ಮೊನ್ನೆ ಹಿಂಗ ಗಂಡಾ ಹೆಂಡ್ತಿ ಇಬ್ಬರು ಫಾರ ಚೇಂಜ್ ಜಗಳಾಡಲಾರದ ನಮ್ಮ ನಮ್ಮ ಮೋಬೈಲ ಹಿಡ್ಕೊಂಡ ವಾಟ್ಸಪನಾಗಿನ ಮೆಸೆಜ್ ಸಂಬಂಧ ಇದ್ದವರಿಗೆ, ಇರಲಾರದವರಿಗೆ ಎಲ್ಲಾರಿಗೂ ಫಾರವರ್ಡ ಮಾಡ್ಕೋತ ಅಡ್ಡಾಗಿದ್ವಿ. ಅದರಾಗ ಲಾಕಡೌನ ಆಗಿ ಹಿಂಗ ಗಂಡ ತಿಂಗಾಳಾನಗಟ್ಟಲೇ ಮನ್ಯಾಗ ಬಿದ್ಕೊಂಡರ ಯಾ ಹೆಂಡ್ತೇರ ಗಂಡನ ಜೊತಿ ಎಷ್ಟ ದಿವಸಂತ ಜಗಳಾಡ್ತಾಳ ಬಿಡ್ರಿ.
ಹಂಗ ಹೆಂಡ್ತಿ ಕೈಯಾಗ ಸ್ಮಾರ್ಟ ಫೋನ ಇದ್ದರ ಜಗಳ ಕಡಿಮೆನ ಅನ್ನರಿ. ಅದರಾಗ ’ಹೆಂಡ್ತಿಗೆ ಒಂದು ಗಂಡನರ ಸ್ಮಾರ್ಟ ಇರಬೇಕು ಇಲ್ಲಾ ಕೈಯಾಗ ಸ್ಮಾರ್ಟ ಫೋನರ ಇರಬೇಕ’ ಅಂತಾರ ಹಿಂಗಾಗಿ ನಾ ಅಕಿಗೆ ಒಂದ ಸ್ಮಾರ್ಟ ಫೋನ ಕೊಡಿಸಿ ಬಿಟ್ಟೇನಿ.
ಇಕಿ ಇವತ್ತ ಒಂದ ಇಪ್ಪತ್ತ-ಇಪ್ಪತೈದ ವಾಟ್ಸಪ್ ಗ್ರೂಪನಾಗ ಇದ್ದಾಳ. ಈ ಗ್ರೂಪನಾಗ ಇಕಿ ಸ್ವಂತ ಏನೂ ಕಳಸಲಿಲ್ಲಾಂದರು ಆ ಗ್ರೂಪನಾಗಿಂದ ಈ ಗ್ರೂಪ್ಪಿಗೆ, ಈ ಗ್ರೂಪನಾಗಿಂದ ಆ ಗ್ರೂಪ್ಪಿಗೆ ಫಾರವರ್ಡ ಮಾಡ್ಕೋತ ಇರ್ತಾಳ.
ಅಲ್ಲಾ, ಒಮ್ಮೊಮ್ಮೆ ಸ್ವಂತ ಏನೇನರ ಹಾಕಿ ಕಂಟ್ರೋವರ್ಸಿ ಮಾಡ್ತಿರ್ತಾಳ ಆ ಮಾತ ಬ್ಯಾರೆ.
ಇನ್ನ ಇದ ನಮ್ಮೊಬ್ಬಕಿದೊಂದ ಕಥಿ ಅಲ್ಲಾ. ಎಲ್ಲಾರದೂ ಇದ ಹಣೇಬರಹ. ಬರೇ ವಾಟ್ಸಪನಾಗ ಇರ್ತಾರ, ಅದರಾಗ ಬರೋ ಸುದ್ದಿನ ಅವರ ಜನರಲ್ ನಾಲೇಜ್, ಅದಾರಗಿಂದ ರೆಸಿಪಿ, ಅದರಾಗಿಂದ ರೆಮಿಡಿ, ಅದರಾಗಿನ ರೂಮರ್ಸ್ ಅವರಿಗೆ ಖರೆ ಸುದ್ದಿ. ಇವತ್ತ ಎಲ್ಲಾರೂ ಆ ವಾಟ್ಸಪ್ university ಒಳಗ doctorate ಮಾಡಿದವರ.
