ಇವತ್ತಿಗೆ ಪಕ್ಷ ಮಾಸ ಮುಗದಂಗ ಆತ….ಮೊನ್ನೆ ದಶಮಿ ತಿಥಿ ದಿವಸ ನಮ್ಮಪ್ಪನ ಪಕ್ಷ ಮಾಡ್ಲಿಕ್ಕೆ ಹೋದಾಗ ನಡೆದ ಒಂದಿಷ್ಟ ಪ್ರಸಂಗ ಪ್ರಹಸನ ರೂಪದಾಗ…
ಗುಡಿ ಒಳಗ ನಮ್ಮಪ್ಪನ ಪಕ್ಷದ ಜೊತಿ ಇನ್ನ ಎಂಟ ಮಂದಿ ಪಕ್ಷ ಇತ್ತ…ಪಕ್ಷ ಮಾಡಸಲಿಕ್ಕೆ ಬಂದ ರಾಮಭಟ್ಟರ ಅಗದಿ ಸ್ಟ್ರೀಕ್ಟ್ ಇದ್ದಾರ, ದುರ್ವಾಸ ಮುನಿ ಗೋತ್ರದವರ ಅಂತ ಮೊದ್ಲ ಹೆದರಿಸಿ ಬಿಟ್ಟಿದ್ದರ.
ನಾವ ಸ್ನಾನ ಮಾಡಿ ಒದ್ದಿ ಧೋತ್ರಾ ಉಟಗೊಂಡ ನಮ್ಮ ಎಲೆ ಮುಂದ ಬರೋ ಪುರಸತ್ತ ಇಲ್ಲದ
’ಎಲ್ಲಾರೂ ಪೂರ್ವಜರ ಲಿಸ್ಟ ತೊಗೊಂಡ ಬಂದಿರಿಲ್ಲ’ ಅಂತ ಭಟ್ಟರ ಜೋರ ಮಾಡಿ ಕೇಳಿದರು…
ಒಬ್ಬ Software IT ಹುಡುಗ ಪಾಪ ಫಸ್ಟ ಟೈಮ್ ಮಾಡಸಲಿಕ್ಕೆ ಬಂದಿದ್ದಾ ಅಂವಾ ಮೋಬೈಲ್ ತಗದ ವಾಟ್ಸಪ್ ಒಳಗ ಅವರವ್ವ ಕಳಸಿದ್ದ ಲಿಸ್ಟ ತಗದ ನೋಡಿಕತ್ತಾ, ಅದನ್ನ ನೋಡಿದವರ ಭಟ್ಟರ
’ಏ…ಪಕ್ಷ ಮಾಡ್ಬೇಕಾರ ಮೋಬೈಲ್ ಮುಟ್ಟೊಹಂಗಿಲ್ಲಾ…… ಅದಕ್ಕೂ ಎಳ್ಳು- ನೀರ ಬಿಡೊಂವ ಇದ್ದರ ಇಷ್ಟ ಬಾಜು ಇಟ್ಗೊ…..ಇಲ್ಲಾ ಅದನ್ನ ತಗದ ಇಟ್ಟ ಬಿಡ’ ಅಂತ ಜೋರ್ ಮಾಡಿದರು. ಅಂವಾ ಒಂದ ಸರತೆ ಗಾಬರಿ ಆಗಿ ನನ್ನ ಮಾರಿ ನೋಡಿದಾ, ನಾ ನನ್ನ ಲಿಸ್ಟ ಲಾಸ್ಟ ಮಿನಿಟ್ ಸ್ಟಡಿ ಮಾಡ್ಲಿಕತ್ತಿದ್ದೆ…ಅಗದಿ ಪರೀಕ್ಷಾ ಹಾಲ್ ಗೆ ಹೋಗೊತನಕಾ ಶಾಣ್ಯಾರ ಓದತಾರಲಾ ಹಂಗ….