ಇದ ಒಂದ ಇಪ್ಪತ್ತೈದ ವರ್ಷದ ಹಿಂದಿನ ಮಾತ ಇರಬೇಕ ಬನಶಂಕರಿ ನವರಾತ್ರಿ ಬಂದಿತ್ತ, ನಮ್ಮ ಕುಲದೇವರ ಬನಶಂಕರಿ. ನಮ್ಮ ಮನ್ಯಾಗ ಬನಶಂಕರಿ ನವರಾತ್ರಿ ಅಗದಿ ಪದ್ದತ ಸೀರ ನಮ್ಮ ಶಿರ್ಶಿ ಕಾಕಾ ವರ್ಷಾ ಮಾಡ್ತಿದ್ದಾ. ಇನ್ನ ನಾವ ಕಡಿ ಮೂರ ದಿವಸದೊಳಗ ಒಂದ ದಿವಸ ಅನಕೂಲ ಆದಾಗ ಶಿರ್ಶಿಗೆ ಹೋಗಿ ಝಾಂಗಟಿ- ಗಂಟಿ ಬಾರಿಸಿ ಆರತಿ, ಮಂಗಳಾರತಿ ತೊಗೊಂಡ ಊಟಾ ಹೊಡದ ಬರ್ತಿದ್ವಿ.
ಹಂಗ ಮೊದ್ಲಿಂದ ದೇವರ ನಮ್ಮ ಕಾಕಾನ ಹಿಸೆಕ್ಕ ಹೋಗಿತ್ತ ಮತ್ತ ಅವನಂಗ ಪದ್ಧತಿ ಪ್ರಕಾರ ದಿವಸಾ ದೇವರ ಪೂಜಿ ಮಾಡೋರ ನಮ್ಮ ಮನೆತನದಾಗ ಯಾರು ಇದ್ದಿದ್ದಿಲ್ಲ ಬಿಡ್ರಿ.
ಅಂವ ಇಷ್ಟ ಛಂದ ಸಮಾಧಾನದ್ಲೆ ತಾಸ ಗಟ್ಲೆ ದೇವರ ಪೂಜೆ ದಿವಸಾ ಮಾಡ್ತಿದ್ದಾ ಅಂದರ ಒಮ್ಮೋಮ್ಮೆ ದೇವರಿಗೆ ಸಹಿತ ಬ್ಯಾಸರ ಆಗಿ
’ಸಾಕ ಮುಗಸ ಪೂಜಿ ಮಾರಾಯ…ಎಷ್ಟ ಜೀವಾ ತಿಂತಿ’ ಅನ್ನಬೇಕ ಆ ಪರಿ ಪೂಜಾ ಮಾಡ್ತಿದ್ದಾ.
ಇನ್ನ ಆ ವರ್ಷ ನನ್ನ ಲಗ್ನ ಹೊಸ್ದಾಗಿ ಆಗಿತ್ತ, ನಮ್ಮವ್ವ
’ನೀ ಹಿರೇ ಸೊಸಿ ಇದ್ದಿ, ನೀ ಹೋಗಿ ಮೂರ ದಿವಸ ಅಲ್ಲೆ ಶಿರ್ಶಿ ಕಾಕೂಗ ನವರಾತ್ರಿ ಒಳಗ ಮ್ಯಾಲಿಂದ ಹೆಲ್ಪ ಮಾಡ’ ಅಂತ ಅಕಿನ್ನ ಮೊದ್ಲ ಕಳಸಿದ್ಲು.
