ಹುಲಿಗೆ ಒಂದ ಹುಣ್ಣ ಹುಟ್ಟಿದಂಗ ಮಾಡ್ತಾರ…

ಇದ ಒಂದ ಆರ ತಿಂಗಳ ಹಿಂದಿನ ಸುದ್ದಿ ಇರಬೇಕ, ನಮ್ಮ ಮಾಮಾನ ಮಗಳದ ಲಗ್ನ ಫಿಕ್ಸ್ ಆಗಿತ್ತ. ಮಾಮಾ ರಿಟೈರ್ಡ್ ಆಗಿದ್ದಾ, ಮಾಮಿದ ಬ್ಯಾಂಕ್ ಸರ್ವೀಸ್ ಇತ್ತ. ಹಿಂಗಾಗಿ ಮಗಳ ಮದ್ವಿ ತಯಾರಿ ಕೆಲಸ, ಅದರಾಗೂ ಫಿಜಿಕಲ್ ಕೆಲಸ ಎಲ್ಲಾ ಮಾಮಾನ ಮ್ಯಾಲೆ ಬಿದ್ದಿತ್ತ. ಮಗಾ ಫಾರೇನ್, ಅಂವಾ ಸೀದಾ ದೇವರ ಊಟಕ್ಕ ಬಂದ ಸತ್ಯನಾರಾಯಣ ಪೂಜಾ ದಿವಸ ವಾಪಸ ಹೋಗೊಂವ.
ನಮ್ಮ ಮಾಮಿ ಆಗದಿ ಸಿಸ್ಟಿಮ್ಯಾಟಿಕ್ ಮ್ಯಾಲೆ ಸ್ಟ್ರಿಕ್ಟ್ ಹೆಣ್ಣಮಗಳ. ಅಕಿ ಮಗಳ ಲಗ್ನಕ್ಕ ಒಂದ SOP ( standard operating procedure) ಮಾಡಿದ್ಲು, ಅದನ್ನ ಫಾಲೊ ಮಾಡ್ಕೊಂಡ ಹೋಗೊದ ಇಷ್ಟ ನಮ್ಮ ಮಾಮಾನ ಕೆಲಸ.
ಅಲ್ಲಾ ಅದ ಏನ ದೊಡ್ಡ ಕೆಲಸ ಅಲ್ಲ ಬಿಡ್ರಿ, 35 ವರ್ಷದಿಂದ ಮಾಮಿ ಮಾಡಿದ್ದ married life SOP ಫಾಲೋ ಮಾಡ್ಕೊಂಡ ಎರಡ ಮಕ್ಕಳನ ಹಡದ ಸಂತೋಷದಿಂದ ಸಂಸಾರ ಮಾಡ್ಕೊಂಡ ಹೊಂಟಾನ.
ಇನ್ನ ಮದ್ವಿ ಸಂಬಂಧ ಕಾರ್ಡ್ ಹಂಚೋದರಿಂದ ಹಿಡದ ಕ್ಯಾಟರಿಂಗ್ ವ್ಯವಸ್ಥಾ ತನಕ ಎಲ್ಲಾ ಅವನ ಓಡಾಡಿ ಓಡಾಡಿ ಮಾಡ್ಲಿಕತ್ತಿದ್ದಾ.
ಇನ್ನೇನ ಮದ್ವಿಗೆ ಒಂದ ತಿಂಗಳ ಇತ್ತ, ಒಂದ ದಿವಸ ಮುಂಜ-ಮುಂಜಾನೆ ನನಗ ಫೋನ ಮಾಡಿ
“ಪ್ರಶಾಂತ…ನನ್ನ ಮಗಳ ಮದ್ವಿ ..ಎಲ್ಲಾರೂ ಬರಬೇಕ…ಸಿಂಧಕ್ಕಗೂ ಹೇಳ….ನನಗ ಮನಿ ತನಕಾ ಬಂದ ಕಾರ್ಡ್ ಕೊಡಲಿಕ್ಕೆ ಆಗಂಗಿಲ್ಲಾ..ನಂದ ಸ್ಲಿಪ್ ಡಿಸ್ಕ್ ಆಗೇದ ” ಅಂದಾ.
