ಮೊನ್ನೆ ಆಷಾಡ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿಗೆ ನಮ್ಮಪ್ಪ ಹೋಗಿ ಬರೋಬ್ಬರಿ ಏಳ ವರ್ಷ ಆತ. ಏ ಅಡ್ಡಿಯಿಲ್ಲಾ ಮಗಾ ಅಗದಿ ತಿಥಿ, ಪಕ್ಷ, ಮಾಸ ಎಲ್ಲಾಇನ್ನೂ ನೆನಪ ಇಟ್ಟಾನ ಅಂತ ಅನಬ್ಯಾಡ್ರಿ ಹಂಗ ನನಗ ಒಂದ ಹನಿನೈದ ದಿವಸದಿಂದ ನನ್ನ ಹೆಂಡ್ತಿ
“ರಿ ಮುಂದಿನ ದಶಮಿ ತಿಥಿಗೆ ನಮ್ಮ ಮಾವನೋರದ ಶ್ರಾದ್ಧ, ಲಗೂನ ಈಗ ರವಿ ಆಚಾರರಿಗೆ ಫೋನ್ ಮಾಡಿ ಬುಕ್ ಮಾಡ್ರಿ’ ಅಂತ ಒಂದ ಸಮನ ಗಂಟ ಬಿದ್ದಿದ್ಲು. ಹಂಗ ಒಮ್ಮೋಮ್ಮೆ ಇಕಿ ಮರತರು ರವಿ ಆಚಾರರ ಮರೆಯಂಗಿಲ್ಲಾ…ನರಸಿಂಹ ದೇವರಿಗೆ ಕೈಮುಗಿಲಿಕ್ಕೆ ಗುಡಿಗೆ ಹೋದಾಗ ಸಹಿತ
’ಮುಂದಿನ ತಿಂಗಳ ನಿಮ್ಮ ತಂದೆಯವರದಲಾ…’ ಅಂತ ಇಂಡೈರೆಕ್ಟ ನೆನಪ ಮಾಡ್ತಾರ. ನಂಗೊತ್ತ ಆ ನರಸಿಂಹ ದೇವರ ಮರತರು ಆಚಾರರ ಮರೆಯಂಗಿಲ್ಲಾ ಅಂತ.
ಅಲ್ಲಾ ಹಂಗ ಈ ಒಂದ ನಾಲ್ಕ ವರ್ಷದಿಂದ ನಮ್ಮಪ್ಪನ ಶ್ರಾದ್ಧಾ ಅಲ್ಲೇ ಮಾಡಸಲಿಕತ್ತೇವಿ ಹಿಂಗಾಗಿ ಅವರಿಗೆ ನೆನಪ ಇರ್ತದ.
ನಮ್ಮಂತಾ ಕಲಿಯುಗದ ಲೌಕಿಕ ಒಳಗ ಮುಳಗಿದ ಜನಾ ಅಪ್ಪನ ಶ್ರಾದ್ಧಾ ಮಾಡೋದ ಮರತ-ಗಿರತಾರ ಅಂತ ಪಾಪಾ ನೆನಪ ಮಾಡ್ತಾರ ಬಿಡ್ರಿ…ಪುಣ್ಯಾದ್ದ ಕೆಲಸ ಅದರಾಗ ಏನ ತಪ್ಪ ಇಲ್ಲಾ. ಅಲ್ಲಾ ಹಿಂತಾವರ ಇದ್ದಾರ ಅಂತ ಇನ್ನೂ ನಮ್ಮ ಮಂದಿವ ಸಂಪ್ರದಾಯ, ದೇವರು- ದಿಂಡ್ರು, ಆಚಾರ-ವಿಚಾರ, ಮಡಿ- ಮೈಲಗಿ, ಶ್ರಾದ್ಧಾ-ಪಕ್ಷ ಎಲ್ಲಾ ನಡದಾವ ಅನ್ನರಿ.
