ಇದ ಪ್ರಹಸನ ಅಲ್ಲಾ, ಪ್ರವಚನಾ ಅಂತ ನೀವು ತಿಳ್ಕೊಂಡರು ತಪ್ಪಿಲ್ಲಾ ಆದರ ಈ ಪ್ರವಚನದಿಂದ ನಾಲ್ಕ ಮಂದಿ ಹುಡುಗರು ಉದ್ಧಾರ ಆದರ ಆಗಲಿ ಅಂತ ಬರದಿದ್ದ.
ಹೆಂಗ ಜೀವನದಾಗ ಬಾಲ್ಯ, ಪ್ರೌಡ, ಯೌವ್ವನ ಮತ್ತ ವೃದ್ದಾಪ್ಯ ಅಂತ ನಾಲ್ಕ ಘಟ್ಟ ಇರ್ತಾವ ಹಂಗ ಸಂಸಾರದಾಗನೂ ನನ್ನ ಪ್ರಕಾರ ನಾಲ್ಕ ಘಟ್ಟ ಇರ್ತಾವ.
ಒಂದನೇದ ಕನ್ಯಾ ಫಿಕ್ಸ ಆಗಿ ಮದ್ವಿ ಆಗೋ ತನಕ ಇರೋದ. ಒಂಥರಾ ಸಂಸಾರದ ಬಾಲ್ಯ, ಮಂಗ್ಯಾನಾಟ ಮಾಡೋ ಘಟ್ಟ.
ಇನ್ನ ಎರಡನೇದ ಹನಿಮೂನ ಮುಗಿಸಿಕೊಂಡ ಬಂದ ಒಂದನೇದ ಹಡೆಯೋತನಕ ಇರೋದ. ಸಂಸಾರದ ಪ್ರೌಡಾವಸ್ಥೆ.
ಮೂರನೇದ ಎರಡನೇದ ಹಡದ ಮ್ಯಾಲಿಂದ ಘಟ್ಟ….
ಇನ್ನ ಉಳದಿದ್ದ ನಾಲ್ಕನೇದ, ಎದಿ ಉದ್ದ ಮಕ್ಕಳಾಗಿ, ಮನ್ಯಾಗ ಏನೂ ಕಿಮ್ಮತ್ತ ಇಲ್ಲದ ಹೆಂಡ್ತಿ ಮಕ್ಕಳ ಕಡೆ ಮಾತ ಮಾತಿಗೆ ಛೀ..ಥೂ..ಅನಿಸಿಗೋತ ನಾಮ ಕೇ ವಾಸ್ತೆ ರೇಶನ್ ಕಾರ್ಡನಾಗ ಇನ್ನೂ ಇದ್ದೇವಿ ಅಂತ ಜೀವನಾ ದುಗಿಸಿಕೊಂಡ ಹೋಗೊ ಘಟ್ಟ. ಅದ ಸಂಸಾರದ ವೃದ್ದಾಪ್ಯ.
ಹಂಗ ನಾ ಈಗ ಮೂರನೇ ಘಟ್ಟ ಮುಟ್ಟೇನಿ ಇನ್ನೇನ ಇವತ್ತಿಲ್ಲಾ ನಾಳೆ ನಾಲ್ಕನೇ ಘಟ್ಟಕ್ಕ ಹೋಗ್ತೇನಿ.
ಸಂಸಾರದ ಒಂದನೇ ಘಟ್ಟ, ನಾವ ಯಾವಾಗ ನಾಲ್ಕ ಕನ್ಯಾ ನೋಡಿ ಚೀಟಿ ಎತ್ತಿ ಒಂದ ಫೈನಲ ಮಾಡ್ತೇವಿ ಆವಾಗಿಂದ ಶುರು ಆಗ್ತದ. ಯಾರರ ಲವ್ ಮಾಡಿ ಲಗ್ನಾ ಮಾಡ್ಕೊಂಡರ ಅವರಿಗೆ ಲಗೂನ ಶುರು ಆಗ್ತದ ಆ ಮಾತ ಬ್ಯಾರೆ.
