” ರ್ರಿ, ಏಳ್ರಿ…ಏಂಟಾತ, ಇವತ್ತ ವರ್ಷದ ತೊಡಕ್, ಹಂಗ ಮುಗ್ಗಲಗೇಡಿಗತೆ ಇಷ್ಟೊತ್ತನಕ ಮಲ್ಕೋಬಾರದ, ಲಗೂನ ಏಳ್ರಿ” ಅಂದ್ಲು.
ನನಗ ನಿದ್ದಿ ಗಣ್ಣಾಗ ಇಕಿ ಯಾರದ ತೊಡಕ, ಏನ್ ತೊಡಕ್ ಅಂದ್ಲು ಗೊತ್ತಾಗಲಿಲ್ಲಾ, ಕಾಲಾಗ ಲುಂಗಿ ಏನರ ತೊಡಕ್ ಆಗೇದೇನ ಅಂತ ಮಲ್ಕೊಂಡಲ್ಲೆ ಕಾಲ ಝಾಡಿಸಿದೆ ಆಮ್ಯಾಲೆ ನೆನಪಾತ ನಾ ಲುಂಗಿ ಹಾಕ್ಕೊಂಡ ಮಲ್ಕೋಳೊ ಮನಷ್ಯಾ ಅಲ್ಲಾ, ಬರ್ಮೋಡಾ ಮನುಷ್ಯಾ ಅಂತ. ಬಹುಶಃ ಎಂಟಾದರೂ ನಾ ಇನ್ನೂ ಮಲ್ಕೊಂಡಿದ್ದ ನನ್ನ ಹೆಂಡತಿ ಕಣ್ಣಾಗ ತೊಡಕ್ ಆಗಲಿಕತ್ತದ ಅದಕ್ಕ ಒದರಲಿಕತ್ತಾಳ ಅನಸ್ತು.
ನಿನ್ನೆ ಯುಗಾದಿ ಅಂತ ಮನಿ ಮಂದೇಲ್ಲಾ ಒಂದ ಇಪ್ಪತ್ತ ಸರತೆ ಒದರಿ-ಒದರಿ ಎಬ್ಬಿಸಿದ್ದರು. ಇವತ್ತರ ಸ್ವಲ್ಪ ಛಂದಾಗಿ ನಿದ್ದಿ ಮಾಡಿದರಾತು ಅಂದರ ಅದಕ್ಕು ಯಾವುದೊ ಒಂದ ತೊಡಕ್ ಅಂತ ಇಕಿ ಎಬ್ಬಿಸಿ ಬಿಟ್ಟಳಲಾ ಅಂತ ಸಿಟ್ಟ ಬಂತು.
” ಲೇ, ಇವತ್ತ ಮತ್ತೇನ್ಲೇ ನಿಂದು ? ನಿನ್ನೆ ಹಬ್ಬ ಅಂತ ಹೇಳಿ ಇಡಿ ದಿವಸ ನನ್ನ ಗೋಳ್ ಹೋಯ್ಕೋಂಡಿ, ಇವತ್ತ ಮತ್ತ ಏನೋ ಶುರು ಮಾಡಿಯಲಾ?” ಅಂದೆ.
” ರ್ರಿ, ಇವತ್ತ ‘ವರ್ಷದ ತೊಡಕ್’, ಅಂದ್ರ ಇವತ್ತ ನೀವ ಏನ ಕೆಲಸ ಮಾಡಿದರೂ ವರ್ಷಾನ ಗಟ್ಟಲೆ ಅದ ರಿಪೀಟ್ ಆಗತದ ಅಂತ ಅದಕ್ಕ ಲಗೂನ ಎದ್ದ ಸ್ವಚ್ಛ ಸ್ನಾನ ಮಾಡಿ, ದಾಡಿ ಮಾಡ್ಕೊಂಡ್ ರೆಡಿಯಾಗಿ ಆಫೀಸ ಹೋಗಿ ಬರ್ರಿ, ಸಂಜಿ ಮುಂದ ಮಾರ್ಕೆಟಗೆ ಹೋಗೋದ ಅದ” ಅಂದ್ಲು. ನಾ ಇದೆಲ್ಲಿ ವರ್ಷದ ತೊಡಕ ಅಂತಾ ಹೊಸಾ ಹಬ್ಬ ಹುಟ್ಟಿಸದಳಲೇ ಇಕಿ ಅನಸ್ತು.
