ನಿನ್ನೆ ವಾಲೆಂಟೆನ್ಸ್ ಡೇ ಇತ್ತು , ವಾಲೆಂಟೆನ್ಸ್ ಡೇ ಅಂದರ ಪ್ರೇಮಿಗಳಿಗೆ ಹಬ್ಬ ಇದ್ದಂಗಂತ, ನಮ್ಮಂಗ ಲಗ್ನ ಆಗಿ ಹದಿನೈದ ವರ್ಷ ಆದೊರಿಗೆ ‘ಬಾಸಿ ಈದ್’ ಇದ್ದಂಗ. ಬಾಸಿ ಈದ್ ಅಂದ್ರ ನಿನ್ನೆ ಹಬ್ಬದೂಟಾ ಮಾಡ್ಕೊಂಡ ತಿಂದ ಉಳದದ್ದನ್ನ ಇವತ್ತ ತಿನ್ನೋ ಹಬ್ಬ. ಹಂಗs ನಾವ ಮದುವಿಕಿಂತ ಮೊದ್ಲ ಕರಕೊಂಡ ಅಡ್ಡಾಡೋದ ‘ಈದ್’ ಅಂದರ ಹಬ್ಬ ಇದ್ದಂಗ ಅಂತ ಅನ್ಕೋಂಡರ ಮುಂದ ಅದ ಹುಡಗಿನ ಕಟಗೊಂಡ ಸಂಸಾರ ಮಾಡೋದ ಅದ ಅಲಾ ಅದು ಜೀವನ ಪರ್ಯಂತ ‘ ಬಾಸಿ ಈದ’ ಇದ್ದಂಗ. ಹಂಗ ನಾವು ವ್ಯಾಲೆಂಟೆನ್ಸ ಡೇ ನ ‘ಈದ’ ಅಂತ ಸೆಲೆಬ್ರೇಟ ಮಾಡೋದ ಭಾಳಂದರ ಎರಡ – ಮೂರ ವರ್ಷ ಇಷ್ಟ ಇರಬಹುದು. ಮುಂದ ಬರೆ ನಮಗ ಇದು ‘ಬಾಸಿ ಈದ’. ಇರಲಿ ಅದೆಲ್ಲಾ ನಮ್ಮ- ನಮ್ಮ ಹಣೇಬರಹ , ಹಗಲಗಾ ಹಾಡಿದ್ದ ಹಾಡೋ ಕಿಸಬಾಯಿ ದಾಸಾ ಅಂತ ಹೇಳಿದ್ದ ಹೇಳಿದರ ಯಾರರ ಎಷ್ಟ ಕೇಳತಾರ, ಓದತಾರ.
ಹಂಗ ನನಗ ಮೊದ್ಲಿಂದ ಈ ‘ಪ್ರೇಮಿಗಳ ದಿವಸ’ ಕಂಡರ ಆಗಿ ಬರಂಗಿಲ್ಲಾ, ಕಾಲೇಜನಾಗ ಇದ್ದಾಗಂತೂ,ಪ್ರೇಮಿಗಳ ದಿವಸಕ್ಕ ವಿರೋಧ ಮಾಡಿ ,ಧರಣಿ ಹೂಡಿ, ಪ್ರೇಮಿಗಳಿಗೆ ಧಿಕ್ಕಾರ ಅಂತಿದ್ದೆ, ಇದು ನಮ್ಮ ಭಾರತೀಯ ಸಂಸ್ಕ್ರತಿ ಅಲ್ಲಾ, ನಮ್ಮ ಸಂಪ್ರದಾಯ ಅಲ್ಲಾ ಅಂತ ಹೊಯ್ಕೋತ ಅಡ್ಡಾಡತಿದ್ದೆ. ಖರೇ ಹೇಳ್ಬೇಕಂದರ ಮುಂದ ಮದುವಿ ಆದ ಮ್ಯಾಲೆ ಗೊತ್ತಾತು ತಮ್ಮ-ತಮ್ಮ ಗಂಡಂದರನ್ನ ಪ್ರೇಮಿ ಅಂತ ತಿಳ್ಕೋಳ್ಳೋದು, ಇಲ್ಲಾ ಹಂಗ ತಿಳ್ಕೋಂಡ ಪ್ರೀತಿಸೋದು ನಮ್ಮ ಹೆಣ್ಣ ಮಕ್ಕಳ ಸಂಸ್ಕ್ರತಿ, ಸಂಪ್ರದಾಯನ ಅಲ್ಲಾ ಅಂತ. ಯಾ ಹೆಂಡತಿನೂ ತನ್ನ ಗಂಡನ್ನ ‘ಪ್ರೇಮಿ’ ಅಂತ ನೋಡಂಗಿಲ್ಲಾ, ಭಾಳ ಅಂದರ ಆವಾಗ- ಇವಾಗ ತನ್ನ ‘ಗಂಡಾ’ ಅಂತ ಪ್ರೀತಿ ಮಾಡಬಹುದು. ಹಂಗ ‘ ಗಂಡಾ’ ಮತ್ತ ‘ಪ್ರೇಮಿ’ಎರಡೂ ಒಂದ ವ್ಯಕ್ತಿಯ ಎರಡ ಅವತಾರಗಳು ಅಂತ ತಿಳ್ಕೋಂಡ ಗಂಡನ ಪುಜಾ ಮಾಡೋ ಪುಣ್ಯಾತಗಿತ್ತ್ಯಾರ ಭಾಳ ಕಡಿಮಿ ಇದ್ದಾರ.
