ಧಾರವಾಡದ ಹೊಸಾ ಎಲ್ಲಾಪುರದಾಗ ನಮ್ಮ ಅಜ್ಜಿ ಮಾನ್ಯಾಗ ಒಂದ ಹಳೇ ಕಟ್ಟ ಹಾಕಸಿದ್ದ ಫೋಟೊ ಇತ್ತ. ಅಗದಿ ಹಳೇದ, ನಮ್ಮ ಅಜ್ಜ ಶಿಂದಗಿ ಮಾಸ್ತರ ಜಿ.ಬಿ.ಟಿ.ಸಿ. ಟ್ರೇನಿಂಗ ಕಾಲೇಜಿನಾಗ ಹುಡಗರಿಗೆ ಕಾರ್ಪೆಂಟರಕಿ ಕಲಸತಿದ್ದಾ ಹಿಂಗಾಗಿ ಅದನ್ನ ತಾನ ಸ್ವಂತ ತನ್ನ ಕೈಲೆ ಕಟ್ಟಹಾಕಿದ್ದನಂತ. ಹಂಗಂತ ಅದರಾಗ ನಮ್ಮಜ್ಜಿಗೊಳ ಫೋಟೊ ಏನ ಇರಲಿಲ್ಲ ಮತ್ತ. ಅದರಾಗ ಛಂದಾಗಿ ದೊಡ್ಡ ದೊಡ್ಡ ಆರ್ಟಿಸ್ಟಿಕ್ ಅಕ್ಷರದಲೆ, ಅದು ನಮ್ಮಜ್ಜನ ಹ್ಯಾಂಡರೈಟಿಂಗಲೆ ಬರದಿದ್ದ ಐದ ಅಚ್ಚ ಕನ್ನಡದ ಲೈನ ಇದ್ದವು. ಮ್ಯಾಲೆ ಹೆಡ್ಡಿಂಗ ಒಳಗ ‘ಸಾರ್ಥಕ ಮನೆಯ ಲಕ್ಷಣಗಳು’ ಅಂತ ಬರದ ಅದರ ಕೆಳಗ ಐದ ನುಡಿಮುತ್ತ ಬರದಿದ್ದರು. ನಾ ಕನ್ನಡ ಓದಲಿಕ್ಕೆ ಕಲತಾಗಿಂದ ಆ ಫೋಟೊದಾಗ ಬರದ್ದದ್ದನ್ನ ಓದಕೊತ ಇದ್ದೆ. ಹಂಗ ಅದರಾಗ ಬರದಿದ್ದ ಅರ್ಥ ಆಗಲಿಕ್ಕೆ ಭಾಳ ವರ್ಷ ಹಿಡಿತ ಖರೆ ಆದರ ಮನಸ್ಸಿನಾಗ ಮಾತ್ರ ಅವು ಕಾಯಮ್ ಉಳದ್ವು.
ಈಗ ನಮ್ಮಜ್ಜನೂ ಇಲ್ಲಾ, ಆ ಫೊಟೊ ನಮ್ಮ ಅಜ್ಜಿ ಮನ್ಯಾಗೂ ಇಲ್ಲಾ. ನಾನ ಒಂದೆರಡ ವರ್ಷದ ಹಿಂದ ಆ ನುಡಿಮುತ್ತುಗಳನ್ನ ನೆನಪ ಮಾಡ್ಕೊಂಡ ಬರದ ಒಂದ ನೂರ ಡಿಜಿಟಲ್ ಪ್ರಿಂಟ ಮಾಡಿಸಿ ಇಟಗೊಂಡೇನಿ.
ಹಂಗ ಅದರಾಗ ಬರದ ಆ ‘ಸಾರ್ಥಕ ಮನೆಯ ಲಕ್ಷಣಗಳು’ ಏನಪಾ ಅಂದರ
೧.ಸುವ್ಯವಸ್ಥೆಯೇ ಮನೆಯ ಸೊಬಗು
೨.ಸಂತುಷ್ಟ ಗೃಹಿಣಿಯೇ ಮನೆಯ ಲಕ್ಷ್ಮಿ
೩.ಸಮಾಧಾನವೇ ಮನೆಯ ಸುಖ-ಶಾಂತಿ
೪.ಆದಾರತಿಥ್ಯವೇ ಮನೆಯ ವೈಭವ
೫.ಧಾರ್ಮಿಕತೆಯೇ ಮನೆಯ ಕಳಸ
ಇವs ಆ ಐದ ನಮ್ಮಜ್ಜನ ಕಾಲದ ಸಾರ್ಥಕ ಮನೆಯ ಲಕ್ಷಣಗಳು.
ಹಂಗ ಇವೇನ ನಮಗ್ಯಾರಿಗೂ ಗೊತ್ತಿರಲಾರದ್ವು ಅಲ್ಲಾ, ನಮ್ಮಜ್ಜೇನ ಹುಟ್ಟಿಸಿದ್ದಲ್ಲಾ. ಏನೋ ಒಂದ ಮನಿಗೆ ಇರಬೇಕಾದ ಲಕ್ಷಣಗಳು ಅಂತ ಹಳೇ ಮಂದಿ ಬರದಿದ್ದ. ಆದರ ಒಂದ ಸ್ವಲ್ಪ ಇವನ್ನ ಬರದ ಬರೆ ಕಟ್ಟ ಹಾಕಿಸಿ ಗೊಡಿ ಮ್ಯಾಲೆ ತುಗ ಬಿಡದ ಇವನ್ನ ಓದಿ ಅರ್ಥ ಮಾಡ್ಕೊಂಡ ಇವತ್ತ ನಮ್ಮ ಮನ್ಯಾಗಿನ ಲಕ್ಷಣಕ್ಕ ಕಂಪೇರ ಮಾಡಿ ನೋಡಿದರ ಹೆಂಗ ಅಂತ ಅನಿಸಿ ನಾ ಇವತ್ತ ಈ ವಿಷಯ ತಗದಿದ್ದ ಇಷ್ಟ. ಅಲ್ಲಾ ನಂಗೊತ್ತ ಆ ಕಾಲ ಬ್ಯಾರೆ, ಈ ಕಾಲsನ ಬ್ಯಾರೆ. ಆವಾಗಿನ ಲಕ್ಷಣ ಈಗಿನ ಕಾಲದಾಗ ಬಗಿ ಹರೆಯಂಗಿಲ್ಲಾ ಖರೆ, ಆದ್ರು ಈ ಸಾರ್ಥಕ ಮನಿ ಲಕ್ಷಣಕ್ಕೂ ನಮ್ಮ ಇವ್ವತ್ತೀನ ಮನಿ ಲಕ್ಷಣಕ್ಕೂ ಏನ ಫರಕ ಅದ ನೋಡಿದ್ರಾತು ಅಂತ ಅನಸ್ತ.
