2020ರ ಒಂದು ಕೆಟ್ಟ ಕನಸು…ಕೋವಿಡ್ -19

…………. ನಾ ಗಡದ್ದ ಮಲ್ಕೊಂಡಿದ್ದೆ ಸಡನ್ ಆಗಿ ಬಸ್ಯಾನ ಫೋನ ಬಂತ, ನಾ ಎತ್ತೋದ ತಡಾ
’ಲೇ…ಮಧ್ಯಾಹ್ನದ ಮೆಡಿಕಲ್ ಬುಲೆಟಿನ್ ನೋಡಿದೇನ’ ಅಂತ ಕೇಳಿದಾ.
’ಏ..ಇಲ್ಲಲೇ…ಯಾಕ? ಮತ್ತ ಹೊಸಾ ಕೇಸ ಬಂತಿನ ನಮ್ಮ ಏರಿಯಾದಾಗ?’ ಅಂತ ಹೆದರಕೋತ ಕೇಳಿದೆ.
’ಲೇ ನಮ್ಮ ಏರಿಯಾ ಅಲ್ಲಾ ಮಗನ, ನಮ್ಮ ದೋಸ್ತ ಶಿವ್ಯಾಂದ ಕನಫರ್ಮ್ ಆಗೇದ’ ಅಂತ ಅಂದಾ.
ನಂಗ ಎದಿ ಧಸಕ್ಕಂತ. ನಾ ವಾಟ್ಸಪ್ ಒಳಗಿನ ಬುಲೆಟಿನ್ ನೋಡಿದೆ. ಅದರಾಗ ಕ್ಲೀಯರ ಆಗಿ
ಧಾರವಾಡ ಜಿಲ್ಲಾ: ಮತ್ತೊಂದು ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆ ಅಂತ ಓಣಿ ಹೆಸರ ಕೊಟ್ಟ
ಪೇಶಂಟ್ ನಂ : P-00420, Male, Age ; 45, History : Influenza like illness (ILI), No foreign travel ಅಂತ ಇತ್ತ.
’ಲೇ…ಇದ ಶಿವ್ಯಾನ ಅಂತ ಹೆಂಗ ಹೇಳ್ತಿ’ ಅಂದರ
’ಮಗನ ಅವಂದ ಲಾಸ್ಟ ಒಂದ ತಿಂಗಳದ್ದ ಟ್ರಾವೆಲ್ ಹಿಸ್ಟರಿ ಓದ’ ಅಂತ ಹೇಳಿದಾ.
ಅದರಾಗ ಭಾರಿ ಕ್ಲೀಯರ ಆಗಿ
’ಹುಬ್ಬಳ್ಳಿ ಪಟ್ಟಣದ ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ
P -00420 ಅವರು ಕೊರೊನಾ ಸೊಂಕಿತರಾಗಿದ್ದು ಸದರಿಯವರು ದಿನಾಂಕ — ದಿಂದ ತಮ್ಮ ಮಿತ್ರರೊಂದಿಗೆ a,b,c,d…ಹಾಗೂ ಇನ್ನಿತರ ಸ್ಥಳಗಳಲ್ಲಿ ಸಂಚರಿಸಿರುತ್ತಾರೆ. ಈ ಎಲ್ಲ ಅಂಶಗಳ ಹಿನ್ನಲೆಯಲ್ಲಿ ಸದರಿಯವರನ್ನು ಸಂಪರ್ಕಿಸಿದ ಸಾರ್ವಜನಿಕರಿಗೆ ಕೊರೊನಾ ಸೊಂಕು ತಗಲುವ ಸಾಧ್ಯತೆ ಇದ್ದು, ಕಾರಣ ಆ ಎಲ್ಲ ವ್ಯಕ್ತಿಗಳು ಕೂಡಲೇ ಕೊರೊನಾ ಸಹಾಯವಾಣಿಗೆ ಕರೆಮಾಡಿ ತಮ್ಮ ವಿವರಗಳನ್ನು ನೀಡತಕ್ಕದ್ದು ಹಾಗೂ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡತಕ್ಕದ್ದು. ಸಾರ್ವಜನಿಕ ಹಿತದೃಷ್ಟಿಯಿಂದ ಈ ಪ್ರಕಟಣೆಯನ್ನು ಹೊರಡಿಸಲಾಗಿದೆ’ ಅಂತ ಬರದಿದ್ದರು.
