ಈಗ ಒಂದ ವಾರದಿಂದ ನನ್ನ ಹೆಂಡ್ತಿ
’ರ್ರಿ…ಈ ವರ್ಷ ನ್ಯೂ ಇಯರಗೆ ನಾ ರೆಜುಲೇಶನ್ಸ ಏನ್ಮಾಡ್ಲೀ?” ಅಂತ ಗಂಟ ಬಿದ್ದಾಳ.
ಅಕಿ ಮಾತ ಕೇಳಿದರ ಯಾರರ ಅಕಿ ಏನ ಜೀವನದಾಗ ಎಲ್ಲಾ ಗಂಡನ ಮಾತ ಕೇಳೆ ಮಾಡ್ತಾಳಂತ ತಿಳ್ಕೊಂಡಿರಬೇಕ ಇಲ್ಲಾ ಎಷ್ಟ ಲೈಫ ಬಗ್ಗೆ ಸಿರಿಯಸ್ ಇದ್ದಾಳ ನೋಡ ವರ್ಷಾ ವರ್ಷಾ ಹೆಂಗ ರೆಜುಲೇಶನ್ಸ್ ಮಾಡ್ತಾಳ ಅಂತ ತಿಳ್ಕೋಬೇಕು ಹಂಗ ಮಾತಾಡ್ತಾಳ. ಅಲ್ಲಾ ಅಕಿಗೆ ಈ ಸುಡಗಾಡ ನ್ಯೂ ಇಯರ್ ರೆಜುಲೇಶನ್ಸ ಗೊತ್ತಾಗಿದ್ದ ನಾಲ್ಕ ಮಂದಿ ಮಾಡೋದು, ಮಾತಾಡೋದ ಕೇಳಿ. ಈಗ ಅದು ಒಂದ ಫ್ಯಾಶನ್ ಆಗೇದ ಹಿಂಗಾಗಿ ಗಂಟ ಬಿಳ್ತಾಳ.
ಹಂಗ ಇದ ಇಕಿದ ವರ್ಷಾ ಇರೋ ಕಥಿನ ಅನ್ನರಿ, ವರ್ಷಾ ಸುಳ್ಳ ಒಂದಿಲ್ಲಾ ಒಂದ ರೆಜುಲೇಶನ್ ಅಂತ ಮಾಡ್ತಾಳ, ಮುಂದ ಯುಗಾದಿ ಬರೋದರಾಗ ಅವು ಹಳ್ಳಾ ಹಿಡದಿರ್ತಾವ ನಾ ’ಕ್ಯಾ ಹುವಾ ತೇರಾ ವಾದಾ’ ಅಂದರ,
“ನಮ್ಮ ಹಿಂದೂ ಸಂಸ್ಕೃತಿ ಪ್ರಕಾರ ನಮಗ ಯುಗಾದಿ ಹೊಸಾ ವರ್ಷ, ಕ್ಯಾಲೆಂಡರ ಇಯರ ಸಂಬಂದಿಲ್ಲಾ” ಅಂತ ಕಡ್ಡಿ ಮುರದಂಗ ಉತ್ತರಾ ಕೊಟ್ಟ ಬಿಡ್ತಾಳ..ಅವತ್ತಿಗೆ ಅಕಿ ನ್ಯೂ ಇಯರ ರೆಜುಲೇಶನ್ಸ ಎಲ್ಲಾ ಊರಲ ಹಾಕೋತಾವ.
ಹಂಗ ಮದ್ವಿ ಆದ ಹೋಸ್ದಾಗಿ ನಂಗೂ ಗಂಟ ಬಿದ್ದಿದ್ಲು, ರ್ರೀ..ನೀವು ಏನರ ರೆಜುಲೇಶನ್ಸ್ ಮಾಡ್ರಿ ಅಂತ, ಅದು ಅಕಿ ಫ್ರೇಂಡ್ಸಗೊಳ ಮಾತ ಕೇಳಿ ಗಂಟ ಬಿಳೋಕಿ.
