ಮುಂಜ ಮುಂಜಾನೆ ಎದ್ದ ರಾಮ್ಯಾ ಮನಿಗೆ ಬಂದಿದ್ದಾ…
’ಲೇ..ಜೋಶಿ ಮಾಸ್ತರ ಮನಿಗೆ ಒಂದ ಕಾರ್ಡ ಕೊಡ ಅಂತ ನನ್ನ ಹೆಂಡ್ತಿ ಹೇಳ್ಯಾಳ….ಇಲ್ಲೇ ಲೋಹಿಯಾ ನಗರದಾಗ ಅದ ಅಂತಲಾ ಅವರ ಮನಿ, ಒಂದ ಹತ್ತ ನಿಮಿಷ ಬಾ ಹೋಗಿ ಬರೋಣ’ ಅಂತ ಅಂದಾ…
’ನಿಮ್ಮ ಮನ್ಯಾಗ ಇವತ್ತ ದೇವರ ಊಟ ಹೌದಲ್ಲ’…..ಅಂತ ನಾ ಕೇಳಿದೆ.
’ಹೌದಲೇಪಾ…ಆದರ ಎನ್ಮಾದೋದ ನಾ ಅವರಿಗೆ ಕಾರ್ಡ ಕೊಡೊದ ಮರತೆ ಬಿಟ್ಟಿದ್ದೆ, ನನ್ನ ಹೆಂಡ್ತಿ ಪೀಡಾ ಗಂಟ ಬಿದ್ದಂಗ ಗಂಟ ಬಿದ್ದಾಳ, ಅದರಾಗ ನಮ್ಮ ಮದ್ವಿ ಮಾಡಿಸಿದ್ದ ಅವರ, ಅವರನ ಬಿಟ್ಟರ ಹೆಂಗ’ ಅಂತ ಬೈಲಿಕತ್ತಾಳ ಅಂತ ಅಂದಾ…
ಜೋಶಿ ಮಾಸ್ತರ ಮದ್ವಿ ಮಾಡಿಸಿದ್ದ ತಪ್ಪಿಗೆ ಈ ಮಗಾ ಕಟ್ಕೊಂಡ, ಇವತ್ತ ತನ್ನ ಮಗನ ಮದ್ವಿಗೆ ಮತ್ತ ಆ ಜೋಶಿ ಮಾಸ್ತರನ ಕರಿತಾನ ಅಂದರ ಅವನೌನ ಇವಂದ ಹೆಂತಾ ಋಣಾಪಾ ಆ ಮಾಸ್ತರ ಮ್ಯಾಲೆ ಅಂತ ಅನಸ್ತ.. ನಾ ಅವಂಗ
’ಲೇ…ನಾ ಬರಂಗಿಲ್ಲಲೇ ಅವರ ಮನಿಗೆ….ಅವರಿಗೆ ಎಂಬತ್ತ ದಾಟ್ಯಾವ.. ನಾ ಹೋದಾಗೋಮ್ಮೆ..ನಿಂಗ ಎಷ್ಟ ಮಕ್ಕಳ ಅಂತ ಕೇಳ್ತಾರ, ನನ್ನ ಹೆಂಡ್ತಿದ ಆಪರೇಶನ್ ಮಾಡಿಸಿ ಹದಿನೈದ ವರ್ಷ ಆಗೇದರಿ ಮಾಸ್ತರ ಅಂದರ…ನಾ ನಿಂಗ ಎಷ್ಟ ಮಕ್ಕಳ ಅಂತ ಕೇಳೇನಿ ಅಂತ ಹಲ್ ಸಟ್ ಹಾಕ್ಕೊಂಡ ನಗತಾರ… ರಸ್ತೆದಾಗ ಗಂಡಾ ಹೆಂಡ್ತಿ ವಾಕಿಂಗ್ ಹೋಗಬೇಕಾರ ಭೇಟ್ಟಿ ಆದರ ಇಕಿ ಯಾರ ಅಂತ ಕೇಳ್ತಾರ…ನನ್ನ ಹೆಂಡ್ತೀರಿ ಮಾಸ್ತರ ಅಂದರ…ಮತ್ತ ಮೊನ್ನೆ ಬ್ಯಾರೆದವರ ಜೊತಿ ನರಸಿಂಹ ದೇವರ ಗುಡಿಗೆ ಬಂದಿದ್ದೇಲಾ ಅಂತಾರ…ಅವರಿಗೆರ ಒಂದೂ ನೆನಪ ಇರಂಗಿಲ್ಲಾ…ಇಪ್ಪತ್ತನಾಲ್ಕ ತಾಸು ಫೇಸಬುಕ್, ಇನ್ಸ್ಟಾ ರೀಲ್ ನೋಡ್ಕೊತ ಕೂಡ್ತಾರ..ಹೋದರ ಕೆಟ್ಟ ಜೀವಾ ತಿಂತಾರಲೇ’ ಅಂತ ಅಂದೆ…
’ಲೇ..ಒಂದ ಕಾರ್ಡ ಕೊಟ್ಟ ಬರೋಣ ಬಾ ಲೇ ಪಾ.. ಮದ್ವಿಗೆ ಬಂದರ ಬರಲಿ ಇಲ್ಲಾಂದರ ಇಲ್ಲಾ’ ಅಂತ ನಂಗ ಜೋರ ಮಾಡಿ ಕರಕೊಂಡ ಹೋದಾ…
ಆ ಜೋಶಿ ಮಾಸ್ತರ ರಾಮ್ಯಾನ್ನ ನೋಡಿದವರ
’ಯಾಕೋ ಹಾದಿ ತಪ್ಪಿ ಬಂದಿಯಲ್ಪಾ….ಏನ ಮಗನ ಮದ್ವಿ ಮಾಡಿದಿ, ನಮಗ ಕರಿಲಿಲ್ಲಾ…..ಮೊನ್ನೆ ನಿನ್ನ ಮಗನ ಹನಿಮೂನ್ ಫೋಟೊ, ವೀಡಿಯೋ ಎಲ್ಲಾ ಫೇಸಬುಕ್ ಒಳಗ ನೋಡಿದೆ’ ಅಂದರು…ನಂಗ ಒಂದ ಸರತೆ ಹಂಗ್ಯಾಕ ಅಂದರ ಅಂತ ತಿಳಿಲಿಲ್ಲಾ….ರಾಮ್ಯಾ ಭಡಕ್ಕನ
’ಸರ್…ಮದ್ವಿ ಇನ್ನೂ ಆಗಿಲ್ಲರಿ…ಅಚ್ಚಿನಾಡದ ಅದ….ಅದಕ್ಕ ಕರಿಲಿಕ್ಕೆ ಬಂದೇನಿ’ ಅಂದಾ
’ಇನ್ನೂ ಮದ್ವಿ ಆಗಿಲ್ಲಾ ……ನಿಮ್ಮಲ್ಲೇ ಪ್ರಸ್ಥ, ಹನಿಮೂನ್ ಮದ್ವಿಕಿಂತಾ ಮೊದ್ಲ ಅಂತ ಏನರ ಪದ್ಧತಿ ಅದ ಏನ ಮತ್ತ’ ಅಂದರು..
’ಏ..ಅವ ಪ್ರೀ- ವೆಡ್ಡಿಂಗ್ ವೀಡಿಯೊ ಮತ್ತ ಫೋಟೊ ಸರ್…ಈಗಿನ ಹುಡುಗರ ಏನೇನರ ಮಾಡ್ತಿರ್ತಾರ, ನಾವ ಹೇಳಿದ್ದ ಎಲ್ಲೇ ಕೇಳ್ತಾವ ಸುಡ್ಲಿ, ನಾವ ಅವರ ಹೇಳಿದಂಗ ಕೇಳ ಬೇಕಾಗ್ತದ’ ಅಂತ ಅಷ್ಟ ಸೂಕ್ಷ್ಮ ಹೇಳಿ ಕಾರ್ಡ ಕೊಟ್ಟ ಎದ್ದಾ.
