Parents ದೇವೋ ಭವ !!!

ಮೊನ್ನೆ ಸಂಡೆ ಮುಂಜಾನೆ ನಸೀಕಲೇ ನಮ್ಮ ವಿನ್ಯಾ ಆಸ್ಟ್ರೇಲಿಯಾದಿಂದ ಫೊನ್ ಮಾಡಿದಾ, ಅದು ಲ್ಯಾಂಡ ಲೈನಿಗೆ. ಅದ ಅಗದಿ ಅಲಾರಾಮ್ ಆದೊರಗತೆ ಹೊಡ್ಕೊಂಡತ, ನಾವು ಗಾಬರಿ ಆಗಿ ಇಡಿ ಮನಿ ಮಂದೇಲ್ಲಾ ಎದ್ದ ಬಿಟ್ಟವಿ. ಇವತ್ತ ಸಂಡೆ ಆರಾಮ ಎದ್ದರಾತ ಅಂತ ಬಿದ್ಕೋಂಡಿದ್ದೆ, ಈ ಸುಡಗಾಡ ಫೋನ್ ಎಬ್ಬಿಸಿ ಬಿಡ್ತು. ಅಲ್ಲಾ ಅವನೌನ ಇಂವಾ ಎಲ್ಲಾ ಬಿಟ್ಟ ಹೊತ್ತಿಲ್ಲದ ಹೊತ್ತಿನಾಗ ಅದು ಮೊಬೈಲ ಬಿಟ್ಟ ಲ್ಯಾಂಡ ಲೈನಗೆ ಯಾಕ ಫೋನ ಮಾಡಿದಾ ಅಂತ ನೋಡಿದರ, ನಡರಾತ್ರ್ಯಾಗ ನಂದ ಮೊಬೈಲ ಡಿಸ್ಚಾರ್ಜ್ ಆಗಿಬಿಟ್ಟಿತ್ತ.

ನಾ ಎದ್ದ ನಡಮನ್ಯಾಗಿನ ಫೊನ್ ಎತ್ತೊ ಪುರಸತ್ತ ಇಲ್ಲದ ವಿನ್ಯಾ “ಲೇ ಆಡ್ಯಾ, ನಮ್ಮ ಮನ್ಯಾಗ ನಮ್ಮವ್ವಾ-ಅಪ್ಪಾ ಇಬ್ಬರೂ ಫೊನ್ ಎತ್ತವಲ್ಲರು, ಒಂದ ಸ್ವಲ್ಪ ಅರ್ಜೆಂಟ ಹೋಗಿ ನೋಡ್ಕೊಂಡ ಬಾ ಲೇ” ಅಂದಾ. ನಂಗ ಅವರ ಮನ್ಯಾಗ ಯಾರೂ ಫೋನ್ ಎತ್ತಲಿಲ್ಲಾ ಅಂತ ಕೇಳಿದ ಕೂಡಲೇನ ಎಕದಮ್ ಗಾಬರಿ ಆತ, ಎರಡ ದಿವಸದ ಹಿಂದನ ನಾ ಅವರ ಮನಿಗೆ ಹೋಗಿ ಅವರಿಬ್ಬರು ಇನ್ನು ಇದ್ದಾರಿಲ್ಲೋ ಅಂತ ನೋಡ್ಕೊಂಡ, ಅವರಪ್ಪನ ಕರಕೊಂಡ ಪೊಸ್ಟಿಗೆ ಹೋಗಿ ಅವರದ ತಿಂಗಳದ ಬಡ್ಡಿ ತೊಗಂಡ, ಕೃಷ್ಣಾ ಭವನದಾಗ ಎಲಿ ಇಡ್ಲಿ ತಿಂದ, ಅವರ ಅವ್ವಂದ ಒಂದ ತಿಂಗಳದ್ದ ಶುಗರ ಗುಳಗಿ, ಟಾನಿಕ್ ಗುಳಗಿ ತೊಗಂಡ ಬಂದ ‘ಆಲ ಇಸ್ ವೆಲ್ ‘ ಅಂತ ಇವಂಗ ಮೇಲ್ ಮಾಡಿದ್ದೆ, ಈಗ ಏನಾತಪಾ ಒಮ್ಮಿಂದೊಮ್ಮಿಲೆ ಅಂತ ಅನಸಲಿಕತ್ತ.

ಅಲ್ಲಾ ಅದಿರಲಿ, ಈ ಮಗಗ ಯಾಕ ಒಮ್ಮಿಂದೊಮ್ಮಿಲೆ ವೀಕೇಂಡನಾಗ ಅವರ ಅವ್ವಾ-ಅಪ್ಪಂದ ನೆನಪಾತಂತ “ಅಲ್ಲಲೇ, ಒಮ್ಮಿಂದೊಮ್ಮಿಲೆ ಅವ್ವಾ-ಅಪ್ಪಾ ಯಾಕ್ ನೆನಪಾದ್ರ ನಿಂಗ?” ಅಂತ ಕೇಳಿದರ‍ಾ
“ಲೇ, ನಿನ್ನೌನ ಇವತ್ತ parent’s dayಲೆ, ನಿಂಗ ಗೊತ್ತಿಲ್ಲೇನ? ಅದಕ್ಕ ಅವ್ವಾ-ಅಪ್ಪಗ ವಿಶ್ ಮಾಡಿದರಾತು ಅಂತ ಫೋನ್ ಮಾಡಿದೆ, ಆದರ ಯಾರು ಫೊನ್ ಎತ್ತವಲ್ಲರು, ಪ್ಲೀಸ್ ಸ್ವಲ್ಪ ಅರ್ಜೆಂಟ ಹೋಗಿ ನೋಡ್ಕೊಂಡ ಬಂದ ನಂಗ ಮೇಲ್ ಮಾಡ” ಅಂತ ಫೋನ್ ಇಟ್ಟ ಬಿಟ್ಟಾ.