ನಾ ಏನಾತ ಅಂತ ಕೇಳಿದೆ…ಅಂವಾ ತನ್ನ ಲಿಸ್ಟ ವಾಟ್ಸಪ್ ಒಳಗ ಅದ, ಭಟ್ಟರ ಮೋಬೈಲ್ ನಡಿಯಂಗಿಲ್ಲಾ ಅಂತ ಅನಲಿಕತ್ತಾರ ಅಂದಾ
ಒಂದ ಹಾಳಿ ಇಸ್ಗೊಂಡ ಬರ್ಕೊ ಭಡಾ ಭಡಾ ಅಂತ ನಾ ಅಂದೆ….ಅಂವಾ ಹಾಳಿ ಇಸ್ಗೊಂಡ ಬರಕೊಂಡ ಐದ ನಿಮಿಷಕ್ಕ
’ಭಟ್ಟರ ಸಪ್ಲೀಮೆಂಟ್ ಏನರ ಕೊಡ್ತಿರೇನ..ನಮ್ಮ ಪೈಕಿ ಭಾಳ ಮಂದಿಗೆ ನೀರ ಬಿಡೋದ ಅದ’ ಅಂತ ಕೇಳಿದಾ…..ಅವರ
’ಅವನ್ನೇಲ್ಲಾ ಮನ್ಯಾಗ ಬರ್ಕೊಂಡ ಬರಬೇಕ’ ಅಂತ ಸಿಟ್ಟಿಗೆದ್ದ ಭಾದ್ರಪದ ಮಾಸದ ಕ್ಯಾಲೆಂಡರ್ ಪೇಜ್ ಹರದ ಕೊಟ್ಟ ಅದರ ಹಿಂದ ಬರಕೊ’ ಅಂದರು.
ನಾವ ಹಿಂಗ ಧರ್ಬಿ ಮೂರ-ಮೂರ, ಎರೆಡೆರಡರದ ಕಟ್ ಮಾಡ್ಕೊಂಡ ಇಡೋದಕ್ಕ ನಮ್ಮ- ನಮ್ಮ ಮನಿ ಹೆಣ್ಣಮಕ್ಕಳ ಬಂದ ಆ ಹಾಲ್ ಒಳಗಿನ ಒಂದ ಮೂಲ್ಯಾಗ ಅಗದಿ ಪರೀಕ್ಷಾ ಸ್ಕಾಡ್ ಗತೆ ಕೂತ ನಾವ ಕರೆಕ್ಟ ನೀರ ಕರೆಕ್ಟ ಪೂರ್ವಜರಿಗೆ ಬಿಡ್ತಿವೇಲ್ಲೊ ಅಂತ ನೋಡ್ಲಿಕ್ಕೆ ಕೂತಿದ್ದರು.
ಮುಂದ ಭಟ್ಟರದ ಸವ್ಯ- ಅಪಸವ್ಯದ್ದ ಇನ್ಸ್ಟ್ರಕ್ಶನ್ಸ್ ಶುರು ಆದ್ವ…ಯಾರರ ಸವ್ಯ ಆಗ ಅಂದಾಗ ಇನ್ನೂ ಅಪಸವ್ಯ ಇದ್ದರ ಅದಕ್ಕ ಬೈಸ್ಗೊಳೋದ, ಧರ್ಬಿ ದೊನ್ನಿ ಬುಡಕ ಇಡ ಅಂದರ ದೊನ್ನಿ ಒಳಗ ಹಾಕಿ ಬೈಸ್ಗೊಳೋದ ನಡದ-ನಡದಿತ್ತ.
