ಹೋದ ತಿಂಗಳ್ ನಮ್ಮ ಬೀದರ ಬಹಾದ್ದೂರ ದೇಸಾಯಿ ಹುಬ್ಬಳ್ಳಿಗೆ ಬಂದಿದ್ದಾ, ಹಂಗ ಮಾತಾಡ್ತಾ-ಮಾತಾಡ್ತಾ
“ನಿನ್ನ ಕೆಂಡಸಂಪಿಗೆ ಒಳಗಿನ ಲೇಖನಾ ಓದಿ ನಮ್ಮ ಬೀದರನಾಗಿನ ಮಂದಿನೂ ನಿನ್ನ ಹುಬ್ಬಳ್ಳಿ ಭಾಷಾ ಕಲಿಲಿಕತ್ತಾರ, ನಿಂಗ ಬೀದರ ಜಿಲ್ಲಾ ಸಾಹಿತ್ಯ ಸಮ್ಮೇಳನದಾಗ ಮಾತಾಡಲಿಕ್ಕೆ ಕರಸಬೇಕು ಅಂತ ನನ್ನ ಒಬ್ಬರು ಕೇಳಿದರು”ಅಂದಾ.
ನಾ ಅಗದಿ ಖುಷ್ ಆಗಿಬಿಟ್ಟೆ. ನನ್ನಂತಾವರನ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕ ಮಾತಾಡಲಿಕ್ಕೆ ಕರಿತಾರ ಮಂದಿ ಅಂದರ ಇದು ಸಾಹಿತ್ಯದ ಅಧೋ ಗತಿನೋ, ಇಲ್ಲಾ ಈ ಬೀದರ ಮಂದಿಗೆ ತಿಳಿದಿರೋ ಸಾಹಿತ್ಯ ಇಷ್ಟನೋ ಇಲ್ಲಾ ಖರೇನ ನಾ ಅಷ್ಟ ಫೇಮಸ್ ಆಗೇನೋ ಒಂದೂ ತಿಳಿಲಿಲ್ಲಾ.
ಆದ್ರೂ ಖುಷಿಲೇ ” ಅದಕ್ಕ ನೀ ಏನ್ ಅಂದಿ ” ಅಂದೆ.
“ಇಲ್ಲಾ, ಸಾಹೇಬರ ಮದ್ಲ ಆ ಮಗಾ ಒಂದ ಸಾಹಿತ್ಯ ಸಮ್ಮೇಳನಕ್ಕ ಹೋಗಿ, ಸಾಹಿತ್ಯ ಸಮ್ಮೇಳನ ಹೇಂಗ ಇರತದ ಅಂತ ನೋಡ್ಯರ ಬರಲಿ ತಡಿರೀ ಆಮೇಲೆ ಬೇಕಾರ ಬೀದರ ಸಾಹಿತ್ಯ ಸಮ್ಮೇಳನಕ್ಕ ಕರಸಿರಿ ಅಂತ ಹೇಳಿ ಕಳಿಸಿದೆ” ಅಂದಾ.
ಪಾಪಾ ಆ ಮನಷ್ಯಾ ಅಂದರ ನನ್ನ ಸಾಹಿತ್ಯದ ಪ್ರೇಮಿ ” ನೀವ ಹೇಂಗಂತಿರಿ ಹಂಗ ಆಗಲಿ ಸಾಹೇಬರ ” ಅಂತ ಸುಮ್ಮನ ಹೋಗಿ ಬಿಟ್ಟನಂತ.
ನಾ ಇನ್ನೇನ ಮನಸ್ಸಿನಾಗ ಬೀದರಗೆ ವಿ.ಆರ್.ಎಲ್.ಬಸ್ ಟಿಕೇಟ್ ತಗಸಲಿಕತ್ತಿದ್ದೆ, ಒಮ್ಮಿಂದೊಮ್ಮೆಲೆ ನನ್ನ ಬಸ್ ಪಂಕ್ಚರ್ ಮಾಡಿದಾ.
ಏನೋ ನನ್ನ ಕಿಂತಾ ಸ್ವಲ್ಪ ಜಾಸ್ತಿ ತಿಳ್ಕೊಂಡೊಂವಾ ಅಂತ ನಾ ಇವನ್ನ ತಿಳ್ಕೊಂಡಿದ್ದ ತಪ್ಪಾತ ಅನಸ್ಲಿಕತ್ತ. ಬಹುಶಃ ಇದಕ್ಕ ಪ್ರೊಫೆಶನಲ್ ಜಲಸಿ ಅಂತಿರಬೇಕ ತೊಗೊ ಅಂತ ಸುಮ್ಮನ ನನ್ನ ಮ್ಯಾಲೆ ಮಾಡಿದ್ದ ಜೋಕಗ ನಾನ ನಕ್ಕೆ.
