ಮೊನ್ನೆ ಸಂಜಿಗೆ ಮನಿಗೆ ಹೋಗೊ ಪುರಸತ್ತ ಇಲ್ಲದ ತಾಯಿ ಮಗಂದ ಜೋರ ಜಗಳ ನಡದಿತ್ತ. ಹಂಗ ಇದ ವಾರದಾಗ ಮೂರ ದಿವಸ ಇರೋದ.
ನಾ ನನ್ನ ಹೆಂಡ್ತಿಗೆ ಎಷ್ಟ ಸರತೆ ’ಮಗಾ ಈಗ ದೊಡ್ಡೊಂವ ಆಗ್ಯಾನ ಸ್ವಲ್ಪ ರಿಸ್ಪೆಕ್ಟಲೇ ಟ್ರೀಟ್ ಮಾಡ’ ಅಂತ ಹೇಳಿದರೂ ಅಕಿ ಏನ ಕೇಳಂಗಿಲ್ಲಾ
’ಹೆತ್ತ ತಾಯಿಗೆ ಮಗಾ ಎಷ್ಟ ದೊಡ್ಡೊಂವ ಆದರ ಏನ್..ನೀವು ಬಾಯಿ ಮುಚಗೊಂಡ ಸುಮ್ಮನ ಕೂಡ್ರಿ, ನಡಕ ಬರಬ್ಯಾಡ್ರಿ’ ಅಂತ ನಂಗ ಜೋರ ಮಾಡೋಕಿ.
ಇನ್ನ ಹಂತಾದರಾಗ ಕಟಗೊಂಡ ಗಂಡನೂ ದೊಡ್ಡಂವ ಆಗ್ಯಾನ ಅವಂಗರ ರಿಸ್ಪಕ್ಟಲೇ ಟ್ರೀಟ್ ಮಾಡಬೇಕ ಅನ್ನೋದ ಅಂತು ದೂರದ ಮಾತ ಬಿಡ್ರಿ.
ಹೋಗ್ಲಿ ಬಿಡ ತಾಯಿ ಮಗಾ ಏನರ ಹಾಳ ಗುಂಡಿ ಬೀಳಲಿ ಅಂತ ನಾ ಸುಮ್ಮನಾದೆ ಆದರ ಅವರಿಬ್ಬರ ಜಗಳ ಬಗಿಹರಿಯೊಹಂಗ ಕಾಣಲಿಲ್ಲಾ.
ನಾ ಇಶ್ಯೂ ಏನು ಅಂತ ಸೂಕ್ಷ್ಮ ನಮ್ಮವ್ವನ ಕೇಳಿದರ ಅಕಿ ಒಂಬತ್ತವಾರಿ ಕಥಿನ ಹೇಳಿದ್ಲು.
ಅದೇನ ಆಗಿತ್ತಂದರ ನನ್ನ ಮಗಗ ಆ ಸುಡಗಾಡ ಎಗ್ಗ್ ರೈಸ್ ತಿನ್ನೋ ಚಟಾ ಅದರಿಪಾ, ಅಂವಾ ವಾರದಾಗ ಎರಡ ಮೂರ ಸರತೆ ಎಗ್ಗ್ ರೈಸ್ ಕಟದ ಬರ್ತಾನ. ಅದು ಇಕಿಗೆ ಗೊತ್ತಾಗಿ ಅಕಿ ಇವಂಗ ನೀ ಒಟ್ಟ ಎಗ್ಗ್ ರೈಸ ತಿನಬ್ಯಾಡ ಅಂತ ಹತ್ತ ಸಲಾ ಹೇಳಿದರೂ ಅಂವಾ ಏನ ಇಕಿ ಮಾತ ಕೇಳಲಿಲ್ಲಾ. ಕಡಿಕೆ ಇಕಿ ತಲಿ ಕೆಟ್ಟ
’ಇನ್ನ ಮುಂದ ಒಟ್ಟ ನೀ ಎಗ್ಗ್ ರೈಸ ತಿನ್ನಂಗಿಲ್ಲಾ……ತಿಂದರ ನನ್ನ ಮ್ಯಾಲೆ ಆಣಿ ನೋಡ’ ಅಂತ ಜಬರದಸ್ತಿ ಆಣಿ ಮಾಣಿಸ್ಗೊಂಡಿದ್ಲು, ಹಂಗ ನಂಗ ಮಗನ ಸ್ವಭಾವ ಗೊತ್ತಿತ್ತ ಖರೆ ಆದರ ಅಂವಾ ಆಣಿ ಮಾಡಿದ್ದ ಅವರವ್ವನ ಮ್ಯಾಲೆ ತೊಗೊ ಅಂತ ಸುಮ್ಮನಿದ್ದೆ.
ಈಗ ಈ ಮಗಾ ಅವರವ್ವನ ಮ್ಯಾಲೆ ಆಣಿ ಮಾಡೀನೂ ಮೊನ್ನೆ, ಅದು ಶ್ರಾವಣ ಮಾಸದಾಗ ಮತ್ತ ಎಗ್ಗ್ ರೈಸ ತಿಂದ ಬಂದ ಅಕಿ ಕಡೆ ಸಿಕ್ಕೊಂಡಿದ್ದಕ್ಕ ಇಷ್ಟ ರಾಮಾಯಣ ನಡದಿತ್ತು. ಆದರೂ ನನ್ನ ಮಗಂದ ಧೈರ್ಯ ಮೆಚ್ಚಬೇಕ ಬಿಡ್ರಿ, ಇರೋಕಿ ಒಬ್ಬೊಕಿ ಅವ್ವಾ, ಅಕಿ ಮ್ಯಾಲೆ ಆಣಿ ಮಾಡಿ ಅದನ್ನ ಮುರಿತಾನ ಅಂದರ? ಅಲ್ಲಾ ಈ ಧೈರ್ಯ ಮಾಡಲಿಕ್ಕೆ ನಂಗ ಹತ್ತ ವರ್ಷ ಹಿಡದಿತ್ತ. ಹಂಗ ನಾ ಒಮ್ಮೆ ಹೆಂಡ್ತಿ ಮ್ಯಾಲೆ ಆಣಿ ಮಾಡಿದರ ಮುಗಿತ. sweet & salt lime juice ಕುಡಿತಿದ್ದೆ ಹೊರತು white rum with lime chord ಕಡೆ ನೋಡ್ತಿದ್ದಿಲ್ಲಾ. ಅಕಿ ಮ್ಯಾಲೆ ಆಣಿ ಮಾಡಿದರ ಅಷ್ಟ ಪಾಲಸ್ತಿದ್ದೆ ಬಿಡ್ರಿ ಸುಳ್ಳ ಯಾಕ ಹೇಳ್ಬೇಕ.
ಇನ್ನ ಮಗಾ ತನ್ನ ಮ್ಯಾಲೆ ಆಣಿ ಮಾಡಿನೂ ಎಗ್ಗ್ ರೈಸ ತಿಂದ ಬಂದಾನಲಾ ಅಂತ ಸಿಟ್ಟ ಬಂದ ಇಕಿ ಮಗಂದ ಫ್ರೈಡ ರೈಸ ಮಾಡಲಿಕತ್ತಿದ್ಲು. ಕಡಿಕೆ ಇದ ಬಗಿ ಹರೆಯಂಗಿಲ್ಲ ತಡಿ ಅಂತ ನಾ
’ಆಗಿದ್ದ ಆಗಿ ಹೋತ ತೊಗೊ….ಸಾಕ ಮುಗಸ ಇನ್ನ’ ಅಂತ ಅಕಿಗೆ ಜೋರ ಮಾಡಿ ನನ್ನ ಮಗಗ
’ಲೇ…ಇನ್ನ ಮುಂದ ನೀ ಒಂದ ಎಗ್ಗ್ ರೈಸರ ತಿನಬ್ಯಾಡಾ..ಇಲ್ಲಾ ಅಕಿ ಆಣಿನರ ತಿನಬ್ಯಾಡಾ’ ಅಂತ ಇಶ್ಯೂ ಮುಗಸಲಿಕ್ಕೆ ಹೋದರ
’ಅಲ್ಲರಿ…ಈಗ ಅಂವಾ ನನ್ನ ಮ್ಯಾಲೆ ಆಣಿ ಮಾಡೇನೂ ತಿಂದ ಬಂದಾನಲಾ..ಅದಕ್ಕೇನ ಮಾಡೋದ’ ಅಂತ ಇಕಿ ಕಂಟಿನ್ಯೂ ಮಾಡಿದ್ಲು, ನಾ ತಲಿ ಕೆಟ್ಟ
’ಲೇ…ಹಂಗ ಈ ಆಣಿ-ಪಾಣಿ ಕಲಿಯುಗದಾಗ ಖರೇ ಆಗಂಗಿಲ್ಲಾ…ನಿಂಗ ಏನೂ ಆಗಂಗಿಲ್ಲಾ, ಬೇಕಾರ ನಾ ನಿನ್ನ ಮ್ಯಾಲೆ ಆಣಿ ಮಾಡಿ ಹೇಳಲೇನ?’ ಅಂತ ಅಂದ ಮ್ಯಾಲೆ ಸುಮ್ಮನಾದ್ಲು. ಹಂಗ ಆಣಿ ಖರೇ ಆಗ್ಬೇಕಂದರೂ ಅದಕ್ಕ ನಾವ ಪಡದ ಬರಬೇಕ ಅನ್ನೋವ ಇದ್ದೆ ಹೋಗ್ಲಿ ಬಿಡ ಇನ್ನ ಅದೊಂದ ಇಶ್ಯು ಆಗ್ತದ ಅಂತ ಸುಮ್ಮನಾದೆ.