1. ಸುವ್ಯವಸ್ಥೆಯೇ ಮನೆಯ ಸೊಬಗು
ಸುವ್ಯವಸ್ಥೆಯೇ ಮನೆಯ ಸೊಬಗು ಅಂದಾರ ಹೊರತು ಅಗದಿ ಎಲ್ಲಾ ವ್ಯವಸ್ಥಿತ ಇರೋ ಮನಿನ ಸೊಬಗು ಅನ್ನಲಿಲ್ಲಾ, ಹಿಂಗಾಗಿ ನಂಬದೇನ ಸಿಂಗಲ್ ಬೆಡರೂಮ ಮನಿ ಎಲ್ಲಾ ಅದರಾಗ ಮಾಡ್ಕೊಂಡ ಹೋಗಬೇಕು ಅಂತ ಮನಿ ತುಂಬ ಅರಬಿ- ಸಾಮಾನ ಹರವಿಕೋತ ಅಡ್ಡಾಡಿ ವಾರಕ್ಕೊಮ್ಮೆ ಇಲ್ಲಾ ಮನಿಗೆ ಯಾರರ ಬರ್ತಾರ ಅಂದಾಗಿಷ್ಟ ಕ್ಲೀನ ಅಂತ ಎಲ್ಲ ಬೇಕಲ್ಲೆ ಕಪಾಟಿನಾಗ, ಪಲ್ಲಂಗ ಬುಡಕ ತುರಕಿ ಮಂದಿ ಕಣ್ಣಿಗೆ ಬೀಳಲಾರದಂಗ ಇಡೋದ ಅಲ್ಲಾ. ಇದ್ದ ಸಣ್ಣ ಮನಿನ ಚೊಕ್ಕ ವ್ಯವಸ್ಥಿತ ಇಡೋದ ಮನೆಯ ಸೊಬಗು ಅಂತ ಇದರ ಅರ್ಥ.
ಇವತ್ತ, ಮುಂಜಾನೆ ತಿಕ್ಕಿದ್ದ ಭಾಂಡೆ ಮಧ್ಯಾಹ್ನ ಗಲಬರಸಿ ರಾತ್ರಿ ಮತ್ತೇಲ್ಲೆ ಡಬ್ಬ ಹಾಕೋದ ಬೆಳಕ ಹರದರ ಬೇಕಾಗ್ತಾವ ಅಂತ ಅಲ್ಲೆ ಗ್ಯಾಸ ಕಟ್ಟಿ ತುಂಬ ಹಂಗ ಹರವಿ ಹರಟಿ ಹೊಡ್ಯೊ ಹೆಣ್ಣಮಕ್ಕಳಿಗೆ ಏನ ಕಡಿಮಿ ಇಲ್ಲಾ. ಅದರಾಗ ಆ ಮನ್ಯಾಗ ಹೆಣ್ಣಮಕ್ಕಳ ಕೆಲಸಕ್ಕ ಹೋಗ್ತಿದ್ದರಂತು ಮುಗದ ಹೋತ, ಸಿಂಕ ತುಂಬ ಭಾಂಡೆ ಹಂಗ ತುಂಬಿ ಒಣಗಿ ಕಟಗ ಆಗಿರತಾವ. ಹಂಗ ಅಕಸ್ಮಾತ ಅವರೇನರ ಭಾಂಡೆ ತೊಳಿಬೇಕು ಅಂದರ ಅವನ್ನ ಎರಡ ತಾಸ ನೀರಾಗ ನೆನೆಯಿಟ್ಟ ತೊಳಿಬೇಕು. ಮುಂದ ಆ ಭಾಂಡೆ ಡಬ್ಬ ಹಾಕೋ ಪದ್ಧತಿ ಅವರ ಮನ್ಯಾಗ ಇದ್ದರ ಹಾಕೋದು ಇಲ್ಲಾಂದರ ಇಲ್ಲಾ.
ಇನ್ನ ಅರಬಿ ಒಗೆಯೋದು ಅಂತು ವಾರಕ್ಕೊಮ್ಮೆ, ಅದು ಕೈಲೆ ಅಲ್ಲಾ, ಮಶೀನನಾಗ ಹಾಕೋದು. ದಿವಸಾ ಒಗಿಲಿಕ್ಕೆ ಎಲ್ಲೆ ಟೈಮ ಇರತದ ಹೇಳ್ರಿ, ದಿವಸಾ ಅಂಡರವೇರ-ಬನಿಯನ್ ಎರಡ ಹಿಂಡಿ ಒಣ ಹಾಕೋದ ರಗಡ ಆಗಿರತದ. ಅಲ್ಲಾ ಕೆಲವೊಮ್ಮೆ ತೊಯಿಸಿದ್ದ ಅಂಡರವೇರ ಬನಿಯನ್ ಸಹಿತ ಒಗದ ಹಾಕಲಿಕ್ಕೆ ಟೈಮ ಇರಲಾರದ ಅವು ಎರೆಡೆರಡ ದಿವಸ ಬಚ್ಚಲದಾಗ ನೆಂದ ಮೊಳಕಿ ಒಡೆಯೊದ ಒಂದ ಬಾಕಿ ಇರತದ ಆ ಮಾತ ಬ್ಯಾರೆ. ಎಲ್ಲಾ ಅವರವರ ಅನಕೂಲ ಬಿಡ್ರಿ.
