ಫೇಸಬುಕ್ ಒಳಗ what.if (what.if.science) ಅಂತ ಒಂದ ಪೇಜ್ ಅದ.
ಅದರಾಗ ’ಹಿಂಗಾದರ ಮುಂದ ಏನ ಆಗಬಹುದು’ ಅಂತ ಕಾಲ್ಪನಿಕ (hypothetical & logical) ಪ್ರಶ್ನೆಗಳಿಗೆ scientifically ಉತ್ತರಾ ಕೊಡ್ತಾರ. ಅಗದಿ ಇಂಟರೆಸ್ಟಿಂಗ್ ಇರ್ತಾವ. ಪ್ರಶ್ನೆ ಕಾಲ್ಪನಿಕ ಇದ್ದರು ಲಾಜಿಕಲ್ ಇರ್ತಾವ.
ಹಂಗ ನಮ್ಮಕಿಗೂ ’ಹಂಗ ಆಗಿದ್ದರ ಹಿಂಗ ಆಗ್ತಿತ್ತು, ಹಿಂಗ ಆಗಿದ್ದರ ಹೆಂಗ ಆಗ್ತಿತ್ತು’ ಅಂತ ಎಲ್ಲಾದಕ್ಕೂ what if ಅನ್ನೋ ಚಟಾ ಅದ. ಆದರ ಅಕಿ ಪ್ರಶ್ನೆ ಬರೇ ಕಾಲ್ಪನಿಕ ಇಷ್ಟ ಇರ್ತಾವ ಅದರಾಗ ಏನ ಲಾಜಿಕ್ಕೂ ಇರಂಗಿಲ್ಲಾ.
ಮೊನ್ನೆ ನಾ ಹಿಂಗ ಆ what.if ಪೇಜ ನೋಡ್ತಿರಬೇಕಾರ What If We Used the Full Capacity of Our Brains? ಅಂತ ಒಂದ ಪ್ರಶ್ನೆ ಇತ್ತ. ನಾ ಇಂಟರಿಸ್ಟಿಂಗ್ ಅಂತ ಸೀರಿಯಸ್ ಆಗಿ ನೋಡ್ಲಿಕತ್ತಿದ್ದೆ ನನ್ನ ಹೆಂಡ್ತಿ ಬಂದ
’ಯಾವಕಿ ಜೊತಿ ಚಾಟಿಂಗ ನಡಿಸಿರಿ?’ ಅಂತ ತಲಿ ಹಾಕಿದ್ಲು.
’ಏ ಇದ ಬ್ರೇನ್ ಬಗ್ಗೆ ಅದ. ನಿಂಗ ಸಂಬಂಧ ಇಲ್ಲ ಸುಮ್ಮನಿರ’ ಅಂದೆ.
what.if ಪ್ರಕಾರ ಮನಷ್ಯಾ ತನ್ನ ಮೆದಳ ಬರೇ ೧೦ % ಇಷ್ಟ ಉಪಯೋಗಸ್ತಾನಂತ.
ಅದನ್ನ ಕೇಳಿ ನನ್ನ ಹೆಂಡ್ತಿ
’ಅಲ್ಲರಿ ಬರೇ ೧೦% ಬ್ರೇನ್ ಉಪಯೋಗ ಮಾಡ್ತೇವಿ ಅಂದರ ಏನ್ರಿ?’ ಅಂದ್ಲು
“ಏ, ಅದ overall ಜನಾ ಯೂಜ್ ಮಾಡೋದ, ನೀ ನಿಂದ ವಿಚಾರ ಮಾಡ. ನಿಂಗ ಬ್ರೇನ್ ಇರೋದ ೧೦%” ಅಂತ ಅಂದರ.
“ನೀವೇನ ಭಾಳ ದೊಡ್ಡ ೧೦೦% ಯೂಜ್ ಮಾಡೋರಗತೆ ಮಾತಾಡಬ್ಯಾಡ್ರಿ…ಈಗ ಇದ್ದಿದ್ದ ೧೦% ಯುಸೇಜ್ ಜಾಸ್ತಿ ಅಗಿ ನಮಗೇಲ್ಲಾ ಅಜೀರ್ಣ ಆಗೇದ” ಅಂದ್ಲು.
