ಭಾಳ ಮಂದಿ ಹೆಂಡಂದರಿಗೆ ತಮ್ಮ ಗಂಡಾ, ಹೆಂಡ್ತಿ ಹೆಸರ ಪಾಸವರ್ಡ್ ಇಟ್ಟಿರ್ತಾನ ಅಂತ ನಂಬಕಿನ ಇರಂಗಿಲ್ಲಾ, ಅವರ ಮೊದ್ಲ ತಮ್ಮ ತಂಗಿ ಹೆಸರ ಹಾಕಿ ಚೆಕ್ ಮಾಡ್ತಾರ, ಇಲ್ಲಾ ತಮ್ಮ ಬೆಸ್ಟ ಫ್ರೇಂಡ್ ಹೆಸರ ಹಾಕ್ತಾರ, ಇಲ್ಲಾ ಗಂಡನ ಲೇಡಿ ಸೆಕ್ರೇಟರಿ ಹೆಸರ, ಕಡಿಕೆ ಬಾಜು ಮನಿ ಅಂಟಿ ಹೆಸರ..ಹಿಂತಾ ನಾನ್ಸೆನ್ಸ್ ಆಪ್ಶನ್ಸ್ ಎಲ್ಲಾ ಟ್ರೈ ಮಾಡ್ತಾರ. ಇದ ಇವತ್ತಿನ ಕಲಿಯುಗದೊಳಗ ನಮ್ಮಮ್ಮ ಪತಿವೃತೆ ಪತ್ನಿಯರಿಗೆ ಪತಿ ಮ್ಯಾಲೆ ಇರೋ ವಿಶ್ವಾಸ
ಇದ ನನ್ನ ಲಗ್ನ ಆದ ಹೋಸ್ದಾಗಿಂದ ಮಾತ, ಒಂದ ದಿವಸ ನನ್ನ ಹೆಂಡತಿ ಫೋನ ಮಾಡಿ
“ರ್ರೀ…ನಿಮ್ಮ ಮೇಲ್ ಪಾಸವರ್ಡ್ ಏನರಿ?” ಅಂತ ಕೇಳಿದ್ಲು.
ನಂಗ ಒಮ್ಮಿಕ್ಕಲೇ ಗಾಬರಿ ಆತ, ಹಂಗ ಅಕಿ ನಿಂಬದ ಮದ್ವಿಕಿಂತ ಮೊದ್ಲ ಏನರ ಅಫೇರ್ ಇತ್ತೇನ್ರಿ ಅಂತ ಕೇಳಿದ್ದರ ಇಷ್ಟ ಗಾಬರಿ ಆಗ್ತಿದ್ದಿಲ್ಲಾ ಆದರ ಪಾಸವರ್ಡ್ ಕೇಳಿದ್ದಕ್ಕ ಹೆದರಕಿ ಆತ.
“ಲೇ…ಹುಚ್ಚಿ ಪಾಸವರ್ಡ ಒಳಗ ಮೇಲ್, ಫಿಮೇಲ್ ಇರಂಗಿಲ್ಲಲೆ” ಅಂತ ನಾ ಅಕಿಗೆ ಅಂದರ
“ರ್ರಿ….ನಂಗೊತ್ತದ…ಭಾಳ ಶಾಣ್ಯಾರಾಗಬ್ಯಾಡ್ರಿ…ನಿಮ್ಮ ಜಿ-ಮೇಲ್ ಪಾಸವರ್ಡ ಹೇಳ್ರಿ” ಅಂತ ಜೋರ ಮಾಡಿದ್ಲು.
ಹಂಗ ನಾವು ಗಂಡಂದರ ಹೆಂಡತಿ ಜೊತಿ ಏನ ಶೇರ್ ಮಾಡಿದರು ಪಾಸವರ್ಡ್ ಅಷ್ಟ ಸರಳ ಶೇರ್ ಮಾಡಂಗಿಲ್ಲಾಂತ ನಿಮಗ ಗೊತ್ತಿದ್ದದ್ದ ಅದ. ಅದರಾಗ ನಾ ಅಕಿ ತಂದೊಂದ ಜಿ-ಮೇಲ್ ಅಕೌಂಟ ಮಾಡ್ರಿ ಅಂದಾಗ ನಾ
’ಜಿ-ಮೇಲ್ ಅಕೌಂಟ ಬರೇ ಮೇಲ್-ಗೆ ಇಷ್ಟ ಇರ್ತದ ಫಿ-ಮೇಲಗೆ ಇರಂಗಿಲ್ಲಾ’ ಅಂತ ಹೇಳಿ ಕನ್ವಿನ್ಸ ಮಾಡಿದ್ದಕ್ಕ ಇಕಿ ಇವತ್ತ ನನ್ನ ಮೇಲ್ ಗೆ ಕೈ ಹಚ್ಚಿದ್ಲು.