ಇನ್ನ ಮನ್ಯಾಗಿನ ಡೈನಿಂಗ ಟೇಬಲ್ ಊಟಕ್ಕ ಇಷ್ಟ ಅಲ್ಲಾ, ಮುಸರಿ ಒಳಗ ಬರಲಾರದ ಎಲ್ಲಾ ಸಾಮಾನ ಇರೋದ ಅದರ ಮ್ಯಾಲೆ. ಉಪ್ಪು, ಉಪ್ಪಿನಕಾಯಿ, ಚಟ್ನಿಪುಡಿ, ಮೊಸರು-ಹಾಲು, ಹುಡುಗರ ಕುರದಿಂಡಿ ಇವೇಲ್ಲಾ ಅಡಗಿ ಮನಿಕಿಂತಾ ಜಾಸ್ತಿ ಡೈನಿಂಗ ಟೇಬಲ್ ಮ್ಯಾಲೆ ವಸ್ತಿ ಮಾಡ್ತಿರ್ತಾವ. ಅಲ್ಲಾ ದಿವಸಾ ಮೂರ ಹೊತ್ತ ಬೇಕ ಬೇಕಲಾ, ಯಾರ ಹಗಲಗಲಾ ಅಡಗಿ ಮನ್ಯಾಗಿಂದ ತರೋರ? ಇಲ್ಲೇ ಟೇಬಲ್ ಮ್ಯಾಲೆ ಇದ್ದರ ಗಬಕ್ಕನ ಸಿಗತಾವ. ಕೆಲವೊಮ್ಮೆ ಅಂತು ಆ ದಿವಸದ ಪೇಪರ, ಮಕ್ಕಳ ಪೆನ್, ಪೆನ್ಸಿಲ್, ಹೋಮವರ್ಕ ಬುಕ್ಕ ಸಹಿತ ಅಲ್ಲೆ ಠಿಕಾಣಿ ಮಾಡಿರ್ತಾವ.
ಕೆಲವೊಬ್ಬರಂತು ದಿವಸಾ ಮುಂಜಾನೆ ಎದ್ದ ಕ್ಯಾಗಸಾ ಹೊಡದ ಸಾರಿಸಿ ರಂಗೋಲಿ ಹಾಕಲಿಕ್ಕು ಒಂದ ಹೆಣ್ಣಾಳ ಇಟಗೊಂಡಿರ್ತಾರ, ಯಾಕಂದರ ಅವರ ಕೆಲಸಕ್ಕ ಹೋಗೊರ. ಎಂದ ಕೆಲಸದೋಕಿ ಬರಂಗಿಲ್ಲಾ ಅಂದ ಕ್ಯಾಗಸಾ, ರೊಂಗೋಲಿ ಗೋವಿಂದಾ. ಏನ್ಮಾಡ್ತೀರಿ? ಇದು ಇವತ್ತ ನಮ್ಮ ಮನಿಯ ಸುವ್ಯವಸ್ಥೇಯ ಸೊಬಗು.
2. ಸಂತುಷ್ಟ ಗೃಹಿಣಿಯೇ ಮನೆಯ ಲಕ್ಷ್ಮಿ
ಸಂತುಷ್ಟ ಮತ್ತು ಗೃಹಿಣಿ ಇವೆರಡು ವಿರುದ್ಧಾರ್ಥಕ ಶಬ್ದ ಅಂತ ನಂಗ ಅನಸ್ತದ. ಹಂಗ ನಿಂಬದ ಯಾರದರ ಹೆಂಡತಿ ಹೆಸರ ಲಕ್ಷ್ಮೀ ಅಂತ ಇದ್ದರ ‘ನನ್ನ ಹೆಂಡತಿ ಸಂತುಷ್ಟ ಗೃಹಿಣಿ’ ಅಂತ ಅನ್ಕೋಬ್ಯಾಡರಿ ಮತ್ತ, ಅಲ್ಲಾ ಬೇಕಾರ ಒಂದ ಮಾತ ಕೇಳಿ ನೋಡ್ರಿ ನಿಮ್ಮ ಲಕ್ಷ್ಮೀಗೆ, ಅಕಿ ಏನರ ಸಂತುಷ್ಟ ಇದ್ದಾಳೇನು ಅಂತ.
ಇನ್ನ ಈ ಸಂತುಷ್ಟ ಗೃಹಿಣಿನ ಮಾರ್ಕೇಟನಾಗಿಂದ ತರಲಿಕ್ಕ ಆಗಂಗಿಲ್ಲಾ, ಇದ್ದ ಗೃಹಿಣಿನ್ನ ಸಂತುಷ್ಟ ಇಡೋದ ಸಾಧ್ಯ ಇಲ್ಲಾ. ಅಲ್ಲಾ ನೀವ ಏನ ಮಾಡಿದರು ತೃಪ್ತಿನ ಇಲ್ಲಾ ಅಂತ ಅಂದರ ಏನ ಮಾಡೋರು? ಕೇಳಿದ್ದ ಕೊಡಸಿ ಆತ, ಹೇಳಿದ್ದ ಮಾಡಿ ಆತ, ಏಲ್ಲಾ ಆತ. ಆದರ ಈ ರಿಕ್ವೈರಮೆಂಟ ಲಿಸ್ಟ ಚವರಿ ಕೂದಲದಗತೆ ಬೆಳ್ಕೋತ ಹೋದರ ಹೆಂಗ ಸಂತುಷ್ಟ ಮಾಡೋರ ನೀವ ಹೇಳ್ರಿ?
