ರ್ರೀ…..ಇವತ್ತ ನಿಂಬದ ‘ಬ್ಲೂ’ ಕಾಲಮ್ ಏನ್ರಿ?

ಇವತ್ತ ಮುಂಜಾನೆ ಒಮ್ಮಿಂದೊಮ್ಮಿಲೇ ನನ್ನ ಹೆಂಡ್ತಿ ’ರ್ರಿ….ಇವತ್ತಿಂದ ಏನ ನಿಂಬದ ಬ್ಲೂ ಕಾಲಮ್ ಏನ್ರಿ?’ ಅಂತ ಕೇಳಿದ್ಲು.
ನಾ ಒಮ್ಮಿಕ್ಕಲೇ ಗಾಬರಿ ಆದೆ. ಅಲ್ಲಾ ನಾ ಬರೇಯೋದ ತಿಂಗಳಿಗೆ ಎರಡ ಸಲಾ ಗಿರಮಿಟ್ ಕಾಲಮ್. ಇನ್ನ ನಾ ಯಾವಾಗಿಂದ ಬ್ಲೂ ಕಾಲಮ್ ಸ್ಟಾರ್ಟ ಮಾಡಿದೇಪಾ ಅಂತ ನಂಗ ಡೌಟ ಬಂದ ಭಡಾ ಭಡಾ ಪೇಪರ ತಗದ ಮತ್ತೇಲ್ಲರ ತಪ್ಪಿ ಬ್ಯಾರೆ ಆರ್ಟಿಕಲ್ ಕಳಿಸೇನೇನ ಅಂತ ನನ್ನ ಕಾಲಮ್ ತಗದ ಓದಲಿಕತ್ತೆ, ಅದ ಹಂಗೇನ ಆಗಿರಲಿಲ್ಲಾ, ನಾ ಕಳಸಿದ್ದ ಕರೆಕ್ಟ ಇತ್ತ.
ನಾ ಅಕಿನ್ನ ಸೈಡಿಗೆ ಕರದ
’ಲೇ..ಹುಚ್ಚಿ ಏನೇನರ ಮಾತಾಡ್ತಿ ಅಲಾ….ನಾ ಹಂತಾದ ಏನ ಬರದೇನಿ’ ಅಂತ ಅಂದರ ಅಕಿ
’ಅಲ್ಲರಿ, ನೀವ ಹನಿಮೂನಗೆ ಹೋದಾಗ ಹೇಳಿದ್ದರೇಲಾ, ಒಂದ ತಿಂಗಳದಾಗ ಎಕ್ಸ್ಟ್ರಾ ಹುಣ್ಣಮಿ ಬಂದರ ಎರಡನೇ ಹುಣ್ಣಮಿಗೆ ಅಂದರ full moon day ಕ್ಕ blue moon day ಅಂತಾರ ಅಂತ, ಹಂಗ ನಿಂಬದ ಈ ತಿಂಗಳ ಮೂರ ಆರ್ಟಿಕಲ್ ಬರ್ತಾವ ಅಲಾ ಅದಕ್ಕ ಇವತ್ತಿನ ಎಕ್ಸ್ಟ್ರಾ ಕಾಲಮ ’ಬ್ಲೂ ಕಾಲಮ್’ ಏನ ಅಂತ ಕೇಳಿದೆ ಇಷ್ಟ’ ಅಂದ್ಲು.
ಏನರ ತಿಳಿತಿನ ಅಕಿ ಲಾಜಿಕ್? ಇಲ್ಲ ಹೌದಲ್ಲ.
ಅಲ್ಲಾ ಹಂಗ ಹದಿನೆಂಟ ವರ್ಷಾತ ಕಟಗೊಂಡ ನಂಗ ತಿಳಿದಿಲ್ಲಾ ಇನ್ನ ನಿಮಗೇನ ತಿಳಿಬೇಕ ಬಿಡ್ರಿ.
ಅಕಿ ಲಾಜಿಕ ಏನಪಾ ಅಂದರ ನಾ ಪ್ರತಿ ತಿಂಗಳ ಎರಡ ಸಲಾ ಅಲ್ಟರನೇಟ ಶನಿವಾರಕ್ಕೊಮ್ಮೆ ಗಿರಮಿಟ್ ಬರಿತೇನಿ ಆದರ ಈ ತಿಂಗಳ ನನ್ನವು ಮೂರ ಕಾಲಮ್ ಬರ್ತಾವ. ಅದಕ್ಕ ಇವತ್ತಿನ ಎಕ್ಸ್ಟ್ರಾ ಕಾಲಮಗೆ ಇಕಿ ಬ್ಲೂ ಕಾಲಮ್ ಅಂತ ಹೆಸರ ಇಟ್ಟಾಳ. ಏನ್ಮಾಡ್ತೀರಿ ಇಕಿ ಲಾಜಿಕಗೆ?