ಆದ್ರ ಹಂಗ ಖರೆ ವಿಚಾರ ಮಾಡಿದರ ಅಂವಾ ಹೇಳೋದು ಖರೇನ. ನನಗ ಇವತ್ತಿಗೂ ಸಾಹಿತ್ಯ ಸಮ್ಮೇಳನ ಅಂದ್ರ ಏನೂ ? ಹೆಂಗ ಇರತದ ಅಂತ ಗೊತ್ತೂ ಇಲ್ಲಾ, ಒಮ್ಮೇನೂ ಹೋಗಿನೂ ಇಲ್ಲಾ. ಅಲ್ಲಾ ಮದ್ಲ ನನಗ ಈ ಕನ್ನಡ ಸಾಹಿತ್ಯ ಅಂದರ ಫ್ರೆಂಚ್ – ಗ್ರೀಕ್ ಇದ್ದಂಗ, ಎನೋ ಇತ್ತಿಚಿಗೆ ಒಂದ ನಾಲ್ಕ ಲೇಖನಾ ಬರದೇನಿ ಅಂತ ಸಾಹಿತ್ಯದ ವಾಸನಿ ಬಿಡಲಿಕತ್ತದ. ಆತ ತೊಗೊ, ಹಂಗರ ಮುಂದಿನ ಸಲಾ ಯಾವದರ ಸಾಹಿತ್ಯ ಸಮ್ಮೇಳನಕ್ಕ ಹೋಗಿ ಬಂದರಾತು ಅಂತ ವಿಚಾರ ಮಾಡಿದೆ. ನನಗ ಆವಾಗ ಗೊತ್ತ ಇದ್ದಿದ್ದಿಲ್ಲಾ ಮುಂದಿನ ಸರತೆ ಅಂದರ ಮುಂದಿನ ಡಿಸೆಂಬರ್ ತಿಂಗಳದಾಗ ಸಾಹಿತ್ಯ ಸಮ್ಮೇಳನ ಬರತದ, ಅದೂ ಇಲ್ಲೆ ನಮ್ಮ ಉತ್ತರ ಕರ್ನಾಟಕದ ಗಂಗಾವತಿ ಒಳಗ ಅದ ಅಂತ.
ಮುಂದ ಒಂದ ಹದಿನೈದ ದಿವಸಕ್ಕ ನಮ್ಮ ಕೆಂಡ ಸಂಪಿಗೆ ಸಂಪಾದಕರು ಫೋನ್ ಮಾಡಿ
” ರ್ರೀ, ನಿಮ್ಮೂರ ಹತ್ರ ಗಂಗಾವತಿ ಒಳಗ ಈ ಸಲಾ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅದ, ಅಲ್ಲೇ ಹೋಗಿ ಒಂದ ಲೇಖನ ಬರದ ಕಳಸರಿ ” ಅಂತ ಅಗದಿ ಏನ ಇಷ್ಟ ದಿವಸ ನಾ ಲೇಖನಾ ಬರದಿದ್ದಕ್ಕ ಪಗಾರ ಕೊಟ್ಟೊರಗತೆ ಹೂಕುಂ ಮಾಡಿದರು. ಅಲ್ಲಾ ನಾ ಪ್ರಸ್ಥಾ-ಗಿಸ್ಥಾ, ಮಡಿ – ಮೈಲಗಿ ಅಂತ ಸುಟ್ಟ-ಸುಡಗಾಡ ಬರದರ ಯಾರ ಪಗಾರ ಕೊಡತಾರ ಬೀಡರಿ, ಆದ್ರೂ ಗಾಡಿ ಖರ್ಚರ ಕೊಡತೇನಿ ಹೋಗಿ ಬರ್ರಿ ಅಂತ ಅನ್ನಲಿಲ್ಲಾ ಅನಸ್ತು.
“ಸಂಪಾದಕರೇ, ಗಂಗಾವತಿ ನಮ್ಮೂರ ಹತ್ರ ಏನ ಇಲ್ಲಾ , ನಿಮಗ ಮಡಿಕೇರಿ ಮ್ಯಾಲಿಂದ ಇಲ್ಲಿವ ಎಲ್ಲಾ ಆಜು-ಬಾಜು ಕಾಣ್ತಾವ, ಗಂಗಾವತಿ ಇಲ್ಲಿಂದ ಮೂರ ತಾಸಿನ ದಾರಿ, ಅದೂ ಹಳಿ ಇಲ್ಲದ ಊರು. ನಂಗ ಬಸ್ಸನಾಗ ಹೊಂಟರ ವಾಂತಿಬ್ಯಾರೆ ಬರತದ , ಇನ್ನ ಕಾರ್ ತೊಗಂಡ ಹೋಗಬೇಕು. ದುಡ್ದು ಯಾರ ಕೊಡರು ?” ಅಂದೆ
” ನೀವು ಸುಡಗಾಡ ಹೇಂಗರ ಹೋಗರಿ, ಹಿಂತಾ ಅವಕಾಶ ಜೀವನದಾಗ ಮತ್ತ ಸಿಗಂಗಿಲ್ಲಾ, ದೂಡ್ಡ-ದೂಡ್ಡ ಸಾಹಿತಿಗಳದ್ದ ಎಲ್ಲಾ ಪರಿಚಯ ಆಗ್ತದ , ಇದ ನಿಮಗೂ ಒಂದ ಅವಕಾಶ, ನೀವು ಇವತ್ತಿಲ್ಲಾ ನಾಳೆ ಅಪ್ಪಿ- ತಪ್ಪಿ ಸಾಹಿತಿ ಆಗೋರ ಮತ್ತ ” ಅಂತ ನನಗ ಹವಾ ಹಾಕಿದರು.