ಹಂಗ ನಮ್ಮಪ್ಪ ಸತ್ತ ಒಂದನೇ ವರ್ಷ ವರ್ಷಾಂತಕ ಇತ್ತ ಅದನ್ನ ಗ್ರ್ಯಾಂಡ್ ಆಗಿ ಮಠದಾಗ ಮಾಡಿ ಒಂದ ನೂರ ಮಂದಿಗೆ ಭಾದ್ರಿ ಕಡೆ ಅಡಗಿ ಮಾಡಿಸಿಸಿ ಊಟಕ್ಕ ಹಾಕಿ ದಕ್ಷಿಣಿ ಕೊಟ್ಟ ಕಳಸಿದ್ವಿ. ಮುಂದಿನ ವರ್ಷ ಶ್ರಾದ್ಧ, ಅದ ಮನಿ ಪೂರ್ತೇಕ. ಹಂಗ ನನ್ನ ಹೆಂಡ್ತಿ ನೇತೃತ್ವದೊಳಗ ಹೋದೊರ ಶ್ರಾದ್ಧ ಮಾಡಲಿಕತ್ತಿದ್ದ ಮೊದ್ಲನೇ ಸಲಾ ಅನ್ನರಿ……ಅಲ್ಲಾ ಅದರ ಅರ್ಥ ಅಕಿ ಜೀವಂತ ಇದ್ದೋರದು ಮಾಡ್ತಿದ್ಲು ಅಂತ ಅಲ್ಲ ಮತ್ತ…ಹಂಗ ಮಾತ ಹೇಳಿದೆ.
ಒಂದನೇ ಸರತಿ ಅಗದಿ ಹುರುಪಿಲೇ ಶ್ರಾದ್ಧಾ ಮಾಡಿದ್ಲು, ಭಟ್ಟರಿಗೂ ತಾನ ಹೇಳಿದ್ಲು, ಮಡಿಲೇ ಧೋತ್ರ ಓಣಾ ಹಾಕಿದ್ಲು, ಭಾದ್ರಿಗೆ ಕೇಳಿ ಶ್ರಾದ್ಧದ ಮೆನೂ ರೆಡಿ ಮಾಡ್ಕೊಂಡ್ಲು ಎಲ್ಲಾ ಆತ. ಆದರ ಯಾವಾಗ ಶ್ರಾದ್ಧಕ್ಕ ಮಡಿನೀರ ತುಂಬೋದ ಬಂತ ನೋಡ್ರಿ ಆವಾಗ ವಜ್ಜ ಆತ. ನಮ್ಮ ಮನ್ಯಾಗ ನೀರ ಮ್ಯಾಲೆ ಅಡಗಿ ಮನ್ಯಾಗ ಬರಂಗಿಲ್ಲಾ, ಬೇಸಮೆಂಟ್ ನಿಂದ ಮಡಿನೀರ ತುಂಬಿ ಮ್ಯಾಲೆ ಹೊತ್ಕೊಂಡ ತಂದ ಇಡಬೇಕ, ಅದಕ್ಕ ಬ್ಯಾರೆ ಮಡಿ ಅರಬಿ ಒಣಾ ಹಾಕ್ಬೇಕಾಗಿತ್ತ. ತೊಗೊ ಯಾಕರ ಶ್ರಾದ್ಧ ಮನ್ಯಾಗ ಮಾಡಲಿಕ್ಕೆ ಹೂಂ ಅಂದೆ ಅಂತ ಅನ್ನೊಂಗ ಆತ. ಅಕಿ ತ್ರಾಸ ನೋಡಿ ನಾನು ಒದ್ದಿ ಲಂಡ ಪಂಜಿ ಹಚಗೊಂಡ ಮಡಿನೀರ ತುಂಬಲಿಕ್ಕೆ ಹೆಲ್ಪ್ ಮಾಡಿದೆ. ಸುಮ್ಮನ ಯಾವದರ ಮಠದಾಗ ಮಾಡಿ ಬಿಡೋದ ಛಲೋ ಅಂತ ಅನಸ್ತ ಖರೆ ಆದರ ಮನ್ಯಾಗ ಮಾಡ್ಲಿಕತ್ತಿದ್ದ ಇದ ಫಸ್ಟ ಶ್ರಾದ್ಧಾ ಇನ್ನ ಅದನ್ನು ಮಠದಾಗ ಅಂದರ ನಮ್ಮವ್ವ ಏನ ತಿಳ್ಕೋತಾಳ ಅಂತ ಸುಮ್ಮನಿದ್ದೆ.