ನಿನ್ನೆ ಹಬ್ಬಂತ ಎಣ್ಣಿ ನೀರೂ ಹಚ್ಚಿ, ಸ್ನಾನ ಮಾಡ್ರೀ ಅಂತ ಗಂಟ ಬಿದ್ದ , ಕಡಿಕೆ ತಾನ ಎಮ್ಮಿ ಮೈ ತಿಕ್ಕಿದಂಗ ನನಗ ಮತ್ತ ಮಕ್ಕಳಿಗೆ ಮೈ ತಿಕ್ಕಿ ಸ್ನಾನ ಮಾಡಿಸಿದ್ಲು, ಸ್ನಾನ ಮಾಡಿದ ಕೂಡಲೇನ ದೇವರಿಗೆ, ದೊಡ್ಡವರಿಗೆ ಇವತ್ತರ ನಮಸ್ಕಾರ ಮಾಡರಿ ಅಂತ ಮಾಡಿಸಿಸಿ, ನನ್ನ ಬಾಯಿಲೆ ಪೇಪರನಾಗ ಬಂದಿದ್ದ ‘ಇಂದಿನ ಪಂಚಾಂಗ್’ ಓದಿಸಿಸಿ ಕಡಿಕೆ ಇದನ್ನ ಬಾಯಾಗ ಹಾಕೋರಿ ಅಂತ ಬೇವು-ಬೆಲ್ಲಾ ಕೊಟ್ಟಳು. ಅದರಾಗ ಬೆಲ್ಲ ಕಡಿಮೆ ಬೇವು ಜಾಸ್ತಿ ಇತ್ತ ಆ ಮಾತ ಬ್ಯಾರೆ.
“ಲೇ, ನೀ ಏನ ಬರೆ ಬೇವ ಕೊಟ್ಟೇಲ್ಲಾ? ಬೆಲ್ಲಾ ಯಾರ ಕೊಡೊರ?” ಅಂದರ
“ರ್ರೀ, ನಿಮಗ ಎಷ್ಟ ಬೆಲ್ಲಾ ಕೊಟ್ಟರು ಅಷ್ಟ. ಇವತ್ತ ನೀವು ಸ್ವಲ್ಪ ಬೆಲ್ಲಾ ಕಡಿಮೆ ತಿಂದ ಬೇವು ಜಾಸ್ತಿ ತಿನ್ನಬೇಕು, ಅಂದರ ಆ ಸುಟ್ಟು-ಸುಡಾಗಾಡ ತಿಂದ ಹೊಟ್ಯಾಗಿನ ಕ್ರಿಮಿ ಕೀಟಾ ಎಲ್ಲಾ ಸತ್ತರ ಹೊಗ್ತಾವ” ಅಂತ ಅಂದ್ಲು ,
“ಲೇ, ನೀ ಹಿಂಗ ಬರೆ ಬೇವು ಕೊಟ್ಟಿದ್ದ ನೋಡಿದ್ರ ನನ್ನೂ ಒಂದ ಕ್ರೀಮಿ ಕೀಟ ಅಂತ ತಿಳ್ಕೊಂಡಂಗ ಕಾಣತದ” ಅಂದೆ.
“ರ್ರಿ, ಹಂಗ್ಯಾಕ ಅಂತೀರಿ, ಹಬ್ಬದ ದಿವಸರ ಛಂದಾಗಿ ಮಾತಾಡರಿ” ಅಂದಿದ್ಲು.
