ಈಗ ಒಂದ ತಿಂಗಳ ಹಿಂದ ನಮ್ಮ ದೋಸ್ತ ಸೀನ್ಯಾನ ತಮ್ಮನ ಮದ್ವಿ ಫಿಕ್ಸ್ ಆಗಿತ್ತ, ನನಗ ಅಂವಾ ಒಂದ ಒಂದ ಹದಿನೈದ ದಿವಸ ಮೊದ್ಲನ
’ಲೇ….ನೀ ತಪ್ಪಸಬ್ಯಾಡಾ…ಹಂಗ ಭಾಳ ಮಂದಿ ದೋಸ್ತರಿಗೆ ಹೇಳಲಿಕತ್ತಿಲ್ಲಾ, ಯಾಕಂದರ ಇದ ಡೆಸ್ಟಿನೇಶನ್ ವೆಡ್ಡಿಂಗ್…ಮದ್ವಿ ಗೋವಾ ರಿಸಾರ್ಟ ಒಳಗ ಇಟ್ಗೊಂಡೇವಿ…ಒಂದ ಐವತ್ತ ಮಂದಿ ಇಷ್ಟ ಇಲ್ಲಿಂದ ಹೋಗೊದ….ಮತ್ತ ಮದ್ವಿಗೆ ನಿನ್ನ ಕಾರ ಬೇಕ ಮಗನ…ಕಾರ್, ಡ್ರೈವರ್ ಎಲ್ಲಾ ರೆಡಿ ಇಟ್ಗೊ’ ಅಂತ ಹೇಳಿದಾ.
ಅಲ್ಲಾ ಅಂವಾ ಅಷ್ಟೇಲ್ಲಾ ಹೇಳಿದ ಮ್ಯಾಲೆ ನನಗ ಗೊತ್ತ ಆಗಿತ್ತ, ಇಂವಾ ನನ್ನ ಕಾರ ಸಂಬಂಧ ನನಗೂ ಕರಿಲಿಕತ್ತಾನ ಅಂತ.
ಆದರೂ ಇನ್ನ ಗೋವಾ ಅಂತ ಹೇಳಿದ ಮ್ಯಾಲೆ ಹೆಂಗ ಬಿಡಲಿಕ್ಕೆ ಆಗ್ತದ. ನಮಗ ಗೋವಾಕ್ಕ ಹೋಗಲಿಕ್ಕೆ ಏನರ ಕಾರಣ ಸಿಕ್ಕರ ಸಾಕಾಗಿರ್ತದ. ಗೋವಾ ಅಂದರ ಗಂಡಮಕ್ಕಳ ತವರಮನಿ ಇದ್ದಂಗ. ನಾ ನಮ್ಮ ಮನ್ಯಾಗ ಹೆಂಡ್ತಿಗೆ ಮೊದ್ಲ
’ಸೀನ್ಯಾನ ತಮ್ಮನ ಮದ್ವಿ ಇರೋದ ಗೋವಾದಾಗ, ಗೋವಾದಾಗಿನ ಮದ್ವಿಗೆ ದಂಪತ್ ಹೋಗೊ ಪದ್ಧತಿ ಇರಂಗಿಲ್ಲಾ. ಮ್ಯಾಲೆ ಅಲ್ಲೇ ಏನ ಕಳಸಗಿತ್ತಿ ಪದ್ಧತಿನೂ ಇಲ್ಲಾ , ಹಿಂಗಾಗಿ ನೀ ಏನ ಬರೋದ ಬ್ಯಾಡ’ ಅಂತ ಹೇಳಿ
’ನಾ ಗೋವಾಕ್ಕ ಮದ್ವಿಗೆ ಇಷ್ಟ ಹೊಂಟೇನಿ, ಪಬ್, ಬೀಚ್, ಕ್ಯಾಸಿನೋ ಕಡೆ ಹಣಕಿ ಹಾಕಂಗಿಲ್ಲಾ ತೊಗೊ’ ಅಂತ ಅಕಿ ಮ್ಯಾಲೆ ಆಣಿ ಮಾಡಿ ಪರ್ಮಿಶನ್ ತೊಗೊಂಡಿದ್ದೆ.