ಇನ್ನ ಒಮ್ಮಿಕ್ಕಲೇ ಪಾಸವರ್ಡ್ ಹೆಂಗ ಹೇಳ್ಬೇಕು ಅಂತ ತಿಳಿಲಿಲ್ಲಾ. ಯಾಕಂದರ ನನ್ನ ಪಾಸವರ್ಡ್ ’ಪೀಡಾ’ (peeda)ಅಂತ ಇತ್ತ.
ಇನ್ನ ಹೊಸ್ದಾಗಿ ಲಗ್ನ ಆದಾಗ ಹೆಂಡ್ತಿ ಹೆಸರ ಪಾಸವರ್ಡ್ ಇಡೋದ ಗಂಡಂದರ ಸಂಪ್ರದಾಯ. ಹಿಂಗಾಗಿ ನಾ ಅಕಿ ನಿಕ್ ನೇಮ್ ಪಾಸವರ್ಡ್ ಇಟ್ಟಿದ್ದೆ, ಇನ್ನ’ಪೀಡಾ’ ಅಂತ ಅಕಿಗೆ ಹೆಂಗ ಹೇಳೋದು ಅಂತ ವಿಚಾರ ಮಾಡಿ
“ಪಾಸವರ್ಡ್ ಬರಕೊ” ಅಂದ
“p ‘ಡಬಲ್’ e ಆಮ್ಯಾಲೆ d ಲಾಸ್ಟಿಗೆ a ” ಅಂತ ಹೇಳಿದೆ,
ನಾ ಹೇಳಿದ್ದನ್ನ ಅಕಿ ಟೈಪ್ ಮಾಡಿದ್ಲು, ಮೇಲ್ ಓಪನ್ ಆತು. ಅಕಿ ನಾ ಹೇಳಿದ್ದ ಪ್ರತಿಯೊಂದು ಕ್ಯಾರೆಕ್ಟರ್ ಟೈಪ್ ಮಾಡಿದ್ಲ ಹೊರತೂ ಅದನ್ನ ಕೂಡಿಸಿ ಓದ್ಲಿಲ್ಲಾ. ನಾ ಉಳಕೊಂಡೆ….ಅದಕ್ಕ ಹೇಳಿದ್ದ ಭಾಳ ಕಲ್ತೋಕಿನ್ನ ಮಾಡ್ಕೊಳಿಲ್ಲಾಂದರ ಫಾಯದೇ ಅದ ಅಂತ.
ಇನ್ನ ಅಕಿಗೆ ಪಾಸವರ್ಡ ’ಪೀಡಾ’ ಅಂತ ಗೊತ್ತಾಗಿದ್ದರ ದೊಡ್ಡ ರಾಮಾಯಣನ ಆಗ್ತಿತ್ತ. ಅಲ್ಲಾ, ಹಂಗ ಅಕಿಗೆ ಗೊತ್ತಿತ್ತ ನಾ ಪ್ರೀತಿಲೇ ’ಪೀಡಾ’ ಅಂತ ಕರಿತೇನಿ ಅಂತ. ಅದರಾಗ ನಾ ಅಕಿಗೆ “ಪೀಡಾ ಅಂದರ ಪ್ರೇರಣಾ ಡಾರ್ಲಿಂಗ” ಅಂತ ತಿಳಿಸಿ ಹೇಳಿದ್ದೆ, ಅಕಿ ಅದನ್ನ ನಂಬಿ ನನಗ ದಿವಸಾ ಪೀಡಾಗತೆ ಕಾಡ್ತಿದ್ಲು ಆ ಮಾತ ಬ್ಯಾರೆ.
ಇದ ಬರೇ ನನ್ನ ಜಿ-ಮೇಲ್ ಪಾಸವರ್ಡಿಂದ ಹಣೇಬರಹ.