ಒಬ್ಬೋಕಿ ’ನನ್ನ ಗಂಡ ಈ ವರ್ಷದಿಂದ ಹಾಟ್ ತೊಗೊಳಂಗಿಲ್ಲಾ ಅಂತ ರೆಜುಲೇಶನ್ಸ್ ಮಾಡ್ಯಾನ’ ಅನ್ನೋಕಿ
ಇನ್ನೊಬ್ಬಕಿ ಗಂಡಾ ನಾನ್ ವೆಜ್ ಬಿಡ್ತೇನಿ ಅಂದನಂತ,
ಮತ್ತೋಬ್ಬಕಿ ಗಂಡಾ ’ನಾ ಚೀಟ ಬಿಡ್ತೇನಿ’ ಅಂತ ಅಂದನಂತ…. ಹಿಂಗ ಅವರದೇಲ್ಲಾ ಕೇಳಿ
“ರ್ರಿ…ನೀವ ಏನ ಬಿಡ್ತೇರಿ” ಅಂದ್ಲು..ನಾ ತಲಿ ಕೆಟ್ಟ
’ನಾ ಮುಂದಿನ ವರ್ಷ ಹೆಂಡ್ತಿನ್ನ ಬಿಡ್ತೇನಿ’ ಅಂದೆ, ತೊಗೊ ಅಕಿಗೆ ಸಿಟ್ಟ ನೆತ್ತಿಗೇರತ …..ಅಷ್ಟರಾಗ ನಮ್ಮ ಮಾತ ಕದ್ದ ಕೇಳ್ಕೋತ ಇದ್ದ ನಮ್ಮವ್ವ ಸುಮ್ಮನ ಕೂಡಬೇಕೊ ಬ್ಯಾಡೊ
“ಅಯ್ಯ ಮೊನ್ನೆನ ಮದ್ವಿ ಆಗೇದ, ನೀ ವರ್ಷ ತುಂಬೊದರಾಗ ಹೆಂಡ್ತಿ ಬಿಟ್ಟರ ಹೆಂಗ, ಒಂದ ಎರಡ ಹಡದರ ಹಡಿಲಿ ತಡಿ…ಇಷ್ಟ ಲಗೂ ಬಿಟ್ಟರ ಮಂದಿ ಏನ ತಿಳ್ಕೋತಾರ” ಅಂತ ಚಾಷ್ಟಿ ಮಾಡಿದ್ಲು.
ನನ್ನ ಹೆಂಡ್ತಿಗೆ ಇನ್ನೂ ಸಿಟ್ಟ ಬಂದ ’ತಾಯಿ ಮಗಾ ಇಬ್ಬರೂ ಭಾಳ ಶಾಣ್ಯಾರಿದ್ದೀರಿ ತೊಗೊ…. ನಾ ಮುಂದಿನ ವರ್ಷ ನಿಮ್ಮಿಬ್ಬರನೂ ಬಿಟ್ಟ ತವರಮನಿಗೆ ಹೋಗ್ತೇನಿ ’ ಅಂತ ನನ್ನ ಮಾರಿ ತಿವದ ಹೋದ್ಲು.
ಅಲ್ಲಾ ಹಂಗ ಗಂಡಂದರಿಗೆ ಸಪರೇಟ್ ರೆಜುಲೇಶನ್ಸ್ ಮಾಡಬೇಕಂತ ಇರಂಗಿಲ್ಲರಿ, ಹೆಂಡ್ತಿ ಏನ ಅಂತಾಳ ಅದನ್ನ ಕೇಳಕೊಂಡ ಬದಕತಿರಬೇಕಾರ ಮತ್ತೆಲ್ಲಿ ರೆಜುಲೇಶನ್ಸ ಅಂತೇನಿ. ಅಕಿ ಮಾಡಿದ್ದ ರೆಜುಲೇಶನ್ ಅಕಿ ಹೇಳಿದ್ದ ರೂಲ್ಸ & ರೆಗುಲೇಶನ್.
