ಇವತ್ತಿಗೆ ಕರೆಕ್ಟ ಎರಡ ತಿಂಗಳ ಹಿಂದ ನಮ್ಮಪ್ಪಾ 79ನೇ ವಯಸ್ಸಿನಾಗ ತೀರಕೊಂಡಾ. ಹಂಗ ನಾ ನಮ್ಮಪ್ಪ ಸತ್ತಾಗ ನಿಧನವಾರ್ತೆ ಒಳಗ ಹಾಕಸಿದ್ದೆ ಖರೆ ಆದರ ಅಡ್ವರ್ಟೈಸಮೆಂಟೇನ ಕೊಟ್ಟಿದ್ದಿಲ್ಲಾ. ಹಿಂಗಾಗಿ ಯಾರ ನಿಧನ ವಾರ್ತೆ ಓದಂಗಿಲ್ಲಾ ಬರೇ ಅಡ್ವರ್ಟೈಸಮೆಂಟ್ ಇಷ್ಟ ಓದತಾರ ಅವರಿಗೆ ನಮ್ಮಪ್ಪ ಸತ್ತಿದ್ದ ಗೊತ್ತಾಗಿದ್ದಿಲ್ಲಾ.
ಇನ್ನ ಯಾರಿಗೆ ಸುದ್ದಿ ಗೊತ್ತಾತ ಅವರ ಒಬ್ಬೊಬ್ಬರ ಫೋನರ ಮಾಡ್ತಿದ್ದರು, ಇಲ್ಲಾ ಮನಿಗರ ಬರತಿದ್ದರು. ಹಂಗ ಬಂದವರು, ಫೋನ ಮಾಡಿದವರು
“ಏನಪಾ….ಅಪ್ಪಾರ ಹೋದ್ರಂತ..ನಮಗ ಗೊತ್ತಾಗಲಿಲ್ಲಪಾ” ಅಂತ ಎಲ್ಲಾ ಕಥಿ ಕೇಳಿ, ನಾಲ್ಕ ಸಮಾಧಾನದ್ದ ಮಾತ ಮಾತಾಡಿ ಲಾಸ್ಟಿಗೆ “…ಮತ್ತ ಬಾಕಿ ಎಲ್ಲಾ ಆರಾಮಲಾ?” ಅಂತ ಅನ್ನೋರ.
ಅಲ್ಲಾ ಸತ್ತೋರ ಮನಿಗೆ ಫೋನ ಮಾಡಿದಾಗ, ಮಾತಾಡ್ಸಲಿಕ್ಕೆ ಬಂದಾಗ ಲಾಸ್ಟಿಗೆ ’ಬಾಕಿ ಎಲ್ಲಾ ಆರಾಮ?’ ಅಂತ ಕೇಳ್ತಾರ ಅಂದರ ಏನ ಹೇಳ್ಬೇಕ?
ಇನ್ನ ನನಗ ’ ಏ ನಾ ಭಾರಿ ಆರಾಮ ಇದ್ದೇನಿ ತೊಗೊ’ ಅಂತ ಅನ್ನಲಿಕ್ಕೆ ಬರ್ತದ? ಏನ ಜನಾನೋ ಏನೋ
ನಾ ಖರೆ ಹೇಳ್ತೇನಿ ಏನಿಲ್ಲಾಂದರು ಒಂದ ಇಪ್ಪತ್ತ ಮಂದಿ ನಂಗ ನಮ್ಮಪ್ಪ ಸತ್ತಿದ್ದಕ್ಕ ಮಾತಾಡ್ಸಿ ಲಾಸ್ಟಿಗೆ
’ಬಾಕಿ ಎಲ್ಲಾ ಆರಾಮಲಾ?’ ಅಂತ ಕೇಳ್ಯಾರ.
ಅಲ್ಲಾ, ಇದ ಒಂದ ವಿಷಯಕ್ಕಂತಲ್ಲಾ, ಭಾಳಷ್ಟ ವಿಚಿತ್ರ ಟೈಮನಾಗ ಜನಾ ಲಾಸ್ಟಿಗೆ ’ಬಾಕಿ ಎಲ್ಲಾ ಆರಾಮಲಾ’ ಅಂತ ಕೇಳ್ತಾರ.
