ನಾ ನನ್ನ ಜೀವನದಾಗ ಪೂರ್ತಿ ಓದಿದ್ದ ಮೊದ್ಲನೇ ಇಂಗ್ಲೀಷ್ ಫಿಕ್ಶನ್ ಅಂದರ ಜಾಕಿ ಕಾಲಿನ್ಸಂದ ’ಹಾಲಿವುಡ್ ಹಸಬಂಡ್ಸ್’. ನಂಗ ಈ ಬುಕ್ ಸಿಕ್ಕದ್ದ ನಮ್ಮ ಚಿಮ್ಮಲಗಿ ಮಾಮನ ಮನ್ಯಾಗ, ಅವರ ಮಗಳ ಚೈತ್ರಿ ನಾನು ಕ್ಲಾಸಮೇಟ್ ಹಿಂಗಾಗಿ ನಾ ಯಾಕ ರಿಸ್ಕ ತೊಗೊಬೇಕು ಅಂತ ಅವರಪ್ಪಗ ಮಾಮಾ ಮಾಮಾ ಅಂತ ಹಚಗೊಂಡಿದ್ದೆ. ಹಾಲಿವುಡ್ ಹಸಬಂಡ್ಸ್ ನಂಥಾ ಬುಕ್ ಅವರ ಮನ್ಯಾಗ ಹೆಂಗ ಬಂತೊ ಆ ಜಾಕಿ ಕಾಲಿನ್ಸಗೆ ಗೊತ್ತ. ಯಾಕಂದರ ಅವರ ಮನ್ಯಾಗ ಬರೇ ಮಡಿ-ಮೈಲಗಿ, ಆರತಿ-ಪಾರಾಯಣದ ಬುಕ್ಕ ಇರತಿದ್ವು.
ಹಂಗ ನಮಗೇಲ್ಲಾ ಆವಾಗ ಜಸ್ಟ ಇಂಗ್ಲೀಷ್ ಬುಕ್ ಓದೊ ಚಟಾ ಶುರು ಆಗಿತ್ತ. ಚಟಾ ಅನ್ನೋದಕಿಂತಾ ಶೊ ಆಫ್ ಅನ್ನರಿ. ನಮಗ ತಿಳಿಲಿ ಬಿಡಲಿ ಕಾಲೇಜಿಗೆ ಹೊಂಟೇವಿ ಅಂದರ ಮಂದಿಗೆ ತೊರಸಲಿಕ್ಕೆರ ಇಂಗ್ಲೀಷ್ ಬುಕ್ ಹಿಡಕೊಂಡ ಅಡ್ಯಾಡೋದು, ಓದಿದಂಗ ಮಾಡೋದು ಕಂಪಲ್ಸರಿ ಇತ್ತ.
ನಂಗ ಆ ಬುಕ್ ಎಷ್ಟ ಹಿಡಸ್ತ ಅಂದರ ಮುಂದ ನಾ ಜಾಕಿ ಕಾಲಿನ್ಸ್ ಬರದಿದ್ದ ’ಹಾಲಿವುಡ್ ವೈವ್ಸ್’,’ಹಾಲಿವುಡ್ ಕಿಡ್ಸ್’,’ ದ ವರ್ಲ್ಡ ಇಜ್ ಫುಲ್ ಆಫ್ ಮ್ಯಾರಿಡ್ ಮೆನ್’,’ದ ವರ್ಲ್ಡ್ ಇಜ್ ಫುಲ್ ಆಫ್ ಡೈವರ್ಸ್ಡ್ ವುಮೆನ್’ ಎಲ್ಲಾ ತರಿಸಿ ತರಿಸಿ ಓದಿದೆ. ನಾ ಕಾಲೇಜ ಬುಕ್ ಬಿಟ್ಟ್ ಹಾಲಿವುಡ್ ಬುಕ್ಸ ಓದಲಿಕ್ಕೆ ಶುರು ಮಾಡಿ ಬಿಟ್ಟಿದ್ದೆ, ಅಲ್ಲಾ ಬುಕ್ ಟೈಟಲ್ ನೋಡಿದರ ಗೊತ್ತಾಗಿರಬೇಕ ಅವ ಹೆಂತಾ ಬುಕ್ ಅಂತ. ಅದ ಹಿಂಗ ಆಗಿತ್ತಲಾ ನಂಗ ಹುಬ್ಬಳ್ಳ್ಯಾಗಿನ ಜನತಾ ಬಜಾರ ಮತ್ತ ಉಳ್ಳಾಗಡ್ಡಿ ಓಣಿ ನಡಕ ಎಷ್ಟ ಸಂಧಿ ಬರ್ತಾವ ಅಂತ ಗೊತ್ತ ಇಲ್ಲದಿದ್ದರು ಲಾಸ್ ಎಂಜಲೀಸ್, ವೇಗಾಸ್, ಬೇವರಲಿ ಹಿಲ್ಸ್ ಒಳಗ ಯಾವ್ಯಾವ ಸಂಧಿ ಎಲ್ಲೆ ಅವ, ಯಾ ಹಾಲಿವುಡ ಸ್ಟಾರ್ ಎಲ್ಲೇ ಇರ್ತಾನ, ಅವರ ಸ್ಪಾ ಕ್ಕ ಎಲ್ಲೇ ಹೋಗ್ತಾರ, ವಿಕೇಂಡ ಪಾರ್ಟಿ ಎಲ್ಲೆ ಮಾಡ್ತಾರ, ಯಾರ ಗಂಡಂದ ಯಾರ ಹೆಂಡತಿ ಜೊತಿ ಲಫಡಾ ಅದ ಎಲ್ಲಾ ತಿಳಕೊಂಡ ಬಿಟ್ಟಿದ್ದೆ. ನಾ ಒಂದನೇ ಇಂಗ್ಲೀಷ ಪುಸ್ತಕ ಹಾಲಿವುಡ್ ಹಸಬಂಡ್ಸ್ ಓದಿದೆ ಅಂತ ಮುಂದ ಜೀವನದಾಗ ಇಂಗ್ಲೀಷ ಪುಸ್ತಕ ಓದೊ ಚಟಾ ಕಂಟಿನ್ಯು ಆತ. ಅದರ ಬದ್ಲಿ ಬ್ಯಾರೆ ಯಾವದರ ಬುಕ್ ಓದಿದ್ದರ ಮುಂದ ಇಂಗ್ಲೀಷ ಬುಕ್ಕ ಓದತಿದ್ದಿಲ್ಲಾ ಅಂತ ಅನಸ್ತದ. ಜಾಕಿ ಕಾಲಿನ್ಸ್ ಬುಕ್ಕಿನ್ವು ನನ್ನ ಮ್ಯಾಲೆ ಭಾಳ ವರ್ಷದ ತನಕಾ ಇಫೆಕ್ಟ ಇತ್ತ. ಮುಂದ ನಾ ಹಾಲಿವುಡ್ ಗುಂಗಿನಿಂದ ಹೊರಗ ಬಂದಿದ್ದ ಓಶೊನ ಸ್ಪಿರಿಚುವಲ್ ಬುಕ್ಸ್ ಓದಿದ ಮ್ಯಾಲೆ.
