ಒಂದ ತಿಂಗಳ ಹಿಂದಿನ ಮಾತ ಇರಬೇಕು, ಒಂದ ದಿವಸ ನಮ್ಮ ಉಷಕ್ಕಜ್ಜಿ ಫೋನ ಬಂತ. ಹಂಗ ನೋಡಿದರ ಅಕಿ ನಮ್ಮವ್ವಗ ಅಜ್ಜಿ ಆಗಬೇಕ ಆದರ ವಯಸ್ಸಿನಾಗ ನಮ್ಮವ್ವನ ಕಿಂತ ಒಂದ ಮೂರ ವರ್ಷ ಇಷ್ಟ ದೊಡ್ಡೊಕಿ. ಮ್ಯಾಲೆ ಅಕಿ ಮಗಾ ನನ್ನ ವಾರ್ಗಿ ಇದ್ದಾ. ಹಿಂಗಾಗಿ ನಾ ಅಕಿಗೆ ಮೌಶಿ ಅನ್ನಲೋ, ಅಜ್ಜಿ ಅನ್ನಲೋ ಇಲ್ಲಾ ಮುತ್ತಜ್ಜಿ ಅನ್ನಲೋ ಅಂತ ತಲಿ ಕೆಡಸಿಕೊಂಡ ಕಡಿಕೆ ಅಜ್ಜಿ ಅಂತ ಫೈನಲ್ ಮಾಡಿದ್ದೆ. ಹಂಗ ಅಕಿ ಪುಣೆದಾಗ ಇರ್ತಾಳ ಆವಾಗ ಇವಾಗ ಮಗಾ ಸೊಸಿ ಬ್ಯಾಸರಾದೋಗೊಮ್ಮೆ ಕರ್ನಾಟಕಕ್ಕ ಮಗಳ ಮನಿಗೆ ಬಂದಿರ್ತಾಳ.
ಇನ್ನ ಇತ್ತಲಾಗ ಬಂದಾಗೊಮ್ಮೆ ಅಕಿಗೆ ಇಲ್ಲಿ ಖಬರ ಎಲ್ಲಾ ಬೇಕಾಗ್ತದ. ಹಾನಗಲ್ಲಾಗ ಇನ್ನೂ ಯಾರ ಯಾರ ಜೀವಂತ ಇದ್ದಾರ. ಧಾರವಾಡದಾಗ ಮತ್ತ ಯಾರದ ಲಗ್ನ ಆತು. ಹುಬ್ಬಳ್ಳ್ಯಾಗ ಮತ್ತ ಯಾರರ ಹಡದಾರೇನು. ಎಷ್ಟ ಮಂದಿ ರಿಟೈರ್ಡ್ ಆದಮ್ಯಾಲೆ ಬೆಂಗಳೂರಾಗ ಸೆಟ್ಲ ಆಗ್ಯಾರ. ಎಲ್ಲಾ ಉಸಾಬರಿ ಮಾಡ್ಕೊಂಡ ಮತ್ತ ಪೂಣಾಕ ಜಿಗದ ಬಿಡ್ತಾಳ.
