ಮೊನ್ನೆ ಮುಂಜ ಮುಂಜಾನೆ ಎದ್ದವನ ನಮ್ಮ ಶಂಬು ಮನಿಗೆ ಬಂದಾ, ದಿವಸಾ ಆರಾಮ ಎಂಟ-ಒಂಬತ್ತಕ್ಕ ಏಳೊಂವಾ ಇಷ್ಟ ಲಗೂ ಯಾಕ ನಮ್ಮ ಮನಿ ಕಡೆ ಬಂದಾ ಅಂತ
’ಲೇ.. ದೋಸ್ತ ಯಾಕ ನಿದ್ಯಾಗ ದಾರಿ ತಪ್ಪಿ ನಮ್ಮ ಮನಿ ಕಡೆ ಬಂದಿ ಏನ?’ ಅಂತ ಕೇಳಿದರ
’ಏ..ದೋಸ್ತ….ನಿಮ್ಮ ಪೇಪರನಾಗ ಒಂದ ಅಡ್ವರ್ಟೈಸಮೆಂಟ್ ಕೊಡಬೇಕಿತ್ತ…..ಸ್ವಲ್ಪ ರೇಟ ಕಡಮಿ ಮಾಡಸಲಾ’ ಅಂತ ಅಂದಾ.
’ಲೇ…ನಾ ಕಾಲಮಿಸ್ಟ ಮಗನ..ಅಡ್ವರ್ಟೈಸಮೆಂಟ್ ಎಜೆಂಟೇನ ಅಲ್ಲಾ…ಆದರೂ ಹಂತಾದೇನ ಕೊಡಬೇಕಿತ್ತ ಹೇಳ’ ಅಂತ ಕೇಳಿದರ
’ಏನಿಲ್ಲಾ…ನನ್ನವು ಭಾಳ ಮನಿ, ರೂಮ ಖಾಲಿ ಆಗ್ಯಾವ…ಸುಮ್ಮನ ಮತ್ತ ಯಾರಿಗರ ಭಾಡಗಿ ಕೊಡೊದಕಿಂತಾ…ಖಾಲಿ ಮನಿ/ರೂಮ ಎಲ್ಲಾ ’ಕ್ವಾರೆಂಟೇನ’ಗೆ ಕೊಡಬೇಕಂತ ಮಾಡೇನಿ.ಅದಕ್ಕ ’ಮನೆ ಕ್ವಾರೆಂಟೈನಗೆ ಕೊಡುವದಿದೆ’ಅಂತ ಅಡ್ವರ್ಟೈಸಮೆಂಟ್ ಕೊಡಬೇಕ’ ಅಂದಾ.
ನಾ ಒಮ್ಮಿಕ್ಕಲೇ ಗಾಬರಿ ಆದೆ. ಅಲ್ಲಾ, ಹಂಗ ಇದ ಭಾರಿ ಕ್ರಿಯೇಟಿವ್ ಐಡಿಯಾ ಅನಸ್ತ ಬಿಡ್ರಿ.’ಮನೆ ಭಾಡಗಿಗೆ ಕೊಡುವದಿದೆ’ ಅಂತ ಅಡ್ವರ್ಟೈಸಮೆಂಟ ಕೊಡೊ ಬದ್ಲಿ ’ಮನೆ ಕ್ವಾರೆಂಟೈನಗೆ ಕೊಡುವದಿದೆ’ ಅಂತ ಕೊಡೊದ್ರಿಪಾ. ಅಲ್ಲಾ ಮಾರ್ಕೇಟನಾಗ ಏನ ಚಾಲ್ತಿ ಇರ್ತದ, ಎದಕ್ಕ ಡಿಮಾಂಡ ಇರ್ತದ ಅದನ್ನ ಎನಕ್ಯಾಶ ಮಾಡ್ಕೊಳೊದ ಅಂತ ಇದಕ್ಕ ಅಂತಾರ ಮತ್ತ.