ಈ ಮಗಾ ಮೇಲ್ ಯಾಕ ಮಾಡಂದಾ ಅಂದರ ಅವಂಗ ಗೊತ್ತ ನಾ ನನ್ನ ರೊಕ್ಕದಲೇ ಔಟ ಗೊಯಿಂಗ ಕಾಲ್ ಮಾಡಂಗಿಲ್ಲಾ, ಅದು ಆಸ್ಟ್ರೇಲಿಯಾಕ್ಕ ಅಂತ. ಇನ್ನ ಅಂವಾ ಯಾಕ ನಾ ಮತ್ತ ಫೋನ್ ಮಾಡ್ತೇನಿ ಅನ್ನಲಿಲ್ಲಾ ಅಂದ್ರ ಅವನ manufacturing ಆಗಿದ್ದ ಇಲ್ಲೇ ಇಂಡಿಯಾದಾಗ, ಹಿಂಗಾಗಿ ಅವನು ಮತ್ತೊಮ್ಮೆ ಅಲ್ಲಿಂದ ಔಟ ಗೊಯಿಂಗ್ ಕಾಲ್ ಮಾಡಂಗಿಲ್ಲಾ.

ಅಂವಾ ‘ಇವತ್ತ parent’s day ಲೆ, ನಿಂಗ ಗೊತ್ತಿಲ್ಲಾ’ ಅಂದಾಗ ನಂಗ ಬಿ.ಪಿ ನೆತ್ತಿಗೇರತ, ಒಂದು ನಂಗ ಖರೇನ ಅವತ್ತ parent’s day ಅಂತ ಗೊತ್ತಿತ್ತಿದ್ದಿಲ್ಲಾ, ಇನ್ನೊಂದ ಈ ಮಗಾ ನನಗ parents day ನೆನಪ ಮಾಡಿ ಕೊಟ್ಟನಲಾ ಅಂತ. ಅಲ್ಲಾ, ಅವನೌನ ಅಂವಾ ಆರ ವರ್ಷದಿಂದ ತನ್ನ ಅವ್ವಾ ಅಪ್ಪನ್ನ ಇಲ್ಲೆ ಹುಬ್ಬಳ್ಳ್ಯಾಗ ಬಿಟ್ಟ, ಹೆಂಡತಿ ಮಕ್ಕಳನ್ನ ಇಷ್ಟ ಕಟಗೊಂಡ australiaದಾಗ settle ಆಗ್ಯಾನ. ವರ್ಷಕ್ಕ ಒಂದ ಎರಡ ಸರತೆ ಒಂದ ವಾರ ಗಂಡಾ-ಹೆಂಡತಿ ಬಂದ ಮುಖ ತೊರಿಸಿ ಹೋಗ್ತಾರ. ಅವರವ್ವ-ಅಪ್ಪನ ದೇಖರಿಕಿ ಎಲ್ಲಾ ನಮ್ಮಂತಾ ಮಂದಿ ಕಡೆ, ಇಲ್ಲಾ ಬಳಗದವರ ಕಡೆ ಮಾಡಸ್ತಾನ. ಅಲ್ಲಾ ಹಂಗ ಏನರ emergency ಇದ್ದರ ರೊಕ್ಕಾ internet thru’ ಕಳಸ್ತೇನಿ ನೀವೇನ ಕಾಳಜಿ ಮಾಡಬ್ಯಾಡರಿ ಅಂತ ಹೇಳ್ಯಾನಂತ ನಾವು ಮಾಡ್ತೇವಿ ಆ ಮಾತ ಬ್ಯಾರೆ, ಆದ್ರು ನಮಗ ನಮ್ಮವ್ವಾ-ಅಪ್ಪನ್ನ ಹಿಡಿಯೋದ ಏಳು ಹನ್ನೇರಡ ಆದಾಗ, ಮತ್ತೋಬ್ಬರ ಅವ್ವಾ-ಅಪ್ಪನ್ನ ನೋಡ್ಕೋಳ್ಳಿಕ್ಕೆ ನಾವೇನ ವೃದ್ಧಾಶ್ರಮ ನಡಸ್ತೇವಿನ್ರಿ? ಮಂದಿ ಯಾಕ ಎಷ್ಟಂತ ಮತ್ತೊಬ್ಬರ ಅವ್ವಾ-ಅಪ್ಪನ್ನ ನೋಡ್ತಾರ್ರಿ ಈಗಿನ ಕಾಲದಾಗ? ಈ ಮಗಾ ನೋಡಿದ್ರ ವಯಸ್ಸಾದ ತಂದೆ-ತಾಯಿ ಅಂತ ಕಾಳಜಿ ಇಲ್ಲದ ತಂದು, ತನ್ನ ಹೆಂಡತಿದು career important ಅಂತ parentsನ ಇಲ್ಲೆ ಅನಾಥ ಮಾಡಿ ಹೋಗಿ ಮತ್ತ ನನಗ ‘ಇವತ್ತ parent’s day, ನಿಂಗ ಗೊತ್ತಿಲ್ಲಾ’ ಅಂತ ಕೇಳ್ತಾನ, ಸಿಟ್ಟ ಬರಲಾರದ ಇರ್ತದೇನ?

ಹಿಂಗ ಮಕ್ಕಳ ಇದ್ದರು ಅನಾಥರಗತೆ ಬದಕೋದ ಇದೊಂದ ಒಂದ ಕೇಸ್ ಅಲ್ಲಾ. ಇವತ್ತ ನಮ್ಮಂದ್ಯಾಗ ಭಾಳ ಮಂದಿ parentsಗೆ ಹಿಂತಾದ ಪರಿಸ್ಥಿತಿ ಬಂದದ. ಅದರಾಗ ಇವರ ಮೊದ್ಲ ಹಡದಿದ್ದ ಒಂದು ಇಲ್ಲಾ planning ತಪ್ಪಿದಾಗ ಮತ್ತೊಂದು. ಮುಂದ ‘ನನ್ನ ಮಗಾ software engineer’ ಆಗಬೇಕಂತ ಛಲೋತೆನಾಗ ಕಲಿಸಿ, ಆಮ್ಯಾಲೆ ‘ನನ್ನ ಮಗಾ software engineer ಅವಂಗ software ಕನ್ಯಾನ ಬೇಕ’ ಅಂತ ಸಂಸಾರದ್ದ basics ಗೊತ್ತಿಲ್ಲದ ಹೋದರು ಅಡ್ಡಿಯಿಲ್ಲಾ c,c+,visual basic ಕಲತದ್ದ ಹುಡಗಿನ್ನ ಹುಡಕಿ ಗಂಟ ಹಾಕಿ, ಕಡಿಕೆ ಇಬ್ಬರನು foreignಗೆ ಕಳಿಸಿ ಮಂದಿ ಮುಂದ ‘ನನ್ನ ಮಗಾ TCS, ನನ್ನ ಸೊಸಿ infosys’ ಅಂತ ಹೇಳ್ಕೋತ ತಮ್ಮದ ಇಲ್ಲೆ ಶುಗರ ಜಾಸ್ತಿ ಆಗಿ dialysis ಕಂಡೀಶನ್ ಆದರು ತಮ್ಮ pensionದಾಗ ಸಂಸಾರ ಮಾಡ್ಕೋತ ಅಡ್ಡ್ಯಾಡೋದು. ಈಗ ವಯಸ್ಸಾದ ಮ್ಯಾಲೆ ಅವರಿಗೆ ಸಾಯಿತೇವಿ ಅಂದರ ನೀರ ಬಿಡಲಿಕ್ಕು ಮನ್ಯಾಗ ಮಕ್ಕಳ ಇಲ್ಲಾ. ಎಲ್ಲಾ ಅವರವರ ಹಣೆಬರಹ ಬಿಡರಿ.

ನಾ ಖರೇ ಹೇಳ್ತೇನಿ ಇವತ್ತ ಮಕ್ಕಳ software engineer ಆಗಿ ಎಲ್ಲೋ ಬ್ಯಾರೆ ದೇಶದಾಗ ಇಲ್ಲಾ ದೊಡ್ಡ-ದೊಡ್ಡ ಊರಾಗ ಇದ್ದ, parents ಇಷ್ಟ ಇಲ್ಲೇ ಲೊಕಲ್ ಉಳದಿರತಾರಲಾ ಅವರದ ಹಣೇಬರಹ ಯಾರಿಗು ಬೇಡಾ. ಕೆಲವೊಬ್ಬರ ಬಾಯಿ ಬಿಟ್ಟ ಹೇಳ್ಕೊಂಡ ಮನಸ್ಸ ಹಗರ ಮಾಡ್ಕೋತಾರ, ಇನ್ನ ಕೆಲವೊಬ್ಬರ ಸುಮ್ಮನ ಬಾಯಿ ಮುಚಗೊಂಡ ಅನುಭವಸಿ ಮನಸ್ಸ ಭಾರ ಮಾಡ್ಕೋತಾರ. ಆದ್ರ ಒಂದಿಷ್ಟ ಮಂದಿ ಇನ್ನೂ ‘ನಮ್ಮ ಮಗಾ software, ಅಂವಾ ಇರೊದ ಫಾರೇನ್ನು’ ಅಂತ ದೊಡ್ಡಿಸ್ತನ ಬಡಿತಾರ.

