ಮೊನ್ನೆ ಜುಲೈ೧೧ಕ್ಕ ವರ್ಲ್ಡ ಪಾಪ್ಯೂಲೇಶನ್ ಡೇ ಇತ್ತ, ಅಂದರ ವಿಶ್ವ ಜನಸಂಖ್ಯಾ ದಿವಸ. ಅಲ್ಲಾ ಹಂಗ ಅವತ್ತ ಯಾರ ಜಾಸ್ತಿ ಹಡದಿರ್ತಾರ ಅವರಿಗೇನ ಹಿಡದ ದಂಡಾ ಹಾಕಂಗಿಲ್ಲಾ, ಕಡಮಿ ಹಡದವರಿಗೇನ ಕರದ ಪ್ರೈಜ ಕೊಡಂಗಿಲ್ಲ ಮತ್ತ. ಜಗತ್ತಿನಾಗ ಜನರಿಗೆ ಜನಸಂಖ್ಯೆ ಅರಿವು ಮೂಡಲಿ ಅಂತ ಯುನೈಟೇಡ್ ನೇಶನ್ನದವರ ವರ್ಲ್ಡ ಪಾಪ್ಯೂಲೇಶನ ಡೇ ಅಂತ ಮಾಡ್ತಾರ. ಹಂಗ ವರ್ಷಾ ಇವರ ಇತ್ತಲಾಗ ಮಾಡ್ಕೋತ ಇರ್ತಾರ, ಅತ್ತಲಾಗ ಜನಸಂಖ್ಯೆ ಜಾಸ್ತಿ ಬೇಳ್ಕೋತ ಇರ್ತದ ಆ ಮಾತ ಬ್ಯಾರೆ.
ಈ ಸರತೆ ನಮ್ಮ ಓಣ್ಯಾಗಿನ ಅರವತ್ತ ದಾಟಿದ ಒಂದಿಷ್ಟ ಮಂದಿ ನಾವು ವರ್ಲ್ಡ ಪಾಪ್ಯೂಲೇಶನ್ ಡೇ ಸೆಲೆಬ್ರೇಟ್ ಮಾಡೋಣ ಅಂತ ನನ್ನ ಕಡೆ ಬಂದರು. ನಾ ಅವರನ ನೋಡಿ
’ಏ ಹಡಿಯೋ ವಯಸ್ಸಿನಾಗ ಹೊಟ್ಟಿತುಂಬ ಹಡದಿರಿ ಈಗ ವಯಸ್ಸಾಗೇದ ಮಕ್ಕಳ ಆಗಂಗಿಲ್ಲಾ ಅಂತ ಗ್ಯಾರಂಟೀ ಆದ ಮ್ಯಾಲೆ ನಿಮಗ ಜಗತ್ತಿನ ಜನಸಂಖ್ಯೆ ಬಗ್ಗೆ ಕಾಳಜಿ ಬಂದದೇನ’ ಅಂತ ಸ್ವಲ್ಪ ಸಿಟ್ಟಿಲೇನ ಅಂದೆ. ಅದಕ್ಕ ಅವರ ’ಏ..ಹಂಗಲ್ಲೋ ಸಿಟ್ಟಿಗ್ಯಾಕ ಏಳ್ತಿ..ಆಗಿದ್ದ ಆಗಿ ಹೋತ ಇನ್ನ ಮುಂದರ ಕಂಟ್ರೋಲ್ ಮಾಡಬೇಕ ಬ್ಯಾಡ…ನಾವ ಹಡದವಿ ಅಂತ ನಮ್ಮ ಮುಂದಿನ ಜನರೇಶನದವರು ಹಡ್ಕೋತ ಹೊಂಟರ ಮುಂದ ಹೆಂಗಪಾ?..