ಸಿಂಧಕ್ಕಾ, ಸುದಕ್ಕಾ, ಸಾವಿತ್ರಿ ಮತ್ತ ಸುನಂದಾ ಇವರ ನಾಲ್ಕ ಮಂದಿ ಧಾರವಾಡದೊಳಗ ಒಂದ ಐವತ್ತೈದ- ಅರವತ್ತ ವರ್ಷದ ಹಿಂದಿನ ಗೇಳ್ತ್ಯಾರ. ಇವರೇಲ್ಲಾ ಹೆಬ್ಬಾರವರ ಪ್ರಿಂಟಿಂಗ್ ಪ್ರೆಸನಾಗ ಕೆಲಸಾ ಮಾಡ್ತಿದ್ದರ. ಅಗದಿ ಗಳಸ್ಯ-ಕಂಟಸ್ಯ ಅನ್ನೊ ಹಂತಾ ಗೆಳೆತನ. ಈಗ ಎಲ್ಲಾರೂ 75 ದಾಟಿದವರ.
ಇನ್ನ ಇವರ ನಾಲ್ಕ ಮಂದಿದೂ ಒಂದೊಂದ ಕಥಿ.
ಸಿಂದಕ್ಕ ಇವತ್ತಿಗೂ ಇದ್ದಿದ್ದಿರಾಗ ಘಟ್ಟಿ ಹೆಣ್ಣಮಗಳ, BP ಇಲ್ಲಾ, ಶುಗರ್ ಇಲ್ಲಾ, ಮಗಾ-ಮಗಳು ಇಬ್ಬರೂ ಇದ್ದೂರಾಗ ಇದ್ದರು. ಅಗದಿ ಚಟ-ಪಟಾ ಅಂತ ಸೊಸಿ-ಮೊಮ್ಮಕ್ಕಳ ನಾಚಬೇಕ ಹಂಗ ಮನಿತುಂಬ ಓಡ್ಯಾಡ್ಕೋತ ತನ್ನ ಕಡೆ ಆಗೋದ ಆಗಲಾರದ್ದ ಎಲ್ಲ ಕೆಲಸಾ ಮಾಡೋಕಿ. ಅಕಿ ಸೊಸಿದ ಪುಣ್ಯಾ ಛಲೋ ಕೆಲಸಾ-ಬೊಗಸಿ ಮಾಡೊ ಅತ್ತಿ ಸಿಕ್ಕಿದ್ದಳು. ಓಮ್ಮೊಮ್ಮೆ ಅಂತೂ
’ನಂಗ ಕೆಲಸ ಇಲ್ಲಾಂದರ ಹುಚ್ಚ ಹಿಡದಂಗ ಆಗ್ತದ್ವಾ’ ಅಂತ ಅನ್ನೋಕಿ ಅದಕ್ಕ ಸೊಸಿ
’ಸುಮ್ಮನ ಒಂದ ನಾಲ್ಕ ಮನಿ ಭಾಂಡೆ ಓಗ್ಯಾಣನರ ಹಿಡಿರಿ’ ಅಂತಿದ್ಲು. ಅಲ್ಲಾ ಹಂಗ ಸೊಸಿ ಅಂದಿದ್ದ ಅಕಿಗೆ ಕರೆಕ್ಟ ಕೆಳಸಂಗಿಲ್ಲಾ ಛಲೋ ಇಲ್ಲಾಂದರ ನಾಲ್ಕ ಮನಿಗೆ ಕೇಳೊ ಹಂಗ ಸೊಸಿ ಜೊತಿ ಜಗಳಾಡೋಕಿ ಆ ಮಾತ ಬ್ಯಾರೆ
ಇನ್ನಸುದಕ್ಕ ಅಗದಿ well to do family ಇಂದ ಬಂದೋಕಿ, ಅಕಿಗೆ ಒಂದ ಹೆಣ್ಣ, ಇಂಜೀನಿಯರ್ ಕಲತ ಇಂಜಿನಿಯರಿಂಗ ಗಂಡನ್ನ ಕಟಗೊಂಡ ಹತ್ತ-ಹದಿನೈದ ವರ್ಷದಿಂದ ಬೇವರ್ಲಿ ಹಿಲ್ಲ್ಸ್, ಕ್ಯಾಲಿಫೋರ್ನಿಯಾ ವಾಸಿ ಆಗಿದ್ಲು.
