ಈಗ ಒಂದ ವಾರದ ಹಿಂದ ನಮ್ಮ ಮನಿಗೆ ರಾಯಚೂರಿಂದ ಜೋಶಿ ಅಂತ ಅಗದಿ ಕಟ್ಟಾ ರಾಯರ ಮಠದೊರ ದಂಪತ್ ಸಹಿತ ಬಂದಿದ್ದರು. ಏನೋ ಅನಾಯಸ ಹುಬ್ಬಳ್ಳಿಗೆ ಬಂದಿದ್ದರಂತ, ಅದರಾಗ ಎಷ್ಟೋ ವರ್ಷ ಆಗಿತ್ತ ನಮ್ಮನಿಗೆ ಬರಲಾರದ ಹಿಂಗಾಗಿ ಒಂದ ಸರತೆ ಹಣಿಕಿ ಹಾಕಿ ಹೋದರಾತು ಅಂತ ಬಂದಿದ್ರು.
ಅವರ ಒಳಗ ಬರೋದಕ್ಕ ಪಡಸಾಲ್ಯಾಗ ನನ್ನ ಹೆಂಡ್ತಿ ಒಂದ ದೊಡ್ಡ ಚಾಪಿ ಮ್ಯಾಲೆ ಉಳ್ಳಾಗಡ್ಡಿ ಒಣಗಸಲಿಕ್ಕೆ ಇಟ್ಟಿದ್ದ ಜೋಶಿಯವರ ಹೆಂಡ್ತಿ ಕಣ್ಣಿಗೆ ಬಿತ್ತ. ಅವರ ಹಿಂಗ ಚಾಪಿ ತುಂಬ ಉಳ್ಳಾಗಡ್ಡಿ ನೋಡಿ ಗಾಬರಿ ಆಗಿ
’ಅಯ್ಯ…ನಿಮ್ಮ ಮನ್ಯಾಗ ಉಳ್ಳಾಗಡ್ಡಿ ತಿಂತಿರಿ’ ಅಂತ ಕೇಳಿದಳು.
ಪಾಪ ನನ್ನ ಹೆಂಡ್ತಿಗೆ ಅವರ ಕೇಳಿದ್ದ ನೋಡಿ ಆಶ್ಚರ್ಯ ಆತ. ಇಕಿ ಉಳ್ಳಾಗಡ್ಡಿ ನೂರ ರೂಪಾಯಿ ಕೆ.ಜಿ ಆದರೂ ನಾವ ಉಳ್ಳಾಗಡ್ಡಿ ತಿಂತೇವಿ ಅಂತ ಅವರ ಗಾಬರಿ ಆಗ್ಯಾರ ಅಂತ ತಿಳ್ಕೊಂಡ ’ಅಯ್ಯ.. ನಮ್ಮ ಮನೆಯವರ ಮೊನ್ನೆ APMC ಇಂದ ಹೋಲಸೇಲನಾಗ ಎಪ್ಪತ್ತ ರೂಪಾಯಿಕ್ಕ ಕೆ.ಜಿ ಸಿಕ್ಕಾವ ಅಂತ ಒಂದ ಚೀಲ ಉಳ್ಳಾಗಡ್ಡಿ ತಂದಾರ, ಬೇಕಾರ ನೀವು ಒಂದ ನಾಲ್ಕ ಒಯ್ಯರಿ’ ಅಂದ ಬಿಟ್ಲು. ನನಗರ ಅವರೇಲ್ಲೆ ’ಹೂಂ’ ಅಂತಾರ ಅಂತ ಚಿಂತಿ ಹತ್ತಿತ್ತ ಅಷ್ಟರಾಗ ಜೋಶಿಯವರ
’ಇಲ್ಲವಾ ನಾವ ಉಳ್ಳಾಗಡ್ಡಿ. ಬಳ್ಳೊಳ್ಳಿ ಮುಟ್ಟಂಗಿಲ್ಲಾ….ನಾವ ಪಕ್ಕಾ ಮಡಿವಂತರು, ರಾಯರ ಮಠದವರು. ನಮಗೇಲ್ಲಾ ಉಳ್ಳಾಗಡ್ಡಿ-ಬಳ್ಳೊಳ್ಳಿ ಅಂದರ ಕಾಯಮ್ ಮೈಲಗಿ ಇದ್ದಂಗ’ ಅಂದರು
ಅದಕ್ಕ ನನ್ನ ಹೆಂಡ್ತಿ
’ಅಯ್ಯ…ನಮ್ಮ ಮನ್ಯಾಗ ಅವಿಲ್ಲಾ ಅಂದರ ನಡೆಯಂಗೇಲಾ. ನಮ್ಮ ಮನೆಯವರಿಗಂತೂ ತುಪ್ಪಾ ಅನ್ನಕ್ಕ ಬಳ್ಳೊಳ್ಳಿ ಚಟ್ನಿಪುಡಿನ ಬೇಕ ’ ಅಂತ ಅಂದ ಬಿಟ್ಲು.