ನಾ ಆ ಹಾಲಿವುಡ್ ಹಸಬಂಡ್ಸ್ ಇಂಗ್ಲೀಷ್ ಬುಕ್ ಓದಿದ್ದ ನೋಡಿ ಚೈತ್ರಿನೂ ದೊಡ್ಡಿಸ್ತನ ಬಡಿಲಿಕ್ಕೆ ಓದಲಿಕ್ಕೆ ಶುರು ಮಾಡಿದ್ಲು. ಮುಂದ ಅಕಿ ಖಾಸ ಗೆಳತ್ಯಾರ ಮೈತ್ರಿ ಮತ್ತ ಪಮ್ಮಿನೂ ಓದಿದರು. ಅವರ ಮೂರು ಮಂದಿ ಹಾಲಿವುಡ್ ಹಸಬಂಡ್ಸ್ ಓದಿ ಹುಚ್ಚ ಹಿಡಿಸಿಗೊಂಡ ಬಿಟ್ಟರು. ಆ ಹಾಲಿವುಡ್ ಹಸಬಂಡ್ಸದ celebrity status, ಅವರ way of life, ಅವರ romance ಒಳಗಿನ richness ಎಲ್ಲಾ ನೋಡಿ ಮಾಡ್ಕೊಂಡರ ಹಂತಾ ಗಂಡನ್ನ ಮಾಡ್ಕೋಬೇಕ ಅಂತ ಡಿಸೈಡ ಮಾಡಿ ಗುರವಾರಕ್ಕೊಮ್ಮೆ ರಾಯರ ಮಠದಾಗ ಎರಡ ಪ್ರದಕ್ಷಿಣಿ ಜಾಸ್ತಿ ಹಾಕಲಿಕತ್ತರು.
ನಾವೇಲ್ಲಾ ಒಂದs ವಾರಗಿ, ಮ್ಯಾಲೆ ಒಂದ ಏರಿಯಾದವರು. ಅದರಾಗ ಚೈತ್ರಿ- ಮತ್ರಿ ಇಬ್ಬರು ನನ್ನ ಕ್ಲಾಸಮೇಟ. ಪಮ್ಮಿ diploma in fashion designing ಮಾಡತಿದ್ದಳು. ಅವರ ಮೂರು ಮಂದಿ ಅಂತು ಎಷ್ಟ ಗಳಸ್ಯ-ಕಂಠಸ್ಯ ಅಂದರ ಮಂದಿ ’ಅವು ಮೂರು ಕೂಡೆ ಎಲ್ಲರ ಒಬ್ಬವಂಗ ಕಟಗೊಂಡ ಗಿಟಕೊಂಡಾರ ಹುಷಾರ ಇರ್ರಿ’ ಅಂತಿದ್ರು. ಅದರಾಗ ಆ ಮೂರು ಮಂದಿಗೆ ಕಾಮನ್ ಫ್ರೆಂಡ್ ಅಂದರ ಆವಾಗ ನಾ ಒಬ್ಬನ ಇದ್ದೆ ಆ ಮಾತ ಬ್ಯಾರೆ.
ನಾವೇಲ್ಲಾ ಡಿಗ್ರಿ ಮುಗಸೋದಕ್ಕು ಈ ಹುಡಗ್ಯಾರ ಅವ್ವಾ ಅಪ್ಪಾ ಸಿರಿಯಸ್ ಆಗಿ ಅವರಿಗೆ ವರಾ ನೋಡಲಿಕ್ಕೆ ತಯಾರಿ ನಡಸಿದರು. ಮಠದಾಗ ಕಂಡ-ಕಂಡೊರಿಗೆ ಕುಂಡ್ಲಿ ಝೆರಾಕ್ಸ್ ಮಾಡಿಸಿ ಕೊಡಲಿಕ್ಕೆ ಶುರು ಮಾಡಿದ್ದರು.
ನಮ್ಮಪ್ಪನ ಕಡೇನು ಬಂದ ಕುಂಡಲಿ ಕೊಟ್ಟ ಹೋದರು. ನನ್ನ ಸಂಬಂಧ ಅಲ್ಲ ಮತ್ತ
“ನಮ್ಮ ಮಗಳಿಗೆ ಎಲ್ಲರ ಛಲೋ ವರಾ ಇದ್ದರ ಹೇಳ್ರಿ ದಿಕ್ಷೀತರ” ಅಂತ ಕೊಟ್ಟಿದ್ದರು.
ಅಲ್ಲಾ ಆ ಹುಡಗ್ಯಾರ ನನ್ನ ವಾರ್ಗಿ ಅಂದರ ನನ್ನ ಸಂಬಂಧ ಹೆಂಗ ಕುಂಡ್ಲಿ ಕೊಡ್ತಾರ. ಅದರಾಗ ಆವಾಗಿನ್ನು ನಂದ ಹರ ಇಲ್ಲಾ ಶಿವಾ ಇಲ್ಲಾ, ದಣೆಯಿನ ಡಿಗ್ರಿ ಮುಗಿಸಿ ಒಂದ ಫಿನೈಲ ಫ್ಯಾಕ್ಟರಿ ಒಳಗ chemist ಅಂತ ಕೆಲಸಕ್ಕ ಹೊಂಟಿದ್ದೆ. ಮ್ಯಾಲೆ ಇನ್ನೊಂದ ದು:ಖದ ವಿಷಯ ಅಂದರ ಚೈತ್ರಿ-ಮೈತ್ರಿ ಇಬ್ಬರದು ಗೋತ್ರ ಕಾಶ್ಯಪನ ಅಂತ ಅವರ ಕುಂಡಲಿ ನೋಡಿದ ಮ್ಯಾಲೆ ನಂಗ ಗೊತ್ತಾತ. ನಂದು ಕಾಶ್ಯಪ ಗೋತ್ರನ. ಹಕ್ಕ್, ಸುಳ್ಳ ಇಷ್ಟ ವರ್ಷ ಚೈತ್ರಿ ಅಪ್ಪಗ ಮಾಮಾ ಮಾಮಾ ಅಂತ ಹಚಗೊಂಡರ ಅಂವಾ ಕಾಕಾ ಆದನಲಪಾ ಅಂತ ಖರೇನ ಕೆಟ್ಟ ಅನಸ್ತ. ಅಲ್ಲಾ ಲೈನ ಹೊಡಿ ಬೇಕಾರ ನಾವೇಲ್ಲಾ ಗೋತ್ರ-ಪಿತ್ರಾ ಎಲ್ಲೇ ನೋಡ್ತೇವಿ. ಇನ್ನ ಮುಂದsರ ಗೊತ್ರಾ ನಕ್ಷತ್ರಾ ನೋಡಿ ಲೈನ ಹೋಡಿಬೇಕ ಅಂತ ಅನ್ಕೊಂಡ ಸುಮ್ಮನಾದೆ.
