’ನಿಂಗ ಎಷ್ಟ ಮಾಡಿದರು ಅಷ್ಟ’
’ನಾ ಏನ ಮಾಡಿದರು ನಿಮಗ ಸಮಾಧಾನ ಇಲ್ಲ ತೊಗೊರಿ’
’ಬರೇ ನಾ ಮಾಡಿದ್ದರಾಗ ತಪ್ಪ ಹುಡುಕರಿ’
’ನಾ ಹೆಂತಾ ಅಡಗಿ ಮಾಡಿದರು ಹೆಸರ ಇಡೋದ ಬಿಡಬ್ಯಾಡ್ರಿ’
’ನಾ ಮಾಡಿದ್ದ ಒಂದ ಕೆಲಸಕ್ಕರ ಹೌದ ಅಂತಿ ಏನ’….ಹಿಂತಾವೇಲ್ಲಾ ಮಾತು ಏನಿಲ್ಲಾಂದರೂ ದಿನಕ್ಕ ಒಂದ ಸರತೆನರ ಎಲ್ಲಾರ ಮನ್ಯಾಗೂ ಒಬ್ಬರಿಲ್ಲಾ ಒಬ್ಬರ ಅಂದ ಅಂತಿರ್ತಾರ. ಇದರಾಗ ಅನಿಸ್ಗೊಂಡಿದ್ದ ಗಂಡಾ, ಅಂದೋಕಿ ಹೆಂಡ್ತಿ ಅನ್ನೋ ಉದಾಹರಣೆನ ಜಾಸ್ತಿ ಇರ್ತಾವ ಆ ಮಾತ ಬ್ಯಾರೆ.
ಅಲ್ಲಾ ಹಂಗ ಕೆಲವೊಬ್ಬರ ಸ್ವಭಾವನ ಹಂಗ ಅವರಿಗೆ ಏನ ಮಾಡಿದರೂ ಸಮಾಧಾನ ಇರಂಗಿಲ್ಲಾ, ಯಾರ ಮಾಡಿದರು ಸಮಾಧಾನ ಇರಂಗಿಲ್ಲಾ. ಅವರ ಎಲ್ಲಾದಕ್ಕೂ ಹೆಸರ ಇಟ್ಕೋತ, ಕೊರಗಕೋತ, ಎಲ್ಲಾದಕ್ಕೂ ಗೊಣಗಕೋತ, ಒಟ್ಟ ಒಂದ ಮಾತನಾಗ ಹೇಳ್ಬೇಕಂದರ ಯಾವಾಗಲೂ ಮಂದಿ ಮಾಡಿದ್ದರಾಗಿನ ತಪ್ಪ ಹುಡ್ಕೋತ, ಇಲ್ಲಾ ತಮ್ಮ ಕಡೆ ಇದ್ದದ್ದಕ್ಕ ಸಮಾಧಾನ ಪಡಲಾರದ, ನಮ್ಮ ಹಣೆಬರಹನ ಇಷ್ಟ ಅಂತ ಕೊರಗತಿರ್ತಾರ. ಹಂತಾವರಿಗೆ ಇಂಗ್ಲೀಷ ಒಳಗ ವ್ಹೈನರ್ಸ್ ಅಂತ ಅಂತಾರ.