ಅಲ್ಲಾ ಹಂಗ ಹೆಂಡಂದರ ಮ್ಯಾಲೆ ಆಣಿ ಮಾಡಿ ಗಂಡಂದರ ಆಣಿ ಎಷ್ಟ ಮುರಿತಾರ ಅಷ್ಟ ಹೆಂಡಂದರ ಆಯುಷ್ಯ ಜಾಸ್ತಿ ಆಗ್ತದ ಅಂತ ನಮ್ಮ ಮಾಮಾ ಹೇಳ್ತಿದ್ದಾ ಆ ಮಾತ ಬ್ಯಾರೆ.
ಇನ್ನೇನ ಮದ್ವಿ ಒಂದ ವಾರ ಅದ ಅನ್ನೋದಕ್ಕ ಸೀನ್ಯಾ ಫೋನ್ ಮಾಡಿ ’ಲೇ…ಮದ್ವಿ ಕ್ಯಾನ್ಸೆಲ್ ಆತಲೇ’ ಅಂತ ಅಂದ ಬಿಟ್ಟಾ.
’ಯಾಕ ನಿಮ್ಮ ತಮ್ಮನ ಹಳೇ-ಹುಬ್ಬಳ್ಳ್ಯಾಗಿನ ಲಫಡಾ ಏನರ ಹೆಣ್ಣಿನವರಿಗೆ ಗೊತ್ತ ಆತ ಏನ’ ಅಂತ ನಾ ಕೇಳೇ ಬಿಟ್ಟೆ.
’ಲೇ…ಹಂಗೇನ ಆಗಿಲ್ಲ ಮಗನ, ವಳತ ಅನ್ನ….ಆ ಹುಡಗಿ ಅಜ್ಜಿ ಸೀರಿಯಸ್ ಅದಾಳ, ಡಾಕ್ಟರ 24 ತಾಸ ಟೈಮ್ ಕೊಟ್ಟಾರಂತ, ಹಿಂಗಾಗಿ ಅವರ ಮದ್ವಿ ಪೋಸ್ಟಪೋನ್ ಮಾಡ್ಯಾರ’ ಅಂತ ಹೇಳಿದಾ.
ನಾ ನೋಡಿದರ ಒಂದ ವಾರದಿಂದ ಗೋವಾ ಶ್ಯಾಕ್ಸ್ ಒಳಗ ಟೂಬರ್ಗ ಹಿಡ್ಕೊಂಡ ಮಲ್ಕೊಂಡಿದ್ದ ಕನಸ ಕಾಣಲಿಕತ್ತಿದ್ದೆ, ಮ್ಯಾಲೆ ಒಂದಿಬ್ಬರ ದೋಸ್ತರ ಗೋವಾದಿಂದ ಬರಬೇಕಾರ ನಾ ಏನೇನ ತರಬೇಕ, ಹೆಂಗ ಕಾರನಾಗ ಎಲ್ಲೇ ಮುಚ್ಚಿ ಇಟಗೊಂಡ ಬರಬೇಕ ಚೆಕ್ ಪೋಸ್ಟನಾಗ ಸಿಗಲಾರದಂಗ ಅಂತ ಏಲ್ಲಾ ಹೇಳಿ ಇಟ್ಟಿದ್ದರ, ಇಲ್ಲೇ ನೋಡಿದರ ಮದ್ವಿನ ಕ್ಯಾನ್ಸೆಲ್ ಆತಲಪಾ ಅಂತ ಆ ವರನಕಿಂತಾ ಜಾಸ್ತಿ ನಂಗ ದುಃಖ ಆತ.