ನಮ್ಮಕಿಗೆ ಮೊದ್ಲಿಂದ ಈ ಆಣಿ ಮ್ಯಾಲೆ ಭಾಳ ನಂಬಿಕೆ ಅದ. ಅಕಿಗೆ ಅವರ ಮನ್ಯಾಗ ಸಣ್ಣೋಕಿದ್ದಾಗಿಂದ ಮಾತ ಮಾತಿಗೆ ಆಣಿ ಹೆದರಿಕಿ ಹಾಕಿಸಿ ಹಾಕಿಸಿ ದೊಡ್ಡೊಕಿನ್ನ ಮಾಡ್ಯಾರ. ಅಲ್ಲಾ ನನ್ನ ಲಗ್ನ ಆಗಿದ್ದು ಆಣಿ ಕೃಪಾದಿಂದನ. ಅವರಪ್ಪಾ ’ಮುತ್ತಿನಂಥಾ ಹುಡಗ ಇದ್ದಾನ…ನೀ ಆ ಹುಡಗನ್ನ ಮಾಡ್ಕೋಬೇಕ ನೋಡ ಇಲ್ಲಾಂದರ ನನ್ನ ಮ್ಯಾಲೆ ಆಣಿ’ ಅಂತ ಹೇಳಿ ಹೆದರಕಿ ಹಾಕಿದ ಮ್ಯಾಲೆ ಇಕಿ ನನ್ನ ಲಗ್ನಾ ಮಾಡ್ಕೊಂಡಿದ್ದ. ಹಂಗ ನಂಗ್ಯಾರೂ ಈ ಹುಡಗಿ ಮಾಡ್ಕೋಳಬೇಕ ಅಂತ ಆಣಿ ಹಾಕಿಸಿದ್ದಿಲ್ಲಾ, ಆದರ ನಾನ ನನ್ನ ಹೆಂಡ್ತಿ ಆಣಿ ಪಾಲಸಲಿ ಅಂತ ಮಾಡ್ಕೊಂಡಂಗ ಆಗಿತ್ತ ಅನ್ನರಿ.
ಇನ್ನ ನನಗ ಇಕಿ ಆಣಿ ಇಷ್ಟ ಪಾಲಸ್ತಾಳ ಅಂತ ಗೊತ್ತಾಗಿದ್ದ ಎಂಗೇಜಮೆಂಟ್ ಆಗಿಂದ. ನಾ ಭೆಟ್ಟಿ ಆದಾಗೊಮ್ಮೆ ಒಂದೊಂದ ಎನ್ಕೈರಿ ಶುರು ಮಾಡಿದ್ಲಲಾ ಆವಾಗ ಈ ಆಣಿ ಶುರು ಆತ ಅನ್ನರಿ. ನೀವು ಚೀಟ ಹಾಕೋತಿರೇನ ದಿಂದ ಶುರು ಮಾಡಿ ಕುಡಿತಿರಿನೂ ದಿಂದ ಹಿಡದ ನಿಂಬದೇನರ ಮೊದ್ಲ ಅಫೇರ್ ಇತ್ತೇನ ಅನ್ನೋ ತನಕ ಒಂದೊಂದ ಕೇಳಿಕತ್ಲು. ನಾ ನಾರ್ಮಲ್ಲಾಗಿ ಎಲ್ಲಾ ಹುಡುಗರಗತೆ ಏನ ಕೇಳಿದರು
’ಏ, ನಾ ಹಂತಾ ಹುಡಗಲ್ಲಾ’ ಅಂತಿದ್ದೆ. ಹಿಂಗ ಎಲ್ಲಾದಕ್ಕೂ ನಾ ಇಲ್ಲಾ ಅನ್ನೋದನ್ನ ಕೇಳಿ ಅಕಿಗೆ ಡೌಟ ಬರಲಿಕತ್ತ. ಅಲ್ಲಾ ಗಂಡಸ ಆಗಿ ಹುಟ್ಟಿ ಒಂದು ಚಟಾ ಇಲ್ಲಾ ಅಂತಾನ ಅದ ಹೆಂಗ ಸಾಧ್ಯ ಅಂತ ಅಕಿ
’ರ್ರೀ..ಖರೇ ಹೇಳ್ರಿ….ನನ್ನ ಆಣಿ ಮಾಡಿ ಹೇಳ್ರಿ..ನೀವು ಒಟ್ಟ ಕುಡದಿಲ್ಲಾ…ಬೀರ ಸಹಿತ ಮುಟ್ಟಿಲ್ಲಾ’ ಅಂತ ಫಸ್ಟ ಟೈಮ ಆಣಿ ಇಂಟ್ರಡ್ಯೂಸ್ ಮಾಡಿದ್ಲು.
