ಅಂತ ಹೇಳಿದೆ..
’ಏ..ನಮ್ಮ ಕಾರ್ಯಕ್ರಮ ಸಂಡೇ ಅದರಿಪಾ…ಬಂದ ಹೋಗರಿ…ನೀವೇನ ಭಾಳ ಟೇನ್ಶನ್ ತೊಗೊಬ್ಯಾಡ್ರಿ..ನಿಂಬದೊಂದ ಲೇಖನಾ ಓದ್ರಿ..ಜನರಿಗೆ ಗೊತ್ತ ಆಗಲಿ ಲಲಿತ ಪ್ರಬಂಧ ಅಂದರ ಏನೂ ಅಂತ ಹೇಳಿ’ ಅಂತ ಅಂದರು.
ಅಲ್ಲಾ ನಾ ಬರೆಯೋದಕ್ಕ ಲಲಿತ ಪ್ರಬಂಧ ಅಂತ ನಂಗ ಗೊತ್ತಾಗಿದ್ದ ಒಂದ ಹತ್ತ- ಹನ್ನೆರಡ ಆರ್ಟಿಕಲ್ ಬರದ ಮ್ಯಾಲೆ ಅದು ಫಸ್ಟ ಟೈಮ್ ವಸುಧೇಂದ್ರನ ಭೇಟ್ಟಿ ಆದಾಗ
’ನೀ ಬರೆಯೋದಕ್ಕೆ ಲಲಿತ ಪ್ರಭಂಧ ಅಂತಾರ ಕಣೋ’ ಅಂತ ಗಂಗಾವತಿ ಕನ್ನಡ ಸಾಹಿತ್ಯ ಸಮ್ಮೇಳನದಾಗ ಭೇಟ್ಟಿ ಆದಾಗ ಹೇಳಿದ ಮ್ಯಾಲೆ. ಅಲ್ಲಿ ತನಕ ನಾ ಸುಮ್ಮನ ತಲ್ಯಾಗ ತಿಳಿದಿದ್ದ ಬರಿತಿದ್ದೆ ಅನ್ನರಿ. ಮುಂದ ಆ ಲಲಿತ ಪ್ರಬಂಧಗಳನ್ನ ತೊಗೊಂಡ ನನ್ನ ಒಂದನೇ ಪುಸ್ತಕ ’ಕುಟ್ಟವಲಕ್ಕಿ’ ಮಾಡಿದವರು ವಸುಧೇಂದ್ರನ ಆ ಮಾತ ಬ್ಯಾರೆ.
ಇನ್ನ ಈ ಕುಂದರಗಿಯವರ ನಂಗ ಬಿಡಂಗಿಲ್ಲಾ ಗೆಸ್ಟ್ ಕುರ್ಚಿ ಮ್ಯಾಲೆ ಕೂಡ್ಸೆ ಕೈ ತೊಳ್ಕೊರು ಅಂತ ಅನಸಿ
’ಇಲ್ಲರಿ ನಾ 28ನೇ ತಾರೀಖ ಊರಾಗ ಇರಂಗಿಲ್ಲಾ…ದಯವಿಟ್ಟ ಕ್ಷಮಸರಿ…ನಾ ಊರಿಗೆ ಹೋಗಲಿಲ್ಲಾ ಅಂದರ ಬಂದ ಹೊಗ್ತೇನಿ…ಗೆಸ್ಟ ಅಂತೇನ ಬ್ಯಾಡ..’ ಅಂತ ರಿಕ್ವೆಸ್ಟ್ ಮಾಡ್ಕೊಂಡ ಕಡಿಕೆ ಹಂಗ ನನ್ನ ಲೇಖನಾ ಯಾರರ ಕನ್ನಡ ಓದ್ಲಿಕ್ಕೆ ಬರೋರಿಗೆ ಫಂಕ್ಶನ್ ಒಳಗ ಓದ ಅಂತ ಹೇಳ್ರಿ ಇಲ್ಲಾ..ನನ್ನವ ಒಂದಿಷ್ಟ ಗಿರಮಿಟ್ ಅಂಕಣದ್ದ ’ಇಂಗ್ಲೀಷ ಮೀಡಿಯಮ್ ನಾಗ ಹುಟ್ಟಿದವರ ( ಅಂದರ ಕನ್ನಡ ಮಾತಾಡಲಿಕ್ಕೆ ಬರೋರ ಆದರ ಓದಲಿಕ್ಕೆ ಬರಲಾರದವರ) ಸಂಬಂಧ ನಾ ಮಾಡಿದ್ದ ಆಡಿಯೋ ಅವ, ಅವನ್ನ ಕಳಸ್ತೇನಿ ಅವನ್ನ ಪ್ರೋಗ್ರಮ್ ಒಳಗ ಪ್ಲೇ ಮಾಡ ಅಂತ ಹೇಳ್ರಿ ಅಂತ ಅವರಿಗೆ ಕನ್ವಿನ್ಸ್ ಮಾಡಿ ಫೋನ್ ಇಟ್ಟೆ….