ನಾ ಅಕಿಗೆ
“ಏ,ಇಲ್ಲೆ ನೋಡಿಲ್ಲೇ, ನೀ ಹಿಂಗ ಯಾರಿಗರ ನಮ್ಮ ಮನೆಯವರದ ಇವತ್ತ ಬ್ಲೂ ಕಾಲಮ್’ ಅಂತ ಹೇಳಿದರ ಓದೊ ನಾಲ್ಕ ಮಂದಿನೂ ಓದಂಗಿಲ್ಲಾ, ಅದರಾಗ ಅರ್ಧಕ್ಕ ಅರ್ಧಾ ಮಂದಿಗೆ ಮೊದ್ಲ ನಾ ಬರದಿದ್ದ ಹುಬ್ಬಳ್ಳಿ- ಧಾರವಾಡ ಭಾಷಾ ತಿಳಿಯಂಗಿಲ್ಲಾ, ಅಂವಾ ಬರಿತಾನೋ ಇಲ್ಲಾ ಮಾತಾಡ್ತಾನೋ ಅನ್ನೋದ ಗೊತ್ತಾಗಂಗಿಲ್ಲಾ ಅಂತಾರ ಇನ್ನ ಹಂತಾದರಾಗ ನೀ ಹಿಂಗ ಅಂದರ ನನ್ನ ಕಥಿ ಮುಗದ ಹೋತ” ಅಂತ ಬೈದೆ.
ಅಲ್ಲಾ ಜನಾ ಇಕಿ ಬ್ಲೂ ಕಾಲಮ್ ಅಂತ ಅಂದರ ಇದ A+ ವಯಸ್ಕರಿಗಾಗಿ ಮಾತ್ರ ಅಂತ ಗಿರಮಿಟ್ ಓದೊದ ಬಿಟ್ಟರ ಏನ ಗತಿ ಅಂತೇನಿ? ಅಲ್ಲಾ ಬ್ಲೂ ಮೂನಕ್ಕ, ಬ್ಲೂ ಕಾಲಮಗೂ ಏನ ಸಂಬಂಧರಿಪಾ, ಒಟ್ಟ ಒಂದ ಏನರ ಲಾಜಿಕ್ ಹಚ್ಚಿ ಹುಚ್ಚುಚಾಕಾರ ಮಾತಾಡ್ತಾಳ ಬಿಡ್ರಿ.
ಹಂಗ ನನ್ನ ಹೆಂಡ್ತಿಗೆ ಈ ಬ್ಲೂ ಮೂನ್ ಬಗ್ಗೆ ಹೇಳಿದಂವ ನಾನ, ಇಲ್ಲಾಂದರ ಇಕಿಗೆ ಹನಿಮೂನ ಬಿಟ್ಟ ಬ್ಯಾರೆ ಮೂನ ಗೊತ್ತ ಇರಲಿಲ್ಲ. ಹದಿನೆಂಟ ವರ್ಷದ ಹಿಂದ ನಾ ಒಂದನೇ ಹನಿಮೂನಗೆ ಹೋಗೊ ಟೈಮ ಒಳಗ ಬ್ಲೂ ಮೂನ್ ಬಂದಿತ್ತ ಆವಾಗ ನಾ ಇಕಿಗೆ
’ನೋಡ ನಾವು ಹನಿಮೂನಗೆ ಹೊಂಟದ್ದಕ್ಕ ಈ ಸರತೆ ಒಂದ ತಿಂಗಳದಾಗ ಎರಡೆರಡ ಹುಣ್ಣಮಿ ಬಂದಾವ, ಅದರಾಗ ನನ್ನ ಜೊತಿ ನೀ ಬ್ಯಾರೆ ಇದ್ದಿ..ನೀ ಅಂತೂ ಅಮವಾಸಿ ಕಾಣಲಾರದ ಹುಣ್ಣಮಿ ಇದ್ದಂಗ’ ಅಂತ ಹವಾ ಹಾಕಿ ಒಂದ ಕ್ಯಾಲೆಂಡರ ತಿಂಗಳದಾಗ ಎರಡ ಹುಣ್ಣಮಿ ಬಂದರ ಎರಡನೇ ಹುಣ್ಣಮಿಗೆ ಬ್ಲೂ ಮೂನ್ ಡೇ ಅಂತಾರ ಅಂತ ತಿಳಿಸಿ ಹೇಳಿದ್ದೆ. ಅಕಿ ಅದನ್ನ ಇನ್ನೂ ನೆನಪ ಇಟಗೊಂಡ ನಂದ ಈ ತಿಂಗಳ monthly quota ಎರಡ ಕಾಲಮ್ ಬಿಟ್ಟ ಮೂರ ಕಾಲಮ್ ಬರ್ತಾವ ಅದಕ್ಕ ಇಕಿ extra column ಗೆ ನಿಲಿ ಕಾಲಮ್ ಅಂತ ಹೆಸರ ಇಟ್ಟಾಳ ಇಷ್ಟ.