’ಏ, ನಿಮ್ಮಪ್ಪನಾಣೆಂದ್ರು ಕುಡಿಯಂಗಿಲ್ಲಲೇ…’ ಅಂತ ಅಂದರ ’ನಮ್ಮಪ್ಪಂದ ಬ್ಯಾಡ, ನನ್ನ ಆಣಿ ಮಾಡಿ ಹೇಳ್ರಿ’ ಅಂತ ಗಂಟ ಬಿದ್ಲು.
ಹಂಗ ನಾ ಆಣಿ-ಪಾಣಿ ನಂಬಗಿಲ್ಲಾ ಖರೆ ಆದರ ನನಗ್ಯಾಕೋ ದಣೇಯಿನ ಎಂಗೇಜಮೆಂಟ್ ಮಾಡ್ಕೊಂಡ ಹುಡಗಿ ಮ್ಯಾಲೆ ಆಣಿ ಮಾಡಿ ಸುಳ್ಳ ಹೇಳಲಿಕ್ಕೆ ಮನಸ್ಸಾಗಲಿಲ್ಲಾ.
ಹಿಂಗ ಆವಾಗ ಆಣಿ ಮಾಡಿಸಿಸಿ ಮಾಡಿಸಿಸಿ ನನ್ನ ಜೀವಾ ತಿನ್ನಲಿಕ್ಕೆ ಶುರು ಮಾಡಿದೋಕಿ ಇವತ್ತಿನ ತನಕ ತಿನ್ನಲಿಕತ್ತಾಳ. ಆದರ ಈಗ ನಾ ಆಣಿಗೆ ಹೆದರಂಗಿಲ್ಲಾಂತ ಗೊತ್ತಾಗೇದ ಬಿಡ್ರಿ. ಹಂಗ ಇತ್ತೀಚಿಗೆ ನಾ ಸುಳ್ಳ ಹೇಳಿದಾಗೊಮ್ಮೆ ಖರೇ ಖರೇನ ಅಕಿ ಮ್ಯಾಲೇನ ಆಣಿ ಮಾಡ್ತೇನಿ, ಏನಾಗಿದ್ದ ಆಗಲಿ ಅಂತ. ಆವಾಗಿಂದ ಅಕಿ ವೇಟ್ ಜಾಸ್ತಿ ಆಗಕೋತ ಹೊಂಟದ ಆ ಮಾತ ಬ್ಯಾರೆ.
ಇಕಿಗೆ ಯಾವಾಗ ನಾ ಅಕಿ ಮ್ಯಾಲೆ ಆಣಿ ಮಾಡ ಅಂದಾಗೊಮ್ಮೆ ಭಾಳ ತಲಿಕೆಡಸಿಗೊಳ್ಳಲಾರದ ’ನಿನ್ನ ಆಣಿ ಅಂದ್ರು’ ಅಂತ ಅನ್ನಲಿಕತ್ತೆ ಆವಾಗ ಅಕಿ ಆಣಿ ಮಾಡಸೋ ಕ್ಯಾರೆಕ್ಟರ್ ಚೇಂಜ್ ಮಾಡಲಿಕತ್ಲು. ಹಗರಕ ನಮ್ಮಜ್ಜಿ ಮ್ಯಾಲೆ, ನಮ್ಮ ಅವ್ವಾ ಅಪ್ಪನ ಮ್ಯಾಲೆ, ಮಕ್ಕಳ ಮ್ಯಾಲೆ ಆಣಿ ಅಂತ ಶುರು ಮಾಡಿದ್ಲು.
ಮುಂದ ಒಂದ ದಿವಸ ನಮ್ಮಜ್ಜಿ ಇಕಿ ಆಣಿ ಭಾರ ತಡ್ಕೊಳಿಕ್ಕೆ ಆಗಲಾರದ ಸತ್ತಲು. ನಾ ಆವಾಗಿಂದ ’ನೀ ಬ್ಯಾರೆಯವರನ ಇದರಾಗ ನಡಕ ತರಂಗಿಲ್ಲಾ’ ಅಂತ ಕ್ಲೀಯರ್ ಆಗಿ ಹೇಳಿ ಬಿಟ್ಟೆ.
