ಈಗ ಒಂದ ತಿಂಗಳ ಹಿಂದ ನಮ್ಮ ಪಿ.ಜಿ. ಫೋನ ಮಾಡಿದ್ದಾ, ಇಂವಾ ಈಗ ಅಮೇರಿಕಾದಾಗ ಇರ್ತಾನ. ಒಂದ ಕಾಲದಾಗ ಕೊತಂಬರಿ ಕಾಲೇಜನಾಗ ನನ್ನ ಪಿ.ಯು.ಸಿ ಕ್ಲಾಸಮೇಟ್ ಇದ್ದಾ. ಭಾರಿ ಶಾಣ್ಯಾ ನನ್ನ ಮಗಾ. ಹಂಗ ಅಕ್ಕಿ ಆಲೂರನಂವಾ ಖರೆ ಆದರ ದೊಡ್ಡ ಊರಾಗ ಕಲತರ ಇನ್ನೂ ಶಾಣ್ಯಾ ಆಗ್ತಾನ ಮೊಮ್ಮಗ ಅಂತ ಅವರಜ್ಜಿ ಹುಬ್ಬಳ್ಳ್ಯಾಗ ಕಾಲೇಜಿಗೆ ಸೇರಸಿದ್ದಳು.
ಅದರಾಗ ಈ ಮಗಾ ’ನಂದ sslc ಒಳಗ ಬರೇ 35 ಮಾರ್ಕ್ಸನಾಗ stateಗೆ 20ನೇ rank ಮಿಸ್ ಆತ’ ಅಂತ ಹೇಳ್ಕೋತ ಅಡ್ಡಾಡತಿದ್ದಾ. ನಾ ಅಂವಾ ಹಂಗ ಅಂದಾಗೊಮ್ಮೆ ’ನಂದ ಬರೇ 20% ದಾಗ ಮಿಸ್ ಆತ ತೊಗೊ’ ಅಂತಿದ್ದೆ.
ಅಂವಾ ಕಾಲೇಜಗೆ ಅಡ್ಮಿಶನ್ ಮಾಡಿಸಿ ಅವರಪ್ಪನ ಜೊತಿ ವಿದ್ಯಾನಗರದಾಗ ಒಂದ ಹತ್ತ ಹಾಸ್ಟೇಲ ನೋಡ್ಕೊಂಡ ಬಂದಾ. ರೆಡ್ಡಿ ಹಾಸ್ಟೇಲ್, ಖೋಡೆ ಹಾಸ್ಟೇಲ್, ಮಧ್ವಮಂಡಳದ್ದ, ಜಾಬೀನ್ ಹಾಸ್ಟೇಲ್ ಹಿಂಗ ಎಲ್ಲಾ ನೋಡ್ಕೊಂಡ ಬಂದ ಕಡಿಕೆ ಇದ್ದಿದ್ದರಾಗ ನಮ್ಮ ಮಂದಿದ ಛಲೋ ಅಂತ ಅವರಪ್ಪಾ ಅವಂಗ ಮಧ್ವಮಂಡಳದ ಹಾಸ್ಟೇಲಿಗೆ ಸೇರಿಸಿದರು.
ಇಂವಾ ಹಾಸ್ಟೇಲೇನೊ ಸೇರಿದಾ ಆದರ ಅಲ್ಲೆ ಅವಂಗ ಬಗಿ ಹರಿಲಿಲ್ಲಾ. ಅಲ್ಲೆ ದಿವಸಾ ಮುಂಜಾನೆ ತಣ್ಣೀರ ಸ್ನಾನ, ಸಂಧ್ಯಾವಂದನಿ ಕಂಪಲ್ಸರಿ, ಮತ್ತ ಅದ ಟಿಪಿಕಲ್ ಬ್ರಾಹ್ಮರ ಮನಿ ಅಡಿಗಿ, ಮ್ಯಾಲೆ ಅಲ್ಲೇ ಉಂಡ ಮ್ಯಾಲೆ ತಮ್ಮ ತಾಟ ತಾವ ತೊಳ್ಕೊಬೇಕ, ಎಂಜಲ ಗ್ವಾಮ ಹಚ್ಚಬೇಕಿತ್ತ. ಅವಂಗ ಒಂಥರಾ ಉತ್ತರಾದಿ ಮಠದಾಗ ಇದ್ದಂಗ ಅನಸಲಿಕತ್ತ,
ಇನ್ನ ಹಿಂಗಾದರ ನನ್ನ ಅಭ್ಯಾಸ ಹಳ್ಳಾ ಹಿಡಿತದ, ನಮ್ಮಜ್ಜಿ ನೋಡಿದರ ಇಂಜೀನಿಯರ್ ಆಗ ಅಂತ ಹುಬ್ಬಳ್ಳಿಗೆ ಕಳಸ್ಯಾಳ ಅಂತ ರಾಗಾ ತಗದಾ.