“ರ್ರಿ, ನನಗ ದೀಪಾವಳಿಗೆ ಕಿವ್ಯಾಗಿನ್ವು ಬೇಕರಿ”, ಆತ.
ಮುಂದ ಯುಗಾದಿಗೆ
“ಒಂದ ದೊಡ್ಡದ ಲಾಂಗ್ ನೆಕ್ ನೆಕ್ಲೇಸ ಮಾಡಸಬೇಕರಿ, ಈಗ ಇದ್ದಿದ್ದ ಭಾಳ ಕ್ಲೋಸ್ಡ ನೆಕ್ ಅದ”, ಅಲ್ಲಾ ಇದ್ದ ಒಂದ ನೆಕ್ ವರ್ಷಾ ವರ್ಷಾ ದಪ್ಪ ಆಕ್ಕೊತ ಹೋದರ ಲಾಂಗ್ ನೆಕ್ ನೆಕ್ಲೇಸ್ ಕ್ಲೋಸ್ಡ ನೆಕ್ ಆಗಲಾರದ ಏನಾಗತದ. ಕಡಿಕೆ ಅದನ್ನು ಮಾಡಸಿದರಿ ಅಂತ ಇಟ್ಕೋರಿ. ಮುಂದ
“ರ್ರೀ, ಬಿಲ್ವಾರ ಸವದ ಬಿಟ್ಟಾವ, ಅವನ್ನ ಹಾಕಿ ಮ್ಯಾಲೆ ಒಂದ ಸ್ವಲ್ಪ ಕೊಟ್ಟ ಬ್ಯಾರೆ ಪ್ಯಾಟರ್ನದ್ವು ಮಾಡಸಬೇಕು”. ಇಷ್ಟ ಮಾಡಸೋದರಾಗ ನಾ ಖರೇ ಹೇಳ್ತೇನಿ ಅಕಿ ಮಂಗಳಸೂತ್ರ ಕಟಗರಸಲಿಕ್ಕೆ ಬಂದಿರತದ ಹಿಂಗಾಗಿ ಘಟಾಯಿಸಿದ್ದ ಮಂಗಳಸೂತ್ರ ಬೇಕೆ ಬೇಕು. ಮತ್ತ ಅದನ್ನ ಅಂತು ಕಟಗೊಂಡ ಗಂಡ ಮಾಡಸಲಿಲ್ಲಾ ಅಂದರ ಇನ್ನ ಯಾರ ಮಾಡಸತಾರ? ಇರೋ ಒಂದ ಮಂಗಳಸೂತ್ರ ಗಂಡ ಸವದಂಗ ಸವದಂಗ ಕಟಗರಸ್ಕೋತನ ಇರತದ ಆ ಮಾತ ಬ್ಯಾರೆ.
ಹಿಂಗಾಗಿ ಸಂತುಷ್ಟ ಗೃಹಿಣಿ ಅನ್ನೋದ ಈಗಿನ ಕಾಲದಾಗ ಸಾಧ್ಯನ ಇಲ್ಲದಂಗ ಆಗೇದ. ಅದೇನ ಬಂಗಾರದ ಹುಚ್ಚೊ, ಸೀರಿ ಹುಚ್ಚೊ ಈ ಹೆಣ್ಣಮಕ್ಕಳಿಗೆ, ಎಲ್ಲಾ ಹೊಟ್ಟಿ ಕಿಚ್ಚ ಹೆಚ್ಚಾಗಿ ಹುಟ್ಟೊ ಹುಚ್ಚ. ಒಟ್ಟ ಈ ಹೆಂಡದರನ ಸಂತುಷ್ಟ ಇಡೋದ ಅಷ್ಟ ಸರಳ ಇಲ್ಲಾ. “ರ್ರಿ, ಅಕಿ ಅದನ್ನ ಮಾಡಿಸ್ಯಾಳ, ಇಕಿ ಇದನ್ನ ತೊಗೊಂಡಾಳ, ನಾವ ಯಾವಾಗ ತೊಗೊಳೊನು” ಇಪ್ಪತ್ತನಾಲ್ಕ ತಾಸು ಹೆಣ್ಣಮಕ್ಕಳ ತಲ್ಯಾಗ ಇದ ತುಂಬಿದ್ದರ ಅವರರ ಹೆಂಗ ಸಂತುಷ್ಟ ಇರತಾರ ಹೇಳ್ರಿ ಪಾಪ. ಇದ್ದದ್ದರಾಗ, ಗಂಡ ತಂದ ಕೊಟ್ಟಿದ್ದರಾಗ ಸಂತುಷ್ಟ ಆಗಿ ಸಂಸಾರ ಮಾಡಬೇಕು ಅನ್ನೋದನ್ನ ಯಾವಗ ನಮ್ಮ ಹೆಣ್ಣಮಕ್ಕಳು ಕಲಿತಾರೊ ಆ ದೇವರಿಗೆ ಗೊತ್ತ.
ಮೊನ್ನೆ ತಡಸಕ್ಕ ನಮ್ಮ ಕಾಕುನ ಧರ್ಮೋದಕ ಬಿಡಲಿಕ್ಕೆ ಹೋದಾಗ ಅಲ್ಲೆ ರಾಮಭಟ್ಟರ ಹೇಳಲಿಕತ್ತಿದ್ದರು
“ಇತ್ತೀಚಿಗೆ ಯಾಕೋ ಹೆಣ್ಣಮಕ್ಕಳ ಕಾಗಿ ಪಿಂಡ ಲಗೂನ ಆಗವಲ್ವು, ಪಾಪ, ಏನ ಆಶಾ ಇಟಗೊಂಡ ಸತ್ತಿರತಾರೋ ಏನೋ” ಅಂತ. ಏನ್ಮಾಡ್ತೀರಿ?