ಇನ್ನ ನನ್ನ ಹೆಂಡತಿಗೆ ’ಹೆಂಡಂದರ ವಾಟ್ಸಪ್ ಗ್ರೂಪ’ನಾಗ ಒಬ್ಬೋಕಿ ಫ್ರೆಂಡ ಇದ್ದಾಳ. ಅಕಿ ಇದ್ದದ್ದರಾಗ ಸ್ವಲ್ಪ ಶಾಣ್ಯಾಕಿ, ಕಾಮನ್ ಸೆನ್ಸ್ ಇದ್ದೋಕಿ. ಅಕಿದು ಇಕಿದು ವಾಟ್ಸಪನಾಗ ಭಾರಿ ದೋಸ್ತಿ ಇತ್ತ. ದಿವಸಕ್ಕ ಇಬ್ಬರೂ ಒಂದ ಹತ್ತ-ಹದಿನೈದ ಸರತೆ ಒಂದಿಲ್ಲಾ ಒಂದ ವಿಷಯ ಹಂಚಗೋತಿದ್ದರು. ಅದರಾಗ ಈ ಲಾಕಡೌನ ಆದಾಗಿಂದಂತೂ ಇಬ್ಬರು ಯಾವಗಲೂ ವಾಟ್ಸಪನಾಗ ಲೈವ ಇರ್ತಿದ್ದರ ಬಿಡ್ರಿ.
ಇಕಿ ದಿವಸಾ ಅಕಿಗೆ ಮನ್ಯಾಗ ಮುಂಜಾನಿ ಮಾಡಿದ್ದ ತಿಂಡಿಯಿಂದ ಹಿಡದ ರಾತ್ರಿ ಯಾ ಗುಳಗಿ ತೊಗೊಂಡ ಮಲ್ಕೊಂಡೆ ಅಂತ ವಾಟ್ಸಪ್ ಅಪಡೇಟ್ ಮಾಡೋಕಿ ಮತ್ತ ಅಕಿನು ಹಂಗ ಮಾಡ್ತಿದ್ಲು. ಇಕಿ ಅದನ್ನ ಅಷ್ಟಕ್ಕ ಬಿಡ್ತಿದ್ದಿಲ್ಲಾ ರಾತ್ರಿ ನನಗ
“ರ್ರಿ..ಇವತ್ತ ಅಕಿ ಮನ್ಯಾಗ ಹಂಗ ಆತಂತ, ಹಿಂಗ ಆತಂತ. ಅಕಿ ಗಂಡ ಹಿಂಗ ಅಂದನಂತ” ಅಂತ ಸುದ್ದಿ ಹೇಳಿದ್ದ ಹೇಳಿದ್ದ.
’ಲೇ…ನಂಗರ ನನ್ನ ಹೆಂಡ್ತಿ ಸುದ್ದಿನ ರಗಡ ಆಗೇದ. ಇನ್ನ ಮತ್ತೊಬ್ಬರ ಹೆಂಡ್ತಿ ಸುದ್ದಿ ತೊಗೊಂಡ ಏನ ಮಾಡ್ಬೇಕ’ ಅಂತ ನಾ ಅಂದರ
’ನಿಮಗ ನನ್ನ ಫ್ರೆಂಡ್ಸ ಬಗ್ಗೆ ಏನೂ ಇಂಟರೆಸ್ಟ ಇಲ್ಲಾ’ ಅಂತ ಬೈತಿದ್ಲು. ಆದರ ಒಂದ ಸರತೆ ಅಕಿ ಫ್ರೆಂಡದ ಡಿ.ಪಿ ನೋಡಿದ ಮ್ಯಾಲೆ ನಂಗೂ ಖರೆನ ಅಕಿ ಫ್ರೆಂಡ್ ಬಗ್ಗೆ ಇಂಟರೆಸ್ಟ ತೊರಸಬೇಕು ಅಂತ ಅನಸ್ತ ಖರೆ ಆದರ ಈಗ ಇದ್ದಿದ್ವ ಸಂಭಾಳಸಲಿಕ್ಕೆ ಆಗವಲ್ತು ಅಂತ ಸುಮ್ಮನಾದೆ.