ಮುಂದ ಪಲ್ಯೇದ ಹಬ್ಬದ ದಿವಸ ನಾವ ಹೋದ್ವಿ. ಪಲ್ಯೇದ ಹಬ್ಬದ ದಿವಸ ಆರತಿ, ನೈವಿದ್ಯ ಉಟಾ ಆದ ಮ್ಯಾಲೆ ನಮ್ಮ ಕಾಕಾ ತನ್ನ ಕವಳದ ಚೀಲಾ ತಗದ ಎಸಳ ತಂಬಾಕ ಎಲಿ ಅಡಕಿ ತಾ ಹಾಕ್ಕೊಂಡ ಭಟ್ಟರಿಗೂ ಕೊಟ್ಟ ಹರಟಿ ಹೊಡಿಲಿಕ್ಕೆ ಶುರು ಮಾಡಿದಾ. ನಂದ ಆವಾಗ ಲಗ್ನ ಆಗಿ ಜಸ್ಟ ಒಂದ ತಿಂಗಳ ಆಗಿತ್ತ
’ಮತ್ತೆ…ಪ್ರಶಾಂತಾ…ಹೆಂತಾ ವಿಶೇಷ್ ಉಂಟಾ’ ಅಂದಾ
’ಏ.. ಲಗ್ನ ಆಗಿ ಒಂದ ತಿಂಗಳಾತ…ಹನಿಮೂನ್ ಮುಗಿಸಿ ಒಂದ ವಾರ ಆತ..ಇಷ್ಟ ಲಗೂ ಹೆಂಗೋ ಕಾಕಾ’ ಅಂತ ನಾ ಅಂದೆ…
’ಅದ ಹೆಂತ ಮಾರಾಯಾ ಈ ಹುಬ್ಳಿ ಮಂದಿಗೆ…ವಿಶೇಷ್ ಅಂದರ ಅದ ಒಂದೇನಾ’ ಅಂತ ಬೈದಾ….ಕಡಿಕೆ ಅದು- ಇದು ಮಾತಾಡ್ಕೊತ ಒಮ್ಮಿಂದೊಮ್ಮಿಲೇ ಅಲ್ಲೆ ಎಂಜಲಾ-ಗ್ವಾಮಾ ಮಾಡ್ಲಿಕತ್ತಿದ್ದ ನನ್ನ ಹೆಂಡ್ತಿ ನೋಡಿ
’ಮಳ್ಳ..ಅದ ಹೆಂತ ಹುಡ್ಗಿ ಮಾಡ್ಕೊಂಡಿ ಮಾರಾಯಾ’ ಅಂದಾ. ನಾ ಎಲ್ಲೇ ಇಕಿ ಉಂಡ ಎಂಜಲ ಕೈಲೇನ ಎಂಜಲ-ಗ್ವಾಮಾ ಮಾಡ್ಲಿಕತ್ತಾಳ ಅಂತ ತಿಳ್ಕೊಂಡ ಗಾಬರಿ ಆದೆ.
’ಯಾಕ ಏನಾತ’ ಅಂದೆ.
’ಅದಕೆ ಹೆಂತಾದೂ ಗೊತ್ತಿಲ್ಲಾ ಮಾರಾಯ, ಹಸಿ ಗೊತ್ತಿಲ್ಲಾ, ಗೊಜ್ಜ, ಸ್ವಾಸ್ವಿ ಗೊತ್ತಿಲ್ಲಾ…ತಂಬೂಳಿ ಗೊತ್ತಿಲ್ಲಾ..ಅಪ್ಪೇ ಹುಳಿ ಗೊತ್ತಿಲ್ಲಾ’ ಅಂತ ಒಂದ ಉಸಿರನಾಗ ಅಂದಾ.
