’ಏ..ಇವತ್ತಿಗೆ ನೀ ಹುಟ್ಟಿ ನಲ್ವತ್ತೈದ ವರ್ಷ ಆತ ನಿಂಗ ಹೆಂಗ ಅನಸ್ತದ….’ ಅಂತ ನಮ್ಮಕಿನ ನಾ ಕೇಳಿದರ ಅಕಿ
’ಹುಟ್ಟಿದ್ದಕ್ಕೋ ಇಲ್ಲಾ ನಿಮ್ಮನ್ನ ಕಟಗೊಂಡಿದ್ದಕ್ಕೋ…’ ಅಂತ ಕೇಳಿದ್ಲು…
’ಲೇ..ಇವತ್ತ ಹುಟ್ಟಿದ್ದರ ಬಗ್ಗೆ ಹೇಳ….anniversary ಇದ್ದಾಗ ನನ್ನ ಕಟಗೊಂಡಿದ್ದರ ಬಗ್ಗೆ ಹೇಳೊ ಅಂತಿ….’ ಅಂತ ನಾ ಅಂದರ
’ಹುಟ್ಟಿದ್ದಕ್ಕ ಹೆಂಗ ಅನಸ್ತದ ಅಂತ ಅಂದರ ನಾ ಏನ ತಲಿ ಹೇಳ್ಬೇಕ? ಅದ ಏನ ನನ್ನ ಕೈಯಾಗ ಇತ್ತ ಏನ? ಇನ್ನೂ ಕಟಗೊಂಡಿದ್ದರ ಬಗ್ಗೆ ಆದರ ಒಂದ ನಾಲ್ಕ ಮಾತ ಹೇಳಬಹುದು’ ಅಂತ ಅಂದ್ಲು
’ಲೇ…ಮತ್ತು ನೀ ನನ್ನ ಸುತ್ತ ಬರಬ್ಯಾಡ….ಹುಟ್ಟಿ ಇಷ್ಟ ವರ್ಷ ಆತ, ಏನೇನ ಸಾಧನೆ ಮಾಡಿದಿ, ಇಷ್ಟ ವರ್ಷದ ಜೀವನ ಸಾರ್ಥಕ ಅನಸ್ತದೊ ಹೆಂಗ ಹೇಳಲಾ…’
’ಅಯ್ಯ…ಹುಟ್ಟಿ ಹಿಂಗ ಆಡಾಡ್ತ ಬೆಳೆಯೋದಕ್ಕ ನಿಮಗ ನನ್ನ ಗಂಟ ಹಾಕಿದರು…ನನಗರ ಆವಾಗ ಇನ್ನೂ ತಿಳವಳಕಿ ಇದ್ದಿದ್ದಿಲ್ಲಾ…ನಿಮಗ ಕಟ್ಟಬೇಕಾರ ಮನ್ಯಾಗಿನವರ ಯಾರೂ ನನಗ ಒಂದ ಮಾತನೂ ಕೇಳಲಿಲ್ಲಾ…ಮುಂದ ಹಿಂಗ ಒಂಚೂರ ತಿಳವಳಕಿ ಬರೋದರಾಗ ನಂಗ ಒಂದ ಹುಟ್ಟಿತ್ತ….ಮುಂದ ಒಂದ್ಯಾರಡ ಅಧಿಕಮಾಸ ಮುಗಿಯೋದರಾಗ ಇನ್ನೊಂದ ಆತ….ಆವಾಗಿಂದ ಗಂಡಾ ಮಕ್ಕಳನ ಸಾಕೋದ ಒಂದ ದೊಡ್ಡ ಸಾಧನೆ ಆಗೇದ’
’ಏ..ಮತ್ತು ನೀ ನನಗ ಬರತಿ ಅಲ್ಲಲೇ …’
’ಅಲ್ಲರಿ..ನಿಮ್ಮನ್ನ ಇಷ್ಟ ವರ್ಷ ಹಿಡದಿದ್ದ ಏನ ಕಡಮಿ ಸಾಧನೆ ಏನ…ಒಮ್ಮೋಮ್ಮೆ ಅನಸ್ತದ ನಾ ಹುಟ್ಟಿದ್ದ ನಿಮ್ಮ ಸಂಬಂಧ ಅಂತ….ಈಗ ನೋಡ್ರಿ..ಏನ ಸುಡಗಾಡ ಬರದರು ನನ್ನ ಸುತ್ತ ಬರೀತಿರಿ…ಬರದ ಫೇಮಸ್ ಆಗಿದ್ದ ಯಾರ?..ನೀವು….ನಾ ಒಂದನೇದ ಹಡಿಲಿಕ್ಕೆ ಹೋದಾಗ ಪೇಂಟಿಂಗ್ ಮಾಡ್ಲಿಕತ್ತರಿ….ಎರಡನೇದ ಹಡಿಲಿಕ್ಕೆ ಹೋದಾಗ ಫೋಟೊಗ್ರಾಫಿ ಶುರು ಮಾಡಿದಿರಿ….