ಇನ್ನ ನನ್ನ ಬಗ್ಗೆ ಹೇಳ ಬೇಕಂದರ ನಂದಂತೂ ಲವ್ ಮ್ಯಾರೇಜ್ ಅಲ್ಲಾ, ನಂಗ ಲವ್ ಮಾಡೋ ಕ್ಯಾಪ್ಯಾಸಿಟಿನೂ ಇರಲಿಲ್ಲಾ ಪರ್ಸಾನಲಿಟಿನೂ ಇರಲಿಲ್ಲಾ. ಮ್ಯಾಲೆ ನಾ ರೊಕ್ಕ, ಗಾಡಿ ಇದ್ದ ಮನಷ್ಯಾನೂ ಆಗಿರಲಿಲ್ಲಾ ಹಿಂಗಾಗಿ ಯಾ ಹುಡಿಗ್ಯಾರು ನಂಗ ಬೀಳ್ತಿದ್ದಿಲ್ಲಾ. ಹಂಗ ಕಾಲೇಜನಾಗ ಶಾಣ್ಯಾ ಇದ್ದೆ ಅಂತ ಹುಡಗ್ಯಾರ ದೋಸ್ತಿ ಇತ್ತ ಖರೆ ಆದರ ಅವರ ನನ್ನ ನೋಟ್ಸಗೆ ಫೀದಾ ಆಗ್ತಿದ್ದರ ಹೊರತು ನನ್ನ ನೋಟಕ್ಕ ಅಂತೂ ಅಲ್ಲಾ.
ಅಲ್ಲಾ ಹಂಗ ಯಾ ಹುಡಗಿನೂ ಮುಂದ ಆಗೋ ಗಂಡಾ ಭಾಳ ಶಾಣ್ಯಾ ಇರಬೇಕು ಅಂತ ಬಯಸಂಗಿಲ್ಲ ಬಿಡ್ರಿ. ಹಂಗ ಅಪ್ಪಿ ತಪ್ಪಿ ನನ್ನ ಹೆಂಡ್ತಿಗೆ ಸಿಕ್ಕಂಗ ಭಾಳ ಶಾಣ್ಯಾ ಇದ್ದ ಗಂಡ ಸಿಕ್ಕರು ಅವಂಗ ಅಕಿ ಮುಂದ ಮೂರ್ಖ ಮಾಡಿ ಮಾಡ್ತಾಳ ಆ ಮಾತ ಬ್ಯಾರೆ.
ಇನ್ನ ಆ ಫಿಕ್ಸ್ ಆಗಿದ್ದ ಕನ್ಯಾದ ಜೊಡಿ ಲಗ್ನಕಿಂತ ಮೊದ್ಲ ಸಣ್ಣ ಹುಡಗರಗತೆ ಕೈ ಕೈ ಹಿಡ್ಕೊಂಡ ಓಡ್ಯಾಡ್ಕೋತ ಏನ ಮಂಗ್ಯಾನಾಟ ಮಾಡಲಿಕ್ಕೆ ಶುರು ಮಾಡ್ತೇವಿ ಅಲಾ ಅದ ಒಂಥರಾ ಸಂಸಾರದ ಬಾಲ್ಯಾವಸ್ಥೆ. ಆವಾಗೇನ ಜೀವನದಾಗ ಹುಡಗ್ಯಾರನ ಕಂಡಿದ್ವೋ ಇಲ್ಲೊ ಅನ್ನೋರಗತೆ ಮಾಡಿ, ಅಕಿನ್ನ ಭೆಟ್ಟಿ ಆಗಲಿಕ್ಕೆ ಸಾಯೋದೇನ, ತಾಸ ಗಟ್ಟಲೇ ಫೋನನಾಗ ಮಾತಾಡೋದೇನ, ಇದ್ದದ್ದು ಇಲ್ಲದ್ದೂ ಅಕಿಗೆ ಹೇಳೋದೇನ?..ಅಯ್ಯಯ್ಯ..ಅದನ್ನೇಲ್ಲಾ ಈಗ ನೆನಸಿಗೊಂಡ ಬಿಟ್ಟರ ’ಹಿಂತಾಕಿ ಸಂಬಂಧ ಆವಾಗ ಏನ ಹುಚ್ಚರಂಗ ಮಾಡ್ತಿದ್ವಿಪಾ’ ಅಂತ ಈಗ ಅನಸ್ತದ.