ಸುದಕ್ಕನ ಗಂಡ ಮಗಳಿಗೆ ಸ್ವರ್ಗವಾಸಿ ಅಂತ ಕರಿತಿದ್ದಾ. ಯಾಕಂದರ ಸುದಕ್ಕ ಮಾತ ಮಾತಿಗೆ
’ನನ್ನ ಮಗಳನ ಅಮೇರಿಕಾಕ್ಕ ಕೊಟ್ಟೇನ್ವಾ, ಏನ ಅಮೇರಿಕಾ ಏನ್ತಾನ್..ಸ್ವರ್ಗವಾ ನಮ್ಮವ್ವಾ..ಅಮೇರಿಕಾ ಅಂದರ ಸ್ವರ್ಗ..’ ಅಂತ ಮೂರ ವರ್ಷಕ್ಕೊಮ್ಮೆ ಬೇವರ್ಲಿ ಹಿಲ್ಸಗೆ ಹೋಗಿ ಬಂದಾಗೊಮ್ಮೆ ಇಡಿ ಧಾರವಾಡ ಮಂದಿಗೇಲ್ಲಾ ಹೇಳೋಕಿ.
ಅಲ್ಲಾ ಆ ಅಳಿಯಾ ನೋಡಿದರ ಇಲ್ಲೇ ಧಾರವಾಡ U.B.Hills ಒಳಗ ಹುಟ್ಟಿ ಬೆಳದಂವಾ. ಇಕಿ ನೋಡಿದರ ಏನ ತನ್ನ ಅಳಿಯಾ ಏನ್ ಲಾಸ್ ವೇಗಾಸ್, ಬೇವರ್ಲಿ ಹಿಲ್ಸ್ ಒಳಗಿನ ಕ್ಯಾಸಿನೋ ಸ್ಲಾಟ್ ಮಶೀನ ಒಳಗ ಹುಟ್ಟಿದವರ ಗತೆ ಮಾತೋಡೊಕಿ.
ಇತ್ತಲಾಗ ಸುನಂದಾ ಬನಶಂಕರಿ ಪುರವಾಸಿನಿ. ಅಂದರ ಒಂದ ಎಂಟ ವರ್ಷದಿಂದ ಮೂರ ಗಂಡಸ ಮಕ್ಕಳ ಇದ್ದರೂ ಧಾರವಾಡದಾಗ ಬನಶಂಕರಿ ವೃದ್ಧಾಶ್ರಮದೊಳಗ ಇದ್ಲು. ಯಾಕ ಅಂತ ನಾ ಏನ ಡಿಟೇಲ್ಸ್ ಹೇಳಂಗಿಲ್ಲಾ. ಅಮ್ಯಾಲೆ ಈಗ ಅವ್ವಾ ಅಪ್ಪನ್ನ ವೃದ್ಧಾಶ್ರಮದಾಗ ಇಡೋದ ಕಾಮನ್. ಅದಕ್ಕ ಪರ್ಟಿಕ್ಯುಲರ್ ಕಾರಣ ಬೇಕಂತ ಏನಿಲ್ಲಾ. ಆಮ್ಯಾಲೆ ಹಿಂತಾವನೇಲ್ಲಾ ಕೇಳಲಿಕ್ಕೂ ಹೋಗಬಾರದ.