ಮುಂದ ಒಂದ ವಾರ ಬಿಟ್ಟ ’ಹೂಬಳ್ಳಿ ಲೇಖಕಿಯರ ಬಳಗ’ದ ಕಾರ್ಯಧ್ಯಕ್ಷರ ಫೋನ್ ಮಾಡಿ ಮತ್ತ ಗೆಸ್ಟ ಅಂತ ಬರ್ರಿ ಅಂತ ಕರದರ, ನಾ ಮತ್ತ ಹೇಳಿದ್ದ ಕಥಿ ಹೇಳಿ ಅವರಿಗೆ ಒಂದ್ಯಾರಡ ನಾ ಗಿರಮಿಟ್ ಅಂಕಣದ ಆಡಿಯೋ ಕಳಸಿದೆ..
’ಹಂಗ ಆದರ ಕಾರ್ಯಕ್ರಮಕ್ಕ ಬಂದ ಹೋಗ್ತೇನಿ ತೊಗೊರಿ’ ಅಂತ ಹೇಳಿ ಫೋನ್ ಇಟ್ಟಿದ್ದೆ.
ಇನ್ನೇನ ಕಾರ್ಯಕ್ರಮ ನಾಳೆ ಅದ ಅನ್ನೊ ಹಿಂದಿನ ದಿವಸ ವಾಟ್ಸಪ್ ಒಳಗ ಕಾರ್ಯಧ್ಯಕ್ಷ ರೂಪಾ ಮೇಡಮ್ ಅವರದ ಕಾರ್ಯಕ್ರಮದ ಆಮಂತ್ರಣ ಪತ್ರ ಬಂತ. ನೋಡಿದರ ಅದರಾಗ ಅವರ ನನ್ನ ಹೆಸರ ಗೆಸ್ಟ ಲಿಸ್ಟ ಒಳಗ ಅದು ಸಂಪನ್ಮೂಲ ವ್ಯಕ್ತಿಗಳು ಲಿಸ್ಟ ಒಳಗ ಹಾಕಿದ್ದರ. ಅಲ್ಲಾ ನಾ ಇಷ್ಟ ಗೆಸ್ಟ ಒಲ್ಲೇ ಅಂತ ಅತಗೊಂಡರು ಮತ್ತ ಇವರ ನನ್ನ ಹೆಸರ ಹಾಕ್ಯಾರಲಾ ಅಂತ ನಂಗ ಟೆನ್ಶನ್ ಶುರು ಆತ.
