ಲೇ…ಯಾರರ ಶ್ರಾವಣಾ ಬಿಡಸ್ರಿಲೇ.

ಮೊನ್ನೆ ಬುಧವಾರ ಮುಂಜ ಮುಂಜಾನೆ ನಮ್ಮ ಪವ್ಯಾ ಫೋನ್ ಮಾಡಿದಾ, ಅಲ್ಲಾ ಒಂದ ತಿಂಗಳಾಗಿತ್ತ ಮಗಂದ ಫೊನಿಲ್ಲಾ ಏನಿಲ್ಲಾ, ಹಂತಾವ ಇವತ್ಯಾಕ ಫೋನ ಮಾಡಿದಾಪಾ ಅಂತ ನಾ ಫೋನ ಎತ್ತಿದರ ಅದು ಇದು ಮಾತಾಡಿ ಲಾಸ್ಟಿಗೆ
“ಲೇ..ಭಾಳ ದಿವಸಾತಲೇ ಎಲ್ಲೂ ಕೂತೇಲ? ಹೆಂಗಿದ್ದರೂ ಇವತ್ತ ಬುಧವಾರ, ರಾತ್ರಿಗೆ ಸಾವಜಿಗೆ ಹೋಗೊಣೇನ” ಅಂದಾ.
“ಲೇ..ಎಲ್ಲಾ ಬಿಟ್ಟ ಇವತ್ತ್ಯಾಕಲೇ…ಮೊನ್ನೇರ ಗಣಪತಿ ಕೂಡ್ಸೇವಿ….ಶನಿವಾರ ಹೋಗೊಣ ತೊಗೊ” ಅಂತ ನಾ ಅಂದರ
“ಮಗನ….ಒಂದ ತಿಂಗಳ ಶ್ರಾವಣ ಇತ್ತಲೇ….ಚಿಕನ್ ಬಿಡ ತತ್ತಿ ಮಾರಿ ಸಹಿತ ನೋಡಿಲ್ಲಾ…ಯಾರರ ಶ್ರಾವಣಾ ಬಿಡಸ್ರಿಲೇ” ಅಂತ ರಿಕ್ವೆಸ್ಟ ಮಾಡಿದಾ.
ಹಕ್ಕ್ .. ಇಂವಾ ಕಟ್ಟಾ ಶ್ರಾವಣಾ ಮಾಡ್ಯಾನ ಅಂತ ಇನ್ನ ಆ ಶ್ರಾವಣದ ವೃತಾ ಬಿಡಸಲಿಕ್ಕೆ ನಾ ಬೇಕಂತ. ಅಲ್ಲಾ ಶ್ರಾವಣಾ ಬಿಡಸದೊಂದರ ಅದೇನ ಮೈಲಗಿ-ರಿದ್ದಿ ಬಿಡಸೋದ ಇದ್ದಂಗ? ಹಂಗ ಆ ಮೈಲಗಿ, ರಿದ್ದಿ ಬಿಟ್ಟಮ್ಯಾಲೆ ಗುಡಿಗೆ ಹೋಗಿ ಕಾಯಿ ಒಡಿಸಿಗೊಂಡ ಬರತಾರಲಾ ಹಂಗ ಇವಂಗ ಸಾವಜಿಗೆ ಕರಕೊಂಡ ಹೋಗಿ ಶ್ರಾವಣ ಬಿಡಸಲಿಕ್ಕೆ?
ಅಲ್ಲಾ, ನಾ ಏನ ’ಶ್ರಾವಾಣ ಬಿಡಸೊಂವಾ’ ಕಂಡಂಗ ಕಾಣ್ತೇನೇನ ಮಗಗ?
