ಪಿ.ಯು.ಸಿ ಮುಗಿತ…ಮುಂದ?

(ಇದ ಪ್ರಶಸ್ತಿ ಆಡೂರ…ನನ್ನ ಮಗಳ ಸ್ವಗತ….ಮುಂದ ಓದೋದೆಲ್ಲಾ ಅಕಿದ ಮಾತ…)

ಎಕ್ಸಾಮ ಮುಗಿಸಿ ಇನ್ನೂ ಎರೆಡ ದಿವಸ ಆಗಿಲ್ಲಾ, ಎಲ್ಲಾರೂ ಪಿ.ಯು.ಸಿ ಮುಗಿತಲಾ….ಮುಂದ ಏನ? ಅಂತ ಜೀವಾ ತಿನ್ನಲಿಕತ್ತಾರ.
ನಾ ತಲಿಕೆಟ್ಟ
’ಪಾಸ್ ಆದರ ಮುಂದಿನ ಮಾತ ತೊಗೊರಿ’ ಅಂತ ಅಂದರ….
’ಅಯ್ಯ ಪ್ರಶಾಂತನ ಮಗಳವಾ, ಪಾಸ್ ಆಗಲಾರದ ಏನ’ ಅಂತಾರ……ಅಲ್ಲಾ ಪೇಪರ್ ಬರದೋಕಿ ನಾನೋ ನಮ್ಮಪ್ಪನೋ….
ಹಂಗ ಪಿ.ಯು.ಸಿ ಮುಗದ ಮ್ಯಾಲೆ ನೂರಾ ಎಂಟ ಟೆನ್ಶನ್ ಬ್ಯಾಡಾ ಅಂತ ನಾ ಕಾಮರ್ಸ್ ಕಲಿಲಿಕತ್ತೇನಿ…ಪಾಸ್ ಆದರ ಬಿ.ಕಾಂ. ಇಲ್ಲಾ ಮತ್ತೋಮ್ಮೆ ಎಕ್ಸಾಮ್ ಬರೇಯೋದರಿಪಾ…ಅದರಾಗ ಏನ ಅಷ್ಟ ತಲಿಕೆಡಸಿಗೊಳ್ಳೊದ ಅಂತೇನಿ…
ಒಬ್ಬರ ಬಿ.ಬಿ.ಎ ಮಾಡ ಅಂತಾರ ಮತ್ತೊಬ್ಬರ ನೋಡಿದರ ಬಿ.ಸಿ.ಎ ಮಾಡ ಅಂತಾರ, ಒಂದಿಷ್ಟ ಮಂದಿ ಬಿ.ಕಾಂ ಜೊತಿ ಸಿ.ಎ. ಮಾಡ….ಕಂಪನಿ ಸೆಕ್ರೇಟರಿ ಕೋರ್ಸ್ ಮಾಡ… ಅದು ಇದು ಅಂತ ಪೀಡಾ ಗಂಟ ಬಿದ್ದಂಗ ಬಿದ್ದಾರ.
ನಮ್ಮಪ್ಪ ನೋಡಿದರ ಮುಂದ ಹಿಂತಾ ನೂರಾ ಎಂಟ ಟೆನ್ಶನ್ ತನಗೂ ಬ್ಯಾಡಾ ನನಗೂ ಬ್ಯಾಡಾ ಅಂತ
’ಪುಟ್ಟಿ, ನೀ ಸುಮ್ಮನ ಕಾಮರ್ಸ್ ತೊಗೊಂಡ…..ನಿನ್ನ ಭರತನಾಟ್ಯ ಡ್ಯಾನ್ಸ್ ಮಾಡ್ಕೋತ ಆರಾಮ ಇರ’ ಅಂತ ಕಾಮರ್ಸ್ ಹಚ್ಚಿ ಕೈ ತೊಳ್ಕೊಂಡಿದ್ದಾ.
ಅಲ್ಲಾ ಅವಂಗ ಗೊತ್ತ ನಾ ಏನ ಇಂಜೀನಿಯರ್, ಡಾಕ್ಟರ್ ಆಗಿ.. ದೊಡ್ಡ ನೌಕರಿ ಮಾಡಿ ಮುಂದ ಅವ್ವಾ ಅಪ್ಪನ್ನ ಸಾಕೋದ ಅಷ್ಟರಾಗ ಅದ…ಇವತ್ತೀಲ್ಲಾ ನಾಳೇ ಲಗ್ನಾ ಮಾಡ್ಕೊಂಡ ಗಂಡನ ಮನಿಗೆ ಹೋಗೊಕಿ ..ಪಾಪ ಅವ್ವಾ-ಅಪ್ಪನ ಮನ್ಯಾಗ ಇದ್ದಾಗರ ಲೈಫ್ ಎಂಜಾಯ್ ಮಾಡ್ಲಿ ಅಂತ ಅಂವಾ ನನಗ ಒಂದ ದಿವಸನೂ ಅಭ್ಯಾಸದ ಬಗ್ಗೆ ಟೆನ್ಶನ್ ಕೊಡಲಿಕ್ಕೆ ಹೋಗಲಿಲ್ಲ ಬಿಡ್ರಿ ಸುಳ್ಳಯಾಕ ಹೇಳ್ಬೇಕ.