ಒಮ್ಮೆ ಅಕಿ ಅಲ್ಲೇ ಹೋಗಿ ಸೆಟ್ಲ್ ಆದ್ಲಂದರ ಮುಗಿತ. ಮುಂದ ಇತ್ತಲಾಗಿನವರ ಸತ್ತರ ಮಾತಾಡಸಲಿಕ್ಕೆ ಬರಂಗಿಲ್ಲಾ, ಹುಟ್ಟಿದರ ಹೆಸರ ಇಡಲಿಕ್ಕೆ ಬರಂಗಿಲ್ಲಾ. ಹಂಗ ಮೊನ್ನೆ ಕರ್ನಾಟಕಕ್ಕ ಬಂದಾಗ ಸಹಜ ಮಾತಾಡಿದರಾತು ಅಂತ ನಮ್ಮವ್ವಗ ಫೋನ ಮಾಡಿದ್ಲು. ಅದು ಇದು ಮಾತಾಡ್ಕೊತ ’ನಿನಗ ಮೊಮ್ಮಕ್ಕಳ ಎಷ್ಟವಾ ಸಿಂಧು’ ಅಂತ ಕೇಳಿದ್ಲಂತ. ನಮ್ಮವ್ವ ’ಮೂರವಾ’ ಅಂತ ಅಂದರ ’ಅಯ್ಯ ಹೋದ ವರ್ಷ ಬಂದಾಗೂ ಮೂರ ಅಂದಿದ್ದಿ’ ಅಂತ ಅಂದ್ಲಂತ. ಅಲ್ಲಾ ಇಕಿ ಏನ ಹುಬ್ಬಳ್ಳಿ ಧಾರವಾಡ ಮಂದಿಗೆ ಬ್ಯಾರೆ ಕೆಲಸ ಇಲ್ಲಾ ವರ್ಷಾ ಹಡಿತಾರಂತ ತಿಳ್ಕೊಂಡಾಳೋ ಏನೋ ಅಂತೇನಿ. ಅಲ್ಲಾ ಅಕಿ ಮಗಾ ಇಪ್ಪತ್ತ ವರ್ಷದಾಗ ಒಂದ ಹಡದಾನ ಅವನ್ನ ಕೇಳೋದ ಬಿಟ್ಟ ಊರ ಮಂದಿ ಉಸಾಬರಿ ಮಾಡೋಕಿ ಬಿಡ್ರಿ. ಕಡಿಕೆ ಅದು ಇದು ಮಾತಾಡ್ಕೋತ
’ಅನ್ನಂಗ ಮಂದಾಕಿನಿ ಒಬ್ಬೋಕಿ ಹೋದ್ಲವಾ, ನಿಂಗ ಸುದ್ದಿ ಗೊತ್ತದನೋ ಇಲ್ಲೋ’ ಅಂತ ಕೇಳಿದ್ಲಂತ. ಮಂದಾಕಿನಿ ಅಕಿಗೆ ಅಕ್ಕಾ, ಹಂಗ ಅಕಿನೂ ಈ ಕಡೆದೋಕಿ ಆದರ ನಾಗಪುರದಾಗ ಸೆಟ್ಲ ಆಗಿ ಒಂದ ನಲವತ್ತ ವರ್ಷದ ಮ್ಯಾಲೆ ಆಗಿತ್ತು. ಆದರ ಇತ್ಲಾಗ ಬಂದಾಗೊಮ್ಮೆ ನಮ್ಮ ಮನಿಗೆ ಹಾದ ನಮ್ಮನ್ನೇಲ್ಲಾ ಮಾತಾಡಿಸಿ ಹೋಗ್ತಿದ್ಲು. ಇತ್ತೀಚಿಗೆ ಪಾಪ ಅಕಿಗೂ ಆರಾಮ ಇರ್ತಿದ್ದಿಲ್ಲಾ, ಹೋದ್ಲು.
ಪಾಪ ನಮ್ಮವ್ವಗ ಮಂದಾಕಿನಿ ಅಜ್ಜಿ ಸತ್ತಿದ್ದ ಸುದ್ದಿ ಕೇಳಿ ಕೆಟ್ಟ ಅನಸ್ತ. ’ಅಯ್ಯ ನಮ್ಮವ್ವ ನಮಗ್ಯಾರೂ ಹೇಳಲೇ ಇಲ್ಲಲ’ ಅಂತ ಅಂದರ ಅಕಿ
“ಅಯ್ಯ..ಫೇಸಬುಕ್ಕಿನಾಗ ಅಕಿ ಮಗಾ ಹಾಕಿದ್ನಲಾ..ನೋಡಿಲ್ಲೇನ” ಅಂತ ಅಂದ್ಲಂತ.
ಅಲ್ಲಾ, ನನ್ನ ಹೆಂಡ್ತಿನ ಫೇಸಬುಕ್ಕಿನಾಗ ಇಲ್ಲಾ ಇನ್ನ ನಮ್ಮವ್ವ ಎಲ್ಲೇ ಫೇಸಬುಕ್ಕಿನಾಗ ಇರ್ತಾಳ. ಪಾಪ ನಮ್ಮವ್ವೇನ ಇನ್ನ ತನ್ನ ಪೈಕಿ ಯಾರ ಸತ್ತರ ಅಂತ ನೋಡಲಿಕ್ಕೆ ಫೇಸಬುಕ್ ಅಕೌಂಟ ಓಪನ್ ಮಾಡಬೇಕ?
ಅಲ್ಲಾ ಹಂಗ ಇತ್ತಿಚೀಗೆ ಜನಾ ಪೇಪರನಾಗ ನಿಧನ ವಾರ್ತೆಗಳು ಒಳಗ ಕೊಡೊಕಿಂತ ಮೊದ್ಲ ಫೇಸಬುಕ್ಕಿನಾಗ ಅಪಡೇಟ್ ಮಾಡ್ತಾರ. ಅಲ್ಲೇ ಹಾಕಿದರ ಮುಗಿತ ಬಿಡ್ರಿ ಪೇಪರಗಿಂತಾ ಜಾಸ್ತಿ ರೀಚ್ ಆಗ್ತದ ಆ ಮಾತ ಬ್ಯಾರೆ. ಹಂಗ ನಾನೂ ನಮ್ಮಜ್ಜಿ, ನಮ್ಮಪ್ಪ ಸತ್ತಾಗ ಫೇಸಬುಕ್ಕಿನಾಗ ಹಾಕಿದ್ದೆ ಖರೇ ಆದರ ಪೇಪರನಾಗೂ ಹಾಕಸಿದ್ದೆ. ನಂಗೊತ್ತ ನಮ್ಮ ಪೈಕಿ ಜನಾ ಫೇಸಬುಕ್ಕಿನಾಗ ಕಡಮಿ ಇದ್ದಾರ, ಅವರಿಗೇಲ್ಲಾ ಪೇಪರನಾಗ ನಿಧನ ವಾರ್ತೆಗಳು ಒಳಗ ಬಂದರಿಷ್ಟ ಸತ್ತಂಗ ಅಂತ.
ಒಮ್ಮೊಮ್ಮೆ ಅಂತು ಸತ್ತ ಎರಡ ದಿವಸಾದ ಮ್ಯಾಲೆ ಸಹಿತ ’ನಿಧನ ವಾರ್ತೆಗಳು’ ಒಳಗ ಹಿಂತಾವರು ಹಿಂತಾ ದಿವಸ ಹಿಂಗ, ಹಿಂತಿಂತಾವರನ ಬಿಟ್ಟ ಹೋದರು ಅಂತ ಪೇಪರನಾಗ ಕೊಡ್ತೇವಿ.
ಇನ್ನ ನಾವ ಹಾಕ್ಸೋದ ನಮ್ಮ ಲೋಕಲ್ ಪೇಪರಗಾನ. ಅದು ಬ್ಯಾರೆ ಊರ ಮಂದಿಗೆ ಗೊತ್ತಾಗಂಗಿಲ್ಲಾ, ಇನ್ನ ಅವರ ಅಲ್ಲೇ ಪೇಪರನಾಗ ಹಾಕ್ಸಿದರ ಅದು ನಮಗ ಗೊತ್ತಾಗಂಗಿಲ್ಲಾ. ಹಿಂಗಾಗಿ ಫೇಸಬುಕ್ಕಿನಾಗ ಹಾಕಿ ಬಿಟ್ಟರ ಎಲ್ಲಾರಿಗೂ ಗೊತ್ತಾಗತದ ಅಂತ ಅನ್ನೋದು ಒಪ್ಗೋಳೊ ವಿಚಾರನ.