3. ಸಮಾಧಾನವೇ ಮನೆಯ ಸುಖ-ಶಾಂತಿ
“ಇಷ್ಟ ಮಾಡಿದರು ನಿಮಗ ಸಮಾಧಾನನ ಇಲ್ಲಲಾ, ನಂಗಂತೂ ಜೀವಾ ಸಾಕ ಸಾಕಾಗಿ ಹೋಗೇದ ” ಇದ ನಮ್ಮಂತಾ ಗಂಡಂದರದ ಟಿಪಿಕಲ್ ಡೈಲಾಗ್. ದುಡದ ಸಾಕಾಗಿ ಮನಿಗೆ ಬಂದರ ಮನ್ಯಾಗ ಹೆಂಡತಿ ಕಾಟ ಶುರು. ಅಕಸ್ಮಾತ ಅಕಿ ಅತ್ತಿ ಇನ್ನು ಇದ್ದರ ಅದ ಒಂದ ರಾಮಾಯಣ/ಮಹಾಭಾರತ ಬ್ಯಾರೆ ಮತ್ತ. ಹಿಂಗಾಗೆ ಗಂಡಸರಿಗೆ ಸ್ಟ್ರೇಸ್ ಜಾಸ್ತಿ ಆಗಿ ಅಂವಾ ಅಡ್ಡ ದಾರಿ ಹಿಡದ ಕಡಿಕೆ ನಲವತ್ತ ನಲವತ್ತೈದ ತುಂಬೊದರಾಗ ದಾವಾಖಾನಿ ದಾರಿ ಹಿಡಿಲಿಕ್ಕೆ ಶುರು ಮಾಡೋದು. ಅಲ್ಲಾ ಇವತ್ತ ಮನ್ಯಾಗ ಸುಖಾ-ಶಾಂತಿ-ನಮ್ಮದಿ ಸಿಗಲಿಲ್ಲಾ ಅಂದರ ಹೆಂಗ ಅಂತೇನಿ. ಸಂಸಾರದಾಗ ಸಮಾಧಾನ, ನೆಮ್ಮದಿ ಭಾಳ ಇಂಪಾರ್ಟೇಂಟ್. ನಾವ ಇಷ್ಟ ದುಡಿಯೋದು, ಕಷ್ಟ ಪಡೋದು ನೆಮ್ಮದಿಯಿಂದ ಬದುಕಲಿಕ್ಕೆ ಹೌದಲ್ಲೊ ಮತ್ತ? ಇನ್ನ ಆ ನೆಮ್ಮದಿ ಮನ್ಯಾಗ ಇಲ್ಲಾ ಅಂದರ ಏನ ಮಲ್ಟಿಪ್ಲೆಕ್ಸನಾಗ ಸಿಗ್ತದ? ಇವತ್ತ ಮನಸ್ಸಿಗೆ ಸಮಾಧಾನ ಇರಬೇಕು, ಬದುಕಿನಾಗ ನೆಮ್ಮದಿ ಇರಬೇಕು ಅಂದರ ಗಂಡಂದರ ಯಾವದರ ಮಠಾ ಹಿಡಿಬೇಕ ಇಷ್ಟ.
ಇವತ್ತ ಜೀವನದಾಗ ಎದಕ್ಕೂ ಸಮಾಧಾನನ ಇಲ್ಲಾ, ಎಷ್ಟ ದುಡುದುರು, ಎಷ್ಟ ಗಳಸಿದರು ಸಮಾಧಾನ ಇಲ್ಲಾ. ಈ ಸುಖಾ-ಶಾಂತಿ ಏನ ನಮ್ಮ ಅಂತಸ್ತ ನೋಡಿ ಬರತದ? ಇಲ್ಲಾ ವಿಕೇಂಡನಾಗ ರೆಸಾರ್ಟನಾಗ ಸಿಗತದೊ? ಮನ್ಯಾಗ ಸಮಾಧಾನ ಇರಬೇಕರಿ, ಅಂದರ ಮನ್ಯಾಗ ಸುಖ-ಶಾಂತಿ ಬಂದ ಬರತದ. ಈ ಸುಖ-ಶಾಂತಿ-ಸಮಾಧಾನಕ್ಕೂ ನಮ್ಮ ಅಂತಿಸ್ತಿಗೂ ಏನ ಸಂಬಂಧ ಇಲ್ಲ.
4. ಆದಾರತಿಥ್ಯವೇ ಮನೆಯ ವೈಭವ
” ಏ, ಮನಿ ಕಡೆ ಬಾರಲೇ, ಮೊನ್ನೆ 52 ಇಂಚ್ LED TVತೊಗೊಂಡೇನಿ. ಅದನ್ನ ನೋಡಲಿಕ್ಕೆ ಬಾ ”
‘ಭಾಳ ದಿವಸಾತು ನಾವು ನೀವು ಭೇಟ್ಟಿ ಆಗಲಾರದ, ಮನಿ ಕಡೆ ಬರ್ರಿ, ಕೂತ ಹರಟಿ ಹೊಡಿಯೋಣ,ಸುಖ ದುಃಖ ಹಂಚಕೋಳೋಣ.’ ಹೂಂ ಹೂಂ.. ಅದನ್ನ ಕೇಳಬ್ಯಾಡರಿ.
ಇಂವಾ LED TV,ತೊಗಂಡಾನಂತ ಅದನ್ನ ನೋಡಲಿಕ್ಕೆ ಹೋಗಬೇಕ ಹೊರತು ಹಂಗ ಗೆಸ್ಟ್ ಅಂತ ಅಲ್ಲಾ.
