ನೀವು ಬಾಣಂತನಾ ಮಾಡ್ತೇನೀ ಅಂದರ …………ನಾ ಇನ್ನೊಂದ ಹಡಿತೇನಿ.

ಮೊನ್ನೆ ನಮ್ಮ ಅಬಚಿ (ಮೌಶಿ) ಮಗಾ ವಿನಾಯಕ ಭೆಟ್ಟಿಯಾಗಿದ್ದಾ , ಮಾತಾಡ್ತಾ-ಮಾತಾಡ್ತ ” ಏನಪಾ ಎರಡನೇದ ಲೋಡ ಮಾಡಿ ಅಂತ, ಹೇಳೆ ಇಲ್ಲಲಾ, ಮೊನ್ನೆ ನಿಮ್ಮವ್ವ ಫೋನ್ ಮಾಡಿದಾಗ ಗೋತ್ತಾತು” ಅಂದೆ. “ಹಕ್ಕ್.. ನಿನಗೂ ಬಂತಾ ಸುದ್ದಿ , ನಮ್ಮವ್ವನ ಬಾಯಾಗ ಮಾತ ನಿಲ್ಲಂಗಿಲ್ಲ ನೋಡ, ನಾನು ಸರಪ್ರೈಸ್ ಕೊಡೋಣಂತ ಯಾರಿಗೂ ಹೇಳಿದ್ದಿಲ್ಲಾ ” ಅಂದಾ. ಅವನ ಮಾತ ಕೇಳಿದ್ರ ಅವಂಗ ಅವನ ಹೆಂಡತಿ ಈ ಸುದ್ದಿ ಹೇಳಿ ಸರಪ್ರೈಸ ಕೊಟ್ಟಂಗ, ಅಂವಾ ಅದನ್ನ ಕೇಳಿ ಶಾಕ್ ಆದಂಗ ಇತ್ತು. ಇಂವಾ ಯಾವಾಗಲೂ ‘ಪ್ರಿವೆನಶನ್ ಇಸ್ ಬೆಟ್ಟರ್ ದ್ಯಾನ ಅಬಾರ್ಶನ್’ ಅಂತಿದ್ದ ಆದರ ಈಗ ಇವಂದ ಲೆಕ್ಕ ಎಲ್ಲೋ ತಪ್ಪಿ ಆಪರೇಶನಗೆ ( ಸಿಜರಿನ್) ಬಂದದ ಅಂತ ಖಾತ್ರಿ ಆತು. “ಅಲ್ಲಲೇ, ನನಗ ಒಂದ ಮಗಳ ಸಾಕು,ಎರಡನೇದ ಬ್ಯಾಡಾ ಅಂತಿದ್ದಿ” ಅಂದೆ. ” ಅಯ್ಯೋ ನಮ್ಮವಂದ ಕಾಟಕ್ಕ ಮಾಡಿದ್ದಪಾ ಇದು. ನಮ್ಮವ್ವಾ ನಂದು, ನನ್ನ ಹೆಂಡತಿದೂ ದಿವಸಾ ಜೀವಾ ತಿಂದ ಇಡತಿದ್ದಳು, ಆಕಿದರ ಆಗಲಿ ಅಂತ ಧೈರ್ಯಮಾಡಿ ತಯಾರ ಮಾಡಿದೆ” ಅಂದಾ. ನಮ್ಮ ಅಬಚಿಗೆ ಮುಂದ ಶ್ರಾದ್ಧ-ಪಕ್ಷಾ ಮಾಡಲಿಕ್ಕೆ ಒಬ್ಬ ‘ಮೊಮ್ಮಗ’ಬೇಕಾಗಿದ್ದಾ, ಹಿಂಗಾಗಿ ಅಕಿ ದಿವಸಾ ಹಗಲ ಹೊತ್ತಿನಾಗ ದೇವರದು, ರಾತ್ರಿ ಆದಕೂಡಲೇನ ಮಗಂದು – ಸೊಸಿದು ಜೀವಾ ಹಿಂಡತಿದ್ದಳು. ಆದರ ನಮ್ಮ ವಿನಾಯಕನ ಹೆಂಡತಿ ‘ಜಯಾ’ಗ ಒಂದ ಮಗಳ ಸಾಕಾಗಿತ್ತು. ಪಾಪಾ ಅಕಿ ಕೆಲಸಕ್ಕ ಹೋಗೋಕಿ, ಸರ್ಕಾರಿ ನೌಕರಿ ಬ್ಯಾರೆ, ಹಡಿಲಿಕ್ಕೆ ರಜಾ ಸಿಗತಾವ ಅಂತ ಹಡಕೋತ ಕೂತರ ಮುಂದ ಮಕ್ಕಳನ್ನ ಸಾಕಲಿಕ್ಕೆ ಅಂಟಿನ ಉಂಡಿ ಮಾರಬೇಕಾಗತದ ಅಂತಿದ್ಲು. ‘ನಮ್ಮ ಅತ್ತಿ ನೋಡ್ರಿ, ತಾವ ಹಡಿಯೋ ವಯಸ್ಸನಾಗ ಒಂದ ಹಡದ ‘ನಮಗ ದೇವರು ಇಷ್ಟ ಕೊಟ್ಟಾ’ ಅಂತ ಕೈ ಮುಗದ. ಈಗ ನಮಗ ಇನ್ನೊಂದ ಹುಟ್ಲಿ ಅಂತ ಆ ದೇವರಿಗೆ ನಮಗ ಕೂಡೇ ಗಂಟ ಬಿದ್ದಾರ’ ಅಂತಿದ್ಲು. ಆದರ ಕಡಿಗೂ ಅವರ ಅತ್ತಿನ ಗೆದ್ಲು. ವಿನಾಯಕ ಹೆಂಡತಿ ಕಡೆ ಗುದ್ದಿಸಿಕೊಂಡ ಮತ್ತ ಮುಸಕಿನಾಗ ಗದ್ಲಾ ಹಾಕಿದ್ದಾ. ಮುಂದಿಂದು ಹೆಣ್ಣರ ಆಗಲಿ ಗಂಡರ ಆಗಲಿ ಅಂತೂ ಎರಡನೇದಕ್ಕ ಧೈರ್ಯಮಾಡಿದನಲಾ ಅಂತ ನನಗ ಖುಷಿ ಅನಸ್ತು. ಎಲ್ಲಾರೂ ಒಂದ ಹಡದು ರಗಡ ಆತು ಅಂತ ಅನ್ನೊ ಹೊತ್ತನಾಗ ಇಂವಾ ಅವರವ್ವನ ಕಾಟಕ್ಕ ಆದರೂ ಹೆಂಡತಿ ಸಿಟ್ಟ ತನ್ನ ಹೊಟ್ಯಾಗ ಹಾಕ್ಕೊಂಡ ಅಕೀ ಹೊಟ್ಯಾಗ ಎರಡನೇದು ತಯಾರ ಮಾಡಿದ್ನಲಾ ಸಾಕು ಅನಸ್ತು.
ಇದಾದ ಒಂದ ಎರಡ ದಿವಸಕ್ಕ ನಮ್ಮ ಕಾಕಾನ ಮಗಾ – ತಮ್ಮಾ ವಿಶಾಲ ಮತ್ತ ಅವನ ಹೆಂಡತಿ ‘ಬನು’ ಸಂಜಿ ಮುಂದ ಪಂಚಮಿ ಉಂಡಿ ತೊಗೊಂಡ ಮನಿ ಕಡೆ ಬಂದಿದ್ರು.ಅವರಿಗೆ ಸದ್ಯೇಕ ಮೂರ ವರ್ಷದ ಒಬ್ಬ ಮಗಾ ಇದ್ದಾನ, ನಾ ಅಂದೆ ” ನೋಡಪಾ ವಿನಾಯಕ ಎರಡನೇದ ತಯಾರ ಮಾಡ್ಯಾನ, ನಿಂದ ಯಾವಾಗ ಮತ್ತ , ಲಗೂನ ಇನ್ನೊಂದ ಹಡದ ಕೊಟಾ ಮುಗಿಸಿ ಕೈ ತೊಳ್ಕೊಂಡ ಬಿಡು” ಅಂದೆ ” ಏ, ನಾ ಏನ್ ಇವತ್ತ ರೆಡಿ ಇದ್ದೇನಿ, ನನ್ನ ಹೆಂಡತಿನ ನನ್ನ ಮಾತ ಕೇಳವಳ್ಳು” ಅಂದಾ. ಅದು ಖರೇನ ನಾವೇನ ಹುಡುಗುರು ದಿವಸಾ ರೆಡಿ ಇರತೇವಿ ಹಡಿಯೊರು ಗಟ್ಟಿ ಇರಬೇಕಲ್ಲಾ. ನನ್ನ ಮಾತಿಗೆ ನಮ್ಮವ್ವನು ಸೊ ಅಂದ್ಲು, ವಿಶಾಲನ ಹೆಂಡತಿಗೆ “ಬನು ನಿಂದೂ ಇನ್ನೊಂದು ಆಗಿ ಬಿಡಲಿವಾ, ಹೆಂಗಿದ್ದರೂ ಒಂದನೇದು ದೊಡ್ಡದ ಆಗ್ಯಾದ” ಅಂದ್ಲು, ತೊಗೊ ನಮ್ಮವ್ವ ಇಷ್ಟ ಅಂದಿದ್ದ ತಡಾ ನಮ್ಮ ಬನುಗ ಪಿತ್ತಾ ಗರ್ಭಕೋಶಕ್ಕ ಏರಿ ಬಿಟ್ಟತ “ಎಲ್ಲೀದರಿ ಅತ್ಯಾ, ಒಂದ ಗಂಡಾ, ಮಗನ್ ಸಾಕೋದ್ರಾಗ ರಗಡ ಆಗೇದ, ಇನ್ನೋಂದ ಎಲ್ಲಿಂದ ತರತೀರಿ. ನಮ್ಮ ಮನೇಯವರಿಗೆನ ಬ್ಯಾರೆ ಕೆಲಸ ಇಲ್ಲಾ ಯಾವಗಲೂ ರೆಡಿನ ಇರತಾರ. ಅದರಾಗ ನಮ್ಮವ್ವಗೂ ಈಗ ವಯಸ್ಸಾತು, ಪಾಪಾ ನಮ್ಮ ಇಬ್ಬರ ಅಕ್ಕಂದರದು, ನಂದು ಬಾಣಂತನ ಮಾಡಿ ರಗಡ ಆಗೇದ, ಇನ್ನ ಅವರಿಗೆ ಬಾಣಂತನ ಮಾಡಲಿಕ್ಕೆ ಆಗಂಗಿಲ್ಲಾ. ಇನ್ನ ನಮ್ಮತ್ತಿಗಂತೂ ( ಅಂದರ ನಮ್ಮ ಕಾಕು) ನಾ ಸೀತರ ಸಾಕೂ ಅವರದ್ ಶುಗರ ಜಾಸ್ತಿ ಆಗಿ ಬಿಡತದ, ಅವರು ಬಾಣಂತನ ಮಾಡಿದಂಗ, ಇನ್ನ ಎರಡನೇದ ಬಾಣಂತನ ಯಾರ ಮಾಡೋರು ? .. ನೀವ ಹೇಳರೀ”.?
“ನೀವ ಏನರ ಬಾಣಂತನ ಮಾಡತೇನಿ ಅಂದ್ರ……. ನಾ ಇನ್ನೊಂದ ಹಡಿತೇನಿ ನೋಡ್ರಿ”, ಅಂತ ನಮ್ಮವ್ವನ ಮ್ಯಾಲೇ ಬಂದ್ಲು..
ನಾ ನಮ್ಮವ್ವನ ಮಾರಿ ಮಿಕಿ-ಮಿಕಿ ನೋಡ್ಲಿಕತ್ತೆ , ಎಲ್ಲೆರ “ಹೂಂ” ಅಂದ-ಗಿಂದಾಳಂತ. ‘ಅಕಿ ಹಡೆಯೋದು ಹೆಚ್ಚೋ, ನಾ ಬಾಣಂತನ ಮಾಡೊದು ಹೆಚ್ಚೋ’ ಅಂತ ನಮ್ಮವ್ವಾ ಹೂಂ ಅನ್ನೋ ಪೈಕಿನ. ಅದರಾಗ ಆಕಿಗೆ ಯಾವುದಕ್ಕೂ ಇಲ್ಲಾ ಅಂದ ಬ್ಯಾರೆ ಗೊತ್ತಿಲ್ಲಾ. ನಮ್ಮವ್ವಾ ಇನ್ನೂ ನಮ್ಮ ತಂಗಿ ಬಾಣಂತನ ಮಾಡೋ ತನಕ ಗಟ್ಟಿ ಇರಬೇಕು. ಅದರಾಗ ನಮ್ಮವ್ವಾ ನಮ್ಮ ಪೈಕಿ ಯಾರರ ಹಡಿತಾರ ಅಂತ ಗೊತ್ತಾದರ ಸಾಕು ಅವರ ಹಡಿಯೋಕ್ಕಿಂತ ಮದ್ಲ ಧುಬಟಿ ಹೊಲಿಯೋಕಿ, ಹೊಸಾ ಸೀರಿ ಮೂರ ಸಲಾ ನೀರಾಗ ಹಾಕಿ ಹಳೇದ ಆತು ಅಂತ ಹರಿಯೋದು ಧುಬಟಿ ಹೋಲಿಯೋದು. ಅವರು ಸಂಬಂಧ ಇರಲಿ ಬಿಡಲಿ ಹೆಸರ ಇಡೊ ಹೊತ್ತಿಗೆ ಧುಬಟಿ-ಕುಂಚಿಗೆ ತಯಾರ, ಬಸರಿದ್ದಿದ್ದ ಗೂತ್ತಾದರ ಸಾಕೂ ಸೂಜಿ ಪೊಣೆಸೆ ಬಿಡೋಕಿ, ಇನ್ನ ನಮ್ಮವ್ವಗ ಮಂದಿದ ಬಾಣಂತನ ಮಾಡೊದೊಂದು ಬಾಕಿ ಉಳದಿತ್ತು ಅನಕೊಂಡೆ. ನನ್ನ ಪುಣ್ಯಾಕ ನಮ್ಮವ್ವ ” ನನಗ ಎಲ್ಲೆ ಆಗತದವಾ, ನಂದು ವಯಸ್ಸಾತು. ನಂದ ವರ್ಷದಾಗ ಆರ ತಿಂಗಳ ಯಾರರ ಬಾಣಂತನ ( ಸೇವಾ ) ಮಾಡೊಹಂಗ ಆಗೇದ” ಅಂದ್ಲು.
