ನಮ್ಮ ದೋಸ್ತ ಒಬ್ಬಂವ ಸಂಚಗಾರ ಸಂಜ್ಯಾ ಅಂತ ಇದ್ದಾನ. ಸಂಚಗಾರ ಸಂಜ್ಯಾ ಯಾಕ ಅಂದ್ರ ಅಂವಾ ಎಲ್ಲಾ ವ್ಯವಹಾರ ಸಂಚಗಾರ ಇಸ್ಗೊಂಡರ ಮಾಡ್ತಾನ ಇಲ್ಲಾ ಕೊಟ್ಟರ ಮಾಡ್ತಾನ. ಅವನ ಪ್ರಕಾರ ಸಂಚಗಾರ ಕೊಟ್ಟರ ಕೆಲಸ ನಿಕ್ಕಿ ಆದಂಗ. ಅಲ್ಲಾ, ಹಂಗ ಅಂವಾ ಸಂಚಗಾರ ಕೊಟ್ಟದ್ದ ಇಲ್ಲಾ ಇಸ್ಗೊಂಡಿದ್ದ ಎಲ್ಲಾ ಕೆಲಸ ಆಗ್ಯಾವ ಅಂತೇನ ಇಲ್ಲ ಮತ್ತ.
ಸಂಚಗಾರ ಅಂದ್ರ ನಮ್ಮಲ್ಲೆ ನಾರ್ಮಲಿ ಮನಿದ, ಜಾಗಾದ್ದ ವ್ಯವಹಾರ ಮಾಡಬೇಕಾರ ನಮಗ ಆ ಮನಿ ಇಲ್ಲಾ ಜಾಗಾ ಪಸಂದ ಆದರ ಸ್ವಲ್ಪ ರೊಕ್ಕಾ ಕೊಟ್ಟ ವ್ಯವಹಾರ ನಿಕ್ಕಿ ಮಾಡ್ಕೊಂಡ ಮುಂದ ಇಷ್ಟ ದಿವಸದಾಗ ಖರೀದಿ ಪತ್ರ ಮಾಡ್ಕೋತೇವಿ ಅಂತ ಒಪ್ಪಂದ ಮಾಡ್ಕೊಳೊದ. ಅಕಸ್ಮಾತ ನಾವು ಆ ಮಾತಿಗೆ ತಪ್ಪಿ ಮುಂದ ವ್ಯವಹಾರ ಮಾಡಲಿಲ್ಲಾ ಅಂದರ ಕೊಟ್ಟದ್ದ ಸಂಚಗಾರ ಹೋದಂಗ. ಟೋಕನ್ ಅಡ್ವಾನ್ಸ್ ಅಂತ ಕರಿತಾರಲಾ ಅದಕ್ಕ ನಾವ ಸಂಚಗಾರ ಅಂತೇವಿ ಇಷ್ಟ.
ಇನ್ನ ಸಂಜ್ಯಾನ್ವು ಮನಿ ಕಟ್ಟಲಿಕ್ಕೆ ಬರಲಾರದಂತಾವ ಊರ ಹೊರಗ ಒಂದ್ಯಾರಡ ಪ್ಲಾಟ ಇದ್ವು. ಊರಾಗ ಮನಿ ಕಟ್ಟಲಿಕ್ಕೆ ಒಂದ ಪ್ಲಾಟ ಹುಡಕಲಿಕತ್ತಿದ್ದಾ. ಒಂದ ಪ್ಲಾಟ ಲೈಕ ಆತಿಲ್ಲ, ಸಂಚಗಾರ ಅಂತ ಹತ್ತ ಸಾವಿರ ಕೊಟ್ಟ ಬಂದ ಬಿಡ್ತಿದ್ದಾ. ಆಮ್ಯಾಲೆ ಹೆಂಡ್ತಿಗೆ, ವಾಸ್ತು ಕನ್ಸಲ್ಟಂಟಗೆ ಎಲ್ಲಾರಿಗೂ ತೋರಸ್ತಿದ್ದಾ.
