ನಿನ್ನೆ ಮುಂಜ-ಮುಂಜಾನೆ ನಮ್ಮ ಹಳೇ ಓಣಿ ವಾಟ್ಸಪ್ ಗ್ರೂಪ್ ಒಳಗ ಒಂದ ನಲವತ್ತ-ಐವತ್ತ ಮೆಸೆಜ್ ಬಂದಿದ್ವು. ನಾ ಏನ ಅಂತ ನೋಡಿದರ ಗ್ರೂಪ್ ತುಂಬ ’ಓಂ ಶಾಂತಿ’,’RIP’ ಅಂತ ಇದ್ದವು. ನಾ ಗಾಬರಿ ಆಗಿ ಯಾರ ಹೋದರ ಅಂತ ನೋಡಿದರ ಒಂದ ನಮ್ಮ ಮಂಜ್ಯಾನ ಫೋಟೊ ಹಾಕಿ ಗ್ರಾಫಿಕ್ಸ್ ಮಾಡಿ ಅದರ ಮ್ಯಾಲೆ ’ಮತ್ತೆ ಹುಟ್ಟಿ ಬಾ…ಮಂಜ್ಯಾ’ ಅಂತ ಹಾಕಿದ್ದರ. ನಂಗ ಎದಿ ಧಸಕ್ಕ್ ಅಂತ. ವಾರದ ಹಿಂದ ಮಂಜ್ಯಾಂದ ಐವತ್ತನೇ ಬರ್ಥಡೇ ಅಂತ ದೋಸ್ತರೇಲ್ಲಾ ಪಾರ್ಟಿ ಮಾಡಿದ್ವಿ, ಹಂಗ ಅದರ ಬಿಲ್ ಕ್ರೇಡಿಟ್ ಕಾರ್ಡನಾಗ ನಾನ ಕೊಟ್ಟಿದ್ದೆ. ಅಂವಾ ಒಂದ ವಾರ ಬಿಟ್ಟ ಕೊಡ್ತೇನ್ಲೇ ಅಂತ ಹೇಳಿದ್ದಾ. ಅಲ್ಲಾ ಹಂಗ ಅಂವಾ ರೊಕ್ಕ ಕೊಡಲಾರದ ಹೋಗಿದ್ದಕ್ಕ ಶಾಕ್ ಆಗಿದ್ದಿಲ್ಲಾ, ಸಡನ್ ಆಗಿ ಹೋಗಿದ್ದಕ್ಕ ಶಾಕ್ ಆಗಿತ್ತ. ನಾ ಹಂತಾದ ಏನ ಆತ ಮಗಗ ಅಂತ ಬಸ್ಸ್ಯಾಗ ಫೋನ್ ಹೊಡದೆ ಅವನ ಫೋನ್ ನಾಟ್ ರಿಚೇಬಲ್, ಮತ್ತೊಂದಿಬ್ಬರಿಗೆ ಫೋನ್ ಹೊಡದರ ಅವರದ ಸ್ವಿಚ್ ಆಫ್. ಕಡಿಕೆ ಸಂಜ್ಯಾನ ಗ್ರೂಪ್ ಒಳಗ ಗ್ರಾಫಿಕ್ಸ ಮಾಡಿ ’ಮತ್ತೆ ಹುಟ್ಟಿ ಬಾ ಮಂಜ್ಯಾ’ ಅಂತ ಹಾಕ್ಯಾನ ತಡಿ ಅಂತ ಅವಂಗ ಫೋನ ಹೊಡದ್ ಏನ ಆತಲೇ ಅಂತ ಕೇಳಿದರ ಅಂವಾ
’ಏ.. ಮಗಾ ಮೊನ್ನೆ ರಾತ್ರಿ ಬಸ್ಸ್ಯಾ ಮತ್ತ ನಾಲ್ಕೈದ ಮಂದಿ ಸೇರಿ ಕಾರ ತೊಗೊಂಡ ಗೋವಾಕ್ಕ ಹೋಗ್ಯಾರ. ಅಲ್ಲೆ ಅನಮೋಡ್ ಘಾಟ ಇಳಿಬೇಕಾರ ನಿಂತಿದ್ದ ಟ್ರಕ್ಕಿಗೆ ಹೊಡದ ಅಲ್ಲೇ ಖಲಾಸ್’ ಅಂತ ಅಂದಾ. ನಂಗ ಬಾಯಿ ಕಟ್ಟಿ ಹೋತ. ಉಳದವರಿಗೆ ಏನ ಆಗಿಲ್ಲಾ, ಅವರೇಲ್ಲಾ ಆರಾಮ ಇದ್ದಾರ ಇವನ ಗಾಡಿ ಹೊಡಿಲಿಕತ್ತಿದ್ದಾ ಅಂದಾ. ತೊಗೊಂಡಿದ್ದಾ ಏನ ಅಂತ ಕೇಳಿದರ, ಅದನ್ನೇನ ಕೇಳ್ತಿಲೇ ’ ಕಾವ್ ಕಾವ್ ಕರಿತೈತಿ ಗೋವಾ ’ ಅಂತ ಹೊಟ್ಟಿತುಂಬ ತೊಗೊಂಡ ಮತ್ತ ತೊಗೊಳಿಕ್ಕೆ, ತೊಗಳ್ಕೋತ ಹೊಂಟಿದ್ದಾ ಅಂದಾ. ಅಲ್ಲಾ ನಮ್ಮ ಮಂಜ್ಯಾ ಹಂಗ ಇದ್ದಾ, ತಿಂಗಳಿಗೆ ಎರೆಡ-ಮೂರ ಸರತೆ ಗೋವಾಕ್ಕ ಹೋಗ್ತಿದ್ದಾ. ಯಾರರ ಗೋವಾಕ್ಕ ಕರದರ ಸಾಕ ಉಟ್ಟ ಅರಬಿ ಮ್ಯಾಲೆ ರೈಟ್ ಅಂತಿದ್ದಾ. ಅವನ ರಿಂಗ್ ಟೋನ್ ಸಹಿತ ’ಕಾವ್ ಕಾವ್ ಕರಿತೈತಿ ಗೋವಾ’ ಹಾಡ ಇತ್ತ.
ಇನ್ನ ಅವನ ಬ್ಯಾಕಗ್ರೌಂಡ್ ಹೇಳ್ಬೇಕಂದರ ಅವಂದ ಲಗ್ನ ಆಗಿದ್ದಿಲ್ಲಾ. ನಮ್ಮಂಗ ಸಂಸಾರದ ಜಂಜಾಟ ಇದ್ದಿದ್ದಿಲ್ಲಾ. ಹೆಸರಿಗೆ ಒಂದ ಕೆಲಸಾ. ಓಣ್ಯಾಗ ಅವರಪ್ಪ ಬಿಟ್ಟ ಹೋದ ಹಳೇ ಮನಿ. ಸಿಕ್ಕಾ ಪಟ್ಟೆ ಉಡಾಳ. ಮೈ ತುಂಬ ಚಟಾ. ಹಿಂಗಾಗಿ ಅವರವ್ವ ಅವನ ಮದ್ವಿ ಮಾಡಲಾರದ ಇವನ್ನ ಇಲ್ಲೆ ಬಿಟ್ಟ ಇವನ ತಮ್ಮನ ಜೋಡಿ ಮುಂಬಯಿ ಒಳಗ ಇರ್ತಿದ್ಲು. ಇವಂಗ ಹೇಳೋರ ಕೇಳೋರ ಯಾರು ಇದ್ದಿದ್ದಿಲ್ಲಾ.
ಆದರೂ ಹಿಂಗ ಒಮ್ಮಿಂದೊಮ್ಮಿಲೇ ಹೋದನಲಾ ಅಂತಾ ಮನಸ್ಸಿಗೆ ಭಾಳ ಹಳಹಳಿ ಅನಸ್ತ. ಅವಂದ ಬಾಡಿ ಎಲ್ಲೆ ಅದ, ತರೋರ ಯಾರ, ಅವರವ್ವಗ ತಿಳಸೋರ ಯಾರ ಅಂತ ಸಂಜ್ಯಾಗ ಕೇಳಿದೆ. ಯಾಕಂದರ ಅಂವಾ ಅವಂಗ ಭಾಳ ಕ್ಲೋಸ್ ಫ್ರೇಂಡ್, ಇಬ್ಬರೂ ಬಾಲವಾಡಿ ಬೆಂಚಮೇಟ್ ನಿಂದ ಇವತ್ತ ಟೇಬಲ್ ಮೇಟ್ಸ ಆಗಿದ್ದರು.