ಇನ್ನ ಇದರ ಬಗ್ಗೆ ನನ್ನ ಅನುಭವ ಹೇಳಬೇಕಂದರ ಆವಾಗ ನನ್ನ ಕಡೆ ಮೋಬೈಲ ಇರಲಿಲ್ಲಾ ಆದರ ಕನ್ಯಾ ಲೋಕಲ್ ಇತ್ತ ಹಿಂಗಾಗಿ ರೋಮಿಂಗ್ ಚಾರ್ಜಿಸ್ ಇರಲಿಲ್ಲಾ. ವಾರಕ್ಕ ನಾಲ್ಕ ಸರತೆ ಸಿ.ಬಿ.ಟಿ ಒಳಗ ನೇಕಾರ ನಗರ ಬಸ್ ಸ್ಟಾಪ್ ಮುಂದ ಅಕಿ ಸಂಬಂಧ ಕಾದ, ಅಕಿ ಬಸ್ಸಿಗೆ ಹೋಗ್ತೇನಿ ಅಂದರ ಡಬಲ್ ರೈಡಿಂಗ ಬರದಿದ್ದರು ನಾ ಬಿಡ್ತೇನಿ ಬಾ ಅಂತ ಬೈಕ ಮ್ಯಾಲೆ ಕೂಡಿಸಿಕೊಂಡ ಹೋಗೊದು, ಅದರಾಗ ನನಗ ಬೈಕ ಸರಿ ಹೊಡಿಲಿಕ್ಕೆ ಬ್ಯಾರೆ ಬರ್ತಿದ್ದಿಲ್ಲಾ, ಹಗಲಗಲಾ ಬ್ರೇಕ್ ಹಾಕೋಂವಾ, ಅಕಿ ಡಗ್ಗ ಡಗ್ಗ ಅಂತ ನಾ ಬ್ರೇಕ್ ಹಾಕಿದಾಗೊಮ್ಮೆ ನನ್ನ ಬೆನ್ನಿಗೆ ಡಿಕ್ಕಿ ಹೊಡಿಯೋಕಿ, ಕಡಿಕೆ ಅಕಿ ತಲಿ ಕೆಟ್ಟ ಇಳದ ಬ್ಯಾಡಾ ಆಟೋದಾಗ ಹೋಗೊಣ ನೀವು ಗಾಡಿ ಹೊಡಿಯೋದ ಕಡಮಿ ಬ್ರೇಕ್ ಹಾಕೋದ ಜಾಸ್ತಿ ಎಲ್ಲೇರ ನಿಮ್ಮ ಬೆನ್ನ ನೆಗ್ಗಿ ನುಗ್ಗಿಕಾಯಿ ಆಗಿ-ಗಿಗಿತ್ತ ಅಂತ ಇಳದ ಬಿಡ್ತಿದ್ದಳು. ಅದಕ್ಕ ನಾ ಹೇಳಿದ್ದ ಇದ ಮಂಗ್ಯಾನಾಟ ಮಾಡೋ ಘಟ್ಟ ಅಂತ.
ಹಂಗ ಈ ಮದ್ವಿಕಿಂತ ಮೊದ್ಲ ಏನ ನಾವು ಹುಡಗಿ ಕಟಗೊಂಡ ಅಡ್ಡಾಡ್ತೇವಿ ಅಲಾ, ಇದ ಮುಂದಿನ ಸಂಸಾರಕ್ಕ ಫೌಂಡೇಶೇನ ಇದ್ದಂಗ, ಇಲ್ಲೆ ನಾವ ಹಾದಿ ತಪ್ಪಿದ್ವಿ ಅಂದರ ಮುಂದ ಸಂಸಾರ ಹಳ್ಳಾ ಹಿಡಿತಂದಂಗ. ಏನರ ಪ್ರಿವೆಂಟಿವ್ ಮೇಜರ್ಸ್ ತೊಗೊಬೇಕು ಅಂದರ ಅದನ್ನ ಇದ ಪಿರಿಡ ಒಳಗ ತೊಗೊಬೇಕ. ಅಲ್ಲಾ prevention is better than abortion ಅಂತಾರಲಾ ಅದನ್ನ ಈ ಪಿರಿಡ್ ಒಳಗ ತೊಗೊಬೇಕ. ನಾ ಹೇಳಿದ್ದನ್ನ ನೀವು literal sense ಒಳಗ ತೊಗೊಬ್ಯಾಡ್ರಿ..ನಾ ಹೇಳೋದೇನ ಅಂದರ ನಾವು ಈ ಪಿರಿಡ್ ಒಳಗ ನಮ್ಮ ಜುಟ್ಲಾ ಹೆಂಡ್ತಿ ಆಗೋಕಿ ಕೈಯಾಗ ಕೊಟ್ಟವಿ ಅಂದರ ಸತ್ತಂಗ. ಮುಂದ ಸಂಸಾರ ಶುರು ಆಗಿ ಇಪ್ಪತ್ತ ವರ್ಷ ಆದಮ್ಯಾಲೆ ತಲ್ಯಾಗ ಕೂದ್ಲ ಹೋದರೂ ಜುಟ್ಲ ಮಾತ್ರ ಹೆಂಡ್ತಿ ಕೈಯಾಗ ಇರ್ತದ. ನನ್ನ ನೋಡ್ರಿ ಈಗ ತಲ್ಯಾಗ ಕೂದ್ಲಿಲ್ಲಾ ಆದರೂ ಜುಟ್ಲ ಅಕಿ ಕೈಯಾಗ ಅದ ಇಲ್ಲ? ಇದ ಹಿಂಗ್ಯಾಕ ಆಗಿದ್ದಂದರ ಆವಾಗ ಏನ ಎಂಗೇಜಮೆಂಟ್ ಆದ ಹೊಸ್ತಾಗಿ ‘ ಕನ್ಯಾ ಕಂಡೇನೋ ಇಲ್ಲೊ’ ಅನ್ನೊರಂಗ ತಲಿ ಮ್ಯಾಲೆ ಕೂಡಿಸ್ಗೊಂಡ ಅಡ್ಡಾಡಿದ್ದರ ತಪ್ಪ.