ತಿಳದಂವ ಇದ್ದಿ ಸ್ವಲ್ಪ ವಿಚಾರ ಮಾಡಲಾ’ಅಂತ ನಂಗ ಬೌದ್ಧಿಕ ಮಾಡಲಿಕತ್ತರು. ಹಂಗ ಅವರ ಹೇಳೋದ ಕರೆಕ್ಟ ಅಂತ
’ಆತ ಈಗ ನನ್ನಿಂದ ಏನ ಆಗಬೇಕು’ ಅಂತ ನಾ ಕೇಳಿದರ
’ಅಲ್ಲಾ, ವರ್ಲ್ಡ ಪಾಪ್ಯೂಲೇಶನ್ ಡೇ ಕ್ಕ ನೀನು ಏನರ ಕಂಟ್ರಿಬ್ಯೂಶನ್ ಮಾಡಲಾ’ ಅಂತ ಅಂದರು
’ಏ, ನನ್ನವ ಬರೇ ಎರಡ ಮಕ್ಕಳವ….ಮ್ಯಾಲೆ ಹೆಂಡ್ತಿದ ಬ್ಯಾರೆ ಆಪರೇಶನ್ ಮಾಡಿಸೇನಿ…ಅದ ನನ್ನ ಕಂಟ್ರಿಬ್ಯೂಶನ್’ ಅಂತ ನಾ ಅಂದರ
’ಹಂಗ ಅಲ್ಲೋ ಸ್ವಲ್ಪ ಸಮಾಜಕ್ಕೂ ಏನರ ಕಂಟ್ರಿಬ್ಯೂಶನ್ ಮಾಡಲಾ’ ಅಂತ ಅಂದರು.
’ಅಂದರ ಏನ..ಈಗ ನಾ ನಂದು ಆಪರೇಶನ್ ಮಾಡಿಸ್ಗೊಳ್ಳೇನ’ ಅಂತ ತಲಿ ಕೆಟ್ಟ ಕೇಳಿದೆ.
’ಅಯ್ಯೋ ಮಾರಾಯಾ, ನಿನ್ನ ಜೊತಿ ಮಾತಾಡೋದ ವಜ್ಜ ನೋಡಪಾ ಏನರ ಅಂದರ ಏನರ ತಿಳ್ಕೊತಿ..ನಾವ ಹೇಳಲಿಕತ್ತಿದ್ದ ನಮ್ಮ ಕಾರ್ಯಕ್ರಮಕ್ಕ ಏನರ ಸ್ವಲ್ಪ ಸಹಾಯ ಮಾಡು’ ಅಂತ ಅಂದರು.
ಇವರ ಅಗದಿ ಓಣ್ಯಾಗ ರತಿ-ಕಾಮಣ್ಣನ ಕೂಡಸಬೇಕಾರ ಮನಿ ಮನಿಗೆ ಪಟ್ಟಿ ವಸೂಲ ಮಾಡ್ತಾರಲಾ ಹಂಗ ವರ್ಲ್ಡ ಪಾಪ್ಯೂಲೇಶನ್ ಡೇ ಕ್ಕ ಪಟ್ಟಿ ಎತ್ತಲಿಕ್ಕೆ ಬಂದಾರ ಅಂತ ಗ್ಯಾರಂಟಿ ಆತ.
