ನಾವ ಸಣ್ಣೋರಿದ್ದಾಗ ಗಣಪತಿ ಕೂಡಸೋ ಹಬ್ಬ ಬಂದರ ಮುಗದಹೋತ, ಅದ ಒಂದs ನಮಗ ಗಂಡಸರ ಹಬ್ಬ ಅಂತ ಅನಸ್ತಿತ್ತ. ಹಂಗ ಮನಿ ಗಣಪತಿಕಿಂತಾ ಸಾರ್ವಜನಿಕ ಗಣಪತಿಗೆ ಭಾಳ ಇಂಟರೆಸ್ಟ ಇರ್ತಿತ್ತ. ದಿವಸಾ ಮನ್ಯಾಗಿನ ಗಣಪತಿ ಮಂಗಳಾರತಿಗೆ ನಾವ ಇರಲಿಲ್ಲಾ ಅಂದರೂ ಸಾರ್ವಜನಿಕ ಗಣಪತಿದ ಎರೆಡು ಹೊತ್ತ ಮಂಗಳಾರತಿಗೆ, ಪ್ರಸಾದಕ್ಕ ಹಾಜರ ಇರ್ತಿದ್ವಿ. ಮುಂದ ನಮ್ಮಪ್ಪ ನನಗ ಮುಂಜ್ವಿ ಮಾಡಿ
’ಇನ್ನ ಮುಂದ ಮನಿ ಮಂಗಳಾರತಿ ನಿಂದ ಮಗನ ನಾ ಮೂರ-ನಾಲ್ಕ ಮನಿ ಮಂಗಳಾರತಿಗೆ ಹೋಗಬೇಕು’ ಅಂತ ತಾ ಪಾರ ಆಗಿಬಿಟ್ಟಾ.
ನಾ ಮಂಗಳಾರತಿ ಮಾಡಂಗಿಲ್ಲಾ ಅಂದರ ನಮ್ಮವ್ವ ನನ್ನ ಮಂಗಳಾರತಿ ಮಾಡೋಕಿ.
ಇನ್ನ ದೋಸ್ತರೇಲ್ಲಾ ಗಣಪತಿ ಹಬ್ಬ ಬಂತ ಅಂದರ ’ನೀವು ಕೂಡಸ್ತಿರೇನಲೇ, ಎಷ್ಟ ದಿವಸ ಕೂಡಸ್ತೀರಿ?’ ಅಂತ ಒಬ್ಬೊರಿಗೊಬ್ಬರ ಕೇಳೊದ, ದೋಸ್ತರ ಮನಿಗೆ ಗಣಪತಿ ನೋಡ್ಕೊಂಡ ಬರಲಿಕ್ಕೆ ಹೋಗೊದ, ಆಮ್ಯಾಲೆ ರಾತ್ರಿ ಬೆಳತನಕ ಸಾರ್ವಜನಿಕ ಗಣಪತಿ ನೋಡ್ಲಿಕ್ಕೆ ಹೋಗೊದ, ಮುಂದ ’ನೀವ ಯಾವಾಗ ಗಣಪತಿ ಕಳಸ್ತಿರಿ?’ ಅಂತ ಕೇಳೋದು, ಅವರ ಮನಿ ಗಣಪತಿ ಕಳಸಲಿಕ್ಕೆ ಹೋಗೋದ ಎಲ್ಲಾ ಭಾರಿ ಇರ್ತಿತ್ತ. ಹಂಗ ನಾವು ಪಟಾಕ್ಷಿ, ಚುನಮರಿ, ಖಾರದ್ದ ಆಶಾಕ್ಕ ’ಗಣಪತಿ ಬಪ್ಪಾ ಮೋರೇಯಾ…. ಮೋರೇಯಾ’ ಅಂತ ಅಗದಿ ಹೆಣ್ಣಮಕ್ಕಳ ಹೆಂಗ ಅರಷಣ-ಕುಂಕುಮಕ್ಕ ಹೋಗ್ತಾರ ಹಂಗ ಮನಿ-ಮನಿಗೆ ಗಣಪತಿ ಕಳಸಲಿಕ್ಕೆ ಹೋಗ್ತಿದ್ವಿ.