ಪಾಪ ಜೋಶಿಯವರಿಗೆ ಏನ ಹೇಳಬೇಕ ತಿಳಿಲಿಲ್ಲಾ. ಯಾಕರ ಉಳ್ಳಾಗಡ್ಡಿ ಬಳ್ಳೊಳ್ಳಿ ತಿನ್ನೋರ ಮನಿಗೆ ಬಂದೆನೋ ಅಂತ ಅನಸ್ತ ಕಾಣ್ತದ. ಅನಿವಾರ್ಯ, ಬಂದ ಬಿಟ್ಟಿದ್ದರು. ನನ್ನ ಹೆಂಡ್ತಿ ಅಷ್ಟರಾಗ ಪಾನಕದ ಗ್ಲಾಸ ತೊಗೊಂಡ ಬಂದ್ಲು. ಜೋಶಿಯವರ ಒಂದ ಸರತೆ ನನ್ನ ಮಾರಿ ನೋಡಿ
’ತಂಗಿ..ಪಾನಕಾ ವಾಟಗದಾಗ ಕೊಡ್ವಾ’ ಅಂದರು. ನಾ ಅನ್ಕೊಂಡೆ ಅವರ ಮಡಿವಂತರು, ಗ್ಲಾಸಿನಾಗ ಪಾನಕ ಸಹಿತ ಕುಡಿತಿರಲಿಕ್ಕಿಲ್ಲಾ ಅಂತ.
ಅಲ್ಲಾ ಅದರಾಗ ಆ ಗ್ಲಾಸ ಮೊನ್ನೆ ನಮ್ಮ ದೋಸ್ತ ಒಂದ ಫುಲ್ ಬಾಟಲ್ ವಿಲಿಯಮ್ ಲಾವ್ಸನ್ ವಿಸ್ಕಿ ತೊಗೊಂಡಾಗ ಫ್ರೀ ಬಂದಿದ್ವು. ಹಂಗ ಬಾಟಲ್ ಅಂವಾ ತೊಗಂಡ ಫ್ರೀ ಗ್ಲಾಸ ಇಷ್ಟ ನನಗ ಕೊಟ್ಟಿದ್ದಾ. ಮತ್ತ ನೀವೇಲ್ಲರ ನನ್ನ ಬಗ್ಗೆ ತಪ್ಪ ತಿಳ್ಕೊಂಡಿರಿ.
ಮುಂದ ಅವರ ಹೋಗೋದ ತಡಾ ’ಅಲ್ಲರಿ, ಅವರ ಒಟ್ಟ ಉಳ್ಳಾಗಡ್ಡಿ, ಬಳ್ಳೊಳ್ಳಿ ತಿನ್ನಂಗಿಲ್ಲಾಂದರ ಹೆಂಗ ಬದಕ್ತಾರ್ರಿ’ ಅಂದ್ಲು.
’ಲೇ, ಅವರ ಸಾತ್ವಿಕ ಮಂದಿ..ನಿನ್ನಂಗಲ್ಲಾ…ಬರೇ ಸಾತ್ವಿಕ ಆಹಾರ ಇಷ್ಟ ತಿಂತಾರ’ ಅಂತ ಅಂದೆ.