ಅದೇಲ್ಲಾ ಓದಿದ ಮ್ಯಾಲೆ ನಂಗ ಶಿವ್ಯಾನ ಅಂತ ಗ್ಯಾರಂಟಿ ಆತ.
ಹಂಗ ಲಾಕಡೌನ ಒಳಗ ನಾವೇಲ್ಲಾ ದೋಸ್ತರು ಅಗದಿ ನಿಯತ್ತಿನಿಂದ ಮನ್ಯಾಗ ಹೆಂಡ್ತಿ ಹೇಳಿದಂಗ ಕೇಳ್ಕೋತ ಇದ್ದವಿ ಬಿಡ್ರಿ ಸುಳ್ಳ ಯಾಕ ಹೇಳ್ಬೇಕ. ನಮಗ ಏನ ಸಾಮಾನ ಬೇಕಂದರೂ ಶಿವ್ಯಾಗ ಹೇಳ್ತಿದ್ವಿ. ಯಾಕಂದರ ಲಾಕಡೌನ ಒಳಗ ಅಂವಾ ಒಂದೂ ಹೆಂಡ್ತಿನ್ನ ತವರಮನಿಗೆ ಅಟ್ಟಿ ಪುಣ್ಯಾ ಕಟಗೊಂಡಿದ್ದಾ ಇನ್ನೊಂದ ಅವನ ಕಡೆ ಕಂಡ ಕಂಡಲ್ಲೇ ಅಡ್ಡಾಡಲಿಕ್ಕೆ ಪಾಸ ಇತ್ತ. ಅಂವಾ ಪಾಪ ನಮ್ಮೇಲ್ಲಾರ ಮನಿಗೆ ಏನೇನ ಬೇಕಾ ಎಲ್ಲಾ ಸಾಮಾನ ತಂದ ಕೊಡ್ತಿದ್ದಾ. ಗುಳಿಗೆ ಬೇಕಾದವರಿಗೆ ಗುಳಿಗಿ, ಕಾಯಿಪಲ್ಯೆ ಬೇಕಾದವರಿಗೆ ಕಾಯಿಪಲ್ಯೆ, ಕಿರಾಣಿ ಬೇಕಾದವರಿಗೆ ಕಿರಾಣಿ. ಒಂದ ಎರಡ ಅವನ ಕಡೆ ಹೆಲ್ಪ ತೊಗೊಂಡಿದ್ದ. ಅವನ ಕಡೆ ಬೇಕಾಗಿದ್ದ ಬ್ಯಾಡಾಗಿದ್ದ ಎಲ್ಲಾ ತರಿಸ್ಗೊಂಡ ಮ್ಯಾಲೆ
’ಲೇ…ಮಗನ..ಸೋಸಿಯಲ್ ಡಿಸ್ಟನ್ಸ ಮೆಂಟೇನ್ ಮಾಡ್ಲೇ…ಮಾಸ್ಕ ಹಾಕ್ಕೊಂಡ ಮಾತಾಡ, ಸ್ಯಾನಿಟೈಸರ ಹಚ್ಗೊಂಡ ಮುಟ್ಟ…ಅವರಿವರ ಅಂಗಡಿಗೆ, ಮನಿಗೆ ಹೋಗಬ್ಯಾಡ ಮತ್ತ’ ಅಂತ ಬುದ್ಧಿ ಹೇಳಿ ಕಳಸ್ತಿದ್ದವಿ.