ಆ ರಂಗ ಈಗ ಇಲ್ಲಾ, ಆ ವಯಸ್ಸು ನಮಗಿಲ್ಲಾ ಮ್ಯಾಲೆ ಇತ್ತೀಚಿಗೆ ಕೊರೊನಾ ಬಂದ ಸಾರ್ವಜನಿಕ ಗಣಪತಿದ ಕಳಾನೂ ಕಡಿಮೆ ಆಗೇದ ಅನ್ನರಿ.
ಇನ್ನ ನಮ್ಮ ಮನ್ಯಾಗ ನಾವ ಗಣಪತಿ ಆರನೇ ದಿವಸಕ್ಕ ಕಳಸ್ತೇವಿ. ನಾ ’ಆರನೇ ದಿವಸಕ್ಕ ನಮ್ಮ ಗಣಪತಿ ಕಳಸ್ತೇವಿ’ ಅಂತ ಅಂದರ ನಮ್ಮ ದೋಸ್ತರ ನಗತಿದ್ದರು.
’ಅದ ಹೆಂಗಲೇ….ಜಗತ್ತಿನಾಗ ಯಾರೂ ಆರನೇ ದಿವಸಕ್ಕ ಕಳಸಂಗಿಲ್ಲಾ, ನೀವ ಹೆಂಗ ಕಳಸ್ತೀರಿ ಮಗನ…ನೀವ ಭಟ್ಟರಂತ ನಿಮಗ ತಿಳದಾಗ ಕಳಸ್ತೀರೇನ?’ ಅಂತ ಒಬ್ಬೊಂವ ಅಂದರ ಇನ್ನೊಬ್ಬಂವಾ
’ಲೇ…ಅವರಪ್ಪಾ ಐದನೇ ದಿವಸ ಮಂದಿ ಮನಿ ಗಣಪತಿ ಕಳಸಲ್ಲಿಕ್ಕೆ ಭಟಕಿ ಮಾಡ್ಕೋತ ಮನಿ ಮನಿ ಅಡ್ಡಾಡತಿರ್ತಾನ ಮನಿ ಗಣಪತಿ ಕಳಸಲಿಕ್ಕೆ ಪುರಸತ್ತ ಇರಂಗಿಲ್ಲಾ ಹಿಂಗಾಗಿ ಆರನೇ ದಿವಸಕ್ಕ ಕಳಸ್ತಿರಬೇಕ ತೊಗೊ’ ಅಂತ ಕಾಡಸೋರ.
ಅಲ್ಲಾ ಹಂಗ ಅವರ ಅನ್ನೋದ ನಂಗ ಕರೆಕ್ಟ ಅನಸ್ತಿತ್ತ. ನಾ ಗಣಪತಿ ಇಟ್ಟ ದಿವಸ ಕಳಸೋರನ, ಮರದಿವಸ ಕಳಸೋರನ, ಮೂರನೇ ದಿವಸಕ್ಕ ಕಳಸೋರನ, ಐದನೇ ದಿವಸ ಮತ್ತ ಅನಂತ ಚತುರ್ದಶಿಗೆ ಕಳಸೋರನ ನೋಡಿದ್ದೆ ಆದರ ಆರನೇ ದಿವಸ ಕಳಸೋರ ನಾವ ಒಬ್ಬರ.