ಅಲ್ಲಾ ನಮಗ ಹೆಂಡತಿ ತನ್ನ ಕೈಯಲೆ ಏನ ಕೊಟ್ಟರು ಅದು ಕಹಿನ ಹತ್ತೋದ ಬಿಡರಿ. ಆದ್ರು ಹಬ್ಬದ ದಿವಸ ಅಕಿ ಜೊತಿ ಏನ ವರಟ ಹರೆಯೋದು ಅಂತ ಜಾಸ್ತಿ ಮಾತಡಲಾರದ ಸುಮ್ಮನ ತಿಂದೆ. ಮಧ್ಯಾಹ್ನ ಊಟಕ್ಕ ಧುಬಟಿ ಗತೆ ಮೆತ್ತ- ಮೆತ್ತಗನಿವು ಹೋಳಿಗೆ ಬ್ಯಾರೆ ಮಾಡಿ ತುರಕಿದ್ಲು. ನಾನೂ ಅಕಿ ಮಾಡಿದ್ದ ಹೋಳಗಿ ಹಾಲಾಗ ಮಧ್ಯಾಹ್ನ ನೆನಿ ಇಟ್ಟ ರಾತ್ರಿ ತಿಂದ ಯುಗಾದಿ ಹಬ್ಬ ಮುಗಿಸಿದ್ದೆ.
ಯುಗಾದಿ ಹಬ್ಬ ಅಂದರ ಹೊಸ ವರ್ಷ ಇದ್ದಂಗ ಅಂತ. ಹಂಗ ಯುಗಾದಿಗೊಮ್ಮೆ ಹೊಸದಾಗಿ ಜೀವನಾ ಶುರು ಮಾಡಬೇಕು, ಹಳೇದನ್ನೇಲ್ಲಾ ಮರಿಬೇಕು, ಅಂತೆಲ್ಲಾ ದೊಡ್ಡ-ದೊಡ್ಡ ಮಂದಿ ಕವಿತಾ ಕಟ್ಟಿ-ಕಟ್ಟಿ
“ಹಳೆಯದಲ್ಲವ ಮರೆಯಿರೈ,
ಹೊಸತು ಬಾಳ ತೆರೆಯಿರೈ” ಅಂತ ಹೇಳ್ಯಾರ. ಆದ್ರ ಅದ ನಮಗೆಲ್ಲಾ ಅಪ್ಲಿಕೇಬಲ್ ಆಗಂಗಿಲ್ಲಾ ಬಿಡ್ರಿ. ಅದ ಹೆಂಡತಿ, ಅದ ಮಕ್ಕಳು, ಅದ ಅವ್ವಾ-ಅಪ್ಪಾ, ಇನ್ನ ಇದರಾಗ ಹೊಸಾದ ಏನ ಅದ ತಲಿ, ಬರೆ ಹೊಸಾ ಅಂಗಿ-ಚಡ್ಡಿ ಹಾಕ್ಕೊಂಡ ಅಡ್ಡಾಡಿದರೇನ ಜೀವನ ಫ್ರೇಶ್ ಆಗ್ತದ? ಇಲ್ಲಾ.
ಜೀವನದಾಗ ಕಷ್ಟ-ಸುಖಾ ಎರಡನ್ನು ಸಮನಾಗಿ ತಿಳ್ಕೋಬೇಕು ಅಂತಾರ. ಹಂಗ ದಿವಸಾ ಬೆಲ್ಲದಂತಾ ಹೆಂಡತಿ ಕೈಯಾಗಿಂದ ಬೇವು ಇಸಗೊಂಡ ತಿನ್ನೋದ ನಮ್ಮ ಹಣೆಬರಹದಾಗ ಬರದಾಗ ಏನು ಮಾಡಲಿಕ್ಕೆ ಬರತದ. ಸುಮ್ಮನ ಇದ್ದದ್ದ ಸ್ವಲ್ಪ ಸುಖ ಹೆಂಡತಿಗೆ ಹಂಚಿ ಉಳದದ್ದ ದುಃಖ ನಾವ ತಡ್ಕೋಂಡ್ ಸಂಸಾರ ದೂಗಿಸಿಕೋತ ಹೋಗೊದು. ಆಮ್ಯಾಲೆ ಹಳೇದನ್ನೆಲ್ಲಾ ಹಂಗ ಮರಿಲಿಕ್ಕೂ ನಮ್ಮ ಕಡೆ ಆಗಂಗಿಲ್ಲಾ, ಅದನ್ನ ಮರಿಬೇಕಂದ್ರ ಹೆಂಡತಿ ನಮ್ಮ ಮುಂದನ ಇರತಾಳ, ಹೆಂಗ ಮರಿತಿರಿ? ಅಕಿನ್ನೇನ ಹಳೇ ಅರಬಿ, ಭಾಂಡೆ ಸಾಮಾನ ಕೊಟ್ಟಂಗ ಕೊಡಲಿಕ್ಕ ಬರತದ? ಇಲ್ಲಾ.
