ಇದ ಒಂದ ಇಪ್ಪತ್ತ ವರ್ಷದ ಹಿಂದಿನ ಮಾತ, ನಾ KEC ಒಳಗ ಕೆಲಸಾ ಮಾಡ್ತಿರಬೇಕಾರ ನಮ್ಮ ಜೊತಿ ಬಸು ಅಂತ ಒಬ್ಬೊಂವ ಕೆಲಸಾ ಮಾಡ್ತಿದ್ದಾ. ಅವಂಗ ಆವಾಗ ಮೂವತ್ತ-ಮೂವತ್ತೇರಡ ವರ್ಷ ಆಗಿತ್ತು, ಇನ್ನೂ ಲಗ್ನ ಆಗಿದ್ದಿಲ್ಲಾ. ಹಂಗ ಆವಾಗೇನ ಕನ್ಯಾದ್ದ ಶಾರ್ಟೇಜ್ ಇರಲಿಲ್ಲಾ, ಮ್ಯಾಲೆ ಅವಂದ kec ನೌಕರಿ ಬ್ಯಾರೆ, ಹುಡಗ ನೋಡಿದರ ಸರ್ವಗುಣ ಸಂಪನ್ನ ಇದ್ದ ಹಿಂಗಾಗಿ ಅವಂಗೇನ ಕರದ ಒಂದ ಬಿಟ್ಟ ಎರಡ ಕನ್ಯಾ ಕೊಡ್ತಿದ್ದರು ಆ ಮಾತ ಬ್ಯಾರೆ.
ಆದ್ರೂ ಅವಂದ ಯಾಕ ಲಗ್ನ ಆಗಿದ್ದಿಲ್ಲಾಂದರ ಅಂವಾ ನೋಡಿದ್ದ ಎಲ್ಲಾ ಕನ್ಯಾಕ್ಕೂ ಒಂದಿಲ್ಲಾ ಒಂದ ಹೆಸರ ಇಟ್ಟ ರಿಜೆಕ್ಟ ಮಾಡ್ತಿದ್ದಾ. ಅಂವಾ ತಾ ಮಾಡ್ಕೊಳೊ ಕನ್ಯಾಕ್ಕ ಒಂದ standard ಇರಬೇಕು, ಮುಂದ ಸಂಸಾರ ಸುಖವಾಗಿ ಸಾಗಬೇಕು ಅಂದರ ಅದಕ್ಕೂ ಒಂದ ಸ್ಟ್ಯಾಂಡರ್ಡ ಇರಬೇಕು, ಫ್ಯಾಮಿಲಿ ಅನ್ನೋದ ISO- 9001 family ಆಗಬೇಕು ಅಂತಿದ್ದಾ.
ಆವಾಗ ನಾವೇಲ್ಲಾ ಕನ್ಯಾ ಸಿಗೋದ ಒಂದ standard ಅನ್ಕೊಂಡಿದ್ದರ ಇಂವಾ ISO standard ಕನ್ಯಾ ಹುಡಕತಿದ್ದಾ.
ಹಿಂಗ ಎಲ್ಲಾದಕ್ಕೂ ಇಂವಾ standard ಅಂತ ಯಾಕ ಬಡ್ಕೋತಿದ್ದಾ ಅಂದರ ಅಂವಾ ನಮ್ಮ ಕಂಪನಿ ಒಳಗ M.R ಅಂದರ ಮ್ಯಾನೇಜಮೆಂಟ್ ರೆಪ್ರೆಸೆಂಟೇಟಿವ್ ಅಂತ ಕೆಲಸಾ ಮಾಡ್ತಿದ್ದಾ. ಪ್ರತಿ ISO ಕಂಪನಿ ಒಳಗ M.R. ಅಂತ ಇರ್ತಾರ, ಅವರ ಆ ಕಂಪನಿದ ಎಲ್ಲಾ ISO activity ನೋಡ್ಕೋತಾರ. ಹಂಗ ಇಂವಾ ನಮ್ಮ ಕಂಪನಿಗೆ ಇದ್ದಾ. ಹಿಂಗಾಗಿ ಕಂಪನ್ಯಾಗಿನ ಎಲ್ಲಾ ISO standard ತಲ್ಯಾಗ ತುಂಬಕೊಂಡ ಅವನ್ನ ಜೀವನದಾಗೂ ಅಳವಡಸಿಕೊಂಡ ಎಲ್ಲಾದಕ್ಕೂ ಸ್ಟ್ಯಾಂಡರ್ಡ್ ಸ್ಟ್ಯಾಂಡರ್ಡ ಅಂತಿದ್ದಾ.