ಅದರಾಗ ಆ ಮೂರು ಹುಡಗ್ಯಾರ ತಮ್ಮ ಗಂಡಂದರ ಬಗ್ಗೆ ಭಾಳ ದೊಡ್ಡ ದೊಡ್ಡ ಕನಸ ಕಾಣತಿದ್ದರು. ಅಗದಿ ಹಾಲಿವುಡ್ ಹಸಬಂಡ್ಸ ಲೇವೆಲ್ ಗಂಡನ ಬೇಕ ಅನ್ನೋರು. ಚೈತ್ರಿಗೆ ಡಾಕ್ಟರ ಇಲ್ಲಾ ಸಿವಿಲ್ ಇಂಜೀನಿಯರ್ ಇದ್ದರ ಇಷ್ಟ ಮಾಡ್ಕೋತೇನಿ ಅನ್ನೋಕಿ. ಮೈತ್ರಿಗೆ ಬ್ಯಾಂಕಿನಾಗ ನೌಕರಿ ಇರೋ ಗಂಡsನ ಬೇಕಿತ್ತ, ಅದು ಕ್ಯಾಶಿಯರ್ ಮತ್ತ. ಅಕಿ ತಲ್ಯಾಗ ಬ್ಯಾಂಕಿನಾಗ ಕ್ಯಾಶಿಯರಗೆ ಇಷ್ಟ ಜಾಸ್ತಿ ಪಗಾರ ಅಂತ ಇತ್ತ ಕಾಣತದ. ಪಮ್ಮಿ ತಲ್ಯಾಗ ಫ್ಯಾಷನ್ ಡಿಸೈನರನ ಮಾಡ್ಕೋಬೇಕ ಅಂತ ಇತ್ತ. ಒಟ್ಟ ಇವರ ಮೂರು ಮಂದಿಗೂ ಬೆಂಗಳೂರ ಇಲ್ಲಾ ಬಾಂಬೆದಾಗ ಇರೋ ವರಾನ ಬೇಕಿತ್ತ. ಪುಣ್ಯಾ, ಆವಾಗಿನ್ನು ಈ ಸಾಫ್ಟವೇರ ಇಂಜೀನಿಯರ್, ಫಾರೇನ್ನಾಗ ಸೆಟ್ಲ್ ಆಗೋ ಕ್ರೇಜ್ ಅಷ್ಟ ಫೇಮಸ ಆಗಿದ್ದಿಲ್ಲಾ ಹಿಂಗಾಗಿ ತಮ್ಮ knowledge ಪ್ರಕಾರ ವರಗಳ ಡಿಮಾಂಡ ಮಾಡಲಿಕತ್ತಿದ್ದರು. ನಾ ಒಮ್ಮೆ ನಂದ ಸಗೋತ್ರ ಆತು ಅಂತ ಗೊತ್ತಾದ ಮ್ಯಾಲೆ ಅವರಿಗೆ ನೀರ ಬಿಟ್ಟ ಬಿಟ್ಟಿದ್ದೆ. ಎಲ್ಲರ ಸಿಕ್ಕಾಗ ಒಮ್ಮೆ ಎಲ್ಲಿದ್ದಾರವಾ ನಿಮ್ಮ ಹಾಲಿವುಡ್ ಹಸಬಂಡ್ಸ ಅಂತ ಚಾಷ್ಟಿ ಮಾಡತಿದ್ದೆ. ಅವರ ನನ್ನ ಮಾತಿಗೆ ಮಾರಿ ಮೂಗು ತಿರವಿಕೊಂಡ
“ನಿಂಗ್ಯಾಕ ಬೇಕ ನಮ್ಮ ಗಂಡನ ಉಸಾಬರಿ, ನೀ ನಿನ್ನ ಹಾಲಿವುಡ್ ವೈಫ ಹುಡ್ಕೋ ಮೊದ್ಲ” ಅಂತ ಅಂದ ಹೋಗೊರು.
ಆದರ ಅವರ ಯಾರ ಮನಿ ಒಳಗೂ ಪರಿಸ್ಥಿತಿ ಅವರ ಅನ್ಕೊಂಡಂಗ ಇದ್ದಿದ್ದಿಲ್ಲಾ. ಎಲ್ಲಾ ಮಿಡಲ್ ಕ್ಲಾಸ ಫ್ಯಾಮಿಲಿಯಿಂದ ಬಂದ ಜನಾ. ಯಾರದು ಆಸ್ತಿ ಇಲ್ಲಾ ಏನ ಸುಡಗಾಡ ಇಲ್ಲಾ. ಪಾಪ ಅವರ ಅವ್ವಾ ಅಪ್ಪಗ ಒಟ್ಟ ಕಡಿಮಿ ವರದಕ್ಷಿಣಿ ತೊಗೊಳೊ ಇದ್ದೂರಾಗಿಂದ ಒಂದ ಛಲೋ ವರಾ ಸಿಕ್ಕರ ಸಾಕ ಅಂತ ಅವರ ಕಾಯಲಿಕತ್ತಿದ್ದರು. ಆದರ ಮನ್ಯಾಗ ಈ ಮೂರು ಮಂದಿ ಕನ್ಯಾಮಣಿಗಳು ಪ್ರತಿಯೊಂದ ಕುಂಡ್ಲಿ ಕೊಡಬೇಕಾರು ’ನಾ ಅವಂಗ ಒಲ್ಲೆ, ನಾ ಇವನ ಮಾಡ್ಕೊಳಂಗಿಲ್ಲಾ’ ಅಂತ ನಾಟಕ ಶುರು ಮಾಡೇ ಬಿಡ್ತಿದ್ದರು. ಕುಂಡ್ಲಿ ಕೂಡೋಕಿಂತ ಮುಂಚೆ ಇವರದ ರಗಳಿ ಶುರು ಆಗಿದ್ದ ನೋಡಿ ಅವರವ್ವಾ-ಅಪ್ಪಗಂತೂ ಯಾಕರ ಇವರಿಗೆ ಇಷ್ಟ ಕಲಿಸಿಸಿದ್ವಿ ಅನ್ನೊ ಹಂಗ ಆಗಿ ಬಿಟ್ಟಿತ್ತ. ಏನೋ ಒಂದ ಡಿಗ್ರಿ ಆದರ ನಾಳೆ ಅವರ ಸಂಸಾರಕ್ಕ ಅನಕೂಲ ಆಗ್ತದ ಅಂತ ಕಲಿಸಿದರ ಇವರ ಭಾಳ ದೊಡ್ಡ ದೊಡ್ಡ ಹಗಲ ಕನಸ ಕಾಣಲಿಕತ್ತರಲಾ ಅಂತ ಅವರಿಗೆ ಸಂಕಟ ಶುರು ಆಗಿತ್ತ. ಪಾಪ ಹೆಣ್ಣ ಹಡದವರ ಸಂಕಟ ಹೆಣ್ಣ ಹಡದವರಿಗೆ ಗೊತ್ತ. ಈ ಹುಡಗ್ಯಾರ ಹಿಂಗ ಲಗ್ನದ ವಿಷಯದಾಗ ಹುಡಗಾಟಕಿ ಮಾಡೋದ ಈಡಿ ಬಳಗದ ಮಂದಿಗೆ ಗೊತ್ತಾಗಿತ್ತ, ಅವರ ದಿಮಾಕ ಬಡಕೋತ ಅಡ್ಯಾಡೋದು, ಅವರ ದೊಡ್ಡ ದೊಡ್ಡ ಮಾತ ಕೇಳಿ ಮಂದಿ ಅವರ ಕುಂಡ್ಲಿ ಕೇಳೋದ ಬಿಡಲಿಕತ್ತರು. ಲಗ ಬಗ ಒಂದ ಒಂದುವರಿ ವರ್ಷ ಇದ ನಡದಿತ್ತ. ಮೂರು ಮಂದಿಗೂ ಒಂದ ವರಾನೂ ಗೊತ್ತಾಗಿದ್ದಿಲ್ಲಾ.