ಯಾಕೊ ಎರಡ ಮೂರ ದಿವಸದಿಂದ ನನ್ನ ಹೆಂಡ್ತಿ ಆ ಫ್ರೆಂಡ್ ವಿಷಯ ತಗದಿದ್ದಿಲ್ಲಾ, ನಂಗೂ ತಡ್ಕೊಳ್ಳಿಕ್ಕೆ ಆಗಲಿಲ್ಲಾ, ಅಕಿ ಬಗ್ಗೆ ಏನೂ ಸುದ್ದಿ ಕೇಳಲಾರದಕ್ಕ ಜೀವ ಚುಟು ಚುಟು ಅನ್ನಲಿಕತ್ತ ಅದಕ್ಕ ನಾ ಮೊನ್ನೆ ಸಡನ್ ಆಗಿ
“ಯಾಕಲೇ..ನಿಮ್ಮ ಫ್ರೆಂಡಂದ ಏನ ಸುದ್ದಿನ ಇಲ್ಲಲಾ…ಆರಾಮ ಇದ್ದಾಳಿಲ್ಲ?” ಅಂತ ಸಹಜ ಕೇಳಿದೆ. ಇಕಿ ಒಮ್ಮಿಕ್ಕಲೇ ಸಿಟ್ಟಲೇ
“ಯಾಕ..ನಿಮಗ್ಯಾಕ ಅಕಿ ಉಸಾಬರಿ..ನಿಮಗೇನರ ವಾಟ್ಸಪ್ ಮಾಡಿದ್ಲೇನ್?’ ಅಂತ ಕೇಳಿದ್ಲು
“ಏ, ನನಗೇಲ್ಲ ಅಕಿದ ಡೈರೆಕ್ಟ ಕಂಟ್ಯಾಕ್ಟಲೇ… ನಂದ ಏನಿದ್ದರೂ, ಯಾರ ಜೊತಿ ಇದ್ದರೂ ನಿನ್ನ ಥ್ರೂ ನ…..ನೀನ ಅಕಿ ಬಗ್ಗೆ ದಿವಸಾ ಹೇಳೋಕಿ ಅದಕ್ಕ ಕೇಳಿದೆ’ ಅಂತ ನಾ ಅಂದರ
’ನಾ ಅಕಿಗೆ ವಾಟ್ಸಪ್ ಒಳಗ ಚಾಳಿ ಬಿಟ್ಟೇನಿ’ ಅಂದ್ಲು.
ನಂಗ ಒಮ್ಮಿಕ್ಕಲೇ ಆಶ್ಚರ್ಯ ಆತ. ನನ್ನ ಹೆಂಡ್ತಿ ಚಾಳಿ ಬಿಟ್ಟಿದ್ದಿಕ್ಕಲ್ಲ ಮತ್ತ… ಇಕಿ ವಾಟ್ಸಪನಾಗೂ ಜಗಳಾಡಿ ಚಾಳಿ ಬಿಟ್ಟಿದ್ದಕ್ಕ.
ಅಲ್ಲಾ ಹಂಗ ಚಾಳಿ ಬಿಡೋದು ಅಂದರ ’ಟೂ’ ಬಿಡೋದು, ಮಾತಾಡೋದ ಬಿಡೋದು ಅಂತಾರಲಾ ಅದು.
