ಈಗ ಒಂದ ವರ್ಷದಿಂದ ಪ್ರತಿ ಶನಿವಾರ ಆಫೀಸಿಗೆ ಹೋಗಬೇಕಾರ ಮುಂಜ ಮುಂಜಾನೆ ನರಸಿಂಹ ದೇವರ ಗುಡಿಗೆ ಹೋಗೊದ ರೂಡಿ ಮಾಡ್ಕೊಂಡೇನಿ…..ಹಿಂಗ ಒಂದ ಸರತೆ ಹೋದಾಗ ಆಚಾರರ ಮನೆಯವರ ಒಂದ ಹುಡಗಿಗೆ ಅವರ ಮನಿ ಕಟ್ಟಿ ಮ್ಯಾಲೆ ಹೆರಳ ಹಾಕಲಿಕ್ಕತ್ತಿದ್ದರು… ನಾ ಆರಾಮ ಏನರಿ ವೈನಿ ಅಂತ ಅವರಿಗೆ ಮಾತಾಡ್ಸಿ ಗುಡಿಗೆ ಹೋಗಿ ವಾಪಸ ಹೋದೆ …ಮುಂದಿನ ಶನಿವಾರ ಮತ್ತ ಅವರ ಹೆರಳ ಹಾಕೋತ ನಿಂತಿದ್ದ ನೋಡಿದೆ.
ಅಲ್ಲಾ ಹಂಗ ರವಿ ಆಚಾರರಿಗೆ ಇರವೋ ಎರೆಡು ಗಂಡ ಹುಡುಗರು ಅದರಾಗ ಒಂದನೇದಂವ ಅಂತೂ ಮೊನ್ನೆನ ನಮ್ಮಪ್ಪನ ಶ್ರಾದ್ಧಾ ಮಾಡಿಸಿಸಿದಾ.. ಅಷ್ಟ ದೊಡ್ಡೊಂವ ಇದ್ದಾನ. ಇನ್ನ ಈ ಸಣ್ಣ ಹುಡಗಿ ಎಲ್ಲಿಂದ ಬಂದ್ಲು ಅಂತ ಅನಸ್ತ. ಮತ್ತೆಲ್ಲರ ಮನ್ಯಾಗ ಒಂದ ಮುತ್ತೈದಿ ಜಾಸ್ತಿ ಆಗ್ತಾಳ ತಡಿ ಅಂತ ರವಿ ಆಚಾರರ ಯಾರಿಗೂ ಹೇಳಲಾರದ ಮಗನ ಲಗ್ನಾ-ಗಿಗ್ನಾ ಮಾಡಿದರೇನ ಅಂತ ಅನಸಲಿಕತ್ತ.
ಮತ್ತ ಮುಂದಿನ ಶನಿವಾರ ವೈನಿ ಹೆರಳ ಹಾಕಲಿಕತ್ತಿದ್ದ ನೋಡಿದೆ….ನಾ ಒಂದ ಸರತೆ ಕೇಳೋಣ ತಡಿ ಅಂತ
“ಏನ ವೈನಿ…ಹೆರಳ ಹಾಕಲಿಕತ್ತೀರಿ….ಯಾರ ಈ ಹುಡಗಿ” ಅಂತ ಕೇಳೆ ಬಿಟ್ಟೆ.
“ಏ…ಇಲ್ಲೆ ನಮ್ಮ ದೇಶಪಾಂಡೆಯವರ ಮಗಳ…ಅವರವ್ವ ಫ್ರೀ ಇದ್ದಿದ್ದಿಲ್ಲಾ ಅಂದರ ಹೆರಳ ಹಾಕಿಸಿಗೊಳ್ಳಿಕ್ಕೆ ಬಂದಿರ್ತಾಳ’ ಅಂತ ಅಂದರು.