’ಏ ಬಸ್ಸ್ಯಾ, ದೀಪ್ಯಾ ಅಲ್ಲೇ ಇದ್ದಾರ, ಎಲ್ಲಾ ವ್ಯವಸ್ಥಾ ಆಗೇತಿ, ಅವರವ್ವ ಬಾಂಬೆದಿಂದ ಡೈರೆಕ್ಟ ಮುಂಜಾನಿ ಫ್ಲೈಟಗೆ ಗೋವಾಕ್ಕ ಹೋಗ್ಯಾಳ’ ಅಂತ ಹೇಳಿದಾ. ಮತ್ತ ನೀ ಹೋಗಂಗಿಲ್ಲೇನ ಅಂತ ಕೇಳಿದೆ ’ಇಲ್ಲಾ ನಾ ಇಲ್ಲಿಂದ ಹೋಗಿ ಮುಟ್ಟೋತನಕಾ ಇಡ್ಲಿಕ್ಕೆ ಆಗಂಗಿಲ್ಲಂತ, ಹೆಂಗಿದ್ದರೂ ನಮ್ಮನ್ನ ಬಿಟ್ಟ ಹೋದ ದೋಸ್ತರ ಅದಾರಲಾ ಅವರ ಮುಗಿಸ್ಕೊಂಡ ಬರ್ತಾರ, ನಾವ ಇಲ್ಲೇ ಸಂಜಿಗೆ ಶೃದ್ಧಾಂಜಲಿ ಸಭಾ ಮಾಡೋಣ ತೊಗೊ’ ಅಂದಾ.
ನಂಗ ಮನಸ್ಸಿಗೆ ಸಮಾಧಾನನ ಇರಲಿಲ್ಲಾ. ಮತ್ತ ಬಸ್ಸ್ಯಾಗ ಗೋವಾದಾಗ ಏನ ನಡದದ, ಅವರವ್ವ ಬಂದ್ಲ ಏನ ಅಂತ ಫೋನ್ ಹಚ್ಚೆ-ಹಚ್ಚಿದೆ ಮತ್ತು ಅವಂದ ನಾಟ್ ರೀಚೇಬಲ್, ಇನ್ನೊಂದಿಬ್ಬರದ ಸ್ವಿಚ್ ಆಫ್.
ಹಂಗ ಅಂವಾ ತನ್ನ ಐವತ್ತನೇ ಬರ್ಥಡೇ ಗೋವಾಕ್ಕ ಹೋಗಿ ಡೆಸ್ಟಿನೇಶನ್ ಬರ್ಥಡೇ ಮಾಡೋಣ, ಡೇಸ್ಟಿನೇಶನ್ ವೆಡ್ಡಿಂಗ್ ಮಾಡ್ಕೊಬೇಕ ಅಂದರ ಕನ್ಯಾ ಅಂತೂ ಸಿಗಲಿಲ್ಲಾ ಅಂತ ಅಂದಿದ್ದಾ. ಇನ್ನ ನಾ ಗೋವಾಕ್ಕ ಹಗಲಗಲಾ ಬರಂಗಿಲ್ಲಾ ನನ್ನ ಹೆಂಡ್ತಿ ಬೈತಾಳ ಅಂದಿದ್ದಕ್ಕ ನನ್ನ ಸಂಬಂಧ ಪಾಪ ಹುಬ್ಬಳ್ಳಾಗ ಒಂದ ಪಾರ್ಟಿ ಕೊಟ್ಟ
’ಈ ಪಾರ್ಟಿ ಚಂಚಗಾರ ಅಂತ ತಿಳ್ಕೋರಿ, ಮುಂದಿನವಾರ ಗೋವಾಕ್ಕ ಹೋಗಿ ಮತ್ತ ಪಾರ್ಟಿ ಮಾಡೋಣ’ ಅಂತ ಹೇಳಿದ್ದಾ. ಆದರ ಹಿಂಗ ರಾತ್ರೋ ರಾತ್ರಿ ಹೋಗಿದ್ದ ಗೊತ್ತ ಇದ್ದಿದ್ದಿಲ್ಲಾ.