ಹಂಗ ನಮ್ಮ ಪೈಕಿ ಯಾರರ ಈ ಕಡೆ ಹುಟ್ಟಿ ಬೆಳದ ಬ್ಯಾರೆ ರಾಜ್ಯದಾಗ ತೀರ್ಕೊಂಡಾಗ ಅವರು ’ಮುಕ್ತಿ ಧಾಮ’ ಬುಕ್ ಮಾಡೋಕಿಂತ ಮೊದ್ಲ ನಂಗ ಫೋನ ಮಾಡ್ತಾರ.
ನಾ “ನೀವೇಲ್ಲಾ ಮುಗಸರಿ ನಮಗೇನ ಈಗ ಗಾಡಿ ಖರ್ಚ ಮೈಮ್ಯಾಲೆ ಹಾಕ್ಕೊಂಡ ಬರಲಿಕ್ಕೆ ಆಗಂಗಿಲ್ಲಾ, ನಾವು ಮುಂದ ಧರ್ಮೋದಕಕ್ಕ ಬರ್ತೇವಿ” ಅಂದರ
“ಏ, ಮಾರಾಯಾ, ನೀ ಏನ ಬರೋದ ಬ್ಯಾಡಾ, ಆದರ ನಮ್ಮಪ್ಪಾ ಆ ಕಡೆ ಮನಷ್ಯಾ, ಅದಕ್ಕ ನಮ್ಮೂರ ಮಂದಿಗೆ ಗೊತ್ತಾಗಲಿ, ನೀ ಒಂದ ಸ್ವಲ್ಪ ಪೇಪರನಾಗ ನಿಧನ ವಾರ್ತೆಗಳು ಒಳಗ ಹಾಕಿಸಿ ನಮ್ಮಪ್ಪನ ಆತ್ಮಕ್ಕ ಶಾಂತಿ ಕೊಡಸಪಾ” ಅಂತ ಹೇಳ್ತಾರ. ನಾ ’ಇಷ್ಟ ಅಲಾ, ಅದೇನ ದೊಡ್ಡ ಕೆಲಸ ತೊಗೊ’ ಅಂತ ಅಗದಿ ಛಂದಾಗಿ ಡ್ರಾಫ್ಟ ಮಾಡಿ ವಾಟ್ಸಪನಾಗ ಒಂದ ಫೋಟೊ ತರಿಸಿಗೊಂಡ ಕಳಸ್ತಿರ್ತೇನಿ, ಅಲ್ಲಾ ಹಂಗ ನಾ ಒಂದ ಫಾರ್ಮೆಟ್ ರೆಡಿನ ಇಟ್ಟೇನಿ ಅದರಾಗ ಬರೆ ಹೆಸರ, ಸಾಕಿನ, ದಿನಾಂಕ, ಎಷ್ಟ ಮಕ್ಕಳ ಅಂತ ತುಂಬಿ ಕಳಸಿದರ ಮುಗದ ಹೋತ.
ಹಂಗ ಮೊದ್ಲ ಬರೇ ನಾ ಫೋನ ಮಾಡಿ ಹೇಳಿದರ ಪೇಪರನವರ ಹಾಕೋತಿದ್ದರು. ಆದರ ಈಗ ಕಂಪಲ್ಸರಿ ರೈಟಿಂಗ ಒಳಗ ತೊಗೊತಾರ. ಮತ್ತ ಸತ್ತವರ ಜೊತಿ ಸತ್ತದ್ದ ಸುದ್ದಿ ಕೊಟ್ಟವರದ ಕುಂಡ್ಲಿನು ಇಸ್ಗೊತಾರ.