ಹಂಗ ಎಲ್ಲಾ ವ್ಹೈನರ್ಸ್ ಹೆಣ್ಣಮಕ್ಕಳ ಇರಬೇಕ ಅಂತೇನ ಇಲ್ಲಾ, ಒಂದಿಷ್ಟ ಮಂದಿ ಗಂಡಸರು ಇರ್ತಾರ. ಅದ ಸ್ವಭಾವ, ಅದಕ್ಕ ಏನ ಮಾಡ್ಲಿಕ್ಕೆ ಬರಂಗಿಲ್ಲಾ. ಹುಟ್ಟುಗುಣಾ ಸುಟ್ಟರು ಹೋಗಂಗಿಲ್ಲಾ ಅಂತಾರಲಾ ಹಂಗ. ಅವರ ಜೀವನದಾಗ ಎಷ್ಟ ಇದ್ದರೂ ಕಡತನಕ ಕೊರಗಕೋತ, ಮಂದಿ ಮಾಡಿದ್ದಕ್ಕ ಹೆಸರ ಇಡ್ಕೋತನ ಇರ್ತ್ತಾರ. ಆದರ ಹೆಣ್ಣಮಕ್ಕಳಿಗೆ ಅದರಾಗೂ ಹೆಂಡ್ತಿ ಅನ್ನೋಕಿಗೆ ಈ ವ್ಹೈನಿಂಗ್ ಒಂದ ಸ್ವಲ್ಪ ಜಾಸ್ತಿ ಇರ್ತದ ಅಂತ ಬ್ಯಾರೆ ಏನ ಹೇಳ್ಬೇಕಾಗಿಲ್ಲಾ.
ಅಲ್ಲಾ ಎಲ್ಲಾ ಬಿಟ್ಟ ಇವತ್ತ ಯಾಕ ಈ ವಿಷಯ ಬಂತ ಇನ್ನೊಂದ ಎರಡ ದಿವಸಕ್ಕ ಅಂದರ ಡಿಸೆಂಬರ್ 26ಕ್ಕ ಅಮೇರಿಕಾದೊಳಗ ’ನ್ಯಾಶನಲ್ ವ್ಹೈನರ್ಸ್ ಡೇ’ ಅಂತ ಸೆಲೆಬ್ರೇಟ್ ಮಾಡ್ತಾರ. ಅಂದರ ’ರಾಷ್ಟ್ರೀಯ ಕೊರಗುವವರ ದಿನ’. ಅಂದರ ಅವರ ಅವತ್ತ ಇಷ್ಟ ಕೊರಗತಾರ ಇಲ್ಲಾ ಅವತ್ತ ಎಲ್ಲಾರೂ ಸಾರ್ವಜನಿಕವಾಗಿ ಕೊರಗಬೇಕು ಅಂತೇನ ಅಲ್ಲಾ, ಅವತ್ತ ಹಿಂತಾ ಕೊರಗೊವರಿಗೆ
’ಭಾಳ ಚಿಂತಿ ಮಾಡಬ್ಯಾಡ್ರಿ….ಇದ್ದಿದ್ದರಾಗ ಸಮಾಧಾನ ಪಡ್ರಿ, ಸಂತೃಪ್ತಿ ಇಂದ ಬದಕರಿ …ನಿಮ್ಮ ಕಡೆ ಏನ ಅದ ಅದನ್ನ ಪಾಲಿಗೆ ಬಂದಿದ್ದ ಪಂಚಾಮೃತ ಅಂತ ಖುಶಿ- ಖುಶಿಲೇ ಇರ್ರಿ….ಇರಲಾರದ ಬಗ್ಗೆ ತಲಿಕೆಡಸಿಗೊಂಡ ಯಾವಾಗಲೂ ಗೊಣಗಕೋತ ಇರಬ್ಯಾಡ್ರಿ’ ಅಂತ ಸಮಾಧಾನ ಮಾಡಿ ಅವರಿಗೆ ಉತ್ಸಾಹಿಸಿ, ಪ್ರೋತ್ಸಾಹಿಸಿ ’ನ್ಯಾಶನಲ್ ವ್ಹೈನರ್ಸ್ ಡೇ’ ಸೆಲೆಬ್ರೇಟ್ ಮಾಡ್ತಾರಂತ.
ಹಂಗ ನಂಗ ಈ ವ್ಹೈನರ್ಸ್ ಡೇ ಬಗ್ಗೆ ಗೊತ್ತ ಇದ್ದಿದ್ದಿಲ್ಲಾ, ಆದರ ಹಿಂಗ ಗೊಣಗೋರನ ದಿನಂ ಪ್ರತಿ ನೋಡ್ತಿದ್ದೆ. ಇವತ್ತೂ ನೋಡ್ತೇನಿ ಬಿಡ್ರಿ.