ಅಲ್ಲಾ, ಜನಾ ಎರಡನೇದ ಹಡಿಲಾರದಕ್ಕ ಏನೇನೋ ಕಾರಣ ಹುಡಕ್ತಾರ, ಹೇಳ್ತಾರ ಆದರ ಈ ಬನು ಒಂದ ಹೋಸಾ ಕಾರಣಾನ ಹಡದಳ ಅಲಾ ಅನಸ್ತು. ಬಾಣಂತನ ಮಾಡೋರು ಯಾರೂ ಇಲ್ಲಾ ಅಂತ ಅದಕ್ಕ ಇಕಿ ಇನ್ನೊಂದ ಹಡಿಯಂಗಿಲ್ಲಂತ. ಹೋಗಲಿ ಬಿಡು ಅಕಿ ಇನ್ನೋಂದ ಹಡದರ ಹಡಿಲಿ ಬಿಟ್ಟರ ಬಿಡಲಿ ನನಗ್ಯಾಕ ಅಂತ ಸುಮ್ಮನಾದೆ. ಇನ್ನೇನರ ಜಾಸ್ತಿ ಮಾತಾಡಿದರ ” ನಾ ಹಡಿತೇನಿ ನೀವ ಬ್ಯಾನಿ ತಿಂತಿರಿನು” ಅಂತ ಕೇಳಿದ್ರು ಕೇಳಿದ್ಲ.
ಮುಂದ ಹಿಂತಾ ಸಮಸ್ಯೆ ಬರತಾವ ಅಂತ ನಾ ಈ ಬಾಣಂತನ ವಿಷಯ ಮದುವಿಗಿಂತ ಮೊದಲ ನಮ್ಮ ಅತ್ತಿಗೆ ಭಾಳ ಕ್ಲೀಯರ ಮಾಡಿದ್ದೆ “ಒಂದ ಅಳೇತನಾ, ಎರಡ ಬಾಣಂತನ” ಅಂತ. ಅದರ ಪ್ರಕಾರ ಪಾಪಾ ನಮ್ಮತ್ತಿ ಸುಮ್ಮನ ತುಟಿ ಪಿಟ್ಟ ಅನ್ನಲಾರದ ಎರ‍ಡ ಬಾಣಂತನ ಮಾಡಿದ್ರು. ನಾ ಎಲ್ಲರ ಮತ್ತೊಂದ ಹಡದ ಗಿಡದೇನಿ ಅಂತ ನಿಂತ ಕಾಲ ಮ್ಯಾಲೆ ನನಗೂ ಹೇಳಲಾರದ ತಮ್ಮ ಖರ್ಚಲೇನ ಮಗಳದ ಆಪರೇಶನ್ ಮಾಡಿಸಿದರು. ಇನ್ನ ನನ್ನ ಹೆಂಡತಿಗೆ ಮಕ್ಕಳ ಆಗಂಗಿಲ್ಲಾ, ನನಗ ಆದರ ಅಗ ಬಹುದು. ನಂದೇನ ಆಪರೇಶನ್ ಆಗಿಲ್ಲಲಾ.
ಒಂದು ಅಂತು ಖರೆ, ಇವತ್ತ ‘ಒಂದ ಮಗು ಸಾಕೋ… ಎನ ಇನ್ನೋಂದ ಬೇಕೊ?’ ಅನ್ನೋ ಈ ಪ್ರಶ್ನೆ ಇತ್ತಿಚಿಗೆ ನಮ್ಮ ವಾರ್ಗಿ( ಅಂದರ ೩೨-೩೭ ವರ್ಷದವರು ) ಹುಡಗರಿಗೆ ಭಾಳ ಕಾಡಲಿಕ್ಕತ್ತದ. ಇದರ ಬಗ್ಗೆ ಭಾಳ ತಲಿ ಕೆಡಸಿಕೊಂಡವರು ಇದ್ದಾರ, ಕೆಲವಬ್ಬರು ಒಂದ ಸಾಕೋ ಮಾರಾಯಾ ಅಂತ ಡಿಸೈಡ ಮಾಡ್ಯಾರ , ಇನ್ನ ಕೆಲವಬ್ಬರು ಇನ್ನೊಂದ ಬೇಕು ಆದರ ಈಗ ಸದ್ಯ ಬ್ಯಾಡ ಅಂತ ಬಿಟ್ಟಾರ , ಉಳದವರು ದೇವರ ಕೊಟ್ಟರ ಆಗತಾವ ಅಂತ ದಿವಸಾ ಗುಳಿಗೆ ತೊಗೊತಾರ. ನಾವೆಲ್ಲಾ ಲಗ್ನ ಆದ ಹೊಸ್ತಾಗ ಕಂಡೇನೋ ಇಲ್ಲೋ ಅನ್ನೋರಂಗ ‘ನಮಗ ಮಕ್ಕಳಾಗತಾವೋ ಇಲ್ಲೋ? ಆದರ ಹೆಂಗ ಆಗತಾವ?’ ಅಂತ ನೋಡಲಿಕ್ಕೆ ಭಡಾ – ಭಡಾ ಒಂದ ಹಡದ ಬಿಟ್ಟವಿ. ಈಗ ನೋಡಿದ್ರ ” ನಂದ ಒಂದು-ನಂಬದು ಒಂದು ” ಅಂತ ಒಂದ ಹೆಂಡತಿಗೆ ಒಂದ ಮಗು ಸಾಕು, ಅದಕ್ಕ ಎಲ್ಲಾ ಸೌಲತ್ತ ಕೊಟ್ಟ,ಅಚ್ಚಚ್ಛಾ ಮಾಡಿ ಬೆಳೆಸೋಣ. ತುಟ್ಟಿಕಾಲ ಎರಡನೇದ ಎಲ್ಲಿದೂ ಅಂತ ವಿಚಾರ ಮಾಡ್ಲಿಕ್ಕೆ ಹತ್ತೇವಿ. ನಮಗ ಒಂದ ಸಾಕೋದ್ರಾಗ ‘ಕುರಿ-ಕೋಣಾ’ ಆಗಲಿಕ್ಕತ್ತದ . ನಮಗ ಭವಿಷ್ಯದ ಬಗ್ಗೆ ವಿಚಾರ ಮಾಡೋ ಶಕ್ತಿ ಇಲ್ಲಾ. ಅದನ್ನ ನಾವು ವಿಚಾರ ಮಾಡ್ಲಿಕ್ಕೆ ಟೈಮ್ ಇಲ್ಲಾ ಅಂತೇವಿ. ಒಂದ ಸ್ವಲ್ಪ ಹಿಂದಿಂದರ ವಿಚಾರ ಮಾಡರಿ . ನಮ್ಮ ಅವ್ವಾ-ಅಪ್ಪಾ ಕಡಿಮೆ ಅಂದರ ೨-೩ರ ಮಕ್ಕಳನ್ನ ಹಡದರು ಆವಾಗ ಅವರ ಪರಿಸ್ಥಿತಿ ಇವತ್ತ ನಾವ ಇದ್ದದ್ದಕ್ಕಿಂತಾ ಕೆಟ್ಟ ಇತ್ತು. ಅವಾಗ ಆರ್ಥಿಕ ಪರಿಸ್ಥಿತಿಗೂ ಮಕ್ಕಳಿಗೂ ಸಂಬಂಧ ಇದ್ದಿದ್ದಿಲ್ಲಾ. ಅವರು “ಹುಟ್ಟಿಸಿದ್ದ ದೇವರು ಹುಲ್ಲು ಮೇಯಿಸಲಾರದನ ಇರತಾನನು” ಅಂತ ಹಡದರು. ನಾವು ಹೇಂಗೋ ಬೆಳದೇವಿ, ಒಮ್ಮೆನೂ ಹುಲ್ಲು ಮೇಯೋ ಪರಿಸ್ಥಿತಿ ಬರಲಿಲ್ಲಾ. ಹಂಗೂ-ಹಿಂಗೂ ದೊಡ್ಡವರಾದ್ವಿ ಇವತ್ತ ಆರ್ಥಿಕವಾಗಿ ನಮ್ಮಪ್ಪನಕ್ಕಿಂತ ಛಲೋ ಪರಿಸ್ಥಿತಿಗೆ ಬಂದ ಮುಟ್ಟಿದ್ವಿ. ಆದರ ಈಗ ನಾವು ಒಂದ ಬಿಟ್ಟ ಎರಡನೇದ ಹಡಿಬೇಕಾರ ‘ಮೀನಾ-ಮೇಷಾ’ ಮಾಡ್ಲಿಕತ್ತೇವಿ. ಯಾಕ ? ನಮ್ಮ ಕಡೆ ಸಾಕೋ ಕ್ಯಾಪಿಸಿಟಿ ಇಲ್ಲೋ ? ಏನ ನಮಗ ಮಕ್ಕಳ ಕಂಡರ ಆಗಂಗಿಲ್ಲೋ ? ಏನ ನಮಗ ಜವಾಬ್ದಾರಿನ ಬ್ಯಾಡೋ? ಇಲ್ಲಾ ನಮಗ ಇದ್ದ ಒಂದ ಹೆಂಡತಿ ಒಂದ ಮಗುನ್ನ ಸಾಕೋದ ಹತ್ತ ಮಕ್ಕಳನ್ನ ಸಾಕಿದಂಗ ಆಗೇದೊ ?ಇದು ಇವತ್ತ ವಿಚಾರ ಮಾಡೋ ವಿಷಯ ಅಂತ ನನಗ ಅನಸ್ತದ.