ಇನ್ನ ರೊಕ್ಕಾ ಅಂತೂ ನಾ ಕೈಬಿಟ್ಟ ಕೊಡೊಂವ ಅಲ್ಲಾ, ಹೆಂಗಿದ್ದರು ನಮ್ಮ ದೋಸ್ತ ಪಚ್ಚ್ಯಾ ಮೆಡಿಕಲ್ ರೆಪ್ ಇದ್ದಾನ, ಅವನ ಕಡೆ ಈ ಕಂಟ್ರಾಸೇಪ್ಟಿವ್ ಸ್ಯಾಂಪಲ್ಸ್ ಪುಕ್ಕಟ ಇಸ್ಗೊಂಡ ಬಂದ ಕೊಟ್ಟರಾತು, ಇವರ ಕಾರ್ಯಕ್ರಮದಾಗ ಫ್ರೀ ಹಂಚವಲ್ಲರಾಕ, ಹಂಗ ಜಗತ್ತಿನ ಬಗ್ಗೆ ಗೊತ್ತಿಲ್ಲಾ at least ನಮ್ಮ ಓಣಿ ಜನಸಂಖ್ಯೆರ ಕಡಮಿ ಆಗ್ತದ ಅಂತ ವಿಚಾರ ಮಾಡಿ ನಾ ಅವರಿಗೆ ನನ್ನ ಐಡಿಯಾ ಹೇಳಿದರ, ಅದರಾಗ ರಿಟೈರ್ಡ ಮೆಡಿಕಲ್ ಸೇಲ್ಸ ಮ್ಯಾನೇಜರ ಇದ್ದ ಒಬ್ಬ ಅಂಕಲ್
’ಏ, ಆ ಮೆಡಿಕಲ್ ರೆಪ್ ಗೊಳದ್ದ ಸ್ಯಾಂಪಲದ್ದ ಏನ ಗ್ಯಾರಂಟೀ ಇರಂಗಿಲ್ಲ ಬಿಡೋ..ಮತ್ತ ಎಲ್ಲರ ನಾವ ಅವನ್ನ ಹಂಚಬೇಕು ಕಡಿಕೆ ಓಣ್ಯಾಗ ವರ್ಷಕ್ಕ ಐದ ಆರ ಹುಟ್ಟೋವ ಹತ್ತ ಹನ್ನೆರಡ ಹುಟ್ಟಿದರ ಏನ್ಮಾಡ್ತಿ’ ಅಂತ ಅಂದರು. ನಂಗ ಆ ಲಾಜಿಕ್ಕು ಕರೆಕ್ಟ ಅನಸ್ತ. ಕಡಿಕೆ ತಲಿ ಕೆಟ್ಟ ಕಿಸೆದಾಗಿಂದ ಎರಡನೂರ ರೂಪಾಯಿ ಕೊಟ್ಟ
’ನಾ ಎರಡ ಹಡದೇನಿ, ನಂದ ಇಷ್ಟ ಕಂಟ್ರಿಬ್ಯೂಶನ್ ಪಾಪ್ಯೂಲೇಶನ್ ಡೇ ಕ್ಕ’ ಅಂತ ಹೇಳಿ ಕಳಸಿದೆ.
ಅಲ್ಲಾ ಆ ಅಂಕಲ್ ಡೇಟ್ ಬಾರ ಆಗಿದ್ದ ಕಂಟ್ರಾಸೆಪ್ಟಿವ್ಸ್ ಬಗ್ಗೆ ಹೇಳಿದರಲಾ ಆವಾಗ ನಂಗ ಒಂದ ಇಶ್ಯು ನೆನಪಾತ. ಅಲ್ಲಾ ಅದು ನಿಮಗೂ ಗೊತ್ತಿರಬೇಕ ಬಿಡ್ರಿ, ಅಮೇರಿಕಾದಾಗ ಒಬ್ಬ ಮನಷ್ಯಾ ಒಂದ ಫಾರ್ಮಾ ಕಂಪನಿ ಮ್ಯಾಲೆ ಕೇಸ ಹಾಕಿದ್ನಂತ ’ ನಾವು ನಾಲ್ಕ ವರ್ಷದಿಂದ ನಿಮ್ಮ ಕಂಪನಿ ಕಂಟ್ರಾಸೆಪ್ಟೀವ್ಸ್ ಉಪಯೋಗ ಮಾಡಲಿಕತ್ತೇವಿ, ನಮಗ ನಾಲ್ಕ ವರ್ಷದಾಗ ಎರಡ ಮಕ್ಕಳಾಗ್ಯಾವ, ಸೊ ನಿಮ್ಮ ಪ್ರೊಡಕ್ಟ ಡಿಫೇಕ್ಟಿವ್ ಅದ, ನಂಗ ಎರಡ ಮಕ್ಕಳ ಹುಟ್ಟಲಿಕ್ಕೆ ನಿಮ್ಮ ಕಂಟ್ರಾಸೆಪ್ಟಿವ್ಸ್ ಕಾರಣ ಹಿಂಗಾಗಿ ಆ ಎರಡು ಮಕ್ಕಳನ ಸಾಕಲಿಕ್ಕೆ ನನಗ ಕಾಂಪೆನ್ಸೇಶನ್ ಬೇಕು’ ಅಂತ ಕೋರ್ಟಿಗೆ ಹೊದನಂತ.