ಒಂದ ದಿವಸ ಮುಂಜಾನೆ ನಾ ಓಣ್ಯಾಗ ಹಾಲ ತರಲಿಕ್ಕೆ ಹೋದಾಗ ಪಮ್ಮಿಯವರ ಮನಿ ಕಟ್ಟಿ ಮ್ಯಾಲಿನ ಶಿಂಪಗ್ಯಾನ ಅಂಗಡಿ ಮುಂದ ನಾಲ್ಕೈದ ಮಂದಿ ಸೇರಿ ಗುಸು-ಗುಸು ಮಾತಡಲಿಕತ್ತಿದ್ದರು. ಅದರಾಗ ಯಾಕೊ ಎರಡ ದಿವಸದಿಂದ ಶಿಂಪ್ಯಾಗನ ಅಂಗಡಿ ಬ್ಯಾರೆ ತಗದಿದ್ದಿಲ್ಲಾ. ಹಂಗರ ಶಿಂಪಗ್ಯಾರ ಮಾಮಾ ಏನರ ಹೋದ್ನೊ ಏನೋ ಅನಸಲಿಕತ್ತ. ಅವಂಗ ಇತ್ತೀಚಿಗೆ ಆರಾಮ ಬ್ಯಾರೆ ಇರತಿದ್ದಿಲ್ಲಾ ಪಾಪ ಯಾವಾಗ ನೋಡಿದ್ರು ಟಿ.ಬಿ ಅಂತ ಕೆಮ್ಮಕೋತ ಇರತಿದ್ದಾ. ಅಷ್ಟ ಆದರು ದಿವಸಕ್ಕ ಮೂರ ಕಟ್ಟ ಮಂಗಳೂರ ಬಿಡಿ ಸೇದೊದ ಬಿಟ್ಟಿದ್ದಿಲ್ಲಾ. ತನಗೊಬ್ಬಗ ಅಂಗಡಿ ನಡಸಲಿಕ್ಕೆ ಆಗಂಗಿಲ್ಲಾಂತ ಒಂದ ವರ್ಷದಿಂದ ಮಗನ ಬ್ಯಾರೆ ಅಂಗಡ್ಯಾಗ ಕೂಡಸತಿದ್ದಾ. ಪಾಪ ಆ ಹುಡಗ ಸಾಲಿ ಅಂತು ಕಲತಿದ್ದಿಲ್ಲಾ ಹಿಂಗಾಗಿ ಅಪ್ಪನ ಜೊತಿ ಹೆಣ್ಣಮಕ್ಕಳ ಬ್ಲೌಸ್ ಕಟ್ ಮಾಡ್ಕೋತ ಅಂಗಡಿ ದೇಖರಕೀನು ಮಾಡ್ತಿದ್ದಾ.
ಹಂಗರ ಇದೇನ ಲಫಡಾ ಕೇಳೆರೆ ಕೇಳೋಣು ಅಂದರ ಪಮ್ಮಿಯವರ ಮನಿನು ಕೀಲಿ ಹಾಕಿತ್ತ. ಏ ಹಂಗರ ಶಿಂಪ್ಯಾಗರ ಮಾಮಾ ಹೋಗಿದ್ದ ಗ್ಯಾರಂಟಿ ತೊಗೊ ಅದಕ ಈ ಮಡಿ ಮೈಲಗಿ ಮಾಡೋ ಪಮ್ಮಿ ಅಪ್ಪಾ ಸುಳ್ಳ ಎಲ್ಲಾ ಏಕಾಕಾರ ಆಗ್ತದ ಅಂತ ತಮ್ಮ ಮನಿಗೆ ಕಿಲಿ ಜಡದ ಎಲ್ಲೊ ಜಿಗದಾರ ಅಂತ ನನಗ ಗ್ಯಾರಂಟಿ ಆತ. ಇನ್ನ ಯಾರನರ ಕೇಳಿ ನಾ ಎಲ್ಲೆ ಈ ಗದ್ಲದಾಗ ಸಿಕ್ಕೋಳೊದ, ಕೆಲಸಕ್ಕ ಬ್ಯಾರೆ ಹೋಗಬೇಕು ಹೆಂಗಿದ್ದರು ಹಿರೇತನ ಮಾಡಲಿಕ್ಕೆ ಮನ್ಯಾಗ ಅವ್ವಾ-ಅಪ್ಪಾ ಇದ್ದಾರ ಅಂತ ನನ್ನ ಪಾಡಿಗೆ ನಾ ಹೋದೆ.