’ಯಾಕಲೇ ಇರೋಕಿ ಒಬ್ಬೊಕಿ ಚೆಂದನ ಗೆಳತಿ ಇದ್ದಾಳ..ಅಕಿ ಜೊತಿ ಯಾಕ ಚಾಳಿ ಬಿಟ್ಟಿ’ ಅಂತ ಕೇಳಿದರ
“ಏ, ಯಾವಾಗಲೂ ಬರೇ ತಂದ ಪುರಾಣಾ ಹೇಳ್ತಾಳ. ಅಕಿ ಹೇಳಿದ್ದಕ್ಕೇಲ್ಲಾ ನಾವ ಅಪ್ರಿಸಿಯಟ್ ಮಾಡ್ಬೇಕ ನಾವ ಏನರ ಮೆಸೆಜ್ ಮಾಡಿದರ ಅದಕ್ಕ ರೆಸ್ಪಾಂಡ್ ಮಾಡಂಗಿಲ್ಲಾ. ಅಕಿ ಗಂಡನ ಶಾಣ್ಯಾ, ಅಕಿ ಮಕ್ಕಳ ಛಂದ..ಅಕಿ ಹೇಳಿದ್ದ ಖರೆ ಅಂತಾಳ. ನಾ ಏನರ ಅಂದರ ನನಗ ’ನಿಂಗ ಗೊತ್ತಾಗಂಗಿಲ್ಲಾ ಸುಮ್ಮನ ಕೂಡ, ಒಂದ ಸ್ವಲ್ಪ ನಿನ್ನ ಗಂಡನ್ನ ನೋಡೆರ ಕಲಿ’ ಅಂತ ನನಗ ಅಂತಾಳ, ಅದಕ್ಕ ನಾ ಅಕಿ ಚಾಳಿ ಬಿಟ್ಟೇನಿ’ ಅಂದ್ಲು.
ಹಕ್ಕ… ಏನ್ಮಾಡ್ತಿರಿ? ಪಾಪ ಅಕಿ ಫ್ರೆಂಡಗೆ ನನ್ನ ಬಗ್ಗೆ ಛಲೋ ಇಂಪ್ರೆಶನ್ ಇದ್ದದ್ದ ಇಕಿಗೆ ತಡ್ಕೊಳಿಕ್ಕೆ ಆಗಲಿಲ್ಲಾ. ಅಕಿ ಜೊತಿ ಚಾಳಿ ಬಿಟ್ಟಿದ್ಲು.
ಹಿಂಗ ಯಾರದರ ಜೊತಿ ಸ್ವಲ್ಪ ಜಗಳಾತೊ ಇಲ್ಲೋ ಅವರ ಜೊತಿ ಚಾಳಿ ಬಿಡೋ ಚಟಾ ಇಕಿದ ಹುಟ್ಟ ಗುಣಾರಿಪಾ.
ನಂಗ ಇಕಿ ಹಿಂಗ ಮಾತ ಮಾತಿಗೆ ಚಾಳಿ ಬಿಡೋದ ಫಸ್ಟ ಟೈಮ ಗೊತ್ತಾಗಿದ್ದ ಲಗ್ನ ಫಿಕ್ಸ ಆದಮ್ಯಾಲೆ.
ನಾ ದೊಡ್ಡಿಸ್ತನ ಮಾಡಿ ’ಹಗ್ ಡೇ’ ದಿವಸ ಅಕಿನ್ನ ಅಪಗೊಂಡೆ. ಅಕಿ ಸಿಟ್ಟಿಗೆದ್ದ
’ಹಿಂಗ ಲಗ್ನಕಿಂತಾ ಮೊದ್ಲ ನಂಗ ಹಿಂತಾವೇಲ್ಲಾ ಲೈಕಿಲ್ಲಾ…social distance maintain ಮಾಡ್ರಿ’ ಅಂತ ನನ್ನ ಜೊತಿ ಜಗಳಾಡಿ ಚಾಳಿ ಬಿಟ್ಟ ಬಿಟ್ಟಳು.
ಅಲ್ಲಾ, ಆವಾಗೇನ ಕೋರೊನಾ ಇರಲಿಲ್ಲ, ಪ್ರೇರಣಾ ಒಬ್ಬಿಕಿನ ಇದ್ಲ ಬಿಡ್ರಿ.