ಇನ್ನೇನ ಹೊರಗ ಗಾಡಿ ಹತ್ತಬೇಕ ಅನ್ನೋದಕ್ಕ
’ಪ್ರಶಾಂತಾ…ನೀ ಮದ್ವಿಗೆ ಹಿಂದಿನ ದಿವಸ ಋಕ್ಕೋತಕ್ಕ ಹೋದರ ನನ್ನೂ ಕರಕೊಂಡ ಹೋಗಿ ಬಿಡ್ಪಾ..ನಾ ಎಲ್ಲೇ ಒಬ್ಬನ ಅಲ್ಲಿ ತನಕಾ ಹೋಗ್ಲಿ..ಆಮ್ಯಾಲೆ ಲಗ್ನ ದಿವಸ ಸುಡಗಾಡ ಬಫೆ ಇರ್ತದ ನಂಗ ನನ್ನ ಕಾಲ ಮ್ಯಾಲೆ ನಾನ ನಿಂತ ತಿನ್ನಲಿಕ್ಕೆ ಆಗಂಗಿಲ್ಲಾ, ಹಿಂದಿನ ದಿವಸ ಮಂಡಗಿ ಊಟಾ ಹೊಡದ ಬಂದರ ಆತು’ ಅಂತ ಭಿಡೆ ಬಿಟ್ಟ ಹೇಳಿದರು.
ಇನ್ನ ಹಿರೇಮನಷ್ಯಾರ ಇಲ್ಲಾ ಅನಲಿಕ್ಕೆ ಹೆಂಗ ಆಗ್ತದ.
ನಾ ಲಗ್ನದ ಹಿಂದನ ದಿವಸ ಅವರನ ಕರಕೊಂಡ ಸಂಜಿ ಏಳ ಗಂಟೆ ಸುಮಾರಿಗೆ ಹೋದೆ, ಅಲ್ಲೆ ಕಲ್ಯಾಣ ಮಂಟಪ ಹಂಗ ಭಣಾ ಭಣಾ ಅನಲಿಕತ್ತಿತ್ತ..ಎಲ್ಲೆ ಇದ್ದಾರ ಎಲ್ಲಾರೂ ಅಂತ ಆ ಅಡಗಿ ಭಾದ್ರಿಗೆ ಕೇಳಿದರ
’ಏ…ಬಾರಾತ ಡ್ಯಾನ್ಸ ಮಾಡ್ಕೊಂಡ ಬಾರಾದಾನ ಗಲ್ಲಿ ಗಣಪತಿ ಗುಡಿಯಿಂದ ಬರಲಿಕತ್ತದ, ಇನ್ನೊಂದ ತಾಸಿಗೆ ಬರ್ತಾರ…ಅಲ್ಲಿ ತನಕಾ ಪಾನಿಪುರಿ, ಗೋಬಿ ಮಂಚೂರಿ ತಿನ್ನ ಬರ್ರಿ’ ಅಂತ ಅಂದಾ.
ನಾ ಅಸಿಡಿಟಿ ಬಿಡ ಅಂತ ಸುಮ್ಮನ ಬಿಟ್ಟರ ಜೋಶಿ ಮಾಸ್ತರ ಆರ ಪಾನಿ ಪುರಿ ಹೊಡದ ಮ್ಯಾಲೆ ಒಂದ ಸುಕ್ಕಾ ಪುರಿ ಕೊಡ ಅಂದರ. ನಾ ಇದ ಪಾನಿ ಪುರಿ ಅಂಗಡಿ ಅಲ್ಲಾ, ಇದನ್ನ ಮಾಡಿದಂವಾ ಮಾರವಾಡಿನೂ ಅಲ್ಲಾ ಧಾರವಾಡಿ, ಇಲ್ಲೇ ಒಂದ ಎಕ್ಸ್ಟ್ರಾ ಸುಕ್ಕಾ ಪುರಿ ಕೊಡಂಗಿಲ್ಲಾ ನಡೀರಿ ಅಂತ ಅವರನ ಸ್ಟೇಜ ಕಡೆ ಕರಕೊಂಡ ಹೋಗಿ ಕೂಡಿಸಿದೆ. ಅಲ್ಲೇ ಜೋಶಿ ಮಾಸ್ತರಂಗ ವಯಸ್ಸಾದವರು, ಬಾರಾತ ಒಳಗ ಸರ್ಕಾರಿ ರಸ್ತೆದ ಮ್ಯಾಲೆ ಟ್ರಾಫಿಕ್ ಬಂದ ಮಾಡಿ ಹುಬ್ಬಳ್ಳಿ ಧೂಳದೊಳಗ ಕುಣಿಲಿಕ್ಕೆ ಬರಲಾರದವರ ಒಂದ ಹತ್ತಿಪ್ಪತ್ತ ಮಂದಿ ಸ್ಟೇಜ್ ಮ್ಯಾಲಿನ ಸ್ಕ್ರೀನ್ ನೋಡ್ಕೊತ ಕೂತಿದ್ದರ.