ನಂಗ ಒಮ್ಮಿಕ್ಕಲೇ ಗಾಬರಿ ಆತ, ಬೆಳಗ ಹರದರ ಮಗಳ ಮದ್ವಿ ಪಾಪ ಮಾಮಾಂದ ಸ್ಲಿಪ್ ಡಿಸ್ಕ ಆಗೇದ ಅಂದರ ಹೆಂಗ ಅನಸಲಿಕತ್ತ. ಎರಡ ವರ್ಷದ ಹಿಂದ ಮಗನ ಮದ್ವಿಗೆ ಮನಿ ತನಕ ಬಂದ ಕಾರ್ಡ, ರಿಟರ್ನ್ ಗಿಫ್ಟ ಕೊಟ್ಟ ನಮ್ಮವ್ವಗ ಕಾಟನ್ ಸೀರಿ ಕೊಟ್ಟ ನಮಸ್ಕಾರ ಮಾಡಿ ಎಲ್ಲಾರೂ ಎರಡೂ ದಿವಸನೂ ಬರ್ರಿ ಅಂತ ಕರದ ಹೋಗಿದ್ದಾ, ಈಗ ಮಗಳ ಮದ್ವಿಗೆ ರಿಟರ್ನ್ ಗಿಫ್ಟ, ಸೀರಿ – ಜಂಪರ್ ಪೀಸ್ ದೂರ ಉಳಿತ ಕಾರ್ಡ್ ಸಹಿತ ವಾಟ್ಸಪ್ ಒಳಗ ಕಳಸಲಿಕತ್ತಾನ.
“ಏ..ಮಾಮಾ ಹಂತಾದ ಏನ ವಜ್ಜಾ ಎತ್ತಲಿಕ್ಕೆ ಹೋಗಿದ್ದ್ಯೋ ಮಾರಾಯ ಈ ವಯಸ್ಸಿನಾಗ…..” ಅಂತ ನಾ ಕಾಳಜಿಲೇ ಅಂದೆ
“ಏ..ಏನ ಇಲ್ಲಲೇ…ಲಗ್ನ ಸಂಬಂಧ ಸ್ಕೂಟರ್ ಮ್ಯಾಲೆ ಅಡ್ಡಾಡಿ ಅಡ್ಡಾಡಿ ಒಮ್ಮಿಂದೊಮ್ಮಿಲೇ ಸ್ಲಿಪ್ ಡಿಸ್ಕ್ ಆದಂಗ ಆಗೇದ, ಡಾಕ್ಟರ್ ನೋಡಿದರ ಒಂದ ತಿಂಗಳ ಪೂರ್ತಿ ಬೆಡ್ ರೆಸ್ಟ ಮಾಡ ಅಂದಾರ, ಮದ್ವಿ ಮನಿಪಾ ಹೆಂಗ ಕೆಲಸಾ-ಬೊಗಸಿ ಬಿಡಲಿಕ್ಕೆ ಬರ್ತದ ಹೇಳ, ಮ್ಯಾಲೆ ನಿಮ್ಮ ಮಾಮಿದ ಇಯರ್ ಎಂಡ ಟೆನ್ಶನ್…ನಂಗರ ಒಂದೂ ತಿಳಿವಲ್ತ” ಅಂತ ಪಾಪ ತನ್ನ ಸಂಕಟಾ ಹೇಳ್ಕೊಂಡಾ.