ಅವರ ಮನ್ಯಾಗ ನೋಡಿದರ ಗ್ರಹಣಾ, ಏಕಾದಶಿ, ಸಂಕಷ್ಟಿ, ಹಬ್ಬ, ಹುಣ್ಣಮಿ ಏಲ್ಲಾ
“ನಿಮ್ಮ ದೋಸ್ತ ಭಟ್ಟನ ಮನ್ಯಾಗ ಕೇಳ ಹಬ್ಬಾ ಎಂದ ಮಾಡ್ಯಾರ” ಅಂತ ನಮಗ ಕೇಳಿ ನಮ್ಮಕಿಂತ ಜಾಸ್ತಿ ಪಾಲಸ್ತಾರ ಇಲ್ಲೆ ಈ ಮಗಾ ನೋಡಿದರ ಶ್ರಾವಣಾ ಬಿಡಸಲಿಕ್ಕೆ ಬಾ ಅಂತ ನನ್ನ ಕರಿಲಿಕತ್ತಾನ.
ಅಲ್ಲಾ ಒಂದ ಇಪ್ಪತ್ತ ವರ್ಷದ ಹಿಂದ ಇದ ಪವ್ಯಾನ ನನಗ ’ದೋಸ್ತ, ನೀ ಸಾವಜಿ ಸ್ಟಾರ್ಟ ಮಾಡ ದಪ್ಪ ಆಗ್ತಿ ಅಂತ ಸಾವಜಿ ಚಟಾ ಹಚ್ಚಿಸಿಸಿ ನನ್ನೊಳಗ ಅಸಿಡಿಟಿ ಬೀಜಾ ನೆಟ್ಟ ವಾರಕ್ಕೊಮ್ಮೆ ಅದಕ್ಕ ಎಣ್ಣಿ ಗೊಬ್ಬರ ಹಾಕಿದಂವಾ. ಅಲ್ಲಾ ಇಂವಾ ಪಕ್ಕಾ ಸಾವಜಿ ಬಿಡ್ರಿ ಆದರ ಶ್ರಾವಣ ಮಾತ್ರ ಇಷ್ಟ ಕಟ್ಟಾ ಪಾಲಸ್ತಾನಲಾ ಕೋಳಿ ತಿನ್ನೋದ ಬಿಡ್ರಿ..ಕೋಳಿ ಕೂಗೋದನ್ನ ಸಹಿತ ಕೇಳಂಗಿಲ್ಲ. ಇನ್ನ ಹಂತಾ ಮನಷ್ಯಾಗ ಪಾಪ ಯಾವಾಗ ಶ್ರಾವಣ ಮುಗತಿತ್ತೊ ಅಂತ ಆಗಲಾರದ ಏನ.
ಅಲ್ಲಾ ಶ್ರಾವಣಾ ಬಿಡಸೋದ ಅಂದರ ಏನ ಅಂತ ತಿಳ್ಕೋಂಡಿರಿ?
ನಮ್ಮಲ್ಲೇ ಭಾಳ ಮಂದಿ ದೋಸ್ತರ ಪವ್ಯಾನಗತೆ ವರ್ಷಾ ಸ್ಟ್ರಿಕ್ಟ್ ಶ್ರಾವಣ ಮಾಡ್ತಾರ. ಹಂಗ ಉಳದ ಹನ್ನೊಂದ ತಿಂಗಳ ನೂರಾ ಎಂಟ ಚಟಾ ಮಾಡ್ತಾರ ಆ ಮಾತ ಬ್ಯಾರೆ, ಹಿಂಗಾಗಿ ಮುಂದ ’ಯಾವಾಗ ಶ್ರಾವಣ ಮುಗಿದಿತ್ತೊ’ ಅಂತ ಕಾಯತಿರ್ತಾರ. ಇನ್ನ ಆ ಮಕ್ಕಳ ಶ್ರಾವಣಾ ಮಾಡ್ಯಾರ ಅಂತ ಅವರನ ವಾಪಸ ಟ್ರ್ಯಾಕಿಗೆ ತರಲಿಕ್ಕೆ ಯಾರರ ಹೊರಗ ಕರಕೊಂಡ ಹೋಗಬೇಕ ಅದಕ್ಕ ಶ್ರಾವಣಾ ಬಿಡ್ಸೋದ ಅಂತಾರ.
ಅಲ್ಲಾ ಹಂಗ ನಾ ಪರ್ಸನಲಿ ಶ್ರಾವಣಾ, ಒಪ್ಪತ್ತು, ಏಕಾದಶಿ ಮಾಡೊಂವ ಅಲ್ಲಾ. ಚಟವೇ ಚಟುವಟಿಕೆಗಳಿಗೆ ಮೂಲ ಅನ್ನೊದರಾಗ ನಂಬಕಿ ಇಟ್ಟೊಂವಾ. ಗ್ರಹಣಾನ ಪಾಲಸಂಗಿಲ್ಲಾ ಇನ್ನ ಶ್ರಾವಣಾ ಎಲ್ಲೆ ಮಾಡ್ಬೇಕ. ಅದಕ್ಕ ಶ್ರಾವಣಾ ಬಿಡಸಲಿಕ್ಕೆ ನಾನ ಯೋಗ್ಯ ಅಂತ ಮಗಾ ನನಗ ಫೋನ ಮಾಡಿದ್ದಾ.
ಅಲ್ಲಾ ಹಿಂಗ ಶ್ರಾವಣಾ ಬಿಡಸಲಿಕ್ಕೆ ಬಾ ಅಂದರ ಜನಾ ನನ್ನ ಬಗ್ಗೆ ಏನ ತಿಳ್ಕೋಬಾರದ ಹೇಳ್ರಿ. ಹಿಂಗಾಗೆ ನನಗ ’ಆಚಾರ ಹೇಳಿ ಬದ್ನಿಕಾಯಿ ತಿಂತಿ ಭಟ್ಟಾ ನೀ’ ಅಂತ ಅನ್ನೋರು ಇದ್ದಾರ.
ಅದರಾಗ ನಾನೂ ಏನೋ ಅವನ ಗತೆ ಸಿರಿಯಸ್ ಆಗಿ ಶ್ರಾವಣಾ ಪಾಲಿಸಿದ್ದರ ಮಾತ ಬ್ಯಾರೆ, ನಂಗೂ ಜೀವ ಚುಟು ಚುಟು ಅಂತಿರ್ತಿತ್ತ, ನಾನೂ ಯಾರಿಗರ ’ ಶ್ರಾವಣ ಬಿಡಸರಿಲೇ’ ಅಂತ ಗಂಟ ಬಿಳ್ತಿದ್ದೆ. ಇಲ್ಲಾ ನಾಲ್ಕೈದ ಮಂದಿ ಕಂಟ್ರಿಬ್ಯೂಶನ್ ಮಾಡಿ ನಮ್ಮಮ್ಮ ಶ್ರಾವಣಾ ನಾವ ಬಿಡಿಸ್ಗೊಂಡ ಬರ್ತಿದ್ವಿ ಅನ್ನರಿ ಆದರ ನಾ ನನ್ನ ಜೀವನದಾಗ ನಾ ಎಂದೂ ಶ್ರಾವಣ ಪಾಲಿಸಿದವನ ಅಲ್ಲಾ.
ಅದರಾಗ ನಂದ ರೆಪ್ಯೂಟೇಶನ್ ಹೆಂಗ ಅದ ಅಂದರ ನಾ ಒಂದ ವಾರ ಏನರ ಹೋಗಲಿಲ್ಲಾ ಅಂದರ ಹೋಟೆಲ ಮಾಲಕ ಸಹಿತ
“ಯಾಕ ಸರ್ ಭಾಳ ದಿವಸಾತ ಕಂಡೇಲಾ..ಆರಾಮ ಇದ್ದಿರಿಲ್ಲ” ಅಂತ ಕೇಳ್ತಾನ.
