“ಏ, ಏಳ್, ಏಳುವರಿ ಆಗಲಿಕ್ಕೆ ಬಂತ ಇನ್ನು ಬಿದಕೊಂಡಿಯಲ್ಲಾ. ಇವತ್ತ ಸೋಮವಾರ, ಆ ಹುಡುಗರನ ಎಬಿಸಿ ತಯಾರಮಾಡಿ ಸಾಲಿಗೆ ಬಿಟ್ಟ ನೀ ಆಪೀಸಿಗೆ ಹೋಗಬೇಕು. ಆಮ್ಯಾಲೆ ಲೇಟ ಆದರ ನಾ ನಿಂಗ ನಾಷ್ಟಾ ಇಲ್ಲದ ಹಂಗ ಕಳಸ್ತೇನ್ ಮತ್ತ?” ಅಂತ ನನ್ನ ಹೆಂಡತಿ ಮೊನ್ನೆ ಮುಂಜಾನೆ ಸುಪ್ರಭಾತ ಶುರು ಮಾಡಿದ್ಲು. ನಂಗ ಅಕಿದ ಈ ಚೀರ ಧ್ವನಿ ಅಲಾರಾಮ್ ಇಲ್ಲದ ಏಳಲಿಕ್ಕೆ ಆಗಂಗಿಲ್ಲಾ, ರೂಡಿ ಬಿದ್ದ ಹೋಗೇದ. ಹೆಂಡ್ತಿ ಹತ್ತ ಸರತೆ ಹೋಯ್ಕೊಂಡ ಚಾದರ ಜೊತಿ ಲುಂಗಿ ಹಿಡದ ಜಗ್ಗಿದಾಗ ಎಚ್ಚರಾಗೋದು. ದಿವಸಾ ಇದ ಹಣೇಬರಹ.
ನಾ ಎದ್ದ ಮಕ್ಕಳನ್ನ ಎಬಿಸಿ ತಯಾರ ಮಾಡಿ ಸಾಲಿಗೆ ಬಿಟ್ಟ ಆಫೀಸಿಗೆ ಹೋಗಬೇಕಂತ, ಅಕಸ್ಮಾತ ಲೇಟ ಆದರ ನಂಗ ತಿಂಡಿ ಇಲ್ಲಂತ. ಅವನೌನ ಅಕಿ ಮಾಡಿದ್ದ ಗಂಟ ಗಂಟ ಉಪ್ಪಿಟ್ಟ ತಿಂದ ಗಂಟಲದಾಗ ಸಿಗಿಸಿಗೋಳೊದಕಿಂತಾ ಹಂಗ ಹೋಗೊದು ಛಲೊ ಅಂತ ನಾ ಅಂತೂ ಅಕಿ ಉಪ್ಪಿಟ್ಟ ಮಾಡಿದಾಗೊಮ್ಮೆ ಮುದ್ದಾಮ ಲೇಟ ಮಾಡೇ ಏಳ್ತೇನಿ.
ಅಲ್ಲಾ ಏನ ಆತ ಇವನ ಹೆಂಡತಿಗೆ ಮೊನ್ನೆ-ಮೊನ್ನೆ ತನಕಾ ಹೆಂತಾ ಛಲೊ ಗಂಡಗ “ಹೋಗ್ರಿ, ಬರ್ರಿ, ಏನರ ಹಾಳಗುಂಡಿ ಬಿಳ್ರಿ” ಅಂತ ಮಾತ ಮಾತಿಗೆ “ರ್ರಿ” ಅಂತಿದ್ಲು ಈಗ ಒಮ್ಮಿಂದೊಮ್ಮೇಲೆ ಹಿಂಗ ಏಕವಚನದಲೇ ಮಾತಾಡಲಿಕ್ಕೆ ಶುರುಮಾಡ್ಯಾಳ ಅಂತ ಭಾಳ ತಲಿಕೆಡಸಿಗೋಬ್ಯಾಡರಿ. ಎಲ್ಲಾರ ಹೆಂಡಂದರು ಅಷ್ಟ, ತಮ್ಮ-ತಮ್ಮ ರಿಸ್ಪೆಕ್ಟಿವ್ ಗಂಡಂದರಿಗೆ ಏಕವಚನಲೇನ ಮಾತಾಡತಾರ. ಮಂದಿ ಮುಂದ ಅಲ್ಲದಿದ್ದರು ಮನ್ಯಾಗ ಗಂಡಾ-ಹೆಂಡತಿ ಇಬ್ಬರ ಇದ್ದಾಗರ ನಾವಿಬ್ಬರು ಫ್ರೆಂಡ್ಸ್ ಇದ್ದಂಗ ಅಂತ ‘ಬಾರೊ-ಹೋಗೊ’ ಇದ್ದ ಇರತದ.