ಮುಂದ ಹಂಗ ಮಾತಾಡ್ತ, ಮಾತಾಡ್ತ…
“ನನಗ ಹೆಣ್ಣ ಮಕ್ಕಳ ಅಂದರ ಭಾಳ ಪ್ರೀತಿರಿ…ಅವಕ್ಕ ಹೆರಳ ಹಾಕಬೇಕು, ಅವಕರ ಶೃಂಗಾರ ಮಾಡ್ಬೇಕು ಅದು ಇದು ಅಂತ ಭಾಳ ಕನಸ ಕಟಗೊಂಡಿದ್ದೆ ಏನ ಮಾಡೋದು ನಮ್ಮ ಹಣೇಬರಹಕ್ಕ ಎರಡು ಗಂಡ ಹುಟ್ಟಿದ್ವು” ಅಂತ ಅಂದರು.
ಅಲ್ಲಾ ನಿಮ್ಮ ಮನೆಯವರ ದಿನಕ್ಕ ಮೂರ ಹೊತ್ತ ’ಹರಿ ಸರ್ವೋತ್ತಮ – ವಾಯು ಜೀವೋತ್ತಮ’ ಅಂತ ಶ್ರೀ ಹರಿ ಸೇವಾ ಮಾಡ್ತಾರ ಅದಕ್ಕ ಎರೆಡು ಗಂಡ ಹುಟ್ಟ್ಯಾವ ತೊಗೊರಿ ಅಂತ ಮನಸಿನಾಗ ಅಂದ ಸುಮ್ಮನಾದೆ.
ಹಂಗ ಅವರ ’ನನಗ ಹೆಣ್ಣ ಹುಡಗ್ಯಾರಿಗೆ ಹೆರಳ ಹಾಕೋದ ಭಾಳ ಸೇರತದ ಅಂತ ಅಂದಾಗ ನನ್ನ ಹೆಂಡ್ತಿ -ಮಗಳನು ನಿಮ್ಮ ಕಡೆ ಕಳಸಲೇನ..ಅವರಿಗೂ ಹೆರಳ ಹಾಕ್ತಿರೇನ ಅಂತ ಕೇಳೊಂವ ಇದ್ದೆ. ಯಾಕಂದರ ನಮ್ಮ ಮನ್ಯಾಗ ದಿವಸಾ ನನ್ನ ಮಗಳದ ಹೆರಳ ಹಾಕೋದ ಅಂದರ ಒಂದ ದೊಡ್ಡ ರಾಮಾಯಣನ ….
ಹಂಗ ಒಂದ ಕಾಲದಾಗ ಈ ಹೆರಳ ಹಾಕಿಸಿಕೊಳ್ಳಿಕ್ಕೆ ಹೆಣ್ಣ ಮಕ್ಕಳ ಮತ್ತೊಬ್ಬರ ಮನಿಗೆ ಹೋಗಿ ಯಾರ ಮನ್ಯಾಗ ಹೆರಳ ಹಾಕೋರ ಖಾಲಿ ಇದ್ದಾರ, ಯಾರ ಬರೇ ಗಂಡ ಹಡದಾರ ಅವರನ ಹುಡಕಿ ’ಮಾಮಿ ನಂಗೊಂದ ಸ್ವಲ್ಪ ಹೆರಳ ಹಾಕರಿ’ ಅಂತ ಭಿಡೆ ಬಿಟ್ಟ ಕೇಳಿ ಹೆರಳ ಹಾಕಿಸ್ಗೊಂಡ ಬರ್ತಿದ್ದರಂತ. ಅಲ್ಲಾ ಹಂಗ ಆವಾಗ ಆಜು- ಬಾಜು ಮಂದಿನೂ ಹಚಗೋತಿದ್ದರು, ಪ್ರೀತಿಲೇ ಕರದ ಹೆರಳ ಹಾಕಿ, ಅವರ ಮನೆ ಉಸಾಬರಿ ಎಲ್ಲಾ ತಿಳ್ಕೊಳೊರ. ಅಲ್ಲಾ ಆಗಿನ ಕಾಲನ ಹಂಗ ಇತ್ತ ಬಿಡ್ರಿ..ಮನಿ ತುಂಬ ಮಕ್ಕಳ ಅದರಾಗ ಒಂದ ಬಿಟ್ಟ ಮೂರ ಹೆಣ್ಣ ಹುಟ್ಟಿ ಬಿಟ್ಟರಂತು ಮುಗದಹೋತ…ಮುಂಜಾನೆ ಎದ್ದ ಪಾಪ ಹುಡಗ್ಯಾರನ ರೆಡಿ ಮಾಡೋದರಾಗ ಹಡದೋಕಿಗೆ ರಗಡ ಆಗಿ ಹೋಗ್ತಿತ್ತ. ಆವಾಗ ಹಡದ ಅವ್ವನ…’ಬಾಜು ಮನಿ ಮಾಮಿ ಖಾಲಿ ಇದ್ದಾರೇನ ನೋಡ ಅವರ ಮನಿಗೆ ಹೆರಳ ಹಾಕಿಸ್ಗೊಂಡ ಬಾ’ ಅಂತ ಕಳಸ್ತಿದ್ದರು.