ನಾ ಹಂಗ ಈ ವಾಲೆಂಟೆನ್ಸ್ ಡೇ ನ ವ್ಯಯಕ್ತಿಕವಾಗಿ ವಿರೋಧ ಮಾಡಲಿಕ್ಕ ಕಾರಣನೂ ಇತ್ತ. ಒಂದು ನನ್ನ ಆವಾಗಿನ ಮಾರಿಗೆ ಯಾ ಒಂದ ವ್ಯಾಲೆಂಟೆನೂ ಇದ್ದಿದ್ದಿಲ್ಲಾ, ನನಗ ಯಾರನು ಪಟಾಯಿಸಿ ಒಳಗ ಹಾಕೋಳೊ ಕ್ಯಾಪಿಸಿಟಿನೂ ಇದ್ದಿದ್ದಿಲ್ಲಾ. ಅವಾಗ ಹುಡಗ್ಯಾರು ಸ್ವಲ್ಪ ನೋಡಲಿಕ್ಕ ಛಂದ ಇದ್ದೊಂವಾ, ಕಿಸೆದಾಗ ಸ್ವಲ್ಪ ರೊಕ್ಕ ಇದ್ದೊಂವಾ ಇದ್ದರ ಸಾಕ ಅವರನ ಪಟಾಯಿಸಿ ಬಿಡತಿದ್ದರೂ. ಇನ್ನ ಯಾವದರ ಹುಡಗನ ಕಡೆ ಬೈಕ ಇದ್ದರಂತೂ ಮುಗದ ಹೋತ. ಅಂವಾ ಎರಡ -ಮೂರ ಪಟಾಯಿಸಬಹುದಿತ್ತ, ಯಾಕಂದರ ಅವನ ಕಡೆ ಬೈಕಿತ್ತಲಾ, ಅಂವಾ ಕೊತಂಬರಿ ಕಾಲೇಜನ್ಯಾಗಿಂದ ಜಾಬೀನ ಕಾಲೇಜು, ಕಾಮರ್ಸ್ ಕಾಲೇಜು ಎರೆಡು ಕವರ ಮಾಡಬಹುದಿತ್ತು. ಇನ್ನ ಹಿಂತಾ ಪರಿಸ್ಥಿತಿ ಒಳಗ ನಮ್ಮಂತಾವರ ಮಾರಿಗೆ ಯಾರರ ಬಿಳೋದ ಅಂದ್ರ ಅವರ ನಸಿಬ ಖೊಟ್ಟಿ ಇರಬೇಕು ಇಷ್ಟ, ಅಲ್ಲಾ ಮುಂದ ಹಂಗ ಪಟಾಯಿಸಿ ಬಿದ್ದಿದ್ದನ್ನ ಮದವಿ ಆದ ಮ್ಯಾಲೆ ನಮ್ಮ ನಸೀಬ ಖೊಟ್ಟಿ ಆಗತಿತ್ತ ಆ ಮಾತ ಬ್ಯಾರೆ, ಆದ್ರೂ ನನ್ನ ಹಣೆಬರಕ್ಕ ಯಾವದರ ಒಂದೆರೆಡ ‘ಲವ್’ ಬ್ರೆಕ್ ಅಪ್ ಆಗಿದ್ದು ಬೀಳತಿದ್ದಿಲ್ಲಾ. ಅದು ಖರೆ ಬಿಡ್ರಿ, ಹೊಸಾವ ನಮ್ಮನ ಮೂಸ ನೋಡಂಗಿಲ್ಲಾ ಅಂದ್ರ, ಇನ್ನ ಅನುಭವ ಇದ್ದುದ್ವು ಯಾಕ ನೋಡತಾವ ಅಂತೇನಿ. ಅಲ್ಲಾ ಹಂಗ ನನಗ ಛಂದ- ಛಂದನ ಹುಡಗ್ಯಾರ ಭಾಳ ಹಚಗೊಂಡಿದ್ದರು ಆದ್ರ ಅದು ಏನ ಇದ್ರು ನನ್ನ ನೊಟ್ಸ್ ಇಸಗೊಳ್ಳಿಕ್ಕೆ ಇಷ್ಟ. ಹೇಳಿ ಕೇಳಿ ಇದ್ದದ್ದರಾಗ ಕಾಲೇಜಿನಾಗ ಸ್ವಲ್ಪ ಶಾಣ್ಯಾ, ನಾನೂ ದೊಡ್ಡಿಸ್ತನಾ ಮಾಡ್ಲಿಕ್ಕೆ ನಾ ಓದೋದ ಬಿಟ್ಟ ಹುಡಗ್ಯಾರಿಗೆ ನೊಟ್ಸ್ ಕೊಟಗೋತ ಅಡ್ಯಾಡತಿದ್ದೆ. ಏನಿಲ್ಲಾ ಅಂದ್ರು ಒಂದ ಮೂರ – ನಾಲ್ಕ ಮಂದಿ ದೋಸ್ತರು ನನ್ನ ಥ್ರೂ ನ ಹುಡಗ್ಯಾರನ ಪರಿಚಯ ಮಾಡಿಸಿಕೊಂಡ ಪಟಾಯಿಸಿ ಮುಂದ ಲಗ್ನಾನೂ ಮಾಡಕೊಂಡ, ಒಂದೇರಡ ಹಡದು ಈಗ ಬಹುಶಃ. ನಂಗ ” ಇವನ, ಹು.ಸೊ.ಮಗ ಇಕಿನ್ನ ಪರಿಚಯ ಮಾಡಿಸಿ ಕೋಟ್ಟಾಂವ ” ಅಂತ ಮನಸ್ಸಿನಾಗ ಬೈದ್ರು ಬೈತಿರಬಹುದು.
ಒಮ್ಮೆ ನನಗ ನನ್ನ ಕ್ಯಾಪಿಸಿಟಿ, ಹಕಿಕತ್, ಲೆವಲ್ ಗೊತ್ತಾದ ಮ್ಯಾಲೆ, ‘ಈ ಪ್ರೀತಿ- ಪ್ರೇಮ ಎಲ್ಲಾ ನನ್ನ ಪ್ರಿಯಾರಿಟಿ ಅಲ್ಲಾ. ನಾ ಏನಿದ್ದರೂ ಓದಿ ಶಾಣ್ಯಾ ಆಗಿ ಜೀವನದಾಗ ಮುಂದ ಬರಬೇಕು. ಅವ್ವಾ-ಅಪ್ಪನ ಸಾಕಬೇಕು, ತಂಗಿನ್ನ ಲಗ್ನಾ ಮಾಡಿ ಅಟ್ಟಬೇಕು’ ಅಂತಿದ್ದೆ. ಮತ್ತ ನಾ ಅನಕೊಂಡಂಗ ಎಲ್ಲಾ ಮಾಡಿದೆ ಬಿಡ್ರಿ, ಬರೇ ಅವ್ವಾ-ಅಪ್ಪನ ಇಷ್ಟ ಏನ ಮುಂದ ನಂದು ಅಂತ ಒಂದ ಹೆಂಡ್ತಿನ ಕಟಕೊಂಡ ಎರಡ ಮಕ್ಕಳನ್ನೂ ಹಡದು ಸಾಕಲಿಕತ್ತೇನೆ ಆ ಮಾತ ಬ್ಯಾರೆ.