ಹಂತಾವಂಗ ಹಿಂಗ ಆತಲಾ ಅಂತ ಕೆಟ್ಟ ಅನಸ್ತ ಖರೆ ಆದರ ಇತ್ತಲಾಗ ನಮಗೂ ಟುಕು-ಟುಕು ಶುರು ಆತ.
ಇಮ್ಮಿಡಿಯೇಟ್ ಎಲ್ಲಾ ದೋಸ್ತರು zoom ಒಳಗ ವೀಡಿಯೊ ಕಾನ್ಪರೆನ್ಸ ಶುರು ಮಾಡಿದ್ವಿ
ನಾ ಯಾವಾಗ ಶಿವ್ಯಾಗ ಲಾಸ್ಟ ಭೆಟ್ಟಿ ಆಗಿದ್ದೆ, ಅಂವಾ ಯಾವಾಗ ನಮ್ಮ ಮನಿಗೆ ಬಂದಿದ್ದಾ, ಯಾರ ಮನಿಗೆ ಏನೇನ ಕೊಟ್ಟಿದ್ದಾ ಎಲ್ಲಾ ಶುರು ಆತ.
’ನಮ್ಮವ್ವಗ ಧಾರವಾಡದಿಂದ ಅಳ್ಳಿಟ್ಟ ತಂದ ಕೊಟ್ಟಿದ್ದಾ’ ಅಂತ ದೀಪ್ಯಾ ಅಂದರ ಪಕ್ಯಾ
’ಗಣೇಶಪೇಟದಿಂದ ಹೋದ ಸಂಡೇ ಫಿಶ್ ತರಿಸಿದ್ದೆ’ ಅಂತ ಅಂದಾ.
ಶಂಬ್ಯಾ ನನಗ ’ಲೇ…ಮೊನ್ನೆ MRP ಒಪನ್ ಆದಮ್ಯಾಲೆ ನೀವಿಬ್ಬರೂ ಕೂಡೆ ಪಾಳೇ ಹಚ್ಚಿದ್ದರಲಾ’ ಅಂದಾ…
’ಲೇ ಮಗನ ನಾ ಆವಾಗ social distance maintain ಮಾಡಿದ್ದೆ, ಮ್ಯಾಲೆ ನನ್ನ ಬ್ರ್ಯಾಂಡ ಬ್ಯಾರೆ, ಅವಂದ ಬ್ಯಾರೆ’ ಅಂತ ಅಂದರ, ನಮ್ಮ ಸಾವಜಿ ದೋಸ್ತ
’ನನಗ ಖಾರಾ ಭೂಟಿ ತಿನ್ನೊಹಂಗ ಆಗೇದ ಅಂತ ಶಿವ್ಯಾ ನಮ್ಮ ಮನಿಗೆ ಊಟಕ್ಕ ಬಂದಿದ್ದಾಲೇ’ ಅಂತ ಹೊಟಬ್ಯಾನಿ ಹಚಗೊಂಡ ಅಂದಾ.
ಅಲ್ಲಾ ನಾ ಖರೇ ಹೇಳ್ತೆನಿ ನಾವ ದೋಸ್ತರ ಲಾಕಡೌನ ಮುರದಿದ್ದ MRP ಶುರು ಆದಮ್ಯಾಲೆ. ಯಾಕಂದರ ಒಬ್ಬೊಬ್ಬರದ ಒಂದೊಂದ ಬ್ರ್ಯಾಂಡ ಮ್ಯಾಲೆ ಕಿ.ಮಿ ಗಟ್ಟಲೆ ಪಾಳೆ ಹಿಂಗಾಗಿ ಒಂದ ಐದ- ಆರ ಅಂಗಡಿಗೆ ಏಳೆಂಟ ದೋಸ್ತರ ಪಾಳೆ ಹಚ್ಚಿದ್ವಿ ಅನ್ನರಿ.