ಇನ್ನ ನನ್ನ ಎಲ್ಲಾ ಹತ್ತ ಹದಿನೈದ ಪೋರ್ಟಲದ ಪಾಸವರ್ಡ ನಾ ಹೇಳಿ ಬಿಟ್ಟರ ನಂದ ಡೈವರ್ಸ್ ಆಗೋದ ಗ್ಯಾರಂಟೀ, ಹೋಗಲಿ ಬಿಡ್ರಿ.
ಇನ್ನ ಈ ಪಾಸವರ್ಡ್ ಸಮಸ್ಯೆ ನಂದೊಂದ ಅಲ್ಲಾ. ಇದ ಯುನಿವರ್ಸಲ್. ಎಲ್ಲಾ ಗಂಡಂದರಿಗೂ ಇರೋ ಸಮಸ್ಯೆ. ಒಂದಿಷ್ಟ ದೀಡ ಪಂಡಿತರಂತೂ ಹಿಂತಾ ಖತರನಾಕ ಪಾಸವರ್ಡ್ ಇಟ್ಟಿರ್ತಾರಲಾ, ಏ ಅಗದಿ ಕೇಳೋಹಂಗ ಇರ್ತಾವ.
ಬಾಂಬೆದಾಗ ನಮ್ಮ ದೋಸ್ತ ರಾಜಾ ಅಂತ ಒಬ್ಬೊಂವ ಹಲ್-ಕಟ್ ಡಾಕ್ಟರ ಅಂದರ ಡೆಂಟಿಸ್ಟ ಇದ್ದಾನ, ಅಂವಾ ಇಷ್ಟ ಶಾಣ್ಯಾ, ಇಷ್ಟ ಅಪಡೇಟೇಡ್ ಇದ್ದಾನ ಅಂದರ, ಅವಂಗ ತಾ ಒಂದ ವಾರದ ಹಿಂದ ಇಟ್ಟಿದ್ದ ಪಾಸವರ್ಡ್ ತನಗ ನೆನಪ ಇರಂಗಿಲ್ಲಾ, ಅದಕ್ಕ ಅವನ ಸೆಕ್ರೇಟರಿ
“ಸರ್ ನೀವು ಸುಮ್ಮನ ಈ ಹಲ್ಲನಾಗ ಇರೋ ಬ್ಯಾಕ್ಟೇರಿಯಾ ಹೆಸರ ಪಾಸವರ್ಡ್ ಇಟ್ಟ ಬಿಡ್ರಿ, ಹೆಂಗಿದ್ದರೂ ನೀವ ಅಕೆಡೆಮಿಕಲಿ ಭಾಳ ಶಾಣ್ಯಾರಿದ್ದೀರಿ….ಹೆಂಡ್ತಿ ಮಕ್ಕಳ ಹೆಸರ ನೆನಪ ಹಾರಿದರು ಬ್ಯಾಕ್ಟೇರಿಯಾ ಹೆಸರ ಮರಿಯಂಗಿಲ್ಲಾ” ಅಂತ ಹೇಳಿದ್ಲು. ಇಂವಾ ಅಕಿ ಮಾತ ಕೇಳಿ ಬ್ಯಾಕ್ಟೇರಿಯಾ ಪಾಸವರ್ಡ್ ಹಾಕೋತ ಹೊಂಟಾನ.
ಅವನ ಪಾಸವರ್ಡ ಒಂದ ಸರತೆ ಓದಿ ಬಿಡ್ರಿ..ಅಲ್ಲಾ ಅವು ಓದಲಿಕ್ಕೆ ಬರಂಗಿಲ್ಲಾ ನೀವು ಬರೇ ನೋಡಿ ಬಿಡ್ರ ಸಾಕ.
1. Porphyromonas-Gingivalis
2. Aggregatibacter-Actinomycetemcomitans
3. Tannerella-Forsythia
ಅಲ್ಲಾ ಈ ಪರಿ ಪಾಸವರ್ಡ್ ಇಟ್ಟರ ಒಂದೇನ ಮೂರ ಮಂದಿ ಹೆಂಡಂದರ ಇದ್ದರು ಕ್ರ್ಯಾಕ್ ಮಾಡಲಿಕ್ಕೆ ಆಗಂಗಿಲ್ಲ ಬಿಡ್ರಿ.