ಆದರ ನಾ ನನ್ನ ವಿಷಯದಾಗ ಖರೆ ಹೇಳ್ತೇನಿ, ಬೇಕಾರ ನನ್ನ ಹೆಂಡತಿ ಮ್ಯಾಲೆ ಆಣಿ ಮಾಡಿ ಹೇಳ್ತೇನಿ, ಹಂಗ ನನ್ನ ಹೆಂಡತಿ ಮೊದ್ಲ ಒಮ್ಮೇನೂ ಏಕವಚನದ್ಲೆ ಮಾತಡ್ತಿದ್ದಿಲ್ಲಾ. ಹಂಗನೇರ ಬಾಯಿ ತಪ್ಪಿ ‘ಏ,ನಾ ಹೇಳಿದ್ದ ಮಾತ ಕೇಳ್ತಿಯೋ ಇಲ್ಲೋ’ ಅಂತ ಅಂದರು ಆಮ್ಯಾಲೆ ‘ವಳತ’ ಅಂತಿದ್ಲು. ಹಂಗ ದಿವಸಕ್ಕ ಹತ್ತ ಸರತೆ ವಳತ ಅಂತಿದ್ಲು ಖರೆ, ಆದರ ಒಂದ ಮುಂಜಾನೆ ನನ್ನ ಕಾಲ ಮುಟ್ಟಿ ನಮಸ್ಕಾರ ಮಾಡಿ ಎದ್ದಳಂದರ ರಾತ್ರಿ ನಂಗ ಕಾಲ ಒತ್ತಿ ಮಲಗಿಸಿ ಆಮ್ಯಾಲೆ ತಾ ಮಲ್ಕೊತಿದ್ಲು. ಅಷ್ಟ ಶೃದ್ಧಾ, ಭಕ್ತಿ, ಭಯ ಅಕಿಗೆ ಗಂಡನ್ನ ಕಂಡರ. ಅಲ್ಲಾ ನಾನೂ ಹಂಗ ಮೆಂಟೇನ ಮಾಡ್ತಿದ್ದಿ ಅನ್ನರಿ.
ಹಂತಾಕಿ ಹೆಂಗ ಒಮ್ಮಿಂದೊಮ್ಮಿಲೆ ಹಿಂಗ ಬದಲಾದ್ಲು? ನಾ ಹಂತಾದ ಏನ ಅಕಿಗೆ ಮಾಡಿದೆ? ಅಂತ ಅಂದರ….
ಆಗಿದ್ದ ಇಷ್ಟ, ಒಂದ ಹದಿನೈದ ದಿವಸದ ಹಿಂದ ನಮ್ಮ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಟಿ.ವಿ. ಒಳಗ
” ‘ಹೆಂಡಂದರೇನ ಗಂಡಂದರ ಮನಿ ಆಳಲ್ಲಾ, ಅವರಿಗೆ ಮನಿ ಕೆಲಸಾ ಮಾಡಿದ್ದಕ್ಕ ಗಂಡಾ ಪಗಾರ ಕೊಡಬೇಕು. ಹಂಗS ಪುಗಶೆಟ್ಟೆ ದುಡಿಸಿಗೋ ಬಾರದು’ ಅಂತ ಕಾನೂನ ಮಾಡಬೇಕಂತ ಪ್ರಪೋಸಲ್ ಕೊಡೊರಿದ್ದೇವಿ” ಅಂತ
ಒಂದ ದೊಡ್ಡ ಬಾಂಬ್ ಹಾಕಿ ಬಿಟ್ಟರು. ನನ್ನ ಹಣೇಬರಹಕ್ಕ ಎಂದೂ ನ್ಯೂಸ್ ನೋಡಲಾರದ ನನ್ನ ಹೆಂಡತಿ ಅವತ್ತ ನೋಡಿ ಬಿಟ್ಟಳು.