ಹಂಗ ನಮ್ಮವ್ವನು ಸಣ್ಣಕಿದ್ದಾಗ ಅವರ – ಇವರ ಮನಿ ಹೆಣ್ಣಮಕ್ಕಳ ಕಡೆ ಹೆರಳ ಹಾಕಿಸ್ಗೊಂಡ ದೊಡ್ಡೋಕಿ ಆದೋಕಿ ಅಂತ.
ನಮ್ಮವ್ವಂದ ಇನ್ನೊಂದ ಮಜಾ ಕಥಿ ಕೇಳ್ರಿ ಇಲ್ಲೆ….ಯಾವಾಗ ನಮ್ಮವ್ವಂದ ಮದ್ವಿ ಫಿಕ್ಸ್ ಆತಲಾ ಆವಾಗ ಒಂದ ಸರತೆ ನಮ್ಮಪ್ಪನ ದೊಡ್ಡ ಅಕ್ಕ ಸರಸಕ್ಕ ಅಂತ ಇದ್ಲು ಅಕಿ ನಮ್ಮವ್ವನ್ನ ನೋಡಿದೋಕಿನ
“ಅಯ್ಯ…ಈ ಸಿಂಧುನ….ಹಾನಗಲ್ ಒಳಗ ನಾಲ್ಕನೇತ್ತ ಇದ್ದಾಗ ನನ್ನ ಕಡೆ ಹೆರಳ ಹಾಕಿಸ್ಗೊಳ್ಳಿಕ್ಕೆ ಬರ್ತಿತ್ತ’ ಅಂತ ಅಂದ್ಲಂತ. ಅಲ್ಲಾ ಆವಾಗ ಏನ ನಮ್ಮವ್ವನ ಪೈಕಿಯವರು – ನಮ್ಮಪ್ಪನ ಪೈಕಿಯವರ ಒಬ್ಬರಿಗೊಬ್ಬರ ಸಂಬಂಧ ಇದ್ದಿದ್ದಿಲ್ಲಾ…ಏನೋ ಒಂದ ಓಣ್ಯಾಗ ಇದ್ದರು, ನಮ್ಮವ್ವ ಯಾರದೋ ಮನ್ಯಾಗ ಕಲಿಲಿಕ್ಕೆ ಹಾನಗಲ್ ಒಳಗ ಇದ್ಲ ಆವಾಗ, ಹೆರಳ ಹಾಕಿಸ್ಗೊಳ್ಳಿಕ್ಕೆ ಒಂದ್ಯಾರಡ ಸರತೆ ನಮ್ಮ ಸರಸಕ್ಕ ಅತ್ಯಾನ ಮನಿಗೆ ಹೋಗಿರಬೇಕ…ಅಲ್ಲಾ ಅಕಿಗೇನ ಗೊತ್ತ ಮುಂದ ಇಪ್ಪತ್ತ ವರ್ಷ ಆದ ಮ್ಯಾಲೆ ನನಗೆ ಹೆರಳ ಹಾಕಿದೋಕಿನ ತನ್ನ ತಮ್ಮನ್ನ ನನ್ನ ಕೊರಳಿಗೆ ಕಟ್ಟತಾಳ ಅಂತ. ಆದರೂ ಏನ ಅನ್ನರಿ ಆಗಿನ ಕಾಲದ ಸೊಗಡನ ಬ್ಯಾರೆ ಇತ್ತ. ಎಷ್ಟ ಒಬ್ಬರಿಗೊಬ್ಬರ ಅನ್ನೋನ್ಯವಾಗಿ ಬದಕತಿದ್ದರು ಅಂತೇನಿ.