ಹಂಗ ಯಾವಾಗಿಂದ ಈ ಕೊರೊನಾದ್ದ ಹಾವಳಿ ಸ್ಟಾರ್ಟ ಆಗೇದ ಆವಾಗಿಂದ ಒಂದಿಷ್ಟ ಮಂದಿ utilize the crisis ಅಂತ ಕೊರೊನಾ ಕ್ರೈಸಿಸನೂ ಒಂದ business opportunity ಮಾಡ್ಕೊಂಡಾರ. ಹಾಲ ಮಾರೋಂವಾ ಸ್ಯಾನಿಟೈಜರ್ ಮಾರಲಿಕತ್ತಾನ. ಪ್ರಿಂಟರ್ ಕಾಟ್ರೇಜ್ ಮಾರೊಂವಾ ಮಾಸ್ಕ/ ಥೆರ್ಮಲ್ ಸ್ಕ್ಯಾನರ್ ಮಾರಲಿಕತ್ತಾನ, ಪೇಂಟರ್ ಪೆಂಟಿಂಗ್ ಬದ್ಲಿ ಸೋಡಿಯಮ್ ಹೈಪೊಕ್ಲೋರೈಟ್ ಸ್ಪ್ರೇ ಮಾಡಲಿಕತ್ತಾನ. ಫಾಯದೇ ಎದರಾಗ ಅದನ್ನ ಮಾಡೋದರಿಪಾ, ಹೆಂಗಿದ್ದರೂ ಲಾಕಡೌನದಾಗ ಪ್ರೈಮರಿ ಕೆಲಸ ಅಂತೂ ಇರಲಿಲ್ಲಾ, ಯಾವದ ಚಾಲ್ತಿ ಇರ್ತದ ಆ ಬ್ಯೂಸಿನೆಸ್ ಮಾಡೋದ.
ಕೆಲವೊಬ್ಬರು ಕೊರೊನಾ ಕ್ರೈಸಿಸ್ ಒಳಗ ಹೆಂಗ ಫಾಯದೇ ಮಾಡ್ಕೊಬೇಕು ಅಂತ opportunistic business ಸ್ಟಾರ್ಟ ಮಾಡಿದರ, ಇನ್ನ ಕೆಲವೊಬ್ಬರು ಇದ್ದ ಬ್ಯುಸಿನೆಸ್, ನೌಕರಿ ಎಲ್ಲಾ ಲಾಕಡೌನ ಒಳಗ ಹಳ್ಳಾ ಹಿಡದದ್ದಕ್ಕ ಬದಕಲಿಕ್ಕೆ ಅನಿವಾರ್ಯ ಆಗಿ ಬ್ಯಾರೆ ಕೆಲಸಕ್ಕ, ಬ್ಯುಸಿನೆಸಗೆ ತಲಿ ಹಾಕಿದ್ದರು.
ನಮ್ಮ ಸೆಂಟ್ರಿಂಗ್ ಮೇಸ್ತ್ರಿ ಕೆಲಸ ಇಲ್ಲದ್ದಕ್ಕ ಕಾಯಿಪಲ್ಯಾ ಮಾರಲಿಕತ್ತಿದ್ದಾ, ಸಣ್ಣ ಪುಟ್ಟ ಡಬ್ಬಿ ಅಂಗಡಿ ಇಟಗೊಂಡ ’ಎಗ್ ರೈಸ್’ ಮಾರಿ ಉಪಜೀವನ ಮಾಡೋರ ಮನಿ ಮನಿಗೆ ಟಿಫಿನ್, ಊಟಾ ಪಾರ್ಸೆಲ್ ತಂದ ಕೊಡ್ಲಿಕತ್ತರು, ಗಂಡನ್ನ ನೌಕರಿ ಇಲ್ಲದ್ದಕ್ಕ ಎಷ್ಟೊ ಮಂದಿ ಹೆಂಡಂದರ ಮನ್ಯಾಗ ಸಂಡಗಿ, ಹಪ್ಪಳ, ಚಟ್ನಿಪುಡಿ, ಶಾವಗಿ, ಮೆಂತೆ ಹಿಟ್ಟ ಮಾರಲಿಕತ್ತರು. ಹಂಗ ವಯಸ್ಸಾದ ಅತ್ತಿ ಮನ್ಯಾಗ ಇದ್ದರ ಅಕಿಗೆ
’ಖಾಲಿ ಟಿ.ವಿ. ಮುಂದ ಕೂತ ಏನ ಕರೋನಾ..ಕರೋನಾ ಕೇಳ್ತಿರಿ..’ಅಂತ ಹತ್ತಿ ಬತ್ತಿ ಮಾಡಸಿಸಿ ಎಳ ಬತ್ತಿ, ಹೂ ಬತ್ತಿ, ಗೆಜ್ಜಿವಸ್ತ್ರ ಮಾರಲಿಕತ್ತರು. ಇವರೇಲ್ಲಾ ಮಾಡಿದ್ದು ಬದುಕಲಿಕ್ಕೆ, ಎರಡ ಹೊತ್ತ ಉಣಲಿಕ್ಕೆ. ಇವರ ಯಾರು opportunists ಅಲ್ಲಾ.