ಇನ್ನ ಯಾವಾಗ ಮದ್ವಿ ಆಗಿ ಹನಿಮೂನಗೇ ಹೋಗಿ ಬಂದ ಸಂಸಾರದ ನೆಟ್ ಪ್ರ್ಯಾಕ್ಟೀಸ್ ಶುರು ಮಾಡ್ತೇವಿ ಅಲಾ ಅದ ಸಂಸಾರದ ಎರಡನೇ ಘಟ್ಟದ ಪ್ರಾರಂಭ. ಇದ ಒಂಥರಾ ಸಂಸಾರದ ಪ್ರೌಡಾವಸ್ಥೆ. ಇದ ಒಂದನೇದ ಹಡಿಯೋ ತನಕ ಇಷ್ಟ ಪೀಕನಾಗ ಇರ್ತದ. ಒಂದ ಹಡದ ಕೂಡಲೇ ಕಡಮಿ ಆಕ್ಕೋತ ಹೋಗಿ ಮುಂದ ಎರಡನೇದ ಹಡದ ಮ್ಯಾಲೆ ಮುಗದ ಹೋಗ್ತದ. ಅದಕ್ಕ ಒಂದಿಷ್ಟ ಮಂದಿ ಶಾಣ್ಯಾರ ಒಂದನೇದ ಹಡಿಬೇಕಾರ ಲೇಟ್ ಮಾಡ್ತಾರ, ಇನ್ನ ಎರಡನೇದ ಅಂತೂ ಹತ್ತ ಸರತೆ ವಿಚಾರ ಮಾಡಿ ಮಾಡಿ ಹಡಿತಾರ. ಅಲ್ಲಾ ಎಲ್ಲಾರೂ ಯಾಕ ನನ್ನಂಗ ಎಂಟ ವರ್ಷದಾಗ ಅತ್ತಿ-ಮಾವಾ ಗಟ್ಟಿ ಇದ್ದಾರ ತಡಿ ಅವರ ಖರ್ಚಿನಾಗ ಎರಡು ಬಾಣಂತನ ಮುಗದ ಬಿಡ್ಲಿ ಅಂತ ಗಡಿ ಬಿಡಿ ಮಾಡ್ತಾರ ಬಿಡ್ರಿ.