ನಮ್ಮಜ್ಜಿ ICUದಾಗ ventilator ಮ್ಯಾಲೆ ಉಸಿರಾಡಸ್ತಿರಬೇಕಾರ ನೋಡಲಿಕ್ಕೆ ಬಂದಾಗೂ ಹಂಗ ಅನ್ನೋರ. ಅಲ್ಲಾ ನಾವ ಅಲ್ಲೇ ಅಜ್ಜಿನ್ನ ಅಡ್ಮಿಟ್ ಮಾಡಿ ದಿವಸಕ್ಕ ಐದ ಆರ ಸಾವಿರ ಬಡದ, ಇವತ್ತ ನಾಳೆ ಅಂತ ದಾರಿ ಕಾಯ್ಕೋತ ಕೂತಿರ್ತೇವಿ, ಹಂತಾದರಾಗ ಇವರ ಎರಡ ಸೇಬು ಹಣ್ಣ ತಂದ ಇನ್ನ ಅಜ್ಜಿನ್ನಂತೂ ಮಾತಾಡ್ಸಲಿಕ್ಕೆ ಬರಂಗಿಲ್ಲಾಂತ ನಮಗ ಮಾತಾಡ್ಸಿ ’ ಮತ್ತ ಹಂಗೇನರ ಆದರ ಹೇಳ…. ಮರಿಬ್ಯಾಡ..’ ಅಂದ ಕಡಿಕೆ ’ಬಾಕಿ ಎಲ್ಲಾ ಆರಾಮಲಾ’ ಅಂತ ಕೇಳ್ತಾರ. ಇಲ್ಲೇ ನಮಗ ಅಜ್ಜಿ ಹೋಗ್ತಾಳ ಅಂತ ಒಂದ ಸಂಕಟ ಇದ್ದರ, ಅಕಿ ಇರೋ ತನಕ ದಿವಸಕ್ಕ ಐದ ಸಾವಿರ ಹೋಗ್ತದಲಾ ಅಂತ ಇನ್ನೊಂದ ಸಂಕಟ. ಹಂತಾದರಾಗ ಇವರ ’ಬಾಕಿ ಎಲ್ಲಾ ಆರಾಮಲಾ’ ಅಂತ ಕೇಳಿದರ ಏನ ಹೇಳ್ತೀರಿ?
ಒಟ್ಟ ’ಬಾಕಿ ಎಲ್ಲಾ ಆರಾಮಲಾ’ ಅನ್ನೋದ ಒಂಥರಾ ಫ್ಯಾಶನ್ ಆಗೇದ.
ಇನ್ನ ಒಂದಿಷ್ಟ ಮಂದಿ ಹಿಂತಾ ವಿಚಿತ್ರ ಇರ್ತಾರಂದ್ರ
ನಾ ನಮ್ಮಪ್ಪಗ ಆರಾಮ ಇಲ್ಲಾ, ಸ್ವಲ್ಪ ಸಿರಿಯಸ್ ಅದ ಅಂತ ಅಂದಾಗ
’ಹೌದ…ಏನಾತ…’ ಅಂತ ಕಥಿ ಕೇಳಿ ಲಾಸ್ಟಿಗೆ ’ಏಜ್ ಎಷ್ಟ’ ಅಂತ ಕೇಳೋರ, ನಾ 78-79 ನಡದಾವ ಅಂದ ಕೂಡ್ಲೇ
’ಓ..79 ….ವಯಸ್ಸ ಆಗೇದ ತೊಗೊ’ ಅಂತ ಅನ್ನೋರ, ಅದು ನನ್ನ ಮುಂದನ…
ಅಲ್ಲಾ 79 ನಡದಾವ, ವಯಸ್ಸಾಗೇದ ಅಂದರ ಅಂವಾ ಏನ ಸಾಯಿಬೇಕ್? ದೇವರೇನ ಮನಷ್ಯಾಗ expiry date ಹಣಿ ಮ್ಯಾಲೆ ಪ್ರಿಂಟ್ ಮಾಡಿ ಕಳಸಿರ್ತಾನೇನ use life upto 79 ಅಂತ? ಮಾತಾಡ್ಬೇಕಾರ ಒಂದ ಸ್ವಲ್ಪ ಕಾಮನ್ ಸೆನ್ಸ ಬ್ಯಾಡಾ?… ನನಗ ಹಂಗ ಯಾರರ ಅಂದಾಗ ಭಾಳ ತಲಿ ಕೆಡ್ತಿತ್ತ. ನಾ ತಿರಗಿ ಅವರಿಗೆ
’ಅನ್ನಂಗ ಈಗ ನಿಮ್ಮಪ್ಪಗ ಎಷ್ಟ ವಯಸ್ಸಾಗೇದ’ ಅಂತ ಕೇಳ್ತಿದ್ದೆ.