ನಮ್ಮಪ್ಪ ಅಂತಿದ್ನಂತ ತನಗ ” ರೇಶನ್ ತರಲಿಕ್ಕ ಒಬ್ಬ ಮಗಾ , ಯಂಜಲಾ- ಗ್ವಾಮಾ ಮಾಡ್ಲಿಕ್ಕೆ ಒಬ್ಬ ಮಗಳ ಸಾಕು” ಅಂತ. ಅದಕ್ಕಾ ಅಂವಾ ಎರಡ ಮಕ್ಕಳನ್ನ ಹಡದಾ. ನಾ ಏನೋ ದೊಡ್ಡಾಂವ ಆದ ಮ್ಯಾಲೇ ‘ರೇಶನ್’ ತಂದ ನಮ್ಮಪ್ಪನ ಆಶೇ ಇಡೇರಿಸಿದೆ ಆದರ ನಮ್ಮ ತಂಗಿ ‘ಯಂಜಲಾ-ಗ್ವಾಮಾ’ ಮಾಡಿದ್ದ ನಾ ಇವತ್ತಿಗೂ ನೋಡಿಲ್ಲಾ, ನಮ್ಮವ್ವನು ಕೆಲಸಕ್ಕ ಹೋಗ್ತಿದ್ಲು ಹಿಂಗಾಗಿ ಒಮ್ಮೇ ಎರಡ ಬ್ಯಾಡ ಅಂತ ಒಂದ ಹಡದು ಕರೆಕ್ಟ ಆರ ವರ್ಷಬಿಟ್ಟ ಇನ್ನೋಂದ ಹಡದ್ರು. ಆವಾಗ ಇನ್ನೂ ಸಾಯಿನ್ಸ್ ಇಗಿನಷ್ಟ ಬೆಳೆದಿದ್ದಿಲ್ಲಾ , ನಮ್ಮಪ್ಪರ ಸಾಲಿ ಕಲ್ತಿದ್ದು ೭ನೇತಾ ತನಕಾ ಆದರೂ ನಾ ಹುಟ್ಟಿ ಕರೆಕ್ಟ ಆರ ವರ್ಷಕ್ಕ ನಮ್ಮ ತಂಗಿ ಹುಟ್ಟಿದ್ಲು . ೧೯೭೩ ರ ಶೀಗಿ ಹುಣ್ಣಿವಿಗೆ ನಾ ಹುಟ್ಟಿದೆ ಮುಂದ ೭೯ ರ ಶೀಗಿ ಹುಣ್ಣಿವಿಗೆ ನಮ್ಮ ತಂಗಿ ಬಂದಳು, ಯಂಥಾ ಪಕ್ಕಾ ಪ್ಲ್ಯಾನಿಂಗ್ ಅಂತೀರಿ ಇದಕ್ಕ. ನಾನು ‘ನಮ್ಮಪ್ಪನ ಮಗಾ’ ಬಿಡಲಿಲ್ಲ , ಎರಡ ಹಡದೇ, ಎರಡಕ್ಕೂ ಆರ ವರ್ಷ ಅಂತರಕ್ಕ ಪ್ರಯತ್ನ ಮಾಡಿದೆ ಆದರ ಎರಡನೇದು ಒಂದ ತಿಂಗಳ ಮುಂದ ಹೋತ , ನನ್ನ ಮಗಾ ಡಿಸೆಂಬರ ೨೦೦೨ ಕ್ಕ ಹುಟ್ಟಿದಾ ನನ್ನ ಮಗಳು ಜನೇವರಿ ೨೦೦೯ ಕ್ಕ ಹುಟ್ಟಿದ್ಲು. ಒಂದ ತಿಂಗಳ ಅಂತರಾ ಹೆಚ್ಚ ಆತಲಾ ಅಂತ ತಲಿಕೆಡಿಸಿಕೊಂಡೆ , ನನ್ನ ಹೆಂಡತಿ ಹೇಳಿದ್ಲು ” ಯಾಕ ಕಾಳಜೀ ಮಾಡ್ತೀರಿ ನಡಕ ಒಂದ ವರ್ಷದಾಗ ಅಧಿಕ ಮಾಸ ಬಂದಿತ್ತು ತಗೋರಿ” ಅಂತ ಸಮಾಧಾನ ಮಾಡಿದ್ಲು.