ಕಡಿಕೆ ಅಕಿ ದೇವರನ ಇಂಟ್ರಡ್ಯೂಸ್ ಮಾಡಿದ್ಲು. ಇಕಿ ಎಲ್ಲೋ ದೇವರನೂ ಬಿಡೋಕಿ ಅಲ್ಲಾ ಅಂತ ಅನಸಲಿಕತ್ತ. ಅಲ್ಲಾ ನಾ ಹೆಂಡ್ತಿಗೆ ಹೆದರಿಲ್ಲಾ ಇನ್ನ ದೇವರಿಗೆ ಹೆದರತೇನೇನ? ….ಸೊ ನಮ್ಮ ಮನಿ ದೇವರ ಮ್ಯಾಲೆ ಆಣಿ, ಅವರ ಮನಿ ದೇವರ ಮ್ಯಾಲೇ ಆಣಿ ಅಂತ ಎಲ್ಲಾ ದೇವರನೂ ನಡಕ ತರೋಕಿ.
ನಾ ಒಂದ ಸ್ವಲ್ಪ ರಾತ್ರಿ ಲೇಟಾಗಿ ಬಂದ್ರ ಸಾಕ್…’ರ್ರೀ..ಖರೇ ಹೇಳ್ರಿ…ತೊಗೊಂಡ ಬಂದಿರಿ ಹೌದಲ್ಲ?…ಸುಳ್ಳ ಹೇಳ ಬ್ಯಾಡ್ರಿ…ನನ್ನ ಮ್ಯಾಲೆ ಆಣಿ ಮಾಡಿ ಹೇಳ್ರಿ’ ಅಂತ ಗಂಟ ಬಿಳೋಕಿ. ಕಡಿಕೆ ಅಕಿಗೆ ನಾ ಯಾವಾಗ ಆಣಿ ಮಾಡಿನೂ ಸುಳ್ಳ ಹೇಳ್ತೇನಿ ಅಂತ ಕನಫರ್ಮ ಆತ ಆವಾಗ ಬ್ರ್ಯಾಂಡ ಮ್ಯಾಲೆ ಆಣಿ ಮಾಡಸಲಿಕತ್ಲು. ಹಿಂಗ ಎಲ್ಲಿಗೆ ಬಂದ ಮುಟ್ಟತ ಈ ಆಣಿ ಪ್ರಹಸನ ಅಂದರ ಬ್ಲೇಂಡರ್ಸ ಪ್ರೈಡ, ಬಡ್ ವೈಸರ ತನಕಾ ಬಂತ. ಅಕಿಗೆ ಗೊತ್ತ ನಾ ಯಾವದನ್ನ ಜಾಸ್ತಿ ಪ್ರೀತಿಸ್ತೇನಿ ಅಂತ. ನಂಗೇನ ಆಗೋದ ಅಂತ ನಾ ಆಣಿ ಮಾಡಿ ಮುಂದ ಬ್ರ್ಯಾಂಡ ಚೆಂಜ್ ಮಾಡಿ ಬಿಡ್ತಿದ್ದೆ.
ಅಲ್ಲಾ ನಿಮಗೊತ್ತದ ನಾ ಹಂತಾ ಮನಷ್ಯಾ ಅಲ್ಲಾ ಅಂತ. ಮತ್ತೇಲ್ಲರ ನೀವ ನಾ ಹಿಂಗೇಲ್ಲಾ ಬರದದ್ದ ಖರೇ ಅಂತ ತಿಳ್ಕೊಂಡ-ಗಿಳ್ಕೊಂಡೀರಿ..
ಈಗ ಅಂತೂ ನನಗ ಆಣಿ ಮಾಡ್ಲಿಕ್ಕೆ ಹೊಸಾ ಕ್ಯಾರೆಕ್ಟರ ಸಿಕ್ಕದ….ಏನ ಗೆಸ್ ಮಾಡ್ರಿ?
ಅಕಿ ಏನ ಕೇಳಿದರು ’ಲೇ..ಕೊರೋನದ ಮ್ಯಾಲೆ ಆಣಿ ಮಾಡಿ ಹೇಳ್ತೇನಿ’ ಅಂದ ಬಿಡೋದ.
ಸತ್ತರ ಆ ಸುಡಗಾಡ ಕೊರೋನಾ ಸಾಯವಲ್ತಾಕ.