ಹಂಗ ನಮಗ ಹೊಸ ಬಾಳ ಶುರುಮಾಡಲಿಕ್ಕೂ ಸಾಧ್ಯ ಇಲ್ಲಾ ಅನ್ರಿ. ಹೊಸ ಬಾಳ ಶುರು ಮಾಡಬೇಕಂದ್ರ ‘ಹೊಸ ಬಾಳ ಸಂಗಾತಿ’ ಇದ್ದರ ಮಾತ್ರ ಸಾಧ್ಯಂತ ಅನ್ಕೊಂಡಂವಾ ನಾನು. ಒಟ್ಟ ಒಂದ ಮಾತನಾಗ ಹೇಳ್ಬೇಕಂದ್ರ ಸಂಸಾರನ ಒಂದ ದೊಡ್ಡ ತೂಡಕ್ ಇದ್ದಂಗ. ಅದರಾಗ ಇವತ್ತ ಈಕಿ ಮತ್ತೂಂದು ಯಾವದೋ ಹೊಸಾದು ‘ವರ್ಷದ ತೊಡಕ್’ ಅಂತ ತಗದ ನನ್ನ ಜೀವನಾನ ಮತ್ತಿಷ್ಟ ತೂಡಕ್ ಮಾಡಲಿಕತ್ತಾಳ ಅನಸಲಿಕತ್ತು.
” ಅಲ್ಲಾ ಇವತ್ತ ವರ್ಷದ ತೊಡಕ್ ಅಂತಿ, ಇವತ್ತ ಏನ ಮಾಡಿದರು ಅದನ್ನ ವರ್ಷ ಪೂರ್ತಿ ಮಾಡ್ತೇವಿ ಅಂತಿ, ಮತ್ತ ಹಂತಾದರಾಗ ಸಂಜಿಗೆ ಮಾರ್ಕೆಟಿಗೆ ಹೋಗಬೇಕು ಅಂದರ ನೀ ಏನ್ ಮುಂದ ವರ್ಷಾನಗಟ್ಟಲೆ ಮನಿ – ಮಠಾ ಬಿಟ್ಟ ಹೊರಗ ತಿರಗ್ಯಾಡೋಕಿ ಏನ ಮತ್ತ?” ಅಂದೆ.
” ರ್ರೀ, ಸಾಕ….ಸುಮ್ಮನಿರ್ರಿ….ಇವತ್ತ ಒಂದ ದಿವಸರ ನಾ ಹೇಳಿದ್ದ ಕೇಳರಿ. ಇವತ್ತ ಒಂದೆರಡ ಸೀರಿ ಖರೀದಿ ಮಾಡೋದ ಅದ, ಹಂಗ ಖರೇ ನೋಡಿದ್ರ ಇವತ್ತ ಬಂಗಾರ ಖರೀದಿ ಮಾಡಬೇಕು, ಆದರ ಈ ಬಂಗಾರದ ರೇಟು ನಿಮಗ ನೀಗಂಗಿಲ್ಲಾಂತ ವಿಚಾರ ಮಾಡಿ ಬರೇ ಸೀರಿ ತೊಗಂಡ್ರ ಸಾಕು ಅಂತ ಅನ್ಕೊಂಡೇನಿ!” ಅಂದ್ಲು.