ಹಂಗ ನನಗ ಯಾವದರ ಆಮಂತ್ರಣ ಪತ್ರದಾಗ ನನ್ನ ಹೆಸರ ಕಂಡರ ನಂಗ ಟೆನ್ಶನ್ ಶುರು ಆಗ್ತದ. ನನ್ನ ಹೆಸರ ಮೊದ್ಲನೇ ಸಲಾ ಆಮಂತ್ರಣ ಪತ್ರದಾಗ ಬಂದಿದ್ದ ಅಂದರ ನಮ್ಮ ಮದ್ವಿ ಆಮಂತ್ರಣ ಪತ್ರಿಕೆ ಒಳಗ ಹಿಂಗಾಗಿ ಆವಾಗಿಂದ ಎಲ್ಲೇ ಆಮಂತ್ರಣ ಪತ್ರಿಕೆ ಒಳಗ ನನ್ನ ಹೆಸರ ನೋಡಿದರ ಹೆದರಕಿ ಆಗ್ತದ.
ನಾ ಅವರಿಗೆ ಫೋನ್ ಮಾಡಿ
’ಏ…ನನ್ನ ಹೆಸರ ಹಾಕಬ್ಯಾಡಾ ಅಂತ ಹೇಳಿದ್ನಲ್ಲರಿ…ಮತ್ತ ಹಾಕಿರಿ..ನಾ ಬರೊದ ಡೌಟ….ಸಾಧ್ಯ ಆದರ ಬಂದ ಹೋಗ್ತೇನಿ….ನೀವ ಸುಮ್ಮನ ನನ್ನ ಸೆಶನ್ ಇದ್ದಾಗ ನನ್ನ ಆರ್ಟಿಕಲ್ ಆಡಿಯೋ ಪ್ಲೇ ಮಾಡಿ ಬಿಡ್ರಿ’ ಅಂತ ಹೇಳಿ ಫೋನ್ ಇಟ್ಟೆ.
ನಾ ಫೋನ್ ಒಳಗ ಮಾತೋಡದ ನನ್ನ ಹೆಂಡ್ತಿ ಕದ್ದ ಕೇಳಿಕತ್ತಿದ್ಲು, ಅಕಿಗೆ ಮುಂದಾ ಎಲ್ಲಾ ಪುರಾಣ ಹೇಳೋದ ಆತ.
’ಪಾಪ ಅವರ ನಿಮಗ ಇಂಥಾ ಮಾಡರ್ನ್ ಕಲಿಯುಗದಾಗ ಇಷ್ಟ ಕಿಮ್ಮತ್ ಕೊಟ್ಟ ಸಾಹಿತಿ ಅಂತ ಕರದಾರ ಒಂದ ಹತ್ತ ನಿಮಿಷ ಹೋಗಿ ಮುಂದ ಊರಿಗೆ ಹೋಗ್ರಿ’ ಅಂತ ಅಕಿ ಕಡೇ ಹೇಳಿಸ್ಗೊಳ್ಳೊ ಹಂಗ ಆತ.
’ಏ, ನಿಂಗ ಗೊತ್ತಾಗಂಗಿಲ್ಲಾ, ಅದ ಸಾಹಿತ್ಯದ ಕಾರ್ಯಕ್ರಮ ಮ್ಯಾಲೆ ನಂದ ಐಟೆಮ್ ಲಾಸ್ಟಿಗೆ ಅದ…ಅದಕ್ಕೂ ಮೀರಿ ಲೇಖಕಿಯರ ಬಳಗದ್ದ ಕಾರ್ಯಕ್ರಮ ಎಲ್ಲಾರೂ ಹೆಣ್ಣಮಕ್ಕಳ ಮ್ಯಾಲೆ ಲೇಖಕಿಯರ ಇನ್ನ ಅವರೇಲ್ಲಾ ಮಾತಿಗೆ ಕೂತರ ಮೂರಸಂಜಿ ಆಗಿದ್ದು ಗೊತ್ತಾಗಂಗಿಲ್ಲಾ…ಅಲ್ಲಿ ಹೋಗಿ ಏನ ಸಿಕ್ಕೋತಿ’ ಅಂತ ನಾ ಅಂದೆ.