ಮೊನ್ನೆ ನಾ ಶ್ರಾವಣದಾಗ ಹೋದಾಗ ಭಾಳ ಟೇಬಲ್ ಖಾಲಿ ಖಾಲಿ ಇದ್ವು, ಯಾಕೋ ಅಂತ ಕೇಳಿದರ “ಏನ..ಸರ್…ಶ್ರಾವಣರಿ…ಧಂಧೇನ ಇಲ್ಲಾ..ಅದರಾಗ ಈ ಸುಡಗಾಡ ಮಳಿ ಬ್ಯಾರೆ, ಏನೋ ನಿಮ್ಮಂತಾವರ ಶ್ರಾವಣ ಮಾಡಂಗಿಲ್ಲಾ ಅಂತ ಉಪಜೀವನ ನಡದದ” ಅಂತ ಪಾಪ ಕೆಟ್ಟ ಅನಿಸಿಕೊಂಡ ಶ್ರಾವಣ ಅಂದರ ಗ್ಲೊಬಲ್ ರಿಸೆಶನ್ ಅನ್ನೋರಗತೆ ಹೇಳಿದರು. ಹಂಗ ಶ್ರಾವಣ ಅಂತ ಡಿಸ್ಕೌಂಟ ಬ್ಯಾರೆ ಇತ್ತ ಆ ಮಾತ ಬ್ಯಾರೆ….ಆದರೂ ಏನ ಅನ್ನರಿ ಅವರವರ ಸಂಕಟಾ ಅವರವರಿಗೆ ಗೊತ್ತ ಬಿಡ್ರಿ.
ಹಂಗ ನಮ್ಮ ದೋಸ್ತರಂತು ’ಶ್ರಾವಣದಾಗ ಬಾರ್, ನಾನ್ ವೆಜ್ ಹೋಟೆಲ್ ನಡಿಯೋದ ನಿನ್ನಿಂದ ನೋಡಲೇ ಭಟ್ಟಾ’ ಅಂತ ಅಂದ ಸುಳ್ಳ ನನ್ನ ರೆಪ್ಯೂಟೇಶನ್ ಹಳ್ಳಾ ಹಿಡಸ್ತಾರ.
ಒಂದ ಕಾಲ ಇತ್ತ ಬಿಡ್ರಿ, ಶ್ರಾವಣ ಬಂತಂದರ ನಮ್ಮ ದೋಸ್ತರ ನನ್ನ ಮುಟ್ಟಬೇಕಾರೂ ’ದೋಸ್ತ ನಿನ್ನ ಮುಟ್ಟಿದರ ನಡಿತದ ಇಲ್ಲ ಮಗನ? ನಾ ಮನ್ಯಾಗ ಆಮ್ಲೇಟ್ ತಿಂದ ಬಂದೇನಿ….ಮೊದ್ಲ ನೀ ಭಟ್ಟಾ, ಆಮ್ಯಾಲೆ ಅಲ್ಲೇ ಮುಟ್ಟಿ ಇಲ್ಲಿ ಮುಟ್ಟಿ, ನಾ ಮನಿಗೆ ಹೋಗಿ ಮಡಿನೀರ ತುಂಬಬೇಕು ಹಂಗ ಹಿಂಗ ಅಂತ ನೂರಾ ಎಂಟ ಮಾತಾಡ್ತಿ’ ಅಂತ ನಂಗ ಅಂತಿದ್ದರು.