ಅಲ್ಲಾ ನಾ ಅವರಿವರ ಕಥಿ ಯಾಕ ಹೇಳಲಿ ನಮ್ಮ ಮನಿ ಮಂದಿ ಕಥಿನ ರಗಡ ಅವ, ಮ್ಯಾಲೆ ನಮ್ಮ ಮನ್ಯಾಗ ಗೊಣಗೋರ ಕಡಿಮಿ ಇಲ್ಲಾ, ರಗಡ ಮಂದಿ ಇದ್ದಾರ…
ನಾ ಸಣ್ಣಂವ ಇದ್ದಾಗ 87% ಮಾರ್ಕ್ಸ ತೊಗೊಂಡರು ನಮ್ಮವ್ವಗ ಸಮಾಧಾನ ಇರ್ತಿದ್ದಿಲ್ಲಾ, ಭಾಳ ಕಡಮಿ ಆತ ಮಿನಿಮಮ್ 95%ರ ಆಗಬೇಕಿತ್ತ ಅನ್ನೋಕಿ. ಅಲ್ಲಾ 87 % ಮಾಡಿದರೂ ನಾನ ಸಾಲಿಗೆ ಫಸ್ಟ ಅಂತ ಅಂದರೂ ಸಮಾಧಾನ ಇರ್ತಿದ್ದಿಲ್ಲಾ. ಆವಾಗ ಫಸ್ಟ್ ರ್ಯಾಂಕ್ ತೊಗೊಂಡ ಏನ ಮಾಡ್ಬೇಕ, ಪರ್ಸೆಂಟೇಜ್ ಇಂಪಾರ್ಟೆಂಟ್ ಅನ್ನೋಕಿ. ನನ್ನಕಿಂತ ಯಾವದರ ಒಂದ ಸಬ್ಜೆಕ್ಟ ಒಳಗ ಬ್ಯಾರೆಯವರಿಗೆ ಒಂದ ಹತ್ತ ಮಾರ್ಕ್ಸ ಜಾಸ್ತಿ ಬಿದ್ದಿದ್ದರ
’ನೋಡ ಅವನ್ನ ನೋಡಿ ಕಲಿ’ ಅನ್ನೋಕಿ…ಅಲ್ಲಾ ಓವರ್ ಆಲ್ ಅಂವಾ ನನ್ನಕಿಂತಾ 4% ಕಡಮಿ ಮಾಡ್ಯಾನ ಅದ ಸಂಬಂಧ ಇಲ್ಲಾ, ಸೋಸಿಯಲ್ ಸ್ಟಡೀಜ್ ಒಳಗ ಅವನಕಿಂತ ಮಾರ್ಕ್ಸ ಕಡಮಿ ಬಿದ್ದಾವಿಲ್ಲ ಮುಗಿತ. ಅದ ಒಂದ ಇಶ್ಯೂ….ಒಂದ ವಾರ್ ಲೊಚ್ ಲೊಚ್ ಅನ್ನೋಕಿ…
ಇನ್ನ ನಮ್ಮಪ್ಪ ನಾ ಏನ ಮನಿ ಕೆಲಸಾ ಮಾಡಿದರು ತಪ್ಪ ಹುಡ್ಕೋಂವಾ. ಅವಂಗ ನಾ ಮಾಡಿದ್ದ ಒಂದ ಕೆಲಸನೂ ಬಗಿ ಹರಿತಿದ್ದಿಲ್ಲಾ. ಅದಕ್ಕ ಅಂವಾ ಯಾವಾಗಲೂ
’ನಿನಗ ಹೇಳಿದ್ದ ಒಂದ ಕೆಲಸಾನೂ ಛಂದಾಗಿ ಮಾಡ್ಲಿಕ್ಕೆ ಬರಂಗಿಲ್ಲಾ’ ಅಂತ ಗೊಣಗೊಂವಾ.