ಹಂಗ ನಾ 2000ದಾಗ ಲಗ್ನ ಆದ ಮ್ಯಾಲೆ 2001 ರಾಗ ಒಂದ ಹಡಿತೇನಿ ಅಂತ ರೆಜುಲೇಶನ್ ಮಾಡಿದ್ದೆ ಆದರ ಏನ್ಮಾಡೋದು ನನ್ನ ಹೆಂಡತಿ
’ನಾ 2001ರಾಗ ಏನ ಆದರೂ ಹಡಿಯಂಗಿಲ್ಲಾ, ಲಗ್ನಾಗಿ ಒಂದ್ಯಾರಡ ವರ್ಷ ಎಂಜಾಯ್ ಮಾಡಬೇಕು, ಪುರಸತ್ತ ಇಲ್ಲದ ಹಡಿಬಾರದು’ ಅಂತ ರೆಜುಲೇಶನ್ ಮಾಡಿದ್ಲು…so…2001ರಾಗ ಆಗಲಿಲ್ಲಾ..ನನ್ನ ರೆಜುಲೇಶನ್ ಫೇಲ್ ಆತ……ಅಲ್ಲಾ ನನ್ನ ಕೈಯಾಗ ಏನದ ಅಕಿ ಹಡಿಯೋಕಿ ಹಿಂಗಾಗಿ ಅಕಿದ ನಡಿತದ.
ಮುಂದ 2002ರಾಗ ಅಕಿ ’ನಾ ಈ ವರ್ಷದಾಗ ಒಂದ ಮಿನಿಮಮ್ ಗ್ಯಾರಂಟೀ ಹಡಿತೇನಿ’ ಅಂತ ರೆಜುಲೇಶನ್ ಮಾಡಿದ್ಲು, ಯಾಕ ನಿಂದ ಎಂಜಾಯಮೆಂಟ್ ಸಾಕಾತೇನ ಅಂದೆ… ’ಇಲ್ಲಾ ಹಂಗ ಭಾಳ ಲೇಟ್ ಮಾಡಿದರ ಮುಂದ ಬೇಕ ಅಂದಾಗ ಆಗೋದ ತ್ರಾಸ ಆಗ್ತದ ಅದಕ್ಕ ಈ ವರ್ಷ ಏನ ಆಗ್ಲಿ ಒಂದ ಆಗೋದ ಅಂತ ರೆಜುಲೇಶನ್ ಮಾಡೇನಿ’ ಅಂದ್ಲು.
ಮತ್ತ ಅಕಿ ಹೇಳಿದಂಗ ಕರೆಕ್ಟ ಡೆಡ್ ಲೈನ ಇನ್ನೇನ ಮುಗಿಲಿಕ್ಕೆ ಬಂದದ ಅನ್ನೋದರಾಗ ಡಿಸೆಂಬರ 13ಕ್ಕ ಒಂದ ಹಡದ್ಲು. ಹಂಗ ಅಕಿದ ಡಿಲೇವರಿ ಡೇಟ ಜನೇವರಿ ಒಳಗ ಅಂತ ಡಾಕ್ಟರ್ ಹೇಳಿದ್ದರ ಖರೆ ಆದರ ಇಕಿ ಎಲ್ಲೆ ರೆಜುಲೇಶನ್ ತಪ್ಪತದ ಅಂತ ಡೆಸೆಂಬರದಾಗ ಸಿಜರಿನ್ ಮಾಡಿಸ್ಗೊಂಡ ಒಂದ ಗಂಡ ಹಡದ ಬಿಟ್ಲು….ಅಲ್ಲಾ ರೆಜುಲೇಶನ್ ಇಂಪ್ಲಿಮೆಂಟ್ ಮಾಡೋದ ಇಂಪಾರ್ಟೇಂಟ್ ಇತ್ತ ಅಕಿಗೆ.
ಹಂಗ ಮುಂದ ಆರ ವರ್ಷ ಸುಳ್ಳ ಕೆಲಸಕ್ಕ ಬರಲಾರದ್ದು, ಆಗಲಾರದ್ದು ಹೋಗಲಾರದ್ದು ನೂರಾ ಎಂಟ ರೆಜುಲೇಶನ್ ಮಾಡ್ತಿದ್ಲು, ಮತ್ತ ನಾ ಮೊದ್ಲ್ ಹೇಳಿದ್ನೆಲ್ಲಾ ಯುಗಾದಿ ಬರೋದರಾಗ ಅವನ್ನ ಮರತ ಬಿಡ್ತಿದ್ದಳು.