ಇನ್ನ ಸಾವಿತ್ರಿದ ಒಂದ ಕಥಿನ ಬ್ಯಾರೆ ಇತ್ತ, ಅಕಿ ಸರ್ಕಾರದವರದ ಒಂದ ಸ್ಟೇನಲೇಸ್ ಸ್ಟೀಲಿಂದ ಟ್ರೇ ಆಶಾಕ್ಕ ದೊಡ್ಡಿಸ್ತನ ಮಾಡಿ 1970ರಾಗ ಫ್ಯಾಮಿಲಿ ಪ್ಲ್ಯಾನಿಂಗ್ ಅಂತ ಒಂದ ಹೊಡ್ತಕ್ಕ ಅವಳಿ-ಜವಳಿ ಹಡದ ಕೈ ತೊಳ್ಕೊಂಡ ಬಿಟ್ಟಿದ್ಲು. ಇಗ ಆ ಅವಳಿ-ಜವಳಿ ಒಳಗ ಒಂದ ಜಪಾನ ಹಿರೋಶಿಮಾ-ಇನ್ನೊಂದ ಜರ್ಮನಿ ಬರ್ಲಿನ ಒಳಗ ಅವ. ಇಲ್ಲೆ ಇಕಿ ಹುಬ್ಬಳ್ಳ್ಯಾಗ ಒಬ್ಬೋಕಿನ ರಾಮ ನಾಮ ಜಪಾ ಮಾಡ್ಕೋತ ಏನರ ಹೆಚ್ಚು ಕಡಮಿ ಆದರ ನಮ್ಮಂತಾ ಮಂದಿ ಮಕ್ಕಳಿಗೆ ಭಾರ ಆಕ್ಕೋತ ಬದಕಲಿಕ್ಕತ್ತಿದ್ಲು, ಆದರು ಮಾತ ಎತ್ತಿದರ ನನ್ನ ಮಕ್ಕಳ ಜಪಾನ-ಜರ್ಮನಿ ಅನ್ನೋದ ಬಿಡ್ತಿದ್ದಿಲ್ಲಾ.
ಇನ್ನ ಇವರ ನಾಲ್ಕು ಮಂದಿ ಸೇರಿದರಂದ ಇವರಿಗೆ ಮಾತಾಡಲಿಕ್ಕೆ ಕಾಮನ್ ಮೆನು ಅಂದರ ಮಗಾ, ಸೊಸಿ, ಮಗಳ, ಅಳಿಯಾ ಮ್ಯಾಲೆ ಮೊಮ್ಮೊಕ್ಕಳು.
’ನಮ್ಮವ್ವಾ…. ನಮ್ಮ ಅಳಿಯಾ ಅಂತೂ ಬೇವರ್ಲಿ ಹಿಲ್ಸ್ ಒಳಗ ಮನಿ ತೊಗೊಂಡಾನ್ವ, ದೆವ್ವನಂತ ಮನಿ,ಮೂರ-ಮೂರ ಕಾರು..ಏನ ಹೇಳ್ತಿ..ನನ್ನ ಮಗಳ ಪುಣ್ಯಾ ಮಾಡ್ಯಾಳ ಬಿಡ’ ಅಂತ ಸುದಕ್ಕ ಅನ್ನೋಕಿ.
’ಅಯ್ಯ..ಏನ ಮಾಡಬೇಕ ಹಂತಾ ಅಳಿಯಂದರ ಮಕ್ಕಳನ ತೊಗೊಂಡ, ಹೊತ್ತಿಗೆ, ಆಪತ್ತಿಗೆ ಆಗಲಾರದ ಮಕ್ಕಳ ಸಂಪತ್ತ ತೊಗೊಂಡ ಸುಡಬೇಕ ಇಷ್ಟ’ ಅಂತ ಸಾವಿತ್ರಿ ಅನ್ನೋಕಿ.