ಹಂಗ ೧೦೦% ಮನಷ್ಯಾ ಬ್ರೇನ್ ಉಪಯೋಗ ಮಾಡಿದರ ನಿಮಿಷಕ್ಕೊಂದ ಮಾಸ್ಟರ್ ಪೀಸ್ ಪೇಂಟಿಂಗ್ ಮಾಡಬಹುದು, ತಾಸಿಗೊಂದ ಭಾಷಾ ಕಲಿಬಹುದ ಅಂತೇಲ್ಲಾ ವಾಟ್.ಇಫ್ ನವರ ಹೇಳಲಿಕತ್ತಿದ್ದರು.
ಹಿಂಗ ಆ what.if ಒಳಗ ವಿಚಿತ್ರ ವಿಚಿತ್ರ ಕ್ವೇಶನ್ಸ್ ಅವ, ನಾ ಅವನ್ನ ಒಂದೊಂದ ನನ್ನ what.if ಹೆಂಡ್ತಿಗೆ ತೊರಿಸ್ಗೊತ ಅಕಿ ಕಡೆಯಿಂದ ಉತ್ತರಾ ಕೇಳ್ಕೋತ ಹೊಂಟೆ
What If Our Sun disappeared? ಅಂತ ಕೇಳಿದರ
’ಭಾಳ ಛಲೋ ಆಗ್ತದ, ಮುಂಜಾನೆ ಎದ್ದ ಕ್ಯಾಗಸಾ ಹೊಡದ ಸಾರಿಸಿ ರಂಗೋಲಿ ಹಾಕೋದ ತಪ್ಪತದ’ ಅಂತ ಅಂದ್ಲು.
’ಲೇ, ಹುಚ್ಚಿ ಹಂಗೇನರ ಆದರ gravitational force ಮ್ಯಾಲೆ effect ಆಗ್ತದ, ಭೂಮಿ ಟೆಂಪರೇಚರ್ ಮೈನಸ್ ಆಗ್ತದ, ಭೂಮಿ ಸೂರ್ಯನ ಸುತ್ತಲೂ ತಿರಗೋದ ಬಿಟ್ಟ ತನಗ ಎಲ್ಲೆ ಬೇಕ ಅಲ್ಲೇ ಹೋಗ್ತದ, ನೀ ಹಾರಲಿಕ್ಕೆ ಶುರು ಮಾಡ್ತಿ, ನೀ ಅಂತೂ ಏನಿಲ್ಲದ ಹಾರಾಡ್ತಿ, ನಿನ್ನ ಜೊತಿ ಭೂಮಿನೂ ಹಾರಾಡ್ತದ, ಸಮುದ್ರ ಹೆಪ್ಪ ಗಟ್ಟತದ’ ಅಂತ ಹೇಳಿದೆ.
ಇಕಿ ಉತ್ತರ ಮಜಾ ಇರ್ತಾವ ತಡಿ ಅಂತ
What If Everyone Flushed at the Same Time? ಅಂತ ನೆಕ್ಸ್ಟ ಪ್ರಶ್ನೆ ಕೇಳಿದರ
’ಅಯ್ಯ ಹಣೇಬರಹ..ಮೊದ್ಲ ಹುಬ್ಬಳ್ಳ್ಯಾಗ ಹತ್ತ ದಿವಸಕ್ಕೊಮ್ಮೆ ನೀರ ಬರ್ತದ, ಹಿಂಗ ಎಲ್ಲಾರೂ ಒಂದ ಸರತೆ ಫ್ಲಶ್ ಮಾಡಿದರ ನೀರಸಾಗರ ಹತ್ತ ನಿಮಿಷದಾಗ ಬತ್ತಿ ಬರಡಾಗ್ತದ’ ಅಂದ್ಲು.
’ಲೇ ಅದ ಬಿಡ ಇಡಿ ಹುಬ್ಬಳ್ಳಿ ಒಳಗಿನ ಡ್ರೇನೇಜ್ ತುಂಬಿ ಊರ ತುಂಬ ಹೊಲಸ ನೀರಿಂದ ಫ್ಲಡ್ ಬರ್ತದ’ ಅಂದರ
’ಏ ಅದ ಈಗೂ ಬರ್ತದ ತೊಗೊರಿ…ಊರಾಗ ಒಂದಿಲ್ಲ ಒಂದ ಕಡೆ ಡ್ರೇನೇಜ್ ಪೈಪ ಒಡದ ಒಡದಿರ್ತಾವ’ಅಂದ್ಲು.