ಅಲ್ಲಾ ನಂದೂ ನಮ್ಮಪ್ಪಂದೂ ಲೈಫ್ ಪ್ರಿನ್ಸಿಪಲ್ ‘ enjoy bloody life’
ಆದರ ಈ ಮಂದಿ ಸುಮ್ಮನ ಕೂಡಬೇಕಲಾ….ಪಿ.ಯು.ಸಿ ಮುಗಿತ ಮುಂದ ಏನ ಅಂತ ಗಂಟ ಬೀಳ್ತಾರ.
ಮಂದಿ ಬಿಡ್ರಿ ನಮ್ಮ ಮನ್ಯಾಗ ನಮ್ಮಜ್ಜಿ- ನಮ್ಮವ್ವನರ ಏನ ಕಡಮಿ ಅಂತೀರಿ…
ನಮ್ಮಜ್ಜಿ
’ಪಿ.ಯು.ಸಿ ಮುಗಿತ…ಇನ್ನರ ಒಂದ ಸ್ವಲ್ಪ ಮನಿ ಕೆಲಸಾ-ಬೊಗಸಿ, ಅಡಗಿ-ಪಡಗಿ ಕಲಿ……..ಪಿ.ಯು.ಸಿ 2 ಅಂತ ಈಡಿ ವರ್ಷ ಮನ್ಯಾಗಿನ ಒಂದ ಕಡ್ಡಿ ಇತ್ತಲಾಗಿಂದ ಎತ್ತಿ ಅತ್ತಲಾಗ ಇಟ್ಟಿಲ್ಲಾ….ನಾಳೆ ಗಂಡನ ಮನಿಗೆ ಹೋದರ ಎಲ್ಲೇರ ನಮ್ಮ ಮನಿ ಮರ್ಯಾದಿ ಕಳೇಯೋಕಿ’ ಅಂತ ಏನ ಅಗದಿ ನಂದ ಪಿ.ಯು.ಸಿ ಮುಗಿಯೋದಕ್ಕ ಮದ್ವಿ ಮಾಡಿ ಅಟ್ಟೋರಗತೆ ಮಾತಾಡ್ತಾಳ… ನಮ್ಮವ್ವ ನಮ್ಮಜ್ಜಿ ಅಂದದ್ದಕ್ಕ ಸೋ ಅಂತ
’ಮುಂದಿನವಾರ ನರಸಿಂಹ ದೇವರ ಗುಡಿಗೆ ಹೋದಾಗ ರವಿ ಆಚಾರ ಕಡೆ ಅಕಿದೊಂದ ಕುಂಡ್ಲಿ ಹಾಕಿಸ್ಗೊಂಡ ಬರ್ರಿ’ ಅಂತ ನಮ್ಮಪ್ಪಗ ಹೇಳ್ತಾಳ….
’ಏ..ಪಾಪ ಕೂಸಿಂದ ಡಿಗ್ರಿನರ ಮುಗಿಲ ತಡಿ, ನೀವ ಏನ…. ಕನ್ಯಾಕ್ಕ ಡಿಮಾಂಡ್ ಅದ ಅಂತ ಹೇಳಿ ಅಕಿನ್ನ ಈಗ ಅಟ್ಟೋರ ಏನ’ ಅಂತ ನಮ್ಮಪ್ಪ.
’ಏ…ನೀವ ಕುಂಡ್ಲಿ ರೇಡಿ ಮಾಡ್ರಿ…ಅಕಿದ ಡಿಗ್ರಿ ಏನ ಮಾಸ್ಟರ ಡಿಗ್ರೀನೂ ಗಂಡಿನವರ ಮಾಡಸ್ತಾರ, ಸುಳ್ಳ ನಾವ ಯಾಕ ಅಕಿ ಡಿಗ್ರಿಗೆ ರೊಕ್ಕಾ ಬಡಿಬೇಕ’ ಅಂತ ನಮ್ಮವ್ವ.