’ಸಾತ್ವಿಕ್ ಆಹಾರ ಅಂದರ?’ ಅಂದ್ಲು. ಆತ ತೊಗೊ ಇಕಿ ಇಲ್ಲಿಗೆ ಬಿಡೋಕಿ ಅಲ್ಲಾ ಅಂತ ಶಾರ್ಟ್ ಆಗಿ
’ನೋಡ ನಮ್ಮ ಆಯುರ್ವೇದದೊಳಗ ಆಹಾರದಾಗ ಮೂರ ಥರಾ ಇರ್ತಾವ, ಸಾತ್ವಿಕ, ರಾಜಸಿಕ ಮತ್ತ ತಾಮಸಿಕ ಅಂತ. ಸಾತ್ವಿಕ ಆಹಾರ clarity of mind and physical health ಕೊಡ್ತದ, ರಾಜಸಿಕ ಆಹಾರ ನಮ್ಮ ಮನಸ್ಸಿಗೆ ಮತ್ತ ದೇಹಕ್ಕ stimulating effect ಕೊಡ್ತದ. ಇನ್ನ ತಾಮಸಿಕ ಆಹಾರ ಅಂದರ ನಾವ ತಿನ್ನೊ ಜಂಕ್ ಫುಡ್, ಅವು sedative effect ಕೊಡ್ತಾವ…ಉಳ್ಳಾಗಡ್ದಿ, ಬಳ್ಳೊಳ್ಳಿ ತಾಮಸಿಕ ಆಹಾರದಾಗ ಬರ್ತಾವ’ ಅಂತ ಹೇಳಿದೆ.
’ಅಲ್ಲಾ ಹಂಗಿದ್ದರ ಮತ್ತ ಆ ದೇವರ ಉಳ್ಳಾಗಡ್ಡಿ, ಬಳ್ಳೊಳ್ಳಿ ಯಾಕ ಹುಟ್ಟಿಸಿದಾ, ಹೆಂಗ ಹುಟ್ಟಿಸಿದಾ, ಯಾಕ ತಿನ್ನಬಾರದು’ ಅಂತ ಕೇಳಿದ್ಲು.
ಏ ಇಕಿ ಸೀದಾ ಉಳ್ಳಾಗಡ್ಡಿ ಬೇರಿಗೆ ಕೈಹಾಕಿದ್ಲಲೇ ಅಂತ ಅನಸ್ತ. ಆದರು ಪಾಪ ಏನೋ ಸಿರಿಯಸ್ ಆಗಿ ಕೇಳಲಿಕತ್ತಾಳ ಅಂತ ಅಕಿಗೆ ಈ ಉಳ್ಳಾಗಡ್ಡಿ ಮತ್ತ ಬಳ್ಳೊಳ್ಳಿ ಹೆಂಗ ಹುಟ್ಟಿದ್ವು, ಅವನ್ನ ಯಾಕ ತಿನ್ನಬಾರದು ಅಂತ ಕಥಿ ಹೇಳಲಿಕ್ಕೆ ಶುರು ಮಾಡಿದೆ.