ನಂಬದ ಹಿಂಗ್ಯಾಕ ಅಂತ ನಮ್ಮವ್ವಗ ಕೇಳಿದರ ಅಕಿ
’ಇಲ್ಲಾ ನಮ್ಮ ಮನ್ಯಾಗ ದಾರಾ ಕಟಗೋಳೊ ದಿವಸ, ನವಮಿ ತಿಥಿಗೆ ಗಣಪತಿ ಕಳಸೊ ಪದ್ಧತಿ, ಅದ ಅಷ್ಟಮಿ ಮರದಿವಸ ಬರ್ತದ ಹಿಂಗಾಗಿ ನಾರ್ಮಲಿ ಆರನೇ ದಿವಸನ ಬರ್ತದ ಒಮ್ಮೋಮ್ಮೆ ಏಳನೇ ದಿವಸ ಬರತದಪಾ’ ಅಂತ ತಿಳಿಸಿ ಹೇಳ್ತಿದ್ಲು. ಆದರ ಇದನ್ನ ನಮ್ಮ ದೋಸ್ತರಿಗೆ ಹೇಳಿದರ ಅವರ
’ಮಗನ ನೀವ ಪದ್ಧತಿ ಮಾಡೋರಂತ ನಿಮಗ ಹೆಂಗ ಬೇಕ ಹಂಗ ಮಾಡ್ಕೋತೀರಿ ತೊಗೊ’ ಅಂತಿದ್ದರ.
ಈ ಇಶ್ಯೂ ವರ್ಷಾ ಬರೋದ ನಾ ಮತ್ತ ಅದನ್ನ ಹೇಳೋದ ಕಾಮನ್ ಆಗಿತ್ತ.
ಮುಂದ ಹುಬ್ಬಳ್ಳ್ಯಾಗ ಗಣಪತಿ ಕಳಸಲಿಕ್ಕೆ ಒಂದ ಹೊಸಾ ಪ್ರಾಬ್ಲೇಮ್ ಸ್ಟಾರ್ಟ ಆತ. ಸ್ವಂತ ಭಾವಿ ಇದ್ದೋರ ತಮ್ಮ ಭಾವಿ ಒಳಗ ಮತ್ತೊಬ್ಬರ ಮನಿ ಗಣಪತಿ ಕಳಸಲಿಕ್ಕೆ ಕೊಡೋದ ಬಂದ ಮಾಡ್ಲಿಕತ್ತರ. ಹಿಂಗಾಗಿ ’ನೀವು ಗಣಪತಿ ಎಷ್ಟ ದಿವಸಕ್ಕ ಕಳಸ್ತಿರಿ?’ ಜೊತಿಗೆ ’ನೀವು ಗಣಪತಿ ಎಲ್ಲೇ ಕಳಸ್ತೀರಿ?’ ಅಂತ ಕೇಳೋದ ಶುರು ಆತ. ನಾವ ಒಂದ ವರ್ಷ ಮಂಗಳವಾರ ಪೇಟದಾಗ ಇನಾಮದಾರಮಠದವರ ಮನ್ಯಾಗಿನ ಭಾವ್ಯಾಗ ಕಳಸಿದರ ಮುಂದಿನ ವರ್ಷ ಘಂಟಿಕೇರಿ ಒಳಗ ಆಲೂರವರ ಮನಿ ಭಾವ್ಯಾಗ ಕಳಸ್ತಿದ್ವಿ ಮತ್ತ ಮುಂದಿನ ವರ್ಷ ಆಮಟೆಚಾಳ ಭಾವಿ. ಹಿಂಗ ವರ್ಷಾ ಒಬ್ಬೊಬ್ಬರ ಮನಿ ಭಾವಿ ಹುಡಕೋ ಪ್ರಸಂಗ ಬರಲಿಕತ್ತ. ಹಗಲ ಹೊತ್ತಿನಾಗ ಹೋಗಿ ಭಾವಿ ಹುಡಕಿ ರಾತ್ರಿ ಕಳಸೋರ. ಅದರಾಗ ನಂಬದಂತು ಆರನೇ ದಿವಸ ಬ್ಯಾರೆ, ಘಂಟಿಕೇರಿತನಕ ನಾ ಘಂಟಿ ಬಾರಿಸ್ಗೋತ ಹೊಂಟರ ಊರ ಮಂದೇಲ್ಲಾ ನಮ್ಮನ್ನ ನೋಡೋರ. ನಂಗರ ಭಾರಿ ಎಂಬಾರೆಸಿಂಗ್ ಆಗ್ತಿತ್ತ.