ನಮ್ಮವ್ವನೂ ಹಂಗ, ಗಿರಣಿ ಹೋಗಿ ಹಿಟ್ಟ ಹಾಕಿಸ್ಕೊಂಡ ಬಂದಾಗ ಹಿಟ್ಟ ಉರಟ್ ಇದ್ದರ ಅದಕ್ಕೂ ನನಗ ಬೈಯ್ಯೊಕಿ. ಅಲ್ಲಾ ಹಿಟ್ಟ ಹಾಕೋಂವಾ ಗಿರಣಿಯಂವಾ ನಂದೇನ ತಪ್ಪ ಅಂದರ ’ ನೀ ಯಾಕ ಗಿರಣ್ಯಾಗ ಡಬ್ಬಿ ಇಟ್ಟ ರಸ್ತೆದ ಮ್ಯಾಲೆ ಗುಂಡಾ ಆಡ್ಕೋತ ನಿಂತಿದ್ದಿ, ಮುಂದ ನಿಂತ ಹಾಕಿಸ್ಕೊಂಡ ಬಾ ಅಂತ ಹೇಳಿದ್ನಿಲ್ಲ’ ಅಂತ ಬೈಯೋಕಿ. ರೇಶನ್ ಅಕ್ಕಿ ಒಳಗ ಹರಳ ಜಾಸ್ತಿ ಬಂದರ ಅದಕ್ಕೂ ನನಗ ಬೈಯೋಕಿ, ನಾ ತಂದ ಕಾಯಿಪಲ್ಯಾಕ್ಕ ಇದ ಎಳೆದ ಇಲ್ಲಾ, ಇದು ಬಾಡಿ ಹೋಗೇದ ಅಂತೇಲ್ಲಾ ಹೆಸರ ಇಡೋಕಿ. ಅದ ಬಿಡ್ರಿ ನಾ ತಂದ ನವಲಕೋಲ ಬೆಂಡ ಹರದಿದ್ದರ, ಸವತಿಕಾಯಿ ಕಹಿ ಬಂದರ ಸಹಿತ ನನಗ ಅನ್ನೋಕಿ. ಏನ್ಮಾಡ್ತೀರಿ? ಸುಮ್ಮನ ಎಲ್ಲಾ ಕೆಲಸಾ ನೀನ ಮಾಡ, ನಿನಗ ನಾ ಏನ ಮಾಡಿದರು ಸಮಾಧಾನ ಆಗಂಗಿಲ್ಲಾ ಅಂತ ನಾ ಅಂದರ ಅದಕ್ಕ ನಮ್ಮಪ್ಪ
’ಲೇ ಮಗನ…ಒಂದನೇದ ಗಂಡಾಳ ಬೇಕಂತ ದೇವರಿಗೆ ಬೇಡ್ಕೊಂಡ ನಿಮ್ಮವ್ವ ಹಡದಿದ್ದ ನಿನಗ ..ಸುಮ್ಮನ ಅಕಿ ಹೇಳಿದಂಗ ಬಾಯಿಮುಚಗೊಂಡ ಕೇಳ…ಈಗ ನಾ ಅಕಿ ಹೇಳಿದಂಗ ಕೇಳ್ಕೊಂಡ ಬದಕಲಿಕತ್ತಿಲ್ಲಾ’ ಅಂತ ನಂಗ ಜೋರ ಮಾಡೊಂವಾ. ಇನ್ನ ನಮ್ಮಪ್ಪ ನಮ್ಮವ್ವನ ಅಡಗಿಗೆ ದಿನಾ ಒಂದಿಲ್ಲಾ ಒಂದ ಹೆಸರ ಇಡ್ತಿದ್ದಾ, ಮ್ಯಾಲೆ ಅಂವಾ ಭಾಳ ಪಿಸಿ ಇದ್ದಾ. ’ಸಾರಿಗೆ ಉಪ್ಪ ಕಡಿಮೆ ಆಗೇದ, ಹಿಂಗ ಜಾಸ್ತಿ ಆಗೇದ, ಲಿಂಬಿ ಹಣ್ಣ ಬೀಜ ತವಿ ಒಳಗ ಹಂಗ ಉಳದಾವ, ಹುಳಿಗೆ ಹಾಕಿದ್ದ ಕೊಬ್ಬರಿ ಖಮಟ್ ಆಗೇದ’ ಅಂತಾ ದಿವಸಾ ಒಂದಿಲ್ಲಾ ಒಂದ ಹೆಸರ ಇಡೊವನ. ಅವನು ಈ ಅಡಗಿ ವಿಷಯ ಒಳಗ ಒಂದ ಟೈಪ್ ವ್ಹೈನರ್ ಅನ್ನರಿ. ಅಂವಾ ಹಂಗ ಅಂದಾಗೊಮ್ಮೆ ನಮ್ಮವ್ವ ತಲಿ ಕೆಟ್ಟ
’ನಾ ಹೆಂತಾ ಅಡಗಿ ಮಾಡಿದರು ನೀವು ಹೆಸರ ಇಡಲಾರದ ಉಣ್ಣೋರ ಅಲ್ಲ ತೂಗೊರಿ’ ಅಂತ ಅನ್ನೋಕಿ.