” ನಾವು ಮಾಡ್ಯುಲರ್ ಕಿಚನ್ ಮಾಡ್ಸೇವಿ, ಆ ಕಡೆ ಬಂದಾಗ ಬಂದ ಹೋಗರಿ”
‘ಅಯ್ಯ ನಮ್ಮವ್ವಾ ಗಂಡಾ ಹೆಂಡತಿ ಇಬ್ಬರು ಕೆಲಸಕ್ಕ ಹೋಗೊರು. ವಾರದಾಗ ಛಂದಾಗಿ ಐದ ಸರತೆ ಮನ್ಯಾಗ ಕುಕ್ಕರ ಸಿಟಿ ಹೊಡೆಯಂಗಿಲ್ಲಾ, ನೀವ ದಿವಸಕ್ಕ ಒಂದ ಹೊತ್ತ ಮನ್ಯಾಗ ಉಂಡರ ರಗಡ. ಅದರಾಗ ವಿಕೇಂಡನಾಗ ಅಂತೂ ಹೊರಗ ತಿಂದ ತೇಗತಿರಿ. ನಿಮ್ಮ ಮನಿಗೆ ಮಾಡ್ಯುಲರ ಕಿಚನ್ ಬ್ಯಾರೆ ಕೇಡ’.
“ಅಲ್ಲಾ ಇರೋದ ಒಂದ ಶನಿವಾರ ರವಿವಾರ, ಅವತ್ತರ ಎಲ್ಲೇರ ಹೋಗೊಣ ಅಂದ್ರ ಯಾರರ ಬಂದ ವಕ್ಕರಿಸಿ ಬಿಟ್ಟಿರತಾರ. ನಾವು ವಾರಾನs ಗಟ್ಟಲೇ ದುಡದಿರತೇವಿ, ನಮಗ ಆಸರಕಿ-ಬ್ಯಾಸರಕಿ ಇರತದ ಇಲ್ಲೊ. ಹೆಂಗ ತಿಳಿಯಂಗಿಲ್ಲೋ ಎನೋ ಈ ಮಂದಿಗೆ ಅಂತೇನಿ…..”
ಇವು ನಮ್ಮ ಇವತ್ತಿನ ಆಧುನಿಕ ವೈಭವಗಳು…ಆದರಾತಿಥ್ಯಗಳು.
ಖರೆ ಅಂದರ ಇವತ್ತ ನಾವ ಮನಿಗೆ ಬಂದ ನಾಲ್ಕ ಮಂದೀಗೆ ಹೆಂಗ ಆದರಾತಿಥ್ಯ ಕೋಡ್ತೇವಿ ಅದ ನಮ್ಮ ಮನಿಯ ವೈಭವ. ಹಂಗಂತ ಬಿಸಲಾಗ ಬಂದೋರಿಗೆ ನಾ ಏನ ಚಿಲ್ಲಡ ಬೀಯರ, ಮಳ್ಯಾಗ ಬಂದೊರಿಗೆ ‘ಬಿಸಿ ನೀರಾಗ ಬ್ರಾಂಡಿ’ ಕೊಡ್ರಿ ಅಂತ ಹೇಳಲಿಕತ್ತಿಲ್ಲಾ. ಇವತ್ತ ಯಾರರ ಮನಿಗೆ ಬಂದರ
” ಏ, ನಾ ಹೊರಗ ಹೊಂಟಿದ್ದೆ, ಏನ ಅರ್ಜೆಂಟ ಕೆಲಸತ್ತೀನ, ಅಲ್ಲಾ ಬೇಕಾರ ನಾಳೆ ನಾನ ನಿಂಗ ಫೋನ ಮಾಡ್ತೇನಿ ತೊಗೊ, ಸ್ವಾರಿ ನಾ ಮತ್ತ. ಅಲ್ಲಾ ನೀ ಫೊನ್ ಮಾಡಿದ್ದರ ನಾ ಆವಾಗ ‘ನಾ ಇರಂಗಿಲ್ಲಾ, ಹೊರಗ ಹೊಂಟೇನಿ’ ಅಂತ ಹೇಳಿ ಬಿಡ್ತಿದ್ದೆ”.
ಏನ್ಮಾಡ್ತೀರಿ. ಇವತ್ತ ನಮ್ಮ ಮನಿಗೆ ಯಾರರ ಫೊನ್ ಮಾಡಲಾರದ ಬಂದರ ಅವರಂತಾ ಹುಚ್ಚರ ಯಾರು ಅಲ್ಲಾ.
“ಅಲ್ಲಾ, ಅಷ್ಟ ದೂರಿಂದ ಬರಲಿಕತ್ತಾರ, ಒಂದ ಫೊನ ಮಾಡಿ ನಾವ ಇರ್ತೇವೋ ಇಲ್ಲೊ ಕೇಳ್ಕೊಂಡರ ಬರಬೇಕಿಲ್ಲ, ಏನ ಜನಪಾ, ಒಟ್ಟ ಕಾಮನ್ ಸೆನ್ಸ್ ಇಲ್ಲಾ”.
ಹೆಂಗ ಅದ ನಮ್ಮ 21 ನೇ ಶತಮಾನದ ಆದಾರತಿಥ್ಯ……
5. ಧಾರ್ಮಿಕತೆಯೇ ಮನೆಯ ಕಳಸ
ನಮ್ಮ ಮಗಾ ಸಂಧ್ಯಾವಂದನಿ ಮರತ ಏನಿಲ್ಲಾಂದ್ರು ಒಂದ ಮುವತ್ತ ವರ್ಷ ಆಗಿರಬೇಕು, ಹಂಗ ವರ್ಷಕ್ಕೊಮ್ಮೆ ಜನಿವಾರ ಚೇಂಜ ಮಾಡಬೇಕಾರ ನಾನ “ಓಂ ಭುವಃ, ಓಂ ಸ್ವಹಃ..” ಅಂತ ಹೇಳಿ ಕಡಿಕೆ “ಬಲಮಸ್ತು ತೇಜಃ…” ಅಂತ ಶುರು ಮಾಡಿ ” ಸಮುದ್ರಂ ಗಚ್ಚಸ್ವಾಃ” ಅಂತ ಹಳೆ ಜನಿವಾರ ತಗಿಸಿ ತುಳಸಿಗಿಡದಾಗ ಇಡ್ತೇನಿ….ಇದ ನಮ್ಮಪ್ಪ ನನ್ನ ಬಗ್ಗೆ ಹೇಳೋ ಮಾತ.