ಅಲ್ಲಾ ಸೀನ್ಯಾ ತನ್ನ ಲಗ್ನಾ ಇಲ್ಲೇ ತೊರವಿಗಲ್ಲಿ ರಾಯರ ಮಠದಾಗ ಮಾಡ್ಕೊಂಡಿದ್ದರು ತಮ್ಮನ ಮದ್ವಿ ಗೋವಾ ಟೇರೆಕೋಲ್ ಬೀಚ್ ಒಳಗ ಅದು ರೆಸಾರ್ಟ್ ಬುಕ್ ಮಾಡಿ ಮಾಡ್ಲಿಕತ್ತನಲಾ, ಅದು ಇಷ್ಟ ಖರ್ಚ ಮಾಡಿ ಅಂತನ ನನಗ ಆಶ್ಚರ್ಯ ಆಗಿತ್ತ ಹಂತಾದರಾಗ ಮದ್ವಿ ಕ್ಯಾನ್ಸೆಲ್ ಅಂದರ ಪಾಪ ಭಾಳ ಲಾಸ್ ಆತ ಅಂತ ಅವಂಗ ಸಂಜಿ ಮುಂದ ಮಾತಾಡಸಲಿಕ್ಕೆ ಹೋದೆ.
ಅಂವಾ ಅಗದಿ ಕೂಲ್ ಆಗಿ ಇದ್ದಾ.
’ಏ…ಹಂಗ ನಂಗೇನ ಲೂಕ್ಸಾನ್ ಆಗಿಲ್ಲಾ. ನನ್ನ ತಮ್ಮಂದ ಮ್ಯಾರೇಜ್ ಇನ್ಸೂರೇನ್ಸ್ ಇತ್ತ’ ಅಂದಾ.
ನಂಗ ಒಮ್ಮಿಕ್ಕಲೇ ಮ್ಯಾರೇಜ್ ಇನ್ಸೂರೇನ್ಸ್ ಅಂದರ ಏನಂತ ತಿಳಿಲೇ ಇಲ್ಲಾ. ಅದರಾಗ ಈ ಮಗಾ ಒಂದ ಇನ್ಸೂರೇನ್ಸ್ ಕಂಪನಿ ರಿಜಿನಲ್ ಮ್ಯಾನೇಜರ್ ಬ್ಯಾರೆ ಇದ್ದಾ, ಎಲ್ಲೇರ ಯಾವದರ ಪಾಲಿಸಿ ಜುಗಾಡ ಮಾಡಿರಬೇಕ ಬಿಡ ಅಂತ ಅನ್ಕೊಂಡೆ.
ಅಲ್ಲಾ ನಮಗೇನಿದ್ದರೂ ಇತ್ತೀಚಿಗೆ ಹಡಿಲಿಕ್ಕೆ ಡೆಲೇವರಿ ಇನ್ಸೂರೆನ್ಸ್ ಮಾಡ್ತಾರ ದಿಂದ ಹಿಡದ, ಹೆಲ್ಥ ಇನ್ಸೂರೆನ್ಸ್, ಮನಿಗೆ , ಗಾಡಿಗೆ ಇನ್ಸೂರೇನ್ಸ ಲಾಸ್ಟಿಗೆ ಸತ್ತರ ಇನ್ಸೂರೆನ್ಸ್ ಅದ ಏನ ಅಂತಾರ ಟರ್ಮ್ ಇನ್ಸೂರೇನ್ಸ ಹಿಂತಾವ ಇಷ್ಟ ಗೊತ್ತ ಇತ್ತ.
ಇನ್ನ ಮ್ಯಾರೇಜ್ ಇನ್ಸೂರೇನ್ಸ ಅಂದರ ಏನಪಾ ಅಂತ ನನ್ನ ತಲ್ಯಾಗ ಹುಳಾ ಕೊರಿಲಿಕತ್ವು.