“ಹೇ…ಭಾರ್ಯಾ…..ಹಿಂದೆ ಸತ್ಯಯುಗದಲ್ಲಿ ಹಿರಣ್ಯಕಶ್ಯಪು ಎಂಬ ರಾಜನಿದ್ದನು, ಅವನಿಗೆ ಸಿಂಹಿತಾ ಎಂಬ ಮಗಳಿದ್ದಳು”
’ಅದ ಭಕ್ತ ಪ್ರಲ್ಹಾದನ ಅಪ್ಪಾ..ಅವನ ಹೌದಲ್ಲ?’ ಅಂತ ನಡಕ ಬಾಯಿ ಹಾಕಿದ್ಲು…’ಹಾಂ ಅವನ, ನೀ ನಡಕ ಬಾಯಿ ಹಾಕಬ್ಯಾಡ ಸುಮ್ಮನ ಕಥಿ ಕೇಳ’ ಅಂತ ನನ್ನ ಕಥಿ ಕಂಟಿನ್ಯೂ ಮಾಡಿದೆ
“ಆ ಸಿಂಹಿತಾಳಿಗೆ ಸ್ವರಭಾನು ಎಂಬ ಮಗನಿದ್ದನು. ಇತ್ತ ದೇವರು ಇಂದ್ರನ ನಾಯಕತ್ವದಲ್ಲಿ ಮತ್ತು ಅಸುರರು ಬಲಿಯ ( ಭಕ್ತ ಪ್ರಲ್ಹಾದನ ಮೊಮ್ಮಗ ) ನೇತೃತ್ವದಲ್ಲಿ ಸಮುದ್ರ ಮಂಥನ ಪ್ರಾರಂಭಿಸಿದ್ದರು. ಮುಂದೆ ಸಮುದ್ರ ಮಂಥನದಲ್ಲಿ ಅಮೃತವು ಸಿಗಲು ವಿಷ್ಣುವು ಅಸುರರಿಗೆ ಅಮೃತದ ಪಾಲು ಸಿಗಬಾರದೆಂಬ ಉದ್ದೇಶದಿಂದ ಮೋಹಿನಿಯ ವೇಷ ಧರಿಸಿ ದೇವರು ಮತ್ತು ಅಸುರರನ್ನು ಬೇರೆ ಬೇರೆ ಮಾಡಿ ಕೂಡಿಸಿದನು. ಇದರಲ್ಲಿ ಏನೋ ಮೋಸವಿದೆ ಎಂದು ಮನಗಂಡ ಈ ಸ್ವರಭಾನು ಮಾರುವೇಷದಲ್ಲಿ ದೇವರೊಂದಿಗೆ ಕುಳಿತನು (ಸೂರ್ಯ, ಚಂದ್ರರೊಂದಿಗೆ). ಮುಂದೆ ವಿಷ್ಣುವು ಎಲ್ಲ ಅಮೃತವನ್ನು ದೇವರಿಗೆ ಸುರಿದನು, ದೇವತೆಗಳೊಂದಿಗೆ ಸ್ವರಭಾನುವು ಅಮೃತವನ್ನು ಕುಡಿದನು. ಅಷ್ಟರಲ್ಲಿ ಸೂರ್ಯ ಚಂದ್ರರಿಗೆ ಏನೋ ಸಂಶಯ ಮೂಡಿ ಅವರು ವಿಷ್ಣುವಿಗೆ ತಿಳಿಸಲು, ವಿಷ್ಣು ಸ್ವರಭಾನು ಅಸುರ ಎಂದು ತಿಳಿದ ಮೇಲೆ ಸುದರ್ಶನ ಚಕ್ರದಿಂದ ಅವನ ರುಂಡ-ಮುಂಡವನ್ನು ಛೇದಿಸಿದನು. ಸ್ವರಭಾನು ಅಮೃತ ಸೇವಿಸಿದ್ದರಿಂದ ಅವನ ರುಂಡ ಮತ್ತು ಮುಂಡಗಳು ಜೀವಂತ ಉಳಿದವು. ಸ್ವರಭಾನುವಿಗೆ ಆದ ಈ ಅನ್ಯಾಯವನ್ನು ಸಹಿಸದೆ ಅಸುರ ನಾಯಕನಾದ ಬಲಿಯು ಶಿವನಿಗೆ ಈ ವಿಷಯವನ್ನು ತಿಳಿಸಲು, ಶಿವನು ತನ್ನ ಮಗನಾದ ಗಣೇಶನಿಗೆ ಸ್ವರಭಾನುವಿನ ರುಂಡ-ಮುಂಡಗಳಿಗೆ ಮುಂಡ-ರುಂಡಗಳನ್ನು ಹುಡುಕಲು ಆಜ್ಞಾಪಿಸಿದನು. ಗಣೇಶನು ಸ್ವರಭಾನುವಿನ ರುಂಡವನ್ನು ಸರ್ಪದ ಮುಂಡದೊಂದಿಗೆ ಮತ್ತು ಮುಂಡವನ್ನು ಸರ್ಪದ ರುಂಡದೊಂದಿಗೆ ಜೋಡಿಸಿದನು. ಅವನ್ನು ರಾಹು ಮತ್ತು ಕೇತು ಎಂದು ಕರಿಯಲಾಯಿತು. ಈ ಸಂದರ್ಭದಲ್ಲಿ ರಕ್ತದ ಹನಿಗಳು ಪವಿತ್ರವಾದ ನಮ್ಮ ಭೂಮಿಯ ಮೇಲೆ ಬೀಳಲು, ರುಂಡದಿಂದ ಬಿದ್ದ ರಕ್ತದಿಂದ ’ಉಳ್ಳಾಗಡ್ಡಿ’ ಮತ್ತು ಮುಂಡದಿಂದ ಬಿದ್ದ ರಕ್ತದಿಂದ ’ಬಳ್ಳೊಳ್ಳಿ’ ಜನಿಸಿದವು. so..ಉಳ್ಳಾಗಡ್ಡಿ ಮತ್ತು ಬಳ್ಳೊಳ್ಳಿ ಸಾಕ್ಷಾತ ದೇವರ ಸೃಷ್ಟಿಯಾದರೂ ಅವು ಜನಿಸಿದ್ದು ಅಸುರನ ರಕ್ತದಿಂದ, ಅವು ರಾಹು ಕೇತು ಇದ್ದ ಹಾಗೆ ಹಾಗೂ ತಾಮಸಿಕ್ ಆಹಾರದಲ್ಲಿ ಬರುತ್ತವೆ. ಹೀಗಾಗಿ ನಮ್ಮಂತ ಸಾತ್ವಿಕರು ಅವನ್ನು ಸ್ವೀಕರಿಸಬಾರದು…ಇತಿ ಶ್ರೀ ಉಳ್ಳಾಗಡ್ದಿ, ಬಳ್ಳೊಳ್ಳಿ ಜನ್ಮ ವೃತ್ತಾಂತೆ ಅಂತಿಮೊಧ್ಯಾಯಃ” ಅಂತ ನನ್ನ ಪ್ರವಚನ ಮುಗಿಸಿದೆ.
ನನ್ನ ಹೆಂಡ್ತಿ ಅಗದಿ ಬಾಯ ತಕ್ಕೊಂಡ ನನ್ನ ಪುರಾಣ ಕೇಳಿದೋಕಿನ ಒಂದ ಸರತೆ ಸಾಷ್ಟಾಂಗ ನಮಸ್ಕಾರ ಮಾಡಿ
’ಏನ್..ನಾಲೇಜ್ ಅದರಿ ನಿಮಗ’ ಅಂದ್ಲು..’ಮತ್ತ ನಾ ಯಾರ ಗಂಡಾ’ ಅನ್ನೊಂವ ಇದ್ದೆ..ಹೋಗ್ಲಿ ಬಿಡ ಮತ್ತ ಅಕಿಗೂ ಕನಫ್ಯೂಸ್ ಆಗಿ-ಗಿಗಿತ್ತ ಅಂತ ಸುಮ್ಮನಾದೆ.