ಅಂವಾ ಮೆಡಿಕಲ್ ಪ್ರಿಸ್ಕ್ರಿಪ್ಶನ್, ಬಿಲ್, ರಿಸಿಪ್ಟ ಎಲ್ಲಾ ಅಗದಿ ಪದ್ದತ ಸೀರ, ಮ್ಯಾಲೆ ಹೆಂಡ್ತಿ ಮಕ್ಕಳನ್ನ ಸಹಿತ ಜೊತಿಗೆ ಕರಕೊಂಡ ಕೋರ್ಟಿಗೆ ಪ್ರೊಡ್ಯೂಸ್ ಮಾಡಿದಾ. ಈ ಮೆಡಿಕಲ್ ಕಂಪನಿಯವರಿಗೆ ತಲಿ ಕೆಟ್ಟ ಹೋತ. ಹಂಗ ನಮ್ಮ ಕಂಪನಿ ಪ್ರಡಕ್ಟ ಸರಿ ಇಲ್ಲಾ ಅಂತ ಯಾವಾಗ ಒಂದ ಹಡದ ಮ್ಯಾಲೆ ಗೊತ್ತಾತಿಲ್ಲೋ ಆವಾಗ ಬಿಟ್ಟ ಬಿಡಬೇಕಿತ್ತು ಮತ್ತ್ಯಾಕ ಕಂಟಿನ್ಯೂ ಮಾಡಿ ಎರಡನೇದ ಹಡದಿ ಅಂತ ಅವರ ಅರ್ಗ್ಯೂಮೆಂಟ. ಅದಕ್ಕ ಅವನ ಹೆಂಡ್ತಿ ಏನ ಅಂದ್ಲ ಗೊತ್ತ? ’ಒಂದನೇದ ಹೆಣ್ಣ ಆತರಿ, ಇನ್ನ ಎರಡನೇದರ ಗಂಡ ಆಗ್ತದ ಅಂತ ಅದ ಗುಳಗಿ ಕಂಟಿನ್ಯೂ ಮಾಡಿದ್ವಿ ಎರಡನೇದ ಗಂಡ ಆತ. ಈಗ ಗುಳಗಿ ಸ್ಟಾಪ ಮಾಡೇವಿ ಇನ್ನೇನ ಮಕ್ಕಳ ಆಗೋದ ಡೌಟ’ ಅಂದ್ಲು.
ಆ ಜಡ್ಜ ತಲಿಕೆಟ್ಟ ಅವಂಗ ’ನೀ ಕಾಂಟ್ರಾಸೆಪ್ಟಿವ್ ಮಕ್ಕಳಾಗಲಾರದ್ದಕ್ಕ ತೊಗೊಂಡಿದ್ದೊ ಇಲ್ಲಾ ಮಕ್ಕಳಾಗೋದಕ್ಕೊ ತೊಗೊಂಡಿದ್ದೋ ’ಅಂತ ಕೇಳಿದರ ’ಸರ್, ನಾ ಮಕ್ಕಳ ಸದ್ಯೇಕ ಬ್ಯಾಡ ಅಂತನ ಇವರ ಕಂಪನಿ ಪ್ರಡಕ್ಟ ಯೂಜ್ ಮಾಡಿದ್ದೆ, ಆದರ ಪ್ರಡಕ್ಟ ಡಿಫೇಕ್ಟ ಇದ್ದದ್ದಕ್ಕ ಎರಡ ಮಕ್ಕಳಾಗೇವ, ಈಗ ನನಗ ಅವನ್ನ ಸಾಕಲಿಕ್ಕೆ ಕಂಪನ್ಸೇಶನ್ ಬೇಕ’ ಅಂತ ಹಟಾ ಹಿಡದಾ. ಕಡಿಕೆ ಆ ಫಾರ್ಮಾ ಕಂಪನಿಯವರ ಜೌಟ ಆಫ್ ಕೋರ್ಟ ಸೆಟ್ಲಮೆಂಟ್ ಮಾಡಿ ಅಂವಾ ನಾಲ್ಕ ವರ್ಷ ಎಷ್ಟ ಕಾಂಟ್ರಾಸೇಪ್ಟಿವಕ್ಕ ರೊಕ್ಕಾ ಬಡದಿದ್ದಾ ಅದನ್ನ ಇಂಟರೆಸ್ಟ ಸಹಿತ ಕೊಟ್ಟ ಸೆಟ್ಲ್ ಮಾಡಿದ್ರು.