ಹಂಗ ನಮ್ಮ ಮನಿಗೆನೂ ಜೋಶಿ ಅಜ್ಜಿ ಬತ್ತಿ ತೊಗೊಂಡ ಬಂದ ನಮ್ಮವ್ವಗ ಇಷ್ಟ ಕೊಟ್ಟ ಹೋಗಿದ್ಲು. ನಾ
’ಏ, ಇಗ್ಯಾಕ ಬತ್ತಿ ತೊಗೊಂಡಿ’ ಅಂದರ ’ಅಯ್ಯ..ಪಾಪ ಮನಿತನಕ ಮಾರಲಿಕ್ಕೆ ಬಂದಿದ್ದರಪಾ, ಹೆಂಗ ಒಲ್ಲೆ ಅನಲಿಕ್ಕೆ ಆಗ್ತದ…ನಾಳೆ ಶ್ರಾವಣದಾಗ ಗೌರಿ ಕೂಡಿಸಿದಾಗ ಬರ್ತದ ತೊಗೊ’ ಅಂದ್ಲು.
’ಏ…ಈ ಸರತೆ ಕೊರೊನಾ ಅದ..ನಿನ್ನ ಗೌರಿ-ಗಣಪತಿ ಬರೋದ ಡೌಟ ತೊಗೊ’ ಅಂತ ನಾ ಅಂದರ ನಮ್ಮವ್ವ
’ಅಯ್ಯ…ಅವರನ ಹೆಂಗ ಬಿಡ್ತಿ…ಡಿ.ಸಿ ಆಫೀಸನಾಗ ಪಾಸ್ ತೊಗೊಂಡ ಆದರೂ ಅವರನ ಕರಕೊಂಡ ಬಂದ ದೇವರ ಮನ್ಯಾಗ ಕೂಡಿಸಿ ಕ್ವಾರೆಂಟೇನ್ ಮಾಡೋಣ ತೊಗೊ’ ಅಂತ ನಂಗ ತಿರಗಿ ಅಂದ್ಲು.
ಹಿಂಗ ಒಂದಿಷ್ಟ ಮಂದಿ ಬದಕಲಿಕ್ಕೆ ಅನಿವಾರ್ಯ ಆಗಿ ಬ್ಯಾರೆ ಬ್ಯಾರೆ ಕೆಲಸ ಮಾಡಿದರ ನಮ್ಮ ಶಂಬಣ್ಣ ಮನಿ ಕ್ವಾರೆಂಟೇನ್ ಕೊಡೊ ವಿಚಾರ ಮಾಡಿದ್ದ ತನ್ನ ಹೊಟ್ಟಿ ಪಾಡಿಗೆ ಅಂತೂ ಅಲ್ಲಾ. ಹಂಗ ಇವಂದ ಬ್ಯುಸಿನೆಸ್ ಅಂತ ಏನ ಇಲ್ಲಾ, ಹೆಸರಿಗೆ ರಿಯಲ್ ಎಸ್ಟೇಟ್ ಅಂತಾನ ಆದರ ಇವನ್ವು ಹುಬ್ಬಳ್ಯಾಗ ಒಂದ ಹತ್ತ ಹದಿನೈದ ಮನಿ, ರೂಮ್ಸ ಅವ. ಅವನ್ನೇಲ್ಲಾ ಭಾಡಗಿ ಕೊಟ್ಟಾನ. ಆ ಭಾಡಗಿ ಮ್ಯಾಲೆ ಸಂಸಾರ ನಡಿಸ್ಗೊತ ಹೊಂಟಾನ. ಹಂಗ ಅವಂಗ ಭಾಡಗಿ ರಗಡ ಬರ್ತದ. ಅದರಾಗ ಇಂವಾ ಭಾಡಗಿ ಬರೇ ಬ್ಯಾರೆ ರಾಜ್ಯದಿಂದ ಬಂದೊರಿಗೆ, ಹುಬ್ಬಳ್ಳಿ-ಧಾರವಾಡಕ್ಕ ಕಲಿಲಿಕ್ಕೆ ಬಂದ ನಾರ್ಥ ಇಂಡಿಯನ್ ಹುಡುಗರಿಗೆ ಇಷ್ಟ ಕೊಡ್ತಿದ್ದಾ. ಪಾಪ ಅವರಿಗೆ ಇಲ್ಲಿ ರೇಟ ಗೊತ್ತ ಇರ್ತಿದ್ದಿಲ್ಲಾ ಹಿಂಗಾಗಿ ಇಂವಾ ಜಾಸ್ತಿ ಭಾಡಗಿ ಜಗ್ಗತಿದ್ದಾ.