ಮುಂದ ಸಂಜಿ ನಾಲ್ಕ ಆಗಿತ್ತ ಬಸ್ಸ್ಯಾಂದ ಫೋನ್ ಬಂತ, ನಾ ಫೋನ ಎತ್ತಿದವನ
’ಎಲ್ಲಾ ಮುಗಿತೇನಪಾ’ ಅಂದೆ..
’ಈಗ ಮುಗಿಸಿ ಬಂದ್ವಿ ನೋಡ…ಅಲ್ಲೆ ನೆಟವರ್ಕ್ ಇರಲಿಲ್ಲಾ’ ಅಂತ ಕೂಲ್ ಆಗಿ ಅಂದಾ.
’ಮಂಜ್ಯಾಗ ಹಿಂಗ ಆಗಬಾರದಿತ್ತಲೇ’ ಅಂತ ನಾ ಅಂದರ
’ನಾ ಎಷ್ಟ ಹೇಳಿದೆ ಹೋಗೊದ ಬ್ಯಾಡಲೇ ಅಂತ ನನ್ನ ಮಾತ ಎಲ್ಲೇ ಕೇಳ್ತಾನ ಮಗಾ’ ಅಂತ ಅಂದಾ.
’ಉಳದವರಿಗೆ ಏನ ಆಗಿಲ್ಲ ಹೌದಿಲ್ಲ?’ ಅಂತ ನಾ ಕೇಳಿದರ
’ನಮಗೇನ ಆಗೇದ ಧಾಡಿ…ನಾವ ಏನ ಆಡ್ಲಿಕ್ಕೆ ಹೋಗಿಲ್ಲಪಾ, ಅಂವಾ ಆಡಿದಾ, ಅಂವಾ ಸೋತಾ…ಜಗಳಾ ತಗದ ಹೊಡ್ತಾ ತಿಂದಾ, ನಾವ ಬಿಡಿಸಿಕೊಂಡ ಬಂದ್ವಿ’ ಅಂದಾ.
ನಂಗ ಒಮ್ಮಿಕ್ಕಲೇ ಅಂವಾ ಏನ ಹೇಳಲಿಕತ್ತಾನ ಅಂತ ಅರ್ಥನ ಆಗಲಿಲ್ಲಾ ’ಲೇ..ನೀ ಏನ ಹೇಳಲಿಕತ್ತಿಲೇ..ಕರೆಕ್ಟ ಹೇಳ’ ಅಂತ ಅಂದರ
ಅದಲೇ ಎಷ್ಟ ಬ್ಯಾಡ ಅಂದರೂ ಕ್ಯಾಸಿನೋಕ್ಕ ಕರಕೊಂಡ ಹೋದಾ, ಒಂದ ದಿವಸ ಅಲ್ಲೇ ಇದ್ವಿ, ಮೊದ್ಲ ಗೆದ್ದಾ, ಆಮ್ಯಾಲೆ ಇದ್ದದ್ದ ಬಿದ್ದದ್ದ ಎಲ್ಲಾ ಸೋತ, ನಶೆದಾಗ ಯಾರದೊ ಜೊತಿ ಜಗಳಾ ತಗದ ಹೊಡ್ತಾ ತಿಂದಾ. ಕಡಿಕೆ ನಾವ ಈಗ ಅವಂಗ ಎಳ್ಕೊಂಡ ಕ್ಯಾಸಿನೋ ಶಿಪ್ ಬಿಟ್ಟ ದಂಡಿಗೆ ಬಂದೇವಿ ಇನ್ನೊಂದ ಅರ್ಧಾ ತಾಸಿಗೆ ಇಲ್ಲಿಂದ ಬಿಡ್ತೇವಿ ಅಂದಾ.