ಇನ್ನ ಆವಾಗ ಇವಾಗ ನಾನೂ ನಮ್ಮವ್ವನ ಮ್ಯಾಲೆ ಗೊಣಗೋಂವಾ ’ನಂಗ ಲೇಟ್ ಆತು, ಲಗೂನ ಅಡಗಿ ಮಾಡು ಅದು ಇದು ಅಂತ ಹಂಗ ನಾ ಗೊಣಗಿದಾಗೊಮ್ಮೆ ಅಕಿ ನನಗ ’ಏಳರಾಗ ಹುಟ್ಟಿ ಏನ…ಸ್ವಲ್ಪ ತಡಿ…ಸಮಾಧನ ಇರಲಿ’ ಅಂತ ಅನ್ನೋಕಿ. ಅಲ್ಲಾ, ಹಂಗ ನನಗ ಹತ್ತರಾಗ ಹಡದೋಕಿನ ಅಕಿ, ಮತ್ತ ನನಗ ಏಳರಾಗ ಹುಟ್ಟಿ ಏನ ಅಂತ ಜೋರ್ ಮಾಡೋಕಿ. ಅಲ್ಲಾ ಹಿಂತಾ ವಿಷಯ ಎಲ್ಲಾರ ಮನ್ಯಾಗನೂ ಕಾಮನ್ ಬಿಡ್ರಿ.
ಆದರ ಹಿಂಗ ಗೊಣಗೋಕೊತ ಇರೋರದು ಒಂದ ದಿವಸಾ ಮಾಡ್ತರಲಾ ಅಂತ ಆಶ್ವರ್ಯ ಆಗಿ ಹಳೇವ ಎಲ್ಲಾ ನೆನಪಾದ್ವು ಇಷ್ಟ.
ಅಲ್ಲಾ ಮನಿ ಮಂದಿ ಬಗ್ಗೆ ಎಲ್ಲಾ ಬರದ ನಿನ್ನ ಫೇವರೇಟ್ ಕ್ಯಾರೆಕ್ಟರ್ ಹೆಂಡ್ತಿ ಬಗ್ಗೆನ ಬರಿಲಿಲ್ಲಲಾ ಅನಬ್ಯಾಡ್ರಿ, ಅಕಿ ’ಮದರ್ ಆಫ್ ವ್ಹೈನರ್ಸ್’ ಇದ್ದಂಗ ಮ್ಯಾಲೆ ವೈಫ್ ಇಜ್ ಎವರಿಡೇ ವ್ಹೈನರ್. ಇವತ್ತ ಅಕಿ ವ್ಹೈನಿಂಗ್ ಬಗ್ಗೆ ನಾ ಮುದ್ದಾಂ ಬರದಿಲ್ಲಾ. ಅಕಿಗೆ ಈಗ ಮತ್ತೊಂದ ವ್ಹೈನಿಂಗ್ ಮಾಡ್ಲಿಕ್ಕೆ ಕಾರಣ ಸಿಗ್ತದ
’ಏನ ಈ ಸರತೆ ಗಿರಮಿಟ್ ಒಳಗ ನನ್ನ ಬಗ್ಗೆ ಬರದೇಲಲಾ’ ಅಂತ ಕೊಂಯ್ಯ್..ಕೊಂಯ್ಯ ಶುರು ಮಾಡ್ತಾಳ.