ಇನ್ನ ನಮ್ಮ ಶಿವ್ಯಾಗ ಹಿಂಗ ಆಗೇದ ಅಂದ ಮ್ಯಾಲೆ ಅಂವಾ ದೋಸ್ತರಿಗೆ ಭೆಟ್ಟಿ ಆಗಿದ್ದ, ದೋಸ್ತರ ಮನಿಗೆ ಹೋಗಿ ಸಾಮಾನ ಕೊಟ್ಟಿದ್ದ ಎಲ್ಲಾ ಹೇಳೆ ಹೇಳ್ತಾನ ಅಂತ ಗ್ಯಾರಂಟಿ ಇತ್ತ. ಇನ್ನ ನಾವ primary contact listನಾಗ ಬರ್ತೇವಿ, ಎಲ್ಲೆ ನಮಗ ಟೆಸ್ಟ ಮಾಡ್ತಾರೋ ಇಲ್ಲಾ direct quarentine ಮಾಡ್ತಾರೊ ಅಂತ ಹೆದರಕಿ ಹತ್ತ.
ಹಂಗ ನಮಗ್ಯಾರಿಗೂ ಯಾವ ಸುಡಗಾಡ ಸಿಂಪ್ಟಮ್ಸ್ ಇರಲಿಲ್ಲ ಬಿಡ್ರಿ. ಒಬ್ಬೊವಂಗ ನೆಗಡಿ ಬಂದಾಗ ಮತ್ತೊಬ್ಬವಂಗ ಜ್ವರ ಇರ್ತಿದ್ವು, ಒಬ್ಬೊಂವ ಕೆಮ್ಮಿದರ ಇನ್ನೊಬ್ಬಂವಂದ ಗಂಟ್ಲ ಹಿಡಿತಿತ್ತ ಹೊರತು ಎಲ್ಲಾ ಲಕ್ಷಣ ಒಬ್ಬೊವಂಗ ಇರಲಿಲ್ಲಾ. ಅದರಾಗ MRP ಶುರು ಆದಮ್ಯಾಲೆ ಇದ್ದ-ಬಿದ್ದ ಎಲ್ಲಾ ಸಿಂಪ್ಟಮ್ಸ್ ಹೋಗಿದ್ವ ಅನ್ನರಿ.
ಇನ್ನ ನಮಗೇಲ್ಲಾ ಫೋನ ಬರೋದ ಗ್ಯಾರಂಟಿ ಅನಸಲಿಕತ್ತ. ಹಂಗ ಫೋನ ಬರಲಿಲ್ಲಾ ಅಂದರ ನಾವ ಪ್ರಾಮಾಣಿಕವಾಗಿ ಫೋನ ಮಾಡಿ ಹೇಳೋದ ಛಲೋ ಇಲ್ಲಾಂದರ ಅವರ ಫೋನ ಬರೋತನಕಾ ನಾವೇಷ್ಟ ಮಂದಿ ಜೊತಿ ಮುಟ್ಟಾಟ ಆಡ್ತೇವೋ ಅಂತ ಅನಸಲಿಕತ್ತ.
ಒಬ್ಬಂವ ’ದೋಸ್ತ ಸುಮ್ಮನ ನಾವ ಫೋನ ಮಾಡಿ ಎಲ್ಲೆರ ಎಲ್ಲಾ ವ್ಯವಸ್ಥಾ ಇದ್ದದ್ದ ಹೋಟೆಲನಾಗ ಕ್ವಾರೆಂಟೇನ್ ಆಗೋದ ಛಲೋಲೇಪಾ…..ಮನ್ಯಾಗ ಹೆಂಡ್ತಿ ಕಾಟನರ ತಪ್ಪತದ’ ಅಂತ ಅಂದರ ಇನ್ನೊಬ್ಬೊಂವಾ.