‘ಎಲ್ಲರಿ ದೊಡ್ಡ-ದೊಡ್ಡ ನೌಕರಿ, ಅದು ದೂರ-ದೂರ, ಹೋಗಲಿಕ್ಕೆ ಎರಡ ತಾಸ ಬರಲಿಕ್ಕೆ ಎರಡ ತಾಸು. ಹಂತಾದರಾಗ ತಾಸ ಗಟ್ಟಲೇ ಮುಂಜಾನೆ ಎದ್ದ ಸಂಧ್ಯಾವಂದನಿ ಮಾಡಲಿಕ್ಕೆ ಎಲ್ಲೆ ಟೈಮ ಇರತದ. ಅಲ್ಲಾ ಒಂದ ಹೊತ್ತರ ಮಾಡಬೇಕ ಖರೆ ಆದರ ಇಲ್ಲೆ ನಮಗ ಒಂದ ಹೊತ್ತ ಊಟಾ ಮಾಡಲಿಕ್ಕೆ ಟೈಮ ಇರಂಗಿಲ್ಲಾ, ಇನ್ನ ಸಂಧ್ಯಾವಂದನಿ ಅಂತು ದೂರ ಉಳಿತ. ಅದಕ ನಾ ನಮ್ಮಪ್ಪಗ ಹೇಳಿ ಬಿಟ್ಟೇನಿ. “ನೀ ದೇವರು ದಿಂಡ್ರು ಏನದ ಎಲ್ಲಾ ಅಲ್ಲೇ ಊರಾಗ ಮಾಡ್ಕೋಪಾ, ನಮ್ಮ ಜೀವಾ ತಿನ್ನಲಿಕ್ಕೆ ಹೋಗಬ್ಯಾಡ” ಅಂತ ನಾ ಅಂತೂ ದೇವರ ತರಲಿಕ್ಕೆ ಹೋಗಿಲ್ಲಾ.’ಇದು ಬೆಂಗಳೂರ/ಪೂಣೆದಾಗ ಇರೋ ನನ್ನ ದೋಸ್ತರ ‘ಧಾರ್ಮಿಕತೆ’ಯ ಹಣೇಬರಹ
“ಅಲ್ಲಾ ಮನ್ಯಾಗ ಸಾಲಿಗ್ರಾಮ ಅದ, ಹಂಗ ಒಮ್ಮೆ ದೇವರನ ತಂದ್ರ ಪೂಜಾ ಬಿಡಲಿಕ್ಕೆ ಬರಂಗಿಲ್ಲಾ, ದಿನಾ ಒಂದಕ್ಕೂ ಪೂಜಾ-ಪುನಸ್ಕಾರ ಆಗsಬೇಕ. ಅದರಾಗ ನಾವ ಗಂಡ ಹೆಂಡತಿ ಇಬ್ಬರೂ ಕೆಲಸಕ್ಕ ಹೋಗೊರು. ಅದಕ್ಕ ನಾ ನಮ್ಮ ಮನೆಯವರಿಗೆ ಹೇಳಿ ಬಿಟ್ಟೇನಿ ನೀವು ದೇವರ ಉಸಾಬರೀನ ಹೋಗಬ್ಯಾಡರಿ, ಅಲ್ಲೆ ನಿಮ್ಮಣ್ಣ ಮಾಡ್ಕೊವಲ್ನಾಕ, ಹಂಗ ನಮಗ ಅನಕೂಲ ಆದರ ವರ್ಷಕ್ಕೊಮ್ಮೆ-ಎರಡ ವರ್ಷಕ್ಕೊಮ್ಮೆ ನಾವ ನವರಾತ್ರಿಗೆ ಹುಬ್ಬಳ್ಳಿಗೆ ಹೋದರಾತು ಅಂತ. ಅಲ್ಲಾ, ಮಾಡೋರ ಯಾರ ಹೇಳ್ರಿ, ಪದ್ಧತಿ ಖರೆ, ಮದ್ಲೀನ ಕಾಲದ ಮಂದೀಗೆ ಕೆಲಸ ಇದ್ದಿದ್ದಿಲ್ಲಾ ಮೂರ – ಮೂರ ತಾಸ ದೇವರ ಮುಂದ ಕುಕ್ರ ಬಡದ ಪೂಜಾ ಮಾಡ್ತಿದ್ದರು. ಈಗೇಲ್ಲೆ ಹಂಗ ಆಗತದ.” ಇದು ನಮ್ಮ ದೋಸ್ತರ ಹೆಂಡತಿಗೊಳ ಹೇಳೊ ಮಾತ.
ಅಗದಿ ಖರೆ ಮಾತ. ಅದಕ್ಕ ಇದಕ್ಕ ಕಲಿಯುಗ ಅನ್ನೋದ. ಹಂಗ ಧಾರ್ಮಿಕತೆ ಅಂದರ ಧಾಬಳಿ ಹಚಗೊಂಡ ಮಡಿನೀರ ತುಂಬಿ, ಮೈತುಂಬ ಶಂಖ, ಚಕ್ರದ್ದ ಬರಿ ಕೊಟಗೊಂಡ ರಾಮ, ರಾಮ ಅಂತ ಇದ್ದಲಿ ವಲಿ ಮ್ಯಾಲೆ ಅನ್ನಾ ಬ್ಯಾಳಿ ಬೇಯಸಿಗೊಂಡ ತಿನ್ನೋದ ಅಲ್ಲಾ, ನಮ್ಮ ಧರ್ಮದ ಪ್ರಕಾರ ನಾವು ನಡಕೊಂಡ ನಮ್ಮ ಕೈಲಾದಷ್ಟ ಪೂಜಿ ಪುನಸ್ಕಾರ ಮಾಡ್ಕೋತ ಇದ್ದರ ಅದ ನಮ್ಮ -ನಮ್ಮ ಮನಿ ಕಳಸ.