ಅವತ್ತಿನಿಂದ ನನ್ನ ಹೆಂಡತಿಗೆ ಅವನೌನ ಅದೇಲ್ಲಿ ಧೈರ್ಯ ಬಂತೋ ಏನೋ ಆ ತಾಯಿ ಬನಶಂಕರಿಗೆ ಗೊತ್ತ, ಗಣಪತಿ ಹಬ್ಬಕ್ಕ ತಂದಿದ್ದ ಸಾವಿರದ್ದ ಪಟಾಕ್ಷಿ ಸರಾ ಓಣ್ಯಾಗ ಹಚ್ಚಿ ಕುಣದಾಡಿ ಬಿಟ್ಟಳು. ಮುಂದ ಕೇಳ್ತಿರೇನ ಮರುದಿವಸದಿಂದನ ನನಗ ‘ಹೋಗೊ- ಬಾರೋ’ ಶುರು ಆತ, ಹಂಗ ಸಿಟ್ಟಿಗೆದ್ದಾಗ ಒಮ್ಮೆ ‘ಹೋಗಲೇ- ಬಾರಲೇ’ ಕಾಮನ್ ಆತ. ನಾ ಸುಮ್ಮನ ಬಾಯಿ ಮುಚಗೊಂಡ ಅನಿಸಿಗೊಳ್ಳಿಕತ್ತೇನಿ. ಏನ್ಮಾಡೋದು? ನನಗ ಇರೋಕಿ ಒಬ್ಬಕಿ ಹೆಂಡತಿ ಅದರಾಗ ಮಕ್ಕಳು ಬ್ಯಾರೆ ಸಣ್ಣವ ಅವ ಅಂತ ಗೊತ್ತಲಾ ನಿಮಗ.
ಅಲ್ಲಾ, ಅಕಸ್ಮಾತ ಹಂಗೇನರ ಈ ಕಾನೂನ ಖರೇನ ಜಾರಿಗೆ ಬಂದರ, ಈಗ ನಮ್ಮ ದೇಶದಾಗ ಹತ್ತ ನಿಮಿಷಕ್ಕೊಮ್ಮೆ ಆತ್ಮಹತ್ಯೆ ಮಾಡ್ಕೊಂಡ ಸಾಯೋ ಗಂಡಂದರ ಮೂರ ನಿಮಿಷಕ್ಕೊಮ್ಮೆ ಸಾಯಿತಾರ ನೋಡ್ತಿರ್ರಿ. ಹಿಂಗಾಗಿ ನಾ ಅಕಿಗೆ ಹೆದರಿ ಆತ್ಮಹತ್ಯೆ ಮಾಡ್ಕೊಂಡ ಸಾಯೋದಕಿಂತಾ ಇದ್ದ ಅಕಿನ್ನ ಸಹಿಸೋದ ಛಲೊ ಅಂತ ಸುಮ್ಮನಾಗಿ ಬಿಟ್ಟೇನಿ. ಅಲ್ಲಾ ಅಕಿನ್ನ ವಿರುದ್ಧ ಹಾಕ್ಕೊಳಿಕ್ಕೆ ಧೈರ್ಯ ಇಲ್ಲಾ ಅಂದರ ಇನ್ನ ಆತ್ಮಹತ್ಯೆ ಮಾಡ್ಕೋಳಿಕ್ಕೆ ತಲಿ ಎಲ್ಲೆ ಧೈರ್ಯ ಬರಬೇಕ ಬಿಡ್ರಿ.