ನಾ ತಪ್ಪ ಮಾಡಿದಾಗ ಎದರಗಿಂದ ನನ್ನ ಹೆಂಡ್ತಿ ಸನ್ನಿ ಮಾಡಿ ಮಾಡಿ ಹೇಳೋಕಿ…ಒಮ್ಮೋಮ್ಮೆ ಹಣಿ ಹಣಿ ಬಡ್ಕೊಳೋಕಿ. ನನಗರ ಭಟ್ಟರ ಕಡೆ ಲಕ್ಷ ಕೊಡಬೇಕೊ ಇಲ್ಲಾ ಹೆಂಡ್ತಿ ಕಡೆ ಲಕ್ಷ ಕೊಡಬೇಕೋ ಒಂದೂ ತಿಳಿವಲ್ತಾಗಿತ್ತ…ಅಲ್ಲಾ ಹಂಗ ಇಬ್ಬರೂ ದುರ್ವಾಸ ಮುನಿ ಗೋತ್ರದವರ ಆ ಮಾತ ಬ್ಯಾರೆ.
ಹಿಂಗ ಒಬ್ಬೊಬ್ಬ ಪೂರ್ವಜರಿಗೆ ನೀರ ಬಿಡ್ಕೋತ ಹೆಂಡ್ತಿಗೆ ನೀರ ಬಿಡೋ ಪ್ರಸಂಗ ಬಂತ…..ನನ್ನಹೆಂಡ್ತಿ ಎದರಿಗೆ ಕೂತ ಸೊನ್ನಿಲೇ ಜೀವಾ ತಿನ್ನೋದನ್ನ ಭಟ್ಟರು ನೋಡಿದ್ದರು..
’ಹೆಂಡ್ತಿ ಹೋಗಿದ್ದರ ಇಷ್ಟ ಎಳ್ಳು ನೀರ ಬಿಡ್ರಿ….ಸುಳ್ಳ ಹೆಂಡ್ತಿ ಮ್ಯಾಲಿನ ಸಿಟ್ಟ ಮ್ಯಾಲೆ ನೀರ ಬಿಟ್ಟ ಗಿಟ್ಟೀರಿ’ ಅಂತ ನನ್ನ ಮಾರಿ ನೋಡ್ಕೊತ ಅಂದರ.
ನನ್ನ ಹೆಂಡ್ತಿ ಸಿಟ್ಟಲೇ ಈ ಸರತೆ ಭಟ್ಟರ ಮಾರಿ ನೋಡಿದ್ಲು.
ಭಟ್ಟರ ಅಂತೂ ದೊಡ್ಡವರ ಇರಲಿ, ಸಣ್ಣವರ ಇರಲಿ, ವೈಷ್ಣೋವರ ಇರಲಿ ಸ್ಮಾರ್ಥರ ಇರಲಿ ಒಟ್ಟ ಪಾರ್ಶಿಯಾಲಿಟಿ ಮಾಡಲಾರದ ಅಗದಿ ಪದ್ದತ ಸೀರ ಎಲ್ಲಾರಿಗೂ ಸಿಟ್ಟಲೇನ ಇನ್ಸ್ಟ್ರಕ್ಶನ್ ಕೊಡ್ಲಿಕತ್ತಿದ್ದರ..
ಅಷ್ಟರಾಗ ಭಟ್ಟರ ದೃಷ್ಟಿ ಒಬ್ಬ ಎಪ್ಪತ್ತ ವರ್ಷದ ಯಜಮಾನರ ಕಡೆ ಹೋತ ಅವರನ ನೋಡಿದವರ
’ ಏ..ಶ್ಯಾಮಣ್ಣ ಮೂರ ಎಳಿ ಜನಿವಾರ ಹಾಕ್ಕೊಂಡಿರಲಾ…ಇನ್ನ ಮೂರ ಎಳೆ ಎಲ್ಲೇ ಬಿಟ್ಟರಿ’ ಅಂತ ಕೇಳಿ ಬಿಟ್ಟರು. ಪಾಪ ಅವರ ಗಡಿಬಿಡಿ ಒಳಗ ಭಾವಿ ಕಟ್ಟಿ ಮ್ಯಾಲೆ ಸ್ನಾನ ಮಾಡಬೇಕಾರ ಬನಿಯನ್ ಜೋತಿ ಮೂರ ಎಳೆ ಜನಿವಾರನೂ ಹೋಗಿತ್ತ, ಅದ ಅವರಿಗೂ ಗೊತ್ತ ಆಗಿದ್ದಿಲ್ಲಾ….ಅವರ ಏನ ಹೇಳಬೇಕಂತ ತಿಳಿಲಾರದ
’ ಏ ನನ್ನ ಹೆಂಡ್ತಿ ಹೋಗ್ಯಾಳ, ಈಗ ಅಕಿಗೆ ನೀವ ನೀರ ಬಿಡಸಿದ್ರಿ ಮತ್ತ ಕೇಳ್ತಿರೇನ’ ಅಂತ ಅಂದ ಬಿಟ್ಟರ….