ಕೆಲವಬ್ಬರ ನಸೀಬದಾಗಂತೂ ಸೊಸಿಗೆ ಕಳ್ಳ ಕುಬಸಾಮಾಡೋದು, ಬಾಣೆಂತನ ಆದಮ್ಯಾಲೆ ಹೆತ್ತಿಬಣಾ ಕರಕೊಂಡ ಬರೋದು, ಮುಂದ ಮೊಮ್ಮಕ್ಕಳಿಗೆ ಅನ್ನ ಶಾಸ್ತ್ರ ಮಾಡೋದು, ಅವರ ಜೊತಿ ಛಂದಾಗಿ ನಾಲ್ಕ ಮಾತಾಡೋದು ದೂರ ಉಳಿತ, ಆ ಮೊಮ್ಮಕ್ಕಳ ಉಚ್ಚಿ ಅರಬಿ ಒಗೆಯೋದ ಸಹಿತ ದೇವರ ಬರದಿಲ್ಲಾ, ಇವರ ಇಲ್ಲೆ monitor ನಾಗ ಮೊಮ್ಮಕ್ಕಳ ಮಾರಿ ನೋಡಿ ” ಅವಕ್ಕಲೇ ಕಳ್ಳಿ” ಮಾಡಿ ” ಮಮ್ಮು ಮಾಡಿದಿ” ಅಂತ ಕೇಳೋದರಾಗ ಅತ್ತಲಾಗಿಂದ ಅವರ ಮಗಾ ‘she is tired mummy, ಅಕಿದ ಮಲ್ಕೋಳೊ ಟೈಮ್ ಆತು’ ಅಂತ ಎರಡ ಮಾತಾಡಿಸಿ , ‘ take care bye, love you’ ಅಂತ shut down ಮಾಡತಾನ. ಆಮ್ಯಾಲೆ ಇವರ ಇತ್ತಲಾಗ ‘ನನ್ನ ಮೊಮ್ಮಗಳ ಇಷ್ಟ ಮಾತಡತದ- ಅಷ್ಟ ಮಾತಾಡತದ’ ಅಂತ ವಠಾರದ ಮಂದಿ ಮುಂದ ಹೇಳಕೋತ ಅಡ್ಡ್ಯಾಡತಾರ.

ವಯಸ್ಸಾದ ಮ್ಯಾಲೆ ವಯಸ್ಸಿಗೆ ಬರಲಾರದ ಮೊಮ್ಮಕ್ಕಳ ನಮ್ಮ ಸಂಗಾತಿ. ನಮ್ಮ ಸುಖ-ಸಂತೋಷ ಎದರಾಗ ಅದ ಅನ್ನೊದನ್ನ ಇಷ್ಟ ವಯಸ್ಸಾದ ಮ್ಯಾಲೂ ಅರ್ಥ ಮಾಡ್ಕೋಳಿಲ್ಲಾ ಅಂದ್ರ ಹೆಂಗ ಅಂತೇನಿ. ಇಷ್ಟ ದಿವಸ ನಾವು ಜೀವಾ ತೇಯದಿದ್ದ ಮುದಕರಾದ ಮ್ಯಾಲೆ ಹಿಂಗ ಬದಕಲಿಕ್ಕಾ? ಈ ಮುಪ್ಪಿನ ಕಾಲದಾಗು ನಮಗ ಹೆಂಗ ಬೇಕ ಹಂಗ ಖುಶೀಲೇ ಬದಕಲಿಕ್ಕೆ ಆಗಲಿಲ್ಲಾಂದ್ರ ಹೆಂಗ್ರಿ? ಅಲ್ಲಾ ಹಂಗ ನಂಗ ಇನ್ನು ಮುಪ್ಪಾಗಿಲ್ಲಾ ಖರೆ ಆದ್ರ ಕೆಲವಬ್ಬರದ ನೋವು ಸಂಕಟ ಅರ್ಥ ಆಗ್ತದ ಅಂತ ಹೇಳಿದೆ ಇಷ್ಟ.

ಮತ್ತೇಲ್ಲರ ನಾ software engineer ಆಗಲಿಲ್ಲಾ ಅನ್ನೋ ಸಂಕಟಕ್ಕ ಹಿಂಗೇಲ್ಲಾ ಬರದೇನಿ ಅಂತ ತಿಳ್ಕೋಬ್ಯಾಡರಿಪಾ. “ಅಲ್ಲಾ, ನಮ್ಮ ಮಕ್ಕಳ ಕಲತ software engineer ಆಗಿ, foreignಗೆ ಹೋದರ ಈ ಮಗಂದ ಏನ ಹೋತ ಗಂಟ” ಅಂತ ಸಿಟ್ಟಾಗ ಬ್ಯಾಡರಿ ಮತ್ತ.

ಇರಲಿ ಈಗ ನಮ್ಮ ವಿನ್ಯಾನ ವಿಷಯಕ್ಕ ಬರತೇನಿ….. ಅಲ್ಲಾ ಈ ವಿನ್ಯಾನ ಮನ್ಯಾಗ ಯಾರು ಫೊನ್ ಯಾಕ ಎತ್ತವಲ್ಲರು ಅಂತ? ಮನ್ಯಾಗ ಪಾಪ, ಮುದಕಾ-ಮುದಕಿ ಇಬ್ಬರ ಇರತಾರ, ಅದರಾಗ ಅವರವ್ವನ ಶುಗರ-ಬಿ.ಪಿ ಯಾವಗ ಏರತದ ಯಾವಾಗ ಇಳಿತದ ಅಂತ ಅವರಪ್ಪಗೂ ಗೊತ್ತಾಗಂಗಿಲ್ಲಾ, ಮತ್ತೇನರ ಹೆಚ್ಚು ಕಡಿಮೆ ಆಗೇದೇನಪಾ ಅಂತ ವಿಚಾರ ಮಾಡಲಿಕತ್ತೆ. ಟೈಮ್ ನೋಡಿದರ ದಣೆಯಿನ ಐದ ಹೊಡದಿತ್ತ, ಇನ್ನ ನಾ ನಿದ್ದಿಗಣ್ಣಾಗ ಇಷ್ಟ ನಸೀಕಲೆ ಗಾಡಿ ತೊಗಂಡ ಹೊಂಟರ ಒಣ್ಯಾಗ ನಾಯಿ ಬೆನ್ನ ಹತ್ತತಾವ ಅಂತ ಅನಿಸಿ ಅವರ ಮನಿಗೆ ಫೊನ್ ಹಚ್ಚಿದೆ. ನಂದು ಫೊನ್ ಎತ್ತಲಿಲ್ಲಾ, ಮತ್ತಷ್ಟ ಹೆದರಿಕೆ ಆಗಲಿಕತ್ತ. ಅದರಾಗ ಅವರ ಮನ್ಯಾಗ ಇರೋದ ಲ್ಯಾಂಡಲೈನ್ ಒಂದ, ಅವನೌನ ಇದೇನ ಬಂತಪಾ ಅಂತ ಭಡಾ-ಭಡಾ ಮಾರಿ ತೊಕ್ಕಂಡ ಅವರ ಮನಿಗೆ ಹೋದರಾತು ಅಂತ ರೇಡಿ ಆದೆ. ನಮ್ಮ ಮನ್ಯಾಗ ನನ್ನ ಹೆಂಡತಿ ಫೊನ್ ಬಂದಾಗ ಎಚ್ಚರಾದೋಕಿ ಟೈಮ ನೋಡಿ ಲೊಚ್ಚ ಅಂದ ಆ ಕಡೆ ಮಗ್ಗಲಾ ಮಾಡ್ಕೊಂಡ ನಿದ್ದಿ ಗಣ್ಣಾಗ ” ಯಾರ ಹೋದರ್ರಿ?” ಅಂತ ಅಂದ ಮತ್ತ ಗೊರಕಿ ಹೊಡಕೋತ ಮಲ್ಕೊಂಡಿದ್ಲು ಆದರ ಅಷ್ಟರಾಗ ನಮ್ಮವ್ವ ಆವಾಗ ಎದ್ದೋಕಿ ಮಾರಿ ತೊಕ್ಕೊಂಡ ಕೈಯಾಗ ಕಸಬರಗಿ ಹಿಡಕೊಂಡ ಮುಂಚಿ ಕಡೆ ಕ್ಯಾಗಸಾ ಹೊಡಿಲಿಕತ್ತಿದ್ಲು “ಯಾಕಪಾ, ಯಾರಿಗೆ ಏನಾತ, ಇಷ್ಟ ಲಗೂ ಎಲ್ಲಿಗೆ ಹೊಂಟಿ?” ಅಂತ ಕೇಳೆ ಬಿಟ್ಟಳು.
” ಇಲ್ಲಾ ವಿನ್ಯಾರ ಮನ್ಯಾಗ ಯಾರು ಫೊನ್ ಎತ್ತವಲ್ಲರಂತ, ಅದಕ್ಕ ನೋಡ್ಕೊಂಡ ಬರತೇನಿ” ಅಂದೇನಿ.

“ಅಯ್ಯೋ ದೇವರ, ಪಾಪ, ಮೊನ್ನೇರ ಕಡ್ಲಿಗಡಬ ಹುಣ್ಣಿಮೆಗೆ ಹೋದಾಗ ಮುಷ್ಟಿ ಗಟ್ಟಲೇ ಕಡ್ಲಿ ಕಾಳ ಉಡಿ ತುಂಬಿದ್ದರಲೋ ,ಏನಾತೋ ಒಮ್ಮಿಂದೊಮ್ಮಿಲೇ?” ಅಂದ್ಲು.
ನಂಗ ತಲಿ ಕೆಟ್ಟತ ” ಅವ್ವಾ, ಈಗೆಲ್ಲೆ ನಾ ಅವರಿಗೇನರ ಆಗೇದ ಅಂತ ಹೇಳಿದೆ, ಫೋನ್ ಎತ್ತವಲ್ಲರು ಅಂದರ ನೀ ಏನರ ತಿಳ್ಕೋ ಬ್ಯಾಡಾ? ” ಅಂತ ನಾ ಗಾಡಿ ತೊಗೊಂಡ ಹೋಂಟೆ.

ಹೊರಗ ಹಂಗ ಚುಮು-ಚುಮು ಬೆಳಕಾಗಲಿಕತ್ತಿತ್ತ. ನಾ ಹಿಂಗ ಕಿಲ್ಲೇದಾಗ ಎಂಟರ ಆಗೋದಕ್ಕೂ ಎದರಗಿಂದ ಒಂದ 108 ( ಸರ್ಕಾರಿ ಅಂಬ್ಯುಲೆನ್ಸ್ ) ನನ್ನ ಮುಂದ ಪಾಸ್ ಆತ. ನನ್ನ ಕೈ ಕಾಲ ಇಳದ ಬಿಟ್ಟವು. ಅಕಸ್ಮಾತ ಹಂಗೇನರ ಆಗಬಾರದ್ದ ಆಗಿತ್ತಂದರ ಅವರ ಬಳಗದವರನೇಲ್ಲಾ ಹೆಂಗ ಕೂಡಸಬೇಕ? ನಂಗರ ಅವರ ಬಳಗದವರದ ಅಷ್ಟ ಪರಿಚಯ ಇಲ್ಲಾ ಅಂತ ಅದು-ಇದು ವಿಚಾರ ಮಾಡ್ಕೋತ ಅವರ ಮನಿ ಕಡೆ ಹೋಗದಕ್ಕು ಅವರ ಮನಿ ಬಾಗಲಾ ತಗದಿತ್ತ್, ಹೊಚ್ಚಲ ಮುಂದ ನಾಲ್ಕೈದ ಜೋಡಿ ಚಪ್ಪಲ್ಲ್ ಇದ್ವು. ನನ್ನ ಎದಿ ಮತ್ತ ಧಸಕ್ಕಂತ. ಅಯ್ಯೋ ಖರೇನ ಏನೋ ಆಗೇದ, ಓಣ್ಯಾಗಿನ ನಾಲ್ಕೈದ ಮಂದೀನೂ ಸೇರಿರಬೇಕು ಅಂತ ಅನಸಲಿಕತ್ತ.

ಒಂದ ಸರತೆ ಮನಸ್ಸಿನಾಗ ನವಗ್ರಹ ಸ್ತೋತ್ರ ಹೇಳಿ ಧೈರ್ಯಾ ತೊಗಂಡ ಒಳಗ ಹೋಗಿ ನೋಡಿದ್ರ ಜೋಶಿ ಮಾಸ್ತರ ಚಹಾ ಕುಡಕೋತ ಆರಾಮ ಕುರ್ಚಿ ಮ್ಯಾಲೆ ಪೇಪರ ಓದ್ಲಿಕತ್ತಿದ್ರು, ಅವರ ಹೆಂಡತಿ ಹಿಂದ ಹಿತ್ತಲದಾಗ ಭಾಂಡೆ ತಿಕ್ಕಲಿಕತ್ತಿದ್ಲು. ಮನ್ಯಾಗ ಒಂದ ನಾಲ್ಕೈದ ಮಂದಿ ದೂರಿಂದ ಪರಿಚಯದವರು ತೊರವಿಗಲ್ಲಿ ರಾಯರ ಮಠಕ್ಕ ಯಾರದೋ ಲಗ್ನಕ್ಕ ಬಂದವರು ಮುಂಜಾನೆ ನಸೀಕಲೇ ಸ್ನಾನ ಮಾಡಿ ಹೋದರಾತ ಅಂತ ಇವರ ಮನಿಗೆ ಬಂದಿದ್ದರು. ನಂಗ ಹೋಗಿದ್ದ ಜೀವಾ ಬಂದಂಗ ಆಗಿ ಮನಸ್ಸಿಗೆ ಸಮಾಧಾನ ಆತ.

“ಯಾಕರಿ, ಮನ್ಯಾಗ ಯಾರೂ ಫೊನ್ ಎತ್ತವಲ್ಲರಿ? ನಿಮ್ಮ ಮಗಾ austrailiaದಿಂದ ಗಾಬರಿ ಆಗಿ ನಂಗ ಫೊನ್ ಮಾಡಿದ್ದಾ” ಅಂತ ಅನ್ನೊದ ತಡಾ ಅವರವ್ವ ಹಿತ್ತಲದಾಗಿಂದ ಗಡಬಡಸಿಗೊಂಡ ತಿಕ್ಕಿದ್ದ ಭಾಂಡೆ ಗಲಬರಸಲಾರದ ಮುಸರಿ ಕೈಲೆ ಪಡಸಾಲಿಗೆ ಓಡಿ ಬಂದ
“ನಮ್ಮ ಪುಟ್ಟ್ಯಾ ಫೊನ್ ಮಾಡಿದ್ನ? ಏನಂತ ಎಲ್ಲಾ ಆರಾಮ ಇದ್ದಾರಂತ, ಹೋದ ತಿಂಗಳ ಫೊನ್ ಮಾಡಿದಾಗ ನೆಗಡಿ ಆಗೇದ ಅಂತ ಹೇಳಿದ್ದಾ, ಈಗ ಆರಾಮ ಆಗೇದ ಅಂತೇನ್?” ಅಂತ ಒಂದ ಉಸರಿನಾಗ ಕೇಳಿದ್ಲು.

” ಏ, ಅಂವಾ,ಅವನ ಹೆಂಡತಿ, ಅವನ ಮಗಳು ಎಲ್ಲಾ ಆರಾಮ ಇದ್ದಾರ. ಪಾಪ, ಇವತ್ತ parent’s day ಅಂತ ನಿಮಗ ವಿಶ್ ಮಾಡಲಿಕ್ಕೆ ಫೋನ್ ಮಾಡಿದ್ದಾ. ನೀವು ಯಾರು ಫೋನ್ ಎತ್ತಲಿಲ್ಲಾ ಅಂತ ಗಾಬರಿ ಆಗಿ ನನಗ ಮಾಡಿದಾ” ಅಂದೆ.