ಏನ್ಮಾಡ್ತೀರಿ ಹಿಂತಾವರಿಗೆ, ನಮ್ಮ ಮಂದ್ಯಾಗ ಕನ್ಯಾ ಕಡಮಿ ಆಗ್ಯಾವ ಅಂತ ನಮ್ಮವ್ವಾ ಎಲ್ಲೇರ ನನಗ ಹದಿನೆಂಟ ತುಂಬಿದ ಮ್ಯಾಲೆ IPL auction ಗತೆ auction ಮಾಡಿದರು ಮಾಡಿದ್ಲ…..
’ಯಪ್ಪಾ…ಮೊನ್ನೇರ ಅಕಿದ ರಂಗಪ್ರವೇಶ ಮಾಡಿದ್ದ ಲಗ್ನದ ವರೋಪಚಾರದಕಿಂತಾ ಜಾಸ್ತಿ ಆಗೇದ, ಬೀಗರು- ವರಾ- ಬೀಗಿತ್ತಿ ಇದ್ದಿದ್ದಿಲ್ಲಾ ಇಷ್ಟ….ಇನ್ನ ಮದ್ವಿಗೆ ರೊಕ್ಕಾ ಎಲ್ಲಿಂದ ತರ್ತಿ ’ ಅಂತ ನಮ್ಮಪ್ಪ ಅಂದರ…
’ಅಯ್ಯ…ಇನ್ನೊಂದ ವರ್ಷಕ್ಕ ಅಕಿದ ಸುಕನ್ಯಾ ಸಮೃದ್ಧಿ ಯೋಜನಾ ಮ್ಯಾಚುರ್ ಆಗ್ತದ…ಒಂದ ಹುಡಗನ್ನ ಗೊತ್ತ ಮಾಡಿ ಆ ಬೀಗಿತ್ತಿಗೆ ಹಣ್ಣು- ಕಾಯಿ- ಒಂದ ಮೂರವಾರಿ ಜಂಪರ್ ಪೀಸ್ ಜೊತಿ ಪೋಸ್ಟ ಆಫೀಸ್ ’ಸಮೃದ್ಧಿ ಸುಕನ್ಯಾ ಯೋಜನಾ’ದ್ದ ಪಾಸ್ ಬುಕ್ ಉಡಿ ತುಂಬಿ ನಮ್ಮಕಡೆ ಇಷ್ಟ ಇರೋದ ಮುಂದಿಂದ ಎಲ್ಲಾ ನಿಂಬದ ಅಂತ ಹೇಳಿ ಬಿಟ್ಟರಾತು’ ಅಂದ್ಲು….
ನನಗ ಖರೇ ಹೇಳ್ತೇನಿ ಏನ ಹೇಳ್ಬೇಕ ತಿಳಿಲಿಲ್ಲಾ……..ಒಮ್ಮೇಮ್ಮೆ ಎಲ್ಲೇರ ಖರೇನ ನಮ್ಮವ್ವ ನಾ ಪಿ.ಯು.ಸಿ ಪಾಸ ಆದಮ್ಯಾಲೆ ಲಗ್ನಾ ಮಾಡಿ ಅಟ್ಟಗಿಟ್ಟ್ಯಾಳ ಅಂತ ಅನಿಸಲಿಕತ್ತ….
ಅಲ್ಲಾ ಏನ ಜನಾ ಅಂತೇನಿ…ಊರ ಮಂದಿ ಪಿ.ಯು.ಸಿ ಆದಮ್ಯಾಲೆ ಮುಂದ ಏನ ಕಲಿತಿ ಅಂತ ತಲಿ ತಿಂದರ ಮನಿ ಮಂದಿ ಪಿ.ಯು.ಸಿ ಮುಗಿತ ಮದ್ವಿ ಮಾಡಿ ಅಟ್ಟರಿ ಅಂತಾರ….
ಏನೋ ಪುಣ್ಯಾಕ ನಮ್ಮಪ್ಪ ಒಬ್ಬೊಂವಾ ನನ್ನ ಪರವಾಗಿ ಇದ್ದಾನ…..ನಮ್ಮಪ್ಪ ಹೇಳಿದ್ದ ಒಂದ ಮಾತ
” ನಿಂಗ ಎಷ್ಟರ ಮಾರ್ಕ್ಸ ಬರಲಿ, ನೀ ಬಿ.ಕಾಮ್ ರ ಮಾಡ, ಬಿ.ಬಿ.ಎ ರ ಮಾಡ …ನಿಂಗ ತಿಳದದ್ದ- ತಿಳದಷ್ಟ ಕಲಿ…..ಭಾಳ ತಲಿಕೆಡಸ್ಗೊ ಬ್ಯಾಡಾ….enjoy bloody life’.
eom/-

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