ಅಲ್ಲಾ ಆವಾಗ ನಾ ಹಂಗ ಇದ್ದೆ ಬಿಡ್ರಿ, ವಾರಕ್ಕೊಮ್ಮೆ ಮಡಿನೀರ ತುಂಬೋದು, ಅದು ನಳಾ ಬಂದಾಗೊಮ್ಮೆ. ನಾ ಅಗದಿ ಲಂಡ ಪಂಜಿ ವದ್ದಿ ಹಚಗೊಂಡ ಹಿಂಗ ಸರ್ಕಾರಿ ನಳಕ್ಕ ಪಾಳೆ ಹಚ್ಚಿದಾಗ ಈ ದೋಸ್ತರ ಬಂದ ನಾ ಮಡಿನೀರ ತುಂಬೋದ ನೋಡ್ಕೊತ ನಿಲ್ಲತಿದ್ದರು, ಮ್ಯಾಲೆ ಆ ಹಿತ್ತಾಳಿ ವಜ್ಜಾನಿ ಕೊಡಾ ನಾ ಎತ್ತಲಿಕ್ಕೆ ತಿಣಕ್ಯಾಡೋದ ನೋಡಿ, ’ಲೇ ನಾ ಕೊಡಾ ಮನಿ ತನಕಾ ತಂದ ಕೊಡ್ಲೇನ ಮಗನ…ಎಲ್ಲೇರ ಹಾಕ್ಕೊಂಡ ಬಿದ್ದ ಗಿದ್ದಿ….’ ಅಂತ ಕಾಡಸೋರ. ಇಲ್ಲೇ ನನಗರ ಮಡಿನೀರ ತುಂಬೋದ ಅಂದರ ಸಜಾ ಈ ಮಕ್ಕಳಿಗೆ ನೋಡಿದರ ಮಜಾ ಅನಸ್ತಿತ್ತ.
ಅಲ್ಲಾ, ಆ ಕಾಲನ ಬ್ಯಾರೆ ಬಿಡ್ರಿ, ಆವಾಗ ನಂಗೂ ಭಯಾ, ಭಕ್ತಿ, ದೇವರು ದಿಂಡ್ರು, ಸಂಪ್ರದಾಯ ಅಂತ ಇತ್ತು. ಮ್ಯಾಲೆ ತಿಳವಳಕಿ ಬ್ಯಾರೆ ಇದ್ದಿದ್ದಿಲ್ಲಾ ಹಿಂಗಾಗಿ ನಮ್ಮವ್ವ ಹೇಳಿದ್ದ ಎಲ್ಲಾ ಕೇಳ್ತಿದ್ದೆ ಆ ಮಾತ ಬ್ಯಾರೆ.
ಹಂಗ ನನಗ ಇನ್ನೂ ನೆನಪದ ನಾ ಮೊದ್ಲಲೇ ಸಲಾ ತತ್ತಿ ತಿಂದಿದ್ದ ಈ ಪವ್ಯಾನ ಜೊತಿನ, ಈ ಮಗಾ ನಾ ಶಾಣ್ಯಾ ಇದ್ದೇನಿ ಅಂತ ನನ್ನ ಕಡೆ ಮ್ಯಾಥ್ಸ ಹೇಳಿಸ್ಗೊತಿದ್ದಾ ಇನ್ನ ಅದರ ಭಿಡೆಕ್ಕ ನನಗ
’ಲೇ ಬಾಯ್ಲ್ಡ ಎಗ್ ತಿನ್ನ ಮಗನ ಅದ ನಾನ ವೆಜ್ ಅಲ್ಲಾ, ಎಳನೀರನಾಗಿನ ಕೊಬ್ಬರಿ ಇದ್ದಂಗ ಇರ್ತದ….ತಿಂದ ಸ್ವಲ್ಪ ಗಟ್ಟೇರ ಆಗ, ನಿನಗ ನೋಡಿದರ ಪಾಟಿ ಚೀಲಾ ಹೊರಲಿಕ್ಕೆ ಆಗಂಗಿಲ್ಲಾ’ ಅಂತ ಗಂಟ ಬಿಳ್ತಿದ್ದಾ.