ಮುಂದ ಯಾರದರ ಗುರುಗಳ ಹೋಗಿದ್ದರ ಅವರ ಹೆಸರು ಗೋತ್ರ ಹೇಳಿ ಅವರಿಗೂ ಎಳ್ಳು ನೀರು ಬಿಡ್ರಿ ಅಂದಾಗ ಒಬ್ಬೊರ ತಲಿ ಕೆಟ್ಟ …
’ಭಟ್ಟರ ನಿಮ್ಮ ಗೋತ್ರ ಏನ?’ ಅಂತ ಕೇಳಿ ಬಿಟ್ಟರು….
’ಯಾಕ್ರಿಪಾ..ನೀವೇನ ನನಗ ನೀರ ಬಿಡೋರ ಏನ?’…. ಅಂತ ಭಟ್ಟರ ಹೆದರಿ ಕೇಳಿದರು.
’ಏ..ಸದ್ಯೇಕ ಏನ ಆ ವಿಚಾರ ಇಲ್ಲಾ, ನಿಮ್ಮ ಹಾನಗಲ್ ದೊಡ್ಡಪ್ಪ ಸೀನಣ್ಣ ಇದ್ದರಲಾ, ಅವರ ನಮ್ಮ ಮನಿ ಗುರುಗಳು ಅದಕ್ಕ ಕೇಳಿದೆ’ ಅಂತ ಇಶ್ಯೂ ಅಲ್ಲಿಗೆ ಮುಗಿಸಿದರು.
ಇತ್ತಲಾಗ ನನಗರ ಒಟ್ಟ ಕೆಳಗ ಕೂತ ರೂಡಿ ಇಲ್ಲಾ, ಕಾಲ ಅನ್ನೋವ ಜೀವ ಹಿಡದ ಹೋಗಿದ್ವು…ಅವರ ಎದ್ದ ಮೂರ ಪ್ರದಕ್ಷೀಣಿ ಹಾಕ ಅಂದಾಗೋಮ್ಮೆ ನಾ ಆರ ಆರ ಪ್ರದಕ್ಷೀಣಿ ಹಾಕ್ತಿದ್ದೆ…ಅದರಾಗ ಆ ಪಿತೃ ಸ್ಥಾನದ ಎಲಿ, ದೇವ ಸ್ಥಾನದ ಎಲಿ ಒಂದ ಒಂದ ಮಾರ ದೂರ ಇದ್ದವು… ಸವ್ಯ ಅಂದಾಗ ದೇವ ಸ್ಥಾನದ ಎಲಿಗೆ ಅಪಸವ್ಯ ಅಂದಾಗ ಪಿತೃ ಸ್ಥಾನದ ಎಲಿಗೆ ತರ್ಪಣ ಕೊಡೋದರಾಗ ಸಾಕ ಸಾಕಾಗಿ ನಂಗರ ಯಾವಾಗ ಪಕ್ಷ ಮುಗದೋದ ಅಂತ ಅನಿಸಿ ಬಿಟ್ಟಿತ್ತ….