ನೆಕ್ಸ್ಟ ಕ್ವೆಶನ್
What If There Was a Meal Replacement Pill? ಅಂದರ ಊಟದ ಬದ್ಲಿ ಗುಳಗಿ ಬಂದರ ಹೆಂಗ ಅಂತ ಕೇಳಿದರ
’ಆ ಗುಳಗಿ ಕಂಡ ಹಿಡದೊಂಗ ಜೋಡ ಕಾಯಿ ಒಡಸ್ತೇನ್ರಿ, ಯಾರ ಮುಂಜ ಮುಂಜಾನೆ ಎದ್ದ ಕುಕ್ಕರ ಸೀಟಿ ಹೊಡಿಸ್ಕೋತ ಕೂಡಬೇಕ, ದಿವಸಕ್ಕ ಒಂದ ಮೂರ ಗುಳಗಿ ತೊಗೊಂಡರ ಮುಗದ ಹೋತ’ ಅಂದ್ಲು. ಅಲ್ಲಾ ಹಂಗ ಇಕಿಗೆ ದಿವಸಾ ಗುಳಗಿ ತೊಗೊಂಡ ಅಭ್ಯಾಸ ಅದ ಬಿಡ್ರಿ.
’ಅಲ್ಲಾ ಮತ್ತ ಹಬ್ಬ ಹುಣ್ಣಮಿ ಇದ್ದಾಗ ಗೌರಿ ಗಣಪ್ಪಗ ಮಡಿಲೇ ನೈವಿದ್ಯಾ ಏನ್ಮಾಡ್ತಿ?’ ಅಂದರ
’ಅವರಿಗೂ ಒಂದೊಂದ ಗುಳಗಿ ವೀಳೇದೆಲಿ ಒಳಗ ಇಟ್ಟ ನೈವಿದ್ಯಾ ಮಾಡೋದರಿಪಾ’ ಅಂದ್ಲು.
’ಲೇ ಹುಚ್ಚಿ…ಹಂಗೇನರ ಊಟದ ಬದ್ಲಿ ಗುಳಗಿ ಬಂದರ ನಿಂಗೇಲ್ಲ ಒಂದ ಗುಳಗಿ ಸಾಲಬೇಕ, ಎಲ್ಲಾ nutrients, calories, protiens ಬೇಕಂದರ ನೀ ದಿವಸಕ್ಕ ಎರಡನೂರ ಮೂರನೂರ ಗುಳಗಿ ತೊಗೊಬೇಕಾಗ್ತದ’ ಅಂತ ತಿಳಿಸಿ ಹೇಳಿ ಮುಂದಿನ ಕ್ವೆಶನಗೆ ಹೋದೆ.
What If Earth Spun Twice as Fast- ಅಂದರ ಭೂಮಿ ಈಗಿನಕಿಂತಾ ಎರಡ ಪಟ್ಟ ಸ್ಪೀಡ್ ತಿರಗಿದರ ಏನಾಗ್ತದ ಅಂತ ಕೇಳಿದರ
’ಯಪ್ಪಾ ಹಂಗೇನರ ಆದರ ನಿಮಗ ಚೈನಿ ಹೊಡಿಲಿಕ್ಕೆ ವಾರಕ್ಕ ಎರಡ ವೀಕೆಂಡ್ ಬರ್ತಾವ ತೊಗೊರಿ’ ಅಂದ್ಲು.