ಅಲ್ಲಾ ಹಂಗ ನಾ ಆವಾಗ ಇವಾಗ ಬ್ಲಾಗ ಬರೇಯೋದು, ಪ್ರಹಸನಾ ಬರೇಯೋದು, ಮ್ಯಾಲೆ ಎರಡ ಬುಕ್ ಬ್ಯಾರೆ ಬರದೇನಿ ಅಂತೇಲ್ಲಾ ಮೊದ್ಲ ನಮ್ಮ ಹೊಸಾ ಓಣ್ಯಾಗ ಗೊತ್ತಿರಲಿಲ್ಲಾ, ಹಂಗ ಯಾರರ ಮುತ್ತೈದಿ ನಮ್ಮ ಮನಿಗೆ ಬಂದ ಹೋಗಬೇಕಾರ ಇಕಿ ಅರಿಷಣ ಕುಂಕಮಾ ಹಚ್ಚಿ ಮನ್ಯಾಗ ಜಂಪರ್ ಪೀಸ್ ಲಗೂನ ಸಿಗಲಿಲ್ಲಾ ಅಂದರ ಅದರ ಬದ್ಲಿ ನನ್ನ ’ಕುಟ್ಟವಲಕ್ಕಿ’ ಇಲ್ಲಾ ’ಗೊಜ್ಜವಲಕ್ಕಿ’ಬುಕ್ ಉಡಿ ತುಂಬಿ ಕಳಸ್ತಿದ್ದಳು.
’ಏ ಎಲ್ಲಾ ಬಿಟ್ಟ ನನ್ನ ಬುಕ್ ಯಾಕ ಕೊಟ್ಟಿ’ ಅಂತ ಕೇಳಿದರ
’ಅಯ್ಯ….ಮನ್ಯಾಗ ರಗಡ ಬಿದ್ದಾವ ತೊಗೊರಿ, ಹಿಂಗರ ಖಾಲಿ ಆಗಲಿ’ ಅಂತ ಕೊಟ್ಟ ಕಳಸೋಕಿ, ಅವರೇನರ
’ಏ, ನಿನ್ನ ಗಂಡ ಬುಕ್ ಬರದಾನೇನ?’ ಅಂತ ಕೇಳಿದರ
’ಏ ಅವರೆನ ದೊಡ್ಡ ರೈಟರ್ ಅಲ್ಲಾ…..ಹುಣ್ಣಮಿಗೊಮ್ಮೆ- ಅಮವಾಸ್ಸಿಗೊಮ್ಮೆ ಬರಿತಾರ, ಹಂತಾವನೇಲ್ಲಾ ಸೇರಿಸಿಸಿ ಎರಡ ಬುಕ್ ಮಾಡ್ಯಾರ, ಮನ್ಯಾಗ ರಗಡ ಬಿದ್ದಾವ ತೊಗೊಂಡ ಹೋಗ್ರಿ’ ಅಂತ ಕೊಟ್ಟ ಕಳಸ್ತಿದ್ಲು.
ನಂಗರ ತಲಿ ಕೆಡ್ತಿತ್ತ ಖರೆ ಆದರ ಅಕಿ ಹೇಳಿದ್ದು ಖರೆ ಇತ್ತ ಅಂತ ಸುಮ್ಮನಾಗತಿದ್ದೆ.
ಒಮ್ಮೊಮ್ಮೆ ಅನಸ್ತದ ಹಿಂಗ ನನ್ನ ಹೆಂಡ್ತಿ ಎಲ್ಲಾರ ಮುಂದ ’ನಮ್ಮ ಮನೆಯವರೇನ ಹುಣ್ಣಮಿಗೊಮ್ಮೆ ಅಮವಾಸ್ಸಿಗೊಮ್ಮೆ ಬರಿತಾರ’ ಅಂತ ಅಂದದ್ದನ್ನ ನಮ್ಮ ಎಡಿಟರ್ ಕೇಳಿಸಿಗೊಂಡ ’ನೀ ಹದಿನೈದ ದಿವಸಕ್ಕೊಮ್ಮೆ ಇಷ್ಟ ಬರೀ ತಮ್ಮಾ ಸಾಕ’ ಅಂತ ಹೇಳಿರಬೇಕು ಅಂತ.