ಮುಂದಿನ ವರ್ಷ ಇನ್ನೇನ ಶ್ರಾದ್ಧ ಒಂದ ವಾರ ಅದ ಅಂತಿರ್ಕೇಲೆ ಇಕಿ
’ಸುಮ್ಮನ ಮಠದಾಗ ಮಾಡ್ತೀರ ಏನ ನೋಡ್ರಿ…..ನಂದ ಡೇಟ್ ಅದ ಡೌಟ್’ ಅಂದ್ಲು. ಆತ ತೂಗೊ ಹಂಗರ ಮಡಿನೀರ ತುಂಬೋದ ತಪ್ಪತ ಅಂತ ನಾ ಒಬ್ಬನ ಭಡಾ ಭಡಾ ರವಿ ಆಚಾರರಿಗೆ ಹೇಳಿ ನಮ್ಮಪ್ಪನ ಶ್ರಾದ್ಧಾ ಮಾಡ್ಕೊಂಡ ಬಂದೆ. ಪಾಪ ರವಿ ಆಚಾರರಿಗೂ ನನ್ನಂತಾ ಸೆಲೆಬ್ರಿಟಿ ಕಸ್ಟಮರ್ ಬೇಕಾಗಿದ್ದರು ನಾ ಕೊಟ್ಟಷ್ಟ ದಕ್ಷಿಣಿ ತೊಗೊಂಡ ಶ್ರಾದ್ಧಾ ಮಾಡಿಸಿಸಿ ಕಳಸಿದರು.
ನಾ ರವಿ ಆಚಾರ ಶ್ರಾದ್ಧಾ ಮಸ್ತ ಮಾಡಿಸಿದರು, ವೈನಿ ಏನೋ ಸ್ಪೇಷಲ್ ಅಡಗಿ ಮಾಡಿದ್ದರು ಊಟ ಭಾರಿ ಆಗಿತ್ತು ಅಂತ ಹೇಳೋದ ತಡಾ ನಮ್ಮೋಕಿ
’ಮುಂದಿನ ಸಲಾ ನಾನು ಬರ್ತೇನಿ ತೊಗೊರಿ, ಸುಮ್ಮನ ಅಲ್ಲೇ ಮಾಡೋಣ…ಮನ್ಯಾಗ ತ್ರಾಸ ಆಗ್ತದ’ ಅಂತ ಅಡ್ವಾನ್ಸ್ ಬುಕ್ ಮಾಡಿದ್ಲು.
ಅಲ್ಲಾ ಅರ್ಧಾ ಇಕಿ ಬರ್ತೇನಿ ಅಂದಿದ್ದ ನಾ ಶ್ರಾದ್ಧಾ ಸರಿ ಮಾಡಸ್ತೇನೋ ಇಲ್ಲೋ ? ಪಿಂಡ ಪ್ರಧಾನ ಮಾಡಸ್ತೇನೋ ಇಲ್ಲಾ ಸಂಕಲ್ಪ ಶ್ರದ್ಧಾ ಮಾಡಸಿಸಿ ಪಿಂಡ ಪ್ರಧಾನ ಶ್ರಾದ್ಧದ್ದ ಕ್ಲೇಮ ಮಾಡ್ತೇನೋ ಏನೋ ಅಂತ ನೋಡ್ಲಿಕ್ಕೆ ತಾನೂ ಬರತೇನಿ ಅಂತ ಅಂದಿದ್ಲು.