’ಲೇ ನೀ ನಂದ ಬಿಡ ನಿಂದ ಹೇಳ’ ಅಂದರ ’ ನಂಗೇನ ಭಾಳ ಫರಕ ಬೀಳಂಗಿಲ್ಲ, ಈಗ ವರ್ಷಕ್ಕ್ ಆರ ಸರತೆ ತವರ ಮನಿಗೆ ಹೋಗ್ತೇನಿ ಆವಾಗ ಹನ್ನೇರಡ ಸರತೆ ಹೋಗ್ತೇನಿ ಇಷ್ಟ’ ಅಂತ ಅಂದ್ಲು…
ಅಲ್ಲಾ ಅಕಿ ಲಾಜಿಕನ ವಿಚಿತ್ರ ಬಿಡ್ರಿ, ಜಗತ್ತಿನ ಮ್ಯಾಲೆ ಏನ ಪರಿಣಾಮ ಆಗ್ತದ ಅನ್ನೋದರ ಬಗ್ಗೆ ಖಬರಿಲ್ಲಾ. ನಾ ಮತ್ತ ಅಕಿಗೆ ತಿಳಿಸಿ ಹೇಳೊದರಾಗ ಅರ್ಥ ಇಲ್ಲ ಬಿಡ ಅಂತ ಸುಮ್ಮನಾದೆ.
ಹಿಂಗ ಭಾರಿ ವಿಚಿತ್ರ ವಿಚಿತ್ರ questionsಗೆ ಎಲ್ಲಾ ಸೈಂಟಿಫಿಕಲಿ ಏನ ಆಗಬಹುದು ಅಂತ what.if ಒಳಗ logical answers ಇರ್ತಾವ. ಆದರ ನನ್ನ ಹೆಂಡ್ತಿ what if ಪ್ರಶ್ನೆಗಳಿಗೆ ಲಾಜಿಕಲ್ ಉತ್ತರ ಇರಂಗಿಲ್ಲಾ.
ಮೊನ್ನೆ ಡಿಸೆಂಬರ ೨೧ಕ್ಕ ಮುಂಜಾನೆ ಎದ್ದೋಕಿನ ’ರ್ರಿ…ಹಂಗ ಮಾಯನ್ ಕ್ಯಾಲೆಂಡರ ಪ್ರಕಾರ december 21,2012ಕ್ಕೆ end of the world ಆಗಿತ್ತಂದರ ಏನ ಆಗ್ತಿತ್ತ’ ಅಂತ ಶುರು ಮಾಡಿದ್ಲು.
ಇನ್ನ ಎಲ್ಲೆ ಇಕಿಗೆ ಈ ಏಳ ವರ್ಷದಾಗ ಏನೇನ ಆಗ್ಯಾವ, ಯಾವ್ಯಾವ ಆಗಿರ್ತಿದ್ದಿಲ್ಲಾ ತಿಳಿಸಿ ಹೇಳೊದ ಬಿಡ ಅಂತ ತಲಿ ಕೆಟ್ಟ ’what if……ನಾ ನಿನ್ನ ಮದುವಿನ ಆಗಿದ್ದಿಲ್ಲಾ ಅಂದರ’? ಅಂತ ಸೈನ್ಸ ಬಿಟ್ಟ ಸಂಸಾರಕ್ಕ ಬಂದೆ, ತೊಗೊ ಅದನ್ನ ಕೇಳಿದ್ದ ಒಂದ ಉಸಿರನಾಗ
“ನಿಮಗ ಎರಡ ಮಕ್ಕಳಾಗಿರ್ತಿದ್ದಿಲ್ಲಾ, ನೀವು ಇಷ್ಟ ನಮ್ಮ ಜೀವಾ ತಿಂತಿದ್ದಿಲ್ಲಾ, ನಿಮ್ಮ ಮಾರಿಗೆ ಹದಿನೈದ ಸಾವಿರ ವರದಕ್ಷಿಣಿ, ಐದ ತೊಲಿ ಬಂಗಾರ ಬರ್ತಿದ್ದಿಲ್ಲಾ, ವಾಶಿಂಗ ಮಶೀನ, ಫ್ರಿಡ್ಜ್ ಅಳೇತನದಾಗ ಸಿಗತಿದ್ದಿಲ್ಲಾ, ಒದ್ದಿ ತಟ್ಟ ಹಚ್ಚಿದ್ದ ಗಡಿಗ್ಯಾಗಿನ ನೀರ ಕುಡಕೋತ ಒಗೆಯೋ ಕಲ್ಲಮ್ಯಾಲೆ ನಿಮ್ಮ ಅಂಡರವೇರ ಬನಿಯನ್ ನೀವ ತಿಕ್ಕಿ ಹಾಕೊತಿದ್ದರಿ….” ಹಂಗ ಹಿಂಗ ಅಂತ ಆ what.if ನವರಕಿಂತಾ ದೊಡ್ದ ಕಥಿ ಹೇಳಲಿಕತ್ಲು.