ಹಂಗ ಲಗ್ನಾ ಮಾಡ್ಕೊಂಡ ಇನ್ಸೂರೇನ್ಸ್ ಮಾಡಿಸಿಸಿ ಮುಂದ ಹೆಂಡ್ತಿಗೆ ಡೈವರ್ಸ ಕೊಟ್ಟರ, ಇಲ್ಲಾ ಅಕಿ ಕಾಟಕ್ಕ ನಾವ ಬಿಟ್ಟರ ಕ್ಲೇಮ್ ಮಾಡಬಹುದ ಏನ ಅನಸಲಿಕತ್ತ. ಅಲ್ಲಾ ಹಂಗ ಇತ್ತಂದರ ನಮ್ಮಂತಾ ಎಷ್ಟ ಜನಾ ಇನ್ಸೂರೆನ್ಸ್ ಮಾಡಿಸಿ ಮದ್ವಿ ಮಾಡ್ಕೊಳೊದು ಮುಂದ ಡೈವರ್ಸ್ ಮಾಡ್ಕೊಂಡ ಕ್ಲೇಮ್ ಮಾಡೋದ ಮಾಡೇ ಮಾಡ್ತಿದ್ದರ ಬಿಡ್ರಿ. ಇಲ್ಲಾ ಇಪ್ಪತ್ತೈದ ವರ್ಷ ಛಂದಾಗಿ ಸಂಸಾರ ಮಾಡಿದಾಗ ಪಾಲಿಸಿ ಮ್ಯಾಚುರ್ ಆಗಬೇಕ, ಆವಾಗ ಬೋನಸ್ ಕೊಡ್ತಾರಂತ ಏನರ ಪಾಲಿಸಿ ಅದ ಏನ ಅಂತ ಒಂದ ಸರತೆ ವಿಚಾರ ಬಂತ. ಒಂಥರಾ ಟರ್ಮ್ ಇನ್ಸೂರೇನ್ಸ ಒಳಗ ಸತ್ತರ ಇಷ್ಟ ಫಾಯದೇ ಅಂತಾರಲಾ ಹಂಗ ಇದ್ದದರಾಗ ಛಂದಾಗಿ ಗಂಡಾ – ಹೆಂಡತಿ ಅನ್ನೊನ್ಯವಾಗಿ ಸಂಸಾರ ಮಾಡಿದರ ಇಷ್ಟ ಫಾಯದೇ ಅಂತ ಏನರ ಪಾಲಿಸಿ ಅದ ಏನ ಅಂತ ಅನಸಲಿಕತ್ತ. ಇನ್ನ ಒಂದನೇ ಡಿಲೇವರಿಗೆ ಇಷ್ಟ, ಎರಡನೇ ಡಿಲಿವರಿ ಕಮ್ ಆಪರೇಶನ್ ಮಾಡಿಸ್ಗೊಂಡರ ಇಷ್ಟ ಅಂತನೂ ಈ ಮ್ಯಾರೇಜ್ ಇನ್ಸೂರೇನ್ಸ ಒಳಗ ಕೊಡ್ತಾರೇನ ಅಂತನು ವಿಚಾರ ಬಂತ. ನಾ ಹಿಂಗ ಹುಚ್ಚುಚಾಕಾರ ವಿಚಾರ ಮಾಡೋದ ನೋಡಿ ನಮ್ಮ ಸೀನ್ಯಾ ತಲಿಕೆಟ್ಟ
’ಲೇ…ಮದ್ವಿ ಇನ್ಸೂರೇನ್ಸ ಅಂದರ ’ವಿವಾಹ ಸುರಕ್ಷಾ ಪಾಲಿಸಿ’ ಅಂತ ಇರ್ತದ…ಹಂಗ ಇದ ಏನ ವಿವಾಹಿತ ಜೀವನದ್ದ ಸುರಕ್ಷಾ ಪಾಲಿಸಿ ಅಲ್ಲ ಮತ್ತ ಭಾಳ ಛಂದ ಕ್ಲ್ಯಾರಿಫೈ ಮಾಡಿದಾ