‘ಗಂಡಿರಲಿ-ಹೆಣ್ಣಿರಲಿ, ಮಕ್ಕಳ ಎರಡ ಮಿನಿಮಮ್ ಇರಲಿ’ ಅನ್ನೋದ ನನ್ನ ವಿಚಾರ, ಮುಂದ ನಿಮಗ ವಯಸ್ಸಾದ ಮ್ಯಾಲೇ, ಇನ್ನೇನ ನಿಮ್ಮ ಮನೇಯವರಿಗೆ ಮಕ್ಕಳ ಆಗಂಗಿಲ್ಲಾ ಅಂತ ಗ್ಯಾರಂಟೀ ಆದಮ್ಯಾಲೇ ” ನನಗೂ ಇನ್ನೊಂದ ಇದ್ದಿದ್ರ ಛಲೋ ಆಗ್ತಿತ್ತು ” ಅಂತ ಅನಿಸಿದ್ರ ಎನ ಮಾಡೋರೊ? ಬಾಜು ಮನಿ ಕೂಸ ತಂದ ಉಪ್ಪಾ ಕೋಡೋದು ? ಹೌದಲ್ಲೊ? ಮತ್ತ ಇನ್ನೇನು ? ನಿಮ್ಮ ಮನಸ್ಸಿನಾಗ ಇರತದ ಮುದ್ದಾಡಬೇಕು ಅಂತ ಆದ್ರ ಏನ ಮಾಡೋದು? ಹೆಂಡತಿಗೆ ವಯಸ್ಸ ಆಗೀರ್ತದ. ಇದ್ದ ಒಂದ ಮನಿ ಕೂಸು ‘ಕತ್ತಿ’ಗತೆ ಬೆಳದ ಬಿಟ್ಟಿರತದ. ಮನ್ಯಾಗ ಬ್ಯಾರೆ ಸಣ್ಣ ಮಕ್ಕಳ ಇರಂಗಿಲ್ಲಾ, ಇನ್ನೇನು? ಮಂದಿ ಮನಿ ಕೂಸ ನಿಮ್ಮ ಉಪ್ಪಾಕ್ಕ ಗತಿ ಆಗತದ.
ನಮ್ಮ ಮಾಮಿ ಒಬ್ಬಕಿ ಇದ್ದಾಳ, ಇಲ್ಲೇ ನಮ್ಮ ಮನಿ ಲೈನ್ ನಾಗ ಎರಡ ಮನಿ ದಾಟಿದ್ರ ಅವರ ಮನಿ ,ದಿವಸಾ ಸಂಜಿಗೆ ನನ್ನ ಮಗಳನ್ನ ಕರಕೊಂಡ ಹೋಗಿ, ಜೀವಾ ತಿಂತಾಳ, ದಿವಸಾ ನೇಲ್ ಪಾಲಿಶ ಹಚ್ಚತಾಳ, ಮದರಂಗಿ ಹಚ್ಚತಾಳ ,ನೂರಾ ಎಂಟ ಬಣ್ಣದ ಟಿಕಳಿ, ಗೆಜ್ಜಿ ಕೊಡಸ್ತಾಳ, ಹೇರ್ ಪಿನ್ , ರಿಬ್ಬನ್, ಬಳಿ ಸುಟ್ಟು – ಸುಡಗಾಡು ಎಲ್ಲಾ ಮಾಡ್ತಾಳ, ತಾ ಮಾಡ್ಕೊಳ್ಳಲಾರದಷ್ಟ ನನ್ನ ಮಗಳಿಗೆ ಮಾಡ್ತಾಳ. ಯಾಕ ಗೊತ್ತಾ ? ಆಕಿಗೆ ಇರೋಂವ ಒಬ್ಬನ ಮಗಾ ಅವನು ಲೈಟಿನ ಕಂಬದ ಗತೆ ಉದ್ದಕ ಬೆಳೆದಾನ. ಅದೂ ಬೆಂಗಳೂರಾಗ ಇಂಜಿನೀಯರ ನೌಕರಿ ಮಾಡಲಿಕ್ಕತ್ತಾನ. ಇನ್ನ ನಮ್ಮ ಮಾಮಿಗೆ ಅವನ್ನಂತೂ ಮುದ್ದ ಮಾಡಲಿಕ್ಕೆ ಅಂವಾ ನಿಲಕಂಗಿಲ್ಲಾ, ಅವಂದು ಅವ್ವಾ-ಅಪ್ಪನ ಕಡೆ ಮುದ್ದ ಮಾಡಿಸಿಕೊಳ್ಳೋ ವಯಸ್ಸು ಅಲ್ಲಾ, ಹಿಂಗಾಗಿ ಪಾಪಾ ನಮ್ಮ ಮಾಮಿಗೆ ನನ್ನ ಮಗಳ ಗತಿ ಆಗ್ಯಾಳ. ಅಲ್ಲಾ ನಮ್ಮ ಮಾಮಿ ತಂದ ವಯಸ್ಸ ಇದ್ದಾಗ ಏನರ ನನ್ನ ಮಗಳನ್ನ ಇವತ್ತ ಶೃಂಗಾರ ಮಾಡದಷ್ಟು ತಾನ ಮಾಡಕೊಂಡಿದ್ದರ ನಮ್ಮ ಮಾಮಾನ ನಿಯತ್ತ ಬದಲಾಗಿ ಇನ್ನೊಂದ ಹಡದರ ಹಡಿತಿದ್ದನೋ ಏನೋ? ಪಾಪಾ, ಆಗಿದ್ದ ಆಗಿ ಹೋತು. ಅಕಿಗೆ ಇನ್ನೇನೂ ಆಗಂಗಿಲ್ಲಾ, ಅಕಿಗೆ ಮುಂದ ಮೊಮ್ಮಕ್ಕಳ ಗತಿ, ಅಲ್ಲಿ ತನಕ ನನ್ನ ಮಗಳ ಇದ್ದಾಳಲ್ಲಾ.