ಇನ್ನ ಅವನ್ನ ನೋಡಿ ನಮ್ಮ ಲೋಕಲ್ ಕೆಮ್ಮು ನೆಗಡಿ ಡಾಕ್ಟರ ಸಂದೀಪ ಬರೆ ಮಲೇರಿಯಾ, ಡೆಂಗೂ, ಚಿಕನ್ ಗೂನ್ಯಾದಂತಾ ವೈರಲ್ ಜಡ್ದಿನ ವೈರಸ್ ಹೆಸರ ಪಾಸವರ್ಡ್ ಇಡ್ತಿದ್ದಾ. ಅವನ ಹೆಂಡ್ತಿ ನೋಡಿದರ ಸೌಂಶಯ ಪೀಶಾಚಿ, ದಿವಸಕ್ಕ ಹತ್ತ ಸರತೆ ಅವನ ಮೋಬೈಲ್ ತಗದ ಚೆಕ್ ಮಾಡೋಕಿ ಯಾವಾಗ ಇಂವಾ ಹಿಂಗ ವೈರಸ್ ಹೆಸರ ಪಾಸವರ್ಡ್ ಇಟ್ಟ ಮೋಬೈಲ್ ಲಾಕ್ ಮಾಡಲಿಕತ್ತಾ ಅಕಿಗೆ ಮೋಬೈಲ್ ಓಪನ್ ಮಾಡೋದ ತ್ರಾಸ ಆತ, ಕಡಿಕೆ ಅಕಿ ಅವನ ವೈರಸ್ ಲಾಜಿಕ್ ಕಂಡ ಹಿಡದ ಮೋಬೈಲ್ ಓಪನ್ ಮಾಡ್ಲಿಕತ್ತಳು. ಇಂವಾ ಮತ್ತ ಪಾಸವರ್ಡ್ ಚೇಂಜ್ ಮಾಡ್ತಿದಾ. ಅಕಿ ಮತ್ತ ನೂರಾ ಎಂಟ ವೈರಸ್ ಹೆಸರ ಹಾಕಿ ಒಪನ್ ಮಾಡ್ತಿದ್ಲು…. ಹುಚ್ಚಾ, ಕಲ್ತೋಕಿನ್ನ ಲಗ್ನಾ ಮಾಡ್ಕೊಂಡಿದ್ದಾ. ಅವಂಗರ ಅಕಿ ಸಂಬಂಧ ತಲಿ ಕೆಟ್ಟ ಹೋಗಿತ್ತ.
ಮೊನ್ನೆ ಒಂದ ಸರತೆ ಅವನ ಹೆಂಡ್ತಿ ಮೋಬೈಲ್ ಓಪನ್ ಮಾಡಲಿಕ್ಕೆ ನೋಡಿದ್ಲು ಅದ ಓಪನ್ ಆಗಲಿಲ್ಲಾ. ಎಲ್ಲಾ ವೈರಸ್ ಹೆಸರ ಹಾಕಿದರು ಆಗಲಿಲ್ಲಾ. ಈ ಸರತೆ ಅಕಿಗೆ ತಲಿ ಕೆಡ್ತ. ಅಲ್ಲೆ ಇದ್ದ ಅವನ್ನ ಕ್ಲಿನಿಕ್ ರಿಸೆಪ್ಶನಿಸ್ಟ
’ತರ್ರಿ ಇಲ್ಲೆ… ನಾ ಟ್ರೈ ಮಾಡ್ತೇನಿ’ ಅಂತ ಇಸ್ಗೊಂಡ ಒಂದ ಪಾಸವರ್ಡ್ ಹಾಕಿದ್ಲು ಅದ ಒಂದ ಹೊಡ್ತಕ್ಕ ಒಪನ್ ಆತ.
’ಏ, ನಿಂಗೆಂಗ್ ಗೊತ್ತಾತ ನನ್ನ ಗಂಡನ ಪಾಸವರ್ಡ್’ ಅಂತ ಇಕಿ ಜೋರ ಮಾಡಿದ್ಲು
’ಏ…ನಿಮ್ಮ ಹೆಸರ ಹಾಕಿದೆ ಓಪನ್ ಆತ, ಸದ್ಯೇಕ ನಮ್ಮ ಡಾಕ್ಟರಗೇ ಕಾಡೋ ವೈರಸ್ ನೀವ” ಅಂತ ಮೊಬೈಲ ಇಕಿ ಕೈಯಾಗ ಕೊಟ್ಟ ’ ಡಾಕ್ಟರ ಒಳಗ ಕರದರು’ ಅಂತ ಹೋದ್ಲು.