’ಲೇ…ಫೋನ್ ಸ್ವಿಚ್ ಆಫ್ ಮಾಡಿ ನಾವ self isolation ಒಳಗ ಹೋಗಿ ಬಿಡೋಣ…govt quarentine ಮಾಡಿದರ medical bulletin ಒಳಗ ಹೆಸರ ಬರ್ತದ’ ಅಂತ ಅಂದಾ.
ಅಷ್ಟ ಅನ್ನೋದರಾಗ ನನ್ನ ಫೋನ ರಿಂಗ್ ಆತ. ನನ್ನ ಎದಿ ಧಸಕ್ಕಂತ. ಮೋಬೈಲ್ ನೋಡಿದರ ಅನ್ನೌನ ನಂಬರ ಇತ್ತ. ನಂಗೇಲ್ಲೋ ಇದ ಕಾರ್ಪೋರೇಶನದವರದ ಫೋನ ಅಂತ ಅನಸಲಿಕತ್ತ. ನಾ ಫೋನ ಎತ್ತಲಿಲ್ಲಾ. ಅದ ಹಂಗ ಒದರಲಿಕತ್ತ………..
………….ಅಷ್ಟರಾಗ ನನ್ನ ಹೆಂಡ್ತಿ ರ್ರೀ…ಫೋನ ಹೋಯ್ಕಿಳಿಕತ್ತ ಎಷ್ಟೋತ್ತಾತ ಎದ್ದ ಫೋನ ತೊಗೊರಿ..ಎಂಟ ಆದರು ಇನ್ನು ಬಿದಕೊಂಡಿರಿ ಅಂತ ಕಿವ್ಯಾಗ SWAB Test ಮಾಡಿದ್ಲು. ನಾ ಭಡಕ್ಕನ ಗಾಬರಿ ಆಗಿ ಎದ್ದೆ……………..
ನಂಗ ಇಷ್ಟೊತ್ತನಕ covid19ನದ್ದ ಒಂದ ಕೆಟ್ಟ ಕನಸ ಬಿದ್ದಿತ್ತ. ನನ್ನ ಎದಿ ಇನ್ನು ಡಗ..ಡಗ ಅಂತ ಹೋಡ್ಕೊಳಿಕತ್ತಿತ್ತ. ಇತ್ತಲಾಗ ಫೋನ ರಿಂಗ ಆಗಲಿಕತ್ತಿತ್ತ. ಎತ್ತಿದರ ಅದ ನಮ್ಮ ಶಿವ್ಯಾಂದ ಇತ್ತ.
ಈಗರ ಅವನ ಬಗ್ಗೆ ಕೆಟ್ಟ ಕನಸ ನೋಡಿದ್ದೆ, ಅವಂದ ಫೋನ ಬರಬೇಕ? ನೂರ ವರ್ಷ ಆಯುಷ್ಯ ತೊಗೊ ಮಗಗ ಅಂತ ಅನ್ಕೊಳೊದರಾಗ ಅಂವಾ
’ಲೇ ಇವತ್ತ ಶನಿವಾರ…ಸಂಜಿಗೆ ಮೇನಕಾಕ್ಕ ಕರಕೊಂಡ ಹೋಗ ಮಗನ….ಲಾಕಡೌನ ಟೈಮ ಒಳಗ ಹೆಲ್ಪ ಮಾಡಿದ್ದ ಮರತಿ ಏನ ’ ಅಂತ ಹೇಳಿ ಫೋನ ಇಟ್ಟಾ.
ಇತ್ತಲಾಗ ನನ್ನ ಮಾರಿ ನೋಡ್ಕೊತ ನಿಂತಿದ್ದ ನನ್ನ ಹೆಂಡತಿ
’ಹಿಂಗ್ಯಾಕ ಮಾರಿ ಅನ್ನೋದ ಕೋರೊನಾ ಕುಡದಂಗ ಆಗೇದ?’ ಅಂತ ಅಂದ್ಲು.