ಅಲ್ಲಾ ಹಂಗ ಇಕಿ ನಮ್ಮ ಮನೆಯವರಿಗೆ ಕೆಲಸ ಇಲ್ಲಾ ಬೊಗಿಸಿಲ್ಲಾ ವಾರ ಏನೇನರ ಸುಟ್ಟು ಸುಡಗಾಡ ಬರೀತಾರ ಅಂತ ಅಂದಿದ್ದರ ನಂದೂ ವಾರಾ ಕಾಲಮ್ ಬರ್ತಿತ್ತೋ ಏನೋ?
ಇರಲಿ ಆಗಿದ್ದೇಲ್ಲಾ ಒಳ್ಳೆದ ಆಗತದ ಅಂತಾರ. ಹಿಂಗಾಗಿ ಹದಿನೈದ ದಿವಸಕ್ಕೊಮ್ಮೆ ಗಿರಮಿಟ್ ಅಂಕಣ ಬರಕೋತ ಹೋಂಟೇನಿ. ಹಂಗ ಹದಿನೈದ ದಿವಸಕ್ಕೊಮ್ಮೆ ಬರದರು ಈ ತಿಂಗಳ ಗಿರಮಿಟ್ ಮೂರ ಸರತೆ ಬರ್ತದ ಅಂತ ಇಷ್ಟ ರಾಮಾಯಣ ಆಗಿದ್ದ.
ಯಾವಾಗ ನಾ ಪೇಪರನಾಗ ಬರಿಲಿಕತ್ತೆ ಆವಾಗ ಯಾರರ
’ನಿಮ್ಮ ಮನೆಯವರ ವಿಜಯವಾಣಿ ಒಳಗ ಬರಿತಾರಂತ…ಯಾವಾಗ ಬರೀತಾರ ಸ್ವಲ್ಪ ಹೇಳ್ರಿ?’ ಅಂತ ಅಂದರ ಇಕಿ
’ನಮ್ಮ ಮನೇಯವರ ಬ್ಯಾಂಕ ಸೂಟಿ ಇದ್ದಾಗಿಷ್ಟ ಬರೀತಾರ’ ಅಂತಿದ್ಲು…. ಯಾಕಂದರ ನನ್ನ ಕಾಲಮ್ ಸ್ಟಾರ್ಟಿಂಗಗೇ ಸೆಕಂಡ್ ಶನಿವಾರ ಮತ್ತ ನಾಲ್ಕನೇ ಶನಿವಾರ ಅಂದರ ಬ್ಯಾಂಕ ಸೂಟಿ ಇದ್ದಾಗ ಇಷ್ಟ ಬರ್ತಿತ್ತ.
ಅದನ್ನ ಕೇಳಿ
’ನಿಮ್ಮ ಮನೆಯವರ ಬ್ಯಾಂಕಿನಾಗ ನೌಕರಿ ಮಾಡ್ತಾರೇನ್?’ ಅಂತ ಬಾಜು ಮನಿ ಊಮಾ ಅಂಟಿ ಕೇಳಿದರ. ಇಕಿ
“ಏ, ಹೋಗರಿ ಅವರದೇಲ್ಲ ಬ್ಯಾಂಕ ನೌಕರಿ…. ಇಲ್ಲೇ ಇಂಡಸ್ಟ್ರೀಯಲ್ ಎಸ್ಟೇಟನಾಗ ಒಂದ ಮಾರಾವಾಡಿ ಕಂಪನ್ಯಾಗ ಮ್ಯಾನೇಜರ ಅಂತ ಕೆಲಸಾ ಮಾಡ್ತಾರ’ ಅಂತ ಅಂದ್ಲು.
ಅದನ್ನ ಕೇಳಿ ನಂಗ ತಲಿಕೆಟ್ಟತ…ಅಲ್ಲಾ ಗಂಡಗ ಎಲ್ಲೇರ ಈ ಪರಿ ಅಸಂಯ್ಯ ಮಾಡೋದ? ಅದು ಮಂದಿ ಮುಂದ?