ಅವನ ಹೆಂಡ್ತಿ ಅಂತೂ ಕಟಗೊಂಡ ಗಂಡನ ವಾಸ್ತುಕ್ಕ ಹತ್ತ ಹೆಸರ ಇಡೋಕಿ ಇನ್ನ ಮನಿ ಕಟ್ಟೋ ಜಾಗಕ್ಕ ಬಿಡೋಕಿನ.
’ಜೀವನದಾಗ ಒಮ್ಮೆ ಮನಿ ಕಟ್ಟತೈತಿ…ಛಲೋ ಜಗಾ ನೋಡ’ ಅಂತ ಸೈಟ ರಿಜೆಕ್ಟ ಮಾಡಿ ಬಿಡ್ತಿದ್ಲು. ಇನ್ನ ಅಕಿ ಅಡ್ಡಿಯಿಲ್ಲಾ ಅಂದ ಸೈಟ ವಾಸ್ತು ಪ್ರಕಾರ ದಿಕ್ಕ ತಪ್ಪತಿತ್ತ.
ಅದರಾಗ ಇಂವಾ ತನ್ನ ಕುಂಡ್ಲಿ ಮತ್ತ ಸೈಟ ಮ್ಯಾಪ ಎರಡು ತೊಗೊಂಡ ಯಾವದರ ಸ್ವಾಮ್ಯಾರನ ಹಿಡದ
’ಈ ಕುಂಡ್ಲಿಯವರ ಆ ಸೈಟ ತೊಗೊಂಡ್ರ ಹೆಂಗ’ ಅಂತ ಬ್ಯಾರೆ ಕೇಳೊಂವಾ. ಪಾಪ ಆ ಸ್ವಾಮಗೊಳಿಗೆ ಇವನ ಕುಂಡ್ಲಿ ಒಳಗ ಎಷ್ಟ ಮೂಲಿ ಮನಿ ಅವ ಅಂತ ನೋಡಬೇಕೊ ಇಲ್ಲಾ ಮನಿ ಕಟ್ಟೊ ಸೈಟಿಗೆ ಎಷ್ಟ ಮೂಲೇವ ಅಂತ ನೋಡಬೇಕು ತಿಳಿಲಾರದ
’ನೀ ಮೊದ್ಲ ಒಂದ ಸರತೆ ಸೈಕಾಟ್ರಿಸ್ಟಗ ತೊರೊಸೊದ ಛಲೋ ತಮ್ಮಾ’ ಅಂತ ಹೇಳಿ ಕಳಸ್ತಿದ್ದರು.
ಅಲ್ಲಾ ಅವರರ ಏನ ಮಾಡ್ಬೇಕ? ಹಿಂಗ ಸ್ವಾಮ್ಯಾರಿಗೆ ಸೈಟ ತೊರಿಸಿದ್ನೆ, ವಾಸ್ತುದವರಿಗೆ ಕುಂಡ್ಲಿ ತೊರಿಸಿದ್ನೆ ಅಂತ ಹೊಂಟರ? ಕಡಿಕೆ ಅವರ-ಇವರ ಮಾತ ಕೇಳಿ ಸೈಟ ಕ್ಯಾನ್ಸೆಲ್ ಮಾಡಿ ಬಿಡ್ತಿದ್ದಾ. ಅಷ್ಟರಾಗ ಪಾರ್ಟಿ ಕೊಟ್ಟಿದ್ದ ಡೆಡ್ ಲೈನ ಮುಗದ ಬಿಟ್ಟಿರ್ತಿತ್ತ, ಸೈಟ ಓನರ್ ಇಂವಾ ಕೊಟ್ಟದ್ದ ಸಂಚಗಾರ ಗುಳುಂ ಮಾಡಿ ಬಿಡ್ತಿದ್ದಾ. ಹಿಂಗ ಇಂವಾ ಏನಿಲ್ಲಾಂದರು ಒಂದ ಹತ್ತ-ಹದಿನೈದ ಸೈಟಿಗೆ ಸಂಚಗಾರ ಕೊಟ್ಟ ಕಳ್ಕೊಂಡಾನ.
ನಾ ಎಷ್ಟ ಸರತೆ ’ಲೇ… ಮೊದ್ಲ ನೀ ಎಲ್ಲಾರಿಗೂ ಸೈಟ ತೊರಿಸಿ ಆಮ್ಯಾಲೆ ಸಂಚಗಾರ ಕೊಡಪಾ’ ಅಂದರು ಕೇಳ್ತಿದ್ದಿಲ್ಲಾ, ಮತ್ತೇಲ್ಲರ ವಿಚಾರ ಮಾಡಿ ಹೂಂ ಅನ್ನೋದರಾಗ ಸೈಟ ಹೋಗಿ ಬಿಟ್ಟರ ಅಂತ ಸಂಚಗಾರ ಕೊಟ್ಟ ಬರ್ತಿದ್ದಾ.
ನಾ ಖರೇ ಹೇಳ್ತೇನಿ ಇಂವಾ ಇಷ್ಟ ವರ್ಷದಾಗ ಎಷ್ಟ ಸಂಚಗಾರ ಕೊಟ್ಟ ರೊಕ್ಕ ಕಳ್ಕೊಂಡಾನಲಾ ಅಷ್ಟ ರೊಕ್ಕದಾಗ ಮಾರುತಿ ನಗರದಾಗ ಒಂದ ಆಶ್ರಯ ಮನಿ ಬರ್ತಿತ್ತ. ಆದರ ಈ ಮಗಂದ ಇವತ್ತು ಒಂದ ಸ್ವಂತ ಮನಿ ಕಟ್ಟಲಿಕ್ಕೆ ಇಪ್ಪತ್ತ ಮುವತ್ತರದ ಛಲೋ ಜಗಾ ಊರಾಗ ಸಿಗವಲ್ತ, ಏನ್ಮಾಡ್ತೀರಿ?
ಹಿಂಗ ಸಂಚಗಾರ ಕೊಟ್ಟ ಕೊಟ್ಟ ರೊಕ್ಕ ಹೊಂಡತು ಆದರ ಸೈಟ ಏನ ಸಿಗವಲ್ತು ಅಂತ ಯಾವಾಗ ಅನಸಲಿಕತ್ತ ಆವಾಗ ಮೊದ್ಲ ಊರ ಹೊರಗಿನ ಸೈಟರ ಮಾರಿದಾರಾತ ತಡಿ ಅಂತ ಡಿಸೈಡ ಮಾಡಿದಾ. ಯಾರರ ಸೈಟ ಅಡ್ಡಿಯಿಲ್ಲಾ ಅಂದರ ಸಾಕ ಈಗ ಇಂವಾ ಸಂಚಗಾರ ಇಸ್ಗೊಂಡ ಅವರಿಗೆ ಒಂದ ಮೂರ ತಿಂಗಳ ಟೈಮ ಕೊಟ್ಟ ಕಳಸ್ತಿದ್ದಾ. ಮಜಾ ಅಂದರ ಅವರ ಪಾಪ ಹೂಂ ಅಂದ ಸೈಟ ಖರೀದಿ ಮಾಡಲಿಕ್ಕೆ ಬಂದರ
’ಇಲ್ಲಾ ನನ್ನ ಹೆಂಡತಿ ಮೊದ್ಲ ನೀವು ಒಂದ ಊರಾಗ ಸೈಟ ತೊಗೊಂಡ ಆಮ್ಯಾಲೆ ಆ ಸೈಟ ಮಾರರಿ ಅಂದಾಳ ಸ್ವಲ್ಪ ತಡಿರಿ’ ಅಂತ ಅವರ ಆಫರ್ ಪೆಂಡಿಂಗ್ ಇಡ್ತಿದ್ದಾ. ಆಮ್ಯಾಲೆ ಇನ್ನೇನ ಡೆಡ್ ಲೈನ ಹತ್ತರ ಬಂದದ ಅಂದ ಮ್ಯಾಲೆ
’ಊರಾಗ ಸೈಟ ಸಿಗವಲ್ತ ಹಿಂಗಾಗಿ ನನ್ನ ಹೆಂಡ್ತಿ ಸೈಟ ಮಾರೋದ ಬ್ಯಾಡ ಅಂದಾಳ’ ಅಂತ ಡೀಲ ಮುರ್ಕೊಂಡ ಬಿಡ್ತಿದ್ದಾ.