ನೀವು ಸ್ವಲ್ಪ ವಿಚಾರ ಮಾಡ್ರಿ, ನಾಳೆ ನಮ್ಮ ದುರ್ದೈವಕ್ಕ, ಅಂದರ ಗಂಡಂದರ ದುರ್ದೈವಕ್ಕ ಖರೇನ ಈ ಕಾನೂನ ಬಂತ ಅಂತ ತಿಳ್ಕೋರ್ರಿ, ಕಂಪಲ್ಸರಿ ನಾವು ದುಡದದ್ದರಾಗ ಹೆಂಡತಿಗೂ ತಿಂಗಳಕ್ಕ ಒಂದ ಹತ್ತ -ಹದಿನೈದ ಪರ್ಸೆಂಟ್ ಕೊಡಬೇಕು ಅಂತ ಅಂದರ ಹೆಂಗs ಅಂತೇನಿ? ಅಲ್ಲಾ ಹೆಂಡತಿ ತನ್ನ ಮನಿ ಕೆಲಸಾ ತಾ ಮಾಡಿದ್ದಕ್ಕ ಪಗಾರ ತೊಗೊಳೊದು ಅಂದ್ರ ಏನsದ? ತಿಂಡಿ ಮಾಡಿ ತಿಂದಿದ್ದಕ್ಕ, ಅಡಿಗೆ ಮಾಡಿ ಉಂಡಿದ್ದಕ್ಕ, ಭಾಂಡಿ ಗಲಬರಿಸಿ ಡಬ್ಬಹಾಕಿದ್ದಕ್ಕ, ಅರಬಿ ಹಿಂಡಿ ಒಣಾ ಹಾಕಿದ್ದಕ್ಕ ಎಲ್ಲಾದಕ್ಕೂ ರೊಕ್ಕಾ ಅಂದರs, ಸುಮ್ಮನ ಅವನೌನ ನಾವ ಲಗ್ನಾ ಯಾಕ ಮಾಡ್ಕೋಬೇಕಿತ್ತ, ಒಂದ್ಯಾರಡ ಹೆಣ್ಣಾಳ ಇಟಗೋತಿದ್ವಿ ಇಲ್ಲೊ? ಅಲ್ಲಾ ಹಂಗ ಹೆಣ್ಣಾಳ ಇಟಗೊಂಡರ ಬ್ಯಾಡ ಅಂದಾಗ ಚೆಂಜನೂ ಮಾಡಬಹುದು ಆ ಮಾತ ಬ್ಯಾರೆ. ಅಲ್ಲರಿ ಇವತ್ತ ರೊಕ್ಕಾ ಕೊಟ್ಟರ ಹಡಿಯೋರ ಸಹಿತ ಸಿಗತಾರ ಅಂದಮ್ಯಾಲೆ ನಾವ್ಯಾಕ ಲಗ್ನಾ ಮಾಡ್ಕೊಂಡ ಹೆಂಡತಿಗೆ ಪಗಾರ ಕೊಟ್ಟ ಸಾಯಿಬೇಕರಿ?
ಅಲ್ಲಾ ಈ ಕಾನೂನ ಮಾಡೋರಿಗರ ಬುದ್ಧಿ ಅದನೋ ಇಲ್ಲೊ? ಗಂಡಾ ಹೆಂಡತಿ ನಡಕ ರಾಜಕೀಯ ಮಾಡೋದs? ಈ ಒಂದ ಪವಿತ್ರ ಸಂಬಂಧಾನೂ ಕಮರ್ಶಿಯಲ ಮಾಡೋದ? ಅಲ್ಲಾ ಹೆಣ್ಣಮಕ್ಕಳ ಸಬಲೀಕರಣ ಅಂತ ಈ ಪರಿ ಮಾಡೋದ? ಕುಟಂಬ ಅಂದರ ನಮ್ಮ ಸಮಾಜದ ಬೆಸಿಕ್ ಯುನಿಟ ಇದ್ದಂಗರಿ, ಹಿಂಗ ಕುಟಂಬ ಹಳ್ಳಾ ಹಿಡದರ ಮುಂದ ಸಮಾಜ ಹಳ್ಳಾ ಹಿಡಿತದ ಅಂತ ತಿಳಿಯಂಗಿಲ್ಲಾ. ಏನಿಲ್ಲದ ನಾವ ಮಾಡರ್ನೈಸ-ವೆಸ್ಟರ್ನೈಸ ಆದಂಗ ಆದಂಗ ನಮ್ಮ ಸಂಸಾರ ಹಳ್ಳಾ ಹಿಡಿಲಿಕತ್ತಾವ ಇನ್ನ ಹಿಂತಾ ಸುಡಗಾಡ ಕಾನೂನ ಒಂದ ಬಂತಂದರ ಡೈವರ್ಸ್ ಜಾಸ್ತಿ ಆಗ್ತಾವ ಇಷ್ಟ.
ಈಗ ಅದರಾಗ ಗಂಡ ಡೈವರ್ಸ ಕೊಟ್ಟರ ಹೆಂಡತಿಗೆ ಅರ್ಧಾ ಆಸ್ತಿ ಬ್ಯಾರೆ ಕೊಡಬೇಕಂತ. ಅಕಿ ಜೊತಿ ಇದ್ದಾಗ ‘ನೀನ ನನ್ನ ಅರ್ಧಾಂಗಿನಿ’ ಅಂತ ಅಪಗೊಂಡಿರತೇವಿ ಅಲಾ, ಅದರ ತಪ್ಪಿಗೆ ಅಕಿನ್ನ ಬಿಟ್ಟರ ಅರ್ಧಾ ಆಸ್ತಿ ಕೊಡಬೇಕ ಮತ್ತ. ಏನ ಮಾಡ್ತೀರಿ ಗಂಡಂದರ ಹಣೇಬರಹ ನೋಡ್ರಿ ಕಟಗೊಂಡರ ಪಗಾರ ಕೊಡಬೇಕು, ಕಡಕೊಂಡರ ಅರ್ಧಾ ಆಸ್ತಿ ಕೊಡಬೇಕು.