ನಾ ಹಂಗರ ವಾಟ್ಸಪ್ ನೋಡಿಲ್ಲ ಏನ ನೀವೇಲ್ಲಾ ಅಂತ ಕೇಳಿದರ, ಎಲ್ಲಿದಲೇ ಮಾತಾಡಾಕ ನೆಟವರ್ಕ್ ಇಲ್ಲಾ ಮ್ಯಾಲೆ ಮೋಬೈಲ್ ಚಾರ್ಜಿಂಗ್ ಇಲ್ಲಾ, ಯಾಕ ಏನಾತ ಅಂತ ಕೇಳಿದಾ. ಏನಿಲ್ಲ ತೊಗೊಪಾ…ನೀವ ಆರಾಮ ಬರ್ರಿ ಅಂತ ನಾ ಪೋನ್ ಇಟ್ಟೊವನ ವಾಟ್ಸಪ್ ನೋಡ್ತೇನಿ ಸಂಜ್ಯಾ ಗ್ರೂಪ್ ನಾಗ ತಾ ಹಾಕಿದ್ದ ’ಮತ್ತೇ ಹುಟ್ಟಿ ಬಾ ಮಂಜ್ಯಾ’ ಗ್ರಾಫಿಕ್ಸ್ ಡಿಲೀಟ್ ಮಾಡಿ ಬಿಟ್ಟಿದ್ದಾ, ಬರೇ ಓಂ ಶಾಂತಿ, ರಿಪ್ ಮೆಸೆಜ್ ಇಷ್ಟ ಉಳದಿದ್ದವು ಯಾರ ಹೋಗ್ಯಾರ ಅನ್ನೊದ ಇರಲಿಲ್ಲಾ.
ನಾ ಸಂಜ್ಯಾಗ ಫೋನ್ ಹೊಡದ
’ಲೇ ಮಗನ ಇದ ಏನ ಮಶ್ಕೀರಿಲೇ ‘ ಅಂತ ಕೇಳಿದರ…
‘ಮತ್ತೇನಲೇ, ಮಗಾ ಮುಂದಿನವಾರ ಎಲ್ಲಾರೂ ಕೂಡಿ ಗೋವಾಕ್ಕ ಹೋಗೊದ ಅಂತ ಫೈನಲ್ ಮಾಡಿ ಆ ಬಸ್ಸ್ಯಾನ ಮಾತ ಕೇಳಿ ಒಮ್ಮಿಂದೊಮ್ಮಿಲೇ ರಾತ್ರೋ ರಾತ್ರಿ ನಂಗ ಬಿಟ್ಟ ಗೋವಾಕ್ಕ ಹೋದಾ, ನಾ ಬಿಡ್ತೇನೇನ ಅವಂಗ’ ಅಂತ ನಂಗ ಜೋರ ಮಾಡಿದಾ.
ಯಪ್ಪಾ ದೇವರ ಇವನ ಬಿಟ್ಟ ಗೋವಾಕ್ಕ ಹೋಗಿದ್ದಕ್ಕ ಇಂವಾ ಮಂಜ್ಯಾನ್ನ ಕಥಿನ ಮುಗಿಸಿದ್ದಾ. ಅಲ್ಲಾ ಅದರಾಗ ಇಂವಾ ಮಾಡೋ ಕೆಲಸನ ಗ್ರಾಫಿಕ್ಸ್ ಡಿಸೈನಿಂಗ್, ಯಾವಾಗ ಮಂಜ್ಯಾ ಗೋವಾಕ್ಕ ಹೋಗ್ಯಾನ, ಕ್ಯಾಸಿನೋಕ್ಕ ಹೋಗ್ತಾನ, ಅವಂಗ ಸಿಗ್ನಲ್ ಸಿಗಂಗಿಲ್ಲಾ ಅಂತ ಗ್ಯಾರಂಟಿ ಆತ ಒಂದ ನೈಂಟಿ ಹೊಡದ ಗ್ರಾಫಿಕ್ಸ್ ಮಾಡಿ ರಾತ್ರಿ ಗ್ರೂಪ್ ಒಳಗ ಹಾಕಿ ಸೇಡ ತೀರಸ್ಗೊಂಡಿದ್ದಾ. ಏನ್ಮಾಡ್ತೀರಿ, ಹಿಂತಾ ದೋಸ್ತರಿಗೆ. ಯಾವಾಗ ಅಂವಾ ಕ್ಯಾಸಿನೊದಿಂದ ಹೊರಗ ಬಂದಾ ಇನ್ನ ವಾಟ್ಸಪ್ ನೋಡ್ತಾನ ಅಂತ ಗ್ಯಾರಂಟೀ ಅನಸ್ತ ಆವಾಗ ’ಮತ್ತೆ ಹುಟ್ಟಿ ಬಾ ಮಂಜ್ಯಾ’ ಗ್ರಾಫಿಕ್ಸ ಡಿಲಿಟ್ ಮಾಡಿ ಬಿಟ್ಟಾ. ಏನ್ಮಾಡ್ತೀರಿ?