ಮೊನ್ನೆ ಯಾವಾಗ ಲಾಕಡೌನ knockdown ಆಗಿ ಇಂಟರ ಸ್ಟೇಟ್ ಟ್ರಾವೇಲ್ ಒಪನ್ ಆತಲಾ ಆವಾಗ ಬ್ಯಾರೆ ರಾಜ್ಯದಿಂದ ಬಂದವರ ರಾತ್ರೊ ರಾತ್ರಿ ಮನಿ ಖಾಲಿ ಮಾಡ್ಕೊಂಡ ಜಿಗದ ಬಿಟ್ಟರು. ಅದರಾಗ ’ಮನಿ ಭಾಡಗಿಗೆ ಜೋರ ಮಾಡಂಗಿಲ್ಲಾ’ಅಂತ ಸರ್ಕಾರ ಹೇಳಿದ್ದಕ್ಕ ಒಂದಿಷ್ಟ ಮಂದಿ ಅಂತೂ ಭಾಡಗಿನೂ ಕೊಡ್ಲಿಲ್ಲಾ. ಇನ್ನ ನಾರ್ಥ ಇಂಡಿಯನ್ಸ ಈಗ ಹೋಗ್ಯಾರಂದರ ಇನ್ನೇನ ವಾಪಸ ಬರೋದ ಡೌಟ. ಹಿಂಗಾಗಿ ಇವನ್ನ ಒಂದಿಷ್ಟ ರೂಮ್ಸ, ಮನಿ ಖಾಲಿ ಆದವು. ಅದಕ್ಕ ಈ ಮಗಾ ಇನ್ನ ಮತ್ತ ಭಾಡಗಿ ಏನ ಕೋಡೊದು ಹೆಂಗಿದ್ದರು ಸರ್ಕಾರದವರು ಬ್ಯಾರೆ ದೇಶದಿಂದ, ಬ್ಯಾರೆ ರಾಜ್ಯದಿಂದ ಬಂದೊರಿಗೆ ಕಂಪಲ್ಸರಿ ’ಹೌಸ ಕ್ವಾರೆಂಟೇನ್’ ಮಾಡ್ಲಿಕತ್ತಾರ ಅಂತ ತನ್ನ ಮನಿ ಕ್ವ್ಯಾರೆಂಟೆನಗೆ ಕೊಟ್ಟರ ಹೆಂಗ ಅಂತ ವಿಚಾರ ಮಾಡಿದ್ದಾ.