ಇನ್ನ ಸಿಂಧಕ್ಕ ಹಿಂತಾ ವಿಷಯದಾಗ ತಲಿ ಹಾಕತಿದ್ದಿಲ್ಲಾ. ಯಾಕ ಅಂದರ ಅಕಿವು ಲೋಕಲ್ ಮಕ್ಕಳ, ಅಕಿ ಇವತ್ತಿಗೂ ಮಗಾ ಬೆಂಗಳೂರಿಗೆ ಥರ್ಡ್ ಎ.ಸಿ ಒಳಗ ಹೊಂಟಾನ ಅಂದರ ಟ್ರಂಕ್ ಒಳಗಿನ ಕುಂಚಗಿ ಕೊಟ್ಟ ಕಳಸ್ತಾಳ. ಅಕಿಗೆ ಯಾರರ
’ಯಾಕ ನಿನ್ನ ಮಗಾ ಇಷ್ಟ ಶಾಣ್ಯಾ ಇದ್ದಾ, ಇಂಜೀನಿಯರ್ ಮಾಡಿ ಫಾರೇನ ಹೋಗ್ಬೇಕಿತ್ತಲಾ’ ಅಂತ ಕೇಳಿದರ.
’ಅಯ್ಯ..ನನ್ನ ಮಗಗ ಫ್ಲೈಟ ಫೋಬಿಯಾ ಅದ ಹಿಂಗಾಗಿ ಅಂವಾ ಇಂಜಿನೀಯರಿಂಗ್ ಕಲಿಲಿಲ್ಲಾ’ ಅಂತ ಅನ್ನೋಕಿ. ಅಕಿ ಮಾತ ಕೇಳಿ ಉಳದವರ ನಗೋರ.
’ಅಯ್ಯ ನಂಬದು ಒಂದ ಏನ ಜೀವನವಾ, ಎಲ್ಲಾ ಕಲಿಸಿ, ಮಕ್ಕಳನ್ನ ಹಾದಿಗೆ ಹತ್ತಿಸಿ, ಇವತ್ತ ಮಕ್ಕಳ ಸೆಟ್ಲ್ ಆಗಿ ಅವ್ವಾ-ಅಪ್ಪಗ ವೃದ್ಧಾಶ್ರಮದಾಗ ಇಡ್ತಾವ ಅಂದರ ಹಿಂತಾ ಮಕ್ಕಳ ಹುಟ್ಟೋಕಿಂತಾ ಹುಟ್ಟಲಾರದ ಇರೋದ ಛಲೋ ಇತ್ತ, at least ಮಕ್ಕಳಿಲ್ಲಾ ಅನ್ನೋ ಕೊರಗ ಒಂದ ಇರತ್ತಿತ್ತ’ ಅಂತ ಪಾಪ ಸುನಂದಾ ಕೊರಗೋಕಿ.
ಹಂಗ ಈ ನಾಲ್ಕು ಮಂದಿಗೂ ಆಪತ್ಕಾಲದಾಗ ಹೆಲ್ಪ್ ಆಗೊಂವಾ ಸಿಂಧುನ ಮಗಾ ಒಬ್ಬನ. ಯಾಕ ಅಂದರ ಅದ ಲೋಕಲ ವಾಸಿ.
ಮಾತ ಮಾತಿಗೆ ನನ್ನ ಅಳಿಯಾ ಹಂಗ-ಹಿಂಗ್ ಅಂತ ಅನ್ನೊ ಸುದಕ್ಕಗ ಏನ ಎಮರ್ಜಿನ್ಸಿ ಬಂದರ ಸಿಂಧುನ ಮಗಾನ ಬೇಕ. ಕೋರೊನಾ ಎರಡನೇ ವೇವ್ ಒಳಗ ಮಗಳದ ಎರಡನೇ ಬಾಣಂತನ ಮಾಡಿ ಇಂಡಿಯಾಕ್ಕ ಬಂದ ಮ್ಯಾಲೆ ಕೋವಿಡ್ ಪಾಸಿಟಿವ್ ಆಗಿ ಅಂಬ್ಯುಲೆನ್ಸ್ ಒಳಗ ರಾತ್ರೋ ರಾತ್ರಿ SDM ಒಳಗ ಅಡ್ಮಿಟ್ ಮಾಡಿ ಡಜನ್ ಗಟ್ಟಲೇ ರೆಮಡಿಸಿವರ್ ಇಂಜೇಕ್ಶನ್ ವ್ಯವಸ್ಥಾ ಮಾಡಿದವನ ಅಂವಾ. ಆವಾಗೇನ ಯಾ ಅಳಿಯಾನೂ ಬರಲಿಲ್ಲಾ.