’ಏ, ಸಾಕ ಬಿಡ..ನಿಂಗ ಕೇಳಿದ್ದ ತಪ್ಪಾತ…ಮುಗಸ ಇನ್ನ’ ಅಂತ ನಾ ಟಾಪಿಕ್ ಮುಗಿಸಿದರು ಲಾಸ್ಟಿಗೆ ಅಕಿ
’what if -I would have had better husband? ‘ ಅಂತ ನಂಗ ಕೇಳಿದ್ಲು.
ನಾ ಅಕಿಗೇನ ಉತ್ತರಾ ಕೊಡಲಿಕ್ಕೆ ಹೋಗಲಿಲ್ಲಾ, ಯಾಕಂದರ ನಂಗೊತ್ತ, ಅಕಿಗೆ ನನ್ನಕಿಂತಾ ಛಲೋ ಗಂಡ ಸಿಕ್ಕರ ಸಿಗಬಹುದಿತ್ತ ಆದರ ನಂಗ ಹಿಂತಾ ಹೆಂಡ್ತಿ ಸಿಗಲಿಕ್ಕೆ ಸಾಧ್ಯನ ಇದ್ದಿದ್ದಿಲ್ಲಾ ಅಂತ.
ಅಲ್ಲಾ ಹಂಗ ನಾವಿಬ್ಬರೂ ಒಬ್ಬರಿಗೊಬ್ಬರನ ಪಡದ ಬಂದೇವಿ ಅಂದ ಮ್ಯಾಲೆ ಅನುಭಸಬೇಕ ಇಷ್ಟ. ಇನ್ನ ಇದರಾಗ what if ಅಂತ ವಿಚಾರ ಮಾಡ್ಕೋತ ಕೂಡಲಿಕ್ಕೆ ಈಗ ಭಾಳ ಲೇಟಾಗೇದ.
ಏನೋ ನನ್ನ ಹೆಂಡ್ತಿ ಎಲ್ಲಾದಕ್ಕೂ what if? ಹಂಗ ಆಗಿದ್ದರ ಹೆಂಗ? ಹಿಂಗ ಆಗಿದ್ದರ ಹೆಂಗ? ಅಂತ ಅನ್ನೋದಕ್ಕ ಇಷ್ಟೇಲ್ಲಾ ಬರಿಬೇಕಾತ.
ಹಂಗ english calendar ಪ್ರಕಾರ ಇನ್ನ ಮೂರ ದಿವಸಕ್ಕ ಹೊಸಾ ವರ್ಷ ಬರ್ತದ.
ನಿಮಗೇಲ್ಲಾ ಹೊಸ ವರ್ಷದ ಶುಭಾಶಯಗಳು.
ಅಲ್ಲಾ, ಮಾಯನ್ ಕ್ಯಾಲೆಂಡರ ಪ್ರಕಾರ 2012ಕ್ಕ ಜಗತ್ತ ಮುಳಗಿದ್ದರ ಇವತ್ತಿಗೆ ನಾವು ನೀವು ಹೋಗಿ ಏಳ ವರ್ಷ ಎಂಟ ದಿವಸ ಆಗಿರ್ತಿತ್ತ. ಆದರ ಹಂಗೇನ ಆಗಿಲ್ಲಾ. ಹಿಂಗಾಗಿ ಜೀವನದಾಗ ಯಾವದಕ್ಕೂ what if ಅಂತ ತಲಿಗೆಡಿಸ್ಕೊಳ್ಳಲಾರದ ಪಾಲಿಗೆ ಬಂದಿದ್ದ ಪಂಚಾಮೃತ ಅಂತ ಜೀವನದ ಪ್ರತಿಯೊಂದ ಕ್ಷಣಾನೂ ಎಂಜಾಯ ಮಾಡ್ರಿ.
Very humorous. Lighter than air. My hat’s off to Prashant Adur.