ಇನ್ನ ಇಸ್ಗೊಂಡಿದ್ದ ಸಂಚಗಾರ ಮೂರ ತಿಂಗಳ ಧಂಧೆಕ್ಕ ಹಾಕಿ ದುಡಸ್ತಿದ್ದಾ.
ಅವಂಗ ಬರಬರತ ಹಿಂಗ ಸಂಚಗಾರ ಇಸ್ಗೊಳೊದು, ಆ ರೊಕ್ಕಾ ದುಡಸೋದು ಮುಂದ ಮಾತುಕತಿ ಮುರಕೊಂಡ ಸಂಚಗಾರ ಮೂರ ತಿಂಗಳ ಬಿಟ್ಟ ಕೊಡೊದು ಚಟಾ ಹತ್ತಿ ಬಿಡ್ತ.
ಇನ್ನ ಸಂಚಗಾರ ಇಸ್ಗೊಳೊದ ಅವಂದ ಬರೇ ಸೈಟ, ಮನಿಗೆ ಇಷ್ಟ ಇರ್ತಿದ್ದಿಲ್ಲಾ, ಎಲ್ಲೇಲ್ಲೆ ಸಂಚಗಾರ ಸಿಗ್ತೈತಿ ಎಲ್ಲಾ ಕಡೆ ಸಂಚಗಾರ ಇಸ್ಗೊತಿದ್ದಾ. ಮೊನ್ನೆ ತನ್ನ ಹಳೇ ಮಾಡೇಲ್ ಸ್ಯಾಂಟ್ರೊ ಸೇಲ್ ಮಾಡ್ತೇನಿ ಅಂತ ಅಂದ ಪಾರ್ಟಿಕಡೆ ಇಮ್ಮಿಡಿಯೇಟ ಐವತ್ತ ಸಾವಿರ ಸಂಚಗಾರ ಇಸ್ಗೊಂಡ ಆಮ್ಯಾಲೆ
ತನ್ನ ಹೆಂಡ್ತಿ
’ಏ, ಆ ಕಾರ ಭಾರಿ ಓಂ ಐತಿ, ಎಷ್ಟ ಸಲಾ ಅಕ್ಸಿಡೆಂಟ್ ಆದರೂ ಕಾರನಾಗ ಕೂತೊರಿಗೆ ಏನೂ ಆಗಿಲ್ಲಾ’ ಅಂತ ಅಂದ್ಲು ಅಂತ ಇಂವ ಕಾರ ಡೀಲ್ ಮುರ್ಕೊಂಡ ಬಿಟ್ಟಾ. ಪಾರ್ಟಿ ’ಮತ್ತ ನಾವ ಕೊಟ್ಟದ್ದ ಸಂಚಗಾರ’ ಅಂತ ಕೇಳಿದರ ’ತಡಿರಿ ನನ್ನ ಹೆಂಡ್ತಿಗೆ ಇನ್ನೊಮ್ಮೆ ಕನ್ವಿನ್ಸ ಮಾಡ್ತೇನಿ’ ಅಂತ ಮತ್ತ ಒಂದ ತಿಂಗಳ ಟೈಮ ತೊಗೊಂಡ ಅದನ್ನ ದುಡಿಸಿಗೊಂಡ ಆಮ್ಯಾಲೆ ನನ್ನ ಹೆಂಡ್ತಿ ಬ್ಯಾಡ ಅಂದ್ಲು ಅಂತ ಅದನ್ನ ವಾಪಸ ಕೊಟ್ಟಾ.