ಹಂಗ ನನಗ ಮತ್ತ ಈ ಪ್ರೇಮಿಗಳ ದಿವಸಕ್ಕ ಒಂದ ನಂಟ ಅದ. ಯಾಕಂದರ ನಂದು ಎಂಗೇಜಮೆಂಟ ಆಗಿದ್ದು ಫೆಬ್ರುವರಿ ೧೩,೨೦೦೦ಕ್ಕ , ನಿಶ್ಚಯ ಆದ ಮರದಿವಸನ ‘ವ್ಯಾಲೆಂಟೇನ್ಸ ಡೆ’ ಇತ್ತ. ಇನ್ನ ಏನರ ಈ ‘ವ್ಯಾಲೆಂಟೇನ್ಸ ಡೆ’ಕ್ಕ ನಾ ನನ್ನ ಹುಡಗಿಗೆ ಗಿಫ್ಟ್ ಕೊಡಲಿಲ್ಲಾಂದರ ಸಮಾಜದಾಗ ಅದು ಗಂಡಸರ ಒಳಗ ಸರಿ ಕಾಣಂಗಿಲ್ಲಾ ಅಂತ ಆಗಿನ ಕಾಲದಾಗ ೭೫೦ ರೂಪಾಯಿ ಕೊಟ್ಟ ಒಂದ ಚೂಡಿದಾರ ಸೆಟ್ (ಅರಬಿ ಇಷ್ಟ ಮತ್ತ) ಕೊಡಿಸಿದೆ. ಹಂಗ ರೆಡಿಮೇಡ ತೊಗಬೇಕಂದರ ಮತ್ತ ಅಕಿ ಸೈಜ್ ಕೇಳಬೇಕು, ಅಕಿ ಇವನೌನ ಇಂವಾ ಏನ ಎಂಗೇಜಮೆಂಟ ಆದ ಮರದಿವಸ ಸೈಜ್ ಕೇಳಲಿಕತ್ತಾನಲಾ ಅಂತ ತಪ್ಪ ತಿಳ್ಕೊಬಾರದ ಅಂತ ಸುಮ್ಮನ ಬಿಟ್ಟೆ. ಇನ್ನ ನಾ ಯಾವದರ ಬ್ಯಾರೆ ಸೈಜಿಂದ ತರಬೇಕು, ‘ಅಕಿ ಇದ ಯಾರ ಸೈಜ ಖರೇ ಹೇಳ’ ಅಂತ ಗಂಟ ಬೀಳಬಾರದ ಅಂತ ಸುಮ್ಮನ ಒಂದ ಒಂಬತ್ತ ವಾರಿ ಪತ್ಲದಷ್ಟ ಅರಬಿನ ಕೊಡಿಸಿದೆ. ಹೆಂಗಿದ್ರು ಅವರವ್ವನ ಟೇಲರ್ ಇದ್ದಾಳ ಅಕಿ ತನಗ ಹೆಂಗ ಬೇಕ ಹಂಗ ಹೊಲಿಸಿಕೊಳ್ಳಲಿ ಅಂತ ಅರಷಣ-ಕುಂಕಮ ಹಚ್ಚಿ ಕೊಟ್ಟೆ. ಮತ್ತ ಇನ್ನ ವ್ಯಾಲೆಂಟೆನ್ಸ್ ಡೆ ಅಂದರ ಬರೆ ಕೊಡೋದ ಇಷ್ಟ ಅಲ್ಲಾ, ಅಕಿನೂ ಏನರ ಕೊಡಬೇಕಲಾ. ಅಕಿ ನಾ ಕೊಟ್ಟಿದ್ದ ನೋಡಿ ಮುಂದ ಮೂರ ದಿವಸ ಬಿಟ್ಟ ಒಂದ ದೊಡ್ಡ ಪೆಟ್ಟಿಗೆ ಕೊಟ್ಲು. ನಂಗ ಅದನ್ನ ನೋಡಿದ ಕೊಡಲೇನ ಅನಸ್ತು ‘ಇದು ಪಟ್ಟಣಾ ಬಿಚ್ಚೊ ಕೆಲಸಾ’ ಅಂತ, ಏನರ ಒಂದ ಸಣ್ಣ ಸಾಮಾನ ಕೊಟ್ಟ ಅದಕ್ಕ ಊರಾಗಿನ ರದ್ದಿ ಪೇಪರ ಸುತ್ತಿ -ಸುತ್ತಿ ದೊಡ್ಡ ಡಬ್ಬಿ ಮಾಡಿ ಗಿಫ್ಟ್ ಪ್ಯಾಕ ಮಾಡೋದು ಆಗಿನ ಕಾಲದಾಗ ಒಂದ ಚಟಾ ಇತ್ತ. ಇನ್ನ ನಂಗ ಅದನ್ನ ಬಿಚ್ಚೋದ ಅನಿವಾರ್ಯ ಇತ್ತು. ಒಂದನೇ ಸಲಾ ನಮ್ಮ ಹುಡಗಿ ಕೊಟ್ಟದ ಬ್ಯಾರೆ, ಈಗಿಂದ ಬಿಚ್ಚೋದ ಕಲಸಲಿಕತ್ತಾಳ, ಮುಂದ ಏನೇನ ಬಿಚ್ಚೋದ ಅದನೋ ಏನೋ ಅಂತ ಬಿಚ್ಚಲಿಕ್ಕೆ ಹತ್ತಿದೆ. ಹಾಳಿಮ್ಯಾಲೆ ಹಾಳಿ ಸುತ್ತಿದ್ಲು, ನಾ ಅಗದಿ ಧುರ್ಯೋಧನಾ ದ್ರೌಪದಿ ಸಿರಿ ಬಿಚ್ಚಿದಂಗ ರದ್ದಿ ಪೇಪರ ಪರಾ-ಪರಾ ಬಿಚ್ಚಲಿಕತ್ತೆ. ಕಡಿಕೆ ಒಂದ ಅರ್ಧ ತಾಸ ಬಿಚ್ಚಿ- ಬಿಚ್ಚಿ ಸಾಕಾದ ಮ್ಯಾಲೇ ಸಿಸರಿನ್ ಮಾಡಿ ಲಾಸ್ಟ ಬಾಕ್ಸ ಹೊರಗ ತಗದ ನೋಡಿದ್ರ, ಅದರಾಗ ಒಂದ ೧೦:೧೦ ಆಗಿದ್ದ ಟಾಟಾ ಸೊನಾಟಾ ವಾಚ್ ಇತ್ತ, ೪೦೦-೪೫೦ ರೂಪಾಯಿ ಕಿಮ್ಮತ್ತ ಇರಬೇಕ ಇಷ್ಟ, ಅಲ್ಲಾ ಈ ಒಂದ ವಾಚ್ ಸಂಬಂಧ ಇಕಿ ನನ್ನ ಟೈಮ್ ಇಷ್ಟೊತ್ತ ಹಾಳ ಮಾಡಿದ್ಲಲಾ ಅಂತ ತಲಿಕೆಟ್ಟತು. ಆದರೂ ಏನ ಮಾತಾಡಲಾರದ ಸುಮ್ಮನ ಇದ್ದೆ. ಯಾಕಂದರ ಒಂದನೇ “ವ್ಯಾಲೆಂಟೆನ್” ಗಿಫ್ಟ್ ಅಲಾ. ಅದ ಲಾಷ್ಟ ನೋಡ್ರಿ ಮುಂದ ಯಾ ವರ್ಷನು ಪ್ರೇಮಿಗಳ ದಿವಸಕ್ಕ ನಾ ಅಕಿಗೆ ಇಷ್ಟ ಅಲ್ಲಾ ಯಾರಿಗೂ ಗಿಫ್ಟ್ ಕೊಡಲಿಲ್ಲಾ, ಯಾರ ಕಡೇನೂ ಇಸಗೊಳಿಲ್ಲಾ. ಲಗ್ನಾದ ಮ್ಯಾಲೆ ಎಲ್ಲಿ ವ್ಯಾಲಿಂಟೆನ್ಸರಿ ತಲಿ, ಮದ್ಲ ಹೇಳಿದ್ನೇಲ್ಲಾ ಈಗ ಏನಿದ್ರು ಜೀವನಾ ‘ಬಾಸಿ ಈದ’ ಅಂತ. ಅವಾಗ ಯಾವದನ್ನ ಮೃಷ್ಟಾನ್ನಂತ ತಿಳಿಕೊಂಡಿದ್ದೆವೋ ಅದ ಈಗ ದಿವಸಾ ಕಲಸನ್ನ. ಏಲ್ಲಾ ನಮ್ಮ – ನಮ್ಮ ಹಣೇಬರಹ.