ಅಲ್ಲಾ ನಾಳೆ ಕನ್ಯಾ ನೋಡಲಿಕ್ಕೆ ಹೋದಾಗ ಕನ್ಯಾ ವರಕ್ಕ ‘ನಿಂಗ ಪಗಾರ ಎಷ್ಟ’ ಅಂತ ಕೇಳಂಗಿಲ್ಲಾ ‘ನಂಗ ಎಷ್ಟ ಪಗಾರ ಕೊಡತಿ’ ಅಂತ ಕೇಳ್ತಾಳ. ಈಗ ಏನಿಲ್ಲದ ಕನ್ಯಾ ಖಾಲಿ ಆಗ್ಯಾವ, ಇನ್ನ ಹಿಂತಾ ಸುಡಗಾಡ ರೂಲ್ಸ್ ಬಂದರ ಮುಗದ ಹೋದ, ಇದ್ದ ಬಿದ್ದ ತಳಾ ಹತ್ತಿದ್ದ ಕನ್ಯಾದ್ದೂ ಆಕ್ಷನ್ ಮಾಡತಾರ, ಯಾಂವ ಜಾಸ್ತಿ ಕೊಡ್ತಾನ ಅವಂಗ ಕನ್ಯಾ ಸಿಗ್ತಾವ ಇಷ್ಟ.
ಒಮ್ಮೆ ಈ ಕಾನೂನ ಚಾಲ್ತಿ ಆತಂದರ ಹೆಂಡಂದರು ‘ಅಕಿ ಗಂಡ ಅಷ್ಟ ಪಗಾರ ಕೊಡ್ತಾನಂತ- ಇಕಿ ಗಂಡಾ ಇಷ್ಟ ಪಗಾರ ಕೊಡ್ತಾನ’ ಅಂತೇಲ್ಲಾ ಮಾತಾಡಲಿಕ್ಕೆ ಶುರು ಮಾಡ್ತಾರ. ಇದ ಹಂಗ ಮುಂದವರಿತಂದ್ರ ಹಗರಕ ಎಲ್ಲರ ಇದ್ದ ಗಂಡಗ ರಿಸೈನ್ ಮಾಡಿ ಯಾಂವ ಜಾಸ್ತಿ ಪಗಾರ ಕೊಡ್ತಾನ ಅವಂಗ ಅಪ್ಲಿಕೇಶನ್ ಹಾಕಿದ್ರು ಹಾಕಿದ್ರ, ಹೇಳಲಿಕ್ಕೆ ಬರಂಗಿಲ್ಲಾ, ಆವಾಗ ಗಂಡ- ಹೆಂಡತಿ ಸಂಬಂಧ ಅಂದರ ಟರ್ಮ್ಸ್, ಕಂಡಿಶನ್ಸ್ ಇರೊ ಕರಾರ ಪತ್ರ ಆಗತದ.