ನಾ ಇಷ್ಟ ಸಿರಿಯಸ್ ಆಗಿ ವಯಸ್ಕರರ, 70+ ವಯಸ್ಸಿನವರ ನೋಡ್ಲಿಕತ್ತಾರ ಅಂದರ ಸ್ಕ್ರೀನ್ ಮ್ಯಾಲೆ ಏನರ ವ್ಯಾಸ ರಚಿತ ಮಹಾಭಾರತ ತೋರಸಲಿಕತ್ತಾರನೋ ಅಂತ ನೋಡಿದರ ಅಲ್ಲೇ ಈ ರಾಮ್ಯಾನ ಮಗಂದ ವಾತ್ಸಾಯನ ರಚಿತ ಪ್ರಿ ವೆಡ್ಡಿಂಗ್ ಶೂಟದ್ದ ಪೂರ್ತಿ ವೀಡಿಯೋ ಪ್ಲೇ ಆಗಲಿಕತ್ತಿತ್ತ.
ಗೋವಾ, ಹೊನ್ನಾವರ ಬ್ಯಾಕ ವಾಟರ್, ಒಂದ್ಯಾರಡ ಜಕಣಾಚಾರಿ ಕೆತ್ತಿದ್ದ ಗುಡಿ ಇದ್ದದ್ದ ಊರ ಒಳಗ ಎಲ್ಲಾ ಇವರದ ಪ್ರಿ ವೆಡ್ಡಿಂಗ್ ಶೂಟ್ ಆಗಿತ್ತ.
ಅವನೌನ ಏನ ಹೇಳಬೇಕ, ಹೆಂತಾ ಫೋಟೊಗ್ರಾಫಿ, ಹೆಂತಾ ಹಾಡಿನ ಕಾಂಬಿನೇಶನ್, ಏನ ಕಾಸ್ಟ್ಯೂಮ್..ಗೋವಾ ಶೂಟ್ ಅಂತೂ almost all ಆದಿ ಮಾನವರ ಕಾಸ್ಟ್ಯೂಮ್ ಅನ್ನರಿ…ಇವರ ಮುಂದ ನಮ್ಮ ರಾಜಕಪೂರಂದ ’ರಾಮ ತೇರಿ ಗಂಗಾ ಮೈಲಿ’ ಪಿಕ್ಚರ್ ಏನು ಹತ್ತತಿದ್ದಿಲ್ಲಾ.
ಅದನ್ನ ನೋಡಿದ್ದ ಜೋಶಿ ಮಾಸ್ತರ,
’ನಾ ಏನ ಬಾರಾತ ಡ್ಯಾನ್ಸ್ ನೋಡ್ಲಿಕ್ಕೆ ಬರಂಗಿಲ್ಲಾ. ನೀ ಇನ್ನೂ ಹುಡುಗ ಇದ್ದಿ ನೀ ಹೋಗ್ತಿರ ಹೋಗ, ನಾ ಇಲ್ಲೇ VIP ಸೋಫಾದ ಮ್ಯಾಲೆ ಕೂತಿರ್ತೇನಿ’ ಅಂತ ಅಂದರು. ಪಾಪ ಅವರ ಫೇಸಬುಕ್ ಒಳಗ ಇನ್ಸ್ಟಾದಾಗ ಹಾಕಿದ್ದ ಟ್ರೇಲರ್ ನೋಡಿದ್ದರು ಇಲ್ಲೇ ಪೂರ್ತಿ ಪಿಕ್ಚರ್ ಇತ್ತ ಅದನ್ನ ಬಿಟ್ಟ ಹೆಂಗ ಬರ್ತಾರ.