ಮುಂದ ಒಂದ ಬುಟ್ಟಿ ಅನ್ನ ಮುಂದ ಇಟ್ಟ ಪಿಂಡಾ ಕಟ್ಟರಿ, ದೊಡ್ಡವು ಮೂರು, ನಿಮ್ಮ ಪೂರ್ವಜರ ಎಷ್ಟ ಇದ್ದಾರ ಅಷ್ಟ, ಮ್ಯಾಲೆ ನಮಗ ಒಂದ ಐದ ಎಕ್ಸ್ಟ್ರಾ ಅಂದರು…ನಾ ನಿಮಗ್ಯಾಕ ಇಷ್ಟ ಲಗೂ ಅನ್ನೋವ ಇದ್ದೆ, ಹೋಗ್ಲಿ ಬಿಡ ಇನ್ನ ನಾ ಒಂದ ಅಂದರ ಅವರೊಂದ ಹತ್ತ ಅನ್ನೋರ ಅಂತ ಸುಮ್ಮನಾದೆ.
ಹಂತಾದರಾಗ ಪಾಪ ಆ ಸಾಫ್ಟವೇರ್ ಹುಡುಗ, ಅಲ್ಲಾ ಅಂವಾ ಅಂತೂ ಎ.ಸಿ. ಆಫೀಸ್ ಒಳಗ ರಿವಾಲ್ವಿಂಗ್ ಚೇರ್ ನಾಗ ಹುಟ್ಟಿ ಬೆಳದಂವಾ…ಮ್ಯಾಲೆ ನೋಡ್ಲಿಕ್ಕೂ ಬೀನ್ಸ್ ಬ್ಯಾಗ ಇದ್ದಂಗ ಇದ್ದಾ ಅವಂಗ ಒಟ್ಟ ಪಿಂಡಾ ಕಟ್ಟಿ ರೂಡಿ ಇದ್ದಿದ್ದಿಲ್ಲಾ… ಅವಂಗೂ ನನ್ನಂಗ ಕೂತರ ಏಳಲಿಕ್ಕೆ ಬರಂಗಿಲ್ಲಾ..ಎದ್ದರ ಕೂಡ್ಲಿಕ್ಕೆ ಬರಂಗಿಲ್ಲಾ ಅನ್ನೊಹಂಗ ಆಗಿತ್ತ. ಅಂವಾ ತಲಿ ಕೆಟ್ಟ
’ಭಟ್ಟರ ಪಿಂಡಾ ಟೇಬಲ್ ಮ್ಯಾಲೆ ಕಟ್ಟಿ ಇಡ್ಲಿಕ್ಕೆ ಬರಂಗಿಲ್ಲೇನ……ನಮ್ಮ ಪೈಕಿ ನಲವತ್ತ ಮೂರ ಮಂದಿ ಇದ್ದಾರ’ ಅಂತ ಕೇಳಿ ಬಿಟ್ಟಾ.
ಭಟ್ಟರ ಸಿಟ್ಟ ನೆತ್ತಿಗೇರಲಿಕತ್ತಿತ್ತ..ಮತ್ತ ನಾನ ಅಡ್ಡ ಬಾಯಿ ಹಾಕಿ
’ಸಣ್ಣ ಸಣ್ಣವ ಕಟ್ಟ……ಗುಲಾಬ ಜಾಮೂನ ಸೈಜಿನ್ವು..ಒಂದ ಮೂರ ಇಷ್ಟ ಪೇಪರ್ ವೇಟನಷ್ಟ ದೊಡ್ಡವ ಕಟ್ಟ’ ಅಂತ ಅವಂಗ ತಿಳಿಸಿ ಹೇಳಿದೆ….