ನಂಗಂತೂ ಒಮ್ಮೊಮ್ಮೆ ಇಂವಾ ಹಿಂಗ ಸಂಚಗಾರದಾಗ ಸಂಸಾರ ಮಾಡ್ತಾನೋ ಏನೋ ಅನಸ್ತಿತ್ತ. ಇಂವಾ ಮಂದಿ ಕಡೆ ಸಂಚಗಾರ ಇಸ್ಗೊಂಡ ಅದನ್ನ ಇನ್ವೆಸ್ಟ ಮಾಡಿ ದುಡಿಸಿ ಕಡಿಕೆ ಮತ್ತೊಬ್ಬರ ಕಡೆ ಸಂಚಗಾರ ಬಂದ ಮ್ಯಾಲೆ ಹಳೇ ಸಂಚಗಾರ ವಾಪಸ ಕೊಡ್ತಿದ್ದಾ.
ಅದ ಬಿಡ್ರಿ, ಇವನ ಹಳೇ ಸಂಚಗಾರದ ಹಕಿಕತ್ ಕೇಳಿದರ ನೀವು ನಗತಿರಿ.
ಇಂವಾ ಕನ್ಯಾ ನೋಡಲಿಕ್ಕೆ ಹೋದಾಗ ಕನ್ಯಾ ಒಪ್ಪಗಿ ಆದರು ಸಂಚಗಾರ ಕೇಳ್ತಿದ್ದನಂತ. ಹಂಗ್ಯಾಕ ಅಂದರ
’ಅಲ್ಲಾ, ನನಗ ಕನ್ಯಾ ಒಪ್ಪಗಿ ಐತಿ, ಆದರ ಇನ್ನೊಂದ ನಾಲ್ಕೈದ ನೋಡಿ ಚೀಟಿ ಎತ್ತಿದರಾತು ಮತ್ತ ಅಷ್ಟರಾಗ ಅವರ ಈ ಹುಡಗಿನ್ನ ಬ್ಯಾರೆ ಯಾರಿಗರ ತೊರಿಸಿ ಫೈನಲ್ ಮಾಡಿದರ ಹೆಂಗ’ ಅಂತ ಇಂವಾ ಕನ್ಯಾ ಲೈಕ ಆದಲ್ಲೇ ಸಂಚಗಾರ ಕೇಳೋಂವಾ.
’ಒಮ್ಮೆ ಮಾತುಕತಿ ಆತಂದರ ವರದಕ್ಷೀಣಿ ಫೈನಲ್ ಆಗೆ ಆಗತೈತಿ ಅದರಾಗಿಂದ ಈಗ ಒಂದ ಚೂರ ಸಂಚಗಾರ ಕೇಳಿದರ ತಪ್ಪೇನ’ ಅನ್ನೋಂವಾ.
ಹಂಗ ಇಂವಾ ನೋಡಿದ್ದ ಮೂರ ನಾಲ್ಕ ಕನ್ಯಾಗೊಳಿಗೆ ಕನ್ಯಾ ಒಪ್ಪಗಿ ಐತಿ ಸಂಚಗಾರ ಕೊಡ್ರಿ ಅಂತ ಕೇಳಿ ಬೈಸ್ಗೊಂಡ ಬಂದಿದ್ನಂತ.