ಇನ್ನೊಂದ ಮಜಾ ಕೇಳ್ರಿಲ್ಲೇ, ಕ್ಯಾಸಿನೋದಿಂದ ಹೊರಗ ಬಂದ ಮಂಜ್ಯಾ ವಾಟ್ಸಪ್ ನೋಡ್ಯಾನ, ಗ್ರೂಪ್ ಒಳಗಿನ ’ ಓಂ ಶಾಂತಿ’ ಮೆಸೆಜ್ ನೋಡಿ ಹಂಗರ ಓಣ್ಯಾಗ ಯಾರೋ ಹೋಗ್ಯಾರ ತಡಿ ಅಂತ ಯಾರ ಹೋಗ್ಯಾರ ಅಂತನೂ ನೋಡದ ತಾನೂ Rest In Peace ಅಂತ ಹಾಕಿದಾ.
ಮುಂದ? ಮುಂದ ಏನ…. ಸಂಜ್ಯಾನ ಬಿಟ್ಟ ಹೋಗಿದ್ದ ತಪ್ಪಿಗೆ ಮುಂದಿನ ವಾರ ’ಗೋವಾ ಹೋಗೊದ ತಪ್ಪೇನಿಲ್ಲಾ’ ಅಂತ ಮತ್ತ ಎಲ್ಲಾ ದೋಸ್ತರನ್ನೂ ಅವನ ಜೊತಿ ಗೋವಾಕ್ಕ ಕರಕೊಂಡ ಹೊಂಟಾನ. ಅಲ್ಲೆ ಅನಮೋಡ್ ಚೆಕ್ ಪೋಸ್ಟ ದಾಟಿ ಗೋವಾ ಬಾರ್ಡರದಾಗ ಸಂಜ್ಯಾ ಗೋವಾ ಕಡೆಯಿಂದ ಬರಬೇಕಾರ ಕಾಣೊ ಹಂಗ ’ಮತ್ತೆ ಬಾ ಮಂಜ್ಯಾ’ ಇತ್ತಲಾಗಿಂದ ಹೋಗಬೇಕಾರ ’ಗೆದ್ದ ಬಾ ಮಂಜ್ಯಾ’ ಅಂತ ಒಂದ ಬ್ಯಾನರ ಕಟ್ಟೋವ ಇದ್ದಾನ…ಇಲ್ಲಾ ನಾ ಏನ ಹೊಂಟಿಲ್ಲಾ, ಅದ ಹೇಳಿದ್ನೇಲಾ ನನ್ನ ಹೆಂಡ್ತಿ ಬೈತಾಳ ಅಂತ.
ಏ, ಹಂಗ ನಮ್ಮ ದೋಸ್ತರ ನನ್ನ ಸಂಬಂಧ ಏನರ ತಂದ ತರ್ತಾರ, ನಾನ ಗೋವಾಕ್ಕ ಹೋಗಬೇಕ ಅಂತೇನ ಇಲ್ಲಾ.
ಈ ಲೇಖನ ಪತ್ರಿಕೆ ಮತ್ತು ಬ್ಲಾಗ್ ನಲ್ಲಿ ಓದಿ ನಂಗೆ , ಮನಸಲ್ಲಿ ಒಂದು ಉಲ್ಲಾಸ ಬರಿತ ನಗು,ಮತ್ತೆ ದೋಸ್ತ್ರು ಮಾಡೋ ಕಾರ್ಬರ,ಅಂತಿ ಇಂಥವು ಅಲ್ಲ ಅನ್ಸುತ್ತೆ, ದೋಸ್ತ್ ರು ಮಾಡೋ ಮಷ್ಕಿರಿ ನಮ್ಮ ಜೀವನದಲ್ಲಿ ಬಹಳ ಖುಷಿ ಮತ್ತೆ ಅನುಭವ ಮತ್ತೊಂದು ಇಲ್ಲ ಸರ್.🙂😍😄😄😊