ಆದ್ರೂ ನಾ ಏನ ಅವಾಗ ಎಂಗೇಜಮೆಂಟ ಆದಮ್ಯಾಲೆ, ಲಗ್ನಾ ಆಗೋಕಿಂತ ಮುಂಚೆ ಮಂಗ್ಯಾನಂಗ ಮಾಡತಿದ್ದೆ, ಮಾಡಿದ್ದೆ, ಅನ್ನೋದನ್ನ ಈಗ ಒಮ್ಮೆ ನೆನಿಸಿಕೊಂಡರ ಹೆಂತಾ ಮೂರ್ಖ ಇದ್ದೆ ಅಂತ ಅನಸ್ತದ. ದಿವಸಾ ಸಂಜಿಗೆ ಆರ ಆದ ಕೊಡಲೇನ ನನ್ನ ಗಾಡಿ ತೊಗಂಡ ಸಿ.ಬಿ.ಟಿ ಗೆ ಹೋಗಿ ನೇಕಾರನಗರ ಸ್ಟಾಪ್ ಮುಂದ ನಿಲ್ಲತಿದ್ದೆ. ನನ್ನ ಹೆಂಡತಿ ಆಗೋಕಿ ಆವಾಗ ಯಾವೂದೊ ಒಂದ ಫಾರ್ಮಾ ಕಂಪನ್ಯಾಗ ಕಂಪ್ಯೂಟರ ಆಪರೇಟರ್ ಅಂತ ಕೆಲಸ ಮಾಡತಿದ್ಲು. ದಿವಸಾ ಆರ ಗಂಟೆಕ್ಕ ಆಫೀಸ ಬಿಟ್ಟ ನಡಕೋತ ಸಿ.ಬಿ.ಟಿ ಗೆ ಬಂದ, ಅಲ್ಲಿಂದ ನೇಕಾರ ನಗರ ಬಸ್ ಹತ್ತಿ ಮನಿ ಹಾದಿ ಹಿಡಿಯೋಕಿ. ಆ ಟೈಮ್ ನಾಗ ನಾ ಭೆಟ್ಟಿ ಆಗಿ, ಅಕಿ ಹೂಂ ಅಂದರ ಅಕಿನ್ನ ಬೈಕನಾಗ ಕರಕೊಂಡ ಒಂದ ಚೂರ ಮುಂದ ಹೋಗಿ ಬೈಕ ಸೈಡಿಗೆ ಹಚ್ಚಿ, ಆಟೋ ಮಾಡ್ಕೊಂಡ ಕಾಮತ ಹೋಟೆಲಗೆ ಕರಕೊಂಡ ಹೋಗಿ ಒಂದ ಮಾಜಾ ಕುಡಿಸಿ ಮತ್ತ ಆಟೋ ಮಾಡ್ಕೊಂಡ ಸಿ.ಬಿ.ಟಿ ಗೆ ಬಿಟ್ಟ ನಾ ನಮ್ಮ ಮನಿದಾರಿ ಹಿಡಿತಿದ್ದೆ. ಆವಾಗ ನನ್ನ ಕಿಸೆದಾಗ ರೊಕ್ಕ ಇತ್ತು, ಬುಡಕ ಒಂದ ಬೈಕು ಇತ್ತು ಮ್ಯಾಲೆ ನನಗ ಪಟಾಯಿಸಲಿಕ್ಕ ಆಗಂಗಿಲ್ಲಾಂತ ಗೊತ್ತಾಗಿ ಮನ್ಯಾಗಿನವರ ನಿಶ್ಚಯ ಮಾಡಿದ್ದ ಒಂದ ಹುಡಗಿನು ಇತ್ತು. ಮತ್ತ ಇನ್ನೇನ ಬೇಕು, ಮಂಗ್ಯಾಗ ಕಮರಿಪೇಟ ಶೆರೆ ಕುಡಿಸಿದಂಗ ಆಗಿತ್ತ. ಹಂಗ ನನಗ ಬೈಕ ಸರಿಯಾಗಿ ಹೊಡಿಲಿಕ್ಕೆ ಬರತಿದ್ದಿಲ್ಲಾ ಅಂತ ಅಟೊ ಮಾಡ್ತಿದ್ದೆ. ಅದ್ರಾಗ ಡಬಲ್ ರೈಡಿಂಗ ಅಂತೂ ಅಷ್ಟ-ಕ್ಕಷ್ಟ. ಇನ್ನ ಹುಡಗ್ಯಾರನ ಕುಡಿಸಿಗೊಂಡಾಗಂತೂ ಇನ್ನೂ ಟೆನ್ಶನ್ ಆಗತಿತ್ತು, ನಮ್ಮ ಹುಡಗಿ ಅಂತೂ ಒಂದs ಕಡೆ ಕಾಲ ಹಾಕಿ ಕಡಿಗಿ ಆದೋರ ಗತೆ ಬೈಕ ತುದಿಗೆ ಕೂಡೋಕಿ, ನಂಗ ಬ್ಯಾಲೆನ್ಸ ಮಾಡೋದರಾಗ ರಗಡ ಆಗತಿತ್ತು. ಇನ್ನ ಮತ್ತ ಸುಮ್ಮನ ಎಲ್ಲರ ಇಬ್ಬರು ಬೈಕ ಹಾಕೊಂಡ ಬೀಳಬೇಕು, ಏನರ ಹೆಚ್ಚು ಕಡಿಮೆ ಆಗಬೇಕು, ಇಬ್ಬರದೂ ಇನ್ನೂ ಆಗೋದು – ಹೋಗುದು ಬಾಕಿ ಇತ್ತ, ಸುಮ್ಮನ ಯಾಕ ರಿಸ್ಕ, ಕ್ಷಣದ ಸುಖಕ್ಕ ಇಬ್ಬರೂ ಕೂಡೆ ಬೈಕ ಹಾಕ್ಕೊಂಡ ಬಿದ್ದ ಕ್ಷೇಮಾ ಅರ್ಥೊಪಿಡಿಕ್ಸ ಒಳಗ ಅಡ್ಮಿಟ್ ಆಗೋದ ಬ್ಯಾಡಾ ಅಂತ ಆಟೋ ಮಾಡ್ಕೊಂಡ ಅಡ್ಡಾಡತಿದ್ದೆ. ಒಂದು ಆಟೋದಾಗ ಅಡ್ಡಾಡಿದರ ಯಾರು ನೋಡತಿದ್ದಿಲ್ಲಾ, ಇನ್ನೊಂದ ನಾ ಡ್ರೈವಿಂಗ್ ಕಡೆ ತಲಿ ಕೆಡಿಸಿಗೊಳ್ಳಲಾರದ ನನ್ನ ಹೆಂಡತಿ ಆಗೋಕಿಗೆ ತಲಿ ಕೊಟ್ಟ ಕೈ ಬಿಟ್ಟ ಆಡಬಹುದಿತ್ತು.