ಇನ್ನ ಹಂಗ ನಮ್ಮಪ್ಪ ಹೋಗಿ ಎರಡ ತಿಂಗಳಾದರೂ ಈ ವಿಷಯ ಇವತ್ತೂ ಟ್ರೆಂಡಿಂಗ್ ಇರಲಿಕ್ಕೆ ಕಾರಣ ಅಂದರ ನನ್ನ ತಲಿ, ಅಂದರ ನನ್ನ ಕಟಿಂಗ್ ಸ್ಟೈಲ.
ನನಗ ತಲ್ಯಾಗ ಕೂದ್ಲ ಕಡಮಿ ಅವ, ಅಲ್ಲಾ ಹಂಗ ಮೊದ್ಲ ಯಂಗ್ ಇದ್ದಾಗ ಛಲೋ ಇದ್ವ ಬಿಡ್ರಿ ಯಾವಾಗ ಲಗ್ನಾಗಿ ಮೂರ ನಾಲ್ಕ ವರ್ಷ ಆತ ಸಣ್ಣಾಗಿ ಕೂದಲಾ ಉದರಲಿಕತ್ತವು. ಈಗ ಮದ್ವಿ ಆಗಿ ಹದಿನೆಂಟ ವರ್ಷ ಆದಮ್ಯಾಲೆ ಅಂತೂ ಎಣಿಸಿ ನೂರಾ ಎಂಟ ಕೂದ್ಲ ಉಳದಿರಬೇಕ. ಹಿಂಗಾಗಿ ನಾ ಒಂದ ನಾಲ್ಕೈದ ವರ್ಷದಿಂದ ಅಗದಿ ಮಶೀನ್ ಹಚ್ಚಿಸಿ ಸಣ್ಣ ಕಟಿಂಗ್ ಮಾಡಸ್ತಿದ್ದೆ. ಅದರಾಗ ಆ ಕಟಿಂಗ್ ಅಂಗಡಿಯವಂಗ ಕ್ಲೀಯರ್ ಆಗಿ
“ತಲಿ ಬೋಳಿಸದಂಗ ಕಾಣಬಾರದು…ಜನಾ ತಪ್ಪ ತಿಳ್ಕೊಂಡ-ಗಿಳ್ಕೊಂಡಾರ…ನಂಗಿನ್ನೂ ಅವ್ವಾ ಅಪ್ಪಾ ಇದ್ದಾರ, ಆದರ ಕೂದ್ಲ ಅಗದಿ ಹೆಂಡ್ತಿ ಕೈಯಾಗ ಸಿಗಲಾರದಂಗ ಸಣ್ಣ ಆಗಬೇಕು” ಅಂತ ಹೇಳಿ ಕಟಿಂಗ ಮಾಡಿಸ್ಗೊತಿದ್ದೆ.