ಅಲ್ಲಾ, ನೀವು ನೋಡ್ರಿ.. ಭಾಳ ಮಂದಿ ಹೆಂಡಂದರಿಗೆ ತಮ್ಮ ಗಂಡಾ, ಹೆಂಡ್ತಿ ಹೆಸರ ಪಾಸವರ್ಡ್ ಇಟ್ಟಿರ್ತಾನ ಅಂತ ನಂಬಕಿನ ಇರಂಗಿಲ್ಲಾ, ಅವರ ಮೊದ್ಲ ತಮ್ಮ ತಂಗಿ ಹೆಸರ ಹಾಕಿ ಚೆಕ್ ಮಾಡ್ತಾರ, ಇಲ್ಲಾ ತಮ್ಮ ಬೆಸ್ಟ ಫ್ರೇಂಡ್ ಹೆಸರ ಹಾಕ್ತಾರ, ಇಲ್ಲಾ ಗಂಡನ ಲೇಡಿ ಸೆಕ್ರೇಟರಿ ಹೆಸರ, ಕಡಿಕೆ ಬಾಜು ಮನಿ ಅಂಟಿ ಹೆಸರ..ಹಿಂತಾ ನಾನ್ಸೆನ್ಸ್ ಆಪ್ಶನ್ಸ್ ಎಲ್ಲಾ ಟ್ರೈ ಮಾಡ್ತಾರ. ಇದ ಇವತ್ತಿನ ಕಲಿಯುಗದೊಳಗ ನಮ್ಮಮ್ಮ ಪತಿವೃತೆ ಪತ್ನಿಯರಿಗೆ ಪತಿ ಮ್ಯಾಲೆ ಇರೋ ವಿಶ್ವಾಸ.
ಇರಲಿ ಇನ್ನೊಂದ ಲಾಸ್ಟ ಪಾಸವರ್ಡ ಸ್ಟೋರಿ ಕೇಳಿ ಬಿಡ್ರಿ.
ನಮ್ಮ ಮಾರವಾಡಿ ದೊಸ್ತ ಒಬ್ಬೊಂವ ಮೊನ್ನೆ ಇಂಟರ್ನೇಟ್ ಬ್ಯಾಂಕಿಂಗ್ ತೊಗೊಂಡಾ, ಅವಂಗ ಪಾಸವರ್ಡ್ ಫಸ್ಟ ಟೈಮ್ ರೆಜಿಸ್ಟರ್ ಮಾಡಬೇಕಿತ್ತ. ಅಂವಾ ಒಂದ ಪಾಸವರ್ಡ್ ಎಂಟರ್ ಮಾಡಿದಾ, ಅದ ಯಾಕೋ ರೆಜಿಸ್ಟರ್ ಆಗವಲ್ತಾಗಿತ್ತ. ನಾ ಇದರಾಗ ಭಾಳ ಶಾಣ್ಯಾ ಅಂತ ನನಗ
“ಲೇ…ಆಡ್ಯಾ ಪಾಸ್ ವರ್ಡ್ ರೆಜಿಸ್ಟರ್ ಆಗವಲ್ತಲೇ..” ಅಂದಾ
“ದೋಸ್ತ ಪಾಸವರ್ಡ್ ಅಲ್ಫಾ ನ್ಯೂಮಿರಿಕ್, ಮಿನಿಮಮ್ ಎಂಟ್ ಕ್ಯಾರೆಕ್ಟರ, ಒಂದ ಸ್ಪೇಶಲ್ ಕ್ಯಾರೆಕ್ಟರ ಇರಬೇಕ” ಅಂತ ನಾ ಅಂದೆ.
“ಏ, ಗೊತ್ತಲೇ..ಆದ್ರೂ ಬರವಲ್ತ” ಅಂದಾ. ಅಂವಾ ಪಾಸವರ್ಡ್ ಅವನ ಹೆಂಡ್ತಿ ಹೆಸರ ’ಪೂಜಾ’ ಅಂತ ಇಟ್ಟಿದ್ದಾ.