ಅಲ್ಲಾ, ಕೆಲವೊಬ್ಬರ ಮನಿ ಒಳಗ ಪಾಪ ಕ್ವಾರೆಂಟೇನಗೂ ಅವಕಾಶ ಇರಂಗಿಲ್ಲಾ, ಹಂತಾವರ ಇವನ ಮನ್ಯಾಗ ಇರಬಹುದು ಬಿಡ್ರಿ. ಮೊನ್ನೆ ಕೊರೊನಾ ಹೊಸ್ತಾಗಿ ಬಂದಾಗ ಪುಣಾದೊಳಗ ಒಬ್ಬ ಮಹಾಶಯ ಫಾರೇನದಿಂದ ಬಂದ ತನ್ನ ಅವ್ವಾ-ಅಪ್ಪನ್ನ ಸರ್ಕಾರ ’home quarantine for 14 days’ ಅಂತ ಸೀಲ ಹೊಡದ ಕಳಸಿದರ ಅವರನ ಮನ್ಯಾಗ ಇಟಗೊಳ್ಳಿಲ್ಲಂತ. ಅವರ ಮನಿಗೆ ಬಂದರ ನಾ ತವರಮನಿಗೆ ಹೋಗ್ತೇನಿ ಅಂತ ಹೆಂಡ್ತಿ ಹೆದರಿಸಿದ್ಲಂತ, ಮ್ಯಾಲೆ ಅಪಾರ್ಟಮೆಂಟನವರ ಸಹಿತ ಆ ಮುದಕಾ-ಮುದಕಿಗೆ foreign return not allowed ಅಂತ ಹೇಳಿ ಬಿಟ್ಟರಂತ. ಇನ್ನ ಲಾಕಡೌನ ಟೈಮ ಒಳಗ ಹೆಂಡ್ತಿನ್ನಂತೂ ಬಿಟ್ಟ ಇರಲಿಕ್ಕೆ ಆಗಂಗಿಲ್ಲಾ ಅಂತ ಈ ಮಗಾ ಅವ್ವಾ-ಅಪ್ಪನ್ನ ಬ್ಯಾರೆಯವರ ಮನ್ಯಾಗ ಹದಿನಾಲ್ಕ ದಿವಸಕ್ಕ ಹದಿನಾಲ್ಕ ಸಾವಿರ ರೂಪಾಯಿ ಕೊಟ್ಟ ಪೇಯಿಂಗ್ ಗೆಸ್ಟ ಅಂತ ಇಟ್ಟ ಪುಣ್ಯಾ ಕಟಗೊಂಡನಂತ.
ಇನ್ನ ಒಂದ ಹದಿನೈದ ದಿವಸದ ಹಿಂದ ಹೈದರಾಬಾದ ಒಳಗ ಪಾಪ ಕೊರೊನಾ ಮುಕ್ತ ಆಗಿ ಹಾಸ್ಪಿಟಲನಿಂದ ಡಿಸ್ಚಾರ್ಜ್ ಆದರೂ ಮನಿ ಮಂದಿ ಅವರನ ವಾಪಸ ಮನಿ ಒಳಗ ಸೇರಸಲಿಲ್ಲಂತ, ಅವರ ಮತ್ತ ವಾಪಸ ಹಾಸ್ಪಿಟಲಗೆ ಹೋಗಿ ಅಡ್ಮಿಟ್ ಆದರು. ಏನ್ಮಾಡ್ತೀರಿ?
ಹಿಂತಾವೇಲ್ಲಾ ಸುದ್ದಿ ಓದಿನ ಮತ್ತ ನಮ್ಮ ಶಂಬುಗ ತಾ ಯಾಕ ತನ್ನ ಮನಿ, ರೂಮ್ಸ ಭಾಡಗಿ ಕೊಡೊದರ ಬದ್ಲಿ ಕ್ವಾರೆಂಟೇನಗೆ ಕೊಡಬಾರದು ಅಂತ ಐಡಿಯಾ ಬಂದಿದ್ದ.