ಇನ್ನ ಸುನಂದಾ ಅಂತೂ ಮೂರ ಗಂಡಸ ಮಕ್ಕಳ ಹಡದ ಬಂಜಿ, ಮ್ಯಾಲೆ ವೃದ್ಧಾಶ್ರಮದಾಗ ಇರ್ತಿದ್ಲು, ಹಿಂಗಾಗಿ ಅಕಿ ದೇಖರಕಿನೂ ಸಿಂಧೂನ ಮಗಂದ.
ಸಾವಿತ್ರಿದೂ ಅದ ಹಣೆ ಬರಹ. ಎರಡ ವರ್ಷಕ್ಕೊಮ್ಮೆ ಇಷ್ಟ ಮಕ್ಕಳ ಇಂಡಿಯಾಕ್ಕ ಬಂದು ಹೋಗಿ ಮಾಡ್ತಿದ್ದರು. ಅದು ಈ ಕೊರೋನಾ ಬಂದ ಮ್ಯಾಲೆ ಅಂತೂ ಅವರ ಇಂಡಿಯಾಕ್ಕ ಬರೋದ ದೂರ ಉಳಿತ ಎಲ್ಲೆ ಫೋನ ಮಾಡಿದರ ಕೋರೊನಾ ಬರ್ತದ ಅನ್ನೋರಗತೆ ಮಾಡೋರ.
ಈ ಸುದಕ್ಕಾ, ಸಾವಿತ್ರಿ ಮಾತ ಮಾತಿಗೊಮ್ಮೆ
’ನಮ್ಮ ಮಗಳ ಅಮೇರಿಕಾ, ಮಗಾ ಜಪಾನ’ ಅಂತೇಲ್ಲಾ ದೊಡ್ಡಿಸ್ತನಾ ಬಡಿಯೋದ ನೋಡಿ ಸಿಂಧಕ್ಕಾ
’ಅಯ್ಯ…ನನ್ನ ಮಗಾ ಅಮೇರಿಕಾ, ಜಪಾನ ತೊರಸೋದ ದೂರ ಉಳಿತ ಒಂದ ಕಾಶಿ ಯಾತ್ರಾನೂ ಮಾಡಸಲಿಲ್ವಾ ಆದರೂ ಏನ ಅನ್ನ ನಾಳೆ ನಾ ಸತ್ತರ ನೀರ ಬಿಡಲಿಕ್ಕೆ ಮಗಾ ನನ್ನ ಜೊತಿ ಇದ್ದಾನ್ವಾ, ಮುಂದ ನಿಂಬದ ಹೆಂಗ ವಿಚಾರ ಮಾಡ್ರಿ’ ಅಂತ ಅನ್ನೋಕಿ.
ಹಂಗ ಅಕಿ ಹೇಳಿದ್ದ ಅವರಿಗೆ ಖರೆ ಅನಸ್ತಿತ್ತ, ಒಳಗಿನ ಮನಸ ಒಪ್ಗೊತಿತ್ತ, ಆದರೂ ನನ್ನ ಮಗಾ, ಅಳಿಯಾ ಫಾರೇನ್ ಅಂತ ಅನ್ನೊ ತೊರಕಿ ಮನಸ್ಸ ಅದನ್ನ ಒಪ್ಗೊತಿದ್ದಿಲ್ಲಾ. ಅಲ್ಲಾ, ಇವತ್ತೀನ ಕಾಲನ ಹಂಗ ಅದ.