“ಲೇ…puja.. ನಾಲ್ಕ ಲೆಟ್ಟರ್ ಆತಲೇ”ಅಂದೆ
“ಏ, ನಾ ಬರದಿದ್ದ PoooooJA” ಅಂತ ಹೇಳಿದಾ, ಎಂಟ ಕ್ಯಾರೆಕ್ಟರ್ಸ್ ಇರಬೇಕ ಅಂತ p ಮುಂದ ಒಂದ ಐದ o ‘ಒ’ ಹಾಕಿದ್ದಾ, ’ನ್ಯೂಮೆರಿಕ’ ಇರಬೇಕಲ್ಲಲೆ ಅಂದರ
’ಅವ ಐದು ’ಒ’ ಅಲ್ಲಾ ಅವು 0 ( ಜೀರೊ)…ನನ್ನ ಹೆಂಡ್ತಿಗೆ ಎಷ್ಟ ಜೀರೊ ಕೊಟ್ಟರು ಕಡಮಿನ’ಅಂದಾ. ಇನ್ನ ಒಂದರ ಕ್ಯಾಪಿಟಲ್ ಇರಬೇಕ ಅಂತ ಲಾಸ್ಟಿಗೆ JA ಕ್ಯಾಪಿಟಲ್ ಹಾಕಿದ್ದಾ. ಅಲ್ಲಾ ಹಿಂದಿ ಒಳಗ ’ಜಾ’ ಅಂದರ ಪೀಡಾ ಹೋಗ ಅಂದಂಗ ಆ ಮಾತ ಬ್ಯಾರೆ.
ಎಲ್ಲಾ ಕರೆಕ್ಟ ಇದ್ದರು ಪಾಸವರ್ಡ್ ಯಾಕ ಸೆಟ್ ಆಗವಲ್ತು ಅಂತ ವಿಚಾರ ಮಾಡಿದ ಮ್ಯಾಲೆ ಗೊತ್ತಾತ ಅಂವಾ ಸ್ಪೇಶಲ್ ಕ್ಯಾರೆಕ್ಟರ ಮರತಾನ ಅಂತ.
“ದೋಸ್ತ ನೀ ಸ್ಪೇಶಲ್ ಕ್ಯಾರೆಕ್ಟರ ಮರತಿಲೇ” ಅಂತ ನಾ ಅಂದರ ಅಂವಾ ಏನ ಅಂದಾ ಹೇಳರಿ.
“ಲೇ…ದೋಸ್ತ.. ನನ್ನ ಹೆಂಡತಿನ ಸ್ಪೇಶಲ್ ಕ್ಯಾರೆಕ್ಟರಲೇ..ಅದಕ್ಕ ಅಕಿ ಹೆಸರ ಪಾಸವರ್ಡ್ ಇಟ್ಟೇನಿ..ಇನ್ನ ಮತ್ತೇಲ್ಲೇ extra special character ಹಾಕಲಿ” ಅಂದಾ..ನಂಗ ಏನ ಹೇಳಬೇಕ ತಿಳಿಲಿಲ್ಲಾ..ನಾ
“ದೋಸ್ತ ಹಂಗ ನಿನ್ನ ಹೆಂಡತಿ ಸ್ಪೇಶಲ್ ಕ್ಯಾರೆಕ್ಟರ್ ಅನ್ನೋದ ನನಗ ಗೊತ್ತ, ನಿನಗ ಗೊತ್ತ. ಬ್ಯಾಂಕದವರಿಗೆ ಗೊತ್ತಿರಂಗಿಲ್ಲಾ. ನೀ ಅದಕ್ಕ ಒಂದ ಸ್ಪೇಶಲ್ ಕ್ಯಾರೆಕ್ಟರ ಹಾಕ” ಅಂದಮ್ಯಾಲೆ ಅಂವಾ ಪೂಜಾನ ಮುಂದ (!) ಉದ್ಘಾರವಾಚಕ ಚಿಹ್ನೆ ಹಾಕಿ ಪಾಸವರ್ಡ್ ಲಾಕ್ ಮಾಡಿದಾ. ಏನ್ಮಾಡ್ತೀರಿ?
ಅಲ್ಲಾ ಹಂಗ ಯಾರ ಹೆಂಡ್ತಿ ಹೆಸರ ಪೂಜಾ ಅದ ಅವರ ತಪ್ಪ ತಿಳ್ಕೊಬ್ಯಾಡ್ರಿ, ಹೆಂಡ್ತಿ ಸ್ಪೇಶಲ್ ಕ್ಯಾರೆಕ್ಟರ ಇರಬೇಕು ಅಂದರ ಅಕಿ ಹೆಸರ ಪೂಜಾನ ಇರಬೇಕು ಅಂತೇನ ಇಲ್ಲಾ….. ಪೀಡಾ ಇದ್ದರ ಸಾಕು.