ಅಲ್ಲಾ ಕಂಪನಿ ಕೆಲಸಾ ಮನಸಿಗೆ ಹಚಗೊಂಡ ಮಾಡ ಅಂತ ವಿಜಯ ಕಿರ್ಲೋಸ್ಕರವರ ಹೇಳಿದ್ದನ್ನ ಇಂವಾ ಭಾಳ ಸಿರಿಯಸ್ ತೊಗೊಂಡಿದ್ದಾ.
ಇನ್ನ ಇಂವಾ ತಾ ನೋಡೊ ಪ್ರತಿ ಕನ್ಯಾಕ್ಕೂ ISO standard apply ಮಾಡಿ ನೋಡಿ ಕಡಿಕೆ ಎಲ್ಲಾ ಕನ್ಯಾದರಾಗೂ ಒಂದಿಲ್ಲಾ ಒಂದ non-conformance-ನ್ಯೂನ್ಯತೆ, ಹುಡಕಿ ರಿಜೆಕ್ಟ ಮಾಡಿ ಬಂದ ಬಿಡ್ತಿದ್ದಾ.
ನಾ ಅವಂಗ ’ISO ಇರೋದ systemಗೆ..productಗೆ ಅಲ್ಲಾ, ನಿಂಗ ಈಗ ಬೇಕಾಗಿರೋದ ಕನ್ಯಾ, ಅದ product. ಅದಕ್ಕ ನೀ ISI ಮಾರ್ಕ ಇದ್ದದ್ದ ಕನ್ಯಾ ನೋಡ’ ಅಂತಿದ್ದೆ.
ಅಂವಾ ’ನೀ..ಬಾಯಿ ಮುಚ್ಚ ಮಗನ ನಿಂಗೇನ ತಲಿ standard ಗೊತ್ತಾಗ್ತದ’ ಅಂತ ನಂಗ ಬೈತಿದ್ದಾ.
ಇಂವಾ ಹಿಂಗ ಎಲ್ಲಾದಕ್ಕೂ ISO standard ಹಚ್ಚೋದ ನೋಡಿ ಅವರ ಮನಿ top management ಅಂದರ ಅವರವ್ವಾ ಅಪ್ಪಗ ಸಾಕ ಸಾಕಾಗಿ ಹೋಗಿತ್ತ. ಅವರ ನೋಡಿದರ ಬರೆ resource management ಛಲೋ ಇದ್ದ ಮನಿ ಕನ್ಯಾ ಅಂದರ ಎಕರೆ ಗಟ್ಟಲೇ ಹೊಲಾ, ಸ್ವಂತ ಮನಿ, ಕ್ಯಾಶ್, ಬಂಗಾರ ಕೊಡೊ ಮನಿ ಕನ್ಯಾ ಹುಡ್ಕೋರ, ಈ ಮಗಾ ಆ ಕನ್ಯಾಕ್ಕ ಏನರ ಕಾರಣಾ ಹೇಳಿ ರಿಜೆಕ್ಟ ಮಾಡಿ ಬಿಡ್ತಿದ್ದಾ. ಪಾಪ ಅವರ ಎಷ್ಟ deviation ಮ್ಯಾಲೆ accept ಮಾಡ್ಕೊಪಾ, ಕನ್ಯಾ ಅಡ್ಡಿಯಿಲ್ಲಾ, ರಗಡ ಕೊಡೊ ಹಂಗ ಇದ್ದಾರ ಅಂತ ಬಡ್ಕೊಂಡರು
’ಏ ಜೀವನದಾಗ customer satisfaction important. ಲಗ್ನಾ ಮಾಡ್ಕೊಳೊಂವಾ ನಾ, ನಂಗ ಪಸಂದ ಬಂದರ ಇಷ್ಟ ಫೈನಲ್’ ಅಂತ ಅವರಿಗೆ ಜೋರ ಮಾಡ್ತಿದ್ದಾ.