ಹಂಗ ಒಮ್ಮೆ ಮನಿ ಕೆಲಸಾ ಮಾಡಲಿಕ್ಕೆ ಹೆಂಡತಿ ಪಗಾರ ತೊಗೊತಾಳ ಅಂತ ಅಂದ್ರ ಇನ್ನ ಹಡಿಲಿಕ್ಕೆ ಬಿಡತಾಳ, ನಾಳೆ ಹಡಿಲಿಕ್ಕೆ ಹೆಂಡತಿ ಎಷ್ಟ ಕೊಡತಿ ಅಂತ ಕೇಳಂಗಿಲ್ಲಾ ಅಂತ ಏನ ಗ್ಯಾರಂಟೀ? ಗಂಡ ಹಡದರ ಬೋನಸ ಕೇಳಬಹುದು – ಹೆಣ್ಣ ಹಡದರ ಇನ್ಸೆಂಟಿವ್ ಕೇಳಬಹುದು. ವರ್ಷಕ್ಕೊಮ್ಮೆ ಇನಕ್ರೀಮೆಂಟ ಅಂತೂ ಸೈನ ಸೈ. ಭಾಳ ತಲಿಕೆಟ್ಟರ ನಂಗ ಬ್ಯಾರೇಯವರ ಇಷ್ಟ ಆಫರ್ ಕೊಟ್ಟಾರ ಅಂತನೂ ಹೇಳಬಹುದು. ಅಲ್ಲಾ ನಾ ಹಂಗ ಮನಸ್ಸಿಗೆ ಬಂದಂಗ ಹೇಳಲಿಕತ್ತೇನಿ ಅಂತ ಅಲ್ಲಾ, ನೀವು ಒಂದ ಸರತೆ ವಿಚಾರ ಮಾಡ್ರಿ, ಕಟಗೊಂಡ ಹೆಂಡತಿಗೆ ಪಗಾರ ಕೊಡಬೇಕು ಅಂತ ಕಾನೂನ ಬಂದ ಮ್ಯಾಲೆ ನಾ ಹೇಳಿದ್ದ ವಿಷಯಗಳು ಏನ ದೊಡ್ಡವ ಅಲ್ಲಾ. ಹೌದಲ್ಲ ಮತ್ತ?
ಆಮ್ಯಾಲೆ ಹಿಂಗ ಆಗತದಲಾ ಹೆಂಡತಿ ಮೈ ಮುಟ್ಟಬೇಕಾರು ವಿಚಾರಮಾಡಿ ಮುಟ್ಟ ಬೇಕಾಗತದ. ಅಲ್ಲಾ, ಅದಕ್ಕೂ ರೊಕ್ಕಾ ಕೇಳಿದರ ಅಂತ ಅಲ್ಲಾ, ಎಲ್ಲರ ಅಕಿ ಮೂಡ ಸರಿ ಇರಲಿಲ್ಲಾಂದ್ರ ನಮ್ಮ ಮ್ಯಾಲೆ ಸೆಕ್ಸೂವಲ್ ಹ್ಯಾರಸಮೆಂಟ ಆನ ವರ್ಕಿಂಗ ವುಮೆನ ಅಂತ ಕೇಸ ಹಾಕಿದರ ಏನ ಮಾಡೋದು. ಹೆಂಡತಿ ಅನ್ನೋಕಿ ಒಮ್ಮೆ ಮನಿ ಕೆಲಸಾ ಮಾಡಲಿಕ್ಕೆ ಪಗಾರ ತೊಗತಾಳ ಅಂದರ ಅಕಿ working ವುಮೆನ, ಮನಿ ಅಂಬೋದ ( including bed room) working ಪ್ಲೇಸ್ ಇದ್ದಂಗ. ಹಿಂಗಾಗಿ ಗಂಡ ಅನ್ನೊ ಪ್ರಾಣಿ ರೋಮಾನ್ಸ್ ಮಾಡಲಿಕ್ಕೆ ಹೋಗಿ ಅದನ್ನ ಹೆಂಡತಿ ಡೊಮೆಸ್ಟಿಕ್ ವೈಲನ್ಸ್ ಅಂತ ಕಂಪ್ಲೇಂಟ ಕೊಟ್ಟರ ಏನಗತಿ? ಇಷ್ಟ ದಿವಸ ಆಫೀಸನಾಗ ಇಷ್ಟ ಸೆಕ್ಸುವಲ ಹ್ಯಾರಸಮೆಂಟದ್ದ ಹೆದರಕಿಲೆ ಗಂಡಸರು ಹೆದರಿ-ಹೆದರಿ ಕೆಲಸ ಮಾಡ್ತಿದ್ದರು,ಇನ್ನ ಮನ್ಯಾಗೂ ಶುರು ಆಗತದ. ಒಟ್ಟ ಗಂಡಸರ ತಲಿಮ್ಯಾಲೆ ಈ ಸೆಕ್ಸುವಲ ಹ್ಯಾರಸಮೆಂಟ ಅನ್ನೋ ಫೋಬಿಯಾ ಹೆಣ್ಣ ಮಕ್ಕಳ ಇದ್ದಲ್ಲೇಲ್ಲಾ ಶುರು ಆಗ್ತದ ನೋಡ್ತೀರ್ರಿ.