ಹಂಗ ನಮ್ಮಪ್ಪಗ ಆರಾಮ ಇರಲಾರದ್ದ ಗೊತ್ತಿದ್ದೋರ ಭೆಟ್ಟಿ ಆದಾಗ ನನ್ನ ಕಟಿಂಗ ನೋಡಿದವರ ..oh..sorry..I did not know ಅಂತ ಅಂದ ಕಡಿಕೆ ನಾ ಅವರಿಗೆ dont be sorry ನಮ್ಮಪ್ಪ ಇನ್ನೂ ಗಟ್ಟಿ ಇದ್ದಾನ ಅಂತ ಅಸುರೆನ್ಸ್ ಕೊಟ್ಟ ಮ್ಯಾಲೆ ಮತ್ತ sorry ಹೇಳಿ ಹೋಗ್ತಿದ್ದರು. ಅಲ್ಲಾ ಹಿಂಗ ಒಂದ ಹತ್ತ ಸಲಾ ಆಗೇದ ಬಿಡ್ರಿ. ಹಂಗ ಇನ್ನೂ ಯಾರರ ಜೀವಂತ ಇರಬೇಕಾರ ಅವರ ಸತ್ತದ್ದ ಬಗ್ಗೆ ಮಾತಾಡಿದರ ಅವರ ಆಯುಷ್ಯ ಜಾಸ್ತಿ ಆಗ್ತದಂತ ನಾನೂ ಭಾಳ ತಲಿಕೆಡಸಿಗೊಳ್ಳತಿದ್ದಿಲ್ಲಾ.
ಅಲ್ಲಾ, ಹಂಗ ನಮ್ಮ ದೋಸ್ತ ಪ್ರಭ್ಯಾ ಒಂದ ಎಂಟ ವರ್ಷದ ಹಿಂದನ ನಮ್ಮ ಇನ್ನೊಬ್ಬ ದೋಸ್ತ ಪ್ರಶಾಂತನ ಅಪ್ಪ ಸತ್ತಾಗ ಕನಫ್ಯೂಸ ಆಗಿ ಒಂದ ಹತ್ತ ಮಂದಿಗೆ ಪ್ರಶಾಂತ ಆಡೂರನ ಅಪ್ಪ ಸತ್ತಾನ ಅಂತ ಹೇಳಿ ಬಿಟ್ಟಿದ್ದಾ..ಏನೋ ನನ್ನ ಪುಣ್ಯಾ ಆವಾಗ ಯಾರೂ ನನಗ ಫೊನ ಮಾಡಿ
’ಅಪ್ಪಾರ ಹೋದ್ರಂತ…..ಬಾಕಿ ಎಲ್ಲಾ ಆರಾಮಲಾ?” ಅಂತ ಕೇಳಲಿಲ್ಲಾ.
ಇತ್ತಲಾಗ ನಮ್ಮವ್ವ ನಾ ಕಟಿಂಗ್ ಮಾಡಿಸ್ಗೊಂಡ ಬಂದಾಗೊಮ್ಮೆ ’ಅದೇಷ್ಟ ಸಣ್ಣ ಮಾಡಿಸಿ, ತಲಿ ಬೋಳಿಸಿದಂಗ ಕಾಣ್ತದ, ಯಾರರ ನೋಡಿದವರ ಏನ ತಿಳ್ಕೋಬೇಕು’ ಅಂತ ಬೈತಿದ್ಲು.