ಆತ ತೋಗೊ ಹಂಗರ ಸಂಡೆ ಹೋದರಾತು ಅಂತ ಡೆಸೈಡ್ ಮಾಡಿದೆ. ಇತ್ತಲಾಗ ನಮ್ಮ ಬಹದ್ದೂರ ದೇಸಾಯಿನೂ ಬೀದರದಿಂದ ಗಂಗಾವತಿಗೆ ಬರೊಂವಾ ಇದ್ದಾ. ಆ ಮಗಾ ಕೆಲಸ ಮಾಡೋದ ‘ಹಿಂದು’ ಅನ್ನೊ ಇಂಗ್ಲೀಷ ಪೇಪರನಾಗ, ಇಂವಂದ ಏನ ಕನ್ನಡ ಸಾಹಿತ್ಯ ಸಮ್ಮೇಳನದಾಗ ಕೆಲಸ ಅನಸ್ತು. ‘ಯಾರದೋ ರೊಕ್ಕಾ- ಯಲ್ಲಮ್ಮನ ಜಾತ್ರಿ’ ಅಂತಾರಲಾ ಹಂಗ ಆ ಪೇಪರನವರು ಗಾಡಿ ಖರ್ಚ ಕೊಡತಾರಂತ ಹೊಂಟಿದ್ದನೋ ಇಲ್ಲಾ ತನಗೂ ಕನ್ನಡದ ಮ್ಯಾಲೆ ಅಭಿಮಾನ ಅದ ಅಂತ ತೊರಸಲಿಕ್ಕೆ ಹೊಂಟಿದ್ದನೋ ಆ ದೇವರಿಗೆ ಗೊತ್ತ. ಹಂಗ ಮಗಗ ಖರೆನ ಕನ್ನಡದ ಮ್ಯಾಲೆ ಅಭಿಮಾನ ಇದ್ದರ ತನ್ನ ‘ಹಿಂದು’ ಪೇಪರನಾಗ ಒಂದ ಪ್ಯಾರಾ ಕನ್ನಡ ಲೇಖನ ಬರಿ ಅನ್ರಿ ಹೌದಂತೇನಿ. ಇರಲಿ ಸಾಹಿತ್ಯ ಸಮ್ಮೇಳನಕ್ಕ ಹೋಗಬೇಕಂದರ ಕನ್ನಡಾಭಿಮಾನಿ ಇರಬೇಕಂತ ಏನ ಇಲ್ಲಾ, ಒಟ್ಟ ಅವನೂ ಬರತನಲಾ ಛಲೋ ಆತ ತೋಗೊ ನನಗೂ ಕಂಪನಿ ಸಿಕ್ಕತು ಅಂತ ನಾನೂ ಹೊರಡಲಿಕ್ಕೆ ರೆಡಿಯಾದೆ.
ಸಾಹಿತ್ಯ ಸಮ್ಮೇಳನದ ಮೂರನೇ ದಿವಸ ಅಂದರ ರವಿವಾರ ನಾ ಗಂಗಾವತಿ ಮುಟ್ಟೋದರಾಗ ೧೧ ಆಗಿತ್ತ. ಇಡಿ ಗಂಗಾವತಿ ಒಳಗ ಎಲ್ಲೆ ನೋಡಿದಲ್ಲೆ ಕನ್ನಡಮ್ಮನ ಧ್ವಜ ಹಾರಾಡಲಿಕತ್ತಿದ್ವು. ಗಂಗಾವತಿ ಉರಾಗಿನ ಅರ್ಧಾ ಮಂದಿ ತಮ್ಮ ಫೊಟೊ ಬ್ಯಾನರನಾಗ ಹಾಕಿಸಿಕೊಂಡ ಊರತುಂಬ ‘ಕನ್ನಡ ಸಾಹಿತ್ಯ ಸಮ್ಮೇಳನಕ್ಕ ಸ್ವಾಗತ’ ಅಂತ ಬರಸಿದ್ದರು. ಬಹುಶಃ ಒಬ್ಬ ಕನ್ನಡದ ಕಾಮನ್ ಮ್ಯಾನಗೂ ಬ್ಯಾನರ್ ನಾಗ ಬರಲಿಕ್ಕೆ ಅವಕಾಶ ಇದ ಒಂದ ಅಂತ ಅನಸ್ತದ. ಈಡಿ ಗಂಗಾವತಿ ಊರಾಗಿನ ಗದ್ಲಾ ನೋಡಿದ್ರ ದಿಕ್ಕ ತಪ್ಪೊಹಂಗ ಇತ್ತ. ಅದರಾಗ ಈ ಜನದ ಜಾತ್ರೆಯೋಳಗ ಟ್ರಾಫಿಕ ಕಂಟ್ರೋಲ್ ತಪ್ಪಿ, ರೋಡ್ ಜಾಮ್ ಆಗಿ ಸಾಹಿತ್ಯ ಸಮ್ಮೇಳನ ಮುಟ್ಟೋದರಾಗ ಏಳು ಹನ್ನೆರಡಾಣೆ ಆತ. ಅಲ್ಲೇ ಸಮ್ಮೇಳನಕ್ಕ ಹೋಗಿ ನೋಡಿದರ ನಮ್ಮ ಹುಬ್ಬಳ್ಯಾಗಿನ ಮೂರಸಾವಿರ ಮಠದ್ದು ಮತ್ತ ಧಾರವಾಡದ ಮುರಘಾ ಮಠದ್ದು ಜಾತ್ರಿ ಎರಡು ಕೂಡಿ ಒಮ್ಮೆ ನಡದಂಗ ಅನಸ್ತು. ಜನಾ ಜಂಗುಳಿ ತುಂಬಿ ನೂರಾರು ಎಕರೆ ಜಗದಾಗ ಗಾಡಿ ಇಡಲಿಕ್ಕ ಇಷ್ಟ ಅಲ್ಲಾ ಕಾಲ ಇಡಲಿಕ್ಕೂ ಜಗಾ ಇಲ್ಲದಂಗ ಆಗಿತ್ತ. ನಾ ಇಷ್ಟೊಕ್ಕೊಂದಾ ಸಾಹಿತ್ಯ ಪ್ರೇಮಿಗಳನ್ನ ನೋಡಿ ಗಾಬರಿ ಆದೆ. ನನಗ ದಿಕ್ಕ ತೋಚದಂಗ ಆತು. ಮತ್ತ ಅದ ದೇಸಾಯಿಗೆ ಫೊನ ಹೊಡದೆ, ಅಂವಾ ಯಾರದೋ ಒಂದ “ಮಿಡಿಯಾ ಪಾಸ್” ಉದ್ರಿ ಇಸಗೊಂಡ ಬಂದ ನನ್ನ ಎದಿಗೆ ಚುಚ್ಚಿ ಮಿಡಿಯಾ ಸೆಂಟರ್ ಗೆ ಕರಕೊಂಡ ಹೋದಾ. ಒಳಗ ಮಿಡಿಯಾ ಸೆಂಟರ್ ಪೂರ್ತಿ ಎ.ಸಿ ಶೆಡ್, ಅಲ್ಲೇ ಸಮ್ಮೇಳನದಾಗ ನೋಡಿದ್ರ ಸಾಹಿತಿಗಳು ಎಡಗೈಲೆ ಚಾಮರ ಬಿಸಗೋತ ಬಿಸಲಾಗ ಬಿಸಿ ಬಿಸಿ ಕವಿ ಗೋಷ್ಟಿ ನಡಸ್ಯಾರ ಇಲ್ಲೇ ಈ ಮಿಡಿಯಾಡವರು ಎ.ಸಿ ಒಳಗ ಲ್ಯಾಪಟಾಪ್ ಹಿಡಕೊಂಡ ಹರಟಿ ಹೊಡಲಿಕತ್ತಾರ ಅನಸ್ತು. ಅಲ್ಲಾ ಮಿಡಿಯಾದವರ ಅಲಾ ಸಾಹಿತ್ಯ ಸಮ್ಮೇಳನದ ನಿಜವಾದ ವಿಮರ್ಶಕರು, ಇವರ ಖುಷ್ ಇದ್ದರ ಸಾಹಿತ್ಯ ಸಮ್ಮೇಳನ ಸೆಕ್ಸಸ್, ಇವರ ಸಿಟ್ಟಿಗೆದ್ದ ಶೆಟಗೊಂಡರ ಮುಗದ ಹೋತ ಮರದಿವಸ ಪೇಪರನಾಗ ಸಾಹಿತ್ಯ ಸಮ್ಮೇಳನದ ಇತಿಶ್ರೀ ಮಾಡಿಬಿಡತಾರ ಅಂತ ಇವರನ್ನ ಅಗದಿ ಗಂಡ ಬೀಗರಗತೆ ನೋಡ್ಕೊಳ್ಳಿಕತ್ತಿದ್ದರು.