ಕಡಿಕೆ ಹಾವೇರಿ ಒಳಗ ಒಂದ ಕನ್ಯಾ ಪೈಕಿಯವರ ತಲಿ ಕೆಟ್ಟ
’ಮಗನ ಕನ್ಯಾ ಕೊಡೊರ ನಾವ, ನೀನ ಸಂಚಗಾರ ಕೊಟ್ಟ ಬುಕ್ ಮಾಡಿ ಹೋಗ, ಹಂಗ ಒಂದ ವಾರದಾಗ ನೀ ನಮ್ಮ ಹುಡಗಿ ಕನಫರ್ಮ ಮಾಡಲಿಲ್ಲಾ ಅಂದರ ನಿನ್ನ ಸಂಚಗಾರನೂ ಹೋತ, ಕನ್ಯಾನೂ ಹೋತ ಅಂತ ತಿಳ್ಕೊ’ ಅಂತ ಜೋರ ಮಾಡಿದರಂತ.
ಇವನ ಸಂಚಗಾರ ಹಣೇಬರಹ ನೋಡಿ ತಲಿಕೆಟ್ಟಿದ್ದ ಅವರವ್ವ
’ನೀ ಒಂದ ಸಂಚಗಾರದ್ದ ಮಾರಿನರ ನೋಡ ಇಲ್ಲಾ ಕನ್ಯಾದ್ದ ಮಾರಿನರ ನೋಡ’ ಅಂತ ಆ ಹಾವೇರಿ ಹುಡಗಿಗೆ ಭಡಾ ಭಡಾ ಹೂ, ಹಣ್ಣು, ಕಾಯಿ ಜೊತಿ ಒಂದ ಎಳಿ ಬಂಗಾರ ಚೈನ ಹಾಕಿ ಉಡಿ ತುಂಬಿ
’ಇದ ಸಂಚಗಾರ ಅಂತ ತಿಳ್ಕೊ, ಅಕಸ್ಮಾತ ನನ್ನ ಮಗಾ ಏನರ ನಿನ್ನ ರಿಜೆಕ್ಟ ಮಾಡಿದರ ಇವನ್ನೇಲ್ಲಾ ನೀನ ಇಟ್ಕೊ’ ಅಂತ ಹೇಳಿ ಬಂದ ಬಿಟ್ಟಳಂತ.
ಕಡಿಕೆ ಇನ್ನ ಈ ಕನ್ಯಾನ್ನೂ ಒಲ್ಲೆ ಅಂದರ ಅವರವ್ವ ಸಂಚಗಾರ ಅಂತ ಕೊಟ್ಟಿದ್ದ ಒಂದ ಎಳಿ ಚೈನ ಹೋಗ್ತದ ಅಂತ ಎರಡೆಳಿ ಮಂಗಳಸೂತ್ರ ಕಟ್ಟಿ ಆ ಹುಡಗಿನ್ನ ಮಾಡ್ಕೊಂಡ ಜೀವನಕ್ಕ ಸಂಚಕಾರ ತೊಗೊಂಡ ಸುಖವಾಗಿ ಸಂಸಾರ ನಡಸಲಿಕತ್ತಾನ ಆ ಮಾತ ಬ್ಯಾರೆ.
ಇನ್ನ ಈ ಪ್ರಹಸನ ಏನ ನನ್ನ ಕಡೆಯಿಂದ ನಿಮಗ ಸಂಚಗಾರ ಅಲ್ಲ ಮತ್ತ.
ಇದನ್ನ ಸಂಕ್ರಮಣದ ಭೋಗಿ ಅಂತ ತಿಳ್ಕೋರಿ, ಹಂಗ ನಿಮಗೇಲ್ಲಾ ಹೊಸ ವರ್ಷದ ಒಂದನೇ ಹಬ್ಬ ’ ಸಂಕ್ರಮಣದ ಹಾರ್ದಿಕ ಶುಭಾಶಯಗಳು’
ನಾವು ನೀವು ಎಳ್ಳು-ಬೆಲ್ಲಾ ತೊಗೊಂಡ ಒಳ್ಳೊಳ್ಳೆಯವರಾಗಿ ಇರೋಣ.