parent’s day ವಿಶ್ ಮಾಡಲಿಕ್ಕೆ ಫೋನ್ ಮಾಡಿದ್ದಾ ಅಂದ ಕೂಡಲೆ ಅವರಪ್ಪಾ ಮಾರಿ ಮ್ಯಾಲಿಂದ ಪೇಪರ ಸರಿಸಿ
“ಗಾಬರಿ ಆಗಲಿಕ್ಕೆ ನಮಗೇನ ಆಗೇದ ಧಾಡಿ, ನಾವು ಇನ್ನು ಸತ್ತಿಲ್ಲಾ, ಜೀವಂತ ಇದ್ದೇವಿ ಅಂತ ಹೇಳ ಆ ಹುಚ್ಚ ಸೂಳೇ ಮಗಗ. ಅವಂಗ ಖರೆ ಅಷ್ಟ ನಮ್ಮ ಬಗ್ಗೆ ಕಾಳಜಿ ಇದ್ದರ ನಮ್ಮನ್ನ ಯಾವದರ ವೃದ್ಧಾಶ್ರಮದಾಗರ ಇಡು ಅಂತ ಹೇಳು, ಅಲ್ಲೆ ಸತ್ತರು ನೋಡ್ಕೊಳೊರು ಇರತಾರ. ಸುಮ್ಮನ ನಿಮಗೇಲ್ಲಾ ಯಾಕ ತ್ರಾಸ ಕೊಡ್ತಾನ. ಅವನೌನ parent’s day ಅಂತ parent’s day” ಅಂತ ನನಗ ಕವಕ್ಕನ ಹರಕೊಂಡಂಗ ಮಾಡಿದರು. ಅವರಪ್ಪನ ಸ್ವಭಾವನ ಹಂಗ, ಸಿಡಕ ಶಿವರಾತ್ರಿ, ಮಗನ ಕಂಡ್ರ ಒಟ್ಟ ಆಗಂಗಿಲ್ಲಾ. ಈಗಂತೂ ಮಗಾ ಅವರನ ಹಿಂಗ ಅನಾಥ ಮಾಡಿ ಹೋದ ಮ್ಯಾಲೆ ಸೈಯ ಸೈ. ಅದರಾಗ ಅವರಿಗೆ ಅಂವಾ parents day ವಿಶ್ ಮಾಡಲಿಕ್ಕೆ ಫೋನ್ ಮಾಡಿದ್ದಾ ಅಂದಾಗ ‘ಗಾಯದ ಮ್ಯಾಲೆ ಉಪ್ಪ ಸುರುವಿದಂಗ’ ಆತ ಕಾಣಸ್ತದ ಸಿಟ್ಟ ತಡಕೊಳ್ಳಿಕ್ಕೆ ಆಗಲಿಲ್ಲಾ, ಅವರ ಮಾತ ಕೇಳಿ ಪಾಪ, ಮನಿಗೆ ಬಂದಿದ್ದ ಮಂದಿ ಗಾಬರಿ ಆಗಿ ‘ನಾವು ಬರತೇವಿ, ಮದುವ್ಯಾಗ ಮನಿ ಅಕ್ಕಿ ಕಾಳದ್ದ ಹೊತ್ತ ಆತು’ ಅಂತ ಹೋಗೆ ಬಿಟ್ಟರು. ಅಲ್ಲೆ ನಿಂತಿದ್ದ ಅವರವ್ವ ಆ ಮುಸರಿ ಮುಂಗೈಲೆ ಕಣ್ಣಾಗಿನ ಹನಿ ಒರಸಿಗೊಂಡಕಿನ ನನ್ನ ಹಿತ್ತಲಕ್ಕ ಬಾ ಅಂತ ಸೊನ್ನಿ ಮಾಡಿ ಹೋದ್ಲು. ಪಾಪ, ಅವರವ್ವನ ಪರಿಸ್ಥಿತಿ ನೋಡಿ ನನಗ ಕೆಟ್ಟ ಅನಸ್ತು. ಎಷ್ಟ ಅಂದರು software ತಾಯಿ ಕರಳು, ಭಾಳ soft, ಮಗನ್ನ ಹಂಗ ಬಿಟ್ಟ ಕೊಡಂಗಿಲ್ಲಾ, ತಾ ಎಷ್ಟ ಕಷ್ಟಾ ಅನುಭವಿಸಿದರು ಮಗಾ ಸುಖವಾಗಿರಲಿ ಅಂತ ಆಶ ಪಡತದ. ನನ್ನ ಬಾಯಿಲೆ ಮತ್ತೇನಂದಾ ಪುಟ್ಟ್ಯಾ ಅಂತ ನಾಲ್ಕ ಮಾತ ಕೇಳಿ ತನ್ನ ಹಣೆಬರಹದ ಕಣ್ಣಿರೊಳಗ ಚಹಾ ವಾಟಗಾ ಗಲಬರಿಸಿಗೊಂಡ ” ಬಾ , ಪಾಪ, ಥಂಡ್ಯಾಗ ಎದ್ದ ಬಂದಿ ಚಹಾ ಬಿಸಿ ಮಾಡ್ತೇನಿ” ಅಂತ ಅಡಗಿ ಮನಿಗೆ ಕರಕೊಂಡ ಹೋದ್ಲು. ಮುಂದ ಮಾತಾಡ್ತ ಹೇಳಿದ್ಲು, ಅವರ ಮನಿ ಫೋನ್ ಡೆಡ್ ಆಗಿ ಎರಡ ದಿವಸ ಆತಂತ, ಬಾಜು ಮನಿ ಹುಡುಗಗ ಹೇಳಿ ಕಂಪ್ಲೇಟ್ ಕೊಡಸರಿ ಅಂದರ ಅಕಿ ಗಂಡಾ ” ನಮಗ ಯಾರ ಫೋನ ಮಾಡೋರ ಇದ್ದಾರ ತೊಗೊ, ತಾನಾಗೆ ರಿಪೇರಿ ಆದಾಗ ಆಗವಲ್ತಾಕ” ಅಂತ ಸಿಟ್ಟ ಮಾಡಿದರಂತ. ಆ ಸುಡಗಾಡ ಫೋನ್ ಸರಿ ಇದ್ದಿದ್ದರ ಇವತ್ತ ನಾ ಇಷ್ಟ ಕಷ್ಟ ಪಡೊ ಪರಿಸ್ಥಿತಿ ಬರತಿದ್ದಿಲ್ಲಾಂತ ನಾ ಆ ಫೋನಗೆ ಇಷ್ಟ ಮಂಗಳಾರತಿ ಮಾಡಿ ನಮ್ಮ ಮನಿ ಹಾದಿ ಹಿಡದೆ.