ಮಿಡಿಯಾ ಸೆಂಟರ್ ಒಳಗ ಭಾಳಷ್ಟ ಕುರ್ಚಿ ಖಾಲಿ ಇದ್ದವು ” ಯಾಕಪಾ ಎಲ್ಲಾ ಪತ್ರಕರ್ತರು ಸೇಶನ್ ಗೆ ಹೋಗ್ಯಾರೆನ್ ” ಅಂದೆ
“ಇಲ್ಲಾ, ಹಂಗೇನ ನಾವ ಸೇಶನ್ ಗೆ ಹೋಗಬೇಕಂತ ಏನ ಇಲ್ಲಾ, ಆಮೇಲೆ ನಮಗ ಪ್ರೆಸ್ ನೋಟ ಕೊಟ್ಟ ಕೊಡತಾರ, ನಾವ ಅದನ್ನ ಇಂಗ್ಲೀಷನಾಗ ಟ್ರಾನ್ಸಲೇಟ ಮಾಡಿ ಹಾಕೊಂಡರ ಆತು” ಅಂತ ಖುಶಿಲೇ ಹೇಳಿದಾ. ಎಷ್ಟಂದರೂ ತಿನ್ನೋದ ಇಂಗ್ಲೀಷ ಪೇಪರದ್ದಲಾ ಮತ್ತ. ಮುಂದ ನನಗ ಒಂದಿಷ್ಟ ಮಂದಿ ಪತ್ರಕರ್ತರದ್ದು, ಸಾಹಿತಿಗಳದ್ದು ಪರಿಚಯ ಮಾಡಿಸಿದಾ. ಭಾಳಷ್ಟ ಮಂದಿ ನೀವ ಏನ್ರಿ ಕೆಂಡ ಸಂಪಿಗೆ ಪ್ರಶಾಂತ ಆಡೂರ ಅಂದರ ಅಂತ ಖುಷಿಲೇ ಮಾತಾಡಿಸಿದ್ರು, ನಂಗು ಖುಷ್ ಆತ, ಅಡ್ಡಿಯಿಲ್ಲಾ ನಾಲ್ಕಮಂದಿ ನಾ ಬರದದ್ದು ಒದ್ಯಾರ ಅಂತ ಮುಂದ ಹೋದೆ ಒಂದಿಷ್ಟ ಮಂದಿ ಪತ್ರಕರ್ತರು ಮುಂದಿನ ಸಾಲನ್ಯಾಗ ಕೂತ ‘ಶೇಂಗಾ ಕಡ್ಲಿ ತಿನ್ನಲಿಕತ್ತಿದ್ದರು. ” ಯಾಕ್ರಿ, ಹೊಟ್ಟೆ ಭಾಳ ಹಸ್ತದ ಏನ “ಅಂತ ಅಂದೆ, ” ಏ ಏನ ಇಲ್ಲರೀ…ಹಂಗ ಟೈಮ್ ಪಾಸಗೆ ತಿನ್ನಲಿಕ್ಕತ್ತೆವಿ” ಅಂದರು. ಮುಂದಿನ ಸಾಲನ್ಯಾಗ ಕೂತವರೆಲ್ಲಾ ವಿಮರ್ಶಕರು, ಅವರಿಗೆ ಈ ಸಾಹಿತ್ಯ ಸಮ್ಮೇಳನ ಅಂದ್ರ ‘ಶೇಂಗಾ- ಕಡ್ಲಿ’ ಸಿಪ್ಪಿ ಸುಲದ ತಿಂದಂಗ ಇರಬೇಕು. ನಾ ಇನ್ನ ಇವರ ಜೋತಿ ಭಾಳ ಇದ್ದರ ನಂಗ ಇರೋ ಸ್ವಲ್ಪ ಸಾಹಿತ್ಯಭಿಮಾನನೂ ಹೋಗಿ ಬಿಡಬಹುದು ಅಂತ ನಾ ಅಲ್ಲಿಂದ ಕಾಲಕಿತ್ತಿದೆ. ನಮ್ಮ ದೇಸಾಯಿ ” ನಾ ಭೈರಪ್ಪನವರ ಭಾಷಣಾ ಇಂಗ್ಲೀಷನಾಗ ಬರಿಬೇಕು” ಅಂತ ಅಂವಾ ಅತ್ತಲಾಗ ಹೋದಾ. ನಾ ಇತ್ತಲಾಗ ಎಕ್ಸಿಬಿಶನ್ ಮಳಿಗೆ ನೋಡಲಿಕ್ಕೆ ಹೋದೆ.
ನನಗ ಮಳಿಗೆ ಎಲ್ಲಿಂದ ನೋಡಲಿಕ್ಕ ಶುರು ಮಾಡಬೇಕು ಅನ್ನೋದ ತಿಳಿಲಿಲ್ಲಾ, ಅಷ್ಟ ಅಂಗಡಿ ಇದ್ದವು. ಎಲ್ಲಿ ನೋಡಿದಲ್ಲೆ ಜನಾನ ಜನಾ, ಅಂಗಡಿನ ಅಂಗಡಿ. ಇಲ್ಲಿ ಗದ್ಲಾ ನೋಡಿದ್ರ ನಮ್ಮ ಸಾಹಿತ್ಯ ಬಡವ ಅದ ಅಂತ ಅನ್ನಲಿಕ್ಕೆ ಸಾಧ್ಯ ಇಲ್ಲಾ ಅನಸ್ತು. ಹಿಂಗ ಮುಂದಕ ಒಂದ್ಯಾರಡ ಅಂಗಡಿ ಅಡ್ಯಾಡೋದರಾಗ ಗೊತ್ತಾಗಲಿಕತ್ತ ಎದಕ್ಕ ಇಷ್ಟ ಗದ್ದಲ ಅದ ಸಾಹಿತ್ಯ ಸಮ್ಮೇಳನದಾಗ ಅಂತ. ಇಲ್ಲೇ ಸಾಹಿತ್ಯ ಕಡಿಮೆ ಬ್ಯಾರೆ ಸಾಮಾನ ಜಾಸ್ತಿ ಮಾರಲಿಕತ್ತಿದ್ದರು. ಅಂಗಿ ,ಚಡ್ಡಿ , ಕುರ್ತಾ , ಪೈಜಾಮ್ ಎಲ್ಲಾ ಇದ್ದವು. ಸಾಹಿತಿಗಳ ಎನ ಏಲ್ಲಾ ಮಾರಕೊಂಡ ಬರೆಬತ್ತಲೆ ಬಂದಿರರ್ತಾರ ಸಮ್ಮೇಳನಕ್ಕ ಅಂತ ತಿಳ್ಕೊಂಡ ಮಾರಲಿಕ್ಕ ತಂದಿರೋ ಇಲ್ಲಾ ಸಾಹಿತಿಗಳು ರಾಜಕಾರಣಿಗಳಗತೆ ಸಮ್ಮೇಳನದಾಗ ಹೊಡದಾಡಿ ಅರಬಿ ಹರಕೋತಾರ ಅಂತ ಮಾರಲಿಕ್ಕ ತಂದಿರೋ ಏನೋ. ಹಂಗ ಮುಂದ ಹೋದೆ, ಒಂದಿಷ್ಟ ಅಂಗಡಿ ಮುಂದ ಬರೇ ಹೆಣ್ಣ ಮಕ್ಕಳ ತುಂಬಿ ತುಳಕ್ಯಾಡ್ಲಿಕತ್ತಿದ್ದರು. ಏನಪಾ ಇದ ಒಮ್ಮಿಂದೊಮ್ಮಿಲೇ ಈ ಹೆಣ್ಣಮಕ್ಕಳಿಗೆ ಇಷ್ಟೊಂದ ಸಾಹಿತ್ಯ ಪ್ರೇಮ ಬಂತು ಅಂತ ನಾನೂ ಆಜೂ-ಬಾಜೂ ಹೆಣ್ಣ ಮಕ್ಕಳಿಗೆ ಬಡಿಸಿಗೋತ ಆ ಅಂಗಡಿ ಒಳಗ ಕಣ್ಣ ಹಾಕಿದೆ ಅದು ನೋಡಿದ್ರ ಬಳಿ, ಹಣಗಿ, ಹೇರಪಿನ್, ರಿಬ್ಬನ್, ಸರಾ ಮಾರೋ ಅಂಗಡಿ. ಹೋ..ಹೋ.. ಅದಕ್ಕ ಹೆಣ್ಣ ಮಕ್ಕಳ ಈ ಅಂಗಡಿಗೆ ‘ಸಕ್ಕರಿಗೆ ನೋಣ’ ಮುಕರಿದಂಗ ಮುಕರ್ಯಾರ ಅಂತ ಅಂದ್ಕೊಂಡ ಮುಂದ ಹೋದೆ. ಈ ಹೆಣ್ಣಮಕ್ಕಳ ಸಂಧ್ಯಾಗಿಂದ ಹೊರಗ ಬರೋದರಾಗ ಸಾಕ-ಸಾಕಾಗಿತ್ತ ಬಿಸಲಬ್ಯಾರೆ ಜಾಸ್ತಿ ಗಂಗಾವತಿ ಒಳಗ, ಎಲ್ಲೇರ ನೀರ ಬಿಡತಾರ ಏನ ಸಾಹಿತ್ಯ ಸಮ್ಮೇಳನದಾಗ ಅಂತ ವಿಚಾರ ಮಾಡೋದ್ರಾಗ ಎದರಿಗೆ ಕಬ್ಬಿನ ಹಾಲ , ಐಸ್ ಕ್ರೀಮ್ , ಕಲ್ಲಂಗಡಿ ಹಣ್ಣ , ಜ್ಯೂಸ್ , ಹಾಲು ಎಲ್ಲಾ ಮಾರೋ ಅಂಗಡಿ ಕಂಡವು. ಅರೇ ಸಾಹಿತಿಗಳ ‘ಬಾಯರಕಿ’ಬಗ್ಗೆ ಭಾಳ ತಿಳ್ಕೋಂಡಾರಲಾ ಅಂತ ಖುಶಿ ಆತ. ಹಂಗ ಮತ್ತ ಬ್ಯಾರೇ ಏನರ ಬಾಯಾರಕಿ ನೀಗಸಲಿಕ್ಕೆ ಇಟ್ಟಾರಿನ ಅಂತ ನೋಡಿದೆ, ಇದ್ದಿದ್ದಿಲಾ. ಬಹುಶಃ ರಾತ್ರಿ ಸಿಗಬಹುದ ತೊಗೋ ಅಂತ ಒಂದ ಗ್ಲಾಸ್ ಕಬ್ಬಿನ ಹಾಲ ಕುಡದೆ.
ಅಷ್ಟರಾಗ ಹಿಂದಿನಿಂದ ‘ಎಳನೀರ , ಎಳನೀರ ‘ಅಂತ ಒದರಿದ್ದ ಕೇಳಿಸ್ತ. ತಿರಗಿ ನೋಡಿದ್ರ ಇದ ಕೃತಕ ಎಳನೀರ ಅಂತ ಒಂದ ಅಂಗಡಿ ಇತ್ತ.
“ಹಂಗ ಅಂದ್ರ ಎನೋ ” ಅಂದೆ.
” ಸರ್ ಇಲ್ಲೇ ಇಷ್ಟ ಮಂದಿ ಇದ್ದಾರಲ್ಲಾ ಅವರೇನ ಒರಿಜನಲ್ ಸಾಹಿತಿಗಳಾ? ಅಲ್ಲಾ. ಎಷ್ಟ ಮಂದಿ ನಿಮ್ಮಂತಾ ಕೃತಕ ಸಾಹಿತಿಗಳು, ಕೃತಕ ಸಾಹಿತ್ಯ ಎಲ್ಲಾ ಅದ ಇಲ್ಲೋ ಇಲ್ಲೆ ? ಹಂಗ ಇದು ಕೃತಕ ಎಳನೀರು” ಅಂದಾ
“ಭಾಳ ತಿಳ್ಕೋಂಡಿ ಬಿಡ ತಮ್ಮಾ ಸಾಹಿತ್ಯ ಸಮ್ಮೇಳನದ್ದ ಬಗ್ಗೆ, ಇದ ಎಷ್ಟನೇ ಸಾಹಿತ್ಯ ಸಮ್ಮೇಳನಾ ನಿಂದು? ” ಅಂತ ಕೇಳಿದೆ.