ಇರಲಿ ಹಂಗ ನನಗ ಭಾಳ ಮಂದಿ ’ಏ…ನೀ ಏನ ಎಲ್ಲಾ ಸುತ್ತ-ಮುತ್ತ ಬಳಸಿ ತೊಗೊಂಡ ಬಂದ ಮತ್ತ ಅದ ಹೆಂಡ್ತಿ ಅದ ಅವ್ವನ ಸುತ್ತ ಬರಿತಿ ಅಲಾ’ ಅಂತ ಅಂದ ಅಂತಾರ. ನೀವು ಇಂವಾ ಬರೇ ತನ್ನ ಹೆಂಡ್ತಿ ಬಗ್ಗೆನ ಬರಿತಾನ ಅಂತ ಬೇಜಾರ ಆಗದ ಇದ್ದ ಒಂದ ಹೆಂಡ್ತಿ ಮ್ಯಾಲೆ ಎಷ್ಟರ ವಿಷಯ ಬರಿತಾನ ಅಲಾ ಅಂತ ನನಗ ಎನಕರೇಜ್ ಮಾಡ್ರಿ, ಧೈರ್ಯಾ ತುಂಬರಿ..ಇನ್ನ ನಾ ನನ್ನ ಹೆಂಡ್ತಿ ಬಗ್ಗೆ ಬರಿಲಾರದ ಮತ್ತೊಬ್ಬರ ಹೆಂಡ್ತಿ ಬಗ್ಗೆ ಅಂತೂ ಬರಿಲಿಕ್ಕೆ ಬರಂಗಿಲ್ಲ. ಆಮ್ಯಾಲೆ ಹಂಗ ಹೆಂಡ್ತಿ, ಅವ್ವಾ ಇವರೇಲ್ಲಾ ಪ್ರಹಸನದಾಗಿನ ಪಾತ್ರ ಇಷ್ಟ, ಆದರ ಗಿರಮಿಟ್ ವಿಷಯ ಬ್ಯಾರೆ ಬ್ಯಾರೆ ಇರ್ತಾವ ಇಲ್ಲ? ಇಲ್ಲೆ ವಿಷಯ, ನ್ಯಾರೇಶನ್ ಇಂಪಾರ್ಟೆಂಟ್… ಕ್ಯಾರೆಕ್ಟರ್ ಹೆಸರಿಗೆ ಇಷ್ಟ.
ನೋಡ್ರಿ ಹಂಗ ನಿಮ್ಮ ಆಜು ಬಾಜೂನು ಯಾರರ ಎಲ್ಲಾದಕ್ಕೂ ಕೊರಗೋರ ಇದ್ದರ ಅವರಿಗೆ ಒಂದ ಸ್ವಲ್ಪ ಸಮಾಧಾನ ಹೇಳ್ರಿ, ಏನ ಅದ ಜೀವನದಾಗ ಅದನ್ನ ಎಂಜಾಯ್ ಮಾಡ ಅಂತ ಹೇಳ್ರಿ…ಖುಶಿ- ಖುಶಿಯಿಂದ ಹಾಸಗಿದ್ದಷ್ಟ ಕಾಲ ಚಾಚಗೊಂಡ ಬದಕೋದ ಜೀವನ.. ಹಿಂಗಾಗಿ ಅದ ಇಲ್ಲಾ, ಇದ ಇಲ್ಲಾ ಅನ್ನಲಾರದ ಇದ್ದದ್ದಕ್ಕ ಸಮಾಧಾನ ಮಾಡ್ಕೊಂಡ ನಾವೇನ ಪಡದ ಬಂದೇವಿ ಅದ ನಮ್ಮ ಹಣೇಬರಹ ಅಂತ ನಕ್ಕೋತ ಇರೋದ ಜೀವನ. ಹೌದಲ್ಲ ಮತ್ತ?