ಹೆಂಗಿದ್ದರು ಇವನ ಚಾರ್ಜ್ ಲಾಡ್ಜ ಕಿಂತಾ ಕಡಮಿ ಇತ್ತ ಆದರ ಅದ ಭಾಡಗಿಕಿಂತಾ ಜಾಸ್ತಿ ಆಗ್ತಿತ್ತ. ಮ್ಯಾಲೆ ಹದಿನಾಲ್ಕ ದಿವಸಕ್ಕ ಖಾಲಿ. ಅಗದಿ ಚೊಕ್ಕ ಎಲ್ಲಾ ಕೊರೋನಾ safety measures ರೆಡಿ ಮಾಡ್ಯಾನ. ಇಡಿ ಬಿಲ್ಡಿಂಗಗೆ ಸೋಡಿಯಮ್ ಹೈಪೊಕ್ಲೋರೈಟದ ಪೇಂಟ ಮಾಡಿಸಿ, ಬಾಥರೂಮದಾಗ ನೀರ ಬರದಿದ್ದರು ಸ್ಯಾನಿಟೈಸರ್ ಬರೊಹಂಗ ಮಾಡ್ಯಾನ. It is perfectly hygenic ಬಿಡ್ರಿ ಅದರಾಗ ಸುಳ್ಳ ಯಾಕ ಹೇಳ್ಬೇಕ. ಇನ್ನ ಅದರ ತಕ್ಕ ಭಾಡಗಿ ಫಿಕ್ಸ ಮಾಡ್ಯಾನ.
ಇಷ್ಟಕ್ಕ ಬಿಟ್ಟಿಲ್ಲ ಮಗಾ. ಇನ್ನ ಹಂಗೇನರ ಕ್ವಾರೆಂಟೇನ್ ಗಿರಾಕಿ ಬಂದರ ಅವರಿಗೆ food and beverage ವ್ಯವಸ್ಥಾನೂ ಅವನ ಮಾಡೊಂವಾ, ಅದಕ್ಕ ಚಾರ್ಜ ಎಕ್ಸ್ಟ್ರಾನ ಮತ್ತ. ಅಗದಿ ಸಾವಜಿ ಬೇಕ ಅನ್ನೋರಿಗೆ ಸಾವಜಿ, ಲಿಂಗಾಯತ ಖಾನಾವಳಿದ ಬೇಕ ಅನ್ನೊರಿಗೆ ಲಿಂಗಾಯತ ಊಟಾ, ಎಲ್ಲಾ ಪದ್ದತ ಸೀರ ವ್ಯವಸ್ಥಾ ಮಾಡಿ ರೆಡಿ ಇಟ್ಕೊಂಡಾನ. ಅಲ್ಲಾ ಅದನ್ನೇಲ್ಲಾ ನೋಡಿದರ ಸುಮ್ಮನ ನಾವು
’ನಮಗ ೧೪ ದಿವಸ ಕ್ವಾರೆಂಟೇನ ಹೇಳ್ಯಾರ’ ಅಂತ ಹೋಗಿ ಅವನ ರೂಮನಾಗ ಇರಬೇಕ ಅನಸಲಿಕತ್ತದ. ಅಲ್ಲಾ ಈ ಲಾಕಡೌನ ಒಳಗ ಮನಿ ಅಡಗಿ ಉಂಡ ಬಾಯಿ ಕೆಟ್ಟ ಹೋಗೇದ ಬಿಡ್ರಿ ಸುಳ್ಳ ಯಾಕ ಹೇಳ್ಬೇಕ, ಅದರಾಗ ನಂಬದ ಇನ್ನೂ ಉಪ್ಪು ಖಾರ ತಿನ್ನೊ ವಯಸ್ಸ ಹಿಂಗ ಮನ್ಯಾಗಿಂದ ಹೆಂಡ್ತಿ ಮಾಡಿದ್ದ ತಿಂಗಳಾನಗಟ್ಟಲೇ ಉಂಡ ಉಂಡ ನಾಲಿಗೆ ಅನ್ನೋದ ಬಸಳಿ ಸೊಪ್ಪ ಆಗೇದ.
ನೋಡ್ರಿ..ಇವತ್ತಿಲ್ಲಾ ನಾಳೆ ಪೇಪರನಾಗ ಹಂಗೇನರ ’ಮನೆ ಕ್ವಾರೆಂಟೇನಗೆ ಕೊಡುವದಿದೆ’ ಅಂತ ಬಂದರ ಅದ ನಮ್ಮ ಶಂಬ್ಯಾಂದ ಅಂತ ತಿಳ್ಕೋರಿ.
I am regular reader of your article Girmit. Today also I have read your article on quarantine. Nice article. In fact some times I think that I have missed your article of the week n search all the Vijayavani papers n check for it.
Bhaal chhand bareetirepa, hinga bareetirri naavoo adakka kaaytirteevi.