ಸರಿ, ಮುಂದಿನ ಸರತೆ ಇಬ್ಬರು ಕೂಡೇನ ಹೋದ್ವಿ. ಇನ್ನ ನಮ್ಮಪ್ಪನ ಶ್ರಾದ್ಧ ಚಾತುರ್ಮಾಸದಾಗ ಬರೋದ….ಆವಾಗ ನೋಡಿದರ ಆಚಾರ ಮನ್ಯಾಗ ವ್ರತದ ಅಡಿಗೆ ಇರ್ತದ.ಇಕಿ ವ್ರತದ ಅಡಿಗಿ ಮಸ್ತ ಆಗೇದ ಅಂತ ಹೊಡದಿದ್ದ ಹೊಡದಿದ್ದ. ಇನ್ನೇನ ದಕ್ಷಿಣಿ ಮತ್ತ ಊಟದ ಎಲಿದ ರೊಕ್ಕಾ ಆಚಾರರಿಗೆ ಕೊಟ್ಟ ನಮಸ್ಕಾರ ಮಾಡಿ ಬರೋದ ಬಾಕಿ ಇತ್ತ. ನಾ ಅವರಿಗೆ ನಂಬದ ಎಷ್ಟ ಆತ ಅಂತ ಕೇಳಿದೆ. ಅವರ ಚಾಷ್ಟಿಗೆ
’ ಒಂದ ಎಲಿಗೆ ಐದ ನೂರ ಹಿಡಿರಿ, ನಿಂಬದ ಎರೆಡ ಎಲಿ ಊಟಾ, ಮ್ಯಾಲೆ ಪಿಂಡ ಪ್ರಧಾನ ಶ್ರಾದ್ಧಕ್ಕ ಇಷ್ಟ ಅದರ ಮ್ಯಾಲೆ ನಿಮಗ ತಿಳದಷ್ಟ ದಕ್ಷಿಣಿ ಕೊಡ್ರಿ….ನೀವೇನ ನಮ್ಮವರ’ ಅಂತ ಅಂದರು. ಅದನ್ನ ಕೇಳಿದೋಕಿನ ನಮ್ಮಕಿ
’ ಒಂದ ಎಲಿಗೆ ಐದ ನೂರ….ವ್ರತದ ಅಡಿಗೆ ನೋಡಿ ಹಿಡಿರಿ…’ ಅಂದ ಬಿಟ್ಲು..
ತೊಗೊ ನಂಗ ಏನ್, ಒಂದ ತಾಸಿನ ಹಿಂದ ಆವ್ಹಾಹನ ಮಾಡಿದ್ದ ನನ್ನ ಪಿತೃಗಳಿಗೆ ಸಹಿತ ಎಂಬರಾಸಿಂಗ್ ಆತ. ಅಷ್ಟರಾಗ ನಮ್ಮಕಿ ಅಂದಿದ್ದನ್ನ ಆ ವೃತದ ಅಡಿಗಿ ಮಾಡಿದ್ದ ಆಚಾರರ ಹೆಂಡ್ತಿ ಕೇಳಿಸ್ಗೊಂಡ ಬಿಟ್ಟರು. ಅವರ
’ವ್ರತದ ಅಡಿಗೆ ನೋಡಿ ಹಿಡಿರಿ ಅಂದರ ಏನ್ರಿ ವೈನಿ…ವ್ರತದ ಅಡಿಗೆ ಅಷ್ಟ ಹಗರ ಅಂತ ತಿಳ್ಕೊಂಡಿರೇನ… ಹಂಗ ನೋಡಿದರ ವ್ರತದ ಅಡಿಗಿಗೆ ಇನ್ನೂ ಜಾಸ್ತಿ ಕೊಡಬೇಕ’ ಅಂತ ಜೋರ ಮಾಡಿದರು.