ಹಿಂಗಾಗೆ ಮತ್ತ ಗಂಡದರು ವಾರಕ್ಕ ಎರಡ ಸರತೆ ಕುಡಿಲಿಕ್ಕೆ ಹೋಗೊದು. ಇನ್ನ ಈ ಕಾನೂನ ಒಂದ ಬಂದ ಮ್ಯಾಲೆ ದಿವಸಾ ಹೊಂಟರು ಹೊಂಟರ.
ಮುಂದ ಇಬ್ಬರ ಗಂಡಂದರ ಭೆಟ್ಟಿ ಆದರ
“ಲೇ, ನಿನ್ನ ಹೆಂಡತಿಗೆ ಎಷ್ಟ ಕೊಡ್ತೀಲೇ”,
“ಏ, ನಿನ್ನ ಹೆಂಡತಿನ ಛಲೊ ತೊಗೊ, ನನ್ನ ಹೆಂಡತಿ ಇಷ್ಟ ಕೊಟ್ಟರು ಇನ್ನೂ ಪಗಾರ ಹೈಕ ಮಾಡಂತ ಗಂಟ ಬಿದ್ದಾಳ”
ಅಂತೇಲ್ಲಾ ಮಾತಾಡ್ತಾರ. ಕಡಿಕೆ ಯಾವನರ ನನ್ನಂಗ ತಲಿತಿರಕ ಗಂಡ ಇದ್ದನಂದರ
“ಲೇ, ನಾ ನನ್ನ ಹೆಂಡತಿಗೆ ಕೆಲಸದಿಂದ ತಗದ ಹಾಕೇನಿ, ಬ್ಯಾರೆ ಯಾರದರ ಸಸ್ತಾ ಹೆಂಡತಿ ಇದ್ದರ ನೋಡ” ಅಂತ ಅಂದರು ಅಂದsನ. ಅಲ್ಲಾ ಮತ್ತ ನಾವ ಪಗಾರ ಕೊಡ್ತೇವಿ ಅಂದರ ಕೆಲಸದಿಂದ ತಗದನು ಹಾಕಬಹುದ ಅಲಾ?ಒಟ್ಟ ಈ ಗಂಡ ಹೆಂಡತಿ ಸಂಬಂಧ ಮಾಲಿಕರು ನೌಕರದಾರರ ಸಂಬಂಧ ಆದಂಗ ಆಗ್ತದ.
ಅಲ್ಲಾ ಹಂಗ ಇದು ಇನ್ನೂ ಕಾನೂನ ಆಗಿಲ್ಲ ಮತ್ತ, ಅಕಸ್ಮಾತ ಕಾನೂನ ಆದರ ಹೆಂಗ ಆಗಬಹುದು ಅಂತ ಮುಂಗಾಲಪಟಿಗೆ ವಿಚಾರ ಮಾಡಿದರ ಇಷ್ಟ ವಿಚಾರ ಬಂದ್ವು. ಹಂಗ ನಮ್ಮ ನಮ್ಮ ಹೆಂಡದರು ಯಾರಿಗೆ ‘ಇಲ್ಲಾ ಈ ಕಾನೂನ ಕರೆಕ್ಟ, ಇದರಾಗ ಫಾಯದೆ ಅದ’ ಅಂತ ಅನಿಸಿದರ ಅವರು ದಿಲ್ಲಿಗೆ ಹೋಗಿ ಆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಂತ್ರಿಗೆ ಹಿಡದ ಕಾನೂನ ಮಾಡಿಸಿಗೊಂಡ ಬರ್ರಿ. ಒಟ್ಟ ಎಲ್ಲಾರೂ ಸೇರಿ feminism is male genocide ಅಂತಾರಲಾ ಅದನ್ನ ಖರೆ ಮಾಡಿ ಬಿಡರಿ, ಯಾರ ಬ್ಯಾಡಂದಾರ.
ಅಕಸ್ಮಾತ ಯಾರಿಗರ ಇದ ಸರಿ ಅಲ್ಲಾ, ಹೆಂಡತಿ ಅಂದರ ಭಾರತೀಯ ಸಂಸ್ಕೃತಿ ಒಳಗ ಸಾಕ್ಷಾತ ಸತಿ ಸಾವಿತ್ರಿ ಇದ್ದಂಗ, ಪತಿವೃತೆ ಸೀತಾನ ಅವತಾರ, ಗಂಡನ ಸೇವಾದೊಳಗ ಅಕಿ ಸುಖ-ದುಖಃ ಅದ ಅಂತ ಅನ್ನೋರ ಇದ್ದರ…ಇದ್ದರ… ಇದನ್ನ ವಿರೋಧ ಮಾಡರಿ.