ಮುಂದ 2008ರ ಡಿಸೆಂಬರನಾಗ ’ನಾ ಮುಂದಿನ ವರ್ಷ ಎರಡನೇದ ಹಡಿತೇನ ನೋಡ್ರಿ’ ಅಂತ ರೆಜುಲೇಶನ್ ಮಾಡಿದ್ಲು….ಅದನ್ನ ಕೇಳಿ ನಾ
’ಲೇ..ಹುಚ್ಚಿ ಅದನ್ನೇನ ರೆಜುಲೇಶನ್ ಮಾಡ್ತೀಲೇ ಈಗಾಗಲೇ ನಿಂಗ ಎಂಟರಾಗ ಬಿದ್ದದ ಹಡಿಲಾರದ ಏನ ಹಂಗ ಇಟಗೊಂಡ ಕೂಡ್ತಿ ಏನ’ ಅಂತ ನಾ ಬೈದರ
’ಅಲ್ಲರಿ..ಈ ಸರತೆ ನಾ ಹೆಣ್ಣ ಹಡಿತೇನಿ, ಹಂಗ ಇದ ಗಂಡ ಆದರ ಮತ್ತ ಡಿಸೆಂಬರ್ ಮುಗಿಯೋದರಾಗ ಹೆಣ್ಣ ಹಡೀತೇನಿ ನೋಡ್ರಿ ಬೇಕಾರ’ ಅಂದ್ಲು….ನಂಗ ಇಕಿ ಒಂದ ವರ್ಷದಾಗ ಅಂದರ ಒಂದ ಕ್ಯಾಲೇಂಡರ್ ಇಯರ ದಾಗ ಎರಡ ಹಡಿತಾಳ ಅಂತ ಕೇಳಿ ಖುಷಿ ಆತ ಖರೆ ಆದರ ಮೂರನೇದ ಏನರ ಡಿಲೇವರಿ ಆದ್ರ ಅದರ ಖರ್ಚ, ಬಾಣಂತನ ನಮಗೇನ ಸಂಬಂಧ ಇಲ್ಲಾ ಅಂತ ಬೀಗರ 2000ದಾಗ ಮಾತುಕತಿ ಒಳಗ ಹೇಳಿ ಬಿಟ್ಟಿದ್ದರು, ಇನ್ನ ಮೂರನೇದ ಆದರ ನನ್ನ ಮೈಮ್ಯಾಲೆ ಅಂತ ನಂಗ ಹೆದರಕಿ ಹತ್ತ.
ಆದರ ಇಕಿ ಜನೇವರಿ ಒಳಗ ಹೆಣ್ಣ ಹಡದ ರೆಜುಲೇಶನ್ ಕ್ಲೋಸ್ ಮಾಡಿ ಬಿಟ್ಟಳು. ನಾ ಉಳ್ಕೊಂಡೆ.
ಮುಂದ 2010ಕ್ಕ ’ನಮಗಿನ್ನ ಮಕ್ಕಳ ಸಾಕು, ನಾವು ಹಡೆಯಂಗಿಲ್ಲಾ’ ಅಂತ ರೆಜುಲೇಶನ್ ಮಾಡಿದ್ಲು.