ಅನ್ನಂಗ ಇನ್ನೊಂದ ಮಜಾ ಕೇಳ್ರಿಲ್ಲೇ ಇದ ಹೆಂಗ ಜುಲೈ 11ಕ್ಕ world population day ಸೆಲೆಬ್ರೇಟ ಮಾಡ್ತಾರಲಾ ಹಂಗ ಸೆಪ್ಟೆಂಬರ್ 26ಕ್ಕ, world contraception day ಸೆಲೆಬ್ರೇಟ ಮಾಡ್ತಾರ. ಇನ್ನ ಈ ವರ್ಲ್ಡ ಕಂಟ್ರಾಸೆಪ್ಶೆನ್ ಡೇ ದ್ದ ಉದ್ದೇಶ ಏನಪಾ ಅಂದರ ಜನರ ಒಳಗ ಕಂಟ್ರಾಸೆಪ್ಶನ ಬಗ್ಗೆ ಮತ್ತ ಸೇಫ್ ಸೆಕ್ಸ ಬಗ್ಗೆ ಜಾಗೃತಿ ಮೂಡಸ್ತಾರ.
ಅವರದೇನಪಾ ಮಿಶನ್ ಅಂದರ every pregnancy in the world should be a planned one and every pregnancy is wanted ಇರಬೇಕ ಅನ್ನೋದ.
ಅಲ್ಲಾ ಹಂಗ ನಾವೇಲ್ಲಾ ಪ್ಲ್ಯಾನಿಂಗ ಇಲ್ಲಾ ಏನಿಲ್ಲಾ, ಎಲ್ಲಾ ದೇವರ ಕೊಡೊಂವಾ ಅಂತ ಪುತು ಪುತು ಹಡದದ್ದಕ್ಕ ಇವತ್ತ ನಮ್ಮ ದೇಶದ ಹಣೇಬರಹ ಹಿಂಗ ಆಗೇದ. ನಾವ ಯಾವಾಗೋ ಪ್ಲಾನ ಮಾಡಿರ್ತೇವಿ ಅದ ಯಾವಾಗ ಆಗಿರ್ತದ.