ಅಲ್ಲಾ ಅವರ ಬಡಸಬೇಕಾರ ಅಡಿಗೆ ಏನ ಮಸ್ತಆಗೇದರಿ ವೈನಿ ಅಂತ ಎರೆಡೆರಡ- ಮೂರ-ಮೂರ ಸರತೆ ಹೆಸರಕಟ್ಟಿನ ಸಾರ ಹಾಕಿಸ್ಕೊಂಡ ಹೊಡದಾಳ ಈಗ ನೋಡಿದರ ಒಂದ ಎಲಿಗೆ ಐದನೂರ ಅಂದರ ಇಕಿ ನೋಡಿ ಹಿಡಿರಿ ಅಂದರ ಅವರಿಗೆ ತಲಿಕೆಡಲಾರದ ಏನ. ನಾ ಸಿಟ್ಟಿಗೆದ್ದ ’ಶ್ರಾದ್ಧಾ ಮಾಡಬೇಕಾರ ಒಂದ ದೇವರ ಎಲಿ, ಒಂದ ಬ್ರಾಹ್ಮಣನ ಎಲಿ ಅಂತ ಎರೆಡ ತುಂಡ ಬಾಳೆ ಎಲಿ ಹಾಕಿರ್ತಾರ ಅದರದನು ನಂಬದರಾಗ ಹಿಡದಿರಬೇಕ ತೊಗೊ ಅಂತ ಅನ್ನೋವ ಇದ್ದೆ. ಇನ್ನ ನಾ ಏನರ ಹಂಗ ಅಂದರ ಆಚಾರರ ನನ್ನ ಮ್ಯಾಲೆ ಸಿಟ್ಟ ಆಗ್ತಾರ ಬಿಡ ಅಂತ ಅವರಿಗೆ ಮತ್ತೊಮ್ಮೆ ಸಾಷ್ಟಾಂಗ ನಮಸ್ಕಾರ ಮಾಡಿ ಅವರ ಕಡೆಯಿಂದ ’ಪಕ್ಷ ಮಾಸದಾಗ ಪಕ್ಷ ತಪ್ಪಸ ಬ್ಯಾಡ್ರಿ’ ಅಂತ ಆಶೀರ್ವಾದ ತೊಗೊಂಡ ವಾಪಸ ಮನಿಗೆ ಬಂದ್ವಿ.
ಇನ್ನ ಯಾರಿಗೆ ವ್ರತದ ಅಡಿಗೆ ಅಂದರ ಏನು ಅಂತ ಗೊತ್ತ ಇಲ್ಲಾ ಅವರಿಗೆ ಒಂಚೂರ ವ್ರತದ ಅಡಿಗೆ ಬಗ್ಗೆ ಹೇಳಿ ಬಿಡ್ತೇನಿ
ಈ ವ್ರತದ ಅಡಿಗೆ ಚಾತುರ್ಮಾಸದಾಗ ಕಂಪಲ್ಸರಿ…. ಇನ್ನ ಚಾತುರ್ಮಾಸದ ಮೊದಲನೇ ತಿಂಗಳದಾಗ ಶಾಕ ವ್ರತ…ಅಂದರ ಬೇರು, ಎಲೆ, ಮೊಳಕೆ, ಅಗ್ರ (ತುದಿ), ಹಣ್ಣು, ದಂಟು, ತೊಗಟೆ, ಚಿಗುರು, ಹೂವು, ಸಿಪ್ಪೆ ಮುಂತಾದ ಹತ್ತು ಬಗೆಯ ಶಾಕಗಳು, ಇವುಗಳಿಂದ ತಯಾರಿಸಲ್ಪಟ್ಟ ಪದಾರ್ಥಗಳು ಶಾಕವ್ರತದಲ್ಲಿ ನಿಷಿದ್ಧ.