ಕಡಿಕೆ ನಮ್ಮಪ್ಪ ತಲಿಕೆಟ್ಟ ಮುಂದಿನ ವರ್ಷದಿಂದ ಸುಮ್ಮನ ಮನ್ಯಾಗ ಒಂದ ಬಕೇಟನಾಗ ಗಣಪತಿ ಕಳಸಿ ಮುಂದ ಆ ಮಣ್ಣ ತುಳಸಿಕಟ್ಟಿಗೆ ಹಾಕಿದರಾತು ಅಂತ ಡಿಸೈಡ ಮಾಡಿದಾ. ಆದರ ನಮ್ಮಜ್ಜಾ
’ಏ…ಅದೇಲ್ಲಾ ಯಾಕ, ಪಂಚಲೋಹದ ಗಣಪತಿ ಇಟ್ಟ ಬಿಡ. ವಿಸರ್ಜನಾ ಅನ್ನೋದ ವಿಧಿ, ವಿಸರ್ಜನ ಮಂತ್ರಾ ಹೇಳಿ ಬಿಟ್ಟರ ಮುಗಿತ. ಭಾವಿಗೇ ಕಳಸಬೇಕ ಅಂತ ಇಲ್ಲಾ, ಸುಮ್ಮನ ಅಲ್ಲೆ-ಇಲ್ಲೆ ಇಡಬಾರದು ಅಂತ ಭಾವಿಗೆ ಕಳಸ್ತಾರ ಇಷ್ಟ. ನೀ ಪಂಚಲೋಹದ ಗಣಪತಿ ಮಂತ್ರಾ ಹೇಳಿ ವಿಸರ್ಜನಾ ಮಾಡಿ ಮರದಿವಸ ತೊಳದ ಕಪಾಟನಾಗ ಇಟ್ಟ ಮತ್ತ ಮುಂದಿನ ವರ್ಷ ಅದನ್ನ ಇಡ’ ಅಂತ ಹೇಳಿ ಬಿಟ್ಟಾ. ತೊಗೊ ನಮ್ಮಪ್ಪಗೂ ಅದ ಬೇಕಾಗಿತ್ತ. ಒಂದ ಐದನೂರ ರೂಪಾಯಿ ಸಾಲಾ ಮಾಡಿ ಪಂಚಲೋಹದ ಗಣಪತಿಗೆ ಮ್ಯಾಲೆ ಬೆಳ್ಳಿ ಗಿಲಿಟ್ ಹೊಡಿಸಿ ಮುಂದಿನ ವರ್ಷ ತಂದ ಬಿಟ್ಟಾ.
ಯಾವಾಗ ನಮ್ಮ ದೋಸ್ತರಿಗೆ ಇದ ಗೊತ್ತಾತ ಅವರ ಮತ್ತ
’ನಾವ ಹೇಳಿಲ್ಲಾ, ನೀವು ಅನಕೂಲ ಸಿಂಧುಲೇ…ನಿಮಗ ಹೆಂಗ ಬೇಕ ಹಂಗ ಪದ್ಧತಿ ಮಾಡ್ತಿರಿ ಮಕ್ಕಳ’ ಅಂತ ಡೈಲಾಗ ಹೊಡಿಲಿಕತ್ತರ. ನಾ ಎಷ್ಟ
’ಗಣಪತಿ ವಿಸರ್ಜನಾ ಏನ ಅದ ಅಲಾ ಅದ ಒಂದ ವಿಧಿ, ಪದ್ಧತಿ, ಮಂತ್ರಾ ಹೇಳಿ ಬಿಟ್ಟರ ಮುಗಿತ. ನಾವ ಭಾವ್ಯಾಗ ಹಾಕೋದ ಡಿಸ್ಪೋಜಲ್ ಮೆಥಡ್, ಹಂಗ ಭಾವ್ಯಾಗ ಹಾಕಬೇಕ ಅಂತ ಏನ ಇಲ್ಲಾ’ ಅಂತ ತಿಳಿಸಿ ಹೇಳಿದರು ಅವರೇನ ಕೇಳ್ತಿದ್ದಿಲ್ಲಾ.