ಮ್ಯಾಲೆ ಸೈನ್ಸ ತೊಗೊಂಡ ಸಂಧ್ಯಾವಂದನಿ ಮಾಡಿದರ ಟೈಮ ವೇಸ್ಟ್ ಅಂತ ಸಂಧ್ಯಾವಂದನಿಗೆ ಗೋವಿಂದಾಯ ನಮಃ ಹೇಳಿದಾ, ಇತ್ತಲಾಗ ತಣ್ಣೀರ ಸ್ನಾನ ಮಾಡಿದ್ದಕ್ಕ ವಾರಕ್ಕ ಮೂರ ಸರತೆ ಮೂಗ ಬ್ಯಾರೆ ಸೋರಲಿಕತ್ತ. ಮ್ಯಾಲೆ ವಾರಕ್ಕ ಎರಡ ಸರತೆ ಹಾಸ್ಟೇಲ ಒಳಗ ಜ್ಯೂನಿಯರ್ ಸ್ಟುಡೆಂಟ್ ಸೀನಿಯರಗೆ ಊಟಾ ಬಡಸಬೇಕು ಅಂತ ರೂಲ್ಸ ಇತ್ತ. ಅಲ್ಲಾ ಅಜ್ಜಿ ಅಚ್ಚಚ್ಛಾದಾಗ ಬೆಳದಿದ್ದಾ, ಮಗಗ ಇಲ್ಲೇ ತನ್ನ ಅಂಡರವೇರ ತಾನ ತಿಕ್ಕಿ ಹಾಕೋ ಬೇಕು ಅಂದ ಕೂಡ್ಲೇ ತ್ರಾಸ ಆಗಲಾರದ ಏನ?
ಕಡಿಕೆ ಅದು ಇದು ನೆವಾ ಹಾಕಿ ಎಂಟ ತಿಂಗಳಕ್ಕ ಹಾಸ್ಟೇಲ್ ಬಿಟ್ಟ ಬಿಟ್ಟಾ.
ಮುಂದ ನನ್ನ ಕರಕೊಂಡ ಎಲ್ಲೇರ P.G. (Paying guest) ನೋಡೋಣ ಬಾ ಅಂತ ಇಡಿ ವಿದ್ಯಾನಗರ, ಲಿಂಗರಾಜ ನಗರ, ಶಿರೂರ ಪಾರ್ಕ ಅಡ್ಡಾಡಿದ್ದ ಅಡ್ಡಾಡಿದ್ದ. ಹಂಗ ಇವಂಗ ಬ್ರಾಹ್ಮರ ಮನಿ ಪಿ.ಜಿ ಅದು attached bathroom ಇದ್ದದ್ದನ ಬೇಕಿತ್ತ. ಹಂಗ ರೊಕ್ಕದ್ದ ಪ್ರಾಬ್ಲೇಮ ಏನ ಇರಲಿಲ್ಲಾ ಅನ್ನರಿ, ಅವರಜ್ಜಿ ಪೆನ್ಶನ್ ಸೀದಾ ಹುಬ್ಬಳ್ಳಿಗೆ ಇವನ ಅಕೌಂಟಗೆ ಬರ್ತಿತ್ತ.
ಅದರಾಗ ಇವನ ಸಂಬಂಧ ಒಂದ ಮನೀನ ಹಿಡಿಲಿಕ್ಕೂ ಅವರಜ್ಜಿ ಹೂಂ ಅಂದಿದ್ಲು ಆದರ ಈ ಮಗಗ ಮನಿ ಹಿಡದ ಕೊಟ್ಟರ ಮುಂದ ಅಂವಾ ಎಲ್ಲೇರ ಇಲ್ಲೇ ಒಂದ ಮನಿಯವರನೂ ಕಟ್ಕೊಂಡ ಗಿಡ್ಕೊಂಡಾನ ಅಂತ ಅವರಪ್ಪನ ಹಾಸ್ಟೇಲ್ ಹುಡಕಿದ್ದಾ.