ಆದ್ರು ನನಗ ಮುದಕಾ-ಮುದಕಿ ಆರಾಮ ಇದ್ದಾರಲಾ ಅಂತ ಸಮಾಧಾನ ಆತ, ನಾ ಏನೇನೋ ಅನ್ಕೊಂಡಿದ್ದೆ, ನಮ್ಮವ್ವಂತು ಮುತ್ತೈದಿ ಸಾವು ಅಂತ, ಮೂರನೇ ದಿವಸ ಮಾತಡಸಲಿಕ್ಕೆ ಹೋಗಲಿಕ್ಕೆ ತಯಾರ ಆಗಿದ್ಲು. ಇರಲಿ ದೇವರ ಅವರ ಆಯುಷ್ಯ ಮತ್ತ ಜಾಸ್ತಿ ಮಾಡಿದಾ ಅನಸ್ತು.

ಅವತ್ತ parents day ಅಂತ ಖರೇ ಹೇಳ್ಬೇಕಂದರ ನಂಗ ಗೊತ್ತದ್ದಿದ್ದಿಲ್ಲಾ, ಆದರ ನನಗ ಗೊತ್ತಾಗೊ ಅವಶ್ಯಕತೇನೂ ಏನ ಇಲ್ಲಾ, ದಿನಾ ನಾ ಇರೋದ ನಮ್ಮ parents ಜೊತಿಗೆನ ಅಂದ ಮ್ಯಾಲೆ ವರ್ಷಕ್ಕೋಮ್ಮೆ parent’s dayಕ್ಕ ಇಷ್ಟ ನಮ್ಮವ್ವಾ-ಅಪ್ಪನ್ನ ನೆನಸಿಗೊಳ್ಳೊ ಅವಶ್ಯಕತೆ ನನಗಿಲ್ಲಾ. ಈ ಸುಡಗಾಡ parents day ನಮ್ಮ ಸಂಪ್ರದಾಯದೊಳಗನೂ ಇಲ್ಲಾ. ನಮ್ಮ ಸಂಪ್ರದಾಯದಾಗ ಹಂಗ ವರ್ಷಕ್ಕೊಮ್ಮೆ ಇಷ್ಟ parentsನ್ನ ನೆನಿಸಿಗೊಳೋದು parents ಇಲ್ಲದ ಕಾಲಕ್ಕ, ಅದು ಶ್ರಾದ್ಧ ಮಾಡಬೇಕಾರ/ ಮಾಡಿದರ ಇಷ್ಟ.

ಅನ್ನಂಗ ನಾ ಕಿಲ್ಲೇದಾಗ ಎಂಟರ್ ಆಗಬೇಕಾರ 108 ಹಾದ ಹೋತಂತ ಹೇಳಿದ್ನೇಲ್ಲಾ ಅದು ನಮ್ಮ ಇನ್ನೊಬ್ಬ ಜೋಶ್ಯಾನ ಅಜ್ಜಿ, ಅದ ನಾ ’ಕುಟ್ಟವಲಕ್ಕಿ’ ಬುಕ್ ಒಳಗ ಬರದಿದ್ನೇಲ್ಲಾ ಕಾಶಕ್ಕಜ್ಜಿ ಬಗ್ಗೆ ‘ಗಂಡಾ, ಅನ್ನೋ ರಂಡೆಗಂಡಾ’ ಅನ್ನೊ ಲೇಖನದಾಗ, ಅಕಿನ್ನ ಕರಕೊಂಡ ಹೋಗಲಿಕ್ಕೆ ಬಂದಿತ್ತಂತ, ಮುಂಜಾನೆ ಬಚ್ಚಲದಾಗ ಕೈ ಕಾಲ ತೊಕ್ಕೊಳ್ಳಿಕ್ಕೆ ಹೋಗಿ ಬಿದ್ದ ಟೊಂಕಾ ಮುರಕೊಂಡಳಂತ. ಈಗ ವಿವೇಕಾನಂದ ಹಾಸ್ಪಿಟಲದಾಗ ವಟಾ-ವಟಾ ಅನ್ಕೋತ ಗಟಾ-ಗಟಾ ಸಲೈನ ಕುಡಕೋತ ಡಾಕ್ಟರಗೆ ‘ರಂಡೆ ಗಂಡಾ ನಂಗ ಯಾವಾಗ ಮನಿಗೆ ಕಳಸ್ತಿ’ ಅಂತ ಬೈಕೋತ ಆರಾಮ ಇದ್ದಾಳ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