ಆದರ ನನ್ನ ಹೆಂಡ್ತಿಗೆ ನನ್ನ ಕಟಿಂಗ ಯಾವಾಗಲೂ ಭಾಳ ಲೈಕ ಆಗ್ತದ. ಅಕಿ ನನ್ನ ಕಟಿಂಗ ನೋಡಿದಾಗೊಮ್ಮೆ
“ಭಾಳ ಬೆಸ್ಟ ಮಾಡಿಸಿರಿ, ಎಣ್ಣಿ ಖರ್ಚಿಲ್ಲಾ, ಸಬಕಾರ ಸವೆಂಗಿಲ್ಲಾ, ಯರಕೊಂಡರ ತಲಿ ಒರಿಸ್ಗೊಳೊದಿಲ್ಲಾ, ಕನ್ನಡಿ ಮುಂದ ತಾಸ ಗಟ್ಟಲೇ ನಿಂತ ಹಿಕ್ಕೋಳೊದಿಲ್ಲಾ, ತಲ್ಯಾಗ ಹೇನ- ಹೊಟ್ಟು ಆಗಂಗಿಲ್ಲಾ, ಶ್ಯಾಂಪೂ ಬೇಕಂತಿಲ್ಲಾ” ಅಂತಿದ್ಲು. ಅಲ್ಲಾ, ಅಕಿ ಮಾತ ಕೇಳಿದರ ಏನ ದಿವಸಾ ಇಕಿನ ನನ್ನ ತಲ್ಯಾಗಿನ ಹೇನ ವರದ ಎಣ್ಣಿ ಹಚ್ಚಿ ಕ್ರಾಫ್ ತಗದ ಹಿಕ್ಕಿ ಕಳಸೋರಗತೆ ಮಾತಾಡ್ತಾಳ ಬಿಡ್ರಿ.
ಅಲ್ಲಾ ಒಂದ ಮಾತಿನಾಗ ಹೇಳ್ಬೇಕಂದರ I have more face to wash and less hair to comb ಅಂತಾರಲಾ ಹಂಗ ಅದ ನನ್ನ ಪರಿಸ್ಥಿತಿ. ಹಂಗ to be very frank…ಇಗಂತೂ no hair to comb ಅಂದ್ರು ಅಡ್ಡಿಯಿಲ್ಲಾ.
ಇನ್ನ ಮೊನ್ನೆ ನಮ್ಮಪ್ಪ ಹೋದಾಗ ಒಂಬತ್ತನೇ ದಿವಸ ಆಫಿಸಿಯಲಿ ನನ್ನ ತಲಿ ಚೊಕ್ಕ ಮಾಡಿದರು. ಹಂಗ ಯಾರಿಗೆ ಗೊತ್ತಿತ್ತ ಅವರೇನ ಕಮೆಂಟ್ ಮಾಡಲಿಲ್ಲಾ, ಯಾರಿಗೆ ಗೊತ್ತಿದ್ದಿದ್ದಿಲ್ಲಾ ಅವರ ನನ್ನ ತಲಿ ನೋಡಿ ಮತ್ತೋಮ್ಮೆ sorry ಅಂದರ..ಅದು ಹಂಗ ಅನಬೇಕಾರ ಕನಫರ್ಮ್ ಮಾಡ್ಕೊಂಡ ಈ ಸಲಾ really sorry ಅಂದರು. ಕೆಲವೊಬ್ಬರಂತು ನಂದ ಇದ ರೂಟಿನ್ ಹೇರ್ ಸ್ಟೈಲ ಅಂತ sorryನೂ ಹೇಳಲಿಲ್ಲಾ R IP ನೂ( rest in peace) ಅನ್ನಲಿಲ್ಲಾ. ಅಲ್ಲಾ ಇದರಾಗ ಅವರದೇನ ತಪ್ಪ ಬಿಡ್ರಿ ಪಾಪಾ.
ಹಂಗ ನನ್ನ ತಲಿ ನೋಡಿ ಒಂದಿಷ್ಟ ಮಂದಿ ಕನಫರ್ಮ್ ಮಾಡ್ಕೊಳಿಕ್ಕೆ
’ತಿರುಪತಿನೊ- ಧರ್ಮಸ್ಥಳನೋ?’ ಅಂತ ಅಗದಿ ಜೆಂಟಲಮೆನಗತೆ ಕೇಳಿ ಕಡಿಗೆ ನಾ ’ಇಲ್ಲಾ ತಡಸ ತಪೋಭೂಮಿ, ನಮ್ಮಪ್ಪನ ಕರ್ಮಾ ಮಾಡಿದೆ’ ಅಂದ ಮ್ಯಾಲೆ ಓಹ್..ಸ್ವಾರಿ..ಅಂತ ಹೇಳಿದರು. ಹಿಂಗಾಗಿ ಇವತ್ತು ಯಾರರ ನನ್ನ ತಲಿ ನೋಡಿದರ ನಮ್ಮಪ್ಪ ಟ್ರೆಂಡಿಂಗ್ ಆಗ್ತಾನ.