ಯಾವಾಗ ಇಂವಾ exam ಹತ್ತರಿದ್ದಾಗ ಓದೋದ ಬಿಟ್ಟ ಪಿ.ಜಿ ಹುಡ್ಕೋತ ಹೊಂಟಾ ಆವಾಗಿಂದ ಅವಂಗ ಎಲ್ಲಾರೂ ಇವಂಗ ಪಿ.ಜಿ…ಪಿ.ಜಿ ಅಂತ ಕರಿಲಿಕತ್ತರು. ಅಲ್ಲಾ ಆವಾಗ ಪಿ.ಜಿ ಒಳಗ ಇರೋದ ಅಂದರ ಭಾಳ ದೊಡ್ಡಿಸ್ತನ ಬಡದಂಗ. ಹಿಂಗಾಗಿ ಇಂವಾ ಪಿ.ಜಿ ಒಳಗ ಇರ್ತಾನ ಅಂದರ ದೊಡ್ಡ ಮನಷ್ಯಾ ಅಂತ ಕಾಡಸ್ತಿದ್ದವಿ.
ಇವತ್ತಿಗೂ ಅವಂಗ ನಮ್ಮ ಸರ್ಕಲದಾಗ ಎಲ್ಲಾರೂ ಪಿ.ಜಿ ಅಂತ ಕರಿತೇವಿ ಮತ್ತ ಅವನು ಅದರ ಬಗ್ಗೆ ಭಾಳ ತಲಿಗೆಡಸಿಕೊಳ್ಳಂಗಿಲ್ಲಾ. ಮುಂದ ಅದ ಪಿ.ಜಿ ಒಳಗ ಇದ್ದ ಸೈನ್ಸ ಕಲತ ಬಿ.ವಿ.ಬಿ ಒಳಗ ಸೀಟ ತೊಗಂಡ ಇಂಜೀನಿಯರ ಆಗಿ ಕಡಿಕೆ ಆ ಪಿ.ಜಿ ಓನರ್ ಕುಲಕರ್ಣಿಯವರ ಮಗಳನ ಪಟಾಯಿಸಿ ಇವತ್ತ ಎರಡ ಹಡದ ಅಮೇರಿಕಾದಾಗ ಸೆಟ್ಲ ಆಗ್ಯಾನ.
ಅನ್ನಂಗ ಅಂವಾ ಫೋನ ಮಾಡಿದ್ದ ವಿಷಯನ ಹೇಳೋದ ಮರತೆ, ಅಂವಾ ಫೋನ ಮಾಡಿ
“ಲೇ.. ಆಡ್ಯಾ ಹೆಂಗ ಇದ್ದಿ, ಮಕ್ಕಳೇನಂತಾರ” ಅಂತ ಫಾರ್ಮಾಲಿಟಿಗೆ ಮಾತಾಡಿಸಿದಂಗ ಮಾಡಿ ಡೈರೆಕ್ಟ
“ದೋಸ್ತ ನಿನ್ನ ಕಡೆಯಿಂದ ಒಂದ ಹೆಲ್ಪ್ ಆಗಬೇಕಿತ್ತ” ಅಂತ ಅಂದಾ.
“ಏ, ಹೇಳಲೇ ಪಿ.ಜಿ…..ಮಗನ ಅಮೇರಿಕಾದಿಂದ ಔಟ ಗೋಯಿಂದ ಕಾಲ್ ಮಾಡಿ ಅಂದರ ಕೆಲಸ ಇಲ್ಲದ ಮಾಡಿರ್ತಿ ಏನ” ಅಂತ ನಾ ಅನ್ನೋದ ತಡಾ
“ಲೇ..ನಮ್ಮಜ್ಜಿಗೊಂದ ಪಿ.ಜಿ ನೋಡಲೇ” ಅಂತ ಅಂದಾ.
ನಾ ಒಮ್ಮಿಕ್ಕಲೇ ಗಾಬರಿ ಆದೆ, ಅಲ್ಲಾ ಅವರಜ್ಜಿಗೆ ಏನಿಲ್ಲಾಂದ್ರು ೮೫-೮೬ ವಯಸ್ಸ, ಹಂತಾಕಿನ ಪಿ.ಜಿ ಒಳಗ ಯಾಕ ಇಡ್ತಾನ ಅಂತ? ಅಲ್ಲಾ ಹಂಗ ವೃದ್ಧಾಶ್ರಮದಾ ನೋಡ ಅಂದರ ಮಾತ ಬ್ಯಾರೆ ಇತ್ತ, ಅದ ಈಗ ಕಾಮನ್. ಪಿ.ಜಿ ಯಾಕ ಅಂತ ಗೊತ್ತಾಗಲಿಲ್ಲಾ. ಅದರಾಗ ಪಿ.ಜಿ ವೃದ್ಧಾಶ್ರಮದಕಿಂತಾ ತುಟ್ಟಿ ಬ್ಯಾರೆ.