ನಂಗ ಹಂಗ ಇಕಿ ನನ್ನೂ ಹಿಡಕೊಂಡ ರೆಜುಲೇಶನ್ ಮಾಡಿದ್ದಕ್ಕ ತಲಿ ಕೆಡ್ತ,
’ಲೇ..ನಿಂದ ನೀ ಏನರ ಮಾಡ್ಕೋ, ನನ್ನ ಯಾಕ ನಿನ್ನ ರೆಜುಲೇಶನ್ ಒಳಗ ತರತಿ. ನೀ ಬೇಕಾರ ಹಡಿ ಬ್ಯಾಡಾರ ಬಿಡ’ ಅಂತ ನಾ ಅಂದರ..’ಅಲ್ಲಾ ನಾನ ಹಡಿಲಿಲ್ಲಾ ಅಂದರ ನಿಮಗೇಲ್ಲ ಮಕ್ಕಳಾಗ್ತಾವರಿ, ಹಿಂಗಾಗಿ ಇದು ಇಬ್ಬರಿಗೂ ಲಾಗೂ’ ಅಂದ್ಲು….
ಈ ಸರತೆ ಮತ್ತ ನಮ್ಮವ್ವ ನಡಕ ಹಿರೇತನಾ ಮಾಡಿ ಅಡ್ಡ ಬಾಯಿ ಹಾಕಿ
’ಹೇಲೋ…ಡಿಯರ್ ಸೊಸಿ ಮುದ್ದು…. ಆಪರೇಶನ್ ನಿಂದ ಆಗೋದ….ನನ್ನ ಮಗಂದ ಅಲ್ಲಾ…ನಿಂಗ ಮಕ್ಕಳಾಗಲಿಕ್ಕಿಲ್ಲಾ, ಪ್ರಶಾಂತಗ ಆಗಬಹುದು, ಭಾಳ ಹಾರಾಡ ಬ್ಯಾಡ’ ಅಂತ ತಿಳಿಸಿ ಹೇಳಿದ್ಲು…
ಅಕಿ ತಲಿ ಕೆಟ್ಟ ’ಒಂದ ಯಾಕ ಹತ್ತ ಮದ್ವಿ ಮಾಡ್ಕೊಂಡ ಇಪ್ಪತ್ತ ಹಡ್ಕೋರಿ ನಿಮಗ್ಯಾರ ಬ್ಯಾಡ ಅಂದಾರ, ಛಂದಾಗಿ ಇದ್ದ ಒಂದ ಹೆಂಡ್ತಿ ಎರಡ ಮಕ್ಕಳನ ಸಾಕಲಿಕ್ಕೆ ದಮ್ಮ ಇಲ್ಲಾ, ಮಾತ ಕೇಳ್ರಿ ಮಾತ…ತಾಯಿ ಮಗಾ ಕೂಡಿ ದೊಡ್ಡ ದೊಡ್ಡ ಮಾತಾಡ್ತಾರ’ ಅಂತ ಒದರಿದ್ಲು…ಅಲ್ಲಾ ನಮ್ಮವ್ವನೂ ಸುಮ್ಮನ ಕೂಡಂಗಿಲ್ಲ ಬಿಡ್ರಿ…ಎಲ್ಲರ ಗಂಡಾ ಹೆಂಡತಿ ನಡಕ ಬೆಂಕಿ ಹಚ್ಚೋಕಿ.
ನಾ ನನ್ನ ಹೆಂಡ್ತಿಗೆ ತಿಳಿಸಿ ಹೇಳಿದೆ, ನೋಡಿಲ್ಲೆ ರೆಜುಲೇಶನ್ ಅಂದರ ಚಟಾ ಬಿಡೋದು, ಹಡಿಯೋದ ಇಷ್ಟ ಇರಂಗಿಲ್ಲಾ ಇನ್ನೂ ಭಾಳ ಇರ್ತಾವ ನೀ ಬೇಕಾರ ವೇಟ್ ಕಡಮಿ ಮಾಡ್ತೇನಿ ಅಂತ ರೆಜುಲೇಶನ್ ಮಾಡ, ಏನಿಲ್ಲದ ಹಡದದ್ದ ಎರಡ ಇದ್ದರೂ ಏಳ ಮಕ್ಕಳ ತಾಯಿ ಕಂಡಂಗ ಕಾಣ್ತಿ, ದಿವಸಾ ಜಾಗಿಂಗ ಹೋಗ್ತೇನಿ ಅಂತ ರೆಜುಲೇಶನ್ ಮಾಡು, ವಾರದಾಗ ಮೂರ ದಿವಸ ಜಂಕ್ ಫುಡ್ ತಿನ್ನಂಗಿಲ್ಲಾ ಅಂತ ರೆಜುಲೇಶನ್ ಮಾಡು, ಗಂಡನ ಜೀವಾ ಇನ್ನ ಮುಂದ ತಿನ್ನಂಗಿಲ್ಲಾಂತ ಮಾಡು….ಹಂಗ ಜೀವನದಾಗ ಭಾಳ ಇಂಪಾರ್ಟೆಂಟ್ ಇಶ್ಯು ಇರ್ತಾವ ಅವನ್ನೇಲ್ಲಾ ಬಿಟ್ಟ ಹಿಂತ ನೈಸರ್ಗಿಕ ವಿಷಯಕ್ಕ ಯಾಕ ತಲಿಕೆಡಸಿಗೋತಿ ಅಂತ ಕನ್ವಿನ್ಸ ಮಾಡಿದೆ.