ಇರಲಿ,ನೋಡಿದ್ರ್ಯಲಾ, ಹಳೆ ಕಾಲದ ಸಾರ್ಥಕ ಮನಿ ಲಕ್ಷಣಾನ, ಯಾರ ಕಂಡ ಹಿಡದ ಬರದಿದ್ದೊ ಏನೋ, ಒಂದೂ ನಮ್ಮ ಕಾಲಕ್ಕ ಸೂಟ ಆಗೋ ಲಕ್ಷಣ ಕಾಣಂಗಿಲ್ಲಾ. ಹಂಗ ಈಗಿನ ಕಾಲದಾಗ ಒಂದೊಂದ ಮನಿಗೆ ಒಂದೊಂದ ಲಕ್ಷಣ ಇರತಾವ. ಎಲ್ಲಾರ ಮನಿಗೆ ಒಂದ ತರಹದ ಲಕ್ಷಣ ಇರಬೇಕ ಅಂತೇನ ಇಲ್ಲ ಬಿಡ್ರಿ. ನಮ್ಮ ಮನಿಗೆ ಸೂಟ್ ಆಗೋದ ನಮ್ಮ ಮನಿ ಲಕ್ಷಣ. ಯಾವದೋ ಬಾಜಿರಾಯನ ಕಾಲದ್ದ ಲಕ್ಷಣ ಫಾಲೊ ಮಾಡಲಿಕ್ಕೆ ಹೋಗಿ ಮನ್ಯಾಗಿರೋ ಒಂದ ಸ್ವಲ್ಪ ಸುಖ ಶಾಂತಿನ್ನೂ ಕೆಡಸಿಗೊಳೊದ ಬ್ಯಾಡ.
ಹಂಗ ನಮ್ಮ ಮನಿ ಎಷ್ಟ ಅವ್ಯವಸ್ಥ ಇದ್ದರು, ನಮ್ಮ ಗೃಹಿಣೆ ಎಷ್ಟ ಅಸಂತುಷ್ಟ ಇದ್ದರು ನಾವ ಸಮಾಧಾನದಿಂದ ಸಂಸಾರ ದುಗಿಸಿಕೊಂಡ ಹೋಗೊದರಾಗ ನಮ್ಮ ಸುಖ-ಶಾಂತಿ ಅದ ಏನ್ರೀಪಾ. ಇನ್ನ ನಾವೇಲ್ಲರ ಆದರಾತಿಥ್ಯ ಅಂತ ತುಟ್ಟಿ ಕಾಲದಾಗ ಬರೋ ಹೋಗೊರ ಬಗ್ಗೆ ತಲಿ ಕೆಡಸಿಕೊಂಡರ ಮುಗದ ಹೋತ ಆಮ್ಯಾಲೆ ತಲಿ ಮ್ಯಾಲೆ ತಟ್ಟ ಹಾಕೋಳು ಪಾಳೆ ಬರ್ತದ ಇಷ್ಟ. ಇನ್ನ ಧಾರ್ಮಿಕತೆ ಬಗ್ಗೆ ನಾ ಏನ ಜಾಸ್ತಿ ಹೇಳಂಗಿಲ್ಲಾ, ಅದ ನಿಮ್ಮ-ನಿಮ್ಮ ಧರ್ಮಕ್ಕ, ಧರ್ಮ ಪತ್ನಿಗೆ ಬಿಟ್ಟದ್ದ.
ನೋಡ್ರಿ ಹಂಗ ಯಾರಿಗರ ನಮ್ಮಜ್ಜನ ಕಾಲದ ಸಾರ್ಥಕ ಮನೆಯ ಲಕ್ಷಣಗಳು ಕರೆಕ್ಟ ಅನಿಸಿದರ, ಅದ ನಿಮ್ಮ ಕಡೆ ಸಾಧ್ಯ ಇದ್ದರ ‘ನಿಮ್ಮ ಮನಿ ಸಂತುಷ್ಟ ಗೃಹಿಣಿನ’ ಒಂದ ಮಾತ ಕೇಳಿ ಫಾಲೊ ಮಾಡ್ರಿ ಇಲ್ಲಾಂದರ ಇಲ್ಲಾ, ಇದರ ಬಗ್ಗೆ ಭಾಳ ತಲಿಗೆಡಸಿಗೊಳ್ಳಿಕ್ಕೆ ಹೋಗಬ್ಯಾಡರಿ.
ಹಂಗ ನಮ್ಮ ಮನಿಕಡೆ ಬಂದರs, ನಿಮಗ ಬೇಕಂದರ ನಾ ಮಾಡಸಿದ್ದ ಡಿಜಿಟಲ್ ಪ್ರಿಂಟ್ ಕೊಡ್ತೇನಿ. ನಿಮ್ಮ ಮನಿಗೆ ಓಯ್ದ ಗೊಡಿ ಮ್ಯಾಲೆರ ಹಾಕ್ಕೊರಿ.
ನಂಗ ಫೋನ್ ಮಾಡಿ ನಾ ಫ್ರೀ ಇದ್ದೇನೋ ಇಲ್ಲೊ ಕೇಳ್ಕೊಂಡ ಬರ್ರಿ ಮತ್ತ…..