’ಬಿಳಿ ಅಂಚಿನ ಸೀರಿಯ….ಕಂಚಿನ ಬೆಡಗಿಯ ವಯ್ಯಾರಿ’

ನಿನ್ನೆ ರಾತ್ರಿ ಒಮ್ಮಿಂದೊಮ್ಮಿಲೇ…
’ರ್ರಿ…ನನ್ನ ಕಡೆ ಒಂದು ಬಿಳಿ ಸೀರಿನ ಇಲ್ಲಾ…ನಾಳೆಗೆ ಬಿಳಿ ಸೀರಿ ಬೇಕಾಗಿತ್ತ…’ ಅಂತ ನಮ್ಮಕಿ ಶುರು ಮಾಡಿದ್ಲು. ನಾ ಏನ ಅಕಿ ಕೇಳಿದಾಗೊಮ್ಮೆ ಕೇಳಿದ್ದ ಕಲರ್ ಸೀರಿ ಕೊಡ್ಸೋರ ಗತೆ
’ಮೊನ್ನೇ ಹೇಳ್ಬಿಕಿತ್ತಿಲ್ಲ, ಹೆಂಗಿದ್ದರೂ ಬರ್ಥಡೇ ಇತ್ತ ಅವತ್ತ ಕೊಡಸ್ತಿದ್ದೆ’ ಅಂದೆ.
’ರ್ರೀ..ಬರ್ಥಡೇಕ್ಕ ಯಾರರ ಬಿಳಿ ಸೀರಿ ಕೊಡಸ್ತಾರೇನ’ ಅಂತ ನಂಗ ಜೋರ ಮಾಡಿದ್ಲು.
ಈಗ ಎಲ್ಲಾ ಬಿಟ್ಟ ಬಿಳಿ ಸಿರಿ ಯಾಕಂತ ನಾ ಕೇಳಿದರ
’ನಿಮ್ಮ ತಂಗಿ ಫೋನ್ ಮಾಡಿ ಭಾಭಿ ನಾಳೆ ಬಿಳಿ ಸೀರಿ ಉಟ್ಗೊಂಡ ಸೆಲ್ಫಿ ಹೊಡ್ಕೊಂಡ ಫೋಟೊ ಕಳಸ..ನಾ ನಮ್ಮ ಮನೆಯವರಿಗೆ ಹೇಳಸಿಸಿ ಪೇಪರಾನ ನಿನ್ನ ಫೋಟೊ ಪ್ರಿಂಟ್ ಮಾಡಸಸ್ತೇನಿ’ ಅಂತ ಅಂದಾಳ’ ಅಂದ್ಲು..
ಆತ ತೊಗೊ ಇಬ್ಬರಿಗೂ ಕೆಲಸ ಇಲ್ಲಾ ಅಂತ ಅಂದರ ಅಕಿಗೆ ಸಿಟ್ಟ ಬರ್ತದ…ಯಾಕಂದರ ಪೇಪರನಾಗ ಬರೇ ನನ್ನ ಫೋಟೊ ಇಷ್ಟ ಬರ್ತದ..ಅಕಿದೂ ’ಅಂಕಣಕಾರನ ಹೆಂಡ್ತಿ’ ಅಂತ ಯಾರೂ ಫೋಟೊ ಹಾಕಂಗಿಲ್ಲಲಾ…ಹಿಂಗಾಗಿ ಒಂಥರಾ ಹೊಟ್ಟಿಕಿಚ್ಚ ಅನ್ನರಿ….
ನಾ ಇನ್ನ ಇಕಿ ಬಿಳಿ ಸೀರಿ ಸಿಗೋ ಮಟಾ ಬಿಡಂಗಿಲ್ಲ ತಡಿ ಅಂತ
’ಒಂದ ಕೆಲಸಾ ಮಾಡ, ಅಲ್ಲೇ ಹಿಂದಿನ ಮನಿ ದೇಸಾಯಿ ಅಂಟಿ ಕಡೆ ಇಸ್ಗೊಂಡ ಬಾ’ ಅಂದೆ…
’ಅವರ ಯಾಕ ಕೋಡ್ತಾರ…’
’ಏ.. ಅವರ lifeline ಒಳಗ ನರ್ಸ್ ಇದ್ದಾರ, ಅವರ ಕಡೆ ರಗಡ ಬಿಳಿ ಸೀರಿ ಇರ್ತಾವ….ಒಂದ ಒಗದ್ದ ಸೀರಿ ಇಸ್ಗೊ..ಮತ್ತ ವಾಪಸ ಕೊಟ್ಟರ ಆತ ತೊಗೊ” ಅಂತ ನಾ ಅಂದೆ.
’ರ್ರೀ…ಸುಮ್ಮನ ಕೂಡ್ರಿ…ದೇವರ ಗುಡಿಗೆ ಯಾರರ ನರ್ಸ್ ಸೀರಿ ಉಟ್ಗೊಂಡ ಹೋಕ್ತಾರೇನ..’ ಅಂತ ನಂಗ ಜೋರ ಮಾಡಿದ್ಲು.
’ನೋಡಿಲ್ಲೇ…ನೀ ಹಿಂಗ ವರ್ಷಾ ಒಂದೊಂದ ಕಲರ್ ಸೀರಿ ಇಲ್ಲಾ ಅಂತ ಸೀರಿ ತೊಗೊತ್ತ ಹೋಗ್ಲಿಕ್ಕೆ ನಾ ಏನ ಗಂಗಾವತಿ ಸಾರಿ ಸೆಂಟರ್ ಒಳಗ ಕೆಲಸಾ ಮಾಡಂಗಿಲ್ಲಾ….ಯಾವದರ ಬಿಳಿ ಅಂಚ, ಸೆರಗ ಇದ್ದದ್ದ ಸೀರಿ ಉಟ್ಕೊಂಡ ಹೋಗ..ಇಲ್ಲಾ ನಂದ ಯಾವದರ ಒಗದ್ದ ಒಂಬತ್ತವಾರಿ ಧೋತ್ರ ಉಟಗೊಂಡ ಹೋಗ ಅಂತ ’ಸಿಟ್ಟಿಗೆದ್ದ ಅಂದೆ….