ಅನ್ನಂಗ ಇನ್ನೊಂದ ಹೇಳೋದ ಮರತೆ, ನಮ್ಮಪ್ಪನ ವೈಕುಂಠ ಸಮಾರಾಧನಿ ದಿವಸ ಊಟಕ್ಕ ಕೂತಾಗ ನಮ್ಮ ರಾಘ್ಯಾನ ಬಾಜು ಕೂತ ನಮ್ಮ ದೊಡ್ಡಪ್ಪ
’ಏ, ಅಡಿಗೆ ಭಾರಿ ಆಗೇದ….ಭಾದ್ರಿ ಸಾರ ಅಂತು ಮಸ್ತ ಆಗೇದ….ಅಂತು ಕೃಷ್ಣಮೂರ್ತಿ ವೈಕುಂಠ ಸಮಾರಾಧನೆ ಗ್ರ್ಯಾಂಡ ಆತು’ ಅಂತ ಮೂರ ಮೂರ ಸರತೆ ಸಾರು ಅನ್ನಾ ಹೋಡಿತಿರಬೇಕಾರ ರಾಘ್ಯಾ ಬಾಯಿ ತಪ್ಪಿ ಅವಂಗ
’ಏ, ಹೌದ ಅಡಗಿ ಮಸ್ತ ಆಗೇದ….ಮತ್ತ ನಿಂಬದ ಯಾವಾಗ ಹಿಂತಾ ಊಟಾ’ ಅಂತ ಅಂದ ಬಿಟ್ಟನಂತ.
ತೊಗೊ ಅಂವಾ ಇವಂಗ
’ಲೇ…ಏನ ಅಧಿಕ ಪ್ರಸಂಗಿ ಇದ್ದೀಲೆ..ನಾ ಇನ್ನೂ ಜೀವಂತ ಇರಬೇಕಾರ ನನ್ನ ವೈಕುಂಠ ಸಮಾರಾಧನೆ ಮಾಡಲಿಕ್ಕತ್ತಿ ಅಲಾ’ ಅಂತ ಬೈದರಂತ.
ಇನ್ನ ನಮ್ಮ ಇನ್ನೊಬ್ಬ ದೋಸ್ತ ವಾದಿ ವೈಕುಂಠ ಸಮಾರಾಧನಿ ದಿವಸ ಬಂದಿದಿಲ್ಲಾ, ಮೊನ್ನೆ ಸಿಕ್ಕಾಗ ಯಾಕಲೇ ಬರಲಿಲ್ಲಾ ಅಂತ ಕೇಳಿದರ
’ಅಣ್ಣಾ..ಬ್ಯೂಸಿ ಇದ್ದೆ ಮುಂದಿನ ಸರತೆ ಬರ್ತೇನಿ ತೊಗೊ’ ಅಂತ ಅಂದಾ.
ಏನ್ಮಾಡ್ತೀರಿ ಹಿಂತಾವರಿಗೆ? ಇವನ ಸಂಬಂಧ ನಾ ಮತ್ತೊಮ್ಮೆ ವೈಕುಂಠ ಸಮಾರಾಧನಿ ಮಾಡ್ಲಿ?
ಇನ್ನ ಜನಾ ಹಿಂಗ ಜೀವಂತ ಇದ್ದವರದ ವೈಕುಂಠ ಸಮಾರಾಧನಿ ಮಾಡ್ತಾರ ಅಂದರ…ಸತ್ತಾಗ ಮಾತಾಡಸಲಿಕ್ಕೆ ಬಂದಾಗ…’ಬಾಕಿ ಎಲ್ಲಾ ಆರಾಮಲಾ?’ ಅಂತ ಕೇಳೋದರಾಗ ಏನ ತಪ್ಪ ಬಿಡ್ರಿ.
eom/- 799 words.