ಹಕ್ …ಇವತ್ತ ವರ್ಷದ ತೊಡಕ್ ಅಂತ ಸೀರಿ ತೊಗೊಂಡರ ಇನ್ನ ವರ್ಷ ಪೂರ್ತಿ ಅಕಿಗೆ ಫ್ರೀ ಸೀರಿ ಸಿಗತಾವ ಅಂತ ಲೆಕ್ಕಾ ಹಾಕ್ಯಾಳಂತ ಗ್ಯಾರಂಟೀ ಆತ. ಮತ್ತ ಅದರಾಗ ಇಕಿ ನನಗ ಬಂಗಾರ ಕೇಳಲಾರದ ಬಂಗಾರದಂತಾ ಗಂಡಗ ಉಪಕಾರ ಮಾಡಿದವರ ಗತೆ ಮಾತಾಡಲಿಕತ್ತಾಳ. ಅಲ್ಲಾ ಈ ವರ್ಷದ ತೊಡಕ್ ಏನ್ ಅಕಿಗೆ ಒಬ್ಬಕಿಗೇ ಇಷ್ಟ ಇರತದೂ ಏನ ನಮಗೇಲ್ಲಾ ಅದನೋ ಗೊತ್ತಾಗಲಿಲ್ಲಾ? ಹಂಗ ಇವತ್ತ ನಾ ಅಕಿಗೆ ಸೀರಿ ಕೊಡಿಸಿದರ ಮುಂದ ವರ್ಷಾನಗಟ್ಟಲೇ ನಾ ಸೀರಿ ಕೊಡಿಸಿಗೋತ ಇರಬೇಕಾಗತದ ಹೌದಲ್ಲೋ? ಅದನ್ನ ಯಾರ ವಿಚಾರ ಮಾಡೋರ ಮತ್ತ, ಅಲ್ಲಾ ಹಂಗ ಯಾರರ ವರ್ಷದ ತೊಡಕ ದಿವಸ ಲಗ್ನ ಆದರ ಅವರಿಗೆ ಬಹು ಪತ್ನಿತ್ವದ ಯೋಗ ಅದ, ಇಲ್ಲಾ ಅವತ್ತ ಯಾರರ ಹಡದರ ವರ್ಷ ತುಂಬೊದರಾಗ ಅವಳಿ-ಜವಳಿ ಹಡಿತಾರ ಅಂತೇನಿಲ್ಲಾ ಮತ್ತ. ಆದರ ಸೀರಿ- ಬಂಗಾರ ತೊಗಂಡರ ಮತ್ತ ಮತ್ತ ವರ್ಷಾನಗಟ್ಟಲೇ ಅವು ಬರತಾವ, ಬೇಕಾರ ಗಂಡಾ ಎಲ್ಲಿಂದರ ಕಳುವ ಮಾಡ್ಕೋಂಡ ತರವಲ್ಲನಾಕ, ಒಟ್ಟ ಬರತಾವ ಅಂತ ಹೆಂಡಂದರು ನಂಬತಾರ ಇಷ್ಟ.