ಪಾಪ ಅವರವ್ವ ಅಂತೂ ಇಂವಾ ಹಿಂಗ ಮಾಡೋದಕ್ಕ ಮಾನಸಿಕ ಆಗಿ ಬಿಟ್ಟಿದ್ಲು. ಅಕಿ ಹಣೇಬರಹದಾಗ ಪ್ರತಿ ಕನ್ಯಾದ್ದ ಗಲ್ಲಕ್ಕ (ಹಳದಿ) ಅರಷಿಣ ಹಚ್ಚಿ, ಹಣಿಗೆ ಕುಂಕಮ (ಕೆಂಪ) ಹಚ್ಚಿ ರಿಜೆಕ್ಟ ಮಾಡಿ ಬರೋದ ಆತ ಹೊರತೂ ಒಂದ ಕನ್ಯಾಕ್ಕೂ ಅಕಿ ಏನ ಹಸರ ಚಂಪರ್ ಪೀಸ್ ಉಡಿ ತುಂಬಿ ಕನ್ಯಾ ಪಾಸ ಅನಲಿಲ್ಲಾ.
ಐ.ಎಸ್.ಓ ಪ್ರಕಾರ ಹಳದಿ ಬಣ್ಣಾ ಹಚ್ಚಿದರ ಪ್ರಡಕ್ಟ ಒಳಗ ಡೆಫೆಕ್ಟ ಅದ ಅಂದರ NC product ಅಂತ ಅರ್ಥ, ಕೆಂಪ ಬಣ್ಣಾ ಹಚ್ಚಿ ಬಿಟ್ಟರಂತೂ ಪ್ರಡಕ್ಟ ರಿಜೆಕ್ಟ ಆದಂಗ.ಇನ್ನ ಹಸರ ಬಣ್ಣ ಹಚ್ಚಿದರ ಇಷ್ಟ ಓ.ಕೆ ಪ್ರಡಕ್ಟ.
ಇನ್ನ ಇಂವಾ ಕನ್ಯಾ ನೋಡಲಿಕ್ಕೆ ಹೋದಾಗ ಆ ಕನ್ಯಾಕ್ಕ
’ನಿಂಗ six sigma ಗೊತ್ತೇನ?’ ಅಂತ ಕೇಳೊಂವಾ. ಪಾಪ ಆ ಕನ್ಯಾದವರ ’ಏ ಇಂವಾ ಏನ ಅಸಂಯ್ಯ ಮಾತಾಡ್ತಾನ’ ಅನ್ನೋರ. ಅಲ್ಲಾ ಅವರ ಇಂವಾ six sigma ಅಂತ ಕೇಳಿದ್ದನ್ನ sex related question ಅಂತ ತಿಳ್ಕೊತಿದ್ರು.
ಇಂವಾ ಮತ್ತ ಅವರಿಗೆ six sigma ಅಂದರ continuous improvement methodology for eliminating defects in a product, process or service ಅಂತ ತಿಳಿಸಿ ಹೇಳೊಂವಾ. ಅಲ್ಲಾ ಕನ್ಯಾ ಹೂಂ ಅಂದರ ಹೌದಲ್ಲ ಮುಂದ ಪ್ರಡಕ್ಟ ಒಳಗ ಇಂಪ್ರೂವಮೆಂಟ್? ಹಿಂಗ ಡಿಫೆಕ್ಟ ಹುಡಕಿ ಕನ್ಯಾನ್ನ ಎಲಿಮಿನೇಟ್ ಮಾಡ್ಕೋತ ಹೋದರ ಹೆಂಗ?
ಆ ಕನ್ಯಾದ ಮನಿಯವರಿಗೆ ಮನಿ ಸ್ವಚ್ಛ ಇಡಲಿಕ್ಕೆ
’ನಿಮಗ ಜಪನೀಸ್ 5S Concept of house keeping ಬರ್ತದೋ ಇಲ್ಲೊ’ ಅಂತ ಕೇಳ್ತಿದ್ದಾ. ಅಲ್ಲಾ ಹಂಗ ಆವಾಗಿನ್ನೂ ’ಸ್ವಚ್ಛ ಭಾರತ’ ಕನ್ಸೆಪ್ಟ ಇದ್ದಿದ್ದಿಲ್ಲಾ. ಇನ್ನ ಇಂವಾ ಹಿಂಗ ಕೇಳಿದ್ದಕ್ಕ ಅವರು
’ಯಾ ಸುಡಗಾಡ ಕನ್ಸೆಪ್ಟ ಗೊತ್ತಿಲ್ಲಪಾ, ನಾವ ದಿವಸಾ ಮುಂಜಾನೆ ಎದ್ದ ಕಸಾ ಹೊಡದ, ಶಗಣಿಲೇ ಸಾರಿಸಿ ಥಳಿ -ರಂಗೋಲಿ ಹಾಕ್ತೇವಿ..ನಮ್ಮ ಮಗಳಿಗೂ ಅಷ್ಟ ಕಲಿಸೇವಿ’ ಅಂತ ಹೇಳೊರ.