ನಾ ಸಿಟ್ಟಿಗೆದ್ದ
“ಲೇ, ನಂದ ಬ್ಯಾಂಕ ನೌಕರಿ ಇತ್ತಂದರ ನಿನ್ಯಾಕ ಕಟಗೊತ್ತಿದ್ದೆ, ಒಂದ ಬಿಟ್ಟ ಎರಡ ಕನ್ಯಾ ಅಗದಿ ಮನಿ ಮುಂದ ಬಂದ ಪಾಳೆ ಹಚ್ಚಿ ಕೊಟ್ಟ ಹೋಗ್ತಿದ್ದರು’ ಅಂತ ಅಂದ ಮುಂದ ಅಕಿ ಕಡೆ
’ನಿಮ್ಮ ಮಾರಿಗೆ ಒಂದ ಬಿಟ್ಟ ಎರಡ ಕನ್ಯಾ ಕೊಡ್ತಿದ್ದರಂತ ಕನ್ಯಾ……ಕಟಗೊಂಡಿದ್ದ ಒಂದನ್ನ ಛಂದಾಗಿ ಸಂಬಾಳಸರಿ ಮೊದ್ಲ ಸಾಕ’ ಅಂತ ತಿವಿಸಿಗೊಂಡ ಸುಮ್ಮನ ಕೂತೆ.
ಆದರೂ ಏನ ಅನ್ನರಿ ನನಗ ನನ್ನ ಹೆಂಡ್ತಿ ’ಇವತ್ತ ನಿಂಬದ ಬ್ಲೂ ಕಾಲಮ್ ಏನ್ರಿ?’ ಅಂತ ಅಂದಿದ್ದ ನೆನಸಿಗೊಂಡರ ನಗೂ ಬರತದ…ಅಲ್ಲಾ ವಯಸ್ಸಿಗೆ ಬಂದ ಮಕ್ಕಳಿದ್ದಾರ ಇಕಿ ಹಿಂಗ ಮಾತಾಡಿದರ ಹೆಂಗ ಅಂತೇನಿ…ನನ್ನ ಪುಣ್ಯಾ ನಾ ಅಕಿಗೆ ಬ್ಲಡ್ ಮೂನ್, ವ್ಯಾಕ್ಸಿಂಗ್ ಮೂನ್, ಹಂಟರ್ ಮೂನ, ರೆಡ್ ಮೂನ, ಫಸ್ಟ ಕ್ವಾರ್ಟರ್ ಮೂನ್ ಅದು ಇದು ಅಂತ ಇರೋ ಎಲ್ಲಾ ಸೈಂಟಿಫಿಕ್ ಮೂನದ್ದ ಡಿಟೇಲ್ಸ್ ಹೇಳಿಲ್ಲಾ, ಇಲ್ಲಾಂದರ ಇಕಿ ಅವಕ್ಕೂ ಒಂದ ಏನರ ಲಾಜಿಕ ಹಚ್ಚಿ ಏನರ ಅನ್ನೋಕಿನ ಆ ಮಾತ ಬ್ಯಾರೆ.
ಇರಲಿ ಹಂಗ ಅಕಿ ಏನರ ಅನ್ನವಳ್ಳಾಕ..ನೀವು ತಪ್ಪ ತಿಳ್ಕೊಬ್ಯಾಡ್ರಿ ಮತ್ತ……ನಾ ಹುಣ್ಣಮಿಗೊಮ್ಮೆರ ಬರೆಯವಲ್ಲನಾಕ, ಅಮವಾಸಿಗೊಮ್ಮೆರ ಬರಿಯವಲ್ಲನಾಕ..ನಾ ಬರದಾಗೊಮ್ಮೆ ನೀವು ಓದತೀರಿ. ಹಂಗ ನಾ ಗಿರಮಿಟ್ ಅಂಕಣ ಬರಿಲಿಕತ್ತ ಒಂದ ವರ್ಷ ಆಗಲಿಕ್ಕೆ ಬಂತ, ನೀವೇಲ್ಲಾ ನಮ್ಮ ಹುಬ್ಬಳ್ಳಿ-ಧಾರವಾಡ ಆಡು ಭಾಷೆ ಒಳಗ ಬರದ ನನ್ನ ಪ್ರಹಸನ ಎಂಜಾಯ್ ಮಾಡ್ಲಿಕತ್ತೀರಿ ಅಂತ ಅನ್ಕೊಂಡೇನಿ. ನಿಮ್ಮ ಅಭಿಪ್ರಾಯ ಆವಾಗ ಇವಾಗ ತಿಳಸ್ತಿರ್ರಿ ಮತ್ತ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