ಈಕಿ ನನಗ ‘ಇವತ್ತರ ನೀವು ನಾ ಹೇಳಿದ್ದ ಕೇಳರಿ’ ಅಂತ ಜೋರ ಮಾಡತಾಳ. ಖರೆ ಅಂದ್ರ ನಾ ದಿವಸಾ ಅಕಿ ಹೇಳಿದ್ದ ಮಾತ ಕೇಳೆ ಕೇಳ್ತೇನಿ. ಅದು ವರ್ಷದ ತೊಡಕ ಇರಲಿ ಬಿಡಲಿ. ಬಹುಶ: ನಾವು ಲಗ್ನ ಆದ ಹೊಸದಾಗಿ ಏನ ಯುಗಾದಿಗೆ ವರ್ಷದ ತೊಡಕ್ ಬಂದಿರತದಲಾ ಆವಾಗ ಅತ್ತಿ ಮನಿಯವರು ಹಬ್ಬಕ್ಕ ಕರದಾರ, ‘ಬೆಳ್ಳಿ’ ವಾಟಗಾ ಕೊಡತಾರ ಅಂತ ಹೋಗಿರ್ತೇವೆ ನೋಡ್ರಿ ಆವಾಗ ಅವರು ನಮ್ಮ ಕಡೆಯಿಂದ ಹೆಂಡತಿ ಹೇಳಿದಂಗ ಕೇಳಿಸಿಸಿ ಬಿಟ್ಟಿರತಾರ. ಆವಾಗ ನಾವು ಹೊಸಾ ಹೆಂಡತಿ, ಮೊದ್ಲನೇ ಯುಗಾದಿ ಅಂತ ಅತ್ತಿ ಮನಿಯವರ ಹೇಳಿದ್ದಕ್ಕ, ಹೆಂಡತಿ ಹೇಳಿದ್ದಕ್ಕ ಏಲ್ಲಾದಕ್ಕು ‘ ಥೈ. ಥೈ.’ ಅಂತ ಕುಣದ ಬಿಟ್ಟಿರ್ತೇವಿ. ಅದ ಈಗ ಜೀವನ ಪರ್ಯಂತ ಮುಂದವರಕೊಂಡ ಹೊಂಟದ ಇಷ್ಟ. ಆ ಒಂದನೇ ವರ್ಷದ ತೊಡಕ್ ನಮಗ ಸಂಸಾರದಾಗ ಕಾಯಂ ತೊಡಕ್ ಆಗಿದ್ದ. ನೋಡ್ರಿ ಹಂಗ್ಯಾರರ ಹೊಸ್ತಾಗಿ ಲಗ್ನ ಆದೋರ ಇದ್ದರ ಇವತ್ತೊಂದ ದಿವಸ ಸ್ವಲ್ಪ ಹುಷಾರ ಇರ್ರಿಪಾ, ಇವತ್ತ ಗೆದ್ದರ ಮುಂದ ಜೀವನ ಪರ್ಯಂತ ಗೆದ್ದಂಗ ಮತ್ತ.
” ರ್ರಿ..ಹಾಸಗಿ ಬಿಟ್ಟ ಏಳ್ತೀರಿಲ್ಲೊ…. ಸಂಜಿಗೆ ಸೀರಿ ತರಲಿಕ್ಕೆ ಎಷ್ಟ ಗಂಟೇಕ್ಕ ಹೋಗೊದು?” ಅಂತ ಮತ್ತ ಅದ ವಿಷಯಕ್ಕ ಬಂದ್ಲು.
“ನೋಡಿಲ್ಲೆ, ನನ್ನ ಕಡೆ ಮೊದ್ಲ ರೊಕ್ಕಾ ಇಲ್ಲಾ. ಒಂದ ವಾರದಿಂದ ಹಬ್ಬ ಅಂತ ಎಲ್ಲಾರಿಗೂ ಹೊಸ ಅರಬಿ ತೊಗೊಂಡಿ, ಮತ್ತ ಈಗ ವರ್ಷದ ತೊಡಕ ಅಂತ ಏನರ ನೆವಾ ಮಾಡಿ ರೊಕ್ಕಾ ಖರ್ಚ ಮಾಡಸಬ್ಯಾಡಾ. ಮೊದ್ಲ ತಿಂಗಳ ಅಖೈರಕ್ಕ ನಮ್ಮ ಕಡೆ ರೊಕ್ಕಾ ಇರಂಗಿಲ್ಲಾ ಅದ್ರಾಗ ನೀ ವರ್ಷದ ಅಖೈರಕ್ಕ ರೊಕ್ಕಾ ಕೇಳಬ್ಯಾಡಾ” ಅಂತ ಅಂದೆ. ಅಲ್ಲಾ ಹಂಗ ವರ್ಷದ ತೊಡಕ ಇದ್ದಾಗ ಖರೀದಿ ಮಾಡೋದ ಇತ್ತಂದರ ಹಬ್ಬಕ್ಕೂ ಯಾಕ ಖರೀದಿ ಮಾಡಬೇಕಿತ್ತ ಹೇಳ್ರಿ? ನಾ ಏನ ಅಕಿದ ಬ್ಯಾಂಕ ಎ.ಟಿ.ಎಮ್ ಮಶಿನ್, ಅಕಿ ಮುಟ್ಟಿ ಪಾಸ್ ವರ್ಡ ಹೊಡದ ಕೂಡಲೇ ರೊಕ್ಕಾ ಉದರಸಲಿಕ್ಕೆ, ಇಲ್ಲಾ ಇಕಿ ಕೇಳಿದಾಗ ಒಮ್ಮೆ ಏನಬೇಕ ಅದನ್ನೆಲ್ಲಾ ಕೊಡಸಲಿಕ್ಕೆ ನಾ ಏನ್ ಹುಬ್ಬಳ್ಳ್ಯಾಗ ಓ.ಸಿ, ಬೆಟ್ಟಿಂಗ್ ಆಡ್ತೇನಾ? ಇಕಿ ಕಾಟಕ್ಕ ಇನ್ನ ಅದೊಂದ ಬಾಕಿ ಉಳದದ ಆ ಮಾತ ಬ್ಯಾರೆ.
“ಅದೆಲ್ಲಾ, ನಂಗೋತ್ತಿಲ್ಲಾ, ನಾ ಒಂದ ಸೀರಿ ತೊಗೊತೇನಿ, ಸುಮ್ಮನ ಬಾಯಿ ಮುಚಗೊಂಡ ಬರ್ರಿ” ಅಂತ ಖಂಡ- ತುಂಡ ಆಗಿ ಅಂದ್ಲು.
ಈ ಸಂಸಾರದ ತೊಡಕನಾಗ ‘ವರ್ಷದ ತೊಡಕ್’ ಒಂದ ಕಡಿಮೆಯಾಗಿತ್ತ ತೊಗೊ ನನ್ನ ನಸೀಬದಾಗ ಅಂತ ಸುಮ್ಮನ ಹಾಸಗಿ ಬಿಟ್ಟ ಎದ್ದೆ. ಅಲ್ಲಾ ಲಗ್ನ ಮಾಡ್ಕೋಂಡ ಜೀವನಾನ ತೊಡಕ ಮಾಡ್ಕೋಂಡ ಮಂದಿ ನಾವು ಇನ್ನ ವರ್ಷದ ತೊಡಕ್ ಬಗ್ಗೆ ಏನ ತಲಿಕೆಡಿಸಿಕೊಳ್ಳೊದು.
ಹಂಗ ಖರೇ ಹೇಳ್ಬೇಕಂದರ ನಮ್ಮ ಇತಿಹಾಸದಾಗ ಯುಗಾದಿ ಹಬ್ಬದ ಮರುದಿವಸ, ಮಧ್ಯಪಾನ ಮಾಡೊದು, ಜೂಜಾಡೋದು ಸಂಪ್ರದಾಯ ಅದ ಅಂತ, ಹಂಗ ನಾನು ಮತ್ತ ‘ವರ್ಷದ ತೊಡಕ’ ದಿವಸ ಒಂದ ರೌಂಡ ಕಮರಿಪೇಟಗೆ ಹೋಗಿ ಒಂದೆರಡ ಕೈ ಅಂದರ-ಬಾಹರ ಜಗ್ಗಿ ಬರಲೇನ ಅಂತ ಕೇಳಾಂವ ಇದ್ದೆ, ಆದ್ರ ಧೈರ್ಯ ಸಾಲಲಿಲ್ಲಾ, ಸುಮ್ಮನಾದೆ. ಅಲ್ಲಾ, ಮತ್ತ ಅಕಿ ಹೇಳಿದ್ದ ‘ವರ್ಷದ ತೊಡಕ್’ ಎಲ್ಲರ ಖರೆ ಆಗಿ ಆಮ್ಯಾಲೆ ನಾ ವರ್ಷಾನ ಗಟ್ಟಲೇ ಕುಡದ ಇಸ್ಪೀಟ ಆಡಕೋತ್ತ ಅಡ್ಯಾಡ್ಲಿಕತ್ತೇ ಅಂದ್ರ ಅಕಿ ಕಥಿ ಮುಗದಹೋತ. ಕಡಿಕೆ ಇದ್ದದ್ದು ಮಾರಕೊಂಡ ಎಲ್ಲರ ಹೆಂಡತಿನ್ನೂ ವತ್ತಿ ಇಡೊ ಹಂಗ ಆಗಬಾರದ. ಅದರಾಗ ನನಗ ಇರೋಕಿ ಒಬ್ಬಕೀನ ಹೆಂಡತಿ, ಅಕಿ ಹೆಂಗ ಇರವಳ್ಳಾಕ. ಅದರಾಗ ನಮಗ ಇಷ್ಟ ವಯಸ್ಸಾದ ಮ್ಯಾಲೆ ಮತ್ತೊಂದ ಹೆಂಡತಿ ಬ್ಯಾರೆ ಸಿಗಂಗಿಲ್ಲಾ. ಅಲ್ಲಾ ಹಂಗ ಹೆಂಡತಿನ್ನ ಈಗಿನ ಕಾಲದಾಗ ಯಾರು ವತ್ತಿ ಇಟಗೊಳಂಗಿಲ್ಲಾ ಬಿಡ್ರಿ. ಪಾಪ, ಎಲ್ಲಾರಿಗು ಅವರವರ ಹೆಂಡತಿನ ರಗಡ ಆಗಿರ್ತದ, ಇನ್ನ ಮತ್ತೊಬ್ಬರ ಹೆಂಡತಿ ತೊಗಂಡ ಏನ ಮಾಡ್ತಾರ ತಲಿ.
ಆದರೂ ನಾ ವರ್ಷದ ತೊಡಕ್ ದಿವಸ ನನ್ನ ಹೆಂಡತಿ ಬಗ್ಗೆ ಹಿಂತಾವೇಲ್ಲಾ ವಿಚಾರನೂ ಮಾಡಬಾರದ ಬಿಡ್ರಿ, ಮತ್ತೇಲ್ಲರ ವರ್ಷಾನಗಟ್ಟಲೇ ಬರೆ ಹಿಂತಾವ ವಿಚಾರ ಬಂದ್ರ ಏನ ಮಾಡ್ತೀರಿ. ಅಲ್ಲಾ ಬರೇ ವಿಚಾರ ಬಂದ್ರನೂ ಉಪಯೋಗ ಇಲ್ಲಾ. ವಿಚಾರವನ್ನ ಕಾರ್ಯರೂಪಕ್ಕ ತರೊ ತಾಕತ್ತ ನಮಗ ಇರಬೇಕು. ಹೋಗಲಿ ಬಿಡ್ರಿ, ‘ಒಳತ’ ಅನ್ರಿ, ಮತ್ತೇಲ್ಲರ ಅನ್ಕೊಂಡಿದ್ದ ಖರೆ ಆಗಿ-ಗಿಗಿತ್ತ.
ನಿಮಗೇಲ್ಲಾ ಯುಗಾದಿ ಹಬ್ಬದ ಶುಭಾಶಯಗಳು, ನಿಮ್ಮೇಲ್ಲರ ಜೀವನ ಸುಖಮಯವಾಗಲಿ, ಜೀವನದಾಗ ಬೇವು ಕಡಿಮೆ ಬೆಲ್ಲಾ (ಮನಿ ಬೆಲ್ಲಾ ಮತ್ತ) ಜಾಸ್ತಿ ಆಗಿ ಕರೆ-ಇರಬಿ ಹತ್ತೋ ಅಷ್ಟ ಬಾಳು ಸಿಹಿ ಆಗಲಿ.