ಅಲ್ಲಾ ಅವರ ನಮಗ ’ ಅನಕೂಲ ಸಿಂಧು ಲೇ ನೀವು’ ಅಂತ ಅನ್ನೋದಕ್ಕೂ ನಾವ ಮಾಡೋದಕ್ಕೂ ಖರೇನ ಇತ್ತ. ಮ್ಯಾಲೆ ನಮ್ಮಪ್ಪಂತೂ ಖರೇನ ಅನಕೂಲ ಸಿಂಧು, ಯಾಕಂದರ ನಮ್ಮವ್ವನ ಹೆಸರ ಸಿಂಧು. ಅಂವಾ ಹೆಂಡ್ತಿ ಅನಕೂಲ ತಕ್ಕ ಕಾನೂನ ಮಾಡೊಂವಾ. ಹಿಂಗಾಗಿ ನಾ ಮುಂದ ದೋಸ್ತರ ಜೊತಿ ವಾದಸೋದ ಬಿಟ್ಟ ಬಿಟ್ಟೆ.
ಆಮ್ಯಾಲೆ ನಾ ದೊಡ್ಡಿಸ್ತನ ಮಾಡಿ ದೋಸ್ತರ ಮುಂದ ನಂಬದ ಬೆಳ್ಳಿ ಗಣಪತಿ ಅಂತ ಬ್ಯಾರೆ ಹೇಳಿದ್ದೆ, ಹಿಂಗಾಗಿ ಅವರ
’ಲೇ.. ನೀವು ಗಣಪತಿ ಯಾವ ಭಾವ್ಯಾಗ ಕಳಸ್ತಿರಿ ಹೇಳ, ಮರದಿವಸ ನಾವ ಅದರಾಗ ಜಿಗಿತೇವಿ’ ಅಂತ ಅನ್ನೋರ.
ಇನ್ನೊಂದ ಮಜಾ ಅಂದರ ಆವಾಗ ಈ ಮನ್ಯಾಗಿನ ಗಣಪತಿ, ಓಣ್ಯಾಗಿನ ಗಣಪತಿ ಜೊತಿಗೆ ಸಾಲ್ಯಾಗ ಬ್ಯಾರೆ ಎಲ್ಲಾ ಹುಡುಗರು ರೊಕ್ಕಾ ಹಾಕಿ ಗಣಪತಿ ಇಡ್ತಿದ್ವಿ. ನಾ ಗಣಿತದಾಗ ಶಾಣ್ಯಾ ಇದ್ದೇ ಅಂತ ನಂಗ ಗಣಪತಿ ಪಟ್ಟಿ ಕಲೆಕ್ಟ ಮಾಡ್ಲಿಕ್ಕೆ ಹೇಳಿದ್ದರು. ಮ್ಯಾಲೆ ’ನೀನ ಮಂಗಳಾರತಿ ಮಾಡ’ ಅಂತ ಅನ್ನೋರ.
ನಾ ’ಮಂಗಳಾರತಿ ಮಾಡಿದರ ದಕ್ಷಿಣಿ ಕೊಡಬೇಕ್ರಿಲೇ.. ನಮಗ ಮಂದಿ ಮನಿ ಊಟಕ್ಕ ಹೋದರ ಸಹಿತ ದಕ್ಷಿಣಿ ಇಸ್ಗೊಂಡ ರೂಡಾ ಇನ್ನ ಮಂಗಳಾರತಿ ಮಾಡಿದರ ಬಿಡ್ತೇವೇನ್?’ ಅಂತ ನಾ ಚಾಷ್ಟಿ ಮಾಡೋಂವಾ
’ಯಪ್ಪಾ, ನೀನ ಕಂಟ್ರಿಬ್ಯುಶನ್ ಮಾಡಿ ಗಣಪತಿ ಕೂಡಿಸಿ ಮತ್ತ ಅದರಾಗ ದಕ್ಷಿಣಿ ಹೊಡ್ಕೋತಿ ಅಲ್ಲಲೇ…ಪಾಪ ಹತ್ತೈತಿ ಮಗನ’ ಅಂತ ಅವರ ಅನ್ನೋರ.