ಕನ್ಯಾದವರಿಗೆ family flow chart ತೊರಸ್ರಿ, ’ಫ್ಯಾಮಿಲಿ ಒಳಗ ‘an ISO-9001ಫ್ಯಾಮಿಲಿಗತೆ plan ಮಾಡಬೇಕು ’ಅಂತಿದ್ದಾ. ಅವರು ಇಂವಾ ಹಿಂಗೇಲ್ಲಾ ಮಾತಾಡೋದ ಕೇಳಿ
’ಇಂವಾ ಈಗ ಜಸ್ಟ ಕನ್ಯಾ ನೋಡಲಿಕ್ಕೆ ಬಂದಾನ ಈಗ family planning ಬಗ್ಗೆ ಮಾತಾಡ್ತಾನಲಾ’ ಅಂತ ಅನ್ನೋರ. ಅಲ್ಲಾ, ಅವರು an ISO- 9001 ಫ್ಯಾಮಿಲಿ ಅಂದರ ಅದು ಒಂದ ಫ್ಯಾಮಿಲಿ ಪ್ಲ್ಯಾನಿಂಗ ಮೆಥಡ ಅಂತ ತಿಳ್ಕೊತಿದ್ದರೋ ಏನೋ?
ಹಿಂಗ ಅಂವಾ ಕನ್ಯಾ ನೋಡಲಿಕ್ಕೆ ಹೋದಲ್ಲೇಲ್ಲಾ ಹುಚ್ಚುಚಾಕಾರ ಕನ್ಯಾದ್ದು, ಕನ್ಯಾದವರದು audit ಮಾಡಿ ಮಾಡಿ ಕಡಿಕೆ ಕನ್ಯಾ reject ಮಾಡಿ ಬರ್ತಿದ್ದಾ.
ಇಂವಾ ಹಿಂಗೆಲ್ಲಾ ಮಾಡೋದಕ್ಕ ಅವರ ಬಳಗದವರೇಲ್ಲಾ ಇಂವಾ ಖರೇನ M.R ( mentally retarded) ಇದ್ದಾನ ಅಂತಿದ್ದರು.
ಕಡಿಕೆ ಒಂದ ದಿವಸ ಅವರವ್ವ ತಲಿ ಕೆಟ್ಟ ಇದ ಹಿಂಗಾದರ ಬಗಿಹರೆಯಂಗಿಲ್ಲ ತಡಿ ಅಂತ sslc ಪಾಸ್ ಆಗಿದ್ದ ತನ್ನ ತಮ್ಮನ ಮಗಳಿಗೆ ಹಸರ ಸೀರಿ, ಬಳಿ ಉಡಿ ತುಂಬಿ ಬಂದ, ಇದು prototype product, you have to accept this ಅಂತ ಇವನ ಕೊಳ್ಳಿಗೆ ಗಂಟ ಹಾಕಿ ಬಿಟ್ಟಳು.
ಇಂವಾ ಇದ top management decision ಇನ್ನ ಏನ್ಮಾಡಲಿಕ್ಕೆ ಬರಂಗಿಲ್ಲಾಂತ ತಾನ ತನ್ನ standard amendment ಮಾಡ್ಕೊಂಡ, ISO standard ಹೆಂಡ್ತಿ ಅನ್ನೋದ ತಲ್ಯಾಗಿಂದ ತಗದ concession – deviation ಮ್ಯಾಲೆ ಬಾಯಿ ಮುಚಗೊಂಡ accept ಮಾಡ್ಕೊಂಡ ಕಟಗೊಂಡಾ.
ಆ ಮಾತಿಗೆ ಈಗ ಇಪ್ಪತ್ತ ವರ್ಷಾತ. ಅವಂಗ ಆ ಹುಡಗಿನ ಕಟಗೊಂಡ ಮ್ಯಾಲೆ ಮೂರ product realize ಆಗ್ಯಾವ, ಒಂದ ಗಂಡು, ಎರಡ ಹೆಣ್ಣು. ಅವು ಇವತ್ತ ಅವನ an ISO 9001familyದ human resources,
ಈಗ ನಾ ಏನರ ’ಏನಪಾ… ಏನಂತದ ನಿನ್ನ ISO standard family’ಅಂತ ಕೇಳಿದರ..ನಕ್ಕ
’ಮಗನ ನಂದ ISO standarad family ಇಲ್ಲದಿರಬಹುದು ಆದರ ನಂದ satisfied family’ ಅಂತಾನ.