ಅದ ಯಾಕಂದರ ಒಂದ ಹತ್ತ ವರ್ಷದ ಹಿಂದ ಇಲ್ಲೇ ಬಾಜು ಹಳ್ಳ್ಯಾಗ ಒಬ್ಬ ಗೌಡಂದ ಸತ್ತಿದ್ದ ಸುದ್ದಿ ’ನಿಧನ ವಾರ್ತೆಗಳು’ ಒಳಗ ಬಂದಿತ್ತಂತ. ಅಂವಾ ಅಗದಿ ದೊಡ್ಡ ಮನಷ್ಯಾ, ಹೇಳಿ ಕೇಳಿ ಗೌಡಾ ಮತ್ತ ಇನ್ನ ಅಂವಾ ಹೋದಾ ಅಂದರ ಕೇಳ್ತಿರೇನ, ಪೇಪರನಾಗ ಸುದ್ದಿ ಬಂದದ್ದ ತಡಾ ಆಜು-ಬಾಜು ಹಳ್ಳಿ ಇಂದ ಹತ್ತ ಹನ್ನೇರಡ ಟ್ರ್ಯಾಕ್ಟರ ಮಂದಿ ಗೌಡ ಹೋಗ್ಯಾನ ಅಂತ ಚುರಮರಿ ಮಿರ್ಚಿ ಕಟಗೊಂಡ ಅವನ ಹಳ್ಳಿಗೆ ಹೋಗೆ ಬಿಟ್ಟರಂತ. ಅಲ್ಲೇ ನೋಡಿದರ ಗೌಡ ಹೋಲಕ್ಕ ಬೈಲಕಡಿಗೆ ಹೋದಂವಾ ಬರ್ತ ಬಾಯಾಗ ಬೇವಿನ ಕಡ್ಡಿ ಜಗದಕೋತ ಬಂದ ನೋಡ್ತಾನ ಮನಿ ಮುಂದ ಜಗ್ಗ ಜನಾ. ಅವಂಗ ತಾ ಸತ್ತಿದ್ದ ಸುದ್ದಿ ಕೇಳಿ ತಲಿ ಕೆಟ್ಟ ಹೋತಂತ. ಭಡಾ ಭಡಾ ಒಂದ ನೂರ ಮಂದಿ ಕರಕೊಂಡ ಟ್ರ್ಯಾಕ್ಟರ ಹತ್ತಿ ಸೀದಾ ಪೇಪರ್ ಆಫಿಸಗೆ ಬಂದ
’ಏ, ನಾ ಇನ್ನೂ ಜೀವಂತ ಇದ್ದೇನಿ, ನೀವೆಂಗ ನಾ ಸತ್ತೇನಿ ಅಂತ ಪೇಪರನಾಗ ಹಾಕಿದರಿ’ ಅಂತ ಜಗಳಾ ತಗದನಂತ. ಪಾಪ ಪೇಪರನವರ ಯಾರ ಈ ಸುದ್ದಿ ಕೊಟ್ಟೋರ ಅಂತ ಚೆಕ್ ಮಾಡಿದರ ಯಾರೋ ಒಬ್ಬೊಂವ ಒಂದ ಬಿಳಿ ಹಾಳ್ಯಾಗ ಆ ಗೌಡನ ಕುಂಡ್ಲಿ ಬರದ, ಒಂದ ಫೋಟೊ ಹಚ್ಚಿ ಕೆಳಗ ಒಂದ ಯಾವದೋ ಹೆಸರ ಬರದಿದ್ದಾ. ನಂಬರ ಇಲ್ಲಾ, ಅಡ್ರೇಸ್ಸಿಲ್ಲಾ, ಇನ್ನ ಅವಂಗೇಲ್ಲೆ ಹುಡ್ಕ್ಯಾಡೋದ?