ಆದರೂ ಆಚಾರರ ಮನೆಯವರ ಈಗಿನ ಬಾಬ್ ಕಟ್ ಕಾಲದಾಗೂ ಹಿಂಗ ಪ್ರೀತಿಲೇ ಮನಿಗೆ ಕರದ ಕರದ ಹೆಣ್ಣ ಹುಡಗ್ಯಾರಿಗೆ ಹೆರಳ ಹಾಕೋದ ನೋಡಿ ಖುಶಿ ಆತ ಅನ್ನರಿ.
ನಾ ಗುಡಿಯಿಂದ ಬರಬೇಕಾರ ಅವರಿಗೆ
” ವೈನಿ…ಒಂದ ಕೆಲಸಾ ಮಾಡ್ರಿ….ಇಲ್ಲಿ ಸೀರಿ ಫಾಲ್ಸ್, ಪೀಕೋ ಮಾಡಿಕೊಡಲಾಗುವದು ಅಂತ ಬೋರ್ಡ್ ಹಾಕ್ತಾರಲಾ…ಹಂಗ ’ಇಲ್ಲಿ ಹೆರಳು ಹಾಕಲಾಗುವದು’ ಅಂತ ಒಂದ ಬೋರ್ಡ್ ಹಾಕಿ ಬಿಡ್ರಿ’ ಅಂತ ಚಾಷ್ಟಿ ಮಾಡಿದೆ.
“ಅಯ್ಯ…ನೀವೋಂದ ಒಳೆ ಹೇಳಿದರೇಲಾ….ನಾ ಏನ ದಿವಸಾ ಹೆರಳ ಹಾಕಂಗಿಲ್ಲರಿಪಾ..ಶನಿವಾರಕ್ಕೊಮ್ಮೆ ಪಾಪಾ ಆ ಹುಡಗಿ ಸಾಲಿ ಮುಂಜಾನೆ ಲಗೂನ ಇರ್ತದ ಅದಕ್ಕ ಹಾಕಿರ್ತೇನಿ….ನೀವೇಲ್ಲರ ಮತ್ತ ಅದರ ಮ್ಯಾಲೆ ಒಂದ ಆರ್ಟಿಕಲ್ ಬರದ-ಗಿರದಿರಿ ನೀವೇನ ಹೇಳಲಿಕ್ಕೆ ಬರಂಗಿಲ್ಲಾ’ ಅಂತ ನಕ್ಕೋತ ಅಂದರ…
ನಾ ಅಲ್ಲಿ ತನಕ ಅದರ ಮ್ಯಾಲೆ ಒಂದ ಲೇಖನಾ ಬರಿಬೇಕ ಅಂತ ಅನ್ಕೊಂಡಿದ್ದಿಲ್ಲಾ…ಆದರ ಅವರಾಗೆ ಬಾಯಿಬಿಟ್ಟ ಲೇಖನಾ ಬರದ-ಗಿರದಿರಿ ಅಂದರು ಅಂತ ಈ ಲೇಖನಾ ಬರದೆ ಅನ್ನರಿ.