ಅನ್ನಂಗ ಇನ್ನೊಂದ ಹೇಳೊದ ಮರತೆ ಈ ಕಾನೂನ ಮಾಡ್ತಾ ಇರೋ ಮಂತ್ರಿನೂ ಹೆಣ್ಣ ಜೀವನನ. ಹಂಗ ಅದನ್ನೇನ ಹೇಳೊ ಅವಶ್ಯಕತೆ ಇಲ್ಲ ಬಿಡ್ರಿ, ‘ಯಾ ನನ್ನ ಗಂಡಸ ಮಗನು ಹಿಂತಾ ಕಾನೂನ ಮಾಡಲಿಕ್ಕೆ ಧೈರ್ಯಾ ಮಾಡಂಗಿಲ್ಲಾ,’ ಹಿಂತಾ ಭಂಡ ಧೈರ್ಯ ಮಾಡಿದರ ಸ್ತ್ರೀಶಕ್ತಿನ ಮಾಡಬೇಕು. ಆದರು ಗೊತ್ತಿರಲಿ ಅಂತ ಹೇಳಿದೆ.
ಆದರ ನನಗ ಮನಸ್ಸಿನ ಒಂದ ಮೂಲ್ಯಾಗ ಅನಸ್ತದ, ಅಕಸ್ಮಾತ ಹಿಂತಾ ಕಾನೂನ ಬಂದರು ನಮ್ಮ ಮನಿ ಹೆಣ್ಣಮಕ್ಕಳ ಬದಲಾಗಂಗಿಲ್ಲಾ. ಅವರು ಸಂಸಾರ ಅಂದ್ರ ಒಂದು ಪವಿತ್ರ ವ್ಯವಸ್ಥೆ, ಗಂಡಾ-ಹೆಂಡತಿ ಅನ್ನೋದ ಒಂದ ಜನ್ಮ-ಜನ್ಮಾಂತರದ ಬಂಧನ, ಕಂಟ್ರಾಕ್ಟ ಅಲ್ಲಾ ಅಂತ ತಿಳ್ಕೋತಾರ ಅಂತ. A real wife should demand more responsibility not only just rights ಅನ್ನೋದ ನಮ್ಮ ಮನಿ ಹೆಣ್ಣಮಕ್ಕಳ ತಿಳ್ಕೊಂಡಾರ, ಸಂಸಾರದಾಗ ಇದ್ದದ್ದರಾಗ ಗಂಡಾ-ಹೆಂಡತಿ ಹಂಚಗೊಂಡ ಬಾಳಿ ಬದುಕಬೇಕು, ಗಂಡನ್ನ ಪಾದಕಮಲದೊಳಗ ನಮ್ಮ ಸುಖಾ ಅದ ಅನ್ನೊ ಅರಿವು ನಮ್ಮ ಹೆಂಡಂದರಿಗೆ ಅದ ಅಂತ ನಾ ಅನ್ಕೊಂಡೇನಿ.
ಆ ಭಗವಂತಾ ನನ್ನ ಅನಿಸಿಕೆಯನ್ನ ಖರೆ ಮಾಡಲಿ, ಆ ಹೆಣ್ಣಮಕ್ಕಳಿಗೆ, ಹಿಂತಾ ಸುಡಗಾಡ ಕಾನೂನ ಮಾಡ್ತಾ ಇರೋ ಆ ಮಹಿಳಾ ಮಂತ್ರಿಗೆ ಸದ್ಭುದ್ಧಿ ಕೊಡಲಿ, ಜೀವನದಾಗ ನೊಂದು ಹೋಗಿ, ಎದೆಗುಂದಿ ಬದುಕುತ್ತಿರುವ ‘ಗಂಡ’ ಮನಗಳಿಗೆ ಸ್ವಾಂತನ, ಧೈರ್ಯ ಕೊಡಲಿ. ಹಂಗ ಅದು ಅವನ ಕಡೆನೂ ಸಾದ್ಯ ಇಲ್ಲಾ ಅಂದರ ಸಮಸ್ತ ಗಂಡಂದರ ಆತ್ಮಕ್ಕ ಶಾಂತಿ ಕೊಡಲಿ ಅಂತ ಬೇಡ್ಕೋತ ಈ ನನ್ನ ನಾಲ್ಕ ಮಾತ ಮುಗಸ್ತೇನಿ.