ಎಲ್ಲಾ ಬಿಟ್ಟ ಇವತ್ಯಾಕ ಇವರ ನೆನಪ ಆದರ ಅಂದರ ನಾಳೆ ಸಾವಿತ್ರಿದ ವೈಕುಂಠ ಸಮಾರಾಧನಿ, ಅಕಿದ ಹನಿಮೂರನೇ ದಿವಸ, ಹಂಗ ಸಿಂಧು ಅಡ್ಡ ಬಾಯಿ ಹಾಕಿದಂಗ ಸಾವಿತ್ರಿ ಸತ್ತಾಗ ಹೋಗಿ ನೀರ ಬಿಟ್ಟ ಎಲ್ಲಾ ವ್ಯವಸ್ಥಾ ಮಾಡಿದಂವಾ ಸಿಂಧೂನ ಮಗನ, ಅಕಿ ಮಕ್ಕಳ ಬಂದದ್ದ ಐದನೇ ದಿವಸ, ಅಲ್ಲಿ ತನಕ ಅಕಿ ಅಸ್ತಿ ಹಿತ್ತಲದಾಗ ಬೇವಿನ ಮರಕ್ಕ ಕಟ್ಟಿ ಇಟ್ಟಂವಾ ಅವನ.
ಇನ್ನೊಂದ ವಿಚಿತ್ರ ಅಂದರ ನಾಳೆ ಮದರ್ಸ್ ಡೇ ಬ್ಯಾರೆ, ಯಾ ಜನ್ಮದ ಪುಣ್ಯಾನೋ ಏನೋ ಮದರ್ಸ್ ಡೇ ದಿವಸ ಸಾವಿತ್ರಿಬಾಯಿದ ವೈಕುಂಟ ಸಮಾರಾಧನಿ.
ಹಂಗ ನಾ ಒಂದ ಹತ್ತ ವರ್ಷದ ಹಿಂದ ಮದರ್ಸ್ ಡೇ ಅಂತ ನಮ್ಮವ್ವಗ ಆರ ವಾರಿ ಪಾಲಿಸ್ಟರ್ ಪತ್ಲಾ ಗಿಫ್ಟ ಕೊಟ್ಟಾಗ ನಮ್ಮಪ್ಪ
’ಲೇ…ದನಾ ಕಾಯೋನ, ಎಲ್ಲಿ ಸುಟ್ಟು ಸುಡಗಾಡ ಡೇ ಮಾಡ್ತೀರಲೇ…ನಮ್ಮಲ್ಲೇ ತಾಯಂದರ ಡೇ ಅಂದರ ಐದಾನವಮಿ ಇಲ್ಲಾ ಶ್ರಾದ್ಧಾ ಇಷ್ಟ..ನೀ ಹಿಂತಾವೇಲ್ಲಾ ಹುಚ್ಚುಚಾಕಾರ ಮಾಡಬ್ಯಾಡ’ ಅಂತ ಬೈದಿದ್ದಾ. ಅದ ನಂಗ ಈಗ ಖರೆ ಅನಸ್ತ.
ಹಂಗ ಇವತ್ತೀನ ಪ್ರಹಸನದೊಳಗ ಹಾಸ್ಯ ಕಡಮಿ ಇರಬಹುದು ಆದರ ಸತ್ಯ ಜಾಸ್ತಿ ಅದ ಅಂತ ಅನಸ್ತದ. ಹಿಂಗಾಗಿ ಈ ನಾಲ್ಕ ತಾಯಂದರ ಕಥಿ ನಾಳೆ ಬರೋ ಮದರ್ಸ್ ಡೇ ದಿವಸ ನಿಮ್ಮ ಜೊತಿ ಹಂಚಗೊಬೇಕ ಅಂತ ಬರದೆ ಇಷ್ಟ.
ಜಗತ್ತಿನ ಎಲ್ಲಾ ತಾಯಂದರಿಗೆ ಮದರ್ಸ್ ಡೇ ಶುಭಾಶಯ.
ಅನ್ನಂಗ ಇನ್ನೊಂದ ಹೇಳೋದ ಮರತೆ, ಆ ಸಿಂಧಕ್ಕನ ಲೋಕಲ್ ಮಗಾ ನಾನ. ಇನ್ನ ನಾನ ಆರ್ಟಿಕಲ್ ಬರದೇನಿ ಅಂದರ ಹೀರೋನ ಪಾತ್ರ ನಂದ ಅಲಾ.
When you are young, life is confusing because you don’t know what is going on.
When you are grown-up, life is confusing because you do know what is going on.🌹🙏
Super!
Hard reality of life