ಈ ಪಾಲಿಸಿ ಇರೋದ ಮದ್ವಿ ಕ್ಯಾನ್ಸೆಲ್ ಆದರ ಇಲ್ಲಾ ಪೋಸ್ಟ ಪೋನ್ ಆದರ ಇಷ್ಟ. ಅದು ಭೂಕಂಪ ಆಗಿ, ಬೆಂಕಿ ಅನಾಹುತ ಆಗಿ, ಕಳವು-ಗಿಳವು ಆಗಿ , ಇಲ್ಲಾ ಅಗದಿ ಹತ್ತದಿವಸದ ಸಂಬಂಧ ಇದ್ದೋರ ಸತ್ತರ, ಸೀರಿಯಸ್ ಆದರ, ಯಾರದರ ಅಕ್ಸಿಡೆಂಟ್ ಆಗಿ ಅವರ ಲಗ್ನ ಬರಲಿಕ್ಕೆ ಆಗಂಗಿಲ್ಲಾ ಮತ್ತ ಅವರಿಲ್ಲದ ಲಗ್ನ ಆಗಂಗಿಲ್ಲಾ ಅಂತ ಆಗಿ ಲಗ್ನ ಕ್ಯಾನ್ಸೆಲ್ ಅಥವಾ ಪೋಸ್ಟಪೋನ್ ಆದರ ಇಷ್ಟ ಲಾಗೂ ಆಗ್ತದ ತಮ್ಮಾ ಅದು ಮತ್ತ ನಾವ ಪಾಲಿಸಿ ತೊಗೊಬೇಕಾರ ಹಿಂತಾವರನೇಲ್ಲಾ ಕವರ ಮಾಡಿದ್ದರ ಇಷ್ಟ ಅಂತ ನಂಗ ತಿಳಿಸಿ ಹೇಳಲಿಕತ್ತಾ.
ನಮ್ಮ ಲಗ್ನ ಮಂಟಪದ ಖರ್ಚ, ಗಾಡಿ ಖರ್ಚ, ಶಾಮಿಯಾನ್ ಖರ್ಚ್, ವೆಡ್ಡಿಂಗ್ ಕಾರ್ಡ ಖರ್ಚ್ ಎಲ್ಲಾ ಕ್ಲೇಮ್ ಮಾಡಬಹುದು ಮತ್ತ ಅಷ್ಟರಾಗ ಹುಡಗಾ, ಹುಡಗಿನ್ನ ಅವರ ಮಾಜಿ ಬಂದ ಕರಕೊಂಡ ಓಡಿಸ್ಗೊಂಡ ಹೊದರ, ಅಥವಾ ಯಾರರ ಕಿಡ್ನ್ಯಾಪ್ ಮಾಡಿದರ ಇನ್ಸೂರೇನ್ಸ ನಡಿಯಂಗಿಲ್ಲಾ.
ಇನ್ನ, ಕೆಲವೊಂದ ಕಡೆ ಯಾಕ್ಟ್ ಆಫ್ ಗಾಡ್ ( ದೇವರ್ ಕೈವಾಡ) ಕ್ಕ ಕ್ಲೇಮ್, ಆಗ್ತದ, ಕೆಲವೊಂಡ ಕಡೆ ನಡೆಯಂಗಿಲ್ಲಾ ಅಂದಾ.
ಅಲ್ಲಲೇ…ಮತ್ತ ನಾವೇಲ್ಲಾ ಈ ಸುಡಗಾಡ ಮದ್ವಿನ ಯಾಕ್ಟ್ ಆಫ್ ಗಾಡ್ ಅಂತ ತಿಳ್ಕೊಂಡ ಕಟಗೊಂಡ್ವಿ, ಅಲ್ಲಾ ಹಂಗ ಮದ್ವಿ ಏನ ಯಾ ಭೂಕಂಪಾ, ಸುನಾಮಿಗಿಂತಾ ಕಡಮಿ ಇಲ್ಲ ಬಿಡ್ರಿ ಹಂತಾದ ಇದ ಇದ ಇನ್ಸೂರೇನ್ಸ್ ಒಳಗ ಲಾಗೂ ಆದರ ಆತೂ ಆಗಲಿಲ್ಲಾ ಅಂದರ ಇಲ್ಲಾ ಅಂದರ ಹೆಂಗ ಅಂತ ನಾ ಅಂದೆ.