ಆವಾಗಿಂದ ನನ್ನ ಹೆಂಡ್ತಿ ಜನೇವರಿಯಿಂದ ಹೊಸಾ ಹೊಸಾ ರೆಜುಲೇಶನ್ ಮಾಡೋಕಿ ಮತ್ತ ಮುಂದ ಯುಗಾದಿ ಬಂದ ಕೂಡ್ಲೇ ಅವಕ್ಕ ಎಳ್ಳು ನೀರೂ ಬಿಡೋಕಿ..ಮತ್ತ ಡಿಸೆಂಬರ ಬಂದ ಕೂಡ್ಲೆ ’ಎನ್ ರೆಜುಲೇಶನ್ ಮಾಡ್ಲಿ’ ಅಂತ ಕೇಳೋಕಿ.
ಹೋದ ವರ್ಷ at least ಮೂರರಿಂದ- ಐದ ಕೆ.ಜಿ ತೂಕಾ ಕಡಮಿ ಮಾಡ್ತೇನಿ ಅಂತ ರೆಜುಲೇಶನ್ ಮಾಡಿ ಐದರಿಂದ – ಎಂಟ ಕೆ.ಜಿ ತೂಕ ಏರಿಸ್ಕೊಂಡ್ಳು, ಅಲ್ಲಾ ಅಕಿ ದೇಹ ಅಕಿ ಹೆಲ್ಥ ಖರೆ ಆದರ ಸಂಸಾರದ ಭಾರ ಹೋರೊಂವ ನಾನ ಅಲಾ.
ನಾ ಅದಕ್ಕ ಅಕಿಗೆ ಈ ವರ್ಷ ’ನಂಗ ಹೆಂಗ ಬೇಕ ಹಂಗ ನಾ ಬದಕತೇನಿ..ನಿಂಗ ಹೆಂಗ ಬೇಕ ಹಂಗ ನೀ ಬದಕ. ಯಾ ಸುಡಗಾಡ ರೆಜುಲೇಶನ್ ಮಾಡೋದು ಬ್ಯಾಡಾ. ಹಂಗ ನೀ ಮುಂದಿನ ವರ್ಷದಿಂದ ಯಾವದು ರೆಜುಲೇಶನ್ ಮಾಡಂಗಿಲ್ಲಾ ಅಂತ ರೆಜುಲೇಶನ್ ಮಾಡಿಬಿಡ’ ಅಂತ ಹೇಳೇನಿ.
ಅಲ್ಲಾ ಎದಿ ಉದ್ದ ಮಕ್ಕಳ ಬೆಳದಾವ ಇನ್ನೆಲ್ಲಿ ರೆಜುಲೇಶನ್ಸ್ ಅಂತೇನಿ, ಇನ್ನೇನಿದ್ದರು ಮಕ್ಕಳ ರೆಜುಲೇಶನ್ಸ್ ಮಾಡಬೇಕ……ಅನ್ನಂಗ ನೀವೇನ ರೆಜುಲೇಶನ್ಸ್ ಮಾಡ್ತೀರಿ ಹೊಸಾ ವರ್ಷಕ್ಕ?
Resolutions