ಮುಂದ ಸಂಜಿಮುಂದ ನಾ ಬರೋ ಹೊತ್ತಿಗೆ ನಮ್ಮನಿ ಮುಂದ ನಾಲ್ಕೈದ ಮಂದಿ ಮುತ್ತೈದರ ನಮ್ಮವ್ವನ ಜೊತಿ ಗುಸು-ಗುಸು ಮಾತಾಡಲಿಕತ್ತಿದ್ದರು. ಇದೇನ್ವಾ ಗದ್ಲಾ ಅಂತ ನಮ್ಮವ್ವಗ ಕೇಳಿದ್ರ, ಅಕಿ ಒಳಗರ ಬಾ ಆಮ್ಯಾಲೆ ಎಲ್ಲಾ ಕಥಿ ಹೇಳ್ತಿನಿ ಅಂತ ನಂಗ ಒಳಗ ಕರಕೊಂಡ ಹೋದ್ಲು. ಏನಾತ ಹೇಳ್ವಾ ಅಂತ ಕೇಳಿದರ
“ಆ ಪಾಂಡುರಂಗಿಯವರ ಮಗಳ ಪಮ್ಮಿ ಶಿಂಪಗ್ಯಾರ ಶಿವ್ಯಾನ ಜೋಡಿ ಓಡಿ ಹೋಗ್ಯಾಳಂತ, ಎರಡ ದಿವಸಾತು ಇಬ್ಬರದು ಪತ್ತೇ ಇಲ್ಲಾ” ಅಂತ ಅಗದಿ ಈ ಕಿವ್ಯಾಗ ಹೇಳಿದ್ದ ಮಾತ ಆ ಕಿವಿಗೆ ಕೆಳಸಲಾರದಂಗ ಹೇಳಿದ್ಲು.
ನಂಗ ಎದಿ ಧಸಕ್ಕ ಅಂತ. ಅಗದಿ ಏನ ನಾನ ಓಡಿಸಿಕೊಂಡ ಹೋಗಿ ಸಿಕ್ಕ ಬಿದ್ದೋರಗತೆ ಅನಸ್ತ. ಈ ಪಮ್ಮಿದ ಶಿವ್ಯಾನ ಜೋಡಿ ಲಫಡಾ ಇದ್ದದ್ದ ನನಗ ಗೊತ್ತ ಇದ್ದಿದ್ದಿಲ್ಲಾ. ಅದ ಹೋಗಲಿ ಪಮ್ಮಿ ನನಗ ಹಂತಾ ಗಂಡ ಬೇಕ ಹಿಂತಾ ಗಂಡ ಬೇಕ ಅಂತ ದೊಡ್ಡ ದೊಡ್ಡ ಮಾತಾಡೋಕಿ ಅವಂಗ ಹೆಂಗ ಒಳಗ ಬಿದ್ದಿದ್ಲೋ ಆ ನರಹರಿಗೆ ಗೊತ್ತ.
ಪಾಪ ಪಾಂಡುರಂಗಿಯವರ ನೋಡಿದರ ಇಡಿ ಓಣಿ ಬ್ರಾಹ್ಮಣರಿಗೆ ಮಡಿ ಮೈಲಗಿ ಹೇಳಿ ಕೊಡೊರು ಈಗ ಅವರ ಮಗಳ ಹಿಂಗ ಮಾಡಿದರ ಅವರದ ಏನ ಮಡಿವಂತಿಕಿ ಉಳಿತು, ಇನ್ನ ಯಾರ ಅವರನ ಮುಟ್ಟತಾರ ಹೇಳ್ರಿ.
ಮುಂದ ಪಾಂಡುರಂಗಿಯವರು ಭಾಳ ನೊಂದಕೊಂಡ ಒಂದ ತಿಂಗಳ ಸಹ ಕುಟುಂಬ ಪರಿವಾರ ಸಹಿತ ಊರ ಬಿಟ್ಟ ಸ್ವಾದಿ ಒಳಗ ಇದ್ದ ಬಂದ್ರು. ಇತ್ತಲಾಗ ಶಿಂಪಗ್ಯಾರ ಮಾಮಾ ಅವನ ಮಗಾ ಮಾಡಿದ್ದ ಕರಾಮತ್ತಿಗೆ ಭಾಳ ಕೆಟ್ಟ ಅನಿಸಿಗೊಂಡ ಬ್ರಾಹ್ಮರ ಹೆಣ್ಣಮಕ್ಕಳದ ಜಂಪರದ ಉಸಾಬರಿನ ಬ್ಯಾಡ ನಡಿ ಅಂತ ಅಂಗಡಿ ಕಿತಗೊಂಡ ತಮ್ಮ ಮನಿ ಕಡೆನ ಅಂಗಡಿ ಮಾಡಿದಾ. ಅವನ ಮಗಾ ಪಮ್ಮಿನ ಓಡಿಸಿಗೊಂಡ ಧರ್ಮಸ್ಥಳಕ್ಕ ಹೋಗಿ ಲಗ್ನ ಮಾಡ್ಕೊಂಡ ವಾಪಸ ತಮ್ಮ ಮನಿಗೆ ಬಂದ ಅವರಪ್ಪನ ಜೊತಿ ಜಂಪರ್ ಕಟ್ ಮಾಡಲಿಕ್ಕೆ ನಿಂತಾ. ಫ್ಯಾಷನ್ ಡಿಸೈನರ ಗಂಡsನ ಬೇಕ ಅಂತಿದ್ದ ಪಮ್ಮಿ ಶಿಂಪ್ಯಾಗರ ಶಿವ್ಯಾನ ಕಟಗೊಂಡ ಅಂವಾ ಹೊಲದಿದ್ದ ಜಂಪರಗೆ ಕಾಜು ಮನಿ- ಹುಕ್ಕ್ ಹಚ್ಚಿ ಕೊಡೊ ಕೆಲಸ ಮಾಡ್ಕೋತ ಗಂಡನ ಮನಿ ಹಿಡದ್ಲು. ನಾ ಬಹುಶಃ ಅದಕ್ಕ ಲವ್ ಇಸ್ ಬ್ಲೈಂಡ ಅಂತಾರ ಅಂತ ಅನ್ಕೊಂಡ ಮುಂದ ಜೀವನದಾಗ ಲವ್ ಮಾಡೋ ವಿಚಾರನ ತಲ್ಯಾಗಿಂದ ತಗದ ಬಿಟ್ಟೆ.
ಇತ್ಲಾಗ ನಮ್ಮ ಓಣ್ಯಾಗ ಹಿಂಗ ಒಂದ ಬ್ರಾಹ್ಮರ ಹುಡುಗಿ ಇತರೆ ಜಾತಿ ಹುಡುಗನ ಜೊತಿ ಓಡಿ ಹೋಗಿದ್ದ ಸುದ್ದಿ ಊರಾಗ ಹರಡೋದ ತಡಾ ತೊರವಿಗಲ್ಲಿ, ದೇಸಾಯರ ಓಣಿ, ಸಿ.ಬಿ.ಟಿ ಕಿಲ್ಲಾದೊಳಗ ಎಲ್ಲಾ ಕಡೇನು ಬ್ರಾಹ್ಮಣರ ಹುಡಗ್ಯಾರಿಗೆ ಮನ್ಯಾಗ ಕರ್ಫ್ಯು ಆದಂಗ ಆಗಿ ಬಿಡ್ತ. ಮುಂಜಾನೆ ಎದ್ದ ರಾಯರ ಮಠಕ್ಕ ಹೋಗೊದರಿಂದ ಹಿಡದ ರಾತ್ರಿ ಎಂಜಲ ಎಲಿ, ಮುಸರಿ ತಿಪ್ಪಿಗುಂಡ್ಯಾಗ ಓಗಿಲಿಕ್ಕೆ ಸಹಿತ ಈ ಹುಡಗ್ಯಾರನ ಒಬ್ಬರನ ಕಳಸಲಾರದಂಗ ಆಗಿ ಬಿಡ್ತ, ಇನ್ನ ನಮ್ಮ ಓಣ್ಯಾಗ ಯಾರ ಯಾರ ಮನ್ಯಾಗ ಲಗ್ನ ವಯಸ್ಸಿನ ಕನ್ಯಾ ಇದ್ದವು ಅವರಂತು ಇಲ್ಲೇ ಇದ್ದರ ನಮ್ಮ ಮನಿ ಕನ್ಯಾಕ್ಕ ವರ ಸಿಗಂಗಿಲ್ಲಾ ಅಂತ ನಮ್ಮ ಓಣಿ ಬಿಡೋ ವಿಚಾರ ಮಾಡಲಿಕತ್ತರು.