‘ಧೈರ್ಯಂ ಸರ್ವತ್ರ ಸಾಧನಂ’ ಅಂತಾರ. ಧೈರ್ಯಾ ಮಾಡರಿ. ಹಡಿಲಿಕ್ಕೆ ಎನ ಧೈರ್ಯಾ ಬ್ಯಾಡಾ ಆದರ ನಿಮ್ಮ ಮನೇಯವರನ್ನ ಕೇಳಲಿಕ್ಕೆ ಧೈರ್ಯಾ ಬೇಕಲಾ. ಈಗ ಒಂದ ಹಡದ ಮುಂದ ಒಂದ ೧೫ ವರ್ಷ ಆದ ಮ್ಯಾಲೆ ನಿಮ್ಮ ಮಗಗ/ ಮಗಳಿಗೆ , ಚಿನ್ನಾಟ ಆಡಲಿಕ್ಕೆ ಒಂದ ತಂಗಿ ಅಥವಾ ತಮ್ಮ ಇರಬೇಕಿತ್ತು ಅನಿಸಿದ್ರ ಏನ ಮಾಡೋರು? ಒಂದ ಐದ ವರ್ಷದ ಹಿಂದ ಹಿಂಗ ಆತು, ನಮ್ಮ ಪರಿಚಯದವರ ಮಗಾ ಒಬ್ಬಂವಾ ೯ ನೇತ್ತಾ ಒದತಿದ್ದಾ, ಆ ಹುಡಗ ಬಾಜು ಮನಿ ಸಣ್ಣ ಕೂಸ ನೋಡಿ ಅವರ ಅವ್ವಾ-ಅಪ್ಪಗ ನನಗೂ ಒಂದ ತಂಗಿ ಬೇಕು ಅಂತ ಗಂಟ ಬಿದ್ದಾ . ಪಾಪಾ ಅವರವ್ವಾ ಹಡೆಯೋದ ಮರೆತ ೧೫ ವರ್ಷ ಆಗಿತ್ತು. ಆ ಹುಡುಗರ ಗಂಟ ಬಿದ್ದಾ , ಕಡಿಗೆ ಅವನ ತಂದಿ-ತಾಯಿಗೆ ಮಗಗ ಇಲ್ಲಾ ಅನ್ನಲಿಕ್ಕೆ ಆಗಲಿಲ್ಲ. ’ಬೆಟರ್ ಲೇಟ್ ದ್ಯಾನ್ ನೆವರ್’ ಅಂತ ಧೈರ್ಯಾ ಮಾಡಿ ‘ದೇವರ ಮ್ಯಾಲೆ ಭಾರಾ’ ಹಾಕಿದರು. ದೇವರ ಅವರ ಭಾರ ತಡ್ಕೊಳಾರದ, ವರ್ಷ ತುಂಬೋದರಾಗ ಆ ಹುಡಗಗ ತಂಗಿ ಕೊಟ್ಟ ಬಿಟ್ಟಾ. ಆವರು ಇಷ್ಟ ಲೇಟ ಮಾಡಿ ಎರಡನೇದ ಹಡದರ ಜನಾ ಏನಂತಾರ, ಸಮಾಜ ಏನ ಅಂತದ ಅಂತ ತಲಿ ಕೆಡಿಸ್ಗೋಳ್ಳಿಲ್ಲಾ. ತಮಗ ಬೇಕನಸ್ತು ಹಡದರು. ಕೂತ ‘ಕಸೂತಿ’ ಮಾಡಿದರು ‘ಪ್ರಸೂತಿ’ ಆತು.
ನೀವೂ ಒಂದ ಹಡದವರು ಯಾರರ ಇದ್ದರ ಇನ್ನೊಮ್ಮೆ ವಿಚಾರ ಮಾಡ್ರಿ, ಹೆಂಗಿದ್ರು ಶ್ರಾವಣಮಾಸ, ಜಿಟಿ-ಜಿಟಿ ಮಳಿ ಹತ್ತೇದ, ತಂಪ ವಾತಾವರಣನೂ ಅದ , ಮುಂದಿಂದು ದೇವರ ಇಚ್ಛೆ ಇಲ್ಲಾ ನಿಮ್ಮ ಯಜಮಾನ್ರ ಇಚ್ಛೆ. ಒಂದ ಮಾತ ಇವತ್ತ ರಾತ್ರಿ ಕೇಳಿ ನೋಡ್ರಿ. ಮತ್ತ ನಾ ಹೇಳೇನಿ ಅಂತ ಕೇಳಬ್ಯಾಡರಿ, ಆಮೇಲೆ ಎಲ್ಲರ ನನಗ ಬಾಣಂತನ ಮಾಡ ಅಂತ ಗಂಟ ಬಿದ್ದೀರಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