ನಾ ಮತ್ತ ಅಕಿಗೆ ರಮಿಸಿ ಚಾಳಿ ಹಿಡಿಲಿಕ್ಕೆ ’ಕಿಸ್ ಡೇ’ತನಕ ಕಾಯಬೇಕಾತ. ಹಂತಾಕಿ ಇಕಿ.
ಹನಿಮೂನಗೇ ಹೋದಾಗ ನಾ ಏನೋ ಪ್ರೋಟಿನ್- ವಿಟಾಮಿನ್ ಜಾಸ್ತಿ ಇರ್ತದ ಅಂತ ಮಶ್ರೂಮ ಮಂಚೂರಿ ತಿಂದರ
’ಛೀ..ಥೂ…..ನೀವು ನಾಯಿಕೊಡಿ ತಿಂತೀರಿ…. ನಂಗ ಮದ್ವಿಕಿಂತ ಮುಂಚೆ ಹೇಳೆಲಾ’ ಅಂತ ನನ್ನ ಜೊತಿ ಜಗಳಾಡಿ ಚಾಳಿ ಬಿಟ್ಟಿದ್ಲು.
ಕಡಿಕೆ ನಾ ’ಲೇ, ಮಶ್ರೂಮ ವೆಜಿಟೇರಿನಲೇ….ಅದರಾಗ ಹೈ ಪ್ರೋಟಿನ್-ವಿಟಾಮಿನ್ ಇರೋದ….ಇನ್ನೊಂದ ಎರಡ ತಿಂಗಳಕ್ಕ ನಿನಗೂ ಬೇಕಾಗ್ತದ’ ಅಂತ ಕನ್ವಿನ್ಸ ಮಾಡಿ ಚಾಳಿ ಹಿಡಿಯೋದರಾಗ ಅರ್ಧಾ ಹನಿಮೂನ ಮುಗದಿತ್ತ…ಹಿಂಗ ಅಕಿಗೆ ಚಾಳಿ ಬಿಡೋದು ಮೊದ್ಲಿಂದ ಬಂದ ಸ್ವಭಾವ.
ಇಷ್ಟ ವರ್ಷದ ಸಂಸಾರದಾಗ ಅದ ಎಷ್ಟ ಸರತೆ ಚಾಳಿ ಬಿಟ್ಟಾಳೊ ಏನೋ ಲೆಕ್ಕಿಲ್ಲಾ. ನಾ ಅಕಿ ಏನ ಚಾಳಿ ಬಿಟ್ಟರು ಹಗಲ ಹೊತ್ತಿನಾಗ ಇಷ್ಟ ಅಲಾ ಅಂತ ತಲಿ ಕೆಡಸಿಗೊಳ್ಳಿಕ್ಕೆ ಹೋಗಂಗಿಲ್ಲಾ. ಅಲ್ಲಾ, ಆಮ್ಯಾಲೆ ಚಾಳಿ ಬಿಡೋದ ಅಂದರೇನು? ಮಾತಾಡಂಗಿಲ್ಲಾ, ಇಷ್ಟ ಹೌದಲ್ಲ? ಬಾಕಿ ಎಲ್ಲಾ ಮಾಮೂಲ ನಡದ ನಡದಿರತದ….ಹೋಗಲಿ ಬಿಡ ಮನಿನರ ಶಾಂತ ಇರ್ತದ ಅಂತ ಸುಮ್ಮನ ಇರ್ತೇನಿ. ಅದರಾಗ ಈ ಲಾಕಡೌನ ಒಳಗಂತೂ ಇಪ್ಪತ್ತನಾಲ್ಕ ತಾಸು ನಾನೂ ಮನ್ಯಾಗ, ಹಿಂಗಾಗಿ ಅಕಿ ಭಾಳ ಜೀವಾ ತಿನ್ನಲಿಕತ್ತರ ನಾನ ಅಕಿ ಚಾಳಿ ಬಿಡಲಿಕ್ಕೆ ಶುರು ಮಾಡೇನಿ.