ಇನ್ನ ಎರಡ ಹಡದ ಮ್ಯಾಲೆ ಏನ ಸಂಸಾರ ಸ್ಟಾರ್ಟ ಆಗ್ತದಲಾ ಅದ ನಿಜವಾದ ಸಂಸಾರ ಮತ್ತ ಅದ ಮೂರನೇ ಘಟ್ಟ. ಇದ ಒಂಥರಾ ಸಿರಿಯಸ್ ಪಿರಿಡ್. ಇಲ್ಲೇ ಗಂಡಗ ಏನೂ ಸ್ಕೋಪ ಇರಂಗಿಲ್ಲಾ. ಬರೇ ಹೆಂಡ್ತಿ ಮಕ್ಕಳದ ಆಟ, ಗಂಡಗ ಬರೇ ಡೋಂಬರಾಟ. ಇದ ಏನಿಲ್ಲಾಂದರೂ ಒಂದ ಹದಿನೈದ- ಇಪ್ಪತ್ತ ವರ್ಷ ಇರ್ತದ. ಮಕ್ಕಳ ನಮ್ಮ ಎತ್ತರಕ್ಕ ಬೆಳೆಯೋ ತನಕ ಇಷ್ಟ. ಮುಂದ ಗಂಡನ ಹಣೇಬರಹ ಮುಗಿತ, ಅಲ್ಲಿಗೆ ನಾಲ್ಕನೇ ಮತ್ತು ಕೊನೇಯ ಘಟ್ಟ ಶುರು. ಮುಂದ ಸಂಸಾರ ಅಂದ್ರ ಹೆಂಡ್ತಿ ಮಕ್ಕಳು ಇಷ್ಟ. ಅಲ್ಲಿಗೆ ಸುಖ ಸಂಸಾರದ ಕೊನೆಯ ದಿನಗಳು ಶುರು ಆದಂಗ. ಅಂದರ ಸಂಸಾರ ಮುಗಿತು ಸನ್ಯಾಸ ತೊಗೊಳಿಕ್ಕೆ ಅಡ್ಡಿಯಿಲ್ಲಾ ಅಂತಲ್ಲಾ….ಸಂಸಾರದಾಗಿನ ಸುಖಾ ಮುಗಿತು ಅಂತ ಅರ್ಥ ಇಷ್ಟ. ಮುಂದ ಗಂಡಾ ಅನ್ನೋ ಪ್ರಾಣಿ ಮನ್ಯಾಗ ಯಾವದರ ಒಂದ ಪ್ರಾಣಿ ಸಾಕಿ ಅದನ್ನ ಹೆಂಡ್ತಿ ಮಕ್ಕಳಗಿಂತಾ ಜಾಸ್ತಿ ಹಚಗೊಂಡ ಬದಕಬೇಕು.
ಹಿಂಗ ಸಂಸಾರದ ನಾಲ್ಕ ಘಟ್ಟದೊಳಗ ಈಗ ನಾ ಲಗಭಗ ಮೂರನೇ ಘಟ್ಟ ಮುಗಸಲಿಕ್ಕೆ ಬಂದೇನಿ. ನನ್ನ ಸುಖ ಸಂಸಾರದ ಕೊನೇಯ ದಿನಗಳು ಶುರು ಆಗ್ಯಾವ. ನನ್ನ ಅನುಭವದಿಂದ ಯಾರರ ನಾಲ್ಕ ಮಂದಿಗೆ ಹೆಲ್ಪ್ ಆಗತಿದ್ದರ ಆಗಲಿ, ಅವರ ಒಂದ ಸಲಾ ಬಿಟ್ಟ ಹತ್ತ ಸಲಾ ವಿಚಾರ ಮಾಡಿ precaution ತೊಗೊಂಡ ಲಗ್ನಾ ಮಾಡ್ಕೊಳ್ಳಿ ಅಂತ ಇಷ್ಟ ಬರಿಬೇಕಾತ.
ಅಲ್ಲಾ, ಎಲ್ಲಾ ಬಿಟ್ಟ ಇವತ್ಯಾಕ ಬರದೇ ಅಂದರ ಮೊನ್ನೆ ಅಂದರ ನವೆಂಬರ ೨೮ಕ್ಕ ನನ್ನ ಮದ್ವಿ ಆಗಿ ಹತ್ತೊಂಬತ್ತ ವರ್ಷ ಆತ. ಹಂಗ ಎಂಗೇಜಮೆಂಟ ಆಗಿದ್ದ ಫೇಬ್ರುವರಿ ಒಳಗ ’ವ್ಯಾಲೇಂಟೇನ್ಸ್ ಡೇ’ಕ್ಕ, ಮುಂದ ಮದ್ವಿ ಆಗಿದ್ದ ನವೆಂಬರ್ ೨೮ಕ್ಕ, ಒಂಬತ್ತೂವರಿ ತಿಂಗಳ ಗ್ಯಾಪ ಕೊಟ್ಟಿದ್ದರ ಬಿಡ್ರಿ. ಹಂಗ ವ್ಯಾಲೇಂಟೇನ್ಸ ಡೇ ಕ್ಕ ಮದ್ವಿ ಆದರ ಚಿಲ್ಡ್ರನ್ಸ್ ಡೇ (ನವೆಂಬರ್ ೧೪) ಕ್ಕ ಮಕ್ಕಳಾಗಬೇಕಂತ ಆದರ ನಂದ ಬರೇ ಎಂಗೇಜಮೆಂಟ್ ಆಗಿತ್ತ ಹಿಂಗಾಗಿ ಮಕ್ಕಳಾಗಲಿಲ್ಲಾ.