ಇನ್ನ ನಾವ ಯಾವಾಗ ಸಡನ್ ಆಗಿ ಮಣ್ಣಿನ ಗಣಪತಿ ಇಂದ ಬೆಳ್ಳಿ ಗಣಪತಿಗೆ ಶಿಫ್ಟ ಆದ್ವಿ ಆವಾಗ ಒಂದಿಷ್ಟ ದೋಸ್ತರ
’ಲೇ..ಮಗನ ನಮ್ಮ ಕಡೆ ಸಾಲ್ಯಾಗ ಗಣಪತಿ ಕೂಡಸಲಿಕ್ಕೆ ವರ್ಷಾ-ವರ್ಷಾ ಕಾಂಟ್ರಿಬ್ಯೂಶನ್ ಇಸ್ಗೊತಿದ್ದೇಲಾ ಅದ ರೊಕ್ಕದ್ದಲೇ ನಿಮ್ಮ ಮನ್ಯಾಗ ಬೆಳ್ಳಿ ಗಣಪತಿ ಇಟ್ಟಿರೇನ?’ ಅಂತ ಕಾಡ್ಸೋರ.
ನಾ ಅದನ್ನ ಸಿರಿಯಸ್ ಆಗಿ ನಮ್ಮವ್ವಗ ಹೇಳಿದರ ಅಕಿ ಏನ ಅಂದ್ಲ ಹೇಳ್ರಿ?
’ಅದಕ್ಕ ಹೇಳಿದ್ದಪಾ ” ಭಾದ್ರಪದ ಶುಕ್ಲದ ಚೌತಿಯಂದು ಚಂದಿರನ ನೋಡಿದರೆ ಅಪವಾದ ತಪ್ಪದು” ಅಂತ ಹಿಂಗಾಗೆ ರಾತ್ರಿ ಶಮಂತಕೋಪಖ್ಯಾನ ಓದಬೇಕು, ಕೇಳಬೇಕು ಅಂತ ನಾ ಹೇಳಿದ್ದ, ನನ್ನ ಮಾತ ಎಲ್ಲೇ ಕೇಳ್ತಿ ನೀ’ ಅಂತ ಅಂದ್ಲು. ಏನ್ಮಾಡ್ತಿರಿ?
ಅಲ್ಲಾ, ಹಂಗ ಇವತ್ತಿಗೂ ಅದ ಬೆಳ್ಳಿ ಗಣಪತಿ sorry ಪಂಚಲೋಹದ ಗಣಪತಿನ ನಮ್ಮ ಮನ್ಯಾಗ ಇಡೋದ.
ಅನ್ನಂಗ ಈ ಸರತೆ ನಮ್ಮ ಮನಿ ಗಣಪತಿ ಕಳಸೋ ತಿಥಿ ಐದನೇ ದಿವಸ ಬಂದದ, ಮೂರ ಪೂಜಿಯವರು ದಾರಾ ಕಟಗಳೊದ ಅವತ್ತ. ಫ್ರೀ ಇದ್ದರ ಗಣಪತಿ ಕಳಸಲಿಕ್ಕೆ ಬರ್ರಿ.
ಮತ್ತೇಲ್ಲರ ನೀವು ’ ನೀ ಭಾರಿ ಅನಕೂಲ ಸಿಂಧು’ ಅಂತ ಅನಬ್ಯಾಡ್ರಿ ಮ್ಯಾಲೆ ’ಯಾ ಭಾವ್ಯಾಗ ಗಣಪತಿ ಕಳಸ್ತಿ ಹೇಳ ನಾವ ಅಲ್ಲೇ ಬರ್ತೇವಿ’ ಅಂತನೂ ಕೇಳಬ್ಯಾಡ್ರಿ.