ಮುಂದ ಬಾರಾತ ಲಗ್ನ ಮನಿಗೆ ಬಂದ ಮುಟ್ಟಲಿಕ್ಕೆ ಎರೆಡ ತಾಸ ಆತ, ರಾತ್ರಿ ಒಂದ ಗಂಟೇಕ್ಕ ಋಕ್ಕೋತ ಊಟ ಆತ. ಆ ಜೋಶಿ ಮಾಸ್ತರನ ಕಟಗೊಂಡ ನಾ ಮನಿಗೆ ಬರಬೇಕಾರ ಜೋಶಿ ಮಾಸ್ತರ
’ಏನ ಕಾಲ ಬಂತಪಾ….ನಾ ಲಗ್ನಾ ಮಾಡ್ಕೊಂಡ ಮೂರ ವರ್ಷ ಆದಮ್ಯಾಲೆ ಹೆಂಡ್ತಿ ಮಾರಿ ನೋಡಿದ್ದೆ….ಅಲ್ಲಾ ನಾ ಅಕ್ಕನ ಮಗಳನ ಮಾಡ್ಕೊಂಡಿದ್ದೆ, ಅಕಿಗೆ ಹದಿನೆಂಟ ತುಂಬಿದ ಮ್ಯಾಲೆ ನಮ್ಮ ಮನಿ ತುಂಬಿಸಿ ಕೊಟ್ಟಿದ್ದರ ಆ ಮಾತ ಬ್ಯಾರೆ…ಆದರ ಈಗೀನ ಹುಡುಗರ ಏನೇನ ಹುಚ್ಚುಚಾಕಾರ ಮಾಡ್ತಾರ ಏನ್ತಾನ…ಎಲ್ಲೇ ಇನ್ನೊಂದ ಸ್ವಲ್ಪ ದಿವಸಕ್ಕ ಕಳ್ಳಕುಬಸ, ಸೀಮಂತ ಆದಮ್ಯಾಲೆ ಲಗ್ನಾ ಮಾಡ್ತಾರೋ, ಇಲ್ಲಾ ಒಂದ ಹಡದ ಹುಡಗನ ಹೆಸರ ಇಡೋ ದಿವಸ ಲಗ್ನಾ ಮಾಡ್ಕೋತಾರೋ ಅಂತ ಅನಸಲಿಕತ್ತದ’ ಅಂತ ಒಂದ ಸಮನ ನನ್ನ ಜೀವಾ ತಿನ್ನಲಿಕತ್ತರ.
’ಸರ್…ಹೋಗ್ಲಿ ಬಿಡ್ರಿ ನಿಮ್ಮ ಕಾಲ, ನಮ್ಮ ಕಾಲ ಈಗ ಉಳದಿಲ್ಲಾ….ಭಾಳ ತಲಿಕೆಡಸಿಗೊಳ್ಳಿಕ್ಕೆ ಹೋಗಬ್ಯಾಡ್ರಿ…ಇವತ್ತಿಲ್ಲಾ ನಾಳೇ ನಿಮ್ಮ ಫಾರೇನ್ನಾಗ ಇರೋ ಮೊಮ್ಮಕ್ಕಳದು ಲಗ್ನ ಆಗ್ತದ ಆವಾಗ ಅವರ ಏನೇನ ಮಾಡ್ತಾರ ನೋಡೋಣ ಅಂತ ತಡೀರಿ’ ಅಂತ ನಾ ಅಂದ ಮ್ಯಾಲೆ ನನ್ನ ತಲಿ ತಿನ್ನೋದ ಬಂದ ಮಾಡಿದ್ರು.
ಅಲ್ಲಾ…ಹಂಗ ನಮ್ಮ ಟೈಮ್ ಒಳಗ ಪ್ರಿ ವೆಡ್ಡಿಂಗ್ ಫೋಟೊ ಶೂಟ್ ಇರಲಿಲ್ಲಾ ಇತ್ತಂದರ ನಾ ಏನ ಬಿಡ್ತಿದ್ದಿಲ್ಲ ಬಿಡ್ರಿ….ನಂದೂ ಒಂದ ’ಪ್ರಶಾಂತನ ಆವಾಂತರ’ ಅಂತ ಒಂದ ಪಿಕ್ಚರ್ ಮಾಡೇ ಬಿಡ್ತಿದ್ದೆ.