ಒಟ್ಟ ಅಂತೂ ಇಂತೂ ಪಕ್ಷ ಮುಗಿಸಿ ಲಾಸ್ಟಿಗೆ ನಮಸ್ಕಾರ ಮಾಡಬೇಕಾರ ನಾ ಉದ್ದಕ ಪಿಂಡದ ಸಾಲ ಮುಂದ ಅಡ್ಡಾದಾಗ ದೇಹಕ್ಕ ಇಷ್ಟ ಹಿತಾ ಅನಸ್ತ ಹೇಳ್ತೆನಿ…ಆದರ ಭಟ್ಟರ
’ಸಾಕ್ ಏಳ ಇನ್ನ….ಹಂಗ ನಿಮ್ಮಪ್ಪ ನಿಮ್ಮಜ್ಜ ಜೀವಂತ ಇದ್ದಾಗರ ಇಷ್ಟ ಭಕ್ತಿಯಿಂದ ನಮಸ್ಕಾರ ಮಾಡಿದ್ದೊ ಇಲ್ಲೋ ಯಾರಿಗೋತ್ತ’ ಅಂತ ಜೋರ ಮಾಡಿದ ಮ್ಯಾಲೆ ಗುದ್ಯಾಡ್ಕೋತ ಎದ್ದೆ…
ಮುಂದ ಎಲಿ ಹಾಕಿದರು..ನಂಗರ ಯಾವಾಗ ಉಂಡೇನೋ ಅನ್ನೋ ಹಂಗ ಆಗಿತ್ತ…
ಊಟದಾಗ ರವಾ ಪಾಯಸಾ…ವಡಾ…ಹುಳಿ.. ಹಿಂಗ ಮುಗಿಯೋದಕ್ಕ ರವಾ ಉಂಡಿ ಬಂದ್ವು…ಅದರ ಸೈಜ್ ನೋಡಿ ನನಗ ಒಂದ ಅರ್ಧಾ ತಾಸ ಹಿಂದ ನಾ ಕಟ್ಟಿದ್ದ ದೊಡ್ಡ ಪಿಂಡ ನೆನಪಾತ ಅಷ್ಟರಾಗ ನನ್ನ ಬಾಜೂ ಊಟಕ್ಕ ಕೂತೋರ….ಆ ಅಡಗಿಯವಂಗ
’ಏ…ಹೋದ ಜನ್ಮದಾಗ ನೀನು ಪಿಂಡಾ ಕಟ್ಟತಿದ್ದೇನಪಾ’ ಅಂತ ಕೇಳಿ ಬಿಟ್ಟರ ….. ಅದಕ್ಕ ಭಟ್ಟರ
’ಅಂವಾ ಹೋದ ಜನ್ಮದಾಗ ಅಲ್ಲಾ ಇದ ಜನ್ಮದಾಗ ಪಿಂಡಾ ಕಟ್ಟ್ಯಾನ…ನಿನ್ನೆನ ಅವರಪ್ಪಂದ ಪಿಂಡ ಪ್ರದಾನ ಇಲ್ಲೇ ಮುಗಿಸ್ಯಾನ’ ಅಂತ ಅಂದರ….ಆತ ತೊಗೊ ಹಂಗರ ಅದರಾಗ ಅವಂದೇನ ತಪ್ಪಿಲ್ಲಾ….ಅವಂಗ ಇನ್ನೂ ಉಂಡಿ ಹಿಡತ ಸಿಕ್ಕಿಲ್ಲ ಅಂತ ಸುಮ್ಮನಾಗಿ ಊಟಾ ಮುಗಿಸಿ….ಮುಂದ ಪಾಳೆ ಹಚ್ಚಿ ಭಟ್ಟರಿಗೆ ದಕ್ಷೀಣಿ ಕೊಟ್ಟ ಒಂದ ಸಲಾ ಸಾಷ್ಟಾಂಗ ನಮಸ್ಕಾರ…ಅದ ಅರ್ಧಾ ತಾಸ ಹಿಂದ ಮಾಡಿದ್ನೇಲಾ ಸೇಮ ಟು ಸೇಮ್ ಹಂಗ ಮಾಡಿ ಹೆಂಡ್ತಿ ಕರಕೊಂಡ ಮನಿ ದಾರಿ ಹಿಡದೆ….
ಆದರ ಒಂದ ಅಂತು ಖರೆ ಈ ಪಕ್ಷ ಮಾಡಿ ಮುಗಸೋದರಾಗ ಜೀವನ ಅನ್ನೋದ ಸವ್ಯ – ಅಪಸವ್ಯದೊಳಗ ಸಿಕ್ಕೊಂಡ ಹೋಗಿತ್ತ.