ನಾ ಏನಪಾ ಹಕೀಕತ್, ಯಾಕ ನಿಮ್ಮಜ್ಜಿಗೆ ಪಿ.ಜಿ ಗೆ ಸೇರಸಲಿಕತ್ತಿ ನಿಮ್ಮವ್ವನ ಜೊತಿ ಬಗಿಹರಿವಲ್ತೇನ ಅಂತ ಕೇಳಿದೆ.
’ಏ ಹಂಗೇನ ಇಲ್ಲಲ್ಲೇ..ನಾ ಒಂದ ತಿಂಗಳ ಮಟ್ಟಿಗೆ ನಮ್ಮ ಅವ್ವಾ ಅಪ್ಪನ್ನ ಅಮೇರಿಕಾಕ್ಕ ಕರಿಸಿಗೊಳ್ಳಿಕತ್ತೇನಿ. ಇನ್ನ ನಮ್ಮಜ್ಜಿನ್ನ ಒಬ್ಬೋಕಿನ ಬಿಟ್ಟ ಹೋಗಲಿಕ್ಕೆ ಬರಂಗಿಲ್ಲಾ, ರಿಲೇಶನ್ಸ್ ಎಲ್ಲಾ ಸೆಲ್ಫಿಶ್ ಇದ್ದಾರ ಯಾರು ನಮ್ಮಜ್ಜಿ ಜೊತಿಗೆ ಬಂದ ಇರಲಿಕ್ಕೆ ತಯಾರಿಲ್ಲಾ. ಅದಕ್ಕ ಅಕಿನ್ನ ಒಂದ ತಿಂಗಳ ಎಲ್ಲೇರ ಬ್ರಾಹ್ಮರದ ಪಿ.ಜಿ ಒಳಗ ಇಟ್ಟರಾತು ಅಂತ ವಿಚಾರ ಮಾಡೇನಿ, ಎಲ್ಲೇರ ಇದ್ದರ ಅರ್ಜೆಂಟ್ ನೋಡ” ಅಂತ ಹೇಳಿದಾ.
ನಂಗ ಏನ ಹೇಳ್ಬೇಕ ತಿಳಿಲಿಲ್ಲಾ.
ಅವರಪ್ಪ ರಿಟೈರ್ಡ್ ಆಗಿ ಹುಬ್ಬಳ್ಳ್ಯಾಗ ಸೆಟ್ಲ ಆಗಿದ್ದಾ, ಈ ಮಗಾ ದೇಶಾನ ಬಿಟ್ಟ ಹೋಗಿದ್ದಾ. ಹಂಗ ಅವರಜ್ಜಿ ಇನ್ನೂ ಗಟ್ಟಿ ಇದ್ದಾಳ ಬಿಡ್ರಿ ಆದರೂ ಇನ್ನ ಅಕಿಗೆ ಪಿ.ಜಿ ನೋಡ ಅಂತ ಹೇಳಿದ್ದ ಕೇಳಿ ನಂಗ ಆಶ್ಚರ್ಯ ಆತ. ಹಂಗ ಅಜ್ಜಿನ್ನ ಒಬ್ಬೋಕಿನ್ನ ಬಿಟ್ಟ ಹೋಗಲಿಕ್ಕೆ ಬರಂಗಿಲ್ಲಾ, ಅಕಿ ಜೊತಿ ಬಂದ ಇರಲಿಕ್ಕೆ ಯಾರೂ ರೆಡಿ ಇಲ್ಲಾ. ಮ್ಯಾಲೆ ಇಷ್ಟ ವಯಸ್ಸಾದವರನ ಯಾ ಸಂಬಂಧಿಕರ ರಿಸ್ಕ ತೊಗೊಂಡ ಇಟ್ಗೋತಾರ ಹೇಳ್ರಿ?
ಅಲ್ಲಾ ಈ ಮಗಗ ನಾ ಮುವತ್ತ ವರ್ಷದ ಹಿಂದ ಪಿ.ಜಿ ಹುಡಕಿ ಕೊಟ್ಟಿದ್ದೆ, ಈಗ ಮತ್ತ ಪಿ.ಜಿ ಹುಡಕಂತಾನ, ನಂಗೇನ ಪಿ.ಜಿ.ಎಜೆಂಟ್ ಮಾಡ್ಯಾನಿನ ಅಂತ ಅನಸ್ತ ಖರೆ ಆದ್ರ ಹೋಗಲಿ ಬಿಡ ಅಜ್ಜಿನ್ನ ಪಿ.ಜಿ ಒಳಗ ಇಡೋದ ಪುಣ್ಯಾದ್ದ ಕೆಲಸ ಅಂತ ’ಹೂಂ’ ಅಂದ ಫೋನ ಇಟ್ಟೆ.