“ಎಂಟನೇದರಿ ” ಅಂದಾ.
ಹೋಗಲಿಬಿಡ ಅವನ ಜೊತಿ ಏನ ಮಾತಾಡೋದ ನನ್ನಕಿಂತಾ ಜಾಸ್ತಿ ಸಾಹಿತ್ಯ ಸಮ್ಮೇಳನ ನೋಡಿದಾಂವ ಮತ್ತ ಅದರ ಬಗ್ಗೆ ತಿಳ್ಕೊಂಡಾಂವ ಅಂತ ಸುಮ್ಮನ ಮುಂದ ಹೋದೆ. ಮುಂದಿನ ಲೈನ್ ಒಳಗ ನೋಡಿದ್ರ ಎಲ್ಲಾ ಪಬ್ಲಿಶರ್ಸ್ ಅಂಗಡಿನ ತುಂಬಿದ್ವು ತಾವ ಪಬ್ಲಿಶ್ ಮಾಡಿ ಸೇಲ್ ಆಗಲಾರದ ಪುಸ್ತಕ ಎಲ್ಲಾ ಅವರ ಡಿಸ್ಕೌಂಟನಾಗ ಮಾರಲಿಕತ್ತಿದ್ದರ. ಎಲ್ಲಾ ‘ಹಾಫ್ ರೇಟ, ಚೀಪ ರೇಟ ‘ ಪುಸ್ತಕ ಮತ್ತ ಸಾಹಿತ್ಯ. ನೀವ ನಂಬಂಗಿಲ್ಲಾ ೧ ರೂಪಾಯಿಕ್ಕ ಒಂದ ಪುಸ್ತಕದಿಂದ ಹಿಡದ ಏಲ್ಲಾ ಪುಸ್ತಕ ಇದ್ದವು .ಆದ್ರ ಪುಸ್ತಕ ನೋಡಿ ತಿರುವಿ ಹಾಕಿ ಹೋಗವರ ಜಾಸ್ತಿ ಇದ್ದರು. ನನಗ ಅನಸ್ತು ನಮ್ಮ ರಾಜ್ಯದಾಗ ಒದುವರಕ್ಕಿಂತ ಬರೆಯೋರ ಜಾಸ್ತಿ, ಬರೆಯೋರಕಿಂತಾ ಪಬ್ಲಿಶರ್ಸ ಜಾಸ್ತಿ ಇದ್ದಾರೆನೋ ಅಂತ. ಅದರಾಗ ಈಗ ಹೊಸ್ತಾಗಿ ನಾ ಒಬ್ಬಂವಾ ಬ್ಯಾರೆ ಬರೆಯೊಂವಾ ಹುಟ್ಟೇನಿ. ಇನ್ನ ಇಲ್ಲೇ ಭಾಳೋತ್ತನಕ ನಾ ನಿಲ್ಲಬೇಕು, ನಾನು ಬರೆತಿನಿ ಅಂತ ಗೊತ್ತಾಗಿ ಎಲ್ಲರ ನಂದು ಪುಸ್ತಕ ಮಾಡತೇನಿ ಅಂತ ಬೆನ್ನ ಹತ್ತಿಗಿತ್ಯಾರ ಅಂತ ಅಲ್ಲಿಂದ ಜಾಗಾ ಖಾಲಿ ಮಾಡಿದೆ. ಹಿಂಗ ಮುಂದ ಎರಡ ಹೆಜ್ಜಿ ಹೋಗಿ ಎಡಕ್ಕ ಹೊಳ್ಳಿ ಬಲಗಡೆ ನೋಡಿದೆ. ಒಂದ ಅಂಗಡಿ ಮುಂದ ದೂಡ್ಡ-ದೂಡ್ಡ ಸಾಹಿತಿಗಳ ಪೊಟೋ ಇಟ್ಟ ಅದರ ಮುಂದ ಕಿಡ್ನಿ, ಹಾರ್ಟ, ಮೆದುಳು ಮತ್ತೊಂದಿಷ್ಟ ಅಂಗಾಂಗ ಎಲ್ಲಾ ಇಟ್ಟಿದ್ದರು, ಇವರೇನಪಾ ಸಾಹಿತಿಗಳ ಅಂಗಾಂಗಳಿಗೆ ಕೈ ಹಚ್ಯಾರಲಾ ಅಂತ ಒಳಗ ಹೋಗಿ ನೋಡಿದೆ. ಅವಾ ಎಲ್ಲಾ ಸೋಪಲೆ ಮಾಡಿದ್ದ ಮೂರ್ತಿ ಮತ್ತ ಅಂಗಾಗಳೂ. ಅಕಸ್ಮಾತ ಜೋರ ಮಳಿ ಬಂದರ ಆ ಸಾಹಿತಿಗಳೂ, ಅವರ ಅಂಗಾಂಗಳೂ , ಅವರ ಸಾಹಿತ್ಯ ಎಲ್ಲಾ ತೊಯ್ಕೊಂಡ ‘ಬುರಗ’ ಆಗಿ ಹೋಗತಾವ ಅಷ್ಟ.