’ಏ…ಅದ ಎಲ್ಲಾ ಅಕಿಗೆ ಹೆಂಗ ಗೊತ್ತಾಗಬೇಕೋ..ಅಕಿ ಉತ್ತರ ಕರ್ನಾಟಕದೊಕಿ, ನೀವು ಉತ್ತರ ಕನ್ನಡದೋರ….ಅಕಿ ಒಂದ ವಾರದ ಹಿಂದಿನ ತನಕಾ ಯು.ಕೆ ಅಂದರ ಯುನೈಟೆಡ್ ಕಿಂಗಡಮ್ ಅಂತ ತಿಳ್ಕೊಂಡಿದ್ಲು, ನಿಮ್ಮ ಅಡಿಗೆ ಅಕಿಗೇನ ಗೊತ್ತ ಪಾಪಾ’ ಅಂತ ನಾ ಹೆಂಡ್ತಿನ್ನ ಒಪ್ಪಾ ಇಟ್ಕೊಂಡೆ ಅನ್ನರಿ. ಅಲ್ಲಾ ಒಪ್ಪಾ ಇಟಗೊಳ್ಳಿಲ್ಲಾ ಅಂದರ ಹೆಂಗ ಇನ್ನೂ ಹಸಿ ಮೈ ದಂಪತ್ ನಾವ.
ಅದರಾಗ ಅಕಿ ಪಕ್ಕಾ ಉತ್ತರ ಕರ್ನಾಟಕದೋಕಿ ಅಕಿಗೆ ಝುಣಕಾ, ಭಕ್ಕರಿ, ಇಡಗಾಯಿ ಪಲ್ಲ್ಯಾ, ಕೆಂಪ ಹಿಂಡಿ, ರಂಜಕ, ಕರಿಂಡಿ ಹಿಂತಾವೇಲ್ಲಾ ಗೊತ್ತ..ಎಲ್ಲಾ ಬಿಟ್ಟ ಶಿರ್ಶಿ ಕಡೆ ಅಡಗಿ ಏನ ಗೊತ್ತಾಗಬೇಕ.
ಇನ್ನ ಇತ್ತಲಾಗ ನಾವಿಬ್ಬರು ಮಾತೋಡೊದ ಎಂಜಲಗೈಲೇ ಕೇಳಲಿಕತ್ತಿದ್ದ ನನ್ನ ಹೆಂಡ್ತಿಗೆ ನಮ್ಮ ಕಾಕಾ ಏನ ಅಂದಾ ಅನ್ನೋದ ಸರಿ ಗೊತ್ತ ಆಗಿದ್ದಿಲ್ಲಾ. ಒಟ್ಟ ಅಕಿಗೆ ತನ್ನ ಬಗ್ಗೆ ಮಾತಾಡ್ಲಿಕತ್ತಾರ ಅಂತ ಗೊತ್ತ ಆಗಿತ್ತ. ಅದರಾಗ ನಮ್ಮ ಕಾಕಾ ಶಿರ್ಶಿಯಂವಾ ಅವಂದ ಶಿರ್ಶಿ ಭಾಷಾ, ನಮ್ಮಕಿದ ನೋಡಿದರ ನೇಕಾರ ನಗರ ಹಳೇ ಹುಬ್ಬಳ್ಳಿ ಕನ್ನಡ, ಭಾಳ ತಲಿ ಕೆಡ್ತಂದರ ಅವರತ್ತಿಗೆ ’ತು ಭಾಂಡ್ಯಾ ತಿಕ್ಕ ನಾ ಗಲಬರಸಿ ಡಬ್ಬ್ ಹಾಕ್ತು’ ಅನ್ನೋ ಪೈಕಿ ಇಕಿ.
ಮ್ಯಾಲೆ ನಮ್ಮ ಕಾಕಾ ಅಗದಿ ಸ್ಪೀಡ್ ಮಾತಾಡೊಂವಾ. ಹಂಗ ಜನಾ ನಾ ಮಾತೋಡೋದ ಒಂದ ಸ್ವಲ್ಪ ಫಾಸ್ಟ ಅದ, ನಮ್ಮ ತಂಗಿಗಂತು ಎಲ್ಲಾರೂ ಶತಾಬ್ದಿ ಅಂತ ಕಾಡಸ್ತಾರ. ಇನ್ನ ಈ ಕಾಕಾ ಅಂತೂ ವಂದೇಭಾರತ ಇದ್ದಂಗ ಅನ್ನರಿ. ಮೊದ್ಲ ನಮ್ಮಕಿಗೆ ನಮ್ಮ ಕಾಕಾನ ಮಾತ ತಿಳಿತಿದ್ದಿಲ್ಲಾ, ಅದರಾಗ ಅಂವಾ ಶಿರ್ಶಿ ಸ್ಟೈಲ್ ಒಳಗ ಅದು ಬಾಯಿತುಂಬ ಕವಳಾ ಹಾಕ್ಕೊಂಡ ಮಾತಾಡಿ ಬಿಟ್ಟರ ಮುಗದ ಹೋತ…ಯಾರಿಗೂ ಒಂದ ಹೊಡ್ತಕ್ಕ ಗೊತ್ತ ಆಗ್ತಿದ್ದಿಲ್ಲಾ.