ಅಕಿ ತಲಿ ಕೆಟ್ಟ ಒಂದ ಸರತೆ ಆ ಇನ್ವಿಟೇಶನ್ ಕಾರ್ಡ ನೋಡಿದ್ಲು. ಅದರಾಗ ನನ್ನ ಹೆಸರ ಅತಿಥಿ ಲಿಸ್ಟ ಒಳಗ ಇದ್ದಿದ್ದಿಲ್ಲಾ, ಸಂಪನ್ಮೂಲ ವ್ಯಕ್ತಿಗಳ ಲಿಸ್ಟ ಒಳಗ ಇತ್ತ. ಅದನ್ನ ನೋಡಿ
’ರ್ರೀ…ಸಂಪನ್ಮೂಲ ವ್ಯಕ್ತಿಗಳು ಅಂದರ ಏನ್ರಿ?’ ಅಂತ ಕೇಳಿದ್ಲು. ಯಪ್ಪಾ ಇಕಿ ಶುರು ಹಚಗೊಂಡ್ಲು ಇನ್ನ ಜೀವಾ ತಿಂತಾಳ ಅಂತ ಗ್ಯಾರಂಟೀ ಆತ. ನಾ ಇದ್ದದ್ದರಾಗ ನನ್ನ ಸಂಪನ್ಮೂಲ, ಸಮಾಧಾನ ಎಲ್ಲಾ ಕ್ರೂಡಿಕರಿಸ್ಗೊಂಡ ಅಂದರ ಕೂಡಿಸ್ಗೊಂಡ ಸಂಪನ್ಮೂಲ ವ್ಯಕ್ತಿ ಅಂದರ ಏನು ಅಂತ ತಿಳಿಸಿ ಹೇಳಿದೆ. ಅದನ್ನೇಲ್ಲಾ ಅಕಿ ಬಾಯಿ ತಕ್ಕೊಂಡ ಕೇಳಿ ಆಮ್ಯಾಲೆ
’ನೀವ ಯಾವಾಗಿಂದ ಸಂಪನ್ಮೂಲ ವ್ಯಕ್ತಿ ಆದರಿ?’ ಅಂದ್ಲು. ಏನ ಮಾಡ್ತೀರಿ…ಮನಿ ಹೆಂಡ್ತಿಗೆ ಗಂಡ ಸಂಪನ್ಮೂಲ ವ್ಯಕ್ತಿ ಅನಸವಲ್ಲೇ ಇಲ್ಲೇ ನೋಡಿದರ ಮಂದಿ ನನಗ ಸಂಪನ್ಮೂಲ ವ್ಯಕ್ತಿ ಅಂತ ಕರಿತಾರಲಾ ಅಂತ ನನ್ನ ಸಂಪನ್ಮೂಲದ ಬಗ್ಗೆ ನನಗ ಡೌಟ ಬಂತ ಅನ್ನರಿ. ಕಡಿಕೆ ಅಕಿನ ತಲಿಕೆಟ್ಟ
’ ಒಂದ ಹತ್ತ ನಿಮಿಷ ಹೋಗಿ ಅವರಿಗೆ ಮುಖಾ ತೋರಿಸೆರ ಹೋಗರಿ..ಪಾಪ ಕರದದ್ದಕ್ಕ ಒಂದ ಸ್ವಲ್ಪ ಕಿಮ್ಮತ್ ಕೊಡ್ರಿ….’ ಅಂತ ಜೋರ ಮಾಡಿದ್ಲು. ಮತ್ತ ಮ್ಯಾಲೆ
’ಆಷಾಡಮಾಸದಾಗ ಆ ಸುಡಗಾಡ ದಾಟಿ ಬಿಟ್ಟೀರಿ ಅದನ್ನ ತಕ್ಕೊಂಡ ಹೋಗರಿ, ನಿಮನ್ನ ನೋಡಿದವರ ಎಲ್ಲೇರ ಹೆಂಡ್ತಿ ಮತ್ತ ಹಡಿಲಿಕ್ಕೆ ಹೋಗ್ಯಾಳ ಅಂತ ತಿಳ್ಕೊಂಡ -ಗಿಳ್ಕೊಂಡಾರ…ಮ್ಯಾಲೆ ಅದ ಲೇಖಕಿಯ ಬಳಗದ ಕಾರ್ಯಕ್ರಮ ಅಂತೀರಿ’ ಅಂತ ನಂಗ ತಿಳಿಸಿ ಹೇಳಿದ್ಲು.