ಅಲ್ಲಾ ಅಕಿ ಹೇಳಿದ್ದ ಕೊರೊನಾ ಬ್ಯಾರೆನ ಮತ್ತ.
ನಾ ಅಕಿಗೆ ’ಲೇ…ಭಾರಿ ಕೆಟ್ಟ ಕನಸ ಬಿದ್ದಿತ್ತಲೇ,..ನಿಂಗ ಹೇಳಿದರ ನೀನು ಗಾಬರಿ ಆಗ್ತಿ’ ಅಂತ ನಾ ಕನಸ ಬಗ್ಗೆ ಹೇಳಿದರ…
’ಅಯ್ಯ ಅದಕ್ಯಾಕ ಹೆದರತಿರಿ, ನಮ್ಮ ಇಂಡಿಯಾಕ್ಕ ಬಂದ ಮ್ಯಾಲೆ ಕರೋನಾನ ಹೆದರಿ ಹೋಗೇದ, ಈಗ ಎಲ್ಲಿ ಪ್ರೈಮರಿ ಕಂಟ್ಯಾಕ್ಟ, ಕ್ವಾರೆಂಟೈನ್. ಆ ಕಾಲ ಹೋಗಿ ಎಷ್ಟ ದಿವಸಾತ ಏನತಾನ’ ಅಂತ ಅಂದ್ಲು.
ನಂಗ ತಲಿ ಕೆಟ್ಟತ
’ಲೇ..ನೀವೇಲ್ಲಾ ಹಿಂಗ ಕೊರೊನಾ ಬಗ್ಗೆ casual ಆಗಿದ್ದಕ್ಕ ಮತ್ತ ಈಗ ಕರ್ಫ್ಯೂ ಮಾಡೊರಿದ್ದರ….touch wood ಮಾಡ’ ಅಂತ ಬೈದೆ.
ಅಲ್ಲಾ, ಹಂಗ ನನ್ನ ಕನಸ ಇನ್ನೊಂದ ಸ್ವಲ್ಪ extension ಆಗಿದ್ದರ ನನ್ನ ಹೆಂಡ್ತಿಗೂ quarentine ಮಾಡ್ತಿದ್ರು, ಯಾಕಂದರ ನಾ ಶಿವ್ಯಾನ ಕಡೆ ಲಾಕಡೌನ ಒಳಗ ಅಕಿಗೆ ’ಬಕಾರ್ಡಿ ಪ್ಲಸ್ ’ ತರಿಸಿ
’ಇದನ್ನ ಕುಡದರ ಕೊರೋನಾ ಪ್ಲಸ್ ರಂಗಿಲ್ಲಾ’ ಅಂತ ಸುಳ್ಳ ಹೇಳಿ ಕೊಟ್ಟಿದ್ದೆ.
ಏನೋ ನನ್ನ ಪುಣ್ಯಾ, ಕನಸ ಇತ್ತ ಅನ್ನರಿ. ಆದರೂ ಈ ಸುಡಗಾಡ ಕೊರೋನಾ ಸಂಬಂಧ 2020 ಈಡಿ ವರ್ಷ ನೆನಪ ಇಡೋಹಂಗ ಆತು.
ದೇವರ ಈ ಸುಡಗಾಡ ಕೊರೊನಾ ಇನ್ನ ಮುಂದ ಕನಸಿನಾಗೂ ಬರಬಾರದು.
2020 ಒಂದ ಕೆಟ್ಟ ಕನಸ ಅಂತ ಮರತ 2021ರಾಗ ಎಲ್ಲಾರೂ ಆರಾಮ ಇರಲಿ, ಎಲ್ಲಾರಿಗೂ ಒಳ್ಳೆದಾಗಲಿ.
ನಿಮಗೇಲ್ಲಾ advance ಹೊಸವರ್ಷದ ಹಾರ್ದಿಕ ಶುಭಾಶಯಗಳು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