ಪುಣ್ಯಾಕ್ಕ ನಾ ಎರಡ ಹಡದ ಆಪರೇಶನ್ ಮಾಡಿಸ್ಗೊಂಡ ಛಲೋ ಆತ ಇಲ್ಲಾ ಅಂದರ ಮೂರನೇದ ಹಡಿಲಿಕ್ಕೆ ಹೋಗಿದ್ದರ ಮತ್ತ ಏನ ಆಗ್ತಿದ್ದರೋ ಏನೋ ಆ ದೇವರಿಗೆ ಗೊತ್ತ…ಈಗ ನೀವ ಏನೇನ ಆಗಿರಿ ಎಲ್ಲಾ ನನ್ನ ಕಟಗೊಂಡಿಂದಕ್ಕನ ಹೌದಲ್ಲ ಮತ್ತ?…’
’ಅಲ್ಲಾ..ಹಂಗ ನೀ ಹೇಳೊದ ಖರೆ ಬಿಡ…ಒಟ್ಟ ನೀ ಹುಟ್ಟಿದ್ದ ನನ್ನ ಉದ್ಧಾರ ಮಾಡ್ಲಿಕ್ಕೆ …ಅದ ನಿನ್ನ ಜೀವನದ ಸಾಧನೆ ಅನ್ನ’
’ಮತ್ತ..ಹೌದ..ನನ್ನ ಕಟಗೊಂಡ ಜೀವನ ಸಾರ್ಥಕ ಆಗಿದ್ದ ನಿಂಬದ…ನಂದೇನ ಅಲ್ಲಾ…..’
’ಹೋಗ್ಲಿ ಬಿಡ ಮುಂಜ ಮುಂಜಾನೆ ಎದ್ದ ಏನೋ ಹೇಳಲಿಕ್ಕೆ ಹೋಗಿ..ನಿನ್ನ ಬಾಯಿ ಹತ್ತಿದೆ….ತಪ್ಪ ನಂದ….ನಿನ್ನ ಮಾತಿನ ಭರದಾಗ ನಾ ಏನ ಹೇಳಲಿಕ್ಕೆ ಹೊಂಟಿದ್ದೆ ಅನ್ನೋದನ್ನ ಮರತ ಬಿಟ್ಟೆ….’ ಅಂತ ನಾ ಅಂದೆ
’ಶಾಣ್ಯಾರಿದ್ದೀರಿ ತೊಗೊರಿ…….ಹುಟ್ಟಿ ನಲ್ವತ್ತೈದ ವರ್ಷ ಆತ ಏನ ಸಾದಿಸಿ ಎಂತ ಕೇಳಿ ಇಷ್ಟೇಲ್ಲಾ ರಾಮಾಯಣ ಶುರು ಮಾಡಿದವರ ನಾನೋ..ನೀವೋ?’
’ಹಾಂ…ಕರೆಕ್ಟ thanks…ಈಗ ನೆನಪಾತ ನೋಡ……Many Many happy returns of the day my dear…. one and only Prerana…ಜೀವನ ಪರ್ಯಂತ ಹಿಂಗ ನನ್ನ ಜೀವಾ ತಿನ್ಕೋತ…ನಂಗ ಪೀಡಾಗತೆ (ಪೀ.ಡಾ. = prerana darling) ಕಾಡಕೋತ ಆರಾಮ ಇರ, ನಮ್ಮನ್ನೂ ಆರಾಮ ಇರಲಿಕ್ಕೆ ಬಿಡು’ ಅಂತಾ ನಾ ಅಕಿ ವಿಶ್ ಮಾಡಿದರ ಅಕಿ
’thanks… ಹುಟ್ಟಿದ್ದ ದಿವಸರ ಛಂದಾಗಿ ವಿಶ್ ಮಾಡೋದ ಬಿಟ್ಟ ಅದ-ಇದ ಮಾತಾಡಿ ನನ್ನ ಜೀವಾ ತಿಂದರಿ….ಸಂಜಿಗೆ ಸೇವಪುರಿ – ಚಾಟ್ ತಿನಸಲಿಕ್ಕೆ ಕರಕೊಂಡ ಹೋಗ್ರಿ…ಪಕ್ಷಮಾಸದಾಗಿನ ರವಾ ಪಾಯಸಾ ತಿಂದ ತಿಂದ ಬಾಯಿ ರವಾ-ರವಾ ಆಗಿ ಹೋಗೇದ…’ ಅಂತ ಅಂದ್ಲು..
ಇಲ್ಲಿಗೆ ಹೆಂಡ್ತಿ ಬರ್ಥಡೇ ಪ್ರಹಸನ ಮುಗದಂಗ ಆತ…..