ಇತ್ತಲಾಗ ನಮ್ಮ ಚೈತ್ರಿ-ಮೈತ್ರಿ ಮನ್ಯಾಗಂತು ಕೇಳೋಹಂಗ ಇಲ್ಲಾ
“ಖರೇ ಹೇಳ ನಿಂಗೊತ್ತ ಇತ್ತ ಹೌದಲ್ಲ ಪಮ್ಮಿ ಲಫಡಾ” ಅಂತ ಚೈತ್ರಿ ಅಪ್ಪಾ ಚಿಮ್ಮಲಗಿ ಮಾಮಾ sorry ಕಾಕಾ ದಿವಸಕ್ಕ ಒಂದ ಹತ್ತ ಸರತೆ ಕೇಳೆ ಕೇಳೊಂವಾ. ಪಾಪ ಆ ಪಾಂಡುರಂಗಿಯವರ ನಮ್ಮ ಹಣೇಬರಹದಾಗ ಹರಿ ಸರ್ವೊತ್ತಮ ಇದನ್ನ ಬರದಿದ್ದರ ಏನ ಮಾಡೋದು ಅಂತ ಸುಮ್ಮನಿದ್ದರು ಚೈತ್ರಿಗೆ ತನ್ನ ಮನ್ಯಾಗಿನವರದ ಕಾಟ ಜೋರ ಆಗಿ ಬಿಟ್ಟಿತ್ತ. ಅದರಾಗ ಓಣಿ ಮಂದಿ
“ಈ ಚೈತ್ರಿ-ಮೈತ್ರಿನೂ ಹಂಗ ಹೋಗೋವ ತೊಗಳ್ರಿ, ಇವೇನ ಸಂಪನ್ನ ಇಲ್ಲಾ, ಮೂರು ಕೂಡೆ ಅಡ್ಡಾಡತಿದ್ವು ಒಂದ ಹೊತ, ಇವ ಎರಡ ಯಾವಾಗ ಎಲ್ಲೆ ಹಾರತಾವ ಹೇಳಲಿಕ್ಕೆ ಬರಂಗಿಲ್ಲಾ” ಅಂತ ಬೆಂಕ್ಯಾಗ ತುಪ್ಪಾ ಹಾಕೋರು.
ಅದರಾಗ ಮೊದ್ಲs ಬಂದ ವರಕ್ಕ ಚೈತ್ರಿ ಜೋಳದಾಗಿನ ನುಸಿ ಆರಿಸಿದಂಗ ಆರಸೋಕಿ ಹಂತಾದರಾಗ ಇದೊಂದ ಗದ್ಲಾ, ಅವರಪ್ಪಗರ ಕುತಗಿಗೆ ಬಂದ ಬಿಟ್ಟಿತ್ತ. ಭಡಾ ಭಡಾ ಮುಂದ ಆಷಾಡ ಮಾಸ ಮುಗಿಯೋದ ತಡಾ ಅಂವಾ ಒಂದ ಇದ್ದೂರಾಗ ವರಾ ನೋಡಿ ಅಕಿ ಮರ್ಜಿನೂ ಕೇಳದ ಫಿಕ್ಸ್ ಮಾಡಿ ಬಿಟ್ಟಾ. ಅಕಿ ಡಬರಿಗಟ್ಟಲೇ ಕಣ್ಣಿರ ಹಾಕಿದರು ಅಂವಾ ಏನ ಅಕಿ ಮಾತ ಕೇಳಲಿಲ್ಲಾ. ವರಾ ಅಕಿ ಕಿಂತ ಎಂಟ ವರ್ಷ ದೊಡ್ಡಂವ ಇದ್ದರು ದುಂಡ ದುಂಡಗ ಲಕ್ಷಣ ಇದ್ದಾ. ಸಂಪ್ರದಾಯಸ್ತ ಮನೆತನದಿಂದ ಬಂದೊಂವಾ ಹಳೇ ಹುಬ್ಬಳ್ಳಿ ಸತ್ಯಭೋದ ಸ್ವಾಮಿಗಳ ಮಠದ ಲೈನದಾಗ ಸ್ವಂತ ಮನಿ ಇತ್ತ. ಅವ್ವ ಒಬ್ಬೋಕಿನ, ಹಿಂದ-ಮುಂದ ಯಾರ ಇದ್ದಿದ್ದಿಲ್ಲಾ. ಮುಂದ ಎರಡ ತಿಂಗಳಕ್ಕ ಕೃಷ್ಣೇಂದ್ರ ಸ್ವಾಮಿಗಳ ಮಠದಾಗ ಅಕಿ ಲಗ್ನ ಆಗೇ ಬಿಡ್ತು. ಪಾಪ ಇಂಜೀನಿಯರ್ ಬೇಕ, ಡಾಕ್ಟರ ಬೇಕ ಅಂತ ಕನಸ ಕಾಣೋಕಿಗೆ ಕಣ್ಣ ಮುಚ್ಚಿ ಕಣ್ಣ ತಗೇಯೋದರಾಗ ಕೈಯಾಗ ಮುಚ್ಚುಕಾಯಿ ಹಿಡಕೊಂಡ ಗಂಡ ಪ್ರತ್ಯಕ್ಷ ಆಗಿ ಬಿಟ್ಟಾ. ಕೈಯಾಗ ಮುಚ್ಚುಕಾಯಿ ಯಾಕಂದರ ಆ ಹುಡುಗಾ ಅಡಗಿ ಕೆಲಸಕ್ಕ ಹೋಗ್ತಿದ್ದಾ. ಆ ಹುಡಗನ ಕಾಕಾ ಅಡಗಿ ಕಂಟ್ರಾಕ್ಟ ಹಿಡಿತಿದ್ದಾ ಇಂವಾ ಅವನ ಕೆಳಗ ಮ್ಯಾನೆಜಮೆಂಟ ಮಾಡ್ಕೋತ ಇರತಿದ್ದಾ. ಹಂಗ ಅಂವಾ ಸಾಕಷ್ಟ ಗಳಸ್ತಿದ್ದಾ. ಪಾಪ ಚೈತ್ರಿ ಕನಸೇಲ್ಲಾ ಒಮ್ಮಿಂದೊಮ್ಮಿಲೇ ಚಿತ್ರಾನ್ನ ಆಗಿ ಬಿಟ್ಟವು. ಅದಕ ಅಲಾ ಹಣೇಬರಹ ಅನ್ನೊದು.