ಕಡಿಕೆ ಅಕಿ ಹಿತ್ತಲದಾಗ ಭಾಂಡಿ ತಿಕ್ಕಲಿಕ್ಕೆ ಕೂತಾಗ ನಮ್ಮವ್ವಗ ’ ಮಳ್ಳಿ’ ಅಂದರ ಏನೂ ಅಂತ ಕೇಳ್ಯಾಳ.. ನಮ್ಮವ್ವ ಮಳ್ಳಿ ಅಂದರ ಹುಚ್ಚಿ ಅಂತ ಹೇಳಿಬಿಟ್ಟಾಳ.
ಇಕಿ ಅದನ್ನ ಕೇಳಿ ತಲಿಕೆಡಸಿಕೊಂಡ ನಂಗ ಸನ್ನಿ ಮಾಡಿ ಹಿತ್ತಲದಾಗ ಭಾವಿ ಕಡೆ ಕರದ್ಲು.
ನಾ ಮೂರ ದಿವಸದಿಂದ ಇಬ್ಬರೂ ಬಿಟ್ಟ ಇದ್ವಿ ಅದಕ್ಕ ಸೈಡಿಗೆ ಕರದಿರಬೇಕ ಬಿಡ ಅಂತ ಖುಷಿಲೇ ಹೋದರ
’ನಿಮ್ಮ ಕಾಕಾ …ಹೆಂತಾ ಹುಚ್ಚ ಹುಡಗಿ ಲಗ್ನಾ ಮಾಡ್ಕೊಂಡಿ ಅಂದರು, ನೀವ ಸುಮ್ಮನ ಕೇಳ್ಕೋತ ಇದ್ದರಿ’ ಅಂತ ಜಗಳಾ ತಗದ್ಲು. ನಾ ಅಕಿಗೆ
’ಲೇ.. ಅಂವಾ ಹೇಳಿದ್ದ…ಮಳ್ಳ..ಹೆಂತಾ ಹುಡ್ಗಿ ಮಾಡ್ಕೊಂಡಿ ಅಂತ ಹೇಳಿ…ಅಂದರ ಹುಚ್ಚಾ ಹೆಂತಾ ಹುಡ್ಗಿಗೆ ಮಾಡ್ಕೊಂಡಿ ಅಂತ ಹೊರತು ಮಳ್ಳನಂತಾ ಹುಡಗಿ ಅಂದರ ಹುಚ್ಚ ಹುಡಗಿಗೆ ಮಾಡ್ಕೊಂಡಿ ಅಂತ ಅಲ್ಲಾ ಅಂತ ತಿಳಿಸಿ ಹೇಳೊದರಾಗ ರಗಡ ಆತ.
ಅಲ್ಲಾ ಆ ಮಾತಿಗೆ ಈಗ ಇಪ್ಪತ್ತೈದ ವರ್ಷ ಆತ ಬಿಡ್ರಿ…..ಈಗ ಖರೇ ಹೇಳ್ಬೆಕಂದರ ಲಗ್ನಾ ಮಾಡ್ಕೊಂಡಿದ್ದ ಒಂದ ದೊಡ್ಡ ಮಳ್ಳತನಾ ಅಂತ ಅನಸ್ತದ.
eom/-