ನಾ ಸಿಟ್ಟಿಗೆದ್ದ ’ಲೇ ಅಲ್ಲೇ ಬಂದವರೇಲ್ಲಾ ನನ್ನ ಮೌಶಿ ವಾರ್ಗಿ ಇರ್ತಾರ’ ಅಂತ ಅನ್ನೊವ ಇದ್ದೆ…ಹೋಗ್ಲಿ ಬಿಡ ಇನ್ನ ಮಾತಿಗೆ ಮಾತ ಹತ್ತಂದರ ಮುಗಿಲಾರದ ಕಥಿ ಆಗ್ತದ ಅಂತ…
’ಏ…ಅವರ ಸಿರಿಯಸ್ ಆಗಿ ನನಗ ಸಾಹಿತಿ ಅಂತ ತಿಳ್ಕೊಂಡಾರ, ದಾಡಿ ಇದ್ದರ ಒಂದ ಸ್ವಲ್ಪ ನನಗ ಸಿರಿಯಸ್ ತೊಗೊತಾರ ಇಲ್ಲಾಂದರ ..ಇದೇಲ್ಲಿ ಕಾಲೇಜ ಹುಡುಗ ಬಂದದ ಅಂತ ಒಳಗ ಕರಕೊಳ್ಳಿಲ್ಲಾಂದರ ಹೆಂಗ’ ಅಂತ ಕನ್ವಿನ್ಸ್ ಮಾಡಿ ಕಡಿಕೂ ಒಂದ ಹತ್ತ ನಿಮಿಷದ ಸಂಬಂಧ ಕಾರ್ಯಕ್ರಮಕ್ಕ ಹೋದೆ…..
ಮುಂದ……..
ಮುಂದೇನ….ಕಾರ್ಯಕ್ರಮಕ್ಕ ಹೋದೆ…ಅವರ ನೀವ ಬಂದಿದ್ದ ಭಾಳ ಛಲೋ ಆತ ಹೆಂಗಿದ್ದರೂ ಇಲ್ಲಿ ತನಕ ಬಂದ ಬಿಟ್ಟೀರಿ…ನೀವ ಮೊದ್ಲ ಒಂದ ನಿಮ್ಮ ಪ್ರಹಸನ ಓದಿನ ಹೋಗರಿ ಅಂತ ಒತ್ತಾಯ ಮಾಡಿ ನನ್ನ ಕೈಯಲೇ…ಅಂದರ ಬಾಯಿಲೇ ಒಂದ ಪ್ರಹಸನ ಓದಿಸಿಸಿ ಕಳಸಿದರು….ಮುಂದಿನ ಕಾರ್ಯಕ್ರಮಕ್ಕ ನಾ ಇರಲಿಲ್ಲಾ. ಕುಂದರಗಿಯವರ ಅವತ್ತ ’ಈ ಕಾರ್ಯಕ್ರಮ ಮುಗದ ಮ್ಯಾಲೆ ಎಲ್ಲಾರೂ ಒಂದೊಂದು ಪ್ರಬಂಧ ಬರದ ಕೊಡ್ರಿ’ ಅಂತ ಹೇಳಿದ್ದಕ್ಕ ನಾನೂ ನಂದೂ ಒಂದ ಇರಲಿ ಅಂತ ಇಷ್ಟ ಬರದೆ….
Very nice 👌