ಮೊದ್ಲ ಹಿಂಗ ಇಕಿ ಮಾತ ಮಾತಿಗೆ ’ನಿಮ್ಮ ಚಾಳಿ ಟೂ’ ಅನ್ನೋದಕ್ಕ ’ನಾ ಎಲ್ಲೆ ಸಣ್ಣೋಕಿನ ಮಾಡ್ಕೊಂಡೇನಿ, ನಂದೇನರ ಬಾಲ್ಯ ವಿವಾಹ ಆಗೇದೆನ?’ ಅಂತ ಅನಸ್ತಿತ್ತ ಆದರ ಆಮ್ಯಾಲೆ ರಿಯಲೈಸ್ ಆತ ಇಕಿ ಫಿಸಿಕಲಿ ಇಷ್ಟ ದೊಡ್ಡಕಿ ಆಗ್ಯಾಳ ಸ್ವಭಾವದ್ಲೆ ಇನ್ನು ಪಾಪ ಸಣ್ಣ ಹುಡಗಿನ ಅಂತ.
ಆದರೂ ನೀವ ಏನ ಅನ್ನರಿ ಈ ವಾಟ್ಸಪ್ ಬಂದ ಮ್ಯಾಲೆ ಹೆಂಡಂದರೊಳಗ ಜಗಳಾ, ಜಲಸಿ ಶುರು ಆಗ್ಯಾವ. ಅವಕ್ಕೇನ ಲಾಜಿಕ್ ಇಲ್ಲಾ ಏನಿಲ್ಲಾ, ಅಕಿ ಸ್ಟೇಟಸ್ ಇಕಿಗೆ ಲೈಕ ಆಗಂಗಿಲ್ಲಾ, ಇಕಿದ ಇನ್ನೊಬ್ಬೊಕಿಗೆ ಲೈಕ ಆಗಂಗಿಲ್ಲಾ. ಅಕಿ ಸ್ಟೇಟಸಗೆ ಇಕಿ ಕಮೆಂಟ್ ಮಾಡಿದರ ಮತ್ತೊಬ್ಬೊಕಿಗೆ ಲೈಕ ಆಗಂಗಿಲ್ಲಾ. ಈ ಸುಡಗಾಡ ವಾಟ್ಸಪನಿಂದ ಸಂಬಂಧ ಹಳ್ಳಾ ಹಿಡಿಲಿಕತ್ತಾವ. ವಾಟ್ಸಪ್ ಒಂದ ಇವತ್ತ ಕೆಟ್ಟ ಚಟಾ ಆಗೇದ. ನನಗಂತೂ ಸುಮ್ಮನ ನಾಳೆ ಈ ಲಾಕಡೌನ ಲಫಡಾ ಮುಗದಮ್ಯಾಲೆ ವಾಟ್ಸಪ್ ಬಂದ ಮಾಡಬೇಕ ಅನಸ್ತದ. ಹಂಗ ಕೊರೊನಾದ್ದ ಜಾಸ್ತಿ ಮಾರ್ಕೇಟಿಂಗ ಮಾಡಿ ಮನಿ ಮನಿಗೆ ವೈರಲ್ ಮಾಡಿದ್ದ ಈ ಸುಡಗಾಡ ವಾಟ್ಸಪನ ಮತ್ತ.
ಅಲ್ಲಾ ಹಂಗ ನಾ ಹೇಳಿದ್ದ ಖರೆ ಅನಿಸಿದರ ನನ್ನ ಆರ್ಟಿಕಲ್ ನಿಮ್ಮ ಎಲ್ಲಾ whatsapp ಗ್ರೂಪನಾಗ ಶೇರ ಮಾಡ್ರಿ ಮತ್ತ.
Very nice. Good topic.
Please write on wife’s investigation on husband’s WhatsApp.
ನಮ್ಮ ಸ್ಕೂಲ ಗ್ರುಪ್ ನ್ಯಾಗ ಹುಡುಗೇರ ಸೇರದಾಗಿಂದ ನನ್ನ ಹೆಂಡತಿ ದಿವಸಕ್ಕ ಹತ್ತ ಸಲೆ ನನ್ನ ವಾಟ್ಸಪ್ ಚೆಕ್ ಮಾಡತಾಳ.