ಚಾತುರ್ಮಾಸದ ಎರಡನೇ ತಿಂಗಳದಾಗ ದಧಿ (ಮೊಸರಿನ) ವ್ರತ. ದಧಿ ವ್ರತದಲ್ಲಿ ಮೊಸರು ಹಾಗೂ ಮೊಸರಿನಿಂದ ತಯಾರಿಸಿದ ಯಾವುದೇ ಆಹಾರ ಪದಾರ್ಥ ತಿನ್ನಂಗಿಲ್ಲಾ.ಮೂರನೇ ತಿಂಗಳಿನಲ್ಲಿ ಕ್ಷೀರ (ಹಾಲಿನ) ವ್ರತ. ಹಾಲು ಹಾಗೂ ಹಾಲಿನಿಂದ ತಯಾರಿಸಿದ ಯಾವುದೇ ಆಹಾರ ನಡೆಯಂಗಿಲ್ಲಾ. ನಾಲ್ಕನೇ ತಿಂಗಳದಾಗ ದ್ವಿದಳ ವ್ರತ. ದ್ವಿದಳ ವ್ರತದ ಕಾಲದಲ್ಲಿ ದ್ವಿದಳ ಧಾನ್ಯಗಳು, ಬಹು ಬೀಜಗಳು, ಬಹು ಬೀಜವುಳ್ಳ ತರಕಾರಿ ಹಾಗೂ ಎರಡು ದಳವುಳ್ಳ ಬೀಜ ಇವ ಯಾವು ನಡೆಯಂಗಿಲ್ಲಾ. ಇದ ವ್ರತದ ಅಡಿಗಿದ ಸಂಕ್ಷಿಪ್ತ ವಿವರ ಅನ್ನರಿ.
ಇನ್ನ ಇತ್ತಲಾಗ ನಾನು ನನ್ನ ಹೆಂಡ್ತಿ ಮನಿಗೆ ಬರೋ ಪುರಸತ್ತ ಇಲ್ಲದ ನಮ್ಮಕಿ ನಮ್ಮವ್ವಗ ಎಲ್ಲಾ ಶ್ರಾದ್ಧ ಪುರಾಣ, ವ್ರತದ ಅಡಿಗೆ ಬಗ್ಗೆ ಹೇಳಿದ್ಲು. ಯಾವಾಗ ಇಕಿ ’ಒಂದ ಎಲಿಗೆ ಐದನೂರ ರೂಪಾಯಿ’ ಅಂದ್ಲು ತೊಗೊ ನಮ್ಮವ್ವ ಗಾಬರಿ ಆಗಿ ನನಗ
’ಅದಕ್ಕ ನಿಮ್ಮಪ್ಪ ವೈಷ್ಣವರ ಮಠದಾಗ ಮಾಡಬ್ಯಾಡ್ರಿ , ಶಂಕರ ಮಠದಾಗ ಮಾಡ್ರಿ ಇಲ್ಲಾ, ಸ್ಮಾರ್ಥರ ಕಡೆ ಮಾಡಸ್ರಿ ಅಂತ ಬಡ್ಕೊತಿದ್ದರು…ನೀ ನೋಡಿದರ ಅವರ ಶ್ರಾದ್ಧಾನ ಮಠದಾಗ ಮಾಡ್ತಿಪಾ’ ಅಂತ ಸ್ಟಾರ್ಟ್ ಮಾಡಿದ್ಲು.
ನಂಗ ನೋಡಿದರ ಯಾರ ಮಾಡಿದರ ಏನ, ಒಟ್ಟ ನಮಗ ಅನಕೂಲ ಆದರ ಸಾಕ ಅನ್ನೋದ ನನ್ನ ವಿಚಾರ.
’ನಿಮ್ಮಪ್ಪ ಇದ್ದಿದ್ದಿರ ಅವರ ಒಟ್ಟ ಮಠದಾಗ ಮಾಡಿಸಿಸಿ ಕೊಡ್ತಿದ್ದಿಲ್ಲಾ….’ ಅಂತ ಇತ್ತಲಾಗ ನಮ್ಮವ್ವ ಮತ್ತ ಶುರು ಹಚಗೊಂಡ್ಲು…
’ಅಯ್ಯ….ನಮ್ಮವ್ವಾ ಅಂವಾ ಇದ್ದಿದ್ದರ ಅವನ ಶ್ರಾದ್ಧ ಯಾರ ಮಾಡ್ತಿದ್ದರು…ಸಾಕ ಮುಗಸ ಇನ್ನ’ ಅಂತ ಜೋರ ಮಾಡಿ ಉಂಡ ವ್ರತದ ಅಡಿಗೆ ಕರಗಲಿ ಅಂತ ಬೆಡರೂಮಿಗೆ ಅಡ್ಡಾಗಲಿಕ್ಕೆ ಹೋದೆ.