ಇನ್ನೊಂದ ಮಜಾ ಕೇಳ್ರಿಲ್ಲೆ, ಇಷ್ಟೇಲ್ಲಾ ಉಳ್ಳಾಗಡ್ಡಿ-ಬಳ್ಳೊಳ್ಳಿ ಪುರಾಣ ಕೇಳಿದೋಕಿ ಮೊನ್ನೆ ಗುರವಾರ ಮಠದಾಗ ಉಳ್ಳಾಗಡ್ಡಿ ರೇಟ್ ಜಾಸ್ತಿ ಅಗಿದ್ದರ ಬಗ್ಗೆ ಎಲ್ಲಾರು ಮಾತೋಡರಂತ ಅದಕ್ಕ ರವಿ ಆಚಾರ್ಯರ ಪ್ರವಚನ ಮುಗದ ಮ್ಯಾಲೆ ಕ್ಯಾಜುವಲಿ
’ಉಳ್ಳಾಗಡ್ಡಿ ಅನ್ನೊ ರಾಹು ಯಾರ ಯಾರ ಮನ್ಯಾಗ ಎಷ್ಟನೇ ಮನ್ಯಾಗ ಇದ್ದಾನ ಕೈ ಎತ್ತರಿ’ ಅಂತ ಕೇಳಿದರ ಇಕಿ ತಾ ಎಲ್ಲಿದ್ದೇನಿ ಅನ್ನೋದ ಖಬರ ಇಲ್ಲದ ಭಡಾ ಭಡಾ ಕೈ ಎತ್ತಿದ್ಲಂತ. ಅಲ್ಲಾ ಉತ್ತರಾಧಿ ಮಠದಾಗ ಕೂತ ಉಳ್ಳಾಗಡ್ಡಿ ತಿಂತೇನಿ ಅಂತ ಕೈ ಎತ್ಯಾಳ ಅಂದರ ಏನ ಹೇಳಬೇಕ? ಉಳದವರ ಯಾರು ಕೈ ಎತ್ತಲಿಲ್ಲಾ. ಅಲ್ಲಾ ಹಂಗ ಅವರೇನ ತಿನ್ನಂಗಿಲ್ಲಾ ಅಂತಿಲ್ಲಾ. ಆದರ ಕೈ ಎತ್ತಲಿಲ್ಲಾ ಇಷ್ಟ. ಹಂಗ ಅದ ಆಚಾರ್ಯರಿಗೆ ಗೊತ್ತ ಇದ್ದದ್ದ ಮಾತ.
ಅವರ ಕಡಿಕೆ “ನಂಗೋತ್ತ ಭಾಳ ಮಂದಿ ಉಳ್ಳಾಗಡ್ಡಿ ತಿಂತಿರಿ ಅಂತ, ನಾ ಎಷ್ಟ ಅದ ಸಾತ್ವಿಕ ಮಂದಿ ತಿನ್ನೋದಲ್ಲಾ, ಉಳ್ಳಾಗಡ್ಡಿ- ರಾಹು, ಬಳ್ಳೋಳ್ಳಿ- ಕೇತು ಇದ್ದಂಗ ಅಂತ ಪ್ರವಚನದಾಗ ಹೇಳಿದರು ಕೇಳಂಗಿಲ್ಲಾ. ಈಗ ಉಳ್ಳಾಗಡ್ಡಿ ನೂರ ರೂಪಾಯಿ ದಾಟೇದ ಇನ್ನರ ಬಿಡ್ರಿ” ಅಂತ ಹೇಳಿ ಮಂಗಳಾರತಿ ಮಾಡಿದ್ರಂತ.
ನೋಡ್ರಿ ಇದನ್ನ ಓದಿದ ಮ್ಯಾಲೇರ ಯಾರರ ಉಳ್ಳಾಗಡ್ದಿ ಬಿಡೋರ ಇದ್ದರ ಬಿಡ್ರಿ ಇಲ್ಲಾ ನನ್ನಂಗ ಚಾರ್ವಾಕ ವಂಶಸ್ಥ ಅಂದರ ’ತಿನ್ನ..ಉಣ್ಣ..ಕುಡಿ..ಮಜಾ ಮಾಡ, enjoy bloody life ಅನ್ನೋರ ಇದ್ದರ ಏಂಜಾಯ ಮಾಡ್ರಿ.
ಹೆಂಗಿದ್ದರು ಚಾರ್ವಾಕನ ಹೇಳ್ಯಾನ…ಸಾಲಾ ಮಾಡಿ ಆದರೂ ತುಪ್ಪಾ ತಿನ್ನರಿ ಅಂತ…ನಾವ ಈಗ ಸಾಲಾ ಮಾಡಿ ಆದರೂ ’ಉಳ್ಳಾಗಡ್ಡಿ’ ತಿನ್ನೋದರಿಪಾ.