ಇತ್ತಲಾಗ ಪಮ್ಮಿ ಓಡಿ ಹೋದ್ಲು, ಚೈತ್ರಿ ಮದುವಿ ಆತ. ಇನ್ನ ಮೈತ್ರಿ ಮನ್ಯಾಗ ಬಿಡ್ತಾರ? ಅವರವ್ವ
’ಎಲ್ಲಿ ಬ್ಯಾಂಕ ವರಾ ಹಚ್ಚಿ ನೀ ಹಿಂಗ ಬಿಟ್ಟರ ಯಾವದರ ಕಂಡಕ್ಟರ್ ಇಲ್ಲಾ ಡ್ರೈವರ್ ಜೋಡಿ ಓಡಿ ಹೋಗೊ ಪೈಕಿ ತೊಗೊ’ ಅಂತ ಭಡಾ ಭಡಾ ಒಂದ ಛಲೋ ಮುಹೂರ್ತ ನೋಡಿ ತನ್ನ ತಮ್ಮಗ ಮೈತ್ರಿನ ಕೊಟ್ಟ ಲಗ್ನಾ ಮಾಡಿ ಬಿಟ್ಟಳು. ಆವಾಗ ಹುಬ್ಬಳ್ಳ್ಯಾಗ ಈ ಡ್ರೈವರ, ಕಂಡಕ್ಟರ ಜೋಡಿ ಹುಡಗ್ಯಾರ ಓಡಿ ಹೋಗೊದ ಒಂದ ಶುರು ಆಗಿತ್ತ, ಅದರಾಗ ಏನಿಲ್ಲದ ಮೈತ್ರಿಗೆ ಸಿ.ಬಿ.ಟಿ ಒಳಗಿನ ಎಲ್ಲಾ ಕಂಡಕ್ಟರ ಜೊತಿ ದೋಸ್ತಿ ಇತ್ತ. ವಟ್ಟ ಅಕಿಗೇ ಏನೊ ಗೊತ್ತಿಲ್ಲಾ ಮೊದ್ಲಿಂದ ರೊಕ್ಕದ ಚೀಲ ಇದ್ದೊರಿಗೆ ಬೆನ್ನ ಹತ್ತೊ ಸ್ವಭಾವ ಇತ್ತ.
ಮೈತ್ರಿ ನಾ ಮಾಮಾನ್ನ ಒಲ್ಲೆ ಅಂತ ಹೊಚ್ಚಲ ಮ್ಯಾಲೆ ಕೂತ ಕಾಲ ಹೊಸ್ತ ಅತ್ತರೂ ಅವರವ್ವ ಏನ ಕೇಳಲಿಲ್ಲಾ. ಪಾಪ ಅಕಿ ಬ್ಯಾಂಕ ಒಳಗ ರೊಕ್ಕಾ ಎಣಸೋ ಕ್ಯಾಶಿಯರನ ಮಾಡ್ಕೋಬೇಕು ಅಂತ ಅನ್ಕೊಂಡಿದ್ಲು ಆದರ ಅಕಿ ಹಣೇಬರಕ್ಕ ದಿವಸಾ ರಾತ್ರಿ ಚಿಲ್ಲರ ಎಣಸೋ ಗಂಡ ಸಿಕ್ಕಿದ್ದಾ. ಅಕಿ ಗಂಡ ನಗರೇಶ್ವರ ಗುಡಿ ಪೂಜಾ ಮಾಡ್ತಿದ್ದಾ. ಮುಲ್ಕಿ ಪರೀಕ್ಷಾ ಪಾಸ ಆಗಿ ಮೂರ ವರ್ಷ ತಡಸ ಮಲ್ಹಾರ ಭಟ್ಟರ ಕಡೆ ಮಂತ್ರಾ ಕಲತಿದ್ದಾ. ಅಂವಾ ಗುಡಿ ಪೂಜಾದಿಂದ ತನ್ನ ಉಪಜೀವನಕ್ಕ ಸಾಕಾಗೊ ಅಷ್ಟ ಗಳಸ್ತಿದ್ದಾ. ಅಲ್ಲೇ ಹಳೆಹುಬ್ಬಳ್ಳಿ ಚೆನ್ನಪೇಟ ಒಳಗ ಒಂದ ಮನಿ ಭಾಡಗಿ ಹಿಡಕೊಂಡ ಸಂಸಾರ ಶುರು ಮಾಡಿ ಬಿಟ್ಟಾ.
ಹಿಂಗ ಚೈತ್ರಿ-ಮೈತ್ರಿ ಇಬ್ಬರದು ಸಂಸಾರ ಹಳೇ ಹುಬ್ಬಳ್ಳ್ಯಾಗ ಶುರು ಆತ. ಇನ್ನೊಂದ ಮಜಾ ಅಂದರ ಶಿಂಪ್ಯಾಗನ ಹಿಂದ ಓಡಿ ಹೋದ ಪಾಂಡುರಂಗಿಯವರ ಪಮ್ಮಿನು ಅಲ್ಲೇ ಹಳೇ ಹುಬ್ಬಳ್ಳಿ ಕಸಬಾ ಪೇಟದಾಗ ಮನಿ ಮಾಡಿದ್ಲು. ಹಾಲಿವುಡ್ ಹಸಬಂಡ್ಸದ ಕನಸ ಕಾಣತಿದ್ದ ಮೂರು ಮಂದಿಗು ಹಳೇ ಹುಬ್ಬಳ್ಳಿ ಹಸಬಂಡ್ಸ ಸಿಕ್ಕಿದ್ದರು.