ನಂಗ ಅವನ ಪರಿಸ್ಥಿತಿ ಕೇಳಿ ಭಾಳ ಕೆಟ್ಟ ಅನಸ್ತ. ಅಲ್ಲಾ, ಹಂಗ ಖಾಸ ಮಾಮಾ ಅಲ್ಲದಿದ್ದರ ಏನಾತ, ಮಾಮಾನ ಮಗಳ ಅಂತೂ ಖಾಸನ…ಪಾಪ ಏನರ ಹೆಲ್ಪ್ ಮಾಡಿದರಾತ ಅಂತ
“ಏ..ನೀ ರೆಸ್ಟ ತೊಗೊ ಮಾರಾಯ..ಎಲ್ಲರ ನಾಳೇ ಲಗ್ನದಾಗ ನೀ ಹೊರಸಮ್ಯಾಲೆ ಕುತ್ಗೊಂಡ ನಾಂದಿ ಇಟ್ಗೊಳೊ ಹಂಗ ಆಗಬಾರದ…ನಾ ಮಾಮಿ ಜೊತಿ ಮಾತಾಡಿ ಏನರ ಹೆಲ್ಪ್ ಬೇಕ ಏನ ಅಂತ ಕೇಳ್ತೇನಿ” ಅಂದೆ
“ಯಪ್ಪಾ….ಅಕಿ ಜೊತಿ ಏನ ಮಾತಾಡ್ತಿ, ನನಗ ಈಗ ದಿವಸಕ್ಕ ಹತ್ತ ಸರತೆ ಹುಲಿಗೆ ಒಂದ ಹುಣ್ಣ ಹುಟ್ಟಿದಂಗ ಮಾಡ್ತೀರಿ ಅಂತಾಳ….’ ಅಂತ ತನ್ನ ದುಃಖಾ ತೊಡ್ಕೊಂಡಾ.
ನನಗ ಅವನ ಸಂಕಟ ಅರ್ಥ ಆತ, ಇನ್ನ ಮತ್ತ ಅದನ್ನ ಅದನ್ನ ಮಾತಾಡೋದರಾಗ ಅರ್ಥ ಇಲ್ಲ ಅಂತ ’ ನೀ ರೆಸ್ಟ ತೊಗೊಪಾ….’ ಅಂತ ಫೋನ ಇಟ್ಟ ಸೀದಾ ಮಾಮಿಗೆ ಫೋನ್ ಹಚ್ಚಿದೆ.
ಅಕಿಗೆರ ಮೊದ್ಲ ಪಿತ್ತ ನೆತ್ತಿಗೇರಿತ್ತ ನಾ ಫೋನ್ ಮಾಡೋದ ತಡಾ
“ಬುದ್ಧಿ ಎಲ್ಲ ಅದ ನಿಮ್ಮ ಮಾಮಾಗ ……ದೊಡ್ಡಿಸ್ತನ ಮಾಡಿ ಹುಬ್ಬಳ್ಳಿ ಹಾಫ್ ಮ್ಯಾರಾಥಾನ್ ಓಡ್ಲಿಕ್ಕೆ ಹೋಗಿದ್ದರು… ಅಲ್ಲೇ ಟೊಂಕಾ ಹಿಡಿಸ್ಕೊಂಡ ಬಂದಾರ, ಅದನ್ನ ಸ್ಲಿಪ್ ಡಿಸ್ಕ್ ಅಂತ ಹೇಳ್ಕೋತ ಹಾಸಗಿ ಬಿಟ್ಟ ಏಳವಲ್ಲರ… ಹುಲಿಗೆ ಒಂದ ಹುಣ್ಣ ಹುಟ್ಟಿದಂಗ ಮಾಡ್ತಾರ…..ಈಗ ಎಲ್ಲಾ ಕೆಲಸಾ ನಾ ಒಬ್ಬೊಕಿನ ಮಾಡಿ ಸಾಯಲಿಕತ್ತೇನಿ…. ನಾ ಏನಂತ ಮಾಡ್ಲಿ…. ಮಗಳ ಮದ್ವಿ ಮಾಡ್ಲೊ, ನಿಮ್ಮ ಮಾಮಾನ ಬಾಣಂತನಾ ಮಾಡ್ಲೊ ಒಂದೂ ತಿಳಿವಲ್ತ …..ನಾ ನೋಡಿದರ ಬಾರಾತ್ ದಿವಸ ‘ its time to disco ‘ ಡ್ಯಾನ್ಸ್ ಪ್ರ್ಯಾಕ್ಟೀಸ್ ಗೆ ಕೋರಿಯೋಗ್ರಾಫರ್ ಬುಕ್ ಮಾಡೇನಿ ” ಅಂತ ಅಕಿ ತನ್ನ ಪುರಾಣ ಹೇಳಿದ್ಲು….ಪಾಪ ಅಕಿ ಸಂಕಟಾ ಅಕಿಗೆ.