“ಅಲ್ರೀ ಈ ಮೆದಳು, ಈ ಸಾಹಿತಿಗಳದ್ದಾ ” ಅಂತ ಕೇಳಿದೆ
“ಏ ಇಲ್ಲರಿ, ಮೆದಳಿಗೂ , ಸಾಹಿತಿಗಳಿಗೂ ಸಂಬಂಧ ಇಲ್ಲಾ, ಇವೆಲ್ಲಾ ಮಕ್ಕಳ ವಿಜ್ಞಾನದ ಮಾಡೆಲ್ ಗಳು ” ಅಂತ ಅಂದ್ರು.
ನನಗ ಒಂದ ಸರತೇ ಮೆದುಳಿಗೂ ಸಾಹಿತಿಗಳಿಗೂ ಸಂಬಂಧ ಇಲ್ಲಾ ಅಂದಾಗ ಭಾಳ ಸಿಟ್ಟ ಬಂತು, ಆದ್ರ ನಾ ಇನ್ನೂ ಆ ಸಂಬಂಧ ಕಳಕೊಳೋ ಅಷ್ಟ ದೊಡ್ಡ ಸಾಹಿತಿ ಅಲ್ಲಾ ತೊಗೊ ಅಂತ ಸುಮ್ಮನ ಹೊರಗ ಬಂದೆ. ಮುಂದ ನೋಡತೇನಿ ಮೂರ-ನಾಲ್ಕ ಕರದಂಟ ಅಂಗಡಿ. ಅಲ್ಲಾ ಈ ಕನ್ನಡಕ್ಕೂ ಕರದಂಟಿಗೂ ಎಲ್ಲಿ ನಂಟು ಅನಸ್ತು. ಹಂಗ ನೋಡಿದ್ರ ಭಾಳ ಮಂದಿಗೆ ಕನ್ನಡಾ ಇವತ್ತ ಕರದಂಟ ಆಗೇದ ಅಂದ್ರು ಅಡ್ಡಿ ಇಲ್ಲಾ. ಯಾರಿಗೆ ಸೇರತದ ಅವರ ಕಡದ ತಿಂದ ತಿಂತಾರ, ಕೆಲವಬ್ಬರೂ ತಿಂದರ ಬಾಯಾಗ ಜಿಗಟ ಆಗತದ ಅಂತ ತಿನ್ನಂಗ ಇಲ್ಲಾ, ಇನ್ನ ಕೆಲವಬ್ಬರೂ ಕರದಂಟ ಬಾಯಾಗ ಇಟಗೊಂಡ ಬರೇ ಚೀಪತಾರ. ಆದ್ರ ಈ ಕನ್ನಡದ ಕರದಂಟಿನ ಕಂಪು ತಿಂದೊರಿಗೆ ಗೊತ್ತರಿ, ಸುಮ್ಮನ ಈ ಇಂಗ್ಲಿಷ್ ‘ಲಾಲಿಪಾಪ್ ‘ ಚೀಪೋ ಮಂದಿ ಮಾತ ಕೇಳಿ ಕನ್ನಡದ ಕರದಂಟ ನಾವ ಎಂದೂ ಮರಿಬಾರದು ಅಂತ ಮುಂದ ಹೋದೆ.
ಅಷ್ಟರಾಗ ಮದ್ಯಾಹ್ನ ಮೂರ ಹೊಡದಿತ್ತ. ಈಡಿ ಗಂಗಾವತಿ ಮಂದಿ ಊಟಕ್ಕ ಸಾಹಿತ್ಯ ಸಮ್ಮೇಳನಕ್ಕ ಬಂದಿದ್ದರು. ಅದರಾಗ ಒಬ್ಬರು ” ಇದ ಮೊರನೇ ದಿವಸ ನೋಡ್ರಿ. ನಾವು ಮನ್ಯಾಗ ಕುಕ್ಕರ ಸೀಟಿ ಹೊಡಸಲಾರದ್ದು” ಅಂದ್ರು. ಭಾಳ ಶಾಣ್ಯಾರಿದ್ದಿರಿ, ಹೊಟ್ಟಿ ತುಂಬ ಉಣ್ಣರಿ ಅಂತ ನಾ ಅಲ್ಲಿ ಗದ್ಲಾ ನೋಡಿ ಹೊಟೇಲ್ ಗೆ ಹೋದೆ, ಊಟಾ ಮಾಡಿದ ಮ್ಯಾಲೆ ನನಗ ಸಾಕ ಈ ಸಾಹಿತ್ಯ ಸಮ್ಮೇಳನ ಸಡಗರ, ಮತ್ತ ಮುಂದಿನ ವರ್ಷ ಬಂದರಾತ ತೋಗೊ ಅಂತ ಸೀದಾ ಗಾಡಿ ತೊಗೊಂಡ ಹುಬ್ಬಳ್ಳಿ ಹಾದಿ ಹಿಡದೆ.