ಮುಂದ ಆ ಮೂರು ಮಂದಿ ಸಂಸಾರನು ಛಲೊ ನಡಕೋತ ಹೋದ್ವು. ಈಗ ಎಲ್ಲಾರು ಸುಖವಾಗಿ ಎರಡೆರಡ ಹಡದ ಒಂದೊಂದ ಆಪರೇಶನ್ ಮಾಡಿಸಿಕೊಂಡ ಆರಾಮ ಇದ್ದಾರ. ಚೈತ್ರಿ ಗಂಡ ಇವತ್ತ ಇಡಿ ಹುಬ್ಬಳ್ಳಿಗೆ ಬ್ರಾಹ್ಮಣರ ದೊಡ್ಡ ಕ್ಯಾಟರರ್, ಎರಡ ಕಾರ ಇಟಗೊಂಡಾನ. ಮೊನ್ನೆ ನನ್ನ ಮಗನ ಮುಂಜವಿಗೆ ನಾ ಅವಂಗ ಕಂಟ್ರ್ಯಾಕ್ಟ ಕೊಟ್ಟಿದ್ದೆ. ಅಡಗಿ ಛಲೋ ಮಾಡ್ತಾನ ಆದರ ಭಾಳ ತುಟ್ಟಿ ಇದ್ದಾನ.
ಇನ್ನ ಮೈತ್ರಿ ಗಂಡ ಚೆನ್ನಪೇಟದಾಗ ದೊಡ್ಡ ಮನಿ ಕಟ್ಟಿಸಿ ಮ್ಯಾಲೆ ತಾವ ಇದ್ದ ಕೆಳಗಿನ ಮನಿ ಭಾಡಗಿ ಕೊಟ್ಟಾನ. ಗುಡಿ ಪೂಜಾರಿಗೆ ಒಲ್ಲೆ ಅಂತ ಅಂದ ಮೈತ್ರಿ ಇವತ್ತ ವಾರದಾಗ ಮೂರ ಸರತೆ ಭಟ್ಟರ ಜೊತಿ ಮುತ್ತೈದಿ ಫ್ರೀ ಅನ್ನೋರಗತೆ ಒಂಬತ್ತ ವಾರಿ ಸೀರಿ ಉಟಕೊಂಡ ಊರೇಲ್ಲಾ ಎಡವಿಕೋತ ಅಡ್ಡಾಡತಿರ್ತಾಳ. ವರ್ಷಾ ನಮ್ಮನಿಗೆ ಅಷ್ಟಮಿ ಮುತ್ತೈದಿ ಅಂತ ನಮ್ಮವ್ವ ಅಕಿಗೆ ಹೇಳಿರತಾಳ.
ಹಂಗ ಇದ್ದದ್ದರಾಗ ಆರಕ್ಕ ಏರಲಿಲ್ಲಾ ಮೂರಕ್ಕ ಇಳಿಲಿಲ್ಲಾ ಅನ್ನೊಹಂಗ ಬದಕಲಿಕತ್ತವರ ಪೈಕಿ ಅಂದರ ಒಂದ ಪಮ್ಮಿ ಇನ್ನೊಂದ ನಾನು. ಇವತ್ತು ಪಾಂಡುರಂಗಿ ಮನ್ಯಾಗಿನವರು ಯಾರು ಪಮ್ಮಿ ಜೊತಿ ಸಂಪರ್ಕ ಇಟಗೊಂಡಿಲ್ಲಾ. ಅಕಿನೂ ಅದರ ಬಗ್ಗೆ ತಲಿಕೆಡಸಿಗೊಂಡಿಲ್ಲಾ. ತಾ ಆತೂ ತನ್ನ ಸಂಸಾರ ಆತು ಆರಾಮ ಇದ್ದಾಳ. ಇವತ್ತು ಚೈತ್ರಿ-ಮೈತ್ರಿ-ಪಮ್ಮಿ ತಮ್ಮ ದೋಸ್ತಿ ಹಂಗ ಇಟಗೊಂಡಾರ. ನಾ ಮೊದ್ಲ ’ಏನಂತಾರ ನಿಮ್ಮ ಹಾಲಿವುಡ ಹಸಬಂಡ್ಸ’ ಅಂತ ಕಾಡಸ್ತಿದ್ದೆ, ಈಗ ’ಏನಂತಾರ ನಿಮ್ಮ ಹಳೇಹುಬ್ಬಳ್ಳಿ ಹಸಬಂಡ್ಸ’ ಅಂತ ಕಾಡಸ್ತಿರ್ತೇನಿ.
ನಾ ಹಂಗ ಅಂದರ ಅವರು ನನಗ “ನಿನ್ನ ಹಳೇ ಹುಬ್ಬಳ್ಳಿ ವೈಫ ಏನಾಂತಳ” ಅಂತ ಅಂತಾರ. ಯಾಕಂದರ ನಿಮಗೊತ್ತಲಾ ನಾ ಮಾಡ್ಕೊಂಡಿದ್ದು ಹಳೇಹುಬ್ಬಳ್ಳಿ ನೇಕಾರ ನಗರ ಹುಡಗಿನ್ನ…ಹಾಲಿವುಡ್ ವೈವ್ಸ್ ಕನಸ ಕಾಣತಿದ್ದ ನನಗ ಹಳೇಹುಬ್ಬಳ್ಳಿ ವೈಫ ಸಿಕ್ಕಳು. ಈಗ ನಾವಿಬ್ಬರೂ ಕೂಡಿ ಮಕ್ಕಳನ್ನ ಹಾಲಿವುಡ್ ಕಿಡ್ಸ್ ಬೆಳಸಿದಂಗ ಬೆಳಸಲಿಕತ್ತೇವಿ.
ಆದರ ಒಂದ ಅಂತೂ ಖರೆ ನಮ್ಮ ಹೆಣ್ಣಮಕ್ಕಳು ಎಷ್ಟ ಹಾಲಿವುಡ್, ಬಾಲಿವುಡದ ಸುಡಗಾಡ ಕನಸ ಕಂಡರು ಒಮ್ಮೆ ಲಗ್ನಾ ಆತು ಅಂದರ ಪಾಲಿಗೆ ಬಂದದ್ದ ಪಂಚಾಮೃತಾ ಅಂತ ಅದು ಪಂಚಗವ್ಯನ ಯಾಕ ಆಗವಲ್ತಾಕ ಸುಖವಾಗಿ ಸಂಸಾರ ಮಾಡ್ತಾರ. ಹಿಂಗಾಗೆ ನಮ್ಮ ಜಗತ್ತ ’world is full of divorced women’ ಆಗಿಲ್ಲಾ. ಅಲ್ಲಾ ಹಂಗ world is full of married menನೂ ಆಗಿಲ್ಲ ಬಿಡ್ರಿ, ಪಾಪ ಇತ್ತೀಚಿಗೆ ನಮ್ಮ ಹುಡುಗರಿಗೆ ಕನ್ಯಾನ ಸಿಗವಲ್ವು.
ಜಾಕಿ ಕಾಲಿನ್ಸ್ ಈಗೇನರ ನಮ್ಮ ಕಿಲ್ಲೇದಾಗ ಇದ್ಲು ಅಂದರ the world is full of unmarried men ಅಂತ ಗ್ಯಾರಂಟೀ ಬುಕ್ ಬರಿತಿದ್ಲು ಅಂತ ಅನಸ್ತದ.