“ಆತ ಬಿಡ್ವಾ ಮಾಮಿ ಏನರ ಹೆಲ್ಪ ಬೇಕಾರ ಹೇಳ… ನಾವ ಬಂದ ಹೆಲ್ಪ ಮಾಡ್ತೇವಿ….” ಅಂತ ಹೇಳಿ ಧೈರ್ಯಾ ತುಂಬಿ ಪೋನ್ ಇಟ್ಟೆ
ಮುಂದ ಮಾಮಾಗ ಫೋನ್ ಮಾಡಿ
“ನೋಡಪಾ…ಮಾಮಿ ಬಾರಾತ್ ಒಳಗ ’ its time to disco ‘ ಡ್ಯಾನ್ಸ್ ಗೆ ಕೋರಿಯೋಗ್ರಾಫರ್ ಹೇಳ್ಯಾಳ….ನೀ ಅಷ್ಟರಾಗ ಅಂಟಿನ ಉಂಡಿ ತಿಂದ ಟೊಂಕಾ ಗಟ್ಟಿಮಾಡ್ಕೋಂಡ ರೆಡಿ ಆಗ. ಇಲ್ಲಾ ಅಂದರ ರುಕ್ಕೋತ ದಿವಸ ನೀ ಜಮಖಾನಿ ಹಾಸ್ಗೊಂಡ ಟೊಂಕದ ಹಿಂದ ತಲಿದಿಂಬ ಇಟ್ಗೊಂಡ
“ಏ ಮೇರಿ ಜೊಹರಾ ಜಬಿ…ತುಝೆ ಮಾಲೂಮ್ ನಹಿ… ತು ಅಬ್ ತಕ್ ಹೈ ಹಸಿ..ಔರ ಮೈ ಜವಾ’ ಅಂತ ಟೊಂಕಾ ಹಿಡ್ಕೊಂಡ ಹಾಡೋ ಹಂಗ ಆಗಬಾರದ ಅಂತ ಸಮಾಧಾನ ಮಾಡಿ ” ಅನ್ನಂಗ ಮಾಮಿ ನಿನಗ ಹುಲಿಗೆ ಒಂದ ಹುಣ್ಣ ಹುಟ್ಟಿದಂಗ ಮಾಡ್ತಾರ ಅಂತ ಅಂದಾಳ ಅಂದರ ಫಾರ್ ಎ ಚೇಂಜ್ ನಿಂಗ ಅಕಿ ಹುಲಿ ಅಂತ ಅಂದಂಗ ಆತ…ಕಂಗ್ರಾಟ್ಸ…ಹೆಂಡ್ತಿ ನಿನಗ ಹುಲಿ ಅಂದಿದ್ದಕ್ಕ celebrate ಮಾಡ ಮಾಮಾ ’ ಅಂತ ಹೇಳಿ ಫೋನ್ ಇಟ್ಟೆ.
eom/-

Leave a Reply

Your email address will not be published. Required fields are marked *


The reCAPTCHA verification period has expired. Please reload the page.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