ಅವತ್ತಿನ ಆಟೋ ಚಟಾ ನನಗ, ನನ್ನ ಹೆಂಡತಿಗೆ ಇವತ್ತು ಅದ. ಅವಾಗ ನಂಗ ಬೈಕ ಬರಂಗಿಲ್ಲಾ ಅಂತ ಆಟೋ ಮಾಡ್ತಿದ್ದೆ ‘ಈಗ ನನ್ನ ಹೆಂಡತಿ ಬೈಕನಾಗ ಸಾಲಂಗಿಲ್ಲಾ’ ಅಂತ ಆಟೋ ಮಾಡ್ತೇನಿ. ಅದಕ್ಕ ನಮ್ಮ ದೊಸ್ತರ ನೀ ಒಂದ ಆಟೋ ತೊಗಂಡ ಬಿಡ ಅಂತ ಗಂಟ ಬಿದ್ದಾರ. ನನಗೂ ಅದ ಖರೆ ಅನಸ್ತದ. ಕಾರ ಅಂತೂ ಈ ಜನ್ಮದಾಗ ತೊಗಳಿಕ್ಕೆ ಸಾಧ್ಯ ಇಲ್ಲಾ, ಸುಮ್ನ ಒಂದ ಆಟೋನರ ತೊಗೊಬೇಕ ಅಂತ ಸಿರಿಯಸ್ ಆಗಿ ವಿಚಾರ ಮಾಡಲಿಕತ್ತೇನಿ. ಇನ್ನ ಎಲ್ಲರ ಹೋಟೆಲ್ ಗೆ ಹೋದರ ಈಕಿ ಬರೆ ‘ಮಾಜಾ’ ಕುಡಿಯೋಕಿ . ಈಗಿನಗತೇ ನನಗ ಹಂಗ ಅಕಿನ್ನ ಬಾರ್ ಗೆ ಕರಕೊಂಡ ಹೋಗೋ ಧ್ಯರ್ಯ ಇರಲಿಲ್ಲ, ಆವಾಗ -ಇವಾಗ ವಾರದಾಗ ಒಂದೆರಡ ಸಲಾ ಇಷ್ಟ ಬಾರಗೆ ಹೋಗ್ತೇನಿ ಅಂತ ಹೇಳೋ ಧೈರ್ಯಾನು ಇರಲಿಲ್ಲ. ನನ್ನ ಹಣೆಬರಹಕ್ಕ ಒಂದ ಹುಡಗಿ ಹೂ೦ ಅಂದಿದ್ದ ರಗಡ ಆಕಿತ್ತ, ಮತ್ತ ಇನ್ನ ಅಕಿಗೆ ಎಲ್ಲರ ನಾ ಆವಾಗ -ಇವಾಗ ತೊಗೊತೇನಿ ಅಂತ ಗೊತ್ತಾಗಿ ನಿಶ್ಚಯ ಮುರಕೊಂಡರ ಮುಂದ ನನ್ನ ಗತಿ ನಿರ್ಗತಿ ಆಗ್ತದ ಅಂತ ಸುಮ್ಮನ ಇದ್ದೆ. ಅಕಿ ನನ್ನ ಜೊತಿ ಪಟಕ್ಕನ ಒಂದ ಮಾಜಾ ಕುಡದ ತನಗ ಲೇಟಾಗ್ತತದ ಅಂತ ನೇಕಾರ ನಗರಕ್ಕ ಜಿಗದ ಬಿಡೋಕಿ ,ಕೆಲವೂಮ್ಮೆ ಕಿಸೆದಾಗ ಜಾಸ್ತಿ ರೊಕ್ಕಾ ಇದ್ದಾಗ ಆಟೋ ಮಾಡ್ಕೊಂಡ ಹೋಗಿ ನೇಕಾರ ನಗರ ಮನಿ ಹತ್ತರ ಬಿಟ್ಟ ಮತ್ತ ಅದ ಆಟೋದಾಗ ವಾಪಾಸ ಬರ್ತಿದ್ದೆ. ಅದರಾಗ ನೇಕಾರನಗರ ರೋಡ ಅಂದರ ಹಳ್ಳಿ ರೋಡ ಇದ್ದಂಗ, ಬಹುಶಃ ನಾ ಬೈಕನಾಗ ಕರಕೊಂಡ ಹೋಗಿದ್ದರ ಇನ್ನೂ ಮಜಾ ಬರತಿತ್ತೋ ಏನೋ?