ಹಳ್ಳ್ಯಾಗ ಗೌಡಗ ಆಗಲಾರದವರು ಯಾರೋ ಪೇಪರನಾಗ ನಿಧನವಾರ್ತೆಗಳು ಒಳಗ ಗೌಡನ ಹೆಸರ ಹಾಕಿಸಿದ್ದರು. ಪಾಪ ಪೇಪರನವರ ಪ್ರಿಂಟ್ ಮಾಡಿ ಬಿಟ್ಟಿದ್ದರು. ಕಡಿಕೆ ಪೇಪರನವರು ತಮ್ಮ ಮಿಸ್ಟೇಕ್ ಒಪಗೊಂಡ ಗೌಡಗ ‘ಜೀವಂತ ಇದ್ದಾಗ ನಿಂಬದ ಸತ್ತದ್ದ ಸುದ್ದಿ ಬಂದದ, ಆಯುಷ್ಯ ಜಾಸ್ತಿ ಆಗ್ತದ ತೊಗೊರಿ’ ಅಂತ ಸಮಾಧಾನ ಮಾಡಿ ಕಳಸಿದರಂತ. ಹಿಂಗಾಗಿ ಅವತ್ತಿನಿಂದ ನಿಧನ ವಾರ್ತೆಗಳು ಒಳಗ ಸುದ್ದಿ ಬರಬೇಕಂದರ ರೈಟಿಂಗ ಒಳಗ ಮತ್ತ ಕಂಟ್ಯಾಕ್ಟ ನಂಬರ ಹಾಕೇನ ಕೊಡ್ಬೇಕ. ಸತ್ತವರದಲ್ಲ ಮತ್ತ…ಸುದ್ದಿ ಕೋಡೊರದ.
ಹಂಗ ಪೇಪರನಾಗ ಸುದ್ದಿ ಕೊಡಲಿಕ್ಕೆ ನಮ್ಮ ಪೈಕಿ ಯಾರ ಸತ್ತರೂ ಮೊದ್ಲ ನಂಗ ಹೇಳ್ತಾರ ಆದರ ಯಾಕೋ ಮಂದಾಕಿನಿ ಅಜ್ಜಿ ಸತ್ತಾಗ ನಂಗ ಹೇಳಲಾರದ ಡೈರೆಕ್ಟ ಫೇಸಬುಕ್ಕಿನಾಗ ಹಾಕಿದ್ದಕ್ಕ ನಮ್ಮವ್ವಂದ ಮೂರ ದಿವಸದ್ದ ಮೈಲಗಿ ತಪ್ಪಿ ಹೋತ.
ಅಲ್ಲಾ, ನನ್ನ ಪ್ರಕಾರನೂ ಫೇಸಬುಕ್ಕಿನಾಗ ನಿಧನ ವಾರ್ತೆ ಹಾಕೋದ ಭಾಳ ಛಲೋ ಬಿಡ್ರಿ, ಅದರ ರೀಚ್ ಜಾಸ್ತಿ ಇರ್ತದ. ಹಂಗ ಕೇಳಿದರ facebookನವರ ’ನಿಧನ ವಾರ್ತೆಗಳು’ ಅಂತ ಸಪರೇಟ್ ಕಾಲಮ್ ಮಾಡಬೇಕ.
ಏನಿಲ್ಲದ ಜನಾ ಇಪ್ಪತ್ತನಾಲ್ಕ ತಾಸೂ ಫೇಸಬುಕ್ಕಿನಾಗ ಇರ್ತಾರ, ಹಿಂಗ ಯಾರರ ಹೋಗಿದ್ದ ಗೊತ್ತಾದರ ಮತ್ತ ನಾಲ್ಕ ಮಂದಿಗೆ ಗೊತ್ತಾಗಲಿಕ್ಕೆ ’ನಿಧನ ವಾರ್ತೆಗಳು….ಓದುತ್ತಿರುವವರು facebook’ ಅಂತ ಶೇರ ಮಾಡಿ ಸುದ್ದಿ ಮುಟ್ಟಿಸಿ ಪುಣ್ಯಾ ಕಟ್ಗೊತಾರ.