ಕಡಿಕೆ ಅಕಿ ಇವತ್ತ ಮುಂಜಾನೆ ನಮ್ಮವ್ವಂದ ಟ್ರಂಕ್ ತಗದ ಯಾವದೋ ಒಂದ ಬೀಳಿ ಅಂಚ, ಬೀಳಿ ಸೇರಗ ಇದ್ದದ್ದ ಮ್ಯಾಲೆ ಅದಕ್ಕ ಬೀಳಿ ಫಾಲ್ಸ್ ಹಚ್ಚಿದ್ದ ಸೀರಿ ಉಟಗೊಂಡ ಅಗದಿ ನೋಡಿದವರ ‘ ಬಿಳಿ ಅಂಚಿನ ಸೀರಿಯ ..ಕಂಚಿನ ಬೆಡಗಿಯ ವಯ್ಯಾರಿ’ ಅನಬೇಕ ಹಂಗ ರೆಡಿ ಆಗಿ ಈ ನನ್ನ ಎರಡ ಮಕ್ಕಳ ತಾಯಿ ಏಳ ಮಕ್ಕಳ ತಾಯಿಗುಡಿಗೆ ಹೋಗಿ ಬಂದ್ಲು…
ಹಂಗ ಇವತ್ತ ನವರಾತ್ರಿಯ ಐದನೇ ದಿವಸ, ಇವತ್ತ ಸ್ಕಂದಮಾತೆಯ ಆರಾಧನೆ ಹಾಗೂ ಸರಸ್ವತಿ ಪೂಜೆಯ ಮಾಡಬೇಕಂತ, ಹಿಂಗಾಗಿ ಸರಸ್ವತಿ ದೇವಿಗೆ ಪ್ರಿಯವಾದ ಬಿಳಿ ಬಣ್ಣದ ಸೀರೆಯನ್ನು ದೇವಿಗೆ ಅರ್ಪಿಸಬೇಕಂತ…… ಹಂಗ ನಮ್ಮಕಿದ ಕಿಲಿಯೋದ ಮುಗದ ಹೋಗಿ ಎಷ್ಟ ವರ್ಷ ಆತೋ ಏನೋ ಆದರೂ ಬೀಳಿ ಸೀರಿ ಸಡಗರ ಮುಗಿವಲ್ತ..
ಇನ್ನ ಅಕಿ ಉಟಗೊಂಡಿದ್ದ ನಮ್ಮವ್ವನ ಬಿಳಿ ಅಂಚಿನ ಸೀರಿ ಫೋಟೊ ಹಾಕೊಂವ ಇದ್ದೆ ನಾ, ಆದರ ಹೋಗ್ಲಿ ಬಿಡ ಮೊನ್ನೆನ ಅಕಿ ಬರ್ಥಡೇಕ್ಕ ಒಂದ ನಾಲ್ಕ ಫೋಟೊ ಹಾಕಿ ಅಕಿನ್ನ ಸಿಕ್ಕಾಪಟ್ಟೆ ವೈರಲ್ ಮಾಡೇನಿ…ಅದರಾಗ ನಮ್ಮವ್ವ ಅಕಿ ಫೋಟೊ ಫೇಸಬುಕ್ ಒಳಗ ಹಾಕಿದ್ದಕ್ಕ
’ಅಕಿಗೆ ದೃಷ್ಟಿ ಆಗೇದ…ನೀ ಹಂಗ ಅಕಿ ಫೋಟೊ ಸೋಸಿಯಲ್ ಮೀಡಿಯಾದಾಗ ಹಾಕಬ್ಯಾಡ’ ಅಂತ ನನಗ ಬೈದ’ ಕಡಿಕೆ ತಲೆ ಕೆಟ್ಟ ಪಾಪ ನನ್ನ ಹೆಂಡ್ತಿಗೆ ಹುಟ್ಟಿದ್ದ ದಿವಸನ ರಾತ್ರಿ ಕಸಬರಗಿಲೇ ದೃಷ್ಟಿ ಬ್ಯಾರೆ ತಗದಿದ್ಲು…
ಇನ್ನ ಈ ಬಿಳಿ ಸೀರಿ ಬದ್ಲಿ ನನ್ನ ಬಿಳಿ ಅಂಚಿನ ಒಂದ ಪೇಂಟಿಗ್… ನಿಮಗಾಗಿ…
ನಿಮಗೇಲ್ಲಾ…..ನವರಾತ್ರಿಯ ಐದನೇ ದಿವಸದ ಶುಭಾಶಯಗಳು….
ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ |
ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ ||

Leave a Reply

Your email address will not be published. Required fields are marked *


The reCAPTCHA verification period has expired. Please reload the page.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