ಹಿಂಗ ನಂಬದ ವ್ಯಾಲೆಂಟೆನ್ಸ್ ಡೇ ದಿಂದ ಶುರು ಆದ ರೊಮಾನ್ಸ್ ಮುಂದ ಮಕ್ಕಳ ದಿನಾಚಾರಣೆ ಮಟಾ ಅಂದರ ನವೆಂಬರ್ ೧೪ ರ ತನಕ ನಡಿತ, ಆದರ ಮಕ್ಕಳ ಏನ ಆಗಲಿಲ್ಲ ಆ ಮಾತ ಬ್ಯಾರೆ. ಮುಂದ ನವೆಂಬರ್ ೨೮ ಕ್ಕ ಕಡಿಕೆ ಅಕಿಗೆ ತಾಳಿ ಕಟ್ಟಿಸಿ ನಮ್ಮ ಮನ್ಯಾಗ ನನಗ ಕಟ್ಟಿ ಹಾಕಿಬಿಟ್ಟರು. ಮುಂದ ಜೀವನದಾಗ ಒಮ್ಮೆನೂ ನಾವು ವ್ಯಾಲೆಂಟೆನ್ಸ ಡೇ ಮಾಡಲಿಲ್ಲಾ , ಮಾಡೋ ಪ್ರಸಂಗ- ವಾತಾವರಣನು ಇರಲಿಲ್ಲ ಬಿಡ್ರಿ.
ಅಲ್ಲಾ ಮೊದ್ಲ ಹೇಳಿದ್ನೆಲ್ಲಾ, ಅದ ನಮ್ಮ ಸಂಪ್ರದಾಯನ ಅಲ್ಲರಿ, ನಾವ ಏನಿದ್ದರೂ ಪ್ರೀತಿ ಮಾಡೋದ ಬೆಡರೂಮ್ ಒಳಗ ಇಷ್ಟ. ಆಮೇಲೆ ವರ್ಷಗಟ್ಟಲೇ ಪ್ರೀತಿ ಮಾಡೋರಿಗೆ, ಜೀವನ ಪರ್ಯಂತ ಪ್ರೇಮಿಯಾಗಿರೋರಿಗೆ ವರ್ಷಕ್ಕೊಂದ ದಿವಸ ಇಷ್ಟ ‘ಪ್ರೇಮಿಗಳ ದಿವಸ’, ಉಳದೆಲ್ಲಾ ದಿವಸ ನೀವ ಬರೆ ಗಂಡಾ-ಹೆಂಡತಿ ಆಗಿ ಇರ್ರಿ ಅಂದ್ರ ಹೆಂಗರಿ ?
ವಟ್ಟ ಏನ ಅನ್ರಿ, ಯಾವುದು ಅವಾಗ ಪ್ರೇಮಿಗಳ ‘ಈದ’ ಅಂದರ ಹಬ್ಬ ಇರತದೋ ಅದು ಮದುವಿ ಆದ ಮ್ಯಾಲೆ ‘ಬಾಸಿ ಈದ್’ ಆಗೊದಂತೂ ಖರೇನ.
ಪ್ರೇಮಿಗಳಿಗೆಲ್ಲಾ ‘ಈದ್ ಮುಬಾರಕ್’……… ನನ್ನಂತವರಿಗೆ ‘ಬಾಸಿ ಈದ್ ಮುಬಾರಕ್’