ಇನ್ನೊಂದ ವಿಚಿತ್ರ ಕೇಳ್ರಿಲ್ಲೇ world contraception day ಕ್ಕ ಮತ್ತ world population day ಕ್ಕ ಒಂಬತ್ತೂವರಿ ತಿಂಗಳ ಫರಕ ಅಂದರ ಜನಾ ಸೆಪ್ಟೆಂಬರದಾಗ ಕಂಟ್ರಾಸೆಪ್ಶನ್ ಡೇ ದಿವಸ pregnancy plan ಮಾಡಿದರ ಜುಲೈ ಫಸ್ಟ ವೀಕನಾಗ ಹಡಿತಾರ, ಮತ್ತ ಪಾಪ್ಯೂಲೇಶನ್ ಜಾಸ್ತಿ ಆಗ್ತದ, ಮತ್ತ್ world population ಜಾಸ್ತಿ ಆತ ಅಂತ july11ಕ್ಕ ಪಾಪ್ಯೂಲೇಶನ್ ಡೇ ಸೆಲೆಬ್ರೇಟ್ ಮಾಡಿ ಜನಸಂಖ್ಯಾ ಹೆಚ್ಚ ಆದರ ಹಂಗ ಆಗ್ತದ ಹಿಂಗ ಆಗ್ತದ, ಗ್ಲೋಬಲ್ ವಾರ್ಮಿಂಗ ಆಗ್ತದ, ಸುನಾಮಿ ಬರತದ, ಭೂಕಂಪ ಆಗ್ತಾವ, ಕಾಳ್ಗಿಚ್ಚ ಹತ್ತಾವ ಅಂತ ದೊಡ್ಡ ದೊಡ್ಡ ಭಾಷಣಾ ಮಾಡ್ಕೋತ ಅಡ್ಡಾಡತಾರ.
ಅಲ್ಲಾ ಹಂಗ ನಾವ ಸೀರಿಯಸ್ಸಾಗಿ ಪಾಪ್ಯುಲೇಶನ್ ಕಂಟ್ರೋಲ್ ಮಾಡಬೇಕು ಅಂದ್ರ, ಈ ಸ್ವರ್ಣಬಿಂದು, ಪೋಲಿಯೋ ಡ್ರಾಪ್ ಹೆಂಗ ಸಣ್ಣ ಹುಡುಗರಿಗೆ ಹುಡ್ಕ್ಯಾಡಿ ಹಿಡದ ಎರಡ-ಎರಡ ಹನಿ ಹಾಕತಾರಲಾ ಹಂಗ ಎರಡೆರಡ ಮಕ್ಕಳನ್ನ ಹಡದವರನ್ನ ಹಿಡದ ತಿಂಗಳಿಗೊಮ್ಮೆ ಕಂಟ್ರಾಸೆಪ್ಟಿವ್ ಡ್ರಾಪ್ ಹಾಕೋ ವ್ಯವಸ್ಥಾ ಮಾಡಬೇಕು. ಇಲ್ಲಾ ರೇಶನ್ನಾಗ ಬೇಕಾರ ಒಂದ ಕೆ.ಜಿ ಅಕ್ಕಿ ಕಡಮಿ ಕೊಡವಲ್ಲರಾಕ ಒಂದ ಪಾವ ಕೆ.ಜಿ ಕಂಟ್ರಾಸೇಪ್ಟಿವ್ ಟ್ಯಾಬ್ಲೇಟ್ಸ್ ಕೊಡಬೇಕ ಅನಸ್ತದ. ಇಲ್ಲಾ ಇನ್ನ ಈ ಬ್ಲಡ್ ಕ್ಯಾಂಪ್, ಐ ಕ್ಯಾಂಪ ಮಾಡಿದಂಗ ಫ್ರೀ ಫ್ಯಾಮಿಲಿ ಪ್ಲ್ಯಾನಿಂಗ್ ಕ್ಯಾಂಪ್ ಮಾಡಬೇಕ. ಅಲ್ಲಾ ಅದು ಗಂಡಸರಿಗೆ ಮಾಡಿಸಿದರ ಖರೇನ ಪಾಪ್ಯೂಲೇಶನ್ ಕಡಮಿ ಆಗ್ತದ ನೋಡ್ರಿ ಮತ್ತ.
ತುಂಬಾ ಚೆನ್ನಾಗಿ ಬರೆದಿದ್ದೀರಿ ಪ್ರಶಾಂತ್,
ನೀವ್ ಹೇಳಿದಾಂಗ ನಾವು ಆ ಸ್ಟೇಜ್ ಧಾಟಿ ಮುಂದ ಬಂದವರ ! ಈಗ ಎನಿದ್ರೂ ಉಪದೇಶ ಮಾಡುದ ಅಷ್ಟ !!☺️