ಮುಂದ ಒಂದ ವಾರದಾಗ ಇಂಗಳಗಿ ಚಾಳ ಒಳಗ ಅಜ್ಜಿಗೆ ಪಿ.ಜಿ ಮಾಡಸಿಸಿ, ಏನರ ಎಮರ್ಜನ್ಸಿ ಬಂದರ ನನಗ ಇಲ್ಲಾ ೧೦೮ ಕಂಟ್ಯಾಕ್ಟ ಮಾಡ್ರಿ ಅಂತ ಹೇಳಿ ಅವರವ್ವಾ-ಅಪ್ಪನ್ನ ಅಮೇರಿಕಾಕ್ಕ ಹೋಗಿ ಒಂದ ತಿಂಗಳ ಚೈನಿ ಹೊಡಿರಿ ಅಂತ ಕಳಸಿದೆ.
ಅಲ್ಲಾ ಎಲ್ಲಾ ಬಿಟ್ಟ ಇವತ್ತ ಯಾಕ ಇದ ನೆನಪಾತು ಅಂದರ ನಾಳೆ ಅಮೇರಿಕಾದಾಗ parents day, ಅವರ ಪ್ರತಿ ವರ್ಷ ಜುಲೈದಾಗಿನ 4th ಸಂಡೆ parents day ಮಾಡ್ತಾರ, ಹಿಂಗಾಗಿ ನಮ್ಮ ಪಿ.ಜಿ. ತನ್ನ parents ಗೆ parents day gift ಅಂತ ಅಮೇರಿಕಾಕ್ಕ ಗಾಡಿ ಖರ್ಚ ತಾನ ಮೈಮ್ಯಾಲೆ ಹಾಕ್ಕೊಂಡ ಕರಸಿಕೊಂಡಿದ್ದಾ. ಅದರ ಸಂಬಂಧ ತನ್ನ ಪೇರೆಂಟ್ಸದ್ದ ಪೇರೆಂಟನ್ನ ಅಂದರ ಅಜ್ಜಿನ್ನ ಪಿ.ಜಿ ಒಳಗ ಇಡೊ ವ್ಯವಸ್ಥಾ ಮಾಡಿದಾ.
ಇದ ಇವತ್ತ ಪಿ.ಜಿ ಅಜ್ಜಿದ ಕಥಿ ಇರಬಹುದು ಮುಂದ ನಮ್ಮ ಪೇರೆಂಟ್ಸದ್ದ, ಆಮ್ಯಾಲೆ ನಂಬದು ಎಲ್ಲಾ ಇದ ಹಣೇಬರಹ ಆದರೂ ಆಗಬಹುದು.
ಹಂಗ ಇವತ್ತಿನ ಪ್ರಹಸನದಾಗ ಹಾಸ್ಯ ಕಡಮಿ ಇರಬಹುದು, ಆದರ ಒಂದ ಸರತೆ ಪೇರೆಂಟ್ಸ ಡೇ ದಿವಸರ ನಾವ ವಯಸ್ಸಿಗೆ ಬಂದ ಪೇರೆಂಟ್ಸನ್ನ ಹೆಂಗ ಟ್ರೀಟ್ ಮಾಡ್ಲಿಕತ್ತೇವಿ ಅಂತ ವಿಚಾರ ಮಾಡಬೇಕು ಅಂತ ಬರದೆ ಇಷ್ಟ.
ಹಂಗ ನಾವು ನಮ್ಮ ದೇಶದಾಗ ಪೇರೆಂಟ್ಸ ಡೇ ಏನ ಮಾಡಂಗಿಲ್ಲಾ. ನಮ್ಮಲ್ಲೇನಿದ್ದರೂ ವರ್ಷಕ್ಕೊಂದ ಸರತೆ ಶ್ರಾದ್ಧ, ಪಕ್ಷ, ಮುತ್ತೈದಿ ಹೋಗಿದ್ದರ ಐದಾನವಮಿ ಮಾಡ್ತೇವಿ. ಅದ ನಮಗ ರಗಡ.
ಹಂಗ ಯಾವದರ ವರ್ಷ ಅಧಿಕ ಮಾಸ ಬಂದರ ಎರಡ ಸಲಾ ಮಾಡ್ತೇವಿ ಆ ಮಾತ ಬ್ಯಾರೆ.
ಇರಲಿ, ಎಲ್ಲಾ ಅವರವರ ಹಣೇಬರಹ…