ಹಂಗ ಅಂವಾ ಇವತ್ತ ಬೆಂಗಳೂರಾಗ ಒಂದ ISO certification ಮಾಡೋ ಕಂಪನಿನ ಸೇರಿ team leader ಆಗಿ ಅಗದಿ standardಲೇ ಬದಕಲಿಕತ್ತಾನ ಬಿಡ್ರಿ.
ಲೈಫ್ ಒಳಗ, ವೈಫ್ ಒಳಗ standard ಇಷ್ಟ ಇಂಪಾರ್ಟೆಂಟ್ ಅಲ್ಲಾ satisfaction important.
ನಮ್ಮ ಜೀವನಕ್ಕ ಒಂದ system, standard, policy ಇರಬೇಕ ಖರೆ ಆದರ ಅದರ ಹಿಂದ ಬಿದ್ದ ಮನಸ್ಸಿನ ನೆಮ್ಮದಿ ಹಾಳ ಮಾಡ್ಕೊಬಾರದು.
ಸಾದ್ಯ ಆದಷ್ಟ ಜೀವನದಾಗ preventive action ತೊಗೊಬೇಕೂ ಅದಕೂ ಮೀರಿ ಏನರ ತಪ್ಪು ಒಪ್ಪು ಆದರ
’ಎಲ್ಲಾ ಆ ದೇವರ ಇಚ್ಛೆ’ ಅಂತ corrective action ತೊಗೊಂಡ ಮುಂದ ದಾಟಬೇಕು.
ಅಲ್ಲಾ, ಎಲ್ಲಾ ಬಿಟ್ಟ ಇವತ್ತ್ಯಾಕ ಇಷ್ಟ ISO, Standard, System ಅಂತ ತಲಿ ತಿಂದೆ ಅಂದರ ಇವತ್ತ, october 14, world standard day. ಹಿಂಗಾಗಿ ನಿಮ್ಮೇಲ್ಲರ ಜೀವನ standard and satisfied ಆಗಲಿ ಅಂತ ನಮ್ಮೇಲ್ಲರ certifying agency ಆದಂಥ ಆ ದೇವರಲ್ಲಿ ಪ್ರಾರ್ಥಿಸಿ ನನ್ನ ನಾಲ್ಕ ಮಾತ ಮುಗಸ್ತೇನಿ.
ಹಂಗ ನೋಡಿದರ ನಾ ಹುಟ್ಟಿದ್ದ ಅಕ್ಟೋಬರ13ಕ್ಕ, ಅಂದರ ನಿನ್ನೆ. ಮತ್ತ ನಾ oct 13ಕ್ಕ ಹುಟ್ಟಿದ್ದಕ್ಕ ಈ ಜಗತ್ತೀಗೆ ಒಂದ standard ಬಂತು ಹಿಂಗಾಗಿ oct 14 ರಿಂದ world standard day ಶುರು ಮಾಡಿದ್ರು ಅಂತ ಏನ ಅಲ್ಲ ಮತ್ತ.
ಛಲೋ ಡಾಕ್ಯುಮೆಂಟೆಶನ್ ಮಾಡೀರಿ, ಆಡಿಟ್ ರಿಪೋರ್ಟ್ ಕಮ್ಫರ್ಮೇಟೆಡ್ ವಿದ್ ವರ್ಲ್ಡ್ ಫ್ಯಾಮಿಲೀ ಸ್ಟ್ಯಾಂಡರ್ಡ್ಸ ಒರ್ಗನೈಸೇಶನ್👍👏👌🙏
ನಮಸ್ಕಾರ್ರೀ ಸಾಹೇಬ್ರ. ಅಗ್ದೀ ಛೊಲೋ ಅದ ನಿಮ್ಮ ಐ ಎಸ್ ಒ ಲೆವೆಲ್ ನಗಿ ಬರಹ. ನಗಲಿಕ್ಕೂ ಸ್ಟ್ಯಾಂಡರ್ಡ್ ಅದನೋ ಏನೋ!! ಹೊರಗ ಬರ್ಲಿ ನಿಮ್ಮ ಭರಪೂರ ಸರಕು.