ಲೇ…ಯಾಕ್ಟ್ ಆಫ್ ಗಾಡ್ ಅಂದರ ಭೂಕಂಪಾ, ಸುನಾಮಿ, ಸುಂಟರಗಾಳಿ ಹಿಂತಾವೇಲ್ಲಾ ಆಗಿ ಮದ್ವಿ ಕ್ಯಾನ್ಸೆಲ್ ಆದರ ಲಾಗೂ ಆಗ್ತದ ಆದರ ಇದ ಲಗ್ನಕ್ಕ ಬರೋರಿಗೆ ಆದರ ಲಾಗೂ ಆಗಂಗಿಲ್ಲಾ ಅಂದಾ.
ಹೋಗ್ಲಿ ಬಿಡ ಇನ್ನ ಜಾಸ್ತಿ ಈ ಮ್ಯಾರೇಜ ಇನ್ಸೂರೇನ್ಸ್ ಬಗ್ಗೆ ಕೇಳಿದರ ನನಗ
’ನೀ ಒಂದ ಪಾಲಿಸಿ ಮಾಡಿಸಿ ಇನ್ನೊಂದ ಲಗ್ನಾ ಮಾಡ್ಕೊಂಡ ನೋಡ ಮಗನ’ ಅಂತ ಅಂದ ಗಿಂದಾನ, ಏನಿಲ್ಲದ ಇನ್ಸೂರೇನ್ಸ ಎಜೆಂಟ್ ಅಂತ ನಾ ಸುಮ್ಮನಾದೆ.
ಅಲ್ಲಾ ಈಗ ನಾ ಹೆಂತ ಛಂದ ಅವನ ತಮ್ಮನ ಲಗ್ನಕ್ಕ ಗೋವಾಕ್ಕ ಹೋಗಬೇಕಂತ ಕನಸ ಕಂಡಿದ್ದೆ, ಆ ಕನಸ ನುಚ್ಚ ನೂರಾತ, ಇನ್ನ ನಾ ಅಂತೂ ನನ್ನ ಕನಸಿಗೆ ಇನ್ಸೂರೇನ್ಸ್ ಮಾಡ್ಸಿದ್ದಿಲ್ಲಾ, ಮುಂದ ಹೆಂಗಲೇ ಅಂದೆ…..ಏ ಅದಕ್ಕ್ಯಾಕ ಕಾಳಜಿ ಮಾಡ್ತಿ, ನಮಗೇನ ಗೋವಾಕ್ಕ ಹೋಗಬೇಕಂದರ ನಮ್ಮ ತಮ್ಮನ ಲಗ್ನ ಇರಬೇಕ ಅಂತೇನ ಇಲ್ಲ ತೊಗೊ. ಆ ಹುಡಗಿ ಅಜ್ಜಿ ಹೆಂಗಿದ್ದರೂ ಸೀರಿಯಸ್ ಇದ್ದಾಳ ಅಕಿದ ಏನರ ಸುದ್ದಿ ಬಂತಂದರ ನಿಂದ ಕಾರ ತೊಗೊಂಡ ಹೋಗಿ ಮಾತಾಡಿಸ್ಗೊಂಡ ಬರೋಣ ಅಂತ ನಂಗ ಸಮಾಧಾನ ಮಾಡಿದಾ.
ಈಗ ಗೋವಾದಿಂದ ಅಜ್ಜಿ ಹೋಗಿದ್ದ ಸುದ್ದಿ ಇವತ್ತ ಬರ್ತದ ನಾಳೆ ಬರ್ತದ ಅಂತ ಹದಿನೈದ ದಿವಸದಿಂದ ದಾರಿ ಕಾಯಲಿಕತ್ತೇನಿ. ಅಲ್ಲಾ ಅದು ಯಾಕ್ಟ್ ಆಫ್ ಗಾಡ್, ದೇವರ ತಿಳದಂಗ ಮಾಡೋಂವಾ. ನಮ್ಮ ಕೈಯಾಗರ ಏನದ.
ಸೂಪರ್ ಸರ್
Nimdu article matte bartailla