ಅದ ಏನೋ ಸಂಸ್ಕೃತದೊಳಗ ಒಂದ ಮಾತ ಅದ ಅಲಾ ’ಪೂರ್ವ ಜನ್ಮ ಕೃತಂ ಪಾಪಂ ಪತ್ನಿ ರೂಪೇಣ ಪೀಡ್ಯತೇ’…ಅಂತಾರಲಾ, ಅದೇಲ್ಲಾ ಸುಳ್ಳ…. ಯಾರೋ ತಮ್ಮ ಹೆಂಡ್ತಿ ಕಾಟಾ ತಾಳಲಾರದವರ ಹುಟ್ಟಿಸಿದ್ದ ಮಾತ ಇರಬೇಕ…
ನನ್ನ ಪಾಲಿಗೆ ನನ್ನ ಹೆಂಡ್ತಿ ಅಂತು ಅಕ್ಷರಶಃ
’ಕಾರ್ಯೇಷು ಮಂತ್ರಿ, ಕರಣೇಷು ದಾಸಿ, ಭೋಜೇಷು ಮಾತಾ, ಶಯನೇಷು ರಂಭಾ, ಧರ್ಮಾನುಕೂಲಾ ಕ್ಷಮಯಾ ಧರಿತ್ರಿ’….ಅನ್ನೊಹಂಗ ಇದ್ದಾಳ ಬಿಡ್ರಿ ಸುಳ್ಳ ಯಾಕ ಹೇಳ್ಬೇಕ….ಹಂಗ ಇನ್ನೂ ಒಂದ ಎರೆಡ ಮೂರ ಗುಣಾ ಅಕಿವ ಎಕ್ಸ್ಟ್ರಾನ ಅವ…ಅವನ್ನ ನನಗ ಈಗ ಸಂಸ್ಕೃತ ಒಳಗ ಹೇಳಲಿಕ್ಕೆ ಗೊತ್ತಾಗವಲ್ತ….
She is true inspiration for my life………..ಹಿಂಗಾಗೆ ಅಕಿಗೆ ನಾ ಪ್ರೇರಣಾ ಅಂತ ಹೆಸರ ಇಟ್ಟ ನಮ್ಮ ಮನಿ ತುಂಬಿಸಿಕೊಂಡಿದ್ದ…..
ಇರಲಿ..ಇವತ್ತ ಅಕಿದ ಹುಟ್ಟಿದ ಹಬ್ಬ. ಮುಂಜ ಮುಂಜಾನೆ ಅಕಿಗೆ ವಿಶ್ ಮಾಡ್ಲಿಕ್ಕೆ ಹೋಗಿ ಒಂದ ಸಣ್ಣ ಪ್ರಹಸನನ ಬರೆಯೋ ಹಂಗ ಆತ ಅನ್ನರಿ…
ನಿಮ್ಮ ಆಶೀರ್ವಾದ, ಶುಭಾಶಯ ಅಕಿ ಮ್ಯಾಲೆ ಸದಾ ಇರಲಿ, ಈ ಪ್ರಹಸನನ ನನ್ನ ಹೆಂಡ್ತಿ ಬರ್ಥಡೇ ಸ್ವೀಟ್ ಅಂತ ತಿಳ್ಕೋರಿ….
ಪೂರ್ವ ಜನ್ಮ ಕೃತಂ ಪುಣ್ಯಂ ಪತ್ನಿ ರೂಪೇಣ ಲಭ್ಯತೇ..
ಹಿಂಗ ಅನ್ನುವ ಕಾಲ ಬಂದದ ಈಗ.
ಒಳ್ಳೊಳ್ಳೆ ವರಗೋಳು ಕನ್ಯಾ ಕನ್ಯಾ ಸಿಗದ ಕಂಗಾಲಾಗಿದ್ದಾರೆ.
ನೀವ ಬರೆದಿದ್ದು ನೆನಪು ಮಾಡಿಕೊಳ್ರೀ.
“ಕನ್ಯಾ ತೀರಿಹೋಗ್ಯಾವ” ಪ್ರಹಸನ 😂😂
ಪೂರ್ವ ಜನ್ಮ ಕೃತಂ ಪುಣ್ಯಂ ಪತ್ನಿ ರೂಪೇಣ ಲಭ್ಯತೇ..
ಹಿಂಗ ಅನ್ನುವ ಕಾಲ ಬಂದದ ಈಗ.
ಒಳ್ಳೊಳ್ಳೆ ವರಗೋಳು ಕನ್ಯಾ ಕನ್ಯಾ ಸಿಗದ ಕಂಗಾಲಾಗಿದ್ದಾರೆ.
ನೀವ ಬರೆದಿದ್ದು ನೆನಪು ಮಾಡಿಕೊಳ್ರೀ.
“ಕನ್ಯಾ ತೀರಿಹೋಗ್ಯಾವ” ಪ್ರಹಸನ 😂😂