ಅಲ್ಲಾ ಹಂಗ ಅಂವಾ ಎಷ್ಟ ಹೇಳಿದರು ನಾ ಏನ ಧರ್ಮ ಭ್ರಷ್ಟ ಆಗಿದ್ದಿಲ್ಲ ಬಿಡ್ರಿ ಆದರ ಅಂವಾ ಎಗ್ಗ ತಿನ್ನಬೇಕಾರ ನಾ ಅವನ ಮುಂದ ನಿಲ್ಲೋದನ್ನ ನೋಡಿ ಜನಾ ತಪ್ಪ ತಿಳ್ಕೊಂಡ ನಮ್ಮವ್ವನ ಮುಂದ ಹೇಳಲಿಕತ್ತರು, ನಮ್ಮವ್ವ ನಾ ಎಷ್ಟ ತಿಂದಿಲ್ಲಾ ಅಂದರು ಬೈತಿದ್ಲು. ಕಡಿಕೆ ತಲಿಕೆಟ್ಟ ಹೆಂಗಿದ್ದರೂ ಮುಂಜವಿ ಆಗಿ ಐದ ವರ್ಷ ಆಗಿತ್ತ ಮ್ಯಾಲೆ ಸಂಧ್ಯಾವಂದನಿನೂ ಬಿಟ್ಟ ಬಿಟ್ಟಿದ್ದೆ. ಒಂದ ದಿವಸ ಅವನ ಜೊತಿ ಒಂದ ಪೀಸ ಬಾಯ್ಲ್ಡ ಎಗ್ ಉಪ್ಪು-ಖಾರಪುಡಿ ಹಚಗೊಂಡ ಹೊಡದ ಬಿಟ್ಟೆ. ಅಲ್ಲಾ ಆವಾಗ ನಾಲ್ಕಣೆಕ್ಕ ಒಂದ ಸಿಗ್ತಿದ್ವು, ಮ್ಯಾಲೆ ರೊಕ್ಕಾ ಅವನ ಕೊಡೊಂವಾ..ಯಾಕಂದರ ನಾ ಅವಂಗ ಮ್ಯಾಥ್ಸ ಪುಕ್ಕಟ್ಟ ಹೇಳಿ ಕೊಡ್ತಿದ್ದೆ, ನಾ ವಿದ್ಯಾ ದಾನ ಮಾಡ್ತಿದ್ದೆ, ಅಂವಾ ತತ್ತಿ ದಾನಾ ಮಾಡ್ತಿದ್ದಾ ಅನ್ನರಿ.
ಹಿಂಗ ಒಂದೊಂದ ಚಟಾ ಮಂದಿ ರೊಕ್ಕದಾಗ ಕಲಕೊತ ಹೋಗಿ ಪರಿಪೂರ್ಣ ಆದ ಮನಷ್ಯಾ ನಾ. ಸರ್ವರಲ್ಲಿ ಒಂದೊಂದು ಚಟ ಕಲಿತು ಚಟ ಸಾರ್ವಭೌಮ ಆದೊಂವ ಅನ್ನರಿ.
ಇರಲಿ ಹಳೇದ ತೊಗೊಂಡ ಏನ್ಮಾಡೋದ. ಪಾಪ ನಮ್ಮ ಪವ್ಯಾ ಇಷ್ಟ ಶ್ರಾವಣಾ ಬಿಡಸ್ರಿ ಅಂತ ರಿಕ್ವೆಸ್ಟ ಮಾಡ್ಕೊಳಿಕತ್ತಾನ ಹೆಂಗಿದ್ದರು ಇವತ್ತ ಶನಿವಾರ ಬ್ಯಾರೆ, ನೋಡ್ರಿ ನೀವು ಯಾರರ ಶ್ರಾವಣ ಅಗದಿ ಪಾಲಸಿದ್ದರ ಸಂಜಿಗೆ ಒಂದ ಫೋನ ಹೊಡಿರಿ, ಸೀಗೊಣಂತ ಎಲ್ಲರ….ಕಂಟ್